ಗಂಡ ಹೆಂಡಿರ ಜಗಳ

ಗಂಡ ಹೆಂಡಿರ ಜಗಳ

ಗಂಡ ಹೆಂಡಿರು ಕಾದಾಡುವುದು ಸ್ವಾಭಾವಿಕವೇ. ಜಗಳ ಎನ್ನವುದು ವೈವಾಹಿಕ ಜೀವನದ ಪಾರ್ಟ್ ಅಂಡ್ ಪಾರ್ಸಲ್. ಪ್ಯಾಕೇಜ್ ಡೀಲ್ ಅಂತಾರಲ್ಲ ಹಾಗೆ. ಈ ಕಿತ್ತಾಟ ನೋಡಿದ ನಮ್ಮ ಹಿರಿಯರೂ ಅದನ್ನು ದೊಡ್ಡ ವಿಷಯವಾಗಿ ಪರಿಗಣಿಸದೆ “ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ” ಎಂದು ಜಗಳಕ್ಕೆ ಒಂದು culinary ಮತ್ತು romantic angle ಕೊಟ್ಟು ಮಗ್ಗುಲಾದರು. ಆದರೆ ಎಲ್ಲಾ ಜಗಳಗಳೂ ‘ಮಂಚೂರಿ’ ತಿಂದು ಮಂಚ ಏರಿದ ಕೂಡಲೇ ಕದನ ವಿರಾಮದಲ್ಲಿ ಸಮಾಪ್ತಿ ಆಗೋಲ್ಲ ಎಂದು ಗುಜರಾತಿನ ಘಟನೆಯೊಂದು ಹೇಳುತ್ತದೆ.

 

ಸುಮಾರು ಹದಿನೈದು ವರ್ಷಗಳಿಂದ ವೈವಾಹಿಕ ಬದುಕಿನ ಕೃಷಿಯಲ್ಲಿ ನೊಗಕ್ಕೆ ನೊಗ ಕೊಟ್ಟು ದುಡಿದು ಮೂರು ಹೆಣ್ಣು, ಒಂದು ಗಂಡು ಮಕ್ಕಳ ಸೃಷ್ಟಿಗೂ ಕಾರಣವಾದ ಗಂಡ ಹೆಂಡಿರ ಟೀಂ ಜಗಳ ಮಾಡುವುದನ್ನು ಬಿಟ್ಟಿರಲಿಲ್ಲ. ಅವಳಿಗೆ ಅವನ ಮೇಲೆ ಸಂಶಯ. ಗಂಡನಿಗೆ ಯಾವುದೋ ಹೆಣ್ಣೊಬ್ಬಳಿದ್ದಾಳೆ ಎಂದು. ಒಂದು ದಿನ ಇದೇ ವಿಷಯದಲ್ಲಿ ಜಗಳವಾಗಿ ಆಕೆ ಗಂಡನ ಮನೆ ಬಿಟ್ಟು ತವರಿಗೆ ಹೋಗುತ್ತಾಳೆ. ಸ್ವಲ್ಪ ದಿನಗಳ ನಂತರ ರಾಜಿ ಮಾಡಿಕೊಂಡ ಪತಿರಾಯ ತನ್ನ ಪತ್ನಿಯನ್ನು ವಾಕ್ ಗೆಂದು ಕರೆಯುತ್ತಾನೆ.  ಗಂಡ ಸರಿಯಾದ ಎಂದು ಆಕೆ ಪುಳಕದಿಂದ ಅವನೊಂದಿಗೆ ಹೋಗುತ್ತಾಳೆ. ಹತ್ತಿರದ ಸೇತುವೆ ಮೇಲಿನಿಂದ ನದಿಗೆ ಅವಳನ್ನು ನೂಕಿ, ಮಗುಮ್ಮಾಗಿ ಮನೆಗೆ ಮರಳುತ್ತಾನೆ ತೊಲಗಿತು ಪೀಡೆ ಎಂದು. ಹೋದೆಯಾ ಪಿಚಾಚಿ ಎಂದರೆ ಬಂದೆ ನಾ ಗವಾಕ್ಷೀಲಿ ಎನ್ನುವಂತೆ ಆಕೆ ಮಾರನೆ ದಿನ ಮನೆಗೆ ಮರಳುತ್ತಾಳೆ. ಈತ ಪಿಶಾಚಿ ಬಂತೇನೋ ಎಂದು ಹೌಹಾರಿ ಓಟ ಕೀಳುವಾಗ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾಳೆ. ನದಿಗೆ ಬಿದ್ದ ಈಕೆಯನ್ನು ಅಲ್ಲಿಯೇ ದಡದಲ್ಲಿದ್ದ ಜನ ರಕ್ಷಿಸಿರುತ್ತಾರೆ. ಅಬ್ಬಾ, ದುರಂತದಿಂದ ಮಹಿಳೆ ಪಾರಾದಳು ಎಂದು ಸಂಸದಲ್ಲಿದ್ದಂತೆಯೇ ೧೯೮೮ ರಲ್ಲಿ ಬಂದ ಹಿಂದಿ ಸಿನಿಮಾ ನೆನಪಿಗೆ ಬಂತು.

ಖೂನ್ ಭರೀ ಮಾಂಗ್ (ರಕ್ತ ತುಂಬಿದ ಬೈತಲೆ) ಎನ್ನುವ ಚಿತ್ರದಲ್ಲಿ ವಿಧವೆಯಾದ ರೇಖಾಳನ್ನು ಆಕೆಯ ಪ್ರೇಮಿ ಕಬೀರ್ ಬೇಡಿ ದೋಣಿಯಿಂದ ನದಿಗೆ ತಳ್ಳಿ ಬಿಡುತ್ತಾನೆ. ಮೊಸಳೆಯ ಆಕ್ರಮಣಕ್ಕೆ ತುತ್ತಾದರೂ ಪವಾಡ ಸದೃಶವಾಗಿ ಗಾಯಗಳೊಂದಿಗೆ ರೇಖಾ ಪಾರಾಗಿ ಪ್ರತ್ಯಕ್ಷಗೊಳ್ಳುತ್ತಾಳೆ ಸೇಡು ತೀರಿಸಿ ಕೊಳ್ಳಲು. ಈ ಚಿತ್ರ ಆಸ್ಟ್ರೇಲಿಯಾದ return to eden ಧಾರಾವಾಹಿಯ ಡಬ್ಬಿಂಗ್ ಅಂತೆ.  

 

ಗುಜರಾತಿ ದಂಪತಿಗಳ ಈ ಗುದ್ದಾಟ, ದುರಂತದಲ್ಲಿ ಅವಸಾನ ಕಾಣಬಹುದಾಗಿದ್ದ ಘಟನೆ, ಗಂಡನ ಲಾಕ್ ಅಪ್ ನಲ್ಲಿ ಸಮಾಪ್ತಿಯಾದರೂ ಇದನ್ನು ಓದಿದ ಜನ ಮಾತ್ರ ತಮ್ಮ ನಾಲಗೆ ಹರಿ ಬಿಡಲು ಒಳ್ಳೆಯ ಅವಕಾಶ ಎಂದು  ಸಿದ್ಧರಾದರು.  “ಹೆಂಡತಿಗೆ ಈಜು ಬರೋಲ್ಲ ಎಂದು ಅರಿತು ಪಾಪ ಗಂಡ ನೀರಿಗೆ ತಳ್ಳಿದ್ದು. ಇದು ಮೋಸ. ತನಗೆ ಈಜು ಬರುತ್ತೆ ಎಂದು ಹೆಂಡತಿ ಗಂಡನಿಗೆ ಹೇಳದೆ ಮೋಸ ಮಾಡಿದಳು” ಎಂದು ಒಬ್ಬ ಕೊರಗಿದಾಗ ಕೆರಳಿದ ಮಹಿಳೆಯೊಬ್ಬಳು ಹೇಳಿದ್ದು,  “ನಿನ್ನ ತಾಯಿಗೆ ಈ ಗತಿ ಬಂದು ಬದುಕುಳಿಯದೆ ಸತ್ತಿದ್ದರೆ ನಿನ್ನಂಥವನಿಗೆ ಜನ್ಮ ಕೊಡುವುದು ತಪ್ಪುತ್ತಿತ್ತು” ಎಂದು ಕಿಡಿ ಕಾರಿದಳು.

ನನ್ನ ಪ್ರಕಾರ ಮದುವೆಯಾಗೋ ಹೆಣ್ಣು ಮಕ್ಕಳು ಕರಾಟೆ ಕಲಿತರೆ ಸಾಲದು, ಈಜೂ ಕಲಿಯಬೇಕು, ಸೇತುವೆ ಮೇಲಿನ “ಖೊಕ್” ಆಡುವ ಸಂದರ್ಭ ಬಂದರೆ ಸಹಾಯವಾಗಬಹುದು.        

 
Rating
Average: 1 (1 vote)