ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!
ಘಟನೆ ೧
ಇದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ಹೋಟೆಲ್ ಗೆ ಬೆಳಗಿನ ಜಾವ ಸುಮಾರು ೨-೩೦ ರ ಸುಮಾರಿಗೆ ಪಾನಮತ್ತರಾಗಿ ನುಗ್ಗಿದ ಪುಂಡರ ಗುಂಪೊಂದು ಊಟ ಕೇಳಿದೆ. ಹೋಟೆಲ್ ಮುಚ್ಚಿದ್ದರಿಂದ ಊಟ ಸಿಗದು ಎಂದಿದ್ದಾರೆ ಸಿಬ್ಬಂದಿ. ಇಷ್ಟಕ್ಕೇ ಸಿಟ್ಟಿಗೆದ್ದ ಪುಂಡರು ಹೋಟೆಲ್ಲಿನ ಗಾಜು-ಪೀಠೋಪಕರಣ ಜಖಂಗೊಳಿಸಿದ್ದಲ್ಲದೇ ಸಿಬ್ಬಂದಿಗೂ ಗೂಸಾ ಕೊಟ್ಟಿದ್ದಾರೆ. ಈ ದುಂಡಾವರ್ತನೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾಗಿದ್ದು ಅಂದಿನ ಮುಖ್ಯಮಂತ್ರಿಗಳ ಸುಪುತ್ರ (?) ನಿಖಿಲ್ ಗೌಡ!
ಈ ಸುದ್ದಿ ಮಾಧ್ಯಮಗಳಿಗೆ ತಿಳಿದಿದ್ದೇ ತಡ ಪೊಲೀಸ್ ಕೇಸ್ ಬಹಿರಂಗವಾಗದಂತೆ ನೋಡಿಕೊಂಡರು ಸಿಎಂ ಸಾಹೇಬರು. ಆದರೆ ಮೇಲಿಂದ ಮೇಲೆ ಈ ಸುದ್ದಿ ಎಲ್ಲ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ "ನನ್ನ ಮಗ ಚಿಕ್ಕವ. ಏನೋ ಅರಿಯದೆ ತಪ್ಪೆಸಗಿದ್ದಾನೆ. ಗಾಂಧೀಜಿಯಂಥವರೇ ತಪ್ಪು ಮಾಡಿಲ್ಲವೇ" ಎಂದು ಮಗನನ್ನು ಮಹಾತ್ಮನನ್ನಾಗಿಸಿದರು.
ಘಟನೆ ೨
ಸರಿಯಾಗಿ ತರಗತಿಗೆ ಹಾಜರಾಗದೆ ಅಂಡಲೆಯುತ್ತಿದ್ದ ಮಹಾವೀರ್ ಜೈನ್ ಕಾಲೇಜ್ ವಿದ್ಯಾರ್ಥಿ ನಿಖಿಲ್ ಗೌಡ ನಿಗೆ ಅಗತ್ಯವಿರುವಷ್ಟು ಹಾಜರಾತಿ ಇಲ್ಲದ್ದರಿಂದ ಪರೀಕ್ಷೆಗೆ ಕೂರಲು ಅನುಮತಿ ನಿರಾಕರಿಸಲಾಗಿತ್ತು. ಆಗ ಅವರಿಗೆ ಅನುಮತಿ ದೊರಕಿಸಿ ಪರೀಕ್ಷೆಗೆ ಕೂರುವಂತೆ ಮಾಡಿದ್ದು ಮುಖ್ಯಮಂತ್ರಿ ಅಪ್ಪ!
ಈಗ ದಿನಕ್ಕೊಂದು "ಹಗರಣ" ಹೊರಹಾಕುತ್ತಿರುವ ಮಾಜಿ ಮುಖ್ಯಮಂತ್ರಿಗಳು ಹೋದ ಕಡೆಯಲ್ಲ "ಕಳ್ಳ-ಪೊಲೀಸ್" ಕತೆ ಹೇಳುತ್ತಾ "ಸಾಮನ್ಯನಿಗೊಂದು ಕಾನೂನು -ಸಿಎಂಗೊಂದು ಕಾನೂನಾ" ಎಂದು ಪ್ರಶ್ನಿಸುತ್ತಿದ್ದಾರೆ.
ಹಾಗಾದರೆ ಕುಮಾರಸ್ವಾಮಿ ಅವರ ಪುತ್ರ ಹೋಟೆಲ್ ನಲ್ಲಿ ದಾಂಧಲೆ ನಡೆಸಿದಾಗ, ಪರೀಕ್ಷೆಗೆ ಕೂರಲು ಅರ್ಹತೆ ಇಲ್ಲದಿದ್ದಾಗಲೂ ಪರೀಕ್ಷೆ ಬರೆದಾಗ ಸಿಎಂ ಮಕ್ಕಳಿಗೆ-ಮಾಜಿ ಪಿಎಂ ಮೊಮ್ಮಕ್ಕಳಿಗೆ ವಿಶೇಷ ಕಾನೂನು ಜಾರಿಯಲ್ಲಿತ್ತಾ?
ಅದಕ್ಕೇ ಹೇಳೋದು ಗಾಜಿನ ಮನೆಯಲ್ಲಿ ನಿಂತು ಇನ್ನೊಂದು ಮನೆಯತ್ತ ಕಲ್ಲು ಗುರಿಯಿರಿಸಬಾರದು ಅಂತ.
Comments
ಉ: ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!