ಕ್ಷಮಿಸು ನಾನು ನಿನ್ನವನಲ್ಲ....

ಕ್ಷಮಿಸು ನಾನು ನಿನ್ನವನಲ್ಲ....

ಬೇಡ ಬೇಡವೆಂದರೂ ಕಣ್ಣ ಪರದೆಯ ಮುಂದೆ ನಿನ್ನವೇ ಚಿತ್ರಗಳು, ನಿನ್ನವೇ ನೆನಪುಗಳು ಬರುತ್ತಿವೆ. damn!.... ಯಾಕಾದರೂ ಹೀಗೆ ಕೆಣಕುತ್ತೀಯೋ, ಮತ್ತೆ ಮತ್ತೆ ಕೆದಕುತ್ತೀಯೋ ಕಾಣೆ. ಆವತ್ತು ನೀನೇ ಹೇಳಿದ್ದೆ, "ನನ್ನನ್ನು ಮರೆತುಬಿಡಿ" ಅಂತ. ’ನೀನು?’ ಅಂತ ನಿನಗೆ ಕೇಳಿದ್ದಕ್ಕೆ ’ನಾನೂ ಮರ್ತು ಬಿಡ್ತೀನಿ’ ಅಂದಿದ್ದೆ. ನನಗ್ಗೊತ್ತು, ನೀನು ಮರೀತೀಯ ಅಂತ. ಮರೆತು ಬಿಡಲೇಬೇಕಾದ ಅನಿವಾರ್ಯತೆಯೂ ನಿನಗಿದೆ ಅಲ್ಲವಾ? ಇನ್ನು ನನ್ನ ಬಗ್ಗೆ ಚಿಂತಿಸಬೇಕಾದ ದರ್ದು ನಿನಗ್ಯಾಕಿದ್ದೀತು ಹೇಳು? ಹಿಂದಿನ ಡಿಸೆಂಬರಿನ ೩೦ನೇ ತಾರೀಕಿಗೆ "i am always with u" ಅಂತ ಮೆಸೇಜು ಕಳಿಸಿದ್ದು ಈ ಸಲ ನೆನಪಾಗಿತ್ತು. ಈ ಸಲದ ಡಿಸೆಂಬರಿನ ಅದೇ ದಿನ, ಅದೇ ಕ್ಷಣಕ್ಕೆ ಅದೊಂದು ಮೆಸೇಜು ಓದುತ್ತಲೇ ಇದ್ದೆ, ಇಡೀ ರಾತ್ರಿ ನನ್ನ ಕಣ್ಣ ರೆಪ್ಪೆಗಳು ಮುಚ್ಚಿಕೊಂಡಿರಲಿಲ್ಲ. ಯಾಕೆಂದರೆ ನೀನು ಈಗ ನನ್ನೊಂದಿಗಿಲ್ಲ. ನನ್ನೊಂದಿಗೆ ಮುಂದೆಂದೂ ಇರೋಲ್ಲ. ಅವೆಲ್ಲ ಪ್ರೇಮದ ಉತ್ತುಂಗದಲ್ಲಿದ್ದಾಗ ಬೆರಳಿಂದ ಕುಕ್ಕಿಸಿ, ಕಳಿಸಿದ ಸುಮ್ ಸುಮ್ನೆ... ಮೆಸೇಜುಗಳು. ಅಂತಹ ಮೆಸೇಜುಗಳಿಗೆ ನೀನು ಯಾವತ್ತಿಗೂ ಬೆಲೆ ಕೊಟ್ಟವಳಲ್ಲ ಅನ್ನೋದು ನನಗೀಗ ಗೊತ್ತಾಗ್ತಿದೆ. ಆದ್ರೆ ನಾನು? ಪೆದ್ದ. ಅವುಗಳನ್ನೆ ಮೆಲುಕು ಹಾಕುತ್ತ, ನಿದ್ರೆ ಇರದೆ, ಕೆಲವೊಮ್ಮೆ ಊಟ ಸೇರದೆ, ಕಂಗಾಲಾಗಿಬಿಡುತ್ತೇನೆ. ಯಾಕೇಂದ್ರೆ ’ಮಾತೇ ಮಾಣಿಕ್ಯ’ ಅಂದ್ಕೊಂಡಿರೋನು. ’ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಅನ್ನೋ ಮಾತನ್ನು ಅಕ್ಷರಶಃ ಪಾಲಿಸುವವನು. ಆದರೆ ನೀನು ಮುತ್ತಿನಂತಹ, ಮಾಣಿಕ್ಯದಂತಹ ಮಾತುಗಳನ್ನು ಒಡೆದು ಬಿಟ್ಟೆ. ಆ ಮಾತುಗಳು ಹಾಗೂ ಅವನ್ನಾಡಿದ ಘಳಿಗೆಗಳೂ ಈಗ ಸತ್ತು ಹೋಗಿವೆ ಅಲ್ವಾ?

ನೆನಪಿಟ್ಟುಕೊ, ಅಂತಹ ಸತ್ತ ಘಳಿಗೆಗಳೇ, ಆ ಘಳಿಗೆಯಲ್ಲಾಡಿದ ಮಾತುಗಳೇ ಇತಿಹಾಸವಾಗಿರೋದು ಮತ್ತು ಇತಿಹಾಸವಾಗೋದು. ಈಗ ನನ್ನ ನೆನಪು ನಿನಗೆ, ನಿನ್ನ ನೆನಪು ನನಗೆ ಎಲ್ಲಿಯವರೆಗೆ ಉಳಿದುಬಿಡುತ್ತವೆಂದರೆ, ನಮ್ಮ ಕಣ್ಣುಗಳು ತೇಜಸ್ಸನ್ನು ಕಳಕೊಂಡ ಮೇಲೆ, ನಮ್ಮ ದೇಹ ಚಲನಶೀಲತೆಯನ್ನು ನಿಲ್ಲಿಸಿದ ಮೇಲೆ, ನಮ್ಮ ಉಸಿರು ನಿಂತು ಹೋದ ಮೇಲೆ. ಯಾಕೆ ಗೊತ್ತಾ? ಮೊದಲ ನೋಟದಲ್ಲೇ ಹೃದಯದರಮನೆ ಸೇರಿದ ಹುಡುಗಿ ಅಥವ ಹುಡುಗ, ಒಬ್ಬರನ್ನೊಬ್ಬರು ಮರೆತು ಬಿಡುವುದೆಂದರೆ, ಅದು ಹೃದಯದ ಬಡಿತಗಳನ್ನೇ ನಿಲ್ಲಿಸಿಬಿಡುವುದು ಎಂದರ್ಥ. ಅಂದರೆ ಸತ್ತು ಹೋಗುವುದು....! ನನ್ನ ಪ್ರಕಾರ ಮರೆತುಬಿಡಿ ಅಂತ ನೀನಂದಿದ್ದರ ಅರ್ಥ ’ಸತ್ತು ಬಿಡಿ’ ಅಂತ ಅಲ್ವಾ? ಸರಿ, ನಾನು ನಿನ್ನ ಪ್ರಕಾರ ಮರೆತು ಬಿಡ್ತೀನಿ, ಅಂದ್ರೆ ಸತ್ತು.... ಆದ್ರೆ ನೀನು ನನ್ನನ್ನ ಮರೆಯಬೇಡ... ಮರೆಯಲೂಬಾರ್ದು. ಅಂದ್ರೆ ನೀನು ಸತ್ತು ಹೋಗಬಾರ್ದು... ನನ್ನೊಳಗ್ಯಾವತ್ತೂ ಚೈತನ್ಯವಾಗಿರಬೇಕಾದೋಳು ಸಾಯೋದು ಅಂದ್ರೆ ಅದು ಅಕ್ಷಮ್ಯ.

ಹೊಸ ವರ್ಷದ ಶುಭಾಶಯ ಒಪ್ಪಿಸಿಕೊ.... ಇನ್ನು ಮುಂದೆ ಇಂತಹ ಯಾವ ಸಂದೇಶಗಳೂ ನನ್ನಿಂದ ನಿರೀಕ್ಷಿಸಬೇಡ. Ofcourse ನೀನು ನಿರೀಕ್ಷಿಸೋದು ಇಲ್ವೇನೋ....?

ಪ್ಲೀಸ್ ’ಮರೆಯೋದು ಹ್ಯಾಂಗಂತ ಹೇಳ್ಕೊಡ್ತೀಯಾ?’ .

ಇಂತಿ,,,

ಕ್ಷಮಿಸು ನಾನು ನಿನ್ನವನಲ್ಲ....

Rating
No votes yet

Comments