ಗಜಪಡೆಯ ಗೋಳಾಟ

4

ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ

ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು

ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ

ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ

ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ

ಬಲುಮೆಚ್ಚು ಬೆಲ್ದಚ್ಚು ದುಃಸ್ವಪ್ನ ಕಾಳ್ಗಿಚ್ಚು

ಕಾಡೀಗ ಬೇಜಾರು ನಾಡಲ್ಲೆ ಬಲುಮೋಜು

ಆಗಾಗಬರ್ತೀವಿ ನೀವ್ಯಾಕೆ ಕಿರುಚ್ತೀರಿ

ಕಾಡನ್ನ ಕಡಿತೀರಿ ಬೆಂಕೀನು ಹಚ್ತೀರಿ

ಕಾಡನ್ನ ನುಂಗ್ತೀರಿ ನಾಡನ್ನೆ ಬೆಳಸ್ತೀರಿ

ನಮ್ಗೀಗ ಕಾಡಲ್ಲಿ ಜಾಗಾನೆ ಸಿಗ್ತಿಲ್ಲ

ನೀರಿಲ್ಲ ನಿಡಿಯಿಲ್ಲ ಬದುಕೋಕೆ ಆಗ್ತಿಲ್ಲ

ಅದ್ಕೆಂದೆ ಬರ್ತೀವಿ ಇಲ್ಲೇನೆ ಇರ್ತೀವಾ

ನೀವಾದ್ರೆ ಬರಬೌದು ನಾವ್ಬಂದ್ರೆ ಯಾಕ್ಹಿಂಗೆ

ನಮ್ಗೊಂದು ನಿಮ್ಗೊಂದು ನ್ಯಾಯಾನ ನೀತೀನ

ನಮ್ಗೂನು ಬದುಕೋಕೆ ನೀವ್ಯಾಕೆ ಬಿಡ್ತಿಲ್ಲ

ಕಾಡಲ್ಲೂ ಕಾಡ್ತೀರಿ ನಾಡಲ್ಲೂ ಕಾಡ್ತೀರಿ

ಮನುಸ್ರೇನೆ ಇಂಗೇನೋ ನಾವ್ಕಾಣ್ವಿ ದೇವ್ರೇ

ಇವ್ರಿಗಷ್ಟು ಒಳ್ಳೆ ಬುದ್ಧೀನ ಕೊಡುದೇವ್ರೆ

ನಮ್ಗಂತು  ನೆಮ್ಮದೀನೆ ಇಲ್ದಂಗೇ ಮಾಡ್ಯಾರೆ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.