ಕ್ಲಿಕ್ ಕ್ಲಿಕ್ ಕ್ಲಿಕ್..
ನಿನ್ನ ಜಾದೂ ಪಿಠಾರದಿ
ಸರಿದ ಕಾಲದ ಅದೆಷ್ಟು
ಸಿಹಿ ಕಹಿ ಕ್ಷಣಗಳ
ಲೆಕ್ಕವಿದೆಯೋ
ಹೇಳು ಗೆಳೆಯಾ..
ಕೊನೆಯದಾಗಿ ಕ್ಲಿಕ್ಕಿಸಿದ
ಮಧುರ ಕ್ಷಣವಾವುದದು...
ಅಮ್ಮನ ಪ್ರೀತಿಯ
ಕೈತುತ್ತಿನ ಸವಿಯೋ,
ಸಾಗರದಲೆಗಳ ಉಪ್ಪಿನ
ರುಚಿಯೋ, ಪುಟ್ಟ ಕಂದನ
ಪುಟ್ಟ ಪುಟ್ಟ ಹೆಜ್ಜೆಯ
ಗುರುತೊ ,ಪ್ರೇಮಿಗಳ
ಪಿಸು ಮಾತಿನ ದನಿಯೋ,
ಬಾನಂಗಳದಿ ಹಾರುವ
ಹಕ್ಕಿಯ ವಿಸ್ತಾರವೋ,
ಕಾಮನ ಬಿಲ್ಲಿನ ಬಣ್ಣದ
ಸೊಬಗೋ, ಸುಂದರಿ ಹೆಣ್ಣ
ಕಣ್ಣ ಕೋಲ್ಮಿಂಚಿನ ಸಂಚೋ....
ಪ್ರತಿ ಕ್ಲಿಕ್ ನೊಂದಿಗೆ
ಅದ್ಭುತ ಕ್ಷಣಗಳ
ಚಿತ್ರಪಟದಿ ಸೆರೆಯಾಗಿಸಿ
ಸುಂದರಗೊಳಿಸಿ
ನಾಳಿನ ಮೆಲುಕುಗಳಿಗೆ
ಸಾಕ್ಷಿಯಾದ ನಿನ್ನ ಸೇವೆ
ಅನನ್ಯ , ಅಪೂರ್ವ...
ಹೊಸ ಅವಿಷ್ಕಾರಗಳ
ಅನಾವರಣದಿಂದ ನೀ
ನೇಪಥ್ಯಕ್ಕೆ ಸರಿದರೂ
ಮೊದಲ ಪ್ರೀತಿಯ
ಸಿಹಿ ಅನುಭವವ
ಮರೆಯಲಾಗದು ಗೆಳೆಯಾ.....
Rating