ಗಾಂಧೀಸ್ಮರಣೆ - 2

ಗಾಂಧೀಸ್ಮರಣೆ - 2

ಗಾಂಧೀ ಕುರಿತ ನನ್ನ ಮೊದಲ ಲೇಖನಕ್ಕೆ ಸಂಪದಿಗರು ಒಳ್ಳೆಯ ರೀತಿಯಲ್ಲಿ ಸ್ಪಂದಿಸಿರುವುದು ನಿಜಕ್ಕೂ ಗಾಂಧಿ ನಮ್ಮಲ್ಲಿ ಕೆಲವರಲ್ಲಾದರೂ ಜೀವಂತವಾಗಿರುವುದನ್ನು ನಿಜವಾಗಿಸಿದೆ. ಈ ಲೇಖನವನ್ನು ಪ್ರಕಟಿಸುವುದರಲ್ಲಿ ನನ್ನ ವೈಯುಕ್ತಿಕ ಹೆಚ್ಚುಗಾರಿಕೆ ಏನಿಲ್ಲವಾದರೂ, ಒಂದು ತಲೆಮಾರಿನ ಪ್ರಭಾವಶಾಲಿ ಚಿಂತಕರು ಗಾಂಧಿಯಂತಹ ಚೇತನದ ಬಗ್ಗೆ ಹೇಳಿರಬಹುದಾದ ಮಾತುಗಳನ್ನು ಕೆಲವರಾದರೂ ಸೂಕ್ಷ್ಮ ಮನಸ್ಸಿನವರಿಗೆ ತಲುಪಿಸುವುದು ಅಥವಾ ನೆನಪಿಸುವುದು ನನ್ನ ಕರ್ತವ್ಯವೆಂದು ತಿಳಿದಿದ್ದೇನಷ್ಟೆ.

ತಮ್ಮ ನೇರ ನಡೆ, ನುಡಿಯಿಂದ, ವೈಚಾರಿಕತೆಯಿಂದ ಒಂದು ಪೀಳಿಗೆಯವರನ್ನೇ ಅಷ್ಟೇ ಯಾಕೆ ಕನ್ನಡ ಸಾಹಿತ್ಯವನ್ನೇ ಬಲವಾಗಿ ಪ್ರಭಾವಿಸಿದವರಲ್ಲಿ ಪ್ರಮುಖರಾದ ಪಿ.ಲಂಕೇಶ್, ತನ್ನ ಸಮಕಾಲೀನರಾದ ಚಂಪಾರ "ಗಾಂಧೀಸ್ಮರಣೆ"ಗೆ ಬರೆದಿರುವ ಸ್ಮರಣೀಯವಾದ ಈ ಹಿನ್ನುಡಿಯನ್ನು ಮುಂದಿಡುತ್ತಿದ್ದೇನೆ. ಹಾಗಾಗಿ, ಸಂಪದಿಗರು ಈ ಲೇಖನವನ್ನು ಓದಿ ಪ್ರತಿಕ್ರಿಯಿಸುತ್ತಾರೆಂದು, ಇಲ್ಲವಾದಲ್ಲಿ ಕನಿಷ್ಟ ಪಕ್ಷ ಓದಿ ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ. ಹಾಗದಲ್ಲಿ ನನ್ನ ಈ ಪ್ರಯತ್ನ ಸಾರ್ಥಕ.

"ಒಂದು ದೇಶದ ಕೆಲವೇ ಕೆಲವರು ಜೀವನ ಕೇವಲ ಬಣ್ಣ, ಗದ್ದಲಕ್ಕಾಗಿ ಅಲ್ಲ ಎಂದು ತೋರಿಸುತ್ತಾರೆ. ಅಂಥವರಲ್ಲಿ ಮೋಹನದಾಸ ಕೆ.ಗಾಂಧಿ ಒಬ್ಬ ಮನುಷ್ಯ.

ಗಾಂಧೀಜಿಯವರ ಬಗ್ಗೆ ಚಿಂತನೆ ಮಾಡುವುದಕ್ಕೆ ಇದು ತಕ್ಕ ಸಮಯ ಎಂದರೆ ಎಲ್ಲರೂ ಹೇಳುವುದನ್ನೇ ಹೇಳಿದಂತಾಗುತ್ತದೆ. ಆದರೆ ಗಾಂಧೀಜಿಯವರಿಗೆ ಮಹಾತ್ಮ ಎಂಬ ಪಟ್ಟಿಯನ್ನು ಹಚ್ಚಿ, ಆತನನ್ನು ತಂದೆ, ದೇವರು ಎಂದೆಲ್ಲ ಕರೆದ ನಾವು ಈಗಾಗಲೇ ಆತನ ಸಮಾಧಿ ಮಾಡಿದ್ದೇವೆ. ನಾವು ಆತನ ಬಗ್ಗೆ ಮರೆತಿರುವ ಕೆಲ ಸಂಗತಿಗಳಿವೆ. ಗಾಂಧಿ ಎಲ್ಲರಂತೆಯೇ ಮನುಷ್ಯನಾಗಿದ್ದ. ಅಷ್ಟೇ ಅಲ್ಲ, ಆತ ನೋಡಲು ಮೈಕಟ್ಟಿನ ದೃಷ್ಟಿಯಿಂದ ನಮ್ಮಲ್ಲಿ ಅನೇಕರಷ್ಟು ಸ್ಫುರದ್ರೂಪಿ ಕೂಡ ಇರಲಿಲ್ಲ. ಆತ ನಮ್ಮೆಲ್ಲರಂತೆಯೇ ಹಲವು ಬಗೆಯ ಸೋಲುಗಳನ್ನು ಅನುಭವಿಸಿದ್ದ. ಹಾಗೆ ಸೋಲು ಆತನ ಜೊತೆಗಾರ ಆಗಿರದಿದ್ದರೆ ಆತ ಸುಮಾರು ನಲವತ್ತು ವರುಷ ಸ್ವಾತಂತ್ರ್ಯಕ್ಕಾಗಿ ಪರದಾಡಬೇಕಾಗಿರಲಿಲ್ಲ. ಆತ ಭಾಷಣಕ್ಕೆ ಹೋದ ಸಭೆಗಳು ಖಾಲಿ ಇದ್ದ ಪ್ರಸಂಗಗಳು, ಆತನ ಮುಖ ಕೆಂಪಾಗುವಂತೆ ಅವಮಾನ ಹೊಂದಿದ ಸಮಯಗಳು ಲೆಕ್ಕವಿಲ್ಲದಷ್ಟು ಇವೆ. ಆದರೆ ಈ ರೀತಿಯ ಸೋಲನ್ನು ನುಂಗಿ ತಮಾಷೆ ಮಾಡಬಲ್ಲ ಹಾಸ್ಯದ ದೃಷ್ಟಿಯನ್ನೂ ಆತ ಪಡೆದಿದ್ದ. ಯಾವುದು ತನ್ನ ನೊಂದ ಜನಕ್ಕೆ ಬೇಕು, ಯಾವುದು ಬೇಡ ಎಂಬುದು ಆತನ ವ್ಯಾವಹಾರಿಕ ದೃಷ್ಟಿಗೆ ಕೂಡಲೇ ಹೊಳೆಯುತ್ತಿತ್ತು. ಆತನ ಕಣ್ಣೆದುರಿಗೇ ಜಗತ್ತಿನ ಎರಡು "ಕ್ರಾಂತಿ"ಗಳು ಆಗಿದ್ದವು. ಒಂದು, ಹಿಟ್ಲರ್ ಜರ್ಮನಿಯಲ್ಲಿ ಮಾಡಿದ ಕ್ರಾಂತಿ. ನೀತ್ಸೆ ಮಹಾಶಯನಿಂದ ಸ್ಫೂರ್ತಿ ಪಡೆದ ಹಿಟ್ಲರ್ ಪ್ರಜಾಪ್ರಭುತ್ವದ ಏಣಿ ಬಳಸಿಕೊಂಡು, ಆಧುನಿಕ ವಿಜ್ಞಾನದ ನೆರವು ಪಡೆದು ತನ್ನ ಜನಕ್ಕಾಗಿ ಸುಖೀರಾಜ್ಯದ ಸ್ವರ್ಗ ಕಟ್ಟಲು ನೋಡಿದ; ಮಾರ್ಕ್ಸ್ ಮಹಾಶಯನಿಂದ ಸ್ಫೂರ್ತಿ ಪಡೆದ ಲೆನಿನ್ ತಾನು ಮಾಡುವುದೆಲ್ಲ ವೈಜ್ಞಾನಿಕ ಎಂಬ ಭ್ರಮೆ ಇಟ್ಟುಕೊಂಡು ತನ್ನ ದೇಶವನ್ನು ನರಕವನ್ನಾಗಿಸಿ, ಸೈಬೀರಿಯಾವನ್ನು ಎಲ್ಲ ಫ್ಯಾಸಿಸ್ಟ್ ವ್ಯವಸ್ಥೆಯ ಸಂಕೇತವಾಗಿಸಿದ. ತಾರುಣ್ಯದಲ್ಲಿದ್ದ ನೆಹರೂ ಅಂಥವರಿಗೆ ಈ ಎರಡು ಕ್ರಾಂತಿಗಳಲ್ಲಿ ಒಂದನ್ನು ಆರಿಸಿಕೊಳ್ಳಲು ಕಷ್ಟವಾಗಲಿಲ್ಲ. ಆದರೆ ಆಗಲೇ ನಡುವಯಸ್ಸು ತಲುಪುತ್ತಿದ್ದ ಗಾಂಧೀಜಿಗೆ ಕೆಲವು ಸೂಕ್ಷ್ಮಗಳು ಹೊಳೆದಿದ್ದವು. ಅವುಗಳನ್ನು ಎರಡು ಭಾಗಗಳಾಗಿ ಇಟ್ಟು ನೋಡಬಹುದು ಎನಿಸುತ್ತದೆ. ಗಾಂಧೀಜಿ ನಮ್ಮಲ್ಲಿ ಹುಟ್ಟಿದ ದೊಡ್ಡ ಜಾತ್ಯತೀತ ಮನುಷ್ಯನೆನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಆತ ಒಂದು ಮುಖ್ಯ ಅರ್ಥದಲ್ಲಿ ದೇಶಾತೀತ ಮನುಷ್ಯ. ರಾಷ್ಟ್ರದ ಕಲ್ಪನೆಯೇ ಒಂದು ದೇಶದ ಜನರಲ್ಲಿ ಅಹಂಕಾರ, ಅಧಿಕಾರ-ಮದವನ್ನು ಬಿತ್ತಬಲ್ಲದು ಎಂಬುದು ಆತನಿಗೆ ಗೊತ್ತಿತ್ತು. ಆದ್ದರಿಂದ ಭಾರತದ ಜನರನ್ನು ಹಿಂಸಾತ್ಮಕ ವ್ಯಕ್ತಿಗಳನ್ನಾಗಿ ಮಾಡಿ ಆ ಮೂಲಕ ಸ್ವಾತಂತ್ರ್ಯ ಪಡೆಯಲು ಗಾಂಧಿ ನಿರಾಕರಿಸಿದ. ಯಾವುದೇ ರಾಷ್ಟ್ರವಾಗಲಿ ಅದೊಂದು ಬೇಕಾದ ವಸ್ತು-ತೀರಾ ಕೆಳಮಟ್ಟದ ವ್ಯಕ್ತಿಗೆ ಕೂಡ ಸವಲತ್ತು ಮತ್ತು ಜೀವನಾಧಾರಗಳನ್ನು ಒದಗಿಸಿಕೊಡಲು ಬೇಕಾದ ಒಂದು ಅಂಶ ಮಾತ್ರ, ಎಂಬುದು ಗಾಂಧೀಜಿಗೆ ಗೊತ್ತಿತ್ತು. ಇದನ್ನು ಸರಳವಾಗಿಸಿ ಹೇಳುವುದಾದರೆ, ರಾಷ್ಟ್ರಕ್ಕಾಗಿ ಮನುಷ್ಯನೋ ಮನುಷ್ಯನಿಗಾಗಿ ರಾಷ್ಟ್ರವೋ ಎಂಬ ಪ್ರಶ್ನೆಗೆ ಗಾಂಧೀಜಿಯ ಉತ್ತರ ಏನೆಂದು ನಮಗೆಲ್ಲಾ ಗೊತ್ತು. ಆದ್ದರಿಂದಲೇ ಗಾಂಧೀಜಿಯ ಗಮನವೆಲ್ಲಾ ಮನುಷ್ಯರ ಕಡೆಗೆ, ಅವರ ಜೀವನದ ವಿವರಗಳ ಕಡೆಗೆ ಇರುತ್ತಿತ್ತು. ಇಂಗ್ಲಂಡು, ಪಾಕಿಸ್ತಾನ ಮುಂತಾದ ದೇಶಗಳೆಲ್ಲಾ ಆತನಿಗೆ ಕಾಣುತ್ತಲೇ ಇರಲಿಲ್ಲ. ಆದ್ದರಿಂದಲೇ ಆತ ಎಲ್ಲ ದೇಶದ ವ್ಯಕ್ತಿಯಾಗಿದ್ದ; ಮಾತ್ರವಲ್ಲ, ದೇಶಾತೀತ ವ್ಯಕ್ತಿಯಾಗಿದ್ದ. ಸರಕಾರದ ಬಲವನ್ನು ಸದಾ ಸಂಶಯ ಮತ್ತು ತಾತ್ಸಾರದಿಂದ ನೋಡುತ್ತಿದ್ದ. ಕಮ್ಯುನಿಸ್ಟ್ ಸಿದ್ಧಾಂತ ಎಲ್ಲಕ್ಕೂ ಮದ್ದೆಂದೂ ಜಾಗತಿಕ ಕಾರ್ಮಿಕನನ್ನು ಒಂದಾಗಿಸುವ ಸಾಧನವೆಂದೂ ನಂಬಿದ ಜನ ರಾಷ್ಟ್ರಗಳಾಗಿ ಒಡೆದದ್ದು, ಪ್ರಾಣಿಗಳಂತೆ ಕಚ್ಚಾಡತೊಡಗಿದ್ದು ಇದನ್ನು ಈಗ ಗಾಂಧಿ ನೋಡಿದ್ದರೆ ತನ್ನ ನಂಬಿಕೆ ಹೇಗೆ ನಿಜವಾಯಿತೆಂದು ಹೆಮ್ಮೆಪಡುವ ಬದಲು ಸರಕಾರಕ್ಕೆ ಗುಲಾಮರಾದ ಕೋಟ್ಯಂತರ ಜನರ ಬಗ್ಗೆ ಅನುಕಂಪ ಪಡುತ್ತಿದ್ದ.

ಎರಡನೆಯ ಗುಂಪಿನಲ್ಲಿ ಚರ್ಚಿಸಬೇಕಾದ್ದೊಂದಿದೆ. ಅದು, ಗಾಂಧೀಜಿ ಮನುಷ್ಯನ ಬಗ್ಗೆ ಕೇಳಿದ ಕೆಲವು ಮೂಲಭೂತ ಪ್ರಶ್ನೆಗಳು. ರಾಜಕೀಯವಾಗಿ ಜನಕ್ಕೆ ಏನು ಬೇಕು ಎಂದು ಕೇಳಿದ ಈ ವ್ಯಕ್ತಿಗೆ ತನ್ನ ಹತ್ತಿರದ ಮನುಷ್ಯನ ಆಶೆ, ಪ್ರಲೋಭನೆಗಳಂತೆಯೇ ಆತ ಹೊಂದಬಹುದಾದ ಸಂಗತಿಗಳ ಇತಿ ಮಿತಿ ಬಹಳ ಚೆನ್ನಾಗಿ ತಿಳಿದಿತ್ತು; ಆತನ ಮಾನಸಿಕ ಆರೋಗ್ಯ ಅನಾರೋಗ್ಯ ಕೂಡ. ಮನುಷ್ಯನ ಊಟ, ನಿದ್ರೆ, ಮೈಥುನ, ಭೋಗ ಎಲ್ಲಕ್ಕೂ ಮಿತಿ ಇದೆ. ಈ ಮಿತಿಯು ಹತ್ತಿರ ಇರುವತನಕ ಅವನಿಗೆ ಆರೋಗ್ಯವಿರುತ್ತದೆ; ಅವುಗಳೊಂದಿಗೆ ದೂರ ಹೋದಾಗಲೆಲ್ಲ ಊಟ, ನಿದ್ರೆ, ಮೈಥುನ ಇತ್ಯಾದಿಗಳ ಭ್ರಮೆಯಲ್ಲಿ ಬದುಕುತ್ತಾನೆ. ಅದು ಆತನ ಕ್ರೌರ್ಯ, ಅಸ್ಥಿರತೆಯ ಸ್ಥಳ. ಆದ್ದರಿಂದಲೇ ಗಾಂಧಿ ಈ ಇಂದ್ರಿಯಗಳ ಪರಿಸರದ ಮೌಲ್ಯಕ್ಕಾಗಿ ಹುಡುಕುತ್ತಾನೆ. ಆತನ ಪ್ರೇಮ, ಘನತೆ, ಸ್ವಾತಂತ್ರ್ಯದ ಮೌಲ್ಯಗಳು ಎಲ್ಲರೂ ತಿಳಿದಂತೆ ದೈವಿಕ ಮೌಲ್ಯಗಳಲ್ಲ; ಮಾನವನಿಗೆ ಸಾಧ್ಯವಾದ ಮೌಲ್ಯಗಳು; ಅವಿಲ್ಲದೇ ಆತನ ಊಟ, ನಿದ್ರೆ, ಮೈಥುನದ ಕ್ರಿಯೆಗಳು ನಿಷ್ಪ್ರಯೋಜಕವಾಗುತ್ತವೆ.

ಬಹುಶಃ ಮಾನವ ಕೋಟಿ ತನ್ನ ಲಕ್ಷಾಂತರ ವರ್ಷಗಳ ಮುನ್ನಡೆಯಲ್ಲಿ ಸೃಷ್ಟಿಸಿರಬಹುದಾದ ಅತ್ಯಂತ ದೊಡ್ಡ ಮನುಷ್ಯ ಗಾಂಧೀಜಿ ಇರಬಹುದು ಎನ್ನುವುದಕ್ಕೆ ಮೇಲಿನ ಕಾರಣಗಳ ಜೊತೆಗೆ ಆತನಿಗಿದ್ದ - ಭಾರತೀಯರಿಗೆ ಬಹುಪಾಲು ಇಲ್ಲದಿರುವ - ಇತಿಹಾಸಪ್ರಜ್ಞೆ ಮತ್ತು ಸಮಕಾಲೀನ ಪ್ರಜ್ಞೆ ಕೂಡ ಕಾರಣವಾಗುತ್ತದೆ. ಸಾಕ್ರೆಟೀಸ್, ಥಾಮಸ್ ಮೋರ್, ಲ್ಯೂಥರ್, ಲಿಂಕನ್, ಮಾವೋ ಮುಂತಾದ ಜನರನ್ನು ನೆನೆಯುವಾಗ(ಕ್ರಿಸ್ತ, ಬುದ್ಧರ ಬಗೆಗೆ ಖಚಿತವಾಗಿ ಅಷ್ಟಾಗಿ ಗೊತ್ತಿಲ್ಲವಾದ್ದರಿಂದ)ಅವರೆಲ್ಲರೂ ಒಂದಿಲ್ಲ ಒಂದು ಕಾರಣಕ್ಕೆ ಮುಕ್ಕಾಗಿ ಕಾರಣರಾಗುತ್ತಾರೆ. ಗ್ರೀಸಿನ ಕ್ರಿಯಾಶಾಲಿತ್ವದ ಇಳಿಮುಖದ ವೇಳೆಯಲ್ಲಿ ಬಂದ ಸಾಕ್ರೆಟೀಸ್ ತನ್ನ ರಾಜ್ಯದ ಆಡಳಿತಕ್ಕೆ ಬೌದ್ಧಿಕ ಚೌಕಟ್ಟು ಸೂಚಿಸಿ ಕೊನೆಗೂ ತನ್ನವರೊಂದಿಗೆ ಒಂದಾಗದೇ ಹೋದ; ಲ್ಯೂಥರ್. ಥಾಮಸ್ ಮೋರರ ಹಟಮಾರಿತನ ಮತ್ತು ಮೌಲ್ಯಪ್ರಜ್ಞೆಯ ನಡುವೆ ಹಟಮಾರಿತನಕ್ಕೆ ಹೆಚ್ಚು ಒತ್ತು ಬೀಳುತ್ತದೆ; ಇನ್ನಿಬ್ಬರು, ತಮ್ಮ ನಾಡಿನ ಶ್ರೇಷ್ಟತೆಯ ಬಗ್ಗೆ ಕಲ್ಪನೆಗಳನ್ನಿಟ್ಟುಕೊಂಡು ನೆತ್ತರು ಹರಿಸಿಯಾದರೂ ರಾಜ್ಯ ಕಟ್ಟಲು ಒಗ್ಗಟ್ಟಾಗಿಸಲು ಹೋರಾಡಿದ ನೆಪೋಲಿಯನ್, ಅಲೆಗ್ಜಾಂಡರ್‌ಗಳ ವಿವಿಧ ರೂಪಗಳು. ಮನುಷ್ಯರನ್ನು ದೇಶ, ಕಾಲವನ್ನು ಮೀರಿ ಪೊರೆಯಲು, ಪೊರೆಯುವ ಮೌಲ್ಯಗಳನ್ನು ನೀಡಲು ನಿರಂತರ ಧ್ಯಾನಿಸಿದ ಗಾಂಧಿ ಬಹುಮುಖ ವ್ಯಕ್ತಿತ್ವವುಳ್ಳ ಮನುಷ್ಯ.

ಗಾಂಧೀಜಿಯಂಥವರಿಗೆ ಒಂದು ದೇಶ ಏನನ್ನು ಮಾಡಬಹುದು ಎಂಬುದು ಈಗ ಸರ್ವವಿದಿತ ಸತ್ಯವಾಗಿದೆ. ಅಷ್ಟೇ ಅಲ್ಲ, ಗಾಂಧೀಜಿಗೆ ಹೊಗಳಿಕೆಯ ಕಾಣಿಕೆ ಸಲ್ಲಿಸಿದ ಜಗತ್ತಿನ ಜನ ಇವತ್ತಿಗೂ ಮಿಲಿಟರಿ ನೆರವಿನಿಂದ ಜನರನ್ನು ಆಳುತ್ತಿವೆ. ಮುಂದುವರಿದ ದೇಶಗಳಲ್ಲಿ ಸರಕಾರಿ ವೆಚ್ಚದ ಬಹುಪಾಲು ಹಣ ಯುದ್ಧ ಸಲಕರಣೆಗೆ ಹೋದರೆ, ಹಿಂದುಳಿದ ನಾಡುಗಳಲ್ಲಿ ಬಾಂಬು ಗನ್ನುಗಳಿಗಾಗಿ ಅರ್ಧಕ್ಕಿಂತ ಹೆಚ್ಚು ವ್ಯಯವಾಗುತ್ತಿದೆ. ಗನ್ನುಗಳ ನೆರಳಿನಲ್ಲಿ ಬದುಕುತ್ತಿರುವ ಮನುಷ್ಯ ಗಾಂಧಿಯನ್ನು ನೆನೆಯಲು ಸಾಧ್ಯವಿಲ್ಲ. ಆತನಿಗೆ ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಾಧ್ಯವಿಲ್ಲ. ಈ ಸತ್ಯವನ್ನು ನೋಡಲಾರದ ಜನ ಮಾತ್ರ ಗಾಂಧೀಜಿ ಎಂದರೆ ದಿಗಿಲು ಬೀಳುತ್ತಾರೆ; ಆದ್ದರಿಂದ ಅವರನ್ನು ಮರೆಯಲೆತ್ನಿಸುತ್ತಾರೆ.

ನಾವೆಲ್ಲ ಗಾಂಧಿ ಕೇವಲ ನೆನಪಾಗದಿರುವಂತೆ ಮಾಡಬೇಕು. ಎಲ್ಲ ಭ್ರಷ್ಟರು, ಅಧಿಕಾರದಾಹಿಗಳು, ದ್ವಿಮುಖಿಗಳು, ಭೌತಿಕವಾದಿಗಳು, ಹೇಡಿಗಳು, ಬಾಯಿಮುಚ್ಚಿಸುವವರು - ಇವರಿಗೆ ಗಾಂಧೀಜಿಯನ್ನು ಮುಖಕ್ಕೆ ನೇರವಾಗಿ ಹಿಡಿಯಬೇಕು."

Rating
No votes yet