ಗತ ಕಾಲದ ಕನ್ನಡ ಲೇಖನ ಮಾಲಿಕೆಯ ಮರುಪ್ರಕಟನೆ

ಗತ ಕಾಲದ ಕನ್ನಡ ಲೇಖನ ಮಾಲಿಕೆಯ ಮರುಪ್ರಕಟನೆ

ಬಾಲ ಸೇರಿಸಿ ಬದಲಾವಣೆ !

ಸರ್, ಸಂಪಾದಕರಿಗೆ ಬಾಲ ಬೇಡವಾ ? ಎಂಬ ಪ್ರಶ್ನೆ ಬಹಳ ಹಿಂದೊಮ್ಮೆ ನವಭಾರತ ಪತ್ರಿಕೆಯ ನೌಕರಿಯಲ್ಲಿದ್ದಾಗ ಎದುರಿಸಿದ್ದು.

ಈಗ ನಾಲ್ಕು ದಿನಗಳ ಮೊದಲು `ತ್ರಿಪಾಠಿ'ಯವರ ಜೊತೆಗೆ ಹರಟೆ ಹೊಡೆಯತ್ತಿದ್ದಾಗ ನೆನಪಿಗೆ ಬಂತು.
ಆ ನೆನಪಿಗೆ ಸಂದರ್ಭ ಒದಗಿಸಿದವರು ``ಮಿಸ್ಟರ್ ಪ.ಗೋ. ಇಂಗ್ಲಿಷ್ನಲ್ಲಿ ಗ್ರಾಮರ್ ಅಂತ ಇರೋ ಹಾಗೆ ನಮ್ಮ ಕನ್ನಡದಲ್ಲಿ ಏನೂ ಇಲ್ವಾ ?'' ಎಂದಿದ್ದರು.

(ಗ್ರಾಮರ್ - ವ್ಯಾಕರಣಗಳ ಬಗ್ಗೆ ಪ್ರಶ್ನೆಯನ್ನು ನಿಜವಾಗಿ ಕೇಳಬೇಕಾಗಿದ್ದ ಪಂಡಿತರ ಬದಲಿಗೆ ಇವರು ಯಾಕೆ ಕೇಳುತ್ತಿದ್ದಾರೆ ? ಬಹುಶಃ ಅವರ ಎಂದಿನ ಅಭ್ಯಾಸದಂತೆ `ತಿಳುಕೊಳ್ಬೇಕೂ ಅಂತ' ಕೇಳುತ್ತಿರಬೇಕು)

``ಇಲ್ಲದೆ ಏನು ತ್ರಿಪಾಠಿ ಸಾಹೇಬರೇ, ಗ್ರಾಮರ್ ಅಂದರೆ ವ್ಯಾಕರಣ ಅಲ್ವಾ? ಯಾಕೆ ಕೇಳಿದ್ರಿ?'' ಅವರ ಒಂದು ಪ್ರಶ್ನೆಗೆ ಎರಡು ಮರುಪ್ರಶ್ನೆ ಹಾಕಿದೆ.

`ಹೌದಲ್ವಾ, ಭಾಷೆಯ ಯೂಸಿಗೆ ಇಂಪೋಸ್ ಮಾಡಿದ ರೂಲ್ಸಿಗೇ ಕನ್ನಡದಲ್ಲಿ ವ್ಯಾಕರಣ ಅಂತ ಹೇಳ್ತಾರೆ...... ಈಗ ನೆನಪಾಯಿತು. ಆದ್ರೆ ಅದೂ...... ಮಾತಿಗಿಂತಲೂ ಮುಖ್ಯವಾಗಿ ಬರಹಕ್ಕಲ್ವಾ ಬೇಕಾಗೋದೂ ?'

- ಹೌದು ಸ್ವಾಮೀ, ಯಾವ ನಿಯಮವಾದರೂ ಹಾಗೇ. ಎಲ್ಲರೂ ಅವುಗಳನ್ನು ತಿಳಿದುಕೊಂಡು - ಎಲ್ಲರಿಗೂ ತಿಳಿಯುವ - ಬರಹದಲ್ಲಿ ಉಪಯೋಗಿಸಿದ್ರೆ ನಿಯಮಕ್ಕೊಂದು ಬೆಲೆ ಬರ್ತದೆ. ಅಂಥಾ ನಿಯಮಗಳು ಇದ್ದವು. ಇವೆ, ಇರುತ್ತವೆ, ನೋಡಿ, ಈಗ ನಾನು ಮಾತನಾಡಿದ್ದೂ -ಭೂತ- ವರ್ತಮಾನ- ಭವಿಷ್ಯತ್ ಎನ್ನುವ ಕಾಲನಿಯಮದ ಪ್ರಕಾರ ಅಂತ ಇಟ್ಟುಕೊಳ್ಳಿ. ಇಂಥಾ ವಿವರ ಎಲ್ಲಾ ನೆನಪಿಟ್ಟುಕೊಳ್ಳಲಿಕ್ಕೆ ಮನಸ್ಸಿಲ್ಲದವರು ಅಥವಾ ಸಾಧ್ಯವಿಲ್ಲದವರು, ಕಾಲನಿಯಮವನ್ನು ಬರಹದಲ್ಲಿ ಅನುಸರಿಸದೆ ಇರುವುದೂ ಇದೆ.

ಅಂಥವರಿಗಾಗಿಯೇ ಹುಟ್ಟಿಕೊಂಡ ಅಥವಾ ಅವರೇ ಹುಟ್ಟಿಸಿಕೊಂಡ ಇನ್ನೊಂದು ನಿಯಮದ ಹ್ರಸ್ವವಿಧಾನ ಒಂದರ ಕಥೆ ಕೇಳಿ.

ವ್ಯಾಕರಣದಲ್ಲಿ ವ್ಯಂಜನಾಕ್ಷರಗಳನ್ನು ಅಲ್ಪಪ್ರಾಣ - ಮಹಾಪ್ರಾಣ ಅಂತ ವಿಂಗಡಿಸುತ್ತಾರಂತೆ, (ಸಂಪಾದಕರಿಗೆ ಬಾಲ ಬೇಡವೆ ? ಎಂಬ ಪ್ರಶ್ನೆಯ ಪ್ರಕರಣ ಮತ್ತು ಆ ಪ್ರಶ್ನೆ ಎತ್ತಿದವರ ಸಮಸ್ಯೆಯ ಹಿನ್ನೆಲೆಗಳೆಲ್ಲ ಆ ಹೊತ್ತಿಗೆ ನೆನಪಿಗೆ ಬಂದಿದ್ದವು.) ಅಷ್ಟೆಲ್ಲವನ್ನೂ ಉಚ್ಚರಿಸಿ ವಿವರಿಸಿ ಮನದಟ್ಟು ಮಾಡುವಷ್ಟು ತಾಳ್ಮೆ - ಅಥವಾ ಮನಸ್ಸು - ಇಲ್ಲದಿದ್ದ ಉಪಾಧ್ಯಾಯರಿಂದ ಶಿಕ್ಷಣ ಪಡೆದ ಒಬ್ಬರ ಉದಾಹರಣೆ, ಇದು:

- ಹಿಂದೆ, ನಾನು ನವಭಾರತದಲ್ಲಿ ಇದ್ದಾಗ ಒಮ್ಮೆ ``ಸಂಪಾದಕರಿಗೆ ಬಾಲ ಬೇಡವಾ ಸರ್ ?'' ಎಂದು ಒಬ್ಬರು ಪ್ರೂಫ್ ರೀಡರ್ ಕೇಳಿದ್ದರು. ಅವರ ಹೆಸರು ರಘುರಾಮ ಅಂತ. ಅವರ ಉಪಾಧ್ಯಾಯರು ಅವರಿಗೆ ``ಅಲ್ಪಪ್ರಾಣದ ಅಕ್ಷರವನ್ನು ಮಹಾಪ್ರಾಣವಾಗಿ ಬದಲಾಯಿಸಬೇಕಾದರೆ ಅದಕ್ಕೊಂದು `ಬಾಲ' ಕೊಟ್ಟರಾಯಿತು. ನಿನ್ನ ಹೆಸರಿನಲ್ಲಿ ಇದೆಯಲ್ಲಾ ಅಂಥಾದ್ದೇ ಒಂದು `ದ'ಕ್ಕೆ ಬಾಲ ಕೊಟ್ಟರೆ ಅದು `ಧ' ಆಗುತ್ತದೆ'' ಎಂದು ಸರಳವಾಗಿ ವಿವರಿಸಿದ್ದರಂತೆ.

ಆ ಸರಳ ವಿವರಣೆ ಅವರ ಎಳೆಯ ಮನಸ್ಸಿಗೆ ನಾಟಿತು. ದ-ಧ ಅಕ್ಷರಗಳು ನೆನಪಿನಲ್ಲಿ ಗಟ್ಟಿಯಾಗಿ ಉಳಿದವು. ಕ್ರಮೇಣ, ಅವೆರಡರ ಒಳಗಿನ ವ್ಯತ್ಯಾಸದ ಬಗ್ಗೆ ಗೊಂದಲವೂ ಹುಟ್ಟಿಕೊಂಡಿತು. ಬಾಲ ಬೇಕಾದ `ಧ' ಯಾವುದು? ಬೇಧ ಅಥವಾ ಭೇದ ? ದರ್ಮ -ಧರ್ಮ,ಭದ್ರ -ಭಧ್ರ ?? ಇಂಥವುಗಳ ಜೊತೆಗೆ ಆಗಾಗ ಅಲ್ಲಲ್ಲಿ ಕಾಣುತ್ತಿದ್ದ ಜನಾರ್ದನರ ಹೆಸರುಗಳಿಗೆ ಬಾಲ ಸೇರಿಕೊಂಡು ಅವು `ಜನಾರ್ಧನ'ರಾದ ನಿದರ್ಶನಗಳೂ ಗೊಂದಲವನ್ನು ಹೆಚ್ಚಿಸಿದವು. ಬಹಳಷ್ಟು ಯೋಚಿಸಿ ಅವರು `ಬಹುಶಃ ಹೆಚ್ಚಿನ ಎಲ್ಲ ದ- ಗಳಿಗೂ ಬಾಲ ಬೇಕಾಗಬಹುದು' ಎಂದು ಭಾವಿಸಿದ ಕಾರಣ ಸಂಪಾದಕರಿಗೆ ಬಾಲದ ಅಗತ್ಯವಿಲ್ಲವೆ ? ಎಂಬ ಪ್ರಶ್ನೆ ಎತ್ತಿದ್ದರು.

ರಘುರಾಮರವರು ಕಿಡಿಗೇಡಿಯಲ್ಲ. ಅವರ ಸಮಸ್ಯೆ ಪ್ರಾಮಾಣಿಕವಾದುದು ಎಂದು ತಿಳಿದಿತ್ತು. ಆದ್ದರಿಂದ, ಸಂಪಾದಕ ಶಬ್ದದಲ್ಲಿ ಇರುವ `ದ'ಕ್ಕೆ ಬಾಲದ ಅಗತ್ಯವಿಲ್ಲ ಎಂದು ಹಿರಿಯರೊಬ್ಬರು ಅವರಿಗೆ ತಿಳಿಸಿದ ಮೇಲೆ ``ಸ್ವಾಮೀ ರಘುರಾಮರೇ. ಸಂಪಾದಕರಿಗೆ ಬೇರೆಯವರು ಬಾಲ ಬಿಚ್ಚದ ಹಾಗೆ ನೋಡಿಕೊಳ್ಳುವಷ್ಟು ಸ್ವಂತ ಶಕ್ತಿ ಇದೆ. ಅವರ ಸ್ವಂತಕ್ಕೆ ಆ ಬಾಲ ಬೇಕಾಗಿಲ್ಲ'' ಎಂದು ನಾನೂ ಮಾತು ಸೇರಿಸಿದೆ.

ಆ ನಂತರದ ವರ್ಷಗಳಲ್ಲಿ ಒಮ್ಮೆ ಎದುರಾದ್ದು ಇನ್ನೊಂದು ರೀತಿಯ ಅಕ್ಷರಗಳಿಗೆ ಅಂಟಿರದ `ವಕ್ರಬಾಲ'ಗಳ ಸಮಸ್ಯೆ. ರ -ಒತ್ತು ಮತ್ತು ಋ ಒತ್ತುಗಳದ್ದು. ಆವ ಅಕ್ಷರಕ್ಕೆ ಯಾವ ಒತ್ತು ? ಶೃತಿಯನ್ನು ಶ್ರುತಿ ಎಂದು ಬರೆಯಬೇಕೊ ? ಶ್ರುತಿ ಮತ್ತೆ ಶೃತಿ ಎರಡರ ಅರ್ಥವೂ ಒಂದೆಯೋ ? ಗೃಹವನ್ನು ಗ್ರಹ ಅಂತ ಬರೆದರೆ ತಪ್ಪೇನು ?

ಅಂಥಾ ಪ್ರಶ್ನೆಗಳನ್ನು ಕೇಳುತ್ತಿದ್ದ ವ್ಯಕ್ತಿ `ಇನ್ನಿಲ್ಲ' ಹಾಗಾಗಿ ಹೆಸರು - ವಿವರ ಇಲ್ಲಿ ಬೇಡ.

ನಿಯಮಗಳನ್ನೂ ಅವುಗಳನ್ನು ಅನುಸರಿಸಿದರೆ ಆಗುವ ಅನುಕೂಲಗಳನ್ನೂ ತಿಳಿದುಕೊಳ್ಳುವಷ್ಟು ಬಿಡುವಿಲ್ಲದವರು `ನಾನು ಮಾಡಿದ್ದೇ ಸರಿ' ಎನ್ನುವ ಪ್ರವೃತ್ತಿ ಹಿಂದೆಯೂ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ, ಕೆಲಸದಲ್ಲಿರುವ ಅವಸರವೂ ಆ ಪ್ರವೃತ್ತಿಗೆ ಕೆಲವೊಮ್ಮೆ ಒತ್ತಾಸೆ ಕೊಡುತ್ತದೆ ( ಈ ಬರಹದ ಅಕ್ಷರ ಜೋಡಿಸುತ್ತಿರುವವರು ದಯಮಾಡಿ ಕ್ಷಮಿಸಿ ). ಇಂದಿನ ವೇಗದ ಯುಗದಲ್ಲಿ ಅದು ಮಹಾಪರಾಧವೇನೂ ಆಗುವುದಿಲ್ಲ.

ಭಾಷೆ ಒಂದು ಸಂವಹನದ ಮಾಧ್ಯಮ. ಅದು ಬದಲಾಗುತ್ತಲೇ ಇರುತ್ತದೆ. ಬಹುಶಃ ಬೆಳೆದೂ ಬೆಳೆಯುತ್ತದೆ. ಅಲ್ಲವೆ ತ್ರಿಪಾಠಿಜಿ ?

``ನೀವು ಹೇಳೋದು ಪ್ರೊಬೆಬ್ಲಿ ರಾಯಿಟ್'' ಎಂದು `ಪ್ಯೂರ್' ಕನ್ನಡದಲ್ಲಿ ಉತ್ತರಿಸಿ ತ್ರಿಪಾಠಿಯವರು ಎದ್ದು ಹೋದರು.
-------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೆಂಟನೇ ಅಂಕಣ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.

------
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6535.html

Rating
No votes yet