ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಗಣೇಶನ ಜನನ
ಒಂದು ದಿನ ಪಾರ್ವತಿ ದೇವಿಯು ಮನೆಯಲ್ಲಿದ್ದುಕೊಂಡು ಸ್ನಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರು ತನ್ನ ಏಕಾಂತಕ್ಕೆ ಭಂಗ ತರಬಾರದೆಂದು ಬಯಸಿ ಆಕೆಯು ಶಿವನ ವಾಹನವಾದ ನಂದಿಯನ್ನು ಬಾಗಿಲ ಬಳಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬೇಡವೆಂದು ಆಜ್ಞಾಪಿಸಿದಳು. ನಂದಿಯು ಪಾರ್ವತಿ ದೇವಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಲು ಬದ್ಧನಾದ. ಆದರೆ, ಆಗ ತನ್ನ ಮನೆಗೆ ಹಿಂದಿರುಗಿದ ಶಿವನು ಸಹಜವಾಗಿಯೇ ಒಳಗೆ ಹೋಗಲು ಇಚ್ಛಿಸಿದಾಗ ನಂದಿಯು ಅವನನ್ನು ಒಳಗೆ ಬಿಟ್ಟ. ಏಕೆಂದರೆ, ಎಷ್ಟೇ ಆದರೂ ನಂದಿಯು ಮೊದಲಿಗೆ ಶಿವನ ನಿಷ್ಠಾವಂತ ಸೇವಕನಲ್ಲವೇ? ಇದರಿಂದಾಗಿ ಪಾರ್ವತಿಗೆ ಸ್ವಲ್ಪ ಕೋಪ ಬಂದದ್ದು ಸಹಜವಾದರೂ ನಂದಿಯಂತೆ ಶಿವನಿಗೆ ನಿಷ್ಠನಾಗಿರುವವನೊಬ್ಬ ತನಗೆ ಇರದಿದ್ದುದರ ಬಗ್ಗೆ ಚಿಂತೆಯುಂಟಾಯಿತು. ಹೀಗೆ ಆಲೋಚನೆಗೆ ಒಳಗಾದ ಆಕೆಯು ತನ್ನ ದೇಹದ ಕೊಳೆಯನ್ನು ತೆಗೆದು ಅದರಿಂದ ಒಬ್ಬ ಬಾಲಕನನ್ನು ತಯಾರಿಸಿ ಅದರೊಳಗೆ ಪ್ರಾಣವನ್ನು ಊದಿ ಅವನನ್ನು ತನಗೆ ನಿಷ್ಠನಾಗಿರುವ ಸ್ವಂತ ಮಗನೆಂದು ಘೋಷಿಸಿದಳು.
ಮುಂದಿನ ಬಾರಿ ಪಾರ್ವತಿಯು ಸ್ನಾನ ಮಾಡಲು ಇಚ್ಛಿಸಿದಾಗ, ಆಕೆಯು ಆ ಬಾಲಕನನ್ನು ಮನೆಯ ದ್ವಾರವನ್ನು ಕಾಯುವ ಕೆಲಸಕ್ಕೆ ನಿಯೋಜಿಸಿದಳು. ಸ್ವಲ್ಪ ಸಮಯದ ನಂತರ, ಶಿವನು ಮನೆಗೆ ಹಿಂದಿರುಗಿದಾಗ ಅವನಿಗೆ ತನ್ನ ಮನೆಯೊಳಗೇ ಪ್ರವೇಶವನ್ನು ನಿರಾಕರಿಸುತ್ತಿರುವ ಒಬ್ಬ ವಿಚಿತ್ರ ಬಾಲಕ ಎದುರಾದನು! ಇದರಿಂದ ಕುಪಿತಗೊಂಡ ಶಿವನು ತನ್ನ ಸೈನ್ಯಕ್ಕೆ ಆ ಹುಡುಗನನ್ನು ಅಂತ್ಯಗೊಳಿಸಲು ಆಣತಿಯಿತ್ತನು. ಆದರೆ, ಅವನ ಸಂಪೂರ್ಣ ಸೈನ್ಯವು ಆ ಬಾಲಕನನ್ನು ಸಂಹರಿಸುವಲ್ಲಿ ವಿಫಲವಾದವು. ಇಂತಹ ಬಲಿಷ್ಠವಾದ ಶಕ್ತಿಯನ್ನು ಸ್ವಯಂ ಪಾರ್ವತಿಯ ಪುತ್ರನಾದ ಆ ಬಾಲಕನು ಹೊಂದಿದ್ದ.
ಸಾಮಾನ್ಯವಾಗಿ ಶಾಂತ ಚಿತ್ತನಾಗಿರುವ ಶಿವನು, ಇವನು ಸಾಮಾನ್ಯ ಬಾಲಕನಲ್ಲವೆಂದು ಮತ್ತು ಅವನನ್ನು ಜಯಸಿಲು ತೀವ್ರವಾದ ಹೋರಾಟವನ್ನು ಮಾಡಬೇಕೆನ್ನುವುದನ್ನು ಮನಗಂಡು ಕೋಪೋದ್ರೇಕಗೊಂಡು ಆ ಬಾಲಕನ ತಲೆಯನ್ನು ತರಿದು ತಕ್ಷಣವೇ ಅವನು ಮರಣ ಹೊಂದುವಂತೆ ಮಾಡಿದ. ಇದನ್ನು ತನಗೆ ಆದ ಅಪಮಾನವೆಂದು ಭಾವಿಸಿದ ಪಾರ್ವತಿಯು ಎಷ್ಟು ರೋಷಗೊಂಡಳೆಂದರೆ ಆಕೆಯು ಕೂಡಲೇ ಸಮಸ್ತ ಸೃಷ್ಟಿಯನ್ನು ನಾಶಮಾಡುವ ಪಣವನ್ನು ತೊಟ್ಟಳು. ತನ್ನ ಸೃಷ್ಟಿ ಕ್ರಿಯೆಗೇ ಸಂಚಕಾರವುಂಟಾಗುವುದೆಂದರಿತ ಬ್ರಹ್ಮನು ತನ್ನ ಕೋಪವನ್ನು ಶಮನಗೊಳಿಸಿಕೊಳ್ಳುವಂತೆ ಪಾರ್ವತಿ ದೇವಿಯನ್ನು ಪರಿಪರಿಯಾಗಿ ಬೇಡಿಕೊಂಡ. ಅದಕ್ಕೆ ಪಾವರ್ತಿಯು ಎರಡು ನಿಬಂಧನೆಗಳನ್ನು ಪಾಲಿಸಿದ್ದೇ ಆದಲ್ಲಿ ಅದಕ್ಕೆ ಒಪ್ಪುವುದಾಗಿ ಬ್ರಹ್ಮನಿಗೆ ತಿಳಿಸಿದಳು. ಅದರಲ್ಲಿ ಮೊದಲನೆಯದು ತನ್ನ ಮಗನನ್ನು ಪುನಃ ಬದುಕಿಸಬೇಕು ಮತ್ತು ಎರಡನೆಯದು ಅವನು ಎಲ್ಲಾ ದೇವತೆಗಳಿಗಿಂತ ಮೊದಲು ಪೂಜಿಸಲ್ಪಡಬೇಕು ಎಂಬುದಾಗಿತ್ತು.
ಈ ಹೊತ್ತಿಗಾಗಲೇ ಶಾಂತನಾಗಿ ತನ್ನ ತಪ್ಪನ್ನು ಅರಿತಿದ್ದ ಶಿವನು ಪಾರ್ವತಿಯ ಈ ಎರಡೂ ನಿಬಂಧನೆಗಳಿಗೆ ಒಪ್ಪಿಕೊಂಡ. ಅವನು ಬ್ರಹ್ಮನಿಗೆ ಉತ್ತರ ದಿಕ್ಕಿನಲ್ಲಿ ಸಂಚರಿಸಿ ಅಲ್ಲಿ ಮಲಗಿರುವ ಪ್ರಥಮ ಜೀವಿಯ ತಲೆಯನ್ನು ಕತ್ತರಿಸಿ ತಾ ಎಂದು ಆದೇಶಿಸಿದ. ಶೀಘ್ರವಾಗಿಯೇ ಹಿಂದಿರುಗಿ ಬಂದ ಬ್ರಹ್ಮನು ಒಂದು ಶಕ್ತಿಯುತವಾದ ಮತ್ತು ಬಲಿಷ್ಠವಾದ ಆನೆಯ ತಲೆಯನ್ನು ಕಡಿದು ತಂದ, ಅದನ್ನು ಶಿವನು ಆ ಬಾಲಕನ ದೇಹಕ್ಕೆ ಜೋಡಿಸಿದ. ಅದರಲ್ಲಿ ಹೊಸದಾಗಿ ಪ್ರಾಣವನ್ನು ಊದಿದ ಶಿವನು, ಆ ಬಾಲಕನನ್ನು ಅಂದಿನಿಂದ ತನ್ನ ಮಗನೆಂದೂ ಒಪ್ಪಿಕೊಳ್ಳುವುದಲ್ಲದೇ ಅವನನ್ನು ಪ್ರಥಮ ಪೂಜಿತನೆಂದೂ ಮತ್ತು ಗಣಗಳಿಗೆಲ್ಲಾ ಅವನೇ ನಾಯಕನೆಂದು ಘೋಷಿಸುವುದರೊಂದಿಗೆ ಅವನಿಗೆ ಅಧಿಪತಿಯ ಸ್ಥಾನವನ್ನು ಕೊಟ್ಟ ಮತ್ತು ಅದರ ದ್ಯೋತಕವಾಗಿ ಅವನನ್ನು ಗಣೇಶನೆಂದು ಕರೆದನು.
ಗಣೇಶನ ಕಥೆಯ ಅರ್ಥ
ಮೇಲ್ನೋಟಕ್ಕೆ ಇದೊಂದು ಬಹು ಸುಂದರವಾದ ಕಾಲ್ಪನಿಕ ಕಥೆಯೆಂದೂ ಮತ್ತು ಮಕ್ಕಳಿಗೆ ಹೇಳಬಲ್ಲ ಮನೋರಂಜಕ ಕಥೆ ಮತ್ತು ಇದರಲ್ಲಿ ಯಾವುದೇ ಹುರುಳಿಲ್ಲವೆಂದು ತಳ್ಳಿ ಹಾಕಬಹುದು. ಇದು ಕಾಲ್ಪನಿಕವೆನ್ನುವುದು ನಿಜವಾದರೂ ಸಹ ಅದರ ಹಿಂದಿರುವ ಆಧ್ಯಾತ್ಮಿಕ ಹಿನ್ನಲೆಯನ್ನು ಅನಾವರಣ ಮಾಡಿದಾಗ ಕಥೆಯ ಉದ್ದೇಶ ಅರ್ಥವಾಗುತ್ತದೆ. ಅದನ್ನು ಹೀಗೆ ವಿವರಿಸಬಹುದು:
ಪಾರ್ವತಿ ಎನ್ನುವುದು ಪರಾಶಕ್ತಿ ಅಥವಾ ಅತ್ಯುನ್ನತ ಶಕ್ತಿಯ ಒಂದು ರೂಪವಾಗಿದೆ. ಮಾನವ ಶರೀರದಲ್ಲಿ ಆಕೆಯು ಮೂಲಾಧಾರ ಚಕ್ರದಲ್ಲಿ ಕುಂಡಲಿನೀ ಶಕ್ತಿಯ ರೂಪದಲ್ಲಿ ಇರುತ್ತಾಳೆ. ಯಾವಾಗ ನಮ್ಮನ್ನು ಬಂಧಿಸುವ ಕಲ್ಮಶಗಳಿಂದ ನಮ್ಮನ್ನು ನಾವು ಪರಿಶುದ್ಧಗೊಳಿಸಿಕೊಳ್ಳುತ್ತೇವೆಯೋ ಆಗ ಈಶ್ವರನು ಸಹಜವಾಗಿಯೇ ಬರುತ್ತಾನೆ. ಆದ್ದರಿಂದ, ಪರಮಾತ್ಮನಾದ ಶಿವನು ಪಾರ್ವತಿಯು ಸ್ನಾನ ಮಾಡುತ್ತಿರುವಾಗ ಮುನ್ಸೂಚನೆಯಿಲ್ಲದೇ ಒಳಗೆ ಬರುತ್ತಾನೆ.
ಪಾರ್ವತಿಯಿಂದ ಬಾಗಿಲನ್ನು ಕಾಯಲು ನಿಯೋಜಿಸಲ್ಪಟ್ಟ ಶಿವನ ವಾಹನವಾದ ನಂದಿಯು ‘ದೈವೀ ಸ್ಪೃಹೆ’ಯನ್ನು ಹೊಂದಿರುವ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ನಂದಿಯು ಶಿವನಿಗೆ ಎಷ್ಟು ನಿಷ್ಠನಾಗಿದ್ದನೆಂದರೆ ಅವನ ಪ್ರತಿ ಆಲೋಚನೆಯೂ ಶಿವನೆಡೆಗೆ ತಿರುಗಿಸಲ್ಪಟ್ಟಿತ್ತು ಹಾಗಾಗಿ ಶಿವನು ಬಂದ ಕೂಡಲೇ ಅವನನ್ನು ಗುರುತು ಹಿಡಿದನು. ಆತ್ಮಸಾಕ್ಷಾತ್ಕಾರ ಹೊಂದ ಬಯಸುವ ಸಾಧಕನು ಸುಲಭವಾಗಿ ದೇವಿಯ ನಿವಾಸವಾದ ಕುಂಡಲಿನೀ ಶಕ್ತಿಯನ್ನು ತಿಳಿಯಬಲ್ಲನು ಎನ್ನುವುದನ್ನೂ ಸಹ ನಂದಿಯು ಸೂಚಿಸುತ್ತದೆ. ಮೊದಲು ಸಾಧಕನು ನಂದಿಯಂತೆ ಭಕ್ತನ ಗುಣಗಳನ್ನು ಬೆಳೆಸಿಕೊಳ್ಳಬೇಕು ಆಗ ಅವನು ಕೇವಲ ದೇವಿಯು ಮಾತ್ರವೇ ಕರುಣಿಸಬಲ್ಲ ಅತ್ಯುನ್ನತ ಆಧ್ಯಾತ್ಮಿಕ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಹೊಂದಬಲ್ಲ ಯೋಗ್ಯತೆಯನ್ನು ಪಡೆಯುತ್ತಾನೆ.
ನಂದಿಯು ಶಿವನನ್ನು ಪ್ರವೇಶಿಸುವುದಕ್ಕೆ ಅನುಮತಿ ಕೊಟ್ಟ ಮೇಲೆ ಪಾರ್ವತಿಯು ತನ್ನ ಸ್ವಂತ ದೇಹದ ಮೇಲಿನ ಮಣ್ಣಿನ ಕೊಳೆಯನ್ನು ತೆಗೆದು ಅದರಿಂದ ಗಣೇಶನನ್ನು ಸೃಷ್ಟಿಸಿದಳು. ಮಣ್ಣಿನ ಕೊಳೆಯು ಭೂಮಿ ತತ್ತ್ವವನ್ನು ಪ್ರತಿನಿಧಿಸುವ ಮೂಲಾಧಾರ ಚಕ್ರದೊಂದಿಗೆ ತಳುಕು ಹಾಕಲ್ಪಟ್ಟಿದ್ದು ಕುಂಡಲಿನೀ ಶಕ್ತಿಯು ನಿವಸಿಸುವ ಆ ಚಕ್ರವನ್ನು ಅದರ ಅಧಿದೇವತೆಯಾದ ಗಣೇಶನು ರಕ್ಷಿಸುತ್ತಾನೆ. ಅಪಕ್ವ ಮನಸ್ಸುಗಳಿಂದ ದೈವೀ ರಹಸ್ಯವನ್ನು ಕಾಪಾಡುವ ಉದ್ದೇಶದಿಂದ ಪ್ರಾಪಂಚಿಕತೆಯ ಬಂಧನವನ್ನು ಪ್ರತಿನಿಧಿಸುವ ಪ್ರತೀಕವಾದ ಗಣೇಶನನ್ನು ಸೃಷ್ಟಿಸುವ ಅವಶ್ಯಕತೆಯು ದೇವಿಗೆ ಉಂಟಾಯಿತು.
ಶಿವನು ಪರಮಾತ್ಮ ಮತ್ತು ಪರಮ ಶ್ರೇಷ್ಠನಾದ ಗುರು. ಇಲ್ಲಿ ಗಣೇಶನು ಅಹಂಕಾರದಿಂದ ಬಂಧಿಸಲ್ಪಟ್ಟ ಜೀವ ಅಥವಾ ಆತ್ಮನನ್ನು ಪ್ರತಿನಿಧಿಸುತ್ತಾನೆ. ದೇವನು ಒಳಗೆ ಬಂದಾಗ ಅಹಂಕಾರವೆಂಬ ಮೋಡದಿಂದ ಆವರಿಸಲ್ಪಟ್ಟ ಜೀವನು ಸಾಮಾನ್ಯವಾಗಿ ಅವನನ್ನು ಗುರುತಿಸುವುದಿಲ್ಲ ಮತ್ತು ಅವನೊಂದಿಗೆ ವಾದಕ್ಕೆ ಇಳಿಯುತ್ತಾನೆ ಅಥವಾ ಅವನೊಂದಿಗೆ ಯುದ್ಧವನ್ನೂ ಹೂಡಬಹುದು. ಆದ್ದರಿಂದ ನಮ್ಮ ಅಹಂಕಾರದ ತಲೆಯನ್ನು ಕತ್ತರಿಸುವುದು ಭಗವಂತ ಅಥವಾ ದೈವೀ ಸ್ವರೂಪಿಯಾದ ಗುರುವಿನ ಕರ್ತವ್ಯವಾಗಿದೆ. ಈ ಅಹಂಕಾರದ ಬಲವು ಎಷ್ಟಿರುತ್ತದೆ ಎಂದರೆ ಮೊದಲಿಗೆ ಗುರುವಿನ ಆದೇಶವನ್ನು ಪಾಲಿಸುವದಕ್ಕೆ ಪ್ರತಿರೋಧವುಂಟಾಗುತ್ತದೆ; ಇದನ್ನೇ ಶಿವನ ಸೈನ್ಯಗಳು ಗಣೇಶನನ್ನು ಸೋಲಿಸಲು ಅಸಾಧ್ಯವಾದುದರ ದ್ಯೋತಕವಾಗಿದೆ. ಶಿಷ್ಯನನ್ನು ತಿದ್ದಲು ಹಲವು ವೇಳೆ ತೀವ್ರವಾದ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಆಗ ಕರುಣಾಪೂರಿತನಾದ ಗುರುವು ತನ್ನ ವಿವೇಕದಿಂದ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ.
ದೇವಿಯು ಗಣೇಶನ ಅವಸಾನವನ್ನು ಅರಿತ ನಂತರ ಆಕೆಯು ಸಮಸ್ತ ಸೃಷ್ಟಿಯನ್ನು ನಾಶಮಾಡುವ ಬೆದರಿಕೆ ಹಾಕಿದಳು. ಯಾವಾಗ ಅಹಂಕಾರವು ಸಾಯುತ್ತದೆಯೋ ಆಗ ಆತ್ಮವು ತನ್ನ ತಾತ್ಕಾಲಿಕ ವಾಹನವಾದ ದೇಹದ ಮೇಲಿನ ಮೋಹವನ್ನು ತೊರೆಯಲು ಉತ್ಸುಕವಾಗಿ ಪರಮಾತ್ಮನೊಂದಿಗೆ ಲೀನವಾಗಲು ಉದ್ಯುಕ್ತವಾಗುತ್ತದೆ. ಭೌತಿಕ ಪ್ರಪಂಚವನ್ನು ಇಲ್ಲಿ ದೇವಿಯು ಪ್ರತಿನಿಧಿಸುತ್ತಾಳೆ. ಅನಿತ್ಯವಾದ ಮತ್ತು ಮಾರ್ಪಾಡು ಹೊಂದುವ ಈ ಸೃಷ್ಟಿಯು ದೇವಿಯ ಒಂದು ರೂಪವಾಗಿದ್ದು ದೇಹವು ಅದಕ್ಕೆ ಸೇರಿದ್ದಾಗಿದೆ. ನಿತ್ಯ ಅಥವಾ ಶಾಶ್ವತವಾದುದು ಮತ್ತು ಬದಲಾವಣೆ ಹೊಂದದೇ ಇರುವುದು ಶಿವನಾಗಿದ್ದು, ಆತ್ಮವು ಅವನಿಗೆ ಸಂಬಂಧಿಸಿದ್ದಾಗಿದೆ. ಯಾವಾಗ, ಅಹಂಕಾರವು ನಾಶವಾಗುತ್ತದೆಯೋ ಆಗ ಅಹಂಕಾರದ ಮೇಲೆ ಅವಲಂಭಿತವಾಗಿರುವ ಈ ಬಾಹ್ಯ ಪ್ರಪಂಚವು ಅದರೊಂದಿಗೆ ಲಯವಾಗುತ್ತದೆ. ದೇವಿಯ ಸ್ವರೂಪವಾದ ಈ ಪ್ರಪಂಚದ ರಹಸ್ಯಗಳನ್ನು ಅರಿಯ ಬಯಸಿದರೆ ಮೊದಲು ನಾವು ಗಣೇಶನ ಕೃಪೆಯನ್ನು ಪಡೆಯಬೇಕೆಂದು ಹೇಳಲಾಗುತ್ತದೆ.
ಮರುಜೀವವನ್ನು ಕೊಡುವುದಕ್ಕೆ ಮುಂಚೆ ಗಣೇಶನ ಮೊದಲಿನ ತಲೆಯ ಬದಲಾಗಿ ಆನೆಯ ತಲೆಯನ್ನು ಶಿವನು ಜೋಡಿಸುವ ಅರ್ಥವೇನೆಂದರೆ, ನಾವು ದೇಹವನ್ನು ತೊರೆಯುವ ಮೊದಲು ನಮ್ಮ ಸಂಕುಚಿತ ಅಹಂಕಾರ ಅಥವಾ ಪ್ರಜ್ಞೆಯನ್ನು ಬೃಹತ್ತಾದ ಅಥವಾ ಬ್ರಹ್ಮಾಂಡ ಪ್ರಜ್ಞೆಯಾಗಿ ಶಿವನು ಬದಾಲಾಯಿಸುತ್ತಾನೆ. ಇದರ ಅರ್ಥ ನಾವು ಹೆಚ್ಚು ಅಹಂಕಾರಿಗಳಾಗುತ್ತೇವೆಂದಲ್ಲ ಆದರೆ ಅದಕ್ಕೆ ತದ್ವಿರುದ್ಧವಾಗಿ ನಾವು ನಮ್ಮನ್ನು ಸಂಕುಚಿತ ಅಥವಾ ಪರಿಮಿತ ಶಕ್ತಿಯುಳ್ಳ ಆತ್ಮವಾಗಿ ಗುರುತಿಸಿಕೊಳ್ಳದೆ ದೊಡ್ಡದಾದ ಬ್ರಹ್ಮಾಂಡದೊಂದಿಗೆ ಗುರುತಿಸಿಕೊಳ್ಳುತ್ತೇವೆ. ಈ ವಿಧವಾಗಿ ನಮ್ಮ ಜೀವನವು ನವೀಕರಣಗೊಂಡು ಸೃಷ್ಟಿಗೆ ನಿಜವಾದ ಪ್ರಯೋಜಕರಾಗುತ್ತೇವೆ. ಆಗ ಅಹಂಕಾರವು ಕೇವಲ ಕ್ರಿಯಾತ್ಮಕ ಆತ್ಮ ಪ್ರಜ್ಞೆಯಾಗಿ ಉಳಿಯುತ್ತದೆ; ಕೃಷ್ಣ ಮತ್ತು ಭಗವಾನ್ ಬುದ್ಧರು ಉಳಿಸಿಕೊಂಡಂತೆ. ಮುಕ್ತವಾದ ಆತ್ಮ ಪ್ರಜ್ಞೆಯನ್ನು ಒಂದು ತೆಳುವಾದ ದಾರದಿಂದ ಕಟ್ಟಿ ಹಾಕಿದಂತೆ, ಈ ವಿಧವಾದ ಅಹಂಕಾರವು ಕೇವಲ ನಮ್ಮ ಒಳಿತಿಗಾಗಿ ಮಾತ್ರವೇ ಇರುತ್ತದೆ.
ಗಣೇಶನಿಗೆ ಎಲ್ಲಾ ಗಣಗಳ ಮೇಲೆ ಸರ್ವಾಧಿಪತ್ಯವನ್ನು ದಯಪಾಲಿಸಲಾಗಿದೆ. ಇಲ್ಲಿ ಗಣಗಳೆಂದರೆ ಅವು, ಈ ಸಮಸ್ತ ಸೃಷ್ಟಿಯಲ್ಲಿರುವ ಕ್ರಿಮಿ-ಕೀಟ, ಪ್ರಾಣಿ-ಪಕ್ಷಿಗಳಿಂದ ಹಿಡಿದು ದೇವತೆಗಳವರೆಗಿನ ಎಲ್ಲಾ ವಿಧವಾದ ಜೀವಿಗಳನ್ನು ಒಳಗೊಂಡಿವೆ. ಈ ಎಲ್ಲಾ ವಿಧವಾದ ಜೀವಿಗಳು ಈ ಸೃಷ್ಟಿಯ ಪಾಲನೆಯಲ್ಲಿ ಪಾತ್ರವನ್ನು ವಹಿಸುತ್ತವೆ; ಅವು ಬಿರುಗಾಳಿ, ಭೂಕಂಪ ಮೊದಲಾದ ಪ್ರಕೃತಿಯ ಶಕ್ತಿಗಳನ್ನೊಳಗೊಳ್ಳುವುದಲ್ಲದೆ, ಅಗ್ನಿ, ವಾಯು ಮೊದಲಾದ ಪಂಚಭೂತಗಳು ಮತ್ತು ದೇಹದ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಗಳನ್ನು ಸಹ ಒಳಗೊಂಡಿವೆ. ನಾವು ಗಣಗಳನ್ನು ಗೌರವಿಸದೇ ಇದ್ದರೆ, ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ಮಾನ್ಯ ಮಾಡಲ್ಪಡದು, ಹಾಗಾಗಿ ಅದು ಒಂದು ವಿಧವಾದ ಕಳ್ಳತನವೇ ಆಗುತ್ತದೆ. ಆದ್ದರಿಂದ ಪ್ರತಿಯೊಂದು ಗಣವನ್ನೂ ಒಲಿಸಿಕೊಂಡು ಅವುಗಳ ಆಶೀರ್ವಾದವನ್ನು ಪಡೆಯುವ ಬದಲು ನಾವು ಅವುಗಳ ಒಡೆಯನಾದ ಗಣೇಶನಿಗೆ ತಲೆಬಾಗುತ್ತೇವೆ. ಅವನ ಕೃಪೆಯನ್ನು ಹೊಂದುವುದರ ಮೂಲಕ ನಾವು ಎಲ್ಲಾ ಗಣಗಳ ಕೃಪೆಯನ್ನು ಪಡೆದಂತಾಗುತ್ತದೆ. ಗಣೇಶನು ನಮಗೆ ಒದಗಬಹುದಾದ ಎಲ್ಲಾ ವಿಧವಾದ ಅಡಚಣೆ ಅಥವಾ ವಿಘ್ನಗಳನ್ನು ನಿವಾರಿಸಿ ನಮ್ಮ ಸಕಲ ಕಾರ್ಯಗಳು ಯಶಸ್ವಿಯಾಗುವಂತೆ ಮಾಡುತ್ತಾನೆ.
ಶ್ರೀ ಗಣೇಶನ ಮಹಿಮೆಯು ಇಂಥಹ ಮಹತ್ವವುಳ್ಳದ್ದಾಗಿದೆ! ಜಯ ಗಣೇಶ!
ಇಂಗ್ಲೀಷ್ ಮೂಲ: Lord Ganesha: his birth story, symbolism meaning and practice ಅದರ ಕೊಂಡಿಗಾಗಿ ಇಲ್ಲಿ ಚಿಟುಕಿಸಿ http://www.amritapuri.org/3714/ganesha.aum . ಈ ಕೊಂಡಿಯನ್ನು ಲೇಖನವೊಂದಕ್ಕೆ ಪ್ರತಿಕ್ರಿಯೆಯಾಗಿ ಈ ಹಿಂದೆ ಸಂಪದಿಗ ಮಿತ್ರರಾದ ಸತೀಶ್ ಅವರು ಒದಗಿಸಿದ್ದರು.
ವಿ.ಸೂ.: ಮೂಲ ಲೇಖಕರು ಪಾರ್ವತಿಯು ತನ್ನ ಮೈಯಿಗೆ ಲೇಪಿಸಿ ಕೊಂಡಿದ್ದ ಅರಿಶಿಣದ ಮುದ್ದೆಯಿಂದ ಬಾಲ ಗಣಪನನ್ನು ಸೃಷ್ಟಿಸಿದಳು ಎಂದು ಬರೆದಿದ್ದಾರೆ ಮತ್ತು ವಿವರಣೆಯನ್ನು ಕೊಡುವಾಗ ಹಳದಿ ಬಣ್ಣವು ಮೂಲಾಧಾರ ಚಕ್ರದೊಂದಿಗೆ ತಳಕು ಹಾಕಲ್ಪಟ್ಟಿರುವುದರಿಂದ ಅದು ಅರಿಶಿಣವೆಂದು ಅಭಿಪ್ರಾಯ ಪಟ್ಟಿದ್ದಾರೆ. ಪಾರ್ವತಿಯು ತನ್ನ ದೇಹಕ್ಕೆ ಲೇಪಿಸಿಕೊಂಡಿದ್ದ ಗಂಧದಿಂದ ಬಾಲ ಗಣೇಶನನ್ನು ಸೃಷ್ಟಿಸಿದಳು ಎನ್ನುವ ಕಥೆ ಆಂಧ್ರ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಆದರೆ ನಮ್ಮಲ್ಲಿ ಪ್ರಚಲಿತವಿರುವಂತೆ ಪಾರ್ವತಿಯು ತನ್ನ ಮೈಯ ಮಣ್ಣಿನ ಕೊಳೆಯಿಂದ ಗಣಪತಿಯನ್ನು ಸೃಷ್ಟಿಸಿದಳು ಎನ್ನುವುದು ಸರಿಯಾಗಿದೆ ಏಕೆಂದರೆ ಮೂಲಾಧಾರ ಚಕ್ರವು ಪೃಥಿವೀ ತತ್ತ್ವವನ್ನು ಪ್ರತಿನಿಧಿಸುವುದರಿಂದ ನಮ್ಮಲ್ಲಿ ಪ್ರಚಲಿತವಿರುವ ಕಥೆಯ ವರಸೆಯೇ ಸರಿಯೆಂದು ಅದರಂತೆ ಈ ಲೇಖನದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿದ್ದೇನೆ.
ಚಿತ್ರಕೃಪೆ: ಮುಖಹೊತ್ತುಗೆಯ ಮಿತ್ರನೋರ್ವನ ಖಾತೆಯಿಂದ ಹಂಚಿಕೊಂಡದ್ದು.
Comments
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಲೇಖನ ಚಿಕ್ಕದಾಗಿ ಚೊಕ್ಕವಾಗಿ ಚೆನ್ನಾಗಿದೆ !
In reply to ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ by partha1059
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಧನ್ಯವಾದಗಳು, ಪಾರ್ಥರೆ.
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಶ್ರೀಧರರೆ ನಮಸ್ಕಾರ ಮತ್ತು ಗೌರಿ, ಗಣೇಶ ಹಬ್ಬದ ಶುಭಾಶಯಗಳು. ಮೂಲ ಕಥೆ ಮತ್ತದರ ವಿಭಿನ್ನ ಅಂತರಾರ್ಥ ವಿವರಣೆಯೆರಡು ಚೆನ್ನಾಗಿದೆ. ಸುಮಾರು ದಿನಗಳ ನಂತರ ಮತ್ತೆ ನಿಮ್ಮನ್ನು ಇಲ್ಲಿ ಮತ್ತೆ ನೋಡುತ್ತಿರುವುದು - ಅದೂ ಹಬ್ಬದ ದಿನವೆ - ಇನ್ನೂ ಚೆನ್ನಾಗಿದೆ :-)
In reply to ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ by nageshamysore
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ನಿಮ್ಮ ಮೆಚ್ಚುಗೆ ಮತ್ತು ಅಭಿಪ್ರಾಯಗಳಿಗೆ ಧನ್ಯವಾದಗಳು, ನಿಮಗೂ ಸಹ ಗೌರಿ-ಗಣೇಶ ಮತ್ತು ಋಷಿ ಪಂಚಮಿಯ ಶುಭಾಶಯಗಳು, ನಾಗೇಶರೆ. ನಿಮ್ಮ ಬಹಳಷ್ಟು ಲೇಖನಗಳನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ ಆದರೂ ಅದೇಕೋ ಗೊತ್ತಿಲ್ಲ ಸುಮಾರು ದಿನಗಳಿಂದ ನನಗೆ ಸಂಪದದ ಕಡೆ ತಲೆ ಹಾಕಲಾಗಿರಲಿಲ್ಲ. ಈ ಲೇಖನವನ್ನು ಸಂಪದದಲ್ಲಿಯೇ ಪ್ರಕಟಿಸಿದರೆ ಒಳ್ಳೆಯದೆನ್ನುವ ಆಲೋಚನೆ ಮೂಡಿದ್ದರಿಂದ ಮತ್ತೆ ಸಂಪದಕ್ಕೆ ಬರುವಂತಾಯಿತು.
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ನಮಸ್ಕಾರಗಳು ಸರ್,
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.\
ಗಣೇಶ ಚತುರ್ಥಿಯ ಹಾರ್ದಿಕ ಶುಭಾಷಯಗಳು.
ವಂದನೆಗಳು.
In reply to ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ by ravindra n angadi
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಸರ್, ಗಣೇಶನ ಕಥೆಯ ನಿಜವಾದ ಹಿನ್ನಲೆ ಎಲ್ಲರಿಗೂ ಮುಟ್ಟಬೇಕೆನ್ನುವ ಹಂಬಲದಿಂದ ಈ ಲೇಖನದ ಅನುವಾದವನ್ನು ಕೈಗೊಂಡಿದ್ದೆ. ನಿಮ್ಮಂತಹ ಓದುಗರಿಂದ ಮೆಚ್ಚುಗೆ ವ್ಯಕ್ತವಾಗಿರುವುದಕ್ಕೆ ಧನ್ಯತೆಯ ಭಾವವುಂಟಾಗಿದೆ. ನಿಮಗೂ ಸಹ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ಬಹಳ ದಿನಗಳ ಮೇಲೆ ನೀವು ಸಂಪದಕ್ಕೆ ಭೇಟಿ ಕೊಡಲು ಕಾರಣನಾದ ಗಣಪತಿಗೆ ವಂದನೆಗಳು. ನಿಮಗೂ ಶುಭಾಶಯಗಳು. ಆಚರಣೆಯೊಂದಿಗೆ ವಿಚಾರಕ್ಕೂ ಮಹತ್ವ ಕೊಡಬೇಕಾದುದು ಸೂಕ್ತವಾಗಿದೆ. ನಿಮ್ಮ ವಿಚಾರ ಮನನೀಯವಾಗಿದೆ.
In reply to ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ by kavinagaraj
ಉ: ಗಣೇಶನ ಕಥೆ, ಅದರ ಸಂಕೇತ ಮತ್ತು ಆಚರಣೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಕವಿಗಳೆ.