ಗಂಡಸರೂ ಬಸುರಿ ಆಗುವುದಾಗಿದ್ದರೆ...?!

ಗಂಡಸರೂ ಬಸುರಿ ಆಗುವುದಾಗಿದ್ದರೆ...?!

(ಈ ಬರಹ ಆರಂಭಿಸುವ ಮೋದಲೇ ಒಂದು ಮಾತನ್ನು ಹೇಳಿ ಬೀಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀ ವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ "ವ್ಯಾದಿಯಿಲ್ಲ". ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ)
ಬಾಳೇಹಳ್ಳಿ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡಳಂತೆ. ಹಾಗಂತ ಗೆಳೆಯ ರಾಘು ಮೆಸೇಜ್ ಮಾಡಿದ್ದ. ನನಗೊಮ್ಮೆ ಹೃದಯ ಚುರ್ ಅಂದಂತಾಯಿತು. ಹೈಸ್ಕೂಲ್ ಓದುತ್ತಿರುವಾಗ ನನ್ನ ಸೀನಿಯರ್ ಆಗಿದ್ದ ಹುಡುಗಿಯವಳು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವಳು. ಅಬ್ಬಬ್ಬಾ ಅಂದರೆ ೨೪ ವರ್ಷ ಆಗಿರಬಹುದು ಅವಳಿಗೆ. ಅಷ್ಟು ಕಿರಿ ವಯಸ್ಸಿನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಕೇಳಿದಾಗ ನೋವಾಯಿತು.

ಊರಿನಿಂದ ಯಾರೋ ಫೋನ್ ಮಾಡಿದ್ದರು. ಹೀಗೆ ಮಾತಾಡುವಾಗ ಅಕ್ಷತಾ ಸಾವಿನ ಸುದ್ದಿ ಬಂತು.
ಯಾರೋ ಇತರೆ ಪೈಕಿಯವನ ಜತೆ ಲವ್ ಇತ್ತಂತೆ ಅವಳಿಗೆ. ಸಂಬಂಧವೂ ಇತ್ತು ಅಂತಿದಾರೆ...
ನನಗೆ ಕೋಪ ನೆತ್ತಿಗೇರಿತು.
ನಿಮ್ಮ ಈ ಚುಚ್ಚು ಮಾತುಗಳೇ ಅವಳನ್ನ ಸಾಯುವಂತೆ ಮಾಡಿದ್ದು. ಅವಳು ಯಾರಿಗೆ ಬಸುರಿಯಾದರೇನು? ಬಾಣಂತಿಯಾದರೇನು? ಅದರಿಂದ ನಿಮ್ಮ ಗಂಟೇನು ಖರ್ಚಾಗತ್ತೆ...ರೇಗಿದೆ
ಅಲ್ಲಾ ಬಡವರ ಮನೆ ಕೂಸು ಹಂಗೆಲ್ಲಾ ಮಾಡಿಕೊಂಡರೆ ಅಪ್ಪಾ, ಅಮ್ಮ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವುದು ಬ್ಯಾಡದಾ? ಅಂತಾ ರಾಗ ಶುರುವಿಟ್ಟರು.

ಹೌದು ನಮ್ಮ ಸಮಾಜದ ಇದೇ ಧೋರಣೆಯೇ ಅಂತಹ ಕಿರಿ ವಯಸ್ಸಿನ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿರುವುದು. ನನಗೆ ಇಷ್ಟು ವರ್ಷವಾದರೂ "ಶೀಲ ಎಂಬುದು ದೇಹದಲ್ಲಿ ಅಡಗಿದೆಯಾ? ಅಂಗಾಂಗದಲ್ಲಿ ಅಡಗಿದೆಯಾ? ಮನಸ್ಸಲ್ಲಿ ಅಡಗಿದೆಯಾ? ಎಂಬ ಸಂಗತಿ ಅರ್ಥವಾಗಲಿಲ್ಲ!" "ಹೆಣ್ಣು ಬಸುರಿಯಾಗುತ್ತಾಳೇ ಎಂಬ ಒಂದೇ ಒಂದು ಕಾರಣಕ್ಕೆ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾಳೆ. ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸಲು ಬಳಸುವ ವಸ್ತುವಾಗುತ್ತಿದೆ. ಇದು ನಮ್ಮ ಸಮುದಾಯದಲ್ಲಿ ಮಾತ್ರವಲ್ಲ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜದಲ್ಲಿಯೂ ಹೆಣ್ಣಿನ ಸ್ಥಿತಿ ಇದಕ್ಕಿಂತ ಶೋಚನೀಯವಾಗಿದೆ’ ಅನ್ನುತ್ತಿದ್ದಳು ಅಕ್ಕ.

ಸಮಾಜದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ. ವಯಸ್ಸಿನ ದೋಷದಿಂದಲೋ, ಅಚಾತುರ್ಯದಿಂದಲೋ ಯಾರ ಜೊತೆಗೋ ಸಂಬಂದ ಬೆಳೆಸುತ್ತಾರೆ. ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾರೆ. ಅಪ್ಪಾ ,ಅಮ್ಮ ನೀನು ಆ ಹುಡುಗನನ್ನು ಮದುವೆಯಾಗುವುದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಾರೆ. ಕೊನೆಗೆ ಬೆಸತ್ತ ಹೆಣ್ಣು ಮಗಳು ನೇಣಿಗೆ ಶರಣಾಗುತ್ತಾಳೆ. ಹೆಚ್ಚಿನ ಆತ್ಮಹತ್ಯೆ ಹಿಂದಿರುವ ಕಥೆಯಿಷ್ಟೆ!

ಸತ್ತ ಮೇಲೆ ಸಮಾಜದ ಒಂದಿಷ್ಟು ಮಂದಿ ಛೇ ಅವಳು ಸಾಯಬಾರದಿತ್ತು. ಜನ್ಮ ಜನ್ಮಕ್ಕೂ ಇನ್ನು ಅನುಭವಿಸಬೇಕು. ಮಳ್ಳು ಕೂಸು ಬದುಕಿನಲ್ಲಿ ಏನು ಬಂದರೂ ಎದುರಿಸಬೇಕಿತ್ತು ಅಂತಾ ಪಶ್ಚಾತಾಪದ ಮಾತಾಡುತ್ತಾರೆ. ಇನ್ನೂ ಕೆಲವರು ಯಾರದ್ದೋ ಜೊತೆಗೆ ಸಂಬಂದ ಇತ್ತಂತೆ. ಸತ್ತಳು ಅಂತಾ ಆಡಿಕೊಳ್ಳುತ್ತಾರೆ.

ಒಮ್ಮೆ ಅವಳು ಸಾಯದೇ ಬದುಕಿದಿದ್ದರೆ ಈ ಸಮಾಜ ಅವಳನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದು ಮುಖ್ಯವಾದ ಪ್ರಶ್ನೆ. ಒಂದಿಷ್ಟು ದಿನ ಅವಳ, ಅಪ್ಪಾ ಅಮ್ಮನೂ ಅವಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಇಡೀ ಸಮಾಜ ಅವಳ ಎದುರಿಗೆ ಆಡಿಕೊಳ್ಳಬಾರದ ಮಾತುಗಳನ್ನೆಲ್ಲಾ ಆಡಿಕೊಳ್ಳುತ್ತಿತ್ತು. ಇನ್ನೂ ನಮ್ಮ ಹಳ್ಳಿ ಹೆಂಗಸರಂತೂ... ತಾವು ಎಷ್ಟು ಸರಿ ಇದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗಂಡ ಊರಲ್ಲಿ ಇಲ್ಲದಿದ್ದಾಗ ಯಾರ್ಯಾರಿಗೋ ಫೋನ್ ಮಾಡಿ ಕರೆಸಿಕೊಂಡು ಸುಖ ತೆಗೆದುಕೊಳ್ಳುತ್ತೇವೆ ತಾವು ಎಂಬುದು ಕೆಲ ಹೆಂಗಸರಿಗೆ ಗೊತ್ತೆ ಇರುವುದಿಲ್ಲ! ನೀಲಗರಿ ಪ್ಲಾಂಟೇಶನ್ನಿಗೆ ಹೋಗಿ ಯಾರ ಜೊತೆಗೋ ಮೆಯ್ದು ಬರುವುದು ಆ ಹೆಂಗಸರಿಗೆ ನೆನಪೇ ಇರುವುದಿಲ್ಲ! ಆದರೆ ಇಂತಹ ಒಬ್ಬ ಹೆಣ್ಣು ಮಗಳು ಎದುರಿಗೆ ಸಿಕ್ಕರೆ ಆಡಬಾರದ ಮಾತುಗಳನ್ನೆಲ್ಲಾ ಆಡುತ್ತಾರೆ. ಹುಡುಗಿ ಶ್ರೀಮಂತರ ಮನೆ ಕೂಸಾಗಿದ್ದರೆ ಅವಳು ಆಚೆ ಹೋದ ನಂತರ ಆಡುತ್ತಾರೆ. ಬಡವರ ಮನೆ ಕೂಸಾದರೆ ಎದುರಿಗೆ ಆಡುತ್ತಾರೆ. ಇದು ನಮ್ಮ ಸಮಾಜದ ಸ್ಥಿತಿ. ಇವುಗಳನ್ನೆಲ್ಲಾ ಸಹಿಸಿಕೊಂಡು ಆ ಹೆಣ್ಣು ಮಗಳು ಬದುಕಬೇಕು. ಇದನ್ನು ನೆನಸಿಕೊಂಡೇ ಎಷ್ಟೋ ಹೆಣ್ಣು ಮಕ್ಕಳು ನೇಣಿಗೆ ಶರಣಾಗುವುದು ಅನ್ನಿಸತ್ತೆ ನನಗೆ.

ಹಾಂಗತ ಹೆಣ್ಣು ಮಗಳು ಕಂಡ ಕಂಡ ಹುಡುಗನಿಗೆ ಬಸಿರಾಗುವುದು ಸರಿ ಎಂದು ವಾದಿಸುತ್ತಿಲ್ಲ. ತಾನು ಬಯಸಿದ ಹುಡುಗನ ಜತೆಗೆ ಸಂಬಂಧ ಹೊಂದಬೇಕಾದರೂ ಮದುವೆಯಾಗಲೇ ಬೇಕಾ? ಸಂಬಂಧ ಇಟ್ಟುಕೊಂಡರೂ ಅಪ್ಪಾ ಅಮ್ಮ ಕಟ್ಟಿದ ಹುಡುಗನನ್ನೇ ಮದುವೆಯಾಗಬೇಕಾ? ಹೆಣ್ಣಿಗೆ ವಯಕ್ತಿಕ ಬದುಕು ಅನ್ನುವುದೋ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹೆಣ್ಣನ್ನು ನಾವು ಬಸಿರಾಗುತ್ತಾಳೆ ಎಂಬ ಕಾರಣದಿಂದ ಶೋಷಿಸುವುದಾದರೆ ಒಮ್ಮೆ ಗಂಡಸು ಬಸಿರಾಗುವುದಾಗಿದ್ದರೆ ಈ ಸಮಾಜದ ಸ್ಥಿತಿ ಹೇಗೆ ಆಗುತ್ತಿತ್ತು ಒಮ್ಮೆ ಅವಲೋಕಿಸಿ ನೋಡಿ.

ನಾವು ವೇಶ್ಯೆಯರನ್ನು, ಸೂಳೆಯರನ್ನು ಬೈಯ್ಯುತ್ತೇವೆ. ಅದೊಂದು ನೀಚ ವೃತ್ತಿ ಅನ್ನುತ್ತೇವೆ. ಗಂಡಸಿಗೆ ತೃಷೆ ಇಲ್ಲದಿದ್ದರೆ ವೇಶ್ಯಾವಾಟಿಕೆ ಏಕೆ ಹುಟ್ಟುತ್ತಿತ್ತು? ಒಮ್ಮೆ ಆಲೋಚಿಸಿ ನೋಡಿ. ಎಷ್ಟು ಗಂಡಂದಿರು ಹೆಂಡತಿಯ ಕಣ್ಣು ತಪ್ಪಿಸಿ ಯಾರ್ಯಾರ ಜೊತೆಗೋ ಮಲಗಿ ಬರುವುದಿಲ್ಲ ಹೇಳಿ? ಆದರೆ ಅದೇ ಕೆಲಸ ಹೆಣ್ಣು ಮಾಡಿದರೆ? ಅವಳಿಗೆ ಹೊಟ್ಟೆ ಮುಂದು ಬರುವುದರಿಂದ ಅವಳು ಅಂತಹ ಕೆಲಸ ಮಾಡಿದ್ದಾಳೆ ಎಂಬುದು ಗೊತ್ತಾಗಿ ಬಿಡುತ್ತದೆ! (ಇವತ್ತು ಕಾಲ ಬದಲಾಗಿದೆ. ಹೊಟ್ಟೆ ಮುಂದೆ ಬರದಂತೆಯೂ ಮಲಗೆದ್ದು ಬರಲು ಬರುತ್ತದೆ! ಬೆರಳೆಣಿಕೆ ಹೆಣ್ಣು ಮಕ್ಕಳು ಹಾಗೇ ಮಲಗೆದ್ದು ಬರುತ್ತಿದ್ದಾರೆ! ಆದರೆ ಗಂಡಸಿಗಿರುವಷ್ಟು ಚಟ ಹೆಣ್ಣಿಗಿಲ್ಲ ಎಂಬುದು ನನ್ನ ನಂಬಿಕೆ)

"ನಾವು ಎರಡು ಲಿಂಗಗಳ ಸಮ್ಮಿಲದಿಂದಲೇ ಹುಟ್ಟಿದವರು. ಕಾಮ ಕ್ರಿಯೆಯ ಫಲವೇ ಪ್ರತಿಯೊಂದು ಜೀವಿಗಳು. ಹಾಗಾಗಿ ಪ್ರತಿ ಜೀವಕ್ಕೂ ಕಾಮದ ವಾಸನೆ, ತೃಷೆ ಸಹಜ. ಎಕ್ಸ್, ವೈಎಂಬ ಭಿನ್ನ ಕ್ರೋಮೋಸೋಮ್‌ಗಳು ಗಂಡಸಿನಲ್ಲಿ ಇರುವುದರಿಂದ ಅವನಿಗೆ ತೃಷೆ ಒಂಚೂರು ಹೆಚ್ಚು. ಆದರೆ ಹೆಣ್ಣಿನಲ್ಲಿ ಈ ಭಿನತೆಯ ಕ್ರೋಮಸೋಮ ಇಲ್ಲ. ಏಕತೆಯ ಕ್ರೊಮೋಸೋಮ್ ಹಾಗಾಗಿ ಅವಳಿಗೆ ಲೈಂಗಿಕ ಚಟ ಸ್ವಲ್ಪ ಕಡಿಮೆ" ಅನ್ನುತ್ತಾರೆ ಓಶೋ. ಅವರ ಮಾತು ಅಕ್ಷರಶಃ ನಿಜ ಹಾಗಾಗಿ ಎಲ್ಲಾ ಜೀವಿಗಳಲ್ಲೂ ಸೆಕ್ಸ್ ಸಹಜ. ಸೆಕ್ಸ್ ಇಲ್ಲದಿದ್ದರೆ ಜೀವ ಸಂಕುಲದ ನಿರಂತರತೆ ಸಾಧ್ಯವಿತ್ತಾ?

ಏನೋ ನನಗಂತೂ ಈ ಸಮಾಜದ ಧೊರಣೆಯೇ ಅರ್ಥವಾಗುವುದಿಲ್ಲ. ಅನುಭವದಲ್ಲಿ ಕಿರಿಯವನಾದ್ದರಿಂದ ನನ್ನ ಆಲೋಚನೆಯೇ ಸರಿಯಿಲ್ಲದೆಯೂ ಇರಬಹುದು.! ಆದರೂ ನನ್ನ ವರಗೆಯ, ಇನ್ನೂ ಬದುಕಿ ಬಾಳಿಬೇಕಾದವರೆಲ್ಲಾ ಸಾಯುತ್ತಾರೆ ಎಂದರೆ ನಿಜಕ್ಕೂ ನೋವಾಗತ್ತೆ. ಆ ನೋವನ್ನು ಇಲ್ಲಿ ತೊಡಿಕೊಂಡೆ ಅಷ್ಟೆ.

Rating
No votes yet

Comments