ಗಾಂಧಿಜೀ ಉಪ್ಪು ಬಿಟ್ಟರೆ, ಅವರು...?!
ಗಾಂಧಿಜೀ ಒಂದು ಹೊತ್ತು ಉಪವಾಸವಿದ್ದರೆ ಅವರದ್ದು ಒಂದು ದಿನ ಉಪವಾಸ! ಗಾಂಧಿ ನೀರು ಬಿಟ್ಟರೆ ಇವರು ಅನ್ನವನ್ನೂ ಬಿಟ್ಟರೂ! ಗಾಂಧಿ ಉಪ್ಪು ತ್ಯಜಿಸಿದರೆ ಇವರು ಅದರ ಜೊತೆ ಹುಳಿ ಖಾರಗಳನ್ನು ತ್ಯಜಿಸಿದರು!ಹೌದು ಅವರೆಲ್ಲಾ ಪಕ್ಕಾ ಗಾಂಧಿವಾದಿಗಳು! ಸ್ವಾಂತಂತ್ರ್ಯಕೋಸ್ಕರ ಗಾಂಧಿ ಜೊತೆಗೆ ಅಲೆದವರು......ಹೀಗೆ ಗಾಂಧಿವಾದವನ್ನು ಲೇಪಿಸಿಕೊಂಡು ಬದುಕಿದವರ ಕಥೆಯನ್ನು ವಿವರಿಸುವ ಆ ಕಾದಂಬರಿಯ ಹೆಸರು "ನಾವು ಕಟ್ಟಿದ ಸ್ವರ್ಗ" ಅಂತಾ. ಶಿವರಾಮ ಕಾರಂತರ ಆಕರ್ಷಕವಾದೊಂದು ಶೈಲಿಯಲ್ಲಿ ಮೂಡಿಬಂದಿರುವ ಈ ಕಾದಂಬರಿ ಒಂತರಹ ವಿಡಂಬನಾತ್ಮಕ ಕೃತಿ ಅಂತಾನೇ ಹೇಳಬಹುದು!
"ಜನನಿಂ ಜನ್ಮಭುಮಿಶ್ಚ ಸ್ವರ್ಗಾದಪಿ ಗರಿಯಸೆ" ಅನ್ನುವ ಈ ವಾಕ್ಯ ಕಂಡಾಗಲೆಲ್ಲಾ ನನಗೆ ನನ್ನ ಚಂಪಾಲಪುರದ ನೆನಪಾಗತ್ತೆ ಅನ್ನುತ್ತಲೆ ಆರಂಭವಾಗತ್ತೆ ಈ ಕಾದಂಬರಿ. ದೇವೇಂದ್ರಪ್ಪನೆಂಬ ಗಾಂಧಿಜೀಯ ಅನುನಾಯಿ ಅಲ್ಲಲ್ಲ ಅನುಯಾಯಿ ನಿರ್ಮಿಸುವ ಸ್ವರ್ಗವೇ ಆಧುನಿಕ ಚಂಪಲಾಪುರ. ಅದು ಅಂತಿಂತಹ ಸ್ವರ್ಗವಲ್ಲ! ಊರು ಬಿಟ್ಟು ಹೋದವರು ಮರಳಿ ಊರಿಗೆ ಬಂದರೇ ಊರೇ ಗುರುತು ಸಿಗದಂತೆ ನಿರ್ಮಾಣಗೊಂಡಿರುವ ಸ್ವರ್ಗ! ಈ ದೇವೆಂದ್ರಪ್ಪನಾದರೋ ಸ್ವಾತಂತ್ರ್ಯಸಂಗ್ರಾಮದಲ್ಲಿ ಗಾಂಧಿಜೀ ಜೊತೆ ಊರೂರು ಅಲೆದು ಕಾಲು ಸವೆಸಿಕೊಂಡವ! ಗಾಂಧಿ ಉಪ್ಪು ಬಿಟ್ಟಾಗ ಇವ ಖಾರ, ಹುಳಿ, ಸಿಹಿ ಎಲ್ಲವನ್ನೂ ಬಿಟ್ಟು ಕುಳಿತವ. ಅರ್ಥಾತ್ ಅಷ್ಟು ಗಾಂಧಿಜೀಯನ್ನು ಅನುಸರಿಸುತ್ತಿದ್ದವನು.! ಕೊನೆಗೆ ಗಾಂಧಿ ಕನಸಾಗಿದ್ದ ರಾಮರಾಜ್ಯ ನಿರ್ಮಿಸಲಿಕೋಸ್ಕರವೇ ರಾಜಕೀಯಕ್ಕೆ ಧುಮುಕಿ ಮಂತ್ರಿಯಾಗುವವ. ಇವನ ಶಿಷ್ಯ ಮಾದಪ್ಪ ಗೂರೂಜಿ! ಇವ ಅಲ್ಲೆಲ್ಲೋ ಗಾಂಧಿ ಆಶ್ರಮದಲ್ಲಿ ಇದ್ದವನಂತೆ! ದೇವೆಂದ್ರಪ್ಪನ ಜೊತೆ ದೇಶೋದ್ದಾರಕ್ಕೆ ಅಂತಲೇ ಚಂಪಲಾಪುರಕ್ಕೆ ಬಂದವ! ಹೀಗೆ ದೇವೇಂದ್ರಪ್ಪನ ಬದುಕಿನ ಪುಟಗಳನ್ನು ವಿವರಿಸುತ್ತಲೇ ಕಾದಂಬರಿಯ ಪುಟಗಳು ತೆರೆದುಕೊಳ್ಳಲು ಶುರುವಾಗತ್ತೆ.
ಮುಂಬೈನಲ್ಲಿ ನೆಲೆಸಿರುವ ಪತ್ರಕರ್ತ ತನ್ನ ಹುಟ್ಟೂರಿನ ಮೇಲಿನ ಅಭಿಮಾನದಿಂದ, ಹುಟ್ಟೂರಿನಲ್ಲಿ ಅಪ್ಪ, ಅಜ್ಜಂದಿರ ಕಾಲದಿಂದ ಬಂದ ಒಂದು ಹಿಡಿ ಜಾಗವಿರುವುದರಿಂದ ಊರಿಗೆ ಬರುತ್ತಾರೆ. ಗೆಳೆಯ ಶಾಮಣ್ಣನ ಮನೆಯಲ್ಲಿ ತಂಗುತ್ತಾರೆ. ಆ ಮೇಲೆ ಊರಿನ ಚಟುವಟಿಕೆಗಳನ್ನೆಲ್ಲಾ ಗಮನಿಸುತ್ತಾರೆ. ತಮ್ಮ ಜನ್ಮಭುಮಿಯನ್ನು ಈ ಪರಿ ಪರಿವರ್ತಿಸಿದ, ಜಾಡ್ಯವಾಗಿದ್ದ ಊರಿಗೊಂದು ಚೈತನ್ಯ ತುಂಬಿದ ಮಹಾನುಭವರನ್ನು ನೋಡೋ ಆಸೆ ಪತ್ರಕರ್ತರಿಗೆ ಶುರುವಾಗತ್ತೆ. ಅವರ ಇಂಟರ್ವ್ಯೂ ಮಾಡಿ ಅವರ ಬಗ್ಗೆ ಒಂದಿಷ್ಟು ಗೀಚುವ ಚಪಲ! ಅಂತೂ ಬೇಗನೇ ಮುಂಬೈಗೆ ಮರಳಬೇಕಾದ ಪತ್ರಕರ್ತರು ತಮ್ಮೆಲ್ಲಾ ಹಳವಂಡಗಳನ್ನು ಬದಿಗೊತ್ತಿ ನವಚಂಪಲಾಪುರ ನಿರ್ಮಾತೃವನ್ನು ಮಾತಾಡಿಸಲು ಹುಟ್ಟುರಲ್ಲೆ ತಂಗಿಬಿಡುತ್ತಾರೆ!ಊರಲ್ಲಿ ನೀಲ ಬಾವುಟದವರ ಚಳುವಳಿ, ಕೇಸರಿ ಬಾವುಟದವರ ಚಳುವಳಿ ಎಲ್ಲವನ್ನೂ ನೋಡುತ್ತಾರೆ! ಭೀಮಪ್ಪನಂತಹ ವರ್ತಕರನ್ನು ಬೇಟಿಯಾಗುತ್ತಾರೆ......ಹೀಗೆ ಸಾಗತ್ತೆ ಕಾದಂಬರಿಯ ಕಥೆ.
ಗಾಂಧಿ ಹೆಸರು ಹೇಳಿಕೊಂಡು ಹಲಾಲುಕೋರಿಕೆ ಮಾಡಿದ ರಾಜಕಾರಣಿಗಳ ಚರಿತ್ರೆ ತೆರೆದಿಡುವ ಕಾದಂಬರಿ ಅದು. ಅದ್ಬುತ ಶೈಲಿ. ನನ್ನ ಮಟ್ಟಿಗೆ ಕೊಂಕು, ಕುಚೋದ್ಯ ಬರಹಗಳನ್ನು ಹೇಗೆ ಬರೆಯಬೇಕೆಂದು ಕಲಿಸಿದ ಕಾದಂಬರಿಯದು. ಯಾಕೋ ಚುನಾವಣೆ ಹರ್ತ ಬರ್ತಾ ಇರೋದು, ರಾಜಕಾರಣಿಗಳು ಬಗೆಬಗೆಯ ಯಾತ್ರೆ ಕೈಗೊಳ್ಳುತ್ತಾ ಇರೋದು ಇದನ್ನೆಲ್ಲಾ ಕಂಡಾಗ ಆ ಕಾದಂಬರಿಯ ನೆನಪಾಯಿತು! ಆವತ್ತು ಕಾರಂತರು ಬರೆದ ಕಾದಂಬರಿ ಇವತ್ತಿಗೂ ಎಷ್ಟು ಪ್ರಸ್ತುತ ಅನ್ನಿಸಿತು. ಈ ಕುರಿತು ಹೆಚ್ಚಿನ ಓದಿಗೆ www. aksharavihaara.wordpress.comಇಲ್ಲಿ ನೋಡಿ