ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹನ್ನೊಂದು
“ಎಲ್ಲರೂ ಹೀಗೆಯೇ ಮದುವೆಯಾಗುತ್ತಾರೆ, ನಾನೂ ಹಾಗೆಯೇ ಮದುವೆಯಾದೆ. ಹನಿಮೂನಿಗೆ ಹೋದೆವು. ಹನಿಮೂನು ಅಂದರೆ ಯಾಕೆ ಜೊಲ್ಲು ಸುರಿಸುತ್ತಾರೋ! ಯಾವಾಗಲೂ ಭ್ರಮನಿರಸನವೇ! ಆ ಹೆಸರೇ ಅಸಹ್ಯ!” ಹಾವಿನಂತೆ ಬುಸುಗುಟ್ಟಿದ.
“ಒಂದು ದಿನ ಪ್ಯಾರಿಸ್ಸಿನ ಪ್ರದರ್ಶನಗಳಲ್ಲಿ ಅಡ್ಡಾಡುತ್ತಿದ್ದೆ. ಒಂದು ಮಳಿಗೆಯ ಮುಂದೆ ಇದ್ದ ಬೋರ್ಡು ನೋಡಿದೆ. ಹೋದೆ. ಅದರಲ್ಲಿ ಗಡ್ಡವಿದ್ದ ಒಬ್ಬ ಹೆಂಗಸು ನೀರುನಾಯಿಯ ಜೊತೆ ಇದ್ದಳು. ಅವಳು ಹೆಂಗಸಲ್ಲ, ವೇಷ ಮರೆಸಿಕೊಂಡಿದ್ದ ಗಂಡಸು. ಅದು ನೀರುನಾಯಿಯೂ ಅಲ್ಲ, ಸಾಮಾನ್ಯ ನಾಯಿ. ಅದಕ್ಕೆ ಸೀಲ್ ಪ್ರಾಣಿಯ ಚರ್ಮ ಹೊದಿಸಿದ್ದರು. ಬಾತ್ ಟಬ್ಬಿನಲ್ಲಿ ಈಜುತ್ತಿತ್ತು. ಏನೇನೂ ಸ್ವಾರಸ್ಯವಿರಲಿಲ್ಲ. ಆ ಷೋ ಏರ್ಪಾಡು ಮಾಡಿದ್ದ ಯಜಮಾನ ನಾನು ಹೊರಗೆ ಬಂದಾಗ ನನ್ನ ಜೊತೆಗೇ ಬಂದ. ಹೊರಗಡೆ ಇದ್ದ ಜನಗಳಿಗೆ, ‘ಈ ಸಾಹೇಬರನ್ನು ಕೇಳಿ! ಇದು ಅದ್ಭುತ ಪ್ರದರ್ಶನ! ಬನ್ನಿ, ಬನ್ನಿ! ಒಂದೇ ಒಂದು ಫ್ರಾಂಕು!’ ಎಂದು ಕೂಗಲು ಶುರುಮಾಡಿದ. ನನ್ನ ಮನಸ್ಸು ಕನ್ಫ್ಯೂಸ್‌ಆಗಿ, ಒಳಗೆ ನೋಡುವಂಥದು ಏನೂ ಇಲ್ಲ ಎಂದು ಹೇಳುವ ಧೈರ್ಯ ಬರಲೇ ಇಲ್ಲ ನನಗೆ. ನಿಜ ಹೇಳಲು ನಾಚುತ್ತೇನೆ ಅನ್ನುವ ನನ್ನ ಸುಳ್ಳು ನಾಚಿಕೆಯನ್ನೇ ಆ ಷೋ ನಡೆಸುತ್ತಿದ್ದ ಯಜಮಾನ ಬಂಡವಾಳ ಮಾಡಿಕೊಂಡಿದ್ದ.
“ಹನಿಮೂನಿನ ನಾಚಿಕೆ, ಅಪಮಾನ, ಅಸಹ್ಯಗಳನ್ನು ಅನುಭವಿಸಿದವರೂ ಹೀಗೇ ಎಂದು ಕಾಣುತ್ತದೆ. ಬೇರೆಯವರು ಹನೀಮೂನಿನ ಬಗ್ಗೆ ತಿಳಿದಿರುವುದು ಭ್ರಮೆ ಎಂದು ಹೇಳುವುದೇ ಇಲ್ಲ. ನಾನು ಮಾಡಿದ್ದೂ ಅದನ್ನೇ.
“ನಿಜ ಹೇಳಬೇಕು. ಹನೀಮೂನು ಅನ್ನುವುದರಲ್ಲಿ ಯಾವ ಸುಖವೂ ಇಲ್ಲ. ಹನೀಮೂನು ಅನ್ನುವುದು ಅಸುಖದ, ನಾಚಿಕೆಯ, ಕರುಣೆಯ, ಎಲ್ಲಕ್ಕಿಂತ ಹೆಚ್ಚಾಗಿ ಬೇಸರ ಆರ್ಭಟಸುವ ಅವಧಿ. ಮೊದಲು ಸಿಗೆರೇಟು ಸೇದಿದಾಗ ಹಾಗೇ ಆಗಿತ್ತು. ಹೊಟ್ಟೆ ತೊಳಸಿತ್ತು, ವಾಂತಿ ಬಂದಹಾಗೆ ಬಾಯಲ್ಲೆಲ್ಲ ಜೊಲ್ಲು ತುಂಬಿತ್ತು, ಅದನ್ನೆಲ್ಲ ನುಂಗಿಕೊಂಡು ಸ್ಮೋಕಿಂಗನ್ನು ಎಂಜಾಯ್ ಮಾಡುವವನಹಾಗೆ ನಟಿನೆಮಾಡಿದ್ದೆ. ಸಿಗರೇಟಿನ ಸುಖ ಏನಾದರೂ ಸಿಗುವುದಿದ್ದರೆ, ಬಹಳ ಕಾಲ ಆದಮೇಲೆ ಯಾವಾಗಲೋ ಸಿಗುತ್ತದೆ. ಇದೂ ಅಷ್ಟೆ. ದಂಪತಿಗಳು ಕೆಡುಕನ್ನು ಬೆಳೆಸಿಕೊಂಡು ಎಕ್ಸ್‌ಪರ್ಟುಗಳಾದಾಗಬೇಕು ಅದರಿಂದ ಸುಖಪಡುವುದಕ್ಕೆ.”
“ಕೆಡುಕು? ನೀವು ಅತಿ ಸಹಜವಾದ , ಮನುಷ್ಯರ ಚಟುವಟಿಕೆಯ ಬಗ್ಗೆ ಹೇಳುತ್ತಿದ್ದೀರಿ” ಎಂದೆ.
“ಸಹಜ! ಇಲ್ಲ. ಇದು ನಿಸರ್ಗಕ್ಕೆ ವಿರುದ್ಧವಾದದ್ದು. ನಾನು, ವಿಕೃತನಾದವನೇ, ಈ ತೀರ್ಮಾನಕ್ಕೆ ಬಂದಿದ್ದೇನೆ. ಅಕಸ್ಮಾತ್ತಾಗಿ ನಾನು ಭ್ರಷ್ಟನಾಗದೆ ಇದ್ದಿದ್ದರೆ ಇನ್ನು ಹೇಗಿರುತ್ತಿತ್ತೋ? ಮಕ್ಕಳನ್ನು ಕೇಳಿ ನೋಡಿ, ಮುಗ್ಧ ಹುಡುಗಿಯನ್ನು ಕೇಳಿ ನೋಡಿ. ನನ್ನ ಅಕ್ಕ ತುಂಬ ಚಿಕ್ಕವಯಸ್ಸಿನಲ್ಲೆ ತೀರ ಭ್ರಷ್ಟನಾದ, ಅವಳಿಗಿಂತ ಎರಡರಷ್ಟು ವಯಸ್ಸಾದವನನ್ನು ಮದುವೆಯಾಗಿದ್ದಳು. ಮದುವೆಯ ರಾತ್ರಿ ನಮಗೆಲ್ಲ ಆಶ್ಚರ್ಯವಾಗಿತ್ತು. ಅಕ್ಕ ಮುಖವೆಲ್ಲ ಬಿಳಿಚಿಕೊಂಡು, ಅಳುತ್ತಾ, ಮೈಯೆಲ್ಲ ನಡುಗುತ್ತಾ ಗಂಡನ ಕೋಣೆಯಿಂದ ಓಡಿ ಬಂದಿದ್ದಳು. ಏನು ಕೊಟ್ಟರೂ ಗಂಡನ ಹತ್ತಿರಕ್ಕೆ ಹೋಗುವುದಿಲ್ಲ ಅನ್ನುತ್ತಿದ್ದಳು. ಗಂಡ ಅವಳಿಂದ ಏನು ಬಯಸಿದ ಎಂದು ಹೇಳುವುದಕ್ಕೆ ಆಗಲೇ ಇಲ್ಲ ಅವಳಿಗೆ.
“ನೀವು ಸಹಜ ಅನ್ನುತ್ತೀರಿ? ತಿನ್ನುವುದು ಸಹಜ. ಅದರಿಂದ ಖುಷಿ ಸಿಗುತ್ತದೆ. ತಿನ್ನುವುದಕ್ಕೆ ಯಾರೂ ನಾಚಿಕೆಪಡುವುದಿಲ್ಲ. ಹುಟ್ಟಿದ ದಿನದಿಂದ ಎಲ್ಲರೂ ಅದನ್ನು ಮಾಡುತ್ತಾರೆ. ಇಲ್ಲ. ಅದರೆ ಇದು? ಇದು ಸಹಜವಲ್ಲ. ಭಯ, ನಾಚಿಕೆ, ನೋವು. ಮುಗ್ಧಳಾದ ಯುವತಿಗೆ ಮಗು ಬೇಕು ಅನ್ನಿಸುತ್ತದೆ, ಆದರೆ ಪ್ರೇಮಿ ಬೇಡ ಅನ್ನಿಸುತ್ತದೆ. ಅದನ್ನ ದ್ವೇಷಮಾಡುತ್ತಾಳೆ.”
“ಆದರೆ, ಮನುಷ್ಯ ಕುಲ ಮುಂದುವರೆಯುವುದು ಹೇಗೆ?” ಕೇಳಿದೆ.
“ಯಾಕೆ ಮುಂದುವರೆಯಬೇಕು?” ನನ್ನ ಎದುರಿನ ಸೀಟಿನಲ್ಲಿ ಕೂತಿದ್ದವನು, ಕಾಲುಗಳನ್ನು ಅಗಲಮಾಡಿ, ಮುಂದಕ್ಕೆ ಬಗ್ಗಿ ಮೊಳಕೈಗಳನ್ನು ಮೊಳಕಾಲಮೇಲೆ ಊರಿ, ನನ್ನ ಅಪ್ರಾಮಾಣಿಕ ಮಾಮೂಲು ಆಕ್ಷೇಪಣೆಯನ್ನು ನಿರೀಕ್ಷಿಸಿದ್ದವನಂತೆ, ರೇಗಿಕೊಂಡು ವ್ಯಂಗ್ಯವಾಗಿ ಕೇಳಿದ. “ಮನುಷ್ಯರು ಹಂದಿಗಳ ಹಾಗೆ ಬದುಕದಿದ್ದರೆ ಮನುಷ್ಯಕುಲವೇ ನಾಶವಾಗುವುದಾದರೆ ಅಂಥ ಮನುಷ್ಯಕುಲ ಇದ್ದು ಏನು ಉಪಯೋಗ?”
“ಏನು ಉಪಯೋಗ ಎಂದರೆ? ನಾವು ಬದುಕಬೇಡವೆ?” ಅಂದೆ.
“ಸಾರಿ. ಈ ದೀಪ ಕಣ್ಣು ಕುಕ್ಕುತ್ತಾ ಇದೆ. ಅದರ ಶೇಡು ಕೆಳಗೆ ಎಳೆಯಲೇ?” ಎಂದ. ಸರಿ ಎಂದೆ. ಅವನು ಮಿಕ್ಕ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಂತೆಯೇ ದಡಕ್ಕನೆ ಎದ್ದು, ದೀಪದ ಶೇಡನ್ನು ಎಳೆದು ಮರೆಮಾಡಿದ.
“ಎಲ್ಲರೂ ನಿಮ್ಮ ಹಾಗೆಯೇ ಯೋಚನೆ ಮಾಡಿದರೆ ಮನುಷ್ಯಕುಲ ಇರುವುದೇ ಇಲ್ಲ,” ಎಂದೆ. ಅವನು ತಕ್ಷಣ ಉತ್ತರಕೊಡಲಿಲ್ಲ.
“ಯಾಕೆ ಬದುಕಬೇಕು ನಾವು? ಬದುಕಿಗೆ ಒಂದು ಗುರಿ ಇರದಿದ್ದರೆ, ಜೀವ ಹಿಡಿದುಕೊಂಡಿರುವುದಕ್ಕಷ್ಟೇ ಬದುಕಿರುವುದಾದರೆ, ಬದುಕುವುದಕ್ಕೆ ಕಾರಣವೇ ಇಲ್ಲ. ಹಾಗೆ ಇರುವುದಾದರೆ ಶೋಪೆನ್‌ಹೌರ್‌ಗಳು, ಹಾರ್ಟ್‌ಮ್ಯಾನ್‌ಗಳು, ಬೌದ್ಧರು ಹೇಳುವುದು ಸರಿಯೇ ಸರಿ. ಸುಮ್ಮನೆ ಸತ್ತುಬಿಡಬೇಕು. ಬದುಕಿಗೆ ಒಂದು ಗುರಿ ಇರುವುದಾದರೆ, ಆ ಗುರಿ ಮುಟ್ಟಿದ ಕೂಡಲೆ ಮನುಷ್ಯ ಕುಲ ಇಲ್ಲವಾಗಬೇಕು.” ಅವನು ಚಡಪಡಿಸುತ್ತಾ ಇದ್ದ. ಮನಸ್ಸಿಗೆ ಬರುತ್ತಿದ್ದ ಯೋಚನೆಗಳು ಬಹಳ ಅಮೂಲ್ಯವೋ ಅನ್ನುವಹಾಗೆ ಹೇಳಿದ: “ಸುಮ್ಮನೆ ಯೋಚನೆಮಾಡಿ ನೋಡಿ. ಮನುಷ್ಯಕುಲದ ಗುರಿ ಒಳ್ಳೆಯತನ, ನ್ಯಾಯವಂತಿಕೆ, ಪ್ರೀತಿ -ಇತ್ಯಾದಿ ಏನಾದರೂ ಕರೆಯಿರಿ- ಅದಾಗಿದ್ದರೆ, ನಮ್ಮ ಪ್ರವಾದಿಗಳೆಲ್ಲ ಹೇಳುತ್ತಾರಲ್ಲ, ಮನುಷ್ಯಕುಲವು ಪ್ರೀತಿಯಲ್ಲಿ ಒಂದಾಗಬೇಕು ಅಂತ, ಅದು ಗುರಿಯಾಗಿದ್ದರೆ, ಕೊಲ್ಲುವ ಕತ್ತಿಗಳನ್ನು ತಟ್ಟಿ ನೇಗಿನ ಕುಳ ಮಾಡಿಕೊಳ್ಳುವುದು ಮನುಷ್ಯಕುಲದ ಗುರಿಯಾಗಿದ್ದರೆ, ನಾವು ಆ ಗುರಿಯನ್ನು ತಲುಪದಹಾಗೆ ತಡೆಯುತ್ತಿರುವುದು ಯಾವುದು? ಏನು? ನಮ್ಮ ಪ್ರವೃತ್ತಿಗಳು. ಅದರಲ್ಲೂ ತುಂಬ ಪ್ರಬಲವಾದ, ಕ್ರೂರವಾದ, ಹಟಮಾರಿ ಕಾಮುಕತೆಯ ಪ್ರವೃತ್ತಿ. ನಮ್ಮ ಪ್ರವತ್ತಿಗಳನ್ನು, ಅದರಲ್ಲೂ ಮೈಯಾಸೆಯನ್ನು, ಇಲ್ಲಮಾಡಿಕೊಂಡರೆ ಪ್ರವಾದಿಗಳ ಮಾತು ನಿಜವಾಗುತ್ತದೆ. ಮನುಷ್ಯಕುಲ ಒಂದೇ ಆಗಿಬಿಡುತ್ತದೆ. ಹಾಗೆ ಒಂದಾಗುವ ಗುರಿ ಮುಟ್ಟಿದಮೇಲೆ ಮನುಷ್ಯಕುಲ ಇರಬೇಕಾದ ಅವಶ್ಯಕತೆಯೂ ಇಲ್ಲ. ಈ ಆದರ್ಶ ಇರುವವರೆಗೂ ಮನುಷ್ಯಕುಲ ಇರುತ್ತದೆ. ಆದರ್ಶವೆಂದರೆ ಮೊಲ, ಹಂದಿಗಳ ಹಾಗೆ ಸಾಧ್ಯವಾದಷ್ಟೂ ಮರಿಗಳನ್ನು ಹುಟ್ಟಿಸುವುದಲ್ಲ. ಕೋತಿಗಳ ಹಾಗೆ, ಪ್ಯಾರಿಸಿನ ಶೋಕಿಲಾಲರಹಾಗೆ ಸೆಕ್ಸನ್ನು ಸಮೃದ್ಧವಾಗಿ ಅನುಭವಿಸುವುದೂ ಅಲ್ಲ. ಕಾಮುಕತೆಯ ಮೇಲೆ ಹತೋಟಿ ಇಟ್ಟುಕೊಂಡು, ಪರಿಶುದ್ಧವಾಗಿದ್ದು, ಒಳಿತಿನ ಆದರ್ಶವನ್ನು ಸಾಧಿಸುವ ಗುರಿ ಅದು. ಆ ಗುರಿಯನ್ನು ಮುಟ್ಟುವುದಕ್ಕಾಗಿಯೇ ಮನುಷ್ಯರು ಪ್ರಯತ್ನಪಡುತ್ತಿದ್ದಾರೆ, ಪಡುತ್ತಾರೆ. ಆದ್ದರಿಂದಲೇ, ನೋಡಿ,--
“ದೈಹಿಕವಾದ ಪ್ರೀತಿ ಅನ್ನುವುದು ಸೇಫ್ಟಿ ವಾಲ್ವು ಇದ್ದಹಾಗೆ. ಈಗಿನ ತಲೆಮಾರು ಮನುಷ್ಯಕುಲದ ಗುರಿಯನ್ನು ಮುಟ್ಟಲು ಆಗಿರದಿದ್ದರೆ ಅದಕ್ಕೆ ಕಾರಣ ಪ್ರವೃತ್ತಿಗಳೇ. ಮುಖ್ಯವಾಗಿ ಕಾಮುಕತೆಯ ಪ್ರವೃತ್ತಿ. ಕಾಮ ಇರುವವರೆಗೂ ಮುಂದಿನ ತಲೆಮಾರು ಅನ್ನುವುದು ಇದ್ದೇ ಇರುತ್ತದೆ. ಮನುಷ್ಯಕುಲದ ಗುರಿಯನ್ನು ಮುಟ್ಟುವ ಜವಾಬ್ದಾರಿ ಆ ತಲೆಮಾರಿಗೆ ಸೇರಿದ್ದಾಗುತ್ತದೆ. ಮುಂದಿನ ತಲೆಮಾರೂ ವಿಫಲವಾದರೆ ಅದರ ಮುಂದಿನದಕ್ಕೆ ಆ ಜವಾಬ್ದಾರಿ. ಹೀಗೆ ಗುರಿ ಮುಟ್ಟುವವರೆಗೆ, ಭವಿಷ್ಯವಾಣಿ ನಿಜವಾಗುವವರೆಗೆ, ಮನುಷ್ಯಕುಲ ಐಕ್ಯತೆಯನ್ನು ಸಾಧಿಸುವವರೆಗೆ ಮುಂದುವರೆಯುತ್ತಲೇ ಇರುತ್ತದೆ. ಹೀಗಲ್ಲದೆ ಬೇರೆ ಥರ ಇರುವುದಕ್ಕೆ ಸಾಧ್ಯವೇ ಇಲ್ಲ. ದೇವರು ಮನುಷ್ಯನನ್ನು ಯಾವುದೋ ಗುರಿಯ ಸಾಧನೆಗೆ ಸೃಷ್ಟಿಮಾಡಿದ್ದಾನೆ. ಮನುಷ್ಯನನ್ನು ಸಾವಿದ್ದೂ ಕಾಮವಿಲ್ಲದಂತೆ ಅಥವ ಸಾವೇ ಇಲ್ಲದಂತೆ ಸೃಷ್ಟಿಮಾಡಿದ್ದರೆ ಏನಾಗುತ್ತಿತ್ತು? ಸಾವಿದ್ದೂ ಕಾಮವಿರದಿದ್ದರೆ ಮನುಷ್ಯರು ಗುರಿಯನ್ನು ಮುಟ್ಟದೆಯೇ ಸತ್ತುಹೋಗುತ್ತಿದ್ದರು. ಒಂದು ವೇಳೆ ಮನುಷ್ಯರಿಗೆ ಸಾವಿಲ್ಲದಿದ್ದರೆ ಏನಾಗುತ್ತಿತ್ತು? ಹಿಂದಿನ ತಲೆಮಾರಿನ ಜನರ ತಪ್ಪನ್ನು ಮುಂದಿನ ತಲೆಮಾರು ತಿದ್ದಿಕೊಂಡು ಬದುಕುವುದು ಸುಲಭವೇ ಹೊರತು, ತಮ್ಮ ತಲೆಮಾರಿನ ತಪ್ಪನ್ನು ತಾವೇ ತಿದ್ದಿಕೊಳ್ಳುವುದು ಕಷ್ಟ. ಆದರೂ ಸಾವಿಲ್ಲದ ಮನುಷ್ಯರಾಗಿದ್ದಿದ್ದರೆ ಎಷ್ಟೋ ಸಾವಿರ ಸಾವಿರ ವರ್ಷಗಳ ನಂತರ ಗುರಿ ಮುಟ್ಟುತ್ತಿದ್ದರೋ ಏನೋ. ಆಮೇಲೆ ಸಾವಿಲ್ಲದ ಆ ಮುದುಕರನ್ನು ಇಟ್ಟುಕೊಂಡು ಏನು ಮಾಡಬೇಕು? ಇಲ್ಲ, ಲೋಕ ಈಗ ಇರುವ ಹಾಗೆಯೇ ಸರಿಯಾಗಿದೆ. ಬಹುಶಃ ಹೀಗೆ ವಾದಮಾಡುವುದು ನಿಮಗೆ ಇಷ್ಟವಾಗದೋ ಏನೋ? ನೀವು ವಿಕಾಸವಾದದಲ್ಲಿ ನಂಬಿಕೆ ಇಟ್ಟವರೇನು? ಹಾಗಿದ್ದರೂ ಈ ತೀರ್ಮಾನ ಬದಲಾಗುವುದಿಲ್ಲ. ಪ್ರಾಣಿಗಳಲ್ಲೆಲ್ಲ ಅತಿ ಉನ್ನತನಾದ ಮನುಷ್ಯಪ್ರಾಣಿ ಬದುಕಿ ಉಳಿಯುವುದಕ್ಕೆ ಇತರ ಪ್ರಾಣಿಗಳೊಡನೆ ಹೋರಾಡಬೇಕು. ಜೇನುಹುಳಗಳಂತೆ ಐಕ್ಯದಿಂದ ಇರಬೇಕು. ಮಿತಿ ಇಲ್ಲದ ಹಾಗೆ ಮಕ್ಕಳನ್ನು ಹುಟ್ಟಿಸಬಾರದು. ಜೇನುಹುಳಗಳಂತೆಯೇ ಕಾಮವಿರದ ವ್ಯಕ್ತಿಗಳನ್ನು ಪೋಸಿಸಿ ಬೆಳೆಸಬೇಕು. ನಮ್ಮ ಸಮಾಜದಲ್ಲಿ ಈಗ ಇರುವ ಹಾಗೆ ಕಾಮದ ಬೆಂಕಿಗೆ ಮತ್ತಷ್ಟು ಎಣ್ಣೆ ಹೊಯ್ಯದೆ ಪ್ರವೃತ್ತಿಗಳನ್ನು ನೀಗಿಕೊಂಡವರನ್ನು ಸೃಷ್ಟಿಸಬೇಕು.” ಕೊಂಚ ಹೊತ್ತು ಸುಮ್ಮನಿದ್ದ. ಮನುಷ್ಯ ಕುಲ ಇಲ್ಲವಾಗುತ್ತದೆಯೆ? ಬದುಕಿನ ಬಗ್ಗೆ ನಿಮ್ಮ ದೃಷ್ಟಿಕೋನ ಯಾವುದೇ ಇರಲಿ. ಮನುಷ್ಯಕುಲ ಕೊನೆಗೊಳ್ಳುತ್ತದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಮನುಷ್ಯ ಕುಲ ಇಲ್ಲವಾಗುವುದು ನಮ್ಮ ನಿಮ್ಮ ಸಾವಿನಷ್ಟೇ ಅನಿವಾರ್ಯ. ಎಲ್ಲ ಧರ್ಮಗಳೂ ಅದನ್ನೇ ಹೇಳುತ್ತವೆ. ಮತ್ತೆ ವಿಜ್ಞಾನ ಕೂಡ. ಮನುಷ್ಯ ಕುಲ ಇಲ್ಲವಾಗುವುದು ಅನಿವಾರ್ಯ.”
ತುಂಬ ಹೊತ್ತು ಸುಮ್ಮನೆ ಕೂತಿದ್ದ. “ಕಾಮುಕತೆ, ಯಾವುದೇ ರೂಪದಲ್ಲಿರಲಿ, ಕೆಡುಕು ಅದು. ಹೆಂಗಸನ್ನು ಕಾಮದ ದೃಷ್ಟಿಯಿಂದ ನೋಡಿದರೆ ಹಾದರ ಮಾಡಿದಂತೆ ಎಂದು ಬೈಬಲ್ಲಿನಲ್ಲಿ ಹೇಳಿರುವುದು ನಿಜ. ಅದು ಬೇರೆಯ ಹೆಂಗಸರಿಗೆ ಮಾತ್ರವಲ್ಲ, ನಮ್ಮ ಹೆಂಡತಿಯರಿಗೂ ಅಪ್ಲೈ ಆಗುತ್ತದೆ. ಈ ಗುರಿ ತಲುಪುವುದಕ್ಕೆ ಮನುಷ್ಯ ದೀನನಾಗಬೇಕು, ಹಾಗಾದಾಗ ಮಾತ್ರ, ದೈನ್ಯದ ಅಂತಿಮ ಸ್ಥಿತಿ ತಲುಪಿದಾಗ ಮಾತ್ರ, ನೈತಿಕ ಮದುವೆಗಳು ಸಾಧ್ಯವಾಗುತ್ತವೆ.
(ಮುಂದುವರೆಯುವುದು)