ಗಬಾಳ
ನಿಲ್ಲಲು ನೆಲೆಯಿಲ್ಲ, ಹೊಟ್ಟೆಗೆ ಊಟ ಸಿಗುವುದೋ ಇಲ್ಲವೋ ಗೊತ್ತಿಲ್ಲ, ಬದುಕಿಗೆ ಆಸರೆಯಿಲ್ಲ, ತನ್ನದೆಂದು ಹೇಳಿಕೊಳ್ಳುವ ಆಸ್ತಿಯಂತೂ ಮೊದಲೇ ಇಲ್ಲ. ಊರಲ್ಲಿರುವ ಎಲ್ಲಾ ಮನೆಗಳಿಗೆ ಭಿಕ್ಷೆಯ ಸವಾರಿ ಮುಗಿದರೆ, 'ಗಬಾಳ' (ದೈನಂದನ ಸಾಮಾಗ್ರಿಗಳ ಒಂದು ಗಂಟು) ಹೊತ್ತ ಈ ಜನರ ಎತ್ತಿನ ಗಾಡಿಯ ಸವಾರಿ ಮತ್ತೊಂದೂರಿಗೆ. ಅಲ್ಲೂ ಅದೇ ಕಥೆ. ಅಲೆಮಾರಿ ಬದುಕು. ಪ್ರತಿದಿನ 'ಕರುಣಾಮಯಿ'ಗಳು ಭಿಕ್ಷೆ ಕೊಟ್ಟರೆ ಊಟ, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ. ಹಸಿಯಾಗಿರಲಿ, ಬಿಸಿಯಾಗಿರಲಿ, ತಂಗಳವಾದರೂ ಪರವಾಗಿಲ್ಲ ಊಟ ಸಿಕ್ಕಿತಲ್ಲ! ಅದೇ ಮೃಷ್ಟಾನ್ನ. ಹಸಿವಿನ ಕ್ರೂರತೆಗೆ ಇದಕ್ಕಿಂತ ಹೃದಯವಿದ್ರಾವಕ ಕಥೆ ಬೇಕೆ? ಇವರು ಉಚಿತ ಭಿಕ್ಷುಕರಲ್ಲ. ತಮ್ಮಲ್ಲಿರುವ ಜಾನಪದ ಹಾಡುಗಳ ಪ್ರತಿಭಾಪ್ರದರ್ಶನ ಮಾಡಿದ ಮೇಲೆಯೇ ಕೈಚಾಚಿ 'ಏನಾದರೂ' ಕೊಡಿ ಎಂದು ಕೆಳುವುದು. ಕೊಡದಿದ್ದರೆ ನಿಂದಿಸುವ ಗುಣ ಇವರದಲ್ಲ. ಕೊಟ್ಟರೆ ಮಂದಹಾಸ, ಕೊಡದಿದ್ದರೆ, "ನಮ್ಮ 'ಅಮ್ಮ'ನವರು (ಅವರ ದೇವರು) ನಿಮ್ಮನ್ನು ಚನ್ನಾಗಿಟ್ಟಿರಲಿ" ಎಂಬ ಆಶೀರ್ವಾದ!
ಅವರಲ್ಲಿ ಕೆವರಿಗೆ ತಮ್ಮ ಉದ್ಯೊಗದ ಮೇಲೆ ಕಿಂತಿಷ್ಟು ಬೇಸರವಿಲ್ಲ, ಬದಲಾಗಿ ಅಭಿಮಾನ! ತಮ್ಮಲ್ಲಿರುವ ಜಾನಪದ ಕಲೆಯನ್ನು ಹಾಡಿ ಹಿಗ್ಗುವುದರಲ್ಲೇ ಅವರಿಗೆ ತೃಪ್ತಿ. ಬದುಕನ್ನು ಬೇರೊಬ್ಬ ಐಶಾರಮಿ ಮನುಶ್ಯನಿಗೆ ಹೋಲಿಸಿ ತಾವು ಅವನಂತಾಗಬೇಕೆಂಬ ಹಂಬಲ ಇವರಿಗಿಲ್ಲ. ಅವರ ಕಲೆ ಉಳಿದರೆ ಸಾಕು ಎನ್ನುವ ಹಂಬಲ. ಕಲೆ ಎಂದರೆ ಇವರಿಗೆ ದೇವರ ಸಮಾನ, ಅದರ ಬಗ್ಗೆ ಯಾರಾದರು ಅಸಭ್ಯವಾಗಿ ವರ್ತಿಸದರೆ ಇವರಿಗೆ ಕೋಪ. ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಲೆತಲಾಂತರದಿಂದ ಬಂದ ಆ ಜಾನಪದ ಸೊಗಡು ಗ್ರಾಮೀಣ ಬದುಕಿಗೆ ಹಿಡಿದ ಕೈಗನ್ನಡಿ. ಜಾನಪದ ಕಲಾಸಕ್ತರಿಗೆ ಇದು ಹಿರಿದು ಹಿಗ್ಗಿಸುವ ಕಲೆ. ಅವರಲ್ಲಿನ ಇನ್ನು ಕೆಲವು ಜನರಿಗೆ, ಈ ಧರ್ಮಸಂಕಟದಿಂದ ಹೊರಬಂದರೆ ಸಾಕೆನ್ನುವ ಗುರಿ. ಅವರ ಸಾಮಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೆನೆಸಿಕೊಂಡರೆ 'ಕರುಣೆಯಿರುವ' ಯಾವನೇ ಆದರೂ ಅವರ ಕಲೆಯ ರಸಾನುಭವವನ್ನು ಸವಿಯಲಾರ. ಕಲೆಯನ್ನು ಉಳಿಸಬೇಕೆಂಬ "ಅಂಧಕಾರ" ಅವರನ್ನು ನುಂಗಿ ನಿದ್ರಿಸುತ್ತಿದೆ. ಪ್ರಾಮುಖ್ಯತೆ ಯಾವುದಕ್ಕೆ? ಕಲೆಗೋ? ಬದುಕಿಗೋ? ಕಲೆಯೇ ಬದುಕೆಂಬ ಅವರ ನಂಬಿಕೆ ಬದಲಾಗಿ ನಮ್ಮ ನಿಮ್ಮಂತೆ ಹೊಸ ಬದುಕನ್ನು ಕಲ್ಪಿಸಿಕೊಳ್ಳುವ ಕಾಲ ಯಾವಾಗ ಬರುತ್ತೋ ಕಾಣೆ.
ದಾದಾಸಾಹೇಬ ಮಲ್ಹಾರಿ ಮೋರೆಯವರ ಇಂತಹದೇ ಒಂದು ಕಥೆಯನ್ನು "ಗಬಾಳ" ಎಂಬ ಪುಸ್ತಕದಲ್ಲಿ ಓದಿದ್ದ ನೆನಪು ('ಗಬಾಳ' - ಕನ್ನಡಕ್ಕೆ ದು. ನಿಂ. ಬೆಳಗಲಿ). ಆದರೆ ಪುಸ್ತಕದಲ್ಲಿ ಕಂಡಿದ್ದ ದುರಂತ ಬದುಕನ್ನು ನಿಜಜೀವನದಲ್ಲಿ ಈ ಜನರ ಮುಖಾಂತರ ಮತ್ತೆ ಕಂಡೆ. ಚಿತ್ರದಲ್ಲಿ ಎತ್ತಿನ ಗಾಡಿಯಲ್ಲಿರುವ ಎಲ್ಲ ರೀತಿಯ ಸಾಮಾನುಗಳನ್ನೇ ಗಬಾಳ ಎನ್ನುವರು. ಗ್ರಾಮೀಣ ಜನರಿಗೆ ಗಬಾಳ ಎಂಬ ಪದ ಹೊಸದೇನಲ್ಲ. ನಿಲ್ಲಲು ನೆಲೆಯಿಲ್ಲದೆ, ಹೊಟ್ಟೆಗೆ ಊಟವಿಲ್ಲದೆ, ಬದುಕಿಗೆ ಆಸರೆಯೇ ಇಲ್ಲದ ಒಬ್ಬ ವ್ಯಕ್ತಿ ಬೆಳೆದುಬಂದ ಕಥೆಯದು. ಎಂಥ ವ್ಯಕ್ತಿಯೇ ಆಗಿರಲಿ, 'ಗಬಾಳ' ಓದಿದರೆ ಮನಸ್ಸಿಗೆ ಸಿಡಿಲು ಬಡಿದಂತಹ ಅನುಭವವಾಗುತ್ತದೆ. ಸಖವಾಗಿರುವುದಿರಲಿ, ಬದುಕಿ ಉಳಿದರೆ ಸಾಕು ಅನಿಸುವ ಹಸಿವಿನ ಕ್ರೂರತೆಯ ಪ್ರತಿಬಿಂಬ ಅದರಲ್ಲಿದೆ, ಬದುಕಿನ ಅಸ್ಥಿರತೆಯ ಚಿತ್ರಣ ಅದರಲ್ಲಿದೆ. ನಿದರ್ಶನಕ್ಕೆ ಆ ಪುಸ್ತಕ ಒಂದು ಘಟನೆ ನೆನಪಿಗೆ ಬರುತ್ತದೆ. ದಾದಾಸಾಹೇಬ ಮತ್ತು ಅವರ ಕುಟುಂಬ 'ಗಬಾಳ'ದ ಜೊತೆಗೆ ಯಾವುದೋ ಹಳ್ಳಿಯಲ್ಲಿ ಬಿಡಾರ ಹೂಡಿರುತ್ತಾರೆ. ಮಳೆಯ ಆಕ್ರೋಶ ಪರಿಸ್ಥಿತಿಯನ್ನು ಕಂಗೆಡಿಸಿಬಿಡುತ್ತದೆ. ಹಸಿದ ದಾದಾಸಾಹೇಬರು ಮೊರು ನಾಲ್ಕು ದಿನಗಳ ಹಿಂದೆ 'ಭಿಕ್ಷೆ' ಬೇಡಿ ತಂದಿದ್ದ ರೊಟ್ಟಿ ತಿಂದು ಮಲಗಲು ಜಾಗವಿಲ್ಲದೆ ಒಂದು ಮೂಲೆಯಲ್ಲಿ ಗುಬ್ಬಚ್ಚಿಯಂತೆ ಕುಳಿತಿರುತ್ತಾರೆ. (ಹೋದಲ್ಲೆಲ್ಲಾ ಇವರು ಒಂದು ಸಣ್ಣ ಗುಡಿಸಲು ಹಾಕಿರುತ್ತಾರೆ). ಪಕ್ಕದಲ್ಲೆ ಕಟ್ಟಿದ್ದ ಒಂದು ಕುರಿ ದಾದಾಸಾಹೇಬರ ಕಂಬಳಿಯನ್ನು 'ಒದ್ದೆಮಾಡಿ' ಬಿಟ್ಟಿರುತ್ತದೆ. ಛಳಿಯಿಂದ ನಡುಗುತ್ತಿದ್ದ ದಾದಾಸಾಹೇಬರು ಅದನ್ನೇ ಹೊತ್ತುಕೊಂಡು "ನಮ್ಮ ಕುರಿ ಒದ್ದೆ ಮಾಡಿದ್ದ ಕಂಬಳಿ ಹೊತ್ತುಕೊಂಡಾಗ ಸ್ವಲ್ಪ ಬೆಚ್ಚಗಿನ ಅನುಭವವಾಗಿ, ಅಲ್ಲೆ ಮಲಗಿಕೊಂಡೆ" ಎಂದು ಹೇಳುತ್ತಾರೆ. "ಬೆಳಗಾದರೆ ಮತ್ತೆ ಭಿಕ್ಷೆಯ ಸವಾರಿ ಅನ್ನ ಹುಡುಕುವುದಕ್ಕೆ". ಇಂತಹ ಪರಿಸ್ಥಿತಿಯಲ್ಲೂ ದಾದಾಸಾಹೇಬರು ಯಾವ್ಯಾವ ಹಳ್ಳಿಗೆ ಹೋಗುತ್ತಾರೋ ಅಲ್ಲಿನ ಶಾಲೆಯಲ್ಲಿ ಪಾಠ ಪ್ರವಚನ ಮುಂದುವರಿಸಿಕೊಂಡೇ ಹೋಗುತ್ತಾರೆ. "ನಾನು ಕಲಿತಿಲ್ಲವಾದರೂ, ನನ್ನ ಮಗನಾದರೂ ಗಬಾಳದ ಸಹವಾಸ ಬಿಟ್ಟು ವಿದ್ಯಾವಂತನಾಗಿ ಸುಖವಾಗಿರಲಿ" ಎಂಬುದು ದಾದಾಸಾಹೇಬರ ತಂದೆಯ ಕನಸು. ಎಂತಹ ಕಠಿಣ ಪರಿಸ್ಥಿತಿ ಬಂದರೂ ದಾದಾಸಾಹೇಬರು ಓದುವುದನು ನಿಲ್ಲಿಸದೆ ವಿದ್ಯಾವಂತರಾಗಿ, ಮುಂದೆ PhD ಸಹ ಮಾಡಿದರು. ತಮ್ಮ ಕಥೆಯನ್ನು ಪುಸ್ತಕ ರೂಪದಲ್ಲಿ ಹೊರತಂದರು. ಅವರ ಪುಸ್ತಕಕ್ಕೆ 'ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಸಿಕ್ಕಿತು! 'ಗಬಾಳ'ದಂತಹ ಜಗತ್ತು ಇನ್ನೂ ಮೂಲಭೂತ ಅವಶ್ಯಕತೆಗಳಲ್ಲೊಂದಾದ 'ಆಹಾರ' ಹುಡುಕುವುದರಲ್ಲೇ ಸೀಮಿತವಾಗಿದೆ. ಪರಿಸ್ಥಿತಿ ಹೀಗಿರುವಾಗ ಆದಿಮಾನವನ ನಾಗರಿಕತೆಗೂ ನಮಗೂ ಏನು ವ್ಯತ್ಯಾಸ? ಸೃಷ್ಟಿಕರ್ತನಿಗೆ ಸಮಾತೆಯ ಕಲ್ಪನೆಯೇ ಇಲ್ಲವೇ?
ನಾವು ಕಲ್ಪಿಸಿಕೊಂಡ ಜಗತ್ತು ನಿಜವಾದ ಜಗತ್ತಿಗಿಂದ ಎಷ್ಟೋ ಪಾಲು ಚಿಕ್ಕದು! ನಮ್ಮ ಕಲ್ಪನೆಗೆ ಸೀಮಿತವಾಗಿರುವ ನಮ್ಮ ಜಗತ್ತು, ನಮ್ಮಿಂದಾಚೆಯಿರುವವರ ಬಗ್ಗೆ ಕಿಂಚಿತ್ತೂ ಚಿಂತಿಸಲಾರದೆ? ಕೆಲವರಿಗೆ ತಮ್ಮ ಮನೆ, ತಮ್ಮ ಊರು, ಹೆಚ್ಚೆಂದರೆ ಹತ್ತಿರದ ಪಟ್ಟಣವೇ ತಮಗೆ ತಿಳಿದ ಜಗತ್ತು, ಇನ್ನು ಕೆಲವರಿಗೆ ದೇಶದೇಶಾಂತರ ಸುತ್ತಿದ ಅನುಭವ. ನಮ್ಮ ಜನಜೀವನವನ್ನು ಇನ್ನೊಂದು ದೇಶದ ಜನಜೀವನದೊಂದಿಗೆ ಹೋಲಿಸ ಅವರಂತೆ ನಾವೂ ಇರಬೇಕೆಂಬ ಚಪಲ. ಮಹಾನಗರದಲ್ಲಿರುವವರಿಗಂತೂ, ಪಾಶ್ಚಿಮಾತ್ಯರ ಜೀವನವೇ ಜೀವಂತ ಸ್ವರ್ಗ! ಯಾಕೆ ಇಂತಹ ಅಸಮಾನತೆ? ಒಬ್ಬ ಹೊಟ್ಟೆಗಿಲ್ಲದೆ ಬದುಕಿಗಾಗಿ ಹೋರಾಡುತ್ತಿದ್ದರೆ ಮತ್ತೊಂದು ಕಡೆ ಇನ್ನೊಬ್ಬ ತಿಂದು ತೇಗಿ ಉಳಿದ ಹಣವನ್ನು ಹೇಗೆ ಖರ್ಚು ಮಾಡಲಿ ಎಂದು ಎಣಿಸುತ್ತಿರುತ್ತಾನೆ! ಸಮಾಜದಲ್ಲಿ ಸಮಾನತೆಯನ್ನು ಕಾಣುವ ಭಾಗ್ಯ ನಮಗಿಲ್ಲವೇ? ಹಂಚಿಕೊಂಡು ತಿನ್ನುವ ಮಹದಾನಂದ ನಮ್ಮಲ್ಲೆರಲ್ಲೂ ಬರುವುದು ಯಾವಾಗ? "ಈಸಕ್ಕಿಯಾಸೆ ನಿಮಗೇಕೆ?" ಒಂದು ಪ್ರಶ್ನಿಸಿದ್ದ ಆಯ್ದಕ್ಕಿ ಲಕ್ಕಮ್ಮನ ನೆನಪು ಬರುತ್ತದೆ. "ನಮಗೆ ಅಗತ್ಯವಾದಷ್ಟನ್ನು ಮಾತ್ರ ನಾವು ತೆಗೆದುಕೊಂಡರೆ ಲೋಕದಲ್ಲಿ ಯಾರಿಗೂ ಯಾವ ಅವಶ್ಯಕತೆಗಳಿಗೂ ಕೊರತೆ ಬರುವುದಿಲ್ಲ. ಆದರೆ ಅತಿ ಆಸೆಯಿಂದ ಹೆಚ್ಚಾಗಿ ಶೇಖರಿಸಿಟ್ಟುಕೊಂಡರೆ ಇತರರಿಂದ ಅದನ್ನು ಕಸಿದುಕೊಂಡಂತಾಗುತ್ತದೆ. ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ; ವಿರಸವೇರ್ಪಡುತ್ತದೆ" (page 344, ಕರ್ನಾಟಕ ಸಂಸೃತಿ ಸಮೀಕ್ಷೆ, ಡಾ. ತಿಪ್ಪೆರುದ್ರಸ್ವಾಮಿ) ಎಂಬ ಅವಳ ಅಭಿಪ್ರಾಯ ಇಂದಿಗೂ ಅಕ್ಷರಶಃ ಅತ್ಯಧುನಿಕ ವಿಚಾರವಾಗಿ ಕಾಣುತ್ತಿದೆ.
***
'ಗಬಾಳ'ದ ಜನರನ್ನು ಭೆಟ್ಟಿಯಾದಾಗ ತೆಗೆದದ್ದ ಕೆಲವು ಚಿತ್ರಗಳನ್ನು ಇಲ್ಲಿ post ಮಾಡಿದ್ದೇನೆ. ಯಾವುದೇ ರೀತಿಯ ಸಲಹೆ/ವಿಚಾರ/ಪ್ರತಿಕ್ರಿಯೆ ಗಳಿದ್ದರೆ ತಕ್ಷಣ ಒಂದು comment ಸೇರಿಸಿ!