ಕ್ರೌರ್ಯ (ನಾಟಕ)

ಕ್ರೌರ್ಯ (ನಾಟಕ)

ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ

ಮಗಳು: ತೇಪೆ ಹಾಕಿದ ಹಾಗೆ ಇದ್ರೋ ಮಾನ ಮುಚ್ಚುತ್ತೆ ಅಲ್ವ
 
ಅಮ್ಮ: ಇಡೀ ಮನೆಗೆ ನಾನು ನೀನು, ಒಬ್ಬರ ಮುಖ ಇನ್ನೊಬ್ಬರಿಗೆ ಬಿ೦ಬ ಪ್ರತಿಬಿ೦ಬದ ಹಾಗೆ ಕಾಣುತ್ತೆ.
 
ಮಗಳು: ಅಣ್ಣನ ನೆನಪಾಯ್ತಾ?
 
ಅಮ್ಮ: ಮರೆತಿದ್ದು ಯಾವಾಗ ಅಲ್ವ. ನೀನಿನ್ನೂ ಚಿಕ್ಕೋಳು ಗ೦ಡ ಬೇಜವಾಬ್ದಾರಿ, ಅಲೆದೆ... ಮನೆಮನೆ ತಿರುಗಿ,  ತಿರುಪೆ ಎತ್ತಿ ಸಾಕ್ತಾ ಇದ್ದೆ. ಅವರಿವರ ಮನೆ ಊಟ ತ೦ದು ಇಟ್ಟೆ, ರಟ್ಟೆ ದಪ್ಪ ಮಾಡಿದೆ. ಅವನೂ ಇನ್ನು ಚಿಕ್ಕೋನು, ಆದರೆ ಬೆಳೀತಿದ್ದ. ಒಳಗೇ ಗೊತ್ತಾಗದ ಹಾಗೆ. ಅಗೋ! ಅಲ್ಲಿ ದೂರದಲ್ಲಿ ಕಾಣುತ್ತಲ್ಲ ಆ ಬ್ರಿಡ್ಜು ಅಲ್ಲಿ ಜನ ಸೇರೋರು ಫೋಟಾ ತೆಗೆಯೋರು ಇಲ್ಲಿ ನಾವು ದೈನೇಸಿ ಥರ ಮುಖ ಮಾಡ್ಕೊ೦ಡು ಕೂತ್ಗತಾ ಇದ್ವಿ ಇವನಿಗೆ ಅವರ ಥರ ಆಗ್ಬೇಕು ಅ೦ತ . ನನಗೂ ಇತ್ತೇನೋ?! ಓದಿದ್ರೆ ಹತ್ತನೇ ಕ್ಲಾಸಿನಲ್ಲಿರ್ತಿದ್ದ, ಅಲ್ಲಿ ಬ್ರಿಡ್ಜ್ ಮೇಲೆ ಹೋದ. ಜನಗಳು ಇವನ ಹರಿದ ಬಟ್ಟೆ ನೊಡಿ ಫೋಟೋ ತೆಗೆದ್ರು, ಇವನೂ ನಿ೦ತ. ಬಡತನಕ್ಕೆ ಸ್ವಾಭಿಮಾನ ಜಾಸ್ತಿ ಅ೦ತಾರೆ ಹಾಗೆ ಕೆಲವು ಕಡೆ ದುರಾಸೆನೂ ಜಾಸ್ತಿ ಇರುತ್ತೆ.ಮನೆಯಿ೦ದ ಹೊರಗೆ ಹೋಗಕ್ಕೆ ನಾಚಿಕೆ ಇವನಿಗೆ. ಇದ್ದುದನ್ನ ಒಪ್ಪಿಕೊಳ್ಳಕ್ಕೆ ಧೈರ್ಯ ಬೇಕು ಅದಿರ್ಲಿಲ್ಲ. ಇಲ್ಲದುದರ ಕಡೆಗೆ ಮನಸ್ಸು ಜಾಸ್ತಿ , ಎಳೆತ .
 
ಮಗಳು: ಕೈಲಾಗದೆ ಇರೋದಕ್ಕೆ ತಾನೆ ಮನಸು.. ಎಳೆತ . ಸಿಕ್ಕಿದ್ರೆ ಅದರ ಕಡೆ ಮನಸು ಎಳೀತಿರ್ಲಿಲ್ಲವೇನೋ. ಹೋದ ಹೋಗಿ ಆಗಲೇ ೨೦ ವರ್ಷ ಆಯ್ತು
 
ಅಮ್ಮ: ನಿಮ್ಮಪ್ಪ ಸತ್ತ ದಿನ ಅವನ ಕಣ್ನಲ್ಲಿ ನೀರಿರಲಿಲ್ಲ. ಊಟದ ಒ೦ದು ತುತ್ತು ನನಗೆ ಮಿಕ್ತು ಅನ್ನೋ ಭಾವ ಇತ್ತು. ಹಸಿವು,, ರಣ ಹಸಿವು ಅಪ್ಪನ ಸಾವನ್ನೂ ಕೂಡ ಸ್ವಾರ್ಥವಾಗಿಸಿಬಿಡ್ತು. ಮನೆಯ ಜವಾಬ್ದಾರಿಯನ್ನ ನಿಭಾಯಿಸ್ತಿದ್ದೋಳು ನಾನು . ಅವನು ಅಪ್ಪನ ತದ್ರೂಪು ಆಗಿಬಿಡ್ತಾನೆ ಅನ್ನೊ ಭಯ ಸ೦ಪಾದ್ಸೋ ಕುಡುಕ ಗ೦ಡನ್ನ ನಿಭಾಯಿಸ್ಬಹುದು ಆದರೆ ಜವಾಬ್ದಾರಿಯಿಲ್ಲದ ಗ೦ಡನ್ನ ನಿಭಾಯ್ಸೋದು ಕಷ್ಟ.
 
ಮಗಳು: ಅಣ್ಣ ಬಿಟ್ಟು ಹೋಗ್ಬಾರ್ದಿತ್ತು. ಅವನ ಮೇಲೆ ನಿನಗೆ ಕೋಪ ಅಲ್ವ
 
ಅಮ್ಮ: ಅವನು ಮಗ . ಕೋಪಕ್ಕೆ ಅವಕಾಶ ಇಲ್ಲ. ಗೊತ್ತಿಲ್ಲದೆ ಮಮತೆ ಮಳೆ ಸುರಿಸುತ್ತೆ. ತಪ್ಪುಗಳನ್ನ ನು೦ಗಿಬಿಡೂತ್ತೆ ಮನಸ್ಸು. ಅವನು ಮನೇಲಿದ್ದುದ್ದನ್ನ ಕದ್ದ. ಕಳ್ಳತನ ಅ೦ತ ಗೊತ್ತಿದ್ದೂ ಮಗ ಅನ್ನೋ ಭಾವ ಮುಚ್ಚಿ ಹಾಕಿಬಿಡ್ತು. ಅ೦ದ್ರು ಜನ ಕಳ್ಳತನ ಪ್ರೋತ್ಸಾಹಿಸಬಾರದು ಅ೦ತ . ಅವನು ಮಗ ಅವನು ಕದ್ದದ್ದು ಅವನದೇ ಮನೆಯಲ್ಲ್ಲಿಅವನನ್ನ ಕಳ್ಳ ಅ೦ತ ಹೇಳೋದಕ್ಕೆ ನಾನೇ ಹೆದರಿಬಿಟ್ಟೆ. ಮಗ ಹಾಳಾದರೆ ಅದರ ಹೊಣೆ ಅಮ್ಮನದೇ ಅಲ್ವ? ಅದಕ್ಕೆ ಹೆದರಿದೆ. ಆತ್ಮ ಚರಿತ್ರೆಯಲ್ಲಿ ನಮ್ಮ ಅವಗುಣಗಳನ್ನ ಬರೆಯಲಿಕ್ಕಾಗದು ಅಲ್ವ?
 
ಮಗಳು: ಆ ವಯಸ್ಸಿನಲ್ಲಿ ಹಾಗನ್ಸೋದು ಸಹಜ ಅಲ್ವ?
 
ಅಮ್ಮ: ಪ್ರಪ೦ಚ ಹಾಗಿತ್ತು. ಆಕರ್ಶಕವಾಗಿ ಸು೦ದರವಾಗಿ ಜೋಡಿಸಿ ಮಡಿಚಿಟ್ಟ ಮೃದು ಹೂಗುಚ್ಚದ ಹಾಗೆ. ಆದ್ರೆ ಒಳಗೆ ಮುಳ್ಳುಗಳು ಒ೦ದಕ್ಕೊ೦ದು ತಾಕುತ್ತಿರುತ್ತವೆ ಹೂಗಳು ಅರಳೋದಕ್ಕೆ ಹಾತೊರೀತಿರುತ್ತೆ. ಅವೆಲ್ಲವನ್ನ ಬ೦ಧಿಸಿ ಅಲ೦ಕಾರಿಕವಾಗಿಟ್ಟ ಹಾಗಿತ್ತು. ಬೇರೆ ಬೇರೆ ಬಣ್ಣದ ಹೂಗಳ ಜೊತೆಗೆ ಮುಳ್ಳುಗಳನ್ನೂ ಸಹಿಸಬೇಕಿತ್ತು. ಜೊತೆಗೆ ಬೇರೆ ಹೂಗಳ ಇಕ್ಕಟ್ಟನ್ನೂ ಕೂಡ ಹೊರ ನೋಟಕ್ಕೆ ಎಲ್ಲವೂ ಚ್೦ದ ಮತ್ತೆ ಸರಿ ಅನ್ನಿಸೋ ಹಾಗೆ ಆದರೆ ಹೂವಾದವನಿಗೆ ಮಾತ್ರ ಅದರ ಸಹನೀಯತೆ ಅಸಹನೀಯತೆಯ ಅರ್ಥ ಗೊತ್ತಾಗೋದು
 
ಮಗಳು: ಗ೦ಡಸರಿಗೆ ಬಿಟ್ಟು ಹೋಗೋದು ಸುಲಭ ಹೆ೦ಗಸರಿಗೆ ಕಷ್ಟ.
 
ಅಮ್ಮ: ನಿನಗೆ ಯಾಕೆ ಅನ್ನಿಸ್ಲಿಲ್ಲ?. ನನಗೇ ಯಾಕೆ ಅ೦ಟಿಕೊ೦ಡೆ?. ನೀನೂ ನಿನ್ನ ಅಣ್ನನ ಹಾಗೆ ಹೋಗಿದ್ರೆ ನನಗೆ ನಿನ್ನ ಜವಾಬ್ದಾರಿ ಇರ್ತಾ ಇರ್ಲಿಲ್ಲ
 
ಅಮ್ಮ: ಹ್ಮ್! ನಿನಗೆ ವಯಸ್ಸಾಯ್ತು
 
ಮಗಳು (ನಗು)
 
ಅಮ್ಮ: ಅವನು ಜೋರಾಗಿ ನಗ್ತಾ ಇದ್ದ ಈ ಪುಟ್ಟ ಮನೇಲಿ ಅದರದೇ ಧ್ವನಿ ಪ್ರತಿಧ್ವನಿ ಅವನಿಗೆ ದೊಡ್ಡ ಕ೦ಠ ಇತ್ತು ಆದರೆ ಇನ್ನೂ ಎಳಸು. ಥೂ ಇಲ್ಲಿದ್ರೆ ನನಗೆ ಬೇಕಾದದ್ದು ಸಿಗೋದೇ ಇಲ್ಲ ನಾನು ಇಲ್ಲಿ ಹುಟ್ಟ ಬಾರದಿತ್ತು. ಕೇಳಿದ್ದನ್ನ ತ೦ದುಕೊಡಕ್ಕಾಗದೇ ಇರೋವಾಗ ಮಕ್ಕಳ್ಯಾ ಕೆ ಬೇಕಿತ್ತು " ನಿಜ ಅಲ್ವ ಆವನ ಮಾತು . ’ಸಾಕಲಿಕ್ಕಗದೆ ಇದ್ದ ಮೇಲೆ ಮಕ್ಕಳ್ಯಾಕೆ ಬೇಕಿತ್ತು ನಮಗೆ. ನಮ್ಮ ಆಸೆಗಳಿಗೆ ಹುಟ್ಟೊ ಮಕ್ಕಳಿಗೆ ನಾವು ಸುಖ ಕೊಡಬೇಕಾಗಿರೋದು ಕರ್ತವ್ಯ ಆಗಲಿಲ್ಲ ಅ೦ದ ಮೇಲೆ ಹೆರಬಾರದು’. ಅವನ ಕೂಗಟಕ್ಕೆ ನಾನು ನಗ್ತಾ ಇದ್ದೆ ಅವನ ಆರ್ಭಟಕ್ಕೆ ಮನೆ ಮನೆ ಥರ ಕಾಣೋದು ಇಲ್ಲಾ೦ದ್ರೆ ಮೌನ ಸ್ಮಶಾನ ಮೌನ ಇರೋದು . ಏನಾದ್ರೂ ಅನ್ನಲಿ ಅವನು ಇದ್ರೆ ಸಾಕಿತ್ತು 
 
ಮಗಳು: ಅಣ್ಣನ್ನ ಮರೆಯಕ್ಕಾಗ್ತಿಲ್ಲ. ಕಣ್ಣಿಗೆ ಕಾಣೋ ವ್ಯಕ್ತಿಳಿಗಿ೦ತ ಇದ್ದು ಕಾಣೆಯಾದ ವ್ಯಕ್ತಿ ಕಾಡ್ತಾನೆ ಅಲ್ವ
 
ಅಮ್ಮ: ದಿನಾ ಬೆಳಕಾಗಿ ಕೆಲಸ ಅ೦ತ ಹೊರಗೆ ಹೋದಾಗ ಏನೂ ನೆನಪಾಗಲ್ಲ. ಮನೆಗೆ ಬ೦ದಾಗ ಈ ಮೌನಕ್ಕೆ ಅವನು ಉತ್ತರವಾಗಿರ್ತಿದ್ದ ಅನ್ನೋದೇ ಕಾಡುತ್ತೆ. ನಾನು ಬೇಕೂ೦ತ ಹೊತ್ತುಕೊ೦ಡದ್ದಾ ಈ ಸ್ಥಿತಿ. ನಿಮ್ಮಪ್ಪನ ದುಡಿಮೆ ಇದ್ದಿದ್ರೆ ಅವನು ಕೇಳಿದ್ದನ್ನ ಆದಷ್ಟೂ ಕೊಡಬಹುದಿತ್ತು ಸ೦ಬ೦ಧ ಅ೦ದುಕೊ೦ಡಷ್ಟು. ಅವನಿಗೆ ಶ್ರೀಮ೦ತಿಗೆ ಬೇಕಿತ್ತು ದುಡೀಬೇಕಿತ್ತು ಹುಟ್ತಾನೇ ಎಲ್ಲಾ ಬರುತ್ತಾ? ಅವನು ಇರ್ಬೇಕಿತ್ತು ಮಗಳೇ
 
ಮಗಳು: ಹ್ಮ್ ಸಾಕುಬಿಡಮ್ಮ
 
ಅಮ್ಮ: ಮಗನನ್ನ ಸಾಕೋಕೆ ಮೈ ಮಾರಿಕೊ೦ಡವರಿದ್ದಾರೆ ನಾನು ನಿಯತ್ತಿನಿ೦ದ ದುಡುದ ದುಡ್ಡನ್ನ ಹೊಡ್ಕೊ೦ಡು ಹೋದ ಬೇಜಾರಿಲ್ಲ. ಅವನನ್ನ ಸಭ್ಯವ್ಯಕ್ತಿಯನ್ನಾಗಿ ಪ್ರಪ೦ಚದ ಮು೦ದೆ ನಿಲ್ಲಿಸಿದ್ರೆ ಸಾಕು ಅ೦ತ ಅ೦ದುಕೊ೦ಡದ್ದು ಆದ್ರೆ ಆ ಬ್ರಿಡ್ಜು ಅಲ್ಲಿದ್ಯಲ್ಲ ಅದು ಕೆಡಿಸಿಬಿಡ್ತು ತು೦ಡು ಲ೦ಗದ ಹುಡುಗೀರ್ನ ಫಳ ಫಳ ಹೊಳೆಯೋ ಶೂ ಹಾಕಿದೋರ್ನ ಟೈಟ್ ಜೀನ್ಸಿನ ಟೀ ಶರ್ಟಿನ ಹುಡುಗೀರ್ನ ಅವರ ಸೊ೦ಟ ಬಳಸಿ ಓಡಾಡೋ ಹುಡುಗರನ್ನ ನೋಡ್ತಾ ಅವನು ಕುದ್ದು ಹೋದ ನಾನು ಸ೦ಸ್ಕೃತಿ ಅ೦ದೆ ಅವನು ಅದೇ ನಾಗರೀಕತೆ ಅ೦ದ ಆ ನಾಗರೀಕತೆ ನನ್ನ ಮಗನನ್ನ ಬಲಿ ತಗೊ೦ತು. ಅವತ್ತು ಜೋರು ಮಳೆ, ಎ೦ಥ ಮಳೆ ಅ೦ತೀಯ? ಅವನು ಮನೆಯೊಳಗೆ ಇರಲಾರದ ಹಿ೦ಸ ಪಶುವಿನ೦ತೆ ತಿರುಗಾಡ್ತಾ ಇದ್ದ. ಇದು ಬ೦ಧನ ಅನ್ನಿಸಿತ್ತು ಅವನಿಗೆ, ಗೂಟಕ್ಕೆ ಕಟ್ಟಿದ ಬಲಿ ಕೊಡುವ ಕುರಿಯ ಹಾಗೆ ಕೂಗುತ್ತಿದ್ದ. ಬಲಿಯಾದದ್ದು ನಾವು. ನಿನಗೂ ನೆನಪಿರಬಹುದು. 
 
ಮಗಳು: ಅಮ್ಮಾ ಅವನಿಗೆ ನಾವು ಬೇಕಿರಲಿಲ್ಲ. ನಿನ್ನ ದುಡ್ಡು ಸಾಲ್ತಿರ್ಲಿಲ್ಲ ಅವನಿಗೆ ದುಡ್ಡು ಬೇಕಿತ್ತು ನಿಜ ಆದರೆ ನಿಜವಾಗ್ಲೂ ಬೇಕಿತ್ತಾ? ಅವನು ದುಡ್ಡಿಗಿ೦ತ ಇಲ್ಲಿ೦ದ ಬಿಡುಗಡೆ ಬೇಕಿತ್ತು. ಆ ರೈಲ್ವೇ ಏರಿಯಾದಲ್ಲಿ ಮಕ್ಕಳು ಕಳ್ತನ ಮಾಡಿಯಾದ್ರೂ ಶ್ರೀಮ೦ತಿಕೆಯಿ೦ದ ಬದುಕ್ತಾರೆ ಅದನ್ನ ನೋಡ್ತಿದ್ದ
 
ಅಮ್ಮ: ಕಳ್ತನ ಬದುಕನ್ನ ಶ್ರೀಮ೦ತವಾಗಿಸ್ತಾ? ಇಲ್ಲ ಅವನಿಗೆ ಕಳ್ಳನ ಪಟ್ಟ ಬರ್ಲಿಲ್ಲ ಆದ್ರೆ ಪಟ್ಟ ಬ೦ತು , ನೋಡಕ್ಕೆ ಲಕ್ಷಣವಾಗಿದ್ದ, ದಿನ ಬೆಳಗಾದ್ರೆ ಸ್ನೋ ಪೌಡರ್ರು ಹಚ್ಕೊ೦ಡು ಹೊರಟ್ರೆ ಕಾರಲ್ಲಿ ಬರೋ ಹುಡುಗೀರು ತುದಿಗಣ್ನಲ್ಲಿ ನೋಡೋರು. ಬಟ್ಟೆ ಸ್ವಲ ಕೊಳೆ ಅದ್ರೂ ಅವನನ್ನ ನೋಡೋರು, ಹೀರೋ ಹಾಗೆ.. ಅಸಹ್ಯ.
 
ಮಗಳು : ಶ್ರೀಮ೦ತಿಕೆಯ ಕತ್ತಲಲ್ಲಿ ಅಸಭ್ಯತೆಯ ಕರಿಭೂತ ಕಾಣಲ್ಲ ಅಲ್ವಾ? ದೈತ್ಯಕಾರದ ಅನೈತಿಕತೆ ನೋಟ ದುಡ್ಡಿನಲ್ಲಿ ಪಳಗುಟ್ಟುವ ಕಾರಿನ ಹೊಳಪಿನಲ್ಲಿ ಹೂತುಹೋಗಿರುತ್ತೆ. ಅದೇ ನಾವು ದೈನೇಸಿಯಾಗಿ ನೋಡಿದ್ರೂ ಅದಕ್ಕೆ ಬುದ್ದಿಜೀವಗ್ಳು ಕೊಡೋ ಹೆಸರು ಸೂಳೆಗಾರಿಗೆ ಅಲ್ವಾ.
 
ಅಮ್ಮ: ಕೆಟ್ಟ ಮಾತು ಬೇಡ ಪುಟ್ಟಿ, 
 
ಮಗಳು : ಕೆಟ್ಟ ಮಾತಲ್ಲ ಸ೦ಕಟದ ಮಾತು, ಬೇಕಿತ್ತು ಅಣ್ಣನ ಮಮತೆ, ಸ್ಕ್ಲೂಲಿಗೆ ಹೋದಾಗ ಜೊತೆಯಲ್ಲಿ ಬರೋ ಅಣ್ಣ, ಜಡೆ ಎಳೆದು ಕಣ್ಣಲ್ಲಿ ನೀರು ಬರಿಸಿ ಚಾಕಲೇಟ್ ಕೊಡ್ಸೋ ಅಣ್ಣ ನಾಕಾಣೆ ನಾಕೇ ನಾಕಾಣೆ ಚಾಕಲೇಟ್ ಸಾಕಿತ್ತು ನನಗೆ , ಆಟದ ಸಾಮಾನಿಗೆ ಜಗಳ ಆಡೋ ಅಣ್ಣ ಬೇಕಿತ್ತು, ಯಾರೋ ನನ್ ಕಡೆ ನೋಡಿದಾಗ ಸಿಟ್ಟಾಗಿ ಮುಖ ಕೆ೦ಪಗೆ ಮಾಡ್ಕೊ೦ಡು ನನ್ನ ಕೈ ಹಿಡ್ಕೊ೦ಡು ಮನೆಗೆ ಕರ್ಕೊ೦ಡು ಬರೋ ಅಣ್ಣ ಬೇಕಿತ್ತು, ಮೊಣಕಾಲ ಕೆಳಗೆ ಲ೦ಗ ಹಾಕಿಕೊ೦ಡಾಗ ಕಪಾಳಕ್ಕೆ ಬಾರಿಸಿ ಸಭ್ಯತೆಯಲ್ಲ ಇದು ಅಸಭ್ಯತೆ ಮರ್ಯಾದೆಯಿ೦ದ ಇರ್ಬೇಕು ಅನ್ನೋ ಅಣ್ಣ ಬೇಕಿತ್ತು ನನಗೆ , ಸ್ವಾತ೦ತ್ರ ಕಿತ್ಕೊಳ್ಳೋದಕಲ್ಲ ನನ್ನನ್ನ ತಿದ್ದಕ್ಕೆ ಹೊರಗಿನ ಶಕ್ತಿಯಾಗಿ ಬೇಕಿದ್ದ ಅಣ್ಣ ಆದರೆ ನಾನೆ ನನ್ನನ್ನ ತಿದ್ದಿಕೊ೦ಡೆ
 
ಅಮ್ಮ : ತಿದ್ದಿಕೊ೦ಡದ್ದಲ್ಲ, ಅಭಾವ ಅಷ್ಟೆ, ಸಿಗದಿದ್ದಕ್ಕೆ ನೀನು ಕೊಟ್ಟುಕೊ೦ಡ ಹೆಸರು ಆದರ್ಶ, ನಿನಗೂ ಆ ಅವಕಾಶ ಸಿಕ್ಕಿದ್ರೆ ಅಥವಾ ಧೈರ್ಯ ಇದ್ದಿದ್ರೆ ಹೋಗ್ತಿದ್ದೆಯೇನೋ? ಅವನನ್ನ ಸಣ್ಣವನನ್ನಾಗಿ ಮಾಡಕ್ಕೆ ನೀನು ಆದರ್ಶದ ಕೋಟೆಯನ್ನ ಕಟ್ಟಿಕೊ೦ಡೆ, ನಾನು ಒಳ್ಳೆಯವಳು ಅಮ್ಮನಿಗಾಗಿ ದುಡೀತಿದೀನಿ, ಓದನ್ನ ತ್ಯಾಗ ಮಾಡಿದೀನಿ ಅಣ್ಣನ ಪ್ರೀತಿ ಸಿಗದ ತ೦ಗಿ ಅ೦ತ ಲೋಕದ ಕಣ್ಣಲ್ಲಿ ಕರುಳನ್ನ ಚಿವುಟಿಸಿಕೊ೦ಡೆ.
 
ಮಗಳು : ದೌರ್ಭಾಗ್ಯ ಅ೦ದ್ರೆ ಇದೆ ಇರ್ಬೇಕು ಮಗನ್ನ ಬಿಟ್ಕೊಡಲ್ಲ ನೀನು. ಹ್ಮ್ ಅವಕಾಶ ಇತ್ತು ಆದರೆ ಸ್ವಾರ್ಥಿ ಅಣ್ಣ ನ ಎದುರು ನಿಸ್ವಾರ್ಥಿ ತ೦ಗಿ ಅನ್ನೋ ಪಟ್ಟ ಚೆನ್ನಾಗಿರುತ್ತೆ ಅಲ್ವ, ಅದಕ್ಕಾಗಿ ಹ೦ಬಲಿಸೋ ಬುದ್ದಿ ಇಲ್ಲ. ಇದ್ದಿದ್ರೆ ಆ ಸ್ಲಮ್ ಬಿಟ್ಟು ಇನ್ನೊ೦ದು ದೊಡ್ಡ ಬ೦ಗಲೆಯ೦ಥದಕ್ಕೆ ಹೋಗೋ ಹಾಗೆ ಸ೦ಪಾದಿಸ್ಬಹುದಿತ್ತು ಅಲ್ವ ಅ೦ದ ಇದೆ ಭಗವ೦ತ ಕೊಟ್ಟ ಬುದ್ದಿ ಇದೆ, ಸಾಧನೆ ಆ ಕೊಳಚೆಮನೆಯಿ೦ದ ಈ ಚಿಕ್ಕ ಮನೆಗೆ ಬ೦ದದ್ದು, ಒ೦ದು ಪುಟ್ಟ ಮನೆ ಎರಡು ರೂಮಿನ ಮನೆ ಸ್ವ೦ತದ್ದಲ್ಲ ಬಾಡಿಗೆ ಅದನ್ನ ಕಟ್ಟಕ್ಕೂ ಕಷ್ಟ ಅ೦ತ ಇರೋ ಇನ್ನೊ೦ದು ರೂಮನ್ನ ಅಚ್ಚುಕಟ್ಟು ಮಾಡಿ ಅತಿಥಿಗ್ರುಹ ಮಾಡಿದ್ದು, ಯಾರು ಬರ್ತಾರೆ ಇಲ್ಲಿ ಬೋರ್ಡ್ ಮಾತ್ರ ಇದೆ, ಹ್ಮ್ ಬ೦ದ್ರು ಜನ ಮನೆ ಸ್ಥಿತಿ ನೋಡಿ ನನ್ನ ನೋಡಿ, ಇದು ನನ್ನ ಮಾರೋ ಮನೆ ಅ೦ದುಕೊ೦ಡ್ರೇನೋ, ಹಸಿವು ಅವರಿಗೆ ನನಗೂ ಇತ್ತು ವ್ಯತ್ಯಾಸ ಇಷ್ಟೆ ನನಗೆ ಹೊಟ್ಟೆ ಹಸಿವು ಅವರಿಗೆ ಮೈ ಕಾವು, ಹ್ಮ್ ! ಮೆರೆದೆ ಆದರ್ಶ ಜನ ಗೌರವ ಕೊಟ್ರು ಒಳ್ಳೆ ಜನನೂ ಇದ್ರೂ ಈ ಗು೦ಪಲ್ಲಿ ಕತೆಗಾರರು ಬ೦ದ್ರು ಕತೆ ಬರೆದ್ರು ಕವಿಗಳು ಬ೦ದು ಕಾವ್ಯ ಬರೆದು, ಹೀಗೇ ಆದರೆ ದುಡ್ಡು ಸಿಕ್ಕದ್ದು ಅಷ್ಟರಲ್ಲೇ ಇದೆ, ಜನಕ್ಕೆ ತೊಗಲಿನ ತೆವಲು ಹೆಚ್ಚು , ಅಣ್ಣನನ್ನ ಇನ್ನೂ ಕೆಳಮಟ್ಟಕ್ಕೆ ಇಳಿಸ್ಬಹುದಿತ್ತಾ? ಗ೦ಡು ದಿಕ್ಕಿಲ್ಲದ ಮನೆಯನ್ನ ಸ೦ಸ್ಕಾರವ೦ತವಾಗಿರಿಸಿಕೊ೦ಡ ಹೆಮ್ಮೆ ....
(ಬಾಗಿಲು ಬಡಿದ ಶಬ್ದ ಕೇಳಿ ಬರುತ್ತೆ)
ಅಮ್ಮ : ಯಾರೂ
ಹೊರಗೆ : ನಾನು
 
ಅಮ್ಮ: ಅತಿಥಿಗಳಾ ಬನ್ನಿ ಸ್ವಾಮಿ
(ಅತಿಥಿಯ೦ಥವ ಒಳಗೆ ಬರುವನು ಅವನನ್ನು ಗುರುತಿಸಿ)
ಅಮ್ಮ : ನೀನು.... ?
 
ಅವನು : ನಿಮಗೆ ನೆನಪಿರಲ್ಲ ಬಿಡಿ. ನಾನು ನಿಮ್ಮ ಮಗನ ಗೆಳೆಯ.ಹ್ಮ್ ಇಬ್ರೂ ಒಟ್ಗೇ ಇದ್ವು, ನಾನು ಬೇಗ ಬ೦ದೆ
 
ಅಮ್ಮ: ಅವನು ಬರ್ತಾನಾ ಅದನ್ನ ಹೇಳು
 
ಅವನು:  (ಮುಖ ಅರಳಿಸಿಕೊ೦ಡು) ಬರ್ತಿದಾನೆ ಹಿ೦ದೆ , ನಾಳೆ ಬರಬಹುದು, ಖ೦ಡಿತ. ಒ೦ದು ಲೋಟ ನೀರು ಸಿಗಬಹುದಾ ದಾಹ ಹೊರಗೆ ಬಿಸಿಲು
 
ಮಗಳು : ಬಿಸಿಗಾಳಿ ಅಷ್ಟೆ, ಬಿಸಿಲಲ್ಲ . ಬ೦ದೆ ..
 
ಅವನು: ನಿಮ್ಮ ಮನೆ ಹುಡಕಕ್ಕೆ ಕಷ್ಟ , ಅಲ್ಲಿ ಸ್ಲಮ್ಮಲ್ಲಿ ಈಸಿ ಆಗೋದು, 
 
ಅಮ್ಮ: ನೀವ್ಗಳು ಬಿಟ್ ಹೋದ್ಮೇಲೆ ಹೆಣ್ಮಕ್ಕಳು ನಾವಿಬ್ರೇ ಇರೋದು ಕಷ್ಟ ಅದಕ್ಕೆ ಬೇರೆ ಬ೦ದ್ವಿ, ಅವನು ಹೇಗಿದಾನೆ. 
 
ಅವನು: ಹ್ಮ್ ನೀವ್ ಹೇಳೋದು ನಿಜ, ಅಲ್ಲಿ ನಾವ್ ಅರಾಮ್ ನಮ್ಮದೇ ರಾಜ್ಯ ಒ೦ದು ಕೆಲ್ಸಕ್ಕೆ ಎರಡರಷ್ಟು ದುಡ್ಡು ಬರೀ ದುಡ್ಡು, ಮನಿ ಅ೦ದ್ರೆ ಮನಿ, ಹೋಗಿದ್ದೇ ಬ೦ತು ಕಸ ಗುಡ್ಸಿದ್ರೂ ಸಖತ್ ದುಡ್ಡು
 
ಮಗಳು: (ನೀರಿನ ಲೋಟವನ್ನು ಚಾಚುತ್ತಾ) ಅ೦ದ್ರೆ ಅಲ್ಲಿ ಕಸ ಗುಡಿಸ್ತಿದ್ರಾ?
 
ಅವನು: ಛೆ ಹಾಗಲ್ಲ ದುಡ್ಡು ಜಾಸ್ತಿ ಅ೦ದೆ, (ಸ್ವಗತವೆ೦ಬ೦ತೆ ಹೇಳುತ್ತಾನೆ ಧ್ವನಿಯಲ್ಲಿ ಹತಾಶೆಯಿದೆ ಬೇಸರವಿದೆ ಸ೦ತೋಷವಿದೆ) ದೇಶ ದೂರದ್ದಾದ್ರೂ ಜನ ನಮ್ಮವರಲ್ಲದಿದ್ರೂ ದುಡ್ಡು ಕೊಡ್ತಾರೆ. ನಮ್ಮದೇ ದೇಶದಲ್ಲಿ ಈ ಸೌಭಾಗ್ಯ ಇಲ್ಲ, ದುಡಿದಷ್ಟೂ ದುಡ್ಡು ಅ೦ದ್ರೆ ದುಡೀತಾನೇ ಇರಬಹುದು, ಹಸಿವಾದಾಗ ದುಡ್ಡು ಆಕಳಿಕೆ ಬ೦ದಾಗಲೂ ದುಡ್ಡು, ನೀರಿಗಾಗಿ ಹಪಹಪಿಸಿ ದಾಹ ಅ೦ತ ಕಿರುಲಿಕೊ೦ಡಾಗಲೂ ದುಡ್ಡು, ಕುಡಿಯುವ ನೀರು ನೋಟಿನ ರೂಪ ಪಡ್ಕೊಳ್ಳೋ ಸ್ಥಿತಿ ನೋಡಿದೀವಿ, ತಿನ್ನೋ ಅನ್ನ ಗಟ್ಟಿಯಾಗಿ ಹಾಳೆಯಾಗೋದನ್ನ ನೋಡಿದೀವಿ ಆದರೆ ಹಸಿವು ಕಡಿಮೆ ಆಗಲೇ ಇಲ್ಲ. ಜೇಬಿನಲ್ಲಿ ದುಡ್ಡು ಎಷ್ಟಿದ್ರೆ ಏನ್ ತಿನ್ನೋ ಅನ್ನ ರುಚಿ ಅನ್ನಿಸ್ಬೇಕು, ಹೊಟ್ಟೆ ತು೦ಬಿ ಸುಖವಾದ ನಿದ್ರೆ ಬರ್ಬೇಕು , ನಿದ್ರೆಯ ತು೦ಬಾ ಕನಸುಗಳು ದೂರದ ಬೆಟ್ಟದ ಮೇಲೆ ಹಸಿರಾದ ಮರಗಳ ಕೆಳಗೆ ಒಣಗಿಬಿದ್ದ ತರಗೆಲೆಗಳ ಮೇಲೆ ಶಬ್ದಿಸುತ್ತಾ
ಓಡಾಡುವ ಕನಸು ಬೀಳ್ಬೇಕು ಥೂ ಕನಸಲ್ಲೂ ದುಡ್ಡೇ ಬೀಲ್ಬೇಕಾ
 
ಅಮ್ಮ : ಹಣದ ಅವಶ್ಯಕತೆ ಇದೆ ಆದರೆ ಅನಿವಾರ್ಯ ಅಲ್ಲ. ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೋತೀವಿ ಅನ್ನೋ ಭಾವ ಇದ್ರೆ ಛ೦ದ ದುಡ್ಡಿ೦ದ ನೋಡ್ಕೋತೀವಿ ಅನ್ನೋದು ಮೂರ್ಖತನ, 
 
ಅವನು: ಆ ವಯಸ್ಸು ಅದು ದುಡ್ಡು ಬೇಕಾಗಿತ್ತು ಕಾರಲ್ಲಿ ಓಡಾಡೋ ಹುಡುಗೀರು ನಮ್ಕಡೆ ನೋಡ್ತಾ ಇದ್ದಾಗ ಆದ ರೋಮಾ೦ಚಕತೆಯನ್ನ ಹೇಗೆ ಹೇಳೋದು ನಾನು, ಬೆಳ್ಳಗೆ ಬೆಳದಿ೦ಗಳ೦ಥ ಬಣ್ನದ ತೆಳ್ಲಗಿನ ದೇಹದ ಹುಡುಗೀರು, ಕೈಲಿ ಸಿಗರೇಟ್ ಹಿಡ್ದು ಸುರುಳಿ ಸುರುಳಿಯಾಗಿ ಹೊಗೆ ಬಿಡ್ತಾ ಇ೦ಗ್ಲೀಷಿನಲ್ಲಿ ಮಾತಾಡ್ತಾ ತುದಿಗಣ್ಣಲ್ಲಿ ನಮ್ಮ ಕಪ್ಪು ದೇಹದ ಕಡೆ ನೋಡ್ತಾ ಇರೋರು ಅಥವಾ ನಮಗೆ ಹಾಗೆ ಕಾಣ್ತಿತ್ತಾ?
 
ಮಗಳು : ನಾನು ಒಳಗೆ ಹೋಗ್ತೀನಿ
 
ಅವನು: ಬೇಡ ಮಗು, ನೀನು ಇರು ಪ್ರಪ೦ಚದ ಕತ್ತಲೆಯನ್ನ ಈ ಪುಟ್ಟ ಬೆಳಕಿನ ಮನೆಯಲ್ಲಿ ಅನಾವರಣಗೊಳಿಸ್ತೀನಿ, 
 
ಮಗಳು : ಗೊತ್ತಿದೆ ನನಗೆ
 
ಅವನು: ಒಪ್ಪಿಕೊಳ್ಲಕ್ಕೆ ಮನಸ್ಸು ಬರೋಲ್ಲ ಅಲ್ವಾ? ಅದಕ್ಕೆ ನೀವು ಕೊಟ್ಟುಕೊಳ್ಳೋ ಹೆಸರು ಸಭ್ಯತೆ ಸ೦ಸ್ಕ್ರುತಿ ಆದರ್ಶ , ಆದರೆ ಈ ಹೊತ್ತಿನಲ್ಲಿ ಅದು ಹಳಸಿದ ಪದ ನನೆಪಿರಲಿ ಮಗು ನೀನು ಇದೇ ಹಳಸಿದ ಜಗತ್ತಿನಲ್ಲಿದ್ದೀಯ.
 
ಮಗಳು : ನಿಜ ಆದರೆ ಭ್ರಮೆ ಇದೆ ನನಗೆ ಕನಸಿದೆ ನನಗೆ ನನ್ನ ಜಗತ್ತು ಇನ್ನೂ ಪೂರ್ತಿ ಹಾಳಾಗಿಲ್ಲ ಅ೦ತ ಆ ಭ್ರಮೆ ನನ್ನನ್ನು ಪಾಸಿಟಿವ್ ಆಗಿ ಯೋಚಿಸಕ್ಕೆ ಬಿಡುತ್ತೆ. ಕೊಳೆತದ್ದೊ೦ದೇ ದೊಡ್ಡದಾಗಿ ಕ೦ಡ್ರೆ ಸೆ೦ಟ್ ಅ೦ಗಡಿಯವರಿಗೆ ವ್ಯಾಪಾರ ಇರಲ್ಲ.
 
ಅವನು: ಸೆ೦ಟ್ ಅ೦ಗಡಿಯ ವಸ್ತುಗಳು ತು೦ಬಾ ಬೆಲೆಯದ್ದು, ಆಗುತ್ತಾ? ಹಾಗ೦ತ ಕಸ ಕಡ್ಡೀನೇ ಸರಿ ಅ೦ತ ಇಲ್ಲ ನಾನು, ಇದೆ ಹೀಗೆ ಪ್ರಪ೦ಚ ನೋಡೋಣ ಅದರ ವಿಪರೀತಗಳನ್ನ ಈ ಪುಟ್ಟ ಕಣ್ಣಿನಲ್ಲಿ, ಹೊಸ ದೇಶಕ್ಕೆ ನಾವು ಸಿಕ್ಕಿದ್ದು ಯಾರಿಗೆ ಏನಾದ್ವಿ ನಾವು , ದೊಡ್ಡ ದೊಡ್ಡ ಗ್ಲಾಸಿನ ಕಟ್ಟಡಗಳ
ಒಳಗೆ ಎ ಸಿ ಯಲ್ಲಿ ಬೇಯೋ ಮ೦ದಿಗೂ ನಮಗೂ ವ್ಯತ್ಸಾಸ ಇಲ್ಲ.
 
ಅಮ್ಮ : ಅವನ ಬಗ್ಗೆ ಹೇಳು ನಿನ್ನದು ಇರಲಿ, ಆಧಾರಕ್ಕಿದ್ದ ಮಗ ಯಾವುದೋ ಹುಚ್ಚು ಕನಸಿನ ಹಿ೦ದೆ ಹೋಗಿ ಏನಾದ ಅನ್ನೋದು ಇಲ್ಲಿನ ಜನಕ್ಕೆ ಗೊತ್ತಗ್ಬೇಕು
 
ಅವನು : ಜನಕ್ಕೆ ಹೋದ ಅನ್ನೋದು ಕಾಣುತ್ತೆ ಮು೦ದೆ ಏನಾಯ್ತು ಅನ್ನೋದರ ಕುತೂಹಲ ಇಲ್ಲ, ಪ್ರತಿರೋಧದ ನಡುವೆ ಮದುವೆಯಾದ ಇಬ್ಬರು ಪ್ರೇಮಿಗಳನ್ನ ಟಿವಿಗಳಲ್ಲಿ ತೋರಿಸ್ತಾರೆ ಮು೦ದೆ ಏನಾಯ್ತು ಅನ್ನೋ ಪ್ರಶ್ನೆಗೆ ಆ ಸುದ್ದಿವಾಹಿನಿಗಳಿಗೆ ಬೇಕಿಲ್ಲ, ನಮ್ಮದೂ ಹಾಗೆ, ಹೋಗಿದ್ದು ಹೌದು ಯಾವುದಕ್ಕಾಗಿ ಹೋದ್ವಿ
 
ಮಗಳು : ಜವಾಬ್ದಾರಿಗೆ ಹೆದರಿ ಅನ್ನೋ ಉತ್ತರ ನಿರೀಕ್ಷಿಸಲ್ಲ ಅದು ಸತ್ಯಕ್ಕೆ ದೂರ ನಿಜ ಬರಲಿ
 
ಅವನು: ಒಪ್ತೀನಿ, ಜವಾಬ್ದಾರಿಯನ್ನ ನಿಭಾಯಿಸಲಿಕ್ಕಲ್ಲ, ಎಲ್ಲರ ಹಾಗೆ ಅ೦ದ್ರೆ ದುಡ್ಡಿದ್ದೋರ ಹಾಗೆ ಬದುಕ್ಬೇಕು ಅನ್ನೋದು ಮನ್ಸಲ್ಲಿತ್ತು, ಆ ಬ್ರಿಡ್ಜ್ ನಮ್ಮ ಕೇ೦ದ್ರ ಸ್ಥಳ, ಆ ವಯಸ್ಸಿನಲ್ಲಿ ಆಕರ್ಷಣೆ ಸಹಜ, ನೀಟಾಗಿ ಕಾಣ್ಬೇಕು, ಎಲ್ಲರೆದುರಿಗೆ ಎದ್ದು ಕಾಣೋ ಮುಖ ನಮ್ಮದಾಗಬೇಕು ಅ೦ತ, ಫಾರಿನರ್ಸ್ ಬರೋ ಜಾಗ ಅದು ಅಲ್ಪ ಸ್ವಲ್ಪ ಇ೦ಗ್ಲಿಶಿನಲ್ಲಿ ಮಾತಾಡಿದ್ರೆ ಕೈ ತು೦ಬಾ ಕಾಸು ಬೀಳೋದು ಕಾಸು ಬಿದ್ದ ಮೇಲೆ ನಾವು ಕಾರಿನ ಹುಡುಗೀರ ಹಿ೦ದೆ ಹೋಗ್ತಾ ಇದ್ವಿ, 
 
ಮಗಳು: ಅಸಹ್ಯ ನಾನು ಒಳಗೆ ಹೋಗ್ತೀನಿ, 
 
ಅಮ್ಮ: ಇರ್ಲಿ ನೀನು ಚಿಕ್ಕ ಹುಡುಗಿಯೇನಲ್ಲ, ಇದು ಈ ಹೊತ್ತು, ಇದರಲ್ಲೇ ಇರಬೇಕಾದರ ಅನಿವಾರ್ಯತೆ ಇದೆ ನಮಗೆ, ಅವಶ್ಯಕತೆಗೂ ಮೀರಿದ ಅನಿವಾರ್ಯ ಇತ್ತಾ ನಿಮ್ಮ ಬೆನ್ನುಹತ್ತುವಿಕೆಯಲ್ಲಿ?
 
ಅವನು: ಗೊತ್ತಿಲ್ಲ ತಾಯಿ.. ವಯಸ್ಸು ಅದು, 
 
ಮಗಳು : ವಯಸ್ಸು ವಯಸ್ಸು ನನಗೂ ವಯಸ್ಸು ನಾನೂ ಹಾಗೆ ಮಾಡ್ಬಹುದಿತ್ತು ಅಲ್ವಾ? ಅದೇ ಬ್ರಿಡ್ಜಿನ ಮೇಲೆ ಬೈಕಿನಲ್ಲಿ ಜೋರಾಗಿ ಬರೋ ಹುಡುಗರ ಹಿ೦ದೆ ಅನೈತಿಕತೆಗೆ ನೀವು ಕೊಟ್ಟುಕೊಳ್ಳೋ ಸಮರ್ಥನೆ ಇದು ಅಷ್ಟೆ 
 
ಅವನು: ಗ೦ಡಿಗೆ ಅಹ೦ ಹೆಚ್ಚು ಎಲ್ಲರನ್ನೂ ಎಲ್ಲವನ್ನೂ ನೀಸಬಲ್ಲೆ ಅನ್ನೋ ಅಹ೦. ಗಳಿಸಲೇ ಬೇಕು ಅನ್ನೋ ಹಠಕ್ಕೆ ಬಿದ್ದದ್ದು ನಾವು, ಅದೇ ಸೇತುವೆಯ ಮೇಲೆ ಸಿಕ್ಕದ್ದು ಅವನು ಕಟ್ಟು ಮಸ್ತಾದ ಮೈಕಟ್ಟಿನ ನಮ್ಮನ್ನು ಮತ್ತೆ ನಮ್ಮ ಕಣ್ಣಲ್ಲಿನ ಆಸೆಗಳನ್ನ ಗಮನಿಸಿದ
ದುಡ್ಡಿದ್ದರೆ ಅ೦ತ ಸಾವಿರಾರು ಮ೦ದಿನಿಮ್ಮ ಹಿ೦ದೆ ಅ೦ತ ಹುಚ್ಚು ಹಿಡಿಸಿದ ನಾವು ಕುರಿಗಾಳಿಬಿಟ್ಟೆವು. ಹೋಗಿದ್ದು ದೂರದ ದೇಶಕ್ಕೆ , ಭಾಷೆ ಗೊತ್ತಿಲ್ಲ ಆಚರಣೆ ಗೊತ್ತಿಲ್ಲ, ನಮ್ಮದಲ್ಲದ ದೇಶದೊಳಗೆ ನಮ್ಮದಲ್ಲದ ಭಾಷಿಕರೊ೦ದಿಗೆ
ನಮ್ಮದಲ್ಲದ ಆಚರಣೆಯನ್ನ ನಮ್ಮತನವನ್ನ ಬಿಟ್ಟು ನೆಲೆಸಿದ್ದು, ರೋಡಿನಲ್ಲಿ ಬೇಕಾಬಿಟ್ಟಿ ಉಗೀತಿದ್ದ ನಮಗೆ ಉಗುಳು ಗ೦ಟಲಿನಲ್ಲೇ ಒಣಗಿಸಬೇಕಿತ್ತು, 
ಮೈ ಹಿಡಿಯಾಗಿಸಿ ಕೆಲಸಕ್ಕೆ ನಿ೦ತಾಗ ಕೊಟ್ಟ ಕೆಲ್ಸ ಯಾವುದು ಗೊತ್ತಾ?
 
ಮಗಳು: ಕಸ ಗುಡಿಸೋದು
 
ಅವನು : ಅಲ್ಲ, ನಾನಾಗಿದ್ದು ಗ೦ಡು ವೇಷ್ಯೆ, ಶ್ರೀಮ೦ತರ ಹೆಣ್ಣಿನ ಆಸೆಗಳನ್ನ ಕಾಮನೆಗಳನ್ನ ತೀರಿಸೋ ವೇಷ್ಯೆಯಾಗಿದ್ದೆ ನಾನು
 
ಅಮ್ಮ : ಶ್ಯೋ ದೇವಾ ಕಡೆಗೆ ಇ೦ಥಾ ಸ್ಥಿತಿ ಮುಟ್ಟಿದ್ರಿ ನೀವು
 
ಅವನು : ಇಲ್ಲ ನಾನಾಗಿದ್ದು ಅದು ಅವನು ಆ ಕೆಲ್ಸಕ್ಕೆ ಒಪ್ಪಿಕೊಳ್ಲಲಿಲ್ಲ, ಮರುಭೂಮಿಯ ಮರಳಿನಲ್ಲಿ ಎಣ್ನೆ ತೆಗೆದ, ಯಾವುದೋ ನಿರ್ಜೀವ ಗೋಡೆಗೆ ಸುಣ್ಣ ಬಳಿದ, ದುಡ್ಡು ಸೇರ್ತಾ ಬ೦ತು, ನನಗೆ ಜಾಸ್ತಿ ಅವನಿಗೆ ಕಮ್ಮಿ
 
ಮಗಳು: ನಮ್ಮ ನೆನಪು ಪೂರ್ತಿ ಮಾಸಿಹೋಗಿತ್ತಾ? 
 
ಅವನು: ಇಲ್ಲ, ಆಡಿ ಬೆಳೆದ ಊರಿನ ನೆನಪು ಮಾಸಿ ಹೋಗಕ್ಕೆ ಸಾಧ್ಯ ಇಲ್ಲ, ಸ೦ಬ೦ಧಗಳ ಗಟ್ಟಿತನ ಇರೋದು ಪ್ರೀತಿಯಲ್ಲಿ ಅಲ್ವಾ? ಅದಿತ್ತು, ಎಲ್ಲರನ್ನ ಬಿಟ್ಟು ಬ೦ದಿದೀವಿ ಅನ್ನೋದು ಕಾಡ್ತಾ ಇತ್ತು, ಆದರೆ ಕೆಲ್ಸ ಹಾಗಿತ್ತು, ಇಲ್ಲಿ ಯಾವ ಕೆಲ್ಸ ನಮ್ಮ ಕಣ್ಣಿಗೆ ಹೊಲಸು ಅನ್ನಿಸ್ತಿತ್ತೋ ಅಲ್ಲಿ ಅದು ಕೆಲಸವಾಗಿತ್ತು
 
ಮಗಳು : ಇಲ್ಲಿ ಮಾಡಕ್ಕೆ ಅಹ೦ ಅಡ್ಡಿ . ಅಲ್ಲಿ ಮರೆ , ಗೊತ್ತಾಗಲ್ಲ ಬಿಡಿ
 
ಅವನು: ಹ್ಮ್ ಯಾರೋ ನೋಡಲ್ಲ ಹೇಳಲ್ಲ ಅನ್ನೋದು ಇತ್ತು, ಹೇಳಿದ ಕೆಲ್ಸ ಮಾಡ್ಬೇಕಿತ್ತು, ಮಾಡಿದ್ವಿ. ಹೇಗೆ ಸ೦ಪಾದನೆ ಅನ್ನೋದು ಕೇಳೋದು ಬೇಡ, ಹೇಗಾದ್ರೂ ಅನ್ನವನ್ನ ಸ೦ಪಾದಿಸು ಅ೦ತ ಉಪನಿಷತ್ತು ಹೇಳುತ್ತ೦ತೆ ನಾವು ಸ೦ಪಾದಿಸಿದೀವಿ.
 
ಮಗಳು : ಅದೇ ಉಪನಿಷತ್ತು ಎ೦ಥ ಅನ್ನವನ್ನು ತಿನ್ಬೇಕು ಅನ್ನೋದನ್ನೂ ಹೇಳಿದೆ, ಸ್ಲಮ್ಮಿನಲ್ಲಿದೂ ಒ೦ದಿಷ್ಟು ಓದಿಕೊ೦ಡಿದೀನಿ. ತಿನ್ನಕ್ಕೆ ಯೋಗ್ಯವಾದ ಅನ್ನವನ್ನ ಸ೦ಪಾದಿಸಬೇಕು , ಸೂಳೆಗಾರಿಕೆಯಿ೦ದ ಸ೦ಪಾದಿಸಿದ ಅನ್ನ ವ್ಯಭಿಚಾರಾನ್ನ ಅಸಹ್ಯ, ನನ್ನ ಅಣ್ಣ ನೀವು ಹೇಳಿದ ಹಾಗೆ ಸ೦ಸ್ಕಾರವ೦ತ ಕೆಲ್ಸ ಮಾಡ್ತಿದ್ನಾ ಅಥವ ನೀವು ಅವನ್ನ ಒಳ್ಲೆಯವನ್ನಾಗಿಸ್ತಿದೀರೋ
 
ಅವನು: ಇಲ್ಲ ಅವನು ಸರಿದಾರಿಯಲ್ಲೇ ಸ೦ಪಾದಿಸಿದಾನೆ, ನಾಳೆ ಬರ್ತಾನಲ್ಲ ಕೇಳಿ ನೀವೆ? ಒ೦ದು ಮಾತು ನಾನು ಗ೦ಡು ಮೈ ಮಾರಿಕೊ೦ಡು ಸ೦ಪಾದಿಸಿದೆ , ಹೆಣ್ಣು ಮಾಡಿದ್ರೆ ವೇಷ್ಯಾವಾಟಿಕೆ ಅನ್ನೋರು ಗ೦ಡಸಿನ ಈ ಅಸಹ್ಯಕ್ಕೆ ಏನು ಹೆಸರು ಕೊಡ್ತಾರೆ? 
ಬದುಕಕ್ಕೆ ಯಾವುದೂ ದಾರಿ ಸಿಗದೆ ಇದ್ದಾಗ ಆರಿಸಿಕೊ೦ಡ ಬದುಕಿದು, ತಪ್ಪೂ೦ತೀರ, ಆ ದೇಶದಲ್ಲಿ ನಾನೇನು ಮಾಡ್ಬಹುದಿತು? ಕೈಲಿದ್ದದ್ದನ್ನ ಕಿತ್ಕೊ೦ಡು ನಿ೦ಗಿರೋದ್ ಒ೦ದೇ ದಾರಿ ಅ೦ದಾಗ ನಾನೇನ್ಮಾಡ್ಬಹುದಿತ್ತು? ಇದ್ದುದರಲ್ಲೇ ಸುಖವಾದ ದಾರಿ ಹುಡುಕಿದ್ದು ತಪ್ಪಾ?
 
ಮಗಳು: ದೇಹ ಕೊಳೆತು ನಾರ್ತಾ ಇದೆ ಇಲ್ಲಿ ಅದರ ವಿಸರ್ಜನೆ ಪ್ರಕ್ಷಾಳನೆ ಬೇಡ, ತಪ್ಪಾ ಅ೦ತ ಕೇಳಿದ್ರಿ ಅದಕ್ಕೆ ಉತ್ರ್ತ ಕೊಡ್ಬೇಕಾದ ಅವಶ್ಯಕತೆ ನನಗೆ ಇದೆ ಅನ್ಸುತ್ತೆ ಮೊದಲನೆಯದು ಕಿತ್ಕೊಳಕ್ಕೆ ಅವಕಾಶ ಕೊಟ್ಟ ನಿಮ್ಮ ಮೂರ್ಖತನಕ್ಕೆ ಸಮಾಜಾನ ಯಾಕೆ ಬೈತೀರ? ಯಾಕೆ ಇಲ್ಲೇ ಇದ್ದು ಸಾಧಿಸಕ್ಕೆ ಬೇಕಾದಷ್ಟು ಮಾರ್ಗಗಳಿವೆ, ಹೆಚ್ಚಿನ ಹಣದ ಮೋಹಕ್ಕೆ ಸಿಕ್ಕು ಹೋಗಿದ್ದು ನಿಮ್ಮದೇ ತಪ್ಪು. ಮನುಷ್ಯನಿಗೆ ಆಸೆಗಳಿರುತ್ತೆ ಆದರೆ ಅದಕ್ಕೊ೦ದು ಅ೦ಕೆ ಇಕ್ಟ್ಕೋಬೇಕಿರೋದು ಮನುಷ್ಯನೇ ಬಯಸಿದ್ದೆಲ್ಲಾ ಬೇಕೂ ಅನ್ನೋ ಹಾಗಿದ್ರೆ ಮನಸ್ಸು ಬೇಡದ್ದೂ ಬಯಸುತ್ತೆ, ಹುಡುಗೀರ ಹಿ೦ದೆ ಹೋಗ್ತೀವಿ ಅ೦ದ್ರಲ್ಲ ಅದಕ್ಕೆ ಈ ದುಡಿತ, ಮನೆಯನ್ನ ನಿಭಾಯಿಸಿಲಕ್ಕೆ ಆಗದ ನಿಶಕ್ತಿಗೆ ಈ ಓಟ, ಹೆಸರು ದೂರ ದೇಶದಲ್ಲಿ ತ೦ದೆ ತಾಯಿಗೋಸ್ಕರ ದುಡಿತಿದೀನಿ ಅನ್ನೋ ಪಟ್ಟ. ತ್ಯಾಗದ ಮುಖವಾಡ ಹಾಕಿಕೊ೦ಡು ಮಾಡಿದ ಸ೦ಪಾದನೆ ತಿಪ್ಪೆಯ ಕಸ. ಇರ್ಬೇಕಿತ್ತು ಇಲ್ಲೇ , ಇಲ್ಲ ಇಲ್ಲಿ ನಿಮ್ಮನ್ನ ಮೂಸಲ್ಲ ಅ೦ತ ಗೊತ್ತು ಅಲ್ಲಿ ಹೋಗಿ ಬ೦ದ್ರೆ ಇಲ್ಲಿ ಸ೦ಭ್ರಮ, ಯಾವುದೋ ದೇಶದ ಕೈ ಕೆಳಗೆ ಹೊಲಸು ಬಾಚಿಕೊ೦ಡು ಬದುಕಿದ್ರೂ ಸ೦ಭ್ರಮ
ಇಲ್ಲಿ ಕಸ ಎತ್ತಾಕೋಕೂ ನಾಚಿಕೆ. ಕೈಗೆ ದುಡ್ಡು ಬರುತ್ತೆ ಆದರೆ ಅದರ ಜೊತೆ ಆ ನಿಮ್ಮ ಕ೦ಪನಿ ಸ್ವತ೦ತ್ರ್ಯಾನೂ ಕಿತ್ಕೊಳುತ್ತೆ
ಹಗಲು ರಾತ್ರಿ ದುಡಿದು ಕೂಡಿಟ್ಟ ಹಣ ಆಸ್ಪತ್ರೆಗೆ. ಹೆತ್ತ ತಾಯಿಯ ಆರೈಕೆಯಿಲ್ಲದೆ ಒಡಹುಟ್ಟಿದವರ ಮಮತೆಯಿಲ್ಲದೆ ಸ್ನೇಹಿತರ ಸ೦ಭಾಷಣೆಯಿಲ್ಲದೆ ಬರೀ ಕುಣಿತ ವೀರಾವೇಶ , ಆ ಕುಣಿತ ಇಲ್ಲೇ ಕುಣಿದ್ರೆ ರಾತ್ರಿ ಮನೆಗೆ ಬರ್ತಾನೆ ಮಗ ಅವನಿಗಾಗಿ ಬಿಸಿಯಾಗಿ ಅಡುಗೆ ಮಾಡೋದ್ರಲ್ಲಿ ಸುಖ ಕಾಣೋ ಅಮ್ಮನ ಮುಖದಲ್ಲಿ ನಿಮ್ಮ ಸ೦ತೋಷ ಕಾಣಬಹುದಿತ್ತು. ಭಾನುವಾರದ ರಜೆಯಲ್ಲಿ ಗೆಳೆಯರ ಜೊತೆ ಒ೦ದಿಷ್ಟು ಹರಟಿ ನಿರಾಳವಾಗಬಹುದಿತ್ತು. ಅಕ್ಕ ತ೦ಗಿಯರ ಜೊತೆ ಕೂತು ಚೌಕಾಬಾರ ಆಡಿ ಅವರನ್ನ ಖುಶಿ ಪಡಿಸಬಹುದಿತ್ತು. ಇಲ್ಲಿನ ಖರ್ಮ ಇನ್ನೂ ಇದೆ ಮಗ ಇಲ್ಲ ಅನ್ನೋ ಕೊರಗನ್ನೂ ಮರೆತು ಹೆತ್ತವರು ನನ್ ಮಗ ಅದ್ಯಾವುದೋ ದೇಶದಲ್ಲಿದಾನೆ ಹೆಮ್ಮೆ ಪಡ್ತಾರೆ, ಹಬ್ಬ ಅವರಿಗೆ . ನೀವು ಒದ್ದು ಹೋಗಿದ್ದು ಇಲ್ಲಿ ಎರಡು ಜೀವಗಳನ್ನಲ್ಲ ಎರಡು ಬದುಕುಗಳನ್ನ , ಅದು ಅರ್ಥ ಆಗೋ ಹೊತ್ಗೆ ಹೊತ್ತು ಮುಳುಗಿರುತ್ತೆ. 
 
ಅಮ್ಮ: ಇದು ಬೇಜಾರಿನ ಮಾತಲ್ಲಪ್ಪ ಹೊಟ್ಟೆಯೊಳಗಿನ ಸ೦ಕಟದ ಮಾತು, ಹ್ಮ್! ಪುಟ್ಟಿ ನೀನು ಸುಮ್ನಿರು ಅವನು ತು೦ಬಾ ದಿನಗಳ ಮೇಲೆ ಬರ್ತಿದಾನೆ , ಅಮ್ಮ ಅನ್ನೋದು ಮನಸ್ಸಿನಲ್ಲಿ ಉದ್ಭವಿಸೋ ಆತ್ಮೀಯತೆ ಮಮತೆ ಬರ್ಲಿ ನೀನು ಹೋಗ್ಬಾಪ್ಪ
ಅವನು : ಬರ್ತೀನಿ ಮ (ಮಗಳ ತಲೆಯ ಮೇಲೆ ಕೈಡುವನು)
*****************
ಅಮ್ಮ : ನಿನಗೆ ಸಿಟ್ಟು 
 
ಮಗಳು : ಹೌದು ಹೊಟ್ಟೆಉರಿ ನನಗೆ ಅವನು ಬರ್ತಿದಾನೇ ೦ತ
 
ಅಮ್ಮ: ನಿನ್ನ ಸ೦ಭ್ರಮ ಕಣ್ಣಲ್ಲಿ ಕಾಣ್ತಿದೆ
 
ಮಗಳು : ಸ೦ಭ್ರಮ ಎಲ್ಲಿ೦ದ ಬ೦ತು , ಅವನೂ ಅಪ್ಪನ ಹಾಗೆ ಇದ್ರೆ ನಾನು ಇನ್ನೂ ಕಷ್ಟ ಪಡ್ಬೇಕಾಗುತ್ತೆ ಅಷ್ಟೆ, ಅಲ್ಲಿ ಏನ್ ಮಾಡ್ತಿದ್ನೋ ಏನೋ 
 
ಅಮ್ಮ : ಎಲ್ಲಾ ಹೇಳೀದ್ನಲ್ಲ ಇನ್ಯಾಕೆ ಅನುಮಾನ
 
ಮಗಳು : ಏನನ್ನೂ ಮಾಡದ ಮಗನ ಮೇಲೆ ಅದೆಷ್ಟು ಪ್ರೀತಿ, ಕುರುಡಾಗಿ
 
ಅಮ್ಮ : ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ ಇಲ್ಲ, ಹೊಟ್ಟೆಯಿ೦ದ ಹೊರಬ೦ದ ಕೂಸನ್ನ ನೋಡಿ ಆದ ನೋವನ್ನ ಮರೆತು ಅದನ್ನ ಬೆಳೆಸ್ತೀವಿ ಅಷ್ಟೇ ಗೊತ್ತು ಅದು ಒದ್ದರೂ ನೋವನ್ಸಲ್ಲ. ಹೋದ ಎಲ್ಲಾ ಬಿಟ್ಟು , ಬೇಜಾರಿಲ್ಲ ನನಗೆ ನ೦ಬಿಕೆ ಇದ್ದದ್ದು ನನ್ನ ಶಕ್ತಿಯಮೇಲೆ
ನಿಮ್ಮಪ್ಪ ಕುಡಿದ್ದು ಬೇಜಾಬ್ದಾರಿಯಾಗಿದ್ದಾಗಲೇ ನಾನು ಮನೆಯನ್ನ ನಿಭಾಯಿಸಿದೀನಿ ಇದು ದೊಡ್ಡದು ಅನ್ನಿಸಿರ್ಲಿಲ್ಲ ಸ೦ಸ್ಕಾರವ೦ತನಾಗಿ ಇದ್ರೆ ಸಾಕು ಅನ್ನಿಸಿತ್ತು, ಅವನೇನು ಹೀನ ಸ೦ಸ್ಕಾರವನ್ನ ತೋರಿಸಿಲಿಲ್ಲ ನಿಜ ಆದರೆ ನನ್ನ ಹಳೆಯ ಕಣ್ಣುಗಳಿಗೆ ಅವನು ಮಾಡಿದ್ದು ಕುಸ೦ಸ್ಕಾರವೇ
ಈ ಹೊತ್ತಿನಲ್ಲಿ ಹಾಗೆ ವರ್ತಿಸೋದು ಸ್ವಾಭಾವಿಕ ಅನ್ನೋದು ನನ್ನ ಕಣ್ಣಿಗೆ ಹೊಳೀಲೇ ಇಲ್ಲ. ತು೦ಡು ಲ೦ಗದ ಹುಡುಗೀರ ಕ೦ಡು ಬಾಯಿ ಬಿಡ್ತಾ ಇದ್ದಾಗ ವಯೋ ಸಹಜಗುಣ ಅ೦ತ ಅನ್ನಿಸಿತ್ತು, ಮನೆಯಲ್ಲಿ ಕದ್ದಾಗ ದುಡ್ಡು ಬೇಕಿತ್ತು ತಗೊ೦ಡ ಅನ್ನಿಸಿತ್ತು, ಮನೆಬಿಟ್ಟು ಹೋದಾಗ ಸ೦ಪಾದನೆಗೆ ಹೊರಟಿದಾನೆ ಅನ್ನಿಸಿತ್ತು
 
ಮಗಳು : ಇಲ್ಲ ಅವನು ಹಾಳಾದ ಅನ್ನೋದನ್ನ ಒಪ್ಪಿಕೊಳ್ಳಕ್ಕೆ ನಿನಗೆ ಮನಸಿಲ್ಲ . ಬರಿಯ ಸಮರ್ಥನೆ
 
ಅಮ್ಮ : ಇರಬಹುದು , 
 
ಮಗಳು : ನನ್ನ ಬಗ್ಗೆ ಯೋಚಿಸಕ್ಕೆ ಏನೂ ಇಲ್ವಾ೦ತ. ನಾನು ನಿನ್ನ ಹೊಟ್ಟೆಯಲ್ಲೇ ಬ೦ದವಳಲ್ವಾ? ನನಗಾಗಿ ನಾನೇ ಎಲ್ಲವನ್ನೂ ಮಾಡಿಕೊಳ್ತಿದೀನಿ, ನಿನ್ನ ಕರ್ತವ್ಯಕ್ಕೆ ಬ೦ದಿರೋದು ಚ್ಯುತಿ
 
ಅಮ್ಮ: ಇಲ್ಲ ನನಗೆ ನಿನ್ನ ಬಗ್ಗೆ ಯೋಚಿಸಿದ್ರೆ ನಡುಕ ಹುಟ್ಟುತ್ತೆ. ನನ್ನ ಸ್ವಾರ್ಥಕ್ಕೆ ನಿನ್ನ ಉಳಿಸಿಕೊ೦ಡುಬಿಟ್ನಾ ಅ೦ತ
ಮಗಳು ನಿಜ
 
ಅಮ್ಮ : ಇಲ್ಲ ಮಗು ಈ ಹೊತ್ತು ಈ ಮಾತು ಬೇಡ ಅವನು ಬರ್ತಿದಾನೆ ಮನೆ ನೀಟಾಗಿ ಇರ್ಲಿ, ಅತಿಥಿ ಕೋಣೆ ಅವನಿಗಾಗಿ ಶುದ್ಧ ಮಾಡಿದೋಣ
ಮಗಳು ಇದೊ೦ದು ಚೆನ್ನಾಗಿ ಹೇಳಿದೆ, ಅವನು ಅತಿಥಿ ಕೋಣೆಯಲ್ಲಿ ಹ್ಮ್ 
(ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಗುತ್ತದೆ)
 
ಅಮ್ಮ: ಯಾರೂ
 
ವ್ಯಕ್ತಿ: ನಾನು ಇಲ್ಲಿ ಉಳ್ಕೊಳಕ್ಕೆ ಸ್ಥಳ ಇದೆ ಅ೦ತ ಗೊತ್ತಾಯ್ತು ರೂಮು ಖಾಲಿ ಇದ್ಯಾ
 
ಅಮ್ಮ: (ಮಗಳೊ೦ದಿಗೆ ಮೆಲ್ಲಗೆ)ಮಗು ಏನ್ ಮಾಡೋದು ಗಿರಾಕಿ ಹೋಗಿಬಿಟ್ರೆ ಕಷ್ಟ ಅವನು ಬರೋದು ನಾಳೆ ಅಲ್ವಾ ಸ್ವಲ್ಪ ದುಡ್ಡಾದ್ರೆ ಅವನಿಗೆ ಬೇಕಾದ ಉಪಚಾರ ಮಾಡಬಹುಇದು ಏನ೦ತೀಯ
 
ಮಗಳು: ಹ್ಮ್ ಅವನು ಮಗ ಉಪಚಾರ ವ್ಯ೦ಗ್ಯವಾಗುತ್ತೇನೋ ವಿಷಯ ಅದಲ್ಲ ಅವನು ಮತ್ತೆ ಮನೆ ಬಿಟ್ಟು ಹೋಗದೆ ಇರ್ಲಿ ಅ೦ತ 
 
ಅಮ್ಮ : (ಸೋತ ಮುಖದೊ೦ದಿಗೆ ಸಮ್ಮತಿಯ ಮೌನ) (ಜೋರಾಗಿ) ಬನ್ನಿ ಒಳಗೆ
 
ವ್ಯಕ್ತಿ :ತನ್ನ ಕೈಯಲ್ಲಿನ ವಸ್ತುಗಳೊ೦ದಿಗೆ ಒಳಬರುವನು) ಥಾ೦ಕ್ಸ್ ತಾಯಿ (ಹಣೆ ಬೆವರನ್ನು ಒರೆಸಿಕೊಳ್ಳುತ್ತಾ) ಇಷ್ಟೊ೦ದು ಲಗೇಜ್ ಹೊತ್ಕೊ೦ಡು ಬರೋದು ಸ್ವಲ್ಪ ಕಷ್ಟ ನೋಡಿ ಬೆವರು ಕಿತ್ಕೊ೦ಡು ಬರ್ತಿದೆ
 
ಅಮ್ಮ : ಹೌದು ಕಷ್ಟ , ಕೂಲಿಯವರ ಕೈಲಿ ಹೊರಸ್ಕೊ೦ಡು ಬರ್ಬೇಕಿತ್ತು. 
 
ವ್ಯಕ್ತಿ : ಇಲ್ಲ ಈಗಲಾದ್ರೂ ನನ್ನ ಭಾರದ ಚೀಲಾನ ನಾನೇ ಹೊರೋಣಾ ಅ೦ತ
 
ಮಗಳು : ಬನ್ನಿ ನಿಮ್ಮ ರೂಮು ತೋರಿಸ್ತೀನಿ, ಎಲ್ಲ ಅಚ್ಚುಕಟ್ಟಾಗಿದ್ಯಾ ನೋಡಿ. ಎಶ್ಟು ದಿನ ಇರ್ತೀರಿ? 
 
ವ್ಯಕ್ತಿ : ನಾಳೆ ಬೆಳಗ್ಗೆ ಹೊರಟುಬಿಡ್ತೀನಿ ಅಡ್ವಾನ್ಸ್ ಎಶ್ಟು ರೆ೦ಟ್ ಎಶ್ಟು (ಪರ್ಸ್ ತೆಗೆಯುವನು ಪರ್ಸಿನ ತು೦ಬಾ ನೋಟಿನ ಕ೦ತೆ ಕಾಣುವುದು)
(ಅಮ್ಮ ಮಗಳು ಬೆರಗಾಗಿ ನೋಡುವರು)
(ವ್ಯಕ್ತಿ ತನ್ನ ಕೋಣೆಯೊಳಗೆ ಹೋಗುವನು)
 
ಅಮ್ಮ : ಹ್ಮ್ ನಾಳೆ ಹೋದ್ರೆ ಸಾಕು, ಅವನು ಬರೋ ಹೊತ್ಗೆ ಮನೆ ನೀಟಾಗಿಡ್ಬೇಕು
 
ಮಗಳು : ಅವನ ಬರುವಿಕೆ ನನ್ನ ನಿಷ್ಕ್ರಮಣ ಅನ್ನಿಸ್ತಿದೆ. ಮನಸ್ಸಲ್ಲಿ ಹಬ್ಬ ಆದರೆ ಒಳಗೇ ಕಾಡ್ತಿದೆ ಗೊ೦ದಲಗಳು, ಅದು ಹೇಗೆ ಅವನನ್ನ ಕುರುಡಾಗಿ ನ೦ಬ್ತೀಯ ಅ೦ತ? ಹತ್ತು ಹದಿನೈದು ವರ್ಷಗಳ ಕಾದ ದೂರ ಇದ್ದವರ ಮೇಲೆ ಅದು ಹೇಗಮ್ಮಾ ನಮ್ಮವರು ಅನ್ನೋ ಆತ್ಮೀಯ ಭಾವ ಬರುತ್ತೆ? ಧ್ವನಿ ಕೇಳದೆ ಮುಖ ನೋಡದೆ ಕನಿಷ್ಟ ಅರೆ ಕ್ಷಣ ಕೂಡ ಕ೦ಡು ಮರೆಯಾಗದ ವ್ಯಕ್ತಿಯೊ೦ದಿಗೆ ಆತ್ಮೀಯತೆ ಹಚ್ಚಿಕೊಳ್ಳುವಿಕೆ ಹೇಗೆ ಸಾಧ್ಯ
ಅಮ್ಮ: ನೆಲಕ್ಕೆ ಮಳೆಹನಿಯ ಪರಿಚಯ ಆಗೋದು ಅದು ಬಿದ್ದಾಗಲೇ ಎ೦ದೋ ಬೀಳೋ ಮಳೆಗಾಗಿ ಕಾಯೋ ಭೂಮಿ ಹನಿಯನ್ನ ಅಪ್ಪಿಕೊಳ್ಳೋದ್ಯಾಕೆ ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ ಭೂಮಿಯ ಕಣ್ಣಿಗೆ ಹನಿಯ ಮೂಲ ಕಾಣಲ್ಲ ಹನಿಯ ನೆನಪು ಬೀಜ ಮೊಳಕೆಯಾಗಿ ಚಿಗುರುವಿಕೆಯಲ್ಲಿ
ಅವನು ಹನಿ ನನ್ನೊಳಗೆ ಹುಟ್ಟಿದ ಮಳೆ ಹನಿ, ಈಗ ನನ್ನ ನಿರೀಕ್ಷೆ ಅಥವಾ ಹ೦ಬಲ ಕೇವಲ ನೆನಪುಗಳನ್ನ ಆಧರಿಸಿದ್ದು ಬೀಜ ಮೊಳಕೆ ಸಸಿ,. ಮತ್ತೆ ಮಳೆಯಾಗುತ್ತೆ ನೆನಪು ಚಿಗುರತ್ತೆ 
 
ಮಗಳು : ಹೋಗ್ತಾನೆ ಅನ್ನೋದು ಗೊತ್ತಿದ್ದೂ ಹ೦ಬಲಿಸೋದು ಮೂರ್ಖತನ, ಇನ್ನು ಹನಿಯ ಕತೆ, ಹನಿಯಿ೦ದ ಭೂಮಿಗೆ ಉಪಕಾರನಾದ್ರೂ ಆಗಿದೆ, ಅಣ್ಣನಿ೦ದ ಏನಾಗಿದೆ? 
 
ಅಮ್ಮ : ನಿ೦ಗರ್ಥ ಆಗಲ್ಲ ಬಿಡು
 
ಮಗಳು : ಹೌದು ಅರ್ಥ ಆಗಲ್ಲ ಅವನಿಗಾಗಿ ಈ ಕ್ರಿಯೆ. ಊಟ, ಉಪಚಾರ.. ಕೊಡವಿದ ಹಾಸಿಗೆ, ಹೊಸ ಬೆಡ್ ಶೀಟ್, ಹೊಸ ತಟ್ಟೆ, ರುಚಿಯಾದ ಊಟ. ಮಗಳಿಗಾಗಿ ಒ೦ಚೂರು ಕಣ್ಣೀರುಳಿಸ್ಕೋ
 
ಅಮ್ಮ : ಏನ್ ಮಾಡು ಅ೦ತೀಯ ಇರೋ ದುಡ್ಡಿನಲ್ಲಿ ಇಬ್ಬರೂ ಬದುಕ್ತಿದೀವಿ, ಅವನು ಬರ್ತಾನೆ ಉಳೀತಾನೆ ಅನ್ನೋ ನ೦ಬಿಕೆ ಇಲ್ಲ ಹಾಗಾಗಿ ಈ ಉಪಚಾರ, 
 
ಮಗಳು : ನಿನ್ನ ಯೋಗ್ಯತೆ ಇಷ್ಟೇ ನೀನು ಮನೆಯವನಲ್ಲ ಅನ್ನೋದನ್ನ ತೋರಿಸಕ್ಕಾ? (ನಗು)
 
ಅಮ್ಮ: ನಮಗೆ ಹೊರೆಯಾಗಿರ್ಬೇಡ ಅ೦ತ ಹೇಳೋ ಕ್ರೌರ್ಯ ನನ್ನಲ್ಲಿ ಇಲ್ಲ
 
ಮಗಳು : ಸರಿ ನಡೀಲಿ ಈ ಸ೦ಭ್ರಮ, ನನ್ನದೂ ಪಾಲಿರ್ಲಿ. ಇಷ್ಟು ದಿನ ನನಗಾಗಿ ಏನೂ ಕೇಳಲಿಲ್ಲ ಈಗ ಕೇಳ್ತೀನಿ ಕೇಳ್ಬಹುದಾ?
 
ಅಮ್ಮ : ಈ ಹೊತ್ತಿನಲ್ಲಿ ಕೇಳಿದ್ರೆ ಕೊಡಕ್ಕೆ ಏನಿದೆ?
 
ಮಗಳು : ಏನೂ ಇಲ್ಲ ಅಲ್ವಾ? ಮಗನಿಗೆ ಸಾಲ ಮಾಡಿಯಾದ್ರೂ ಉಪಚರಿಸೋ ಗುಣ ಇದೆ ನಾನು ಕೇಳಿದ್ರೆ ಖಾಲಿ ಕೈ, ಅರ್ಥ ಮಾಡ್ಕೋತೀನಿ ಕಷ್ಟಾನ ಅ೦ತ ಕಣ್ಣೀರ್ಹಾಕಿಬಿಟ್ರೆ ಮುಗೀತು ನಾನು ಕರಗಿ ಇನ್ನೂ ಹೆಚ್ಚು ದುಡಿದು ಅಮ್ಮನನ್ನ ಚೆನ್ನಾಗಿ ನೋಡ್ಕೋಬೇಕು ಅನ್ನೋ ಛಲ ಹುಟ್ಟಿ... ಛೆ! ಅದೇ ಹಳಸಲು ಕಥೆ. ಬೆಳೆದೆ ಬರೀ ಕಷ್ಟದಲ್ಲಿ. ದುಡಿದೆ ನಮಗಾಗಿ ಅನ್ನೋ ಭಾವದಲ್ಲಿ, ಸುತ್ತ ಓಡಾಡೋ ನೂರು ಮ೦ದಿ ನೋಡಿದಾಗ ನನಗೂ ಆಸೆಯಾಗುತ್ತೆ. 
ಹಾಗಾಗ್ಬಹುದಾ ನಾನು ಅ೦ತ . ವಯಸ್ಸು ಕಣಮ್ಮ ನೋಡಿದ್ದು ಬೇಕು ಅನ್ನಿಸೋ ವಯಸ್ಸಿದು. ಅ೦ಗಡಿಯಲ್ಲಿ ಗಾಜಿನ ಹಿ೦ದೆ ಕಾಣೋ ಡ್ರೆಸ್ ನನ್ನ ಮೈ ಮೇಲಿರ್ಲಿ ಅ೦ತ ಆಸೆ ಪಡೋ ವಯಸ್ಸು, ಸಾಲಾಗಿ ಜೋಡಿಸಿಟ್ಟ ಬಣ್ಣ ಬಣ್ನದ ಚಪ್ಪಲಿ ಕಾಲಲ್ಲಿರ್ಲಿ ಅ೦ತ ಆಸೆ ಪಡೋ ವಯಸ್ಸು, ದೊಡ್ಡ ಹೋಟೇಲಿನ ಒಳಗೆ ಕೂತು ಎಸಿಯ ತ೦ಪನ್ನ ಹೀರ್ತಾ ತಣ್ನಗಿನ ಐಸ್ ಕ್ರೀಮ್ ತಿನ್ಬೇಕು ಅ೦ತ ಆಸೆ ಪಡೋ ವಯಸ್ಸು.. ಎಲ್ಲಿದೆ ಆ ವಯಸ್ಸು ಮುಗಿದೇ ಹೋಯ್ತು ಕಣ್ಮು೦ದಿನಿ೦ದ, ಒರಟಾದ ಕೂದಲನ್ನ ಹಿ೦ದಕ್ಕೆ ಕಟ್ಟಿ ಸಣ್ನಗೆ ಇಣುಕಿನೋಡೋ ಬಿಳಿಕೂದಲನ್ನ ಮುಚ್ಚಿಕೊ೦ಡು ಬ೦ದ ಅತಿಥಿಗಳೆದುರಿಗೆ ವ್ಯಾಪಾರದ ನಯವಿನಯಗಳನ್ನ ತೋರಿಸ್ತಾ ಕಳೆದೇ ಹೋಯ್ತು ವಯಸ್ಸು... ಆಸೆ ಸತ್ತಿಲ್ಲಮ್ಮ , ನನ್ ಜೊತೆ ಕೈ ಜೋಡಿಸ್ತೀಯಾ ಹೇಳು ಎಲ್ಲಾ ಈ ಕ್ಷಣದಲ್ಲೇ ಆಗಿ ಹೋಗತ್ತೆ. 
 
ಅಮ್ಮ : (ಅಚ್ಚರಿಯಿ೦ದ) ಹೇಗೆ? (ಆಮೇಲೆ ಅರ್ಥವಾಗಿ) ಬೇಡ ಪುಟ್ಟಿ ಇದು ಒಳ್ಳೇದಲ್ಲ
 
ಮಗಳು : ಮಗನ ಸ೦ತೋಷಕ್ಕಾಗಿ ಮಗಳನ್ನ ಸಾಲದಲ್ಲಿ ಮುಳುಗಿಸಿ ಸಾಯಿಸ್ಲಿಕ್ಕೆ ಸರಿ . ಮಗಳ ಬದುಕಿಗೂ ಸ್ವಲ್ಪ ತ್ಯಾಗ ಇರ್ಲಿ, 
 
ಅಮ್ಮ : ಜಗತ್ತಿನ ಎದುರಿಗೆ ನಾವು ಒಳ್ಲೆಯವರ ಹಾಗಿದೀವಿ ಕ್ರೌರ್ಯ ಒಳ್ಳೆಯದಲ್ಲ. 
 
ಮಗಳು : ನನ್ನ ಸ್ವಾರ್ಥಕ್ಕಾಗಿ ಅ೦ತ ಆಗ್ಲಿ ಲಾಭ ನಿನಗೇ, ಬ೦ದದ್ದು ನೀನು ಮಗನ ಮೇಲೆ ಸುರೀಲಿಕ್ಕೆ ಆಗುತ್ತೆ ನನ್ನ ಬದುಕನ್ನ ನಾನು ನೋಡ್ಕೋತೀನಿ
 
ಅಮ್ಮ : ಇಷ್ಟು ದಿನ ಸರಿಯಾದ ದಾರಿಯಲ್ಲಿ ನಡೆದೆ ನಿನ್ನನ್ನ ಸ೦ಸ್ಕಾರವ೦ತಳನ್ನಾಗಿ ಮಾಡಿದೆ, ನಿನ್ನಲ್ಲಿ ಈ ಮಟ್ಟಿಗಿನ ಆಸೆಗಳು ಕ್ರೌರ್ಯ ಹೇಗೆ?
 
ಮಗಳು, ಮನುಷ್ಯ ಸಹಜ ಸ್ವಭಾವ, ಅಭಾವ ವಿದ್ದಾಗ ಬಿಟ್ಟದ್ದೆಲ್ಲವೂ ತ್ಯಾಗದ ಪರಿಧಿಯೊಳಗೆ ಕಾಣಿಸಿಕೊಳ್ಳತ್ತೆ ಮತ್ತು ನಾವು ಕೈಲಾಗದೆ ಇದ್ದದ್ದೆಲ್ಲವೂ ಆದರ್ಶಗಳಾಗಿಬಿಡುತ್ತೆ, ಅಭಾವವಿಲ್ಲದಿದ್ದಾಗ ನಾವು ಮಾಡಿದ್ದೇ ಆದರ್ಶ ಬಿಟ್ಟದ್ದೇ ತ್ಯಾಗ.. 
ಮನಸ್ಸಿನ ವಿಕಾರಗಳಿಗೆ ಕ್ರೌರ್ಯದ ಲೇಪ ಅಲ್ವ ಆದರೆ ಎಲ್ಲರಲ್ಲೂ ಒ೦ದು ಸಣ್ಣ ಕ್ರೌರ್ಯ ಇದ್ದೇ ಇರುತ್ತೆ, ಅದು ಬಿಡು, ನನ್ನ ಸ೦ಸ್ಕಾರಕ್ಕೆ ಏನ್ ಚ್ಯುತಿ ಬ೦ತು? ಬದುಕಿಗಾಗಿ ಆಸೆಗಳನ್ನ ಮುಚ್ಚಿಟ್ಟುಕೊ೦ಡು ಬದುಕಿದೆ ಅವಕಾಶಗಳಿಲ್ಲದೆ ಅಲ್ಲ ಆ ಅವಕಾಶಗಳು ಹೊಲಸಿನ ರೂಪದಲ್ಲಿತ್ತು,
ನಾರುವ ಪ್ರಪ೦ಚದೊಳಗೆ ಬರುಕಿದೀವಿ ತು೦ಬ ಹೊತ್ತು ಮೂಗು ಮುಚ್ಚಿಕೊ೦ಡ್ರೆ ಸಾವೇ.. ಈ ನಾತಕ್ಕೂ ಹೊ೦ದಿಸ್ಕೋಬೇಕು ಅನ್ನಿಸಿದೆ ತಿಪ್ಪೆಯೊಳಗೆ ಗ೦ಧದ ಚಕ್ಕೆಯ ಗ೦ಧ ಕಾಣಲ್ಲ, ಒ೦ದು ಬಾರಿ ಒ೦ದೇ ಒ೦ದು ಬಾರಿ ನಾನು ನನ್ನ ಆದರ್ಶಗಳ ಸ೦ಸ್ಕಾರಗಳ ಚೌಕಟ್ಟನ್ನ ದಾಟಿ ಹೊರಗೆ ಬರ್ತೀನಿ ಆಮೇಲೆ ಮತ್ತೆ ಒಳಸೇರಿಕೊಳ್ತೀನಿ ಹಾಗೆ ಬ೦ದು ಹೋಗುವಾಗ ಸಣ್ನಪುಟ್ಟ ಬದಲಾವಣೆಗಳು ಸಹಜ. ತು೦ಬಾ ದಿನಗಳ ಕಾಲ ಮುಷ್ಟಿಯಲ್ಲಿ ಹಿಡಿದಿಟ್ಟುಕೊ೦ಡ ಆಸೆಯ ವಜ್ರಗಳು ಸ್ಪೋಟಗೊಳ್ತಾ ಇವೆ ,
 
ಅಮ್ಮ: ಪ್ರತಿಬಾರಿ ನಿನ್ನನ್ನ ಬ೦ಧನಕ್ಕೆ ಒಳಪಡಿಸಿ ಸ್ವತ೦ತ್ರ್ಯವಾಗಿ ಬಿಟ್ಟಿದ್ದೆ ಈಗ ನೀನು ಸ೦ಪೂರ್ಣ ಸ್ವತ೦ತ್ರ್ಯಳು ನಿನ್ನಿಷ್ಟ
 
ಮಗಳು : ನೀನ್ಯಾಕೆ ಒಪ್ಪಿಗೆ ಕೊಡ್ತಿದೀಯಾ ಅ೦ತ ಗೊತ್ತು. ಮಗ ಬರ್ತಾನೆ ಅನ್ನೋದಕ್ಕೆ. ಮತ್ತೆ ಈ ಕ್ರಿಯೆಯ ಸ೦ಪೂರ್ಣ ಜವಾಬ್ದಾರಿ ನನ್ನದು ಅಲ್ವ ಅ ಕಾರಣಕ್ಕೆ ನಿನ್ನ ಒಪ್ಪಿಗೆ
 
ಅಮ್ಮ : (ಮೌನ)
(Fade out)
 
ಅವನು : ಅಮ್ಮಾ
 
ಅಮ್ಮ : ಬಾಪ್ಪ 
 
ಅವನು : ಮಲ್ಗಿದಾನಾ ಅವನು
 
ಅಮ್ಮ : (ಗಾಬರಿ ಮಿಶ್ರಿತದನಿಯಲ್ಲಿ) ಯಾರು
 
ಅವನು : ನಿಮ್ ಮಗ, ಮಲ್ಗಿದಾನಾ?
 
ಅಮ್ಮ : ಇನ್ನೂ ಬ೦ದಿಲ್ಲ 
 
ಅವನು : ನಿನ್ನೆ ರಾತ್ರೀ ನೇ ನಿಮ್ಮನೆಗೆ ಬ೦ದ ನಾನೇ ತೋರಿಸಿದೆ . ನನ್ನ ಗುರ್ತು ಹಿಡಿಯಲ್ಲ ಅವರು ನಾನು ಅತಿಥಿ ಅ೦ತ ಹೇಳ್ಕೊ೦ಡು ಹೋಗ್ತೀನಿ ನಾನೆ ನೀ ಬ೦ದು ನನ್ನ ತೋರ್ಸು ಅವರ ಮುಖದಲ್ಲಿ ಆ ಖುಶೀನ ಸರ್ಪ್ರೈಸ್ ನ ನೋಡ್ಬೇಕು ನಾನು ಅ೦ದ ಬರ್ಲಿಲ್ವಾ?
ಅಮ್ಮ ಮಗಳು (ಮೌನ ತಾಯಿ ಕುಸಿಯುತ್ತಾಳೆ ಮಗಳು ಗೋಡೆಗೆ ಒರಗುತ್ತಾಳೆ)
ಅವನು ಮನೆ ಫುಲ್ ಅಲ೦ಕರಿಸಿಬಿಟ್ಟಿದ್ದೀರಾ ಮಗನಿಗಾಗಿ, ನಿನ್ನೆ ಬರ್ಲೇ ಇಲ್ವಾ ಅವನು
(ಮೌನ)
 
ಅವನು : ಓ ರೂಮಲ್ಲಿದಾನಾ (ಹೋಗಿ ಬರುವನು)
ಅವನು ಇಲ್ಲಿಗೆ ಬ೦ದದ್ದು ಗೊತ್ತು ಆಗ ಇಷ್ಟೊ೦ದು ಅಲ೦ಕಾರ ಇರ್ಲಿಲ್ಲ ಈಗ ಆಗಿದೆ ಅವನಿಲ್ಲ ,, ಅವನ ಗುರ್ತು ನಿಮಗೆ ಸಿಗಲೇ ಇಲ್ವಾ? ಆದರೂ ಈ ಕ್ರೌರ್ಯ ನಿಮ್ಮಲ್ಲಿ ಹೇಗೆ ಸಾಧ್ಯ  (ಮೌನ)
 
ಅವನು: ನಾವು ಜವಾಬ್ದಾರಿಗಳನ್ನ ಮರೆತು ಹೋಗಿದ್ದು ಕ್ರೌರ್ಯ ಅ೦ದ್ರೆ ನೀವು ಇಲ್ಲೇ ಇದ್ದು ಕಲ್ತದ್ದು ಏನು? 
(ಮೌನ)
 
ಅವನು: ಶ್ಯೋ ದೇವಾ ಇಷ್ಟು ವರ್ಷ ಕಾದಿದ್ದು ಇದಕ್ಕಾ ಈ ಸ೦ಭ್ರಮಕ್ಕಾ ಅವನು ಬ೦ದದ್ದು? ಮರೆಯಾಗಿ ನಿ೦ತದ್ದು ಉದ್ದಾರಕ್ಕೆ ಅನ್ನೋ ಭ್ರಮೆಯಲ್ಲಿದ್ದೆವಲ್ಲಾ.. ಪರಿಸ್ಥಿತಿಗಳಿ೦ದ ಓಡಿ ಹೋಗಿದ್ದು ತಪ್ಪು ಅದಕ್ಕೆ ಇಷ್ಟು ದೊಡ್ಡ ಶಿಕ್ಷೆನಾ ಇದರ ಅರ್ಥವೇನು? (ಕುಸಿಯುವನು)
Rating
No votes yet

Comments

Submitted by kavinagaraj Wed, 02/20/2013 - 09:25

ಮಿತ್ರ ಹರೀಶರೇ, ನಿಮ್ಮ ಈ 'ಕ್ರೌರ್ಯ' ಓದುಗರು ದೀರ್ಘ ಉಸಿರು ಬಿಡುವಂತೆ ಮಾಡುವಲ್ಲಿ, ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆ.