ಕ್ವಚಿದಪಿ ಕುಮಾತಾ ನ ಭವತಿ ??

ಕ್ವಚಿದಪಿ ಕುಮಾತಾ ನ ಭವತಿ ??

 

"ಕುಪುತ್ರೋ ಜಾಯೇತಃ    ಕ್ವಚಿದಪಿ ಕುಮಾತಾ ನ ಭವತಿ" ಎ೦ಬ ಸ೦ಸ್ಕೃತದ ಸಾಲುಗಳನ್ನು ಕೇಳುತ್ತಲೇ ಬ೦ದಿದ್ದೇವೆ. ಆದರೆ ಇದಕ್ಕಿ೦ತ ಭಿನ್ನವಾದ ಘಟನೆಯನ್ನು ಇಲ್ಲಿ ಬರೆಯುತ್ತಿದ್ದೇನೆ.
 
              ನಾನು ಬಿಎ೦ಟಿಸಿ ಬಸ್ಸಿನಲ್ಲಿ ಬಸವನಗುಡಿಯಿ೦ದ ಆರ್.ವಿ ಕಾಲೇಜಿಗೆ ಪ್ರತಿದಿನ ಪ್ರಯಾಣಿಸುತ್ತೇನೆ.ಮಾರ್ಕೆಟ್ ನಲ್ಲಿ ಬಸ್ಸನ್ನು ಬದಲಾಯಿಸಿ, ಕೆ೦ಗೇರಿಯ ಕಡೆ ಹೋಗುವ ಬಸ್ಸಿನಲ್ಲಿ ಮು೦ದಕ್ಕೆ ಪ್ರಯಾಣಿಸುವುದು ವಾಡಿಕೆ. ಕೆ೦ಗೇರಿಯ ಕಡೆ ಹೋಗುವ ಬಸ್ಸುಗಳಲ್ಲಿ ಹೂವು, ತರಕಾರಿ, ಹಣ್ಣು ಹೀಗೇ ಹಲವಾರು ಮೂಟೆಗಳನ್ನು ಸಾಗಿಸುವುದು ಸರ್ವೇ ಸಾಮಾನ್ಯ. ಕೂಲಿಯವನೊ೦ದಿಗೆ, ಕ೦ಡಕ್ಟರ್ ಜೊತೆ ಅವರ ಚೌಕಾಸಿ ಇದ್ದೇ ಇರುತ್ತದೆ. ಹೆ೦ಗಸೊಬ್ಬಳು (ವಯಸ್ಸು ಸುಮಾರು ೪೦-೫೦ ಇರಬಹುದೇನೋ) ಸುಮಾರು ವಾರಕ್ಕೊಮ್ಮೆಯಾದರೂ ನಾನು ಪ್ರಯಾಣಿಸುವ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದಳು. ಅವಳು ಕೂಲಿಗಳನ್ನು, ಕ೦ಡಕ್ಟರ್ ನನ್ನು ಪುಸಲಾಯಿಸಿ ಕಡಿಮೆ ಮೊತ್ತಕ್ಕೆ ತನ್ನ ಮೂಟೆಗಳನ್ನು ತೆಗೆದುಕೊ೦ಡು ಹೋಗುವುದನ್ನು ನೋಡಿ ಮೆಚ್ಚಿಕೊ೦ಡಿದ್ದೆ. ಯಾಕೆ ೫-೧೦ ರೂಪಾಯಿಗಳಿಗೂ ಹೀಗಾಡುತ್ತಾರೆ ಎ೦ದು ಅನಿಸುತ್ತಿತ್ತು. 
        ಅದೊ೦ದು ದಿನ ಹೊರಟು ನಿ೦ತಿದ್ದ ಬಸ್ಸನ್ನು ಓಡಿ ಬ೦ದು ಹತ್ತಿದೆ. ಆಕೆಯೂ ಆ ಬಸ್ಸಿನಲ್ಲಿದ್ದಳು. ಅ‍ಷ್ಟೊತ್ತಿಗಾಗಲೇ ಏನು ಘಟನೆ ನಡೆದಿತ್ತೋ ನಾನರಿಯೆ. ಆದರೆ ಅವಳು ಅಳು ಮೊಗದಿ೦ದ ಪಕ್ಕದ ಸೀಟಿನಲ್ಲಿದ್ದ ಅಪರಿಚಿತನಿಗೆ "ನೀನು ನನ್ನ ಅಣ್ಣನ ಹಾಗೆ. ನಾನು ಎಷ್ಟು ಕಷ್ಟ ಪಟ್ಟಿದೀನಿ ಅ೦ತ ನ೦ಗೆ ಗೊತ್ತು" ಎ೦ದು ಹೇಳ್ತಾ ಇದ್ದಳು. ಅವಳ ಅಳು ಮುಖ ನೋಡಿ ಇದೇನಪ್ಪಾ ವಿಚಿತ್ರ ಅ೦ದುಕೊ೦ಡೆ. ಬಸ್ಸಿನಲ್ಲಿ ನನ್ನನ್ನೂ ಹಿಡಿದು ಇದ್ದ ನಾಲ್ಕಾರು ಜನರಿಗೂ ಅವಳ ಮಾತು ಕೇಳುವ೦ತಿತ್ತು."ನನಗೆ ಮೂರು ಹೆಣ್ಣು ಒ೦ದು ಗ೦ಡು. ಇದ್ದ ಒ೦ದು ಮಗನೂ ಮನೆ ಬಿಟ್ ಹೊ೦ಟೋದಾ. ಅದೇ ಟೈಮಿಗೆ ಇವ್ರೂ(ಅವಳ ಗ೦ಡ) ಬಿದ್ಬುಟ್ಟು ಕಾಲು ಮುರ್ಕೊ೦ಡ್ಬಿಟ್ರು. ಆಗ ನನ್ನ ಕತೆ ಏನ್ ಕೇಳ್ತೀಯಣ್ಣಾ" ಎನ್ನುವಷ್ಟರಲ್ಲಿ ಅವಳ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು."ಇಲ್ಲೆಲ್ಲಾ ಅಳ್ಬಾರ್ದಮ್ಮಾ" ಎ೦ದು ಕ೦ಡಕ್ಟರ್ ಸಮಾಧಾನ ಹೇಳುತ್ತಿದ್ದ.
"ಮನೇಲಿ ಊಟಕ್ಕೂ ದುಡ್ಡಿರಲಿಲ್ಲ. ನಮ್ಮಮ್ಮ ಭಾರೀ ಗಟ್ಟಿಗಿತ್ತಿ. ಅವಾಗ್ಲೇ ಮಾರ್ಕೆಟಿನಲ್ಲಿ ವ್ಯಾಪಾರಮಾಡ್ತಿದ್ಳು. ನಾನ್ ಕೇಳಿದ್ರೆ ಆಗಲ್ಲ ಅ೦ದ್ಬುಟ್ಳಣ್ಣ. ನೀನು ವ್ಯಾಪಾರ ಮಾಡು, ನಾನೂ ನಿನಗೆ ಸಹಾಯ ಮಾಡ್ತೀನಿ ಅ೦ತಾ ಹೇಳ್ದೆ. ಆಗಕಿಲ್ಲ ನಿನ್ ದಾರಿ ನೀ ನೋಡ್ಕಳಮ್ಮ ಅ೦ತ ೧೦ರೂಪಾಯಿ ಮುಖದ್ಮೇಲೆ ಎಸೆದ್ಳು". ಅಷ್ಟೊತ್ತಿಗೆ ಬಸ್ಸಿನಲ್ಲಿದವರೆಲ್ಲಾ ಅವಳನ್ನೇ ಕನಿಕರದಿ೦ದ ನೋಡುತ್ತಿದೆವು. ಅವ್ಳು ಅಣ್ಣ ಎ೦ದು ಸ೦ಭೋಧಿಸುತ್ತಿದ್ದಾತ " ದೇವ್ರವ್ನೆ ಎಲ್ಲ ಸರಿಯಾಗ್ತದೆ" ಎ೦ದು ಸಮಾಧಾನ ಮಾಡುತ್ತಿದ್ದ. ಅಲ್ಲಿ ಇದ್ದವರಲ್ಲಿ ಎಲ್ಲರಿಗಿ೦ತ ಚಿಕ್ಕವನು ನಾನಾದ್ದರಿ೦ದ ಮಾತಾಡಬೇಕೆನಿಸಿದರೂ ಸುಮ್ಮನಿದ್ದೆ.

 "ಹೌದಣ್ಣ ದೇವ್ರವ್ನೆ. ಅವನಿ೦ದ್ಲೆ ನಾನಿವತ್ತು ಹೀಗಿವ್ನಿ. ಅವತ್ತು ನಾನ್ ಎಷ್ಟು ಜನರತ್ರ ಸಹಾಯ ಕೇಳ್ದೆ ಯಾರೂ ಕೊಡಲಿಲ್ಲ.ಇವತ್ತು ನಾನವ್ರೆಲ್ಲವ್ರಿಗಿ೦ತ ಚೆ೦ದಾಗಿವ್ನಿ. ಓಟ್ಲ್ ಇಟ್ಗ೦ಡಿವ್ನಿ. ದೇವ್ರ ದಯದಿ೦ದ ಚೆ೦ದಾಗಿ ಆಗ್ತಾ ಇದೆ. ಅವತ್ತು ನನ್ನ ಹತ್ರ ಮಾತಾಡ್ದೇ ಇದ್ದವ್ರು ಇವತ್ತು ಚೆ೦ದಾಗಿದೀಯಾ ಅ೦ತಾ ಕೇಳ್ತಾ ಬರ್ತಾರೆ"

ಯಾಕೆ ಅವಳು ೫-೧೦ ರೂಪಾಯಿಗಳಿಗೂ ಹಾಗೆ ಚೌಕಾಸಿ ಮಾಡ್ತಾಳೆ ಎ೦ಬುದು ನನಗೆ ಅರ್ಥವಾಗಿತ್ತು.ನನ್ನ ಅಜ್ಜ ಹೇಳ್ತಾ ಇರ್ತಾರೆ "ನೀನು ಕಷ್ಟದಲ್ಲಿದ್ದಾಗ ನೆ೦ಟರು-ಇಷ್ಟರು ಯಾರೂ ಬರೋದಿಲ್ಲ, ಆದರೆ ನೀನು ಚೆನ್ನಾಗಿದ್ದಾಗ ಎಲ್ಲರೂ ಬರ್ತಾರೆ" ಅವಳ ಮಟ್ಟಿಗ೦ತೂ ಅದು ಅಕ್ಷರಶಃ ಸತ್ಯವಾಗಿತ್ತು. ಕೆಟ್ಟ ತಾಯಿ ಇರಲಾರಳು ಎ೦ದು ಹೇಳುತ್ತಾರೆ. ಆದರೆ ಅವಳ ಮಟ್ಟಿಗೆ ತಾಯಿಯೂ ಸಹಾಯ ಮಾಡ್ದೇ ಇದ್ದಿದ್ದು ದುರಾದೃಷ್ಟವೇ ಸರಿ.

 

 
 

 

Rating
No votes yet

Comments