ಗಾನ ಸರಸ್ವತಿ ಲತಾ ಮಂಗೇಶಕರ- ಹೀಗೊಂದು ಪ್ರಸಂಗ

ಗಾನ ಸರಸ್ವತಿ ಲತಾ ಮಂಗೇಶಕರ- ಹೀಗೊಂದು ಪ್ರಸಂಗ

                         ಗಾನ ಸರಸ್ವತಿ ಲತಾ ಮಂಗೇಶಕರ್ – ಹೀಗೊಂದು ಪ್ರಸಂಗ
                                                        -                                   - ಲಕ್ಷ್ಮೀಕಾಂತ ಇಟ್ನಾಳ.
  ಲತಾ ಮಂಗೇಶಕರ ಬಗ್ಗೆ ನೌಶಾದರು, “ಕಂಭಖ್ತ್, ಗಲ್ತೀ ಸೇ ಭೀ ಬೇಸರಾ ನಹೀಂ ಗಾತೀ” ಎಂದಿದ್ದರೊಮ್ಮೆ ಮೆಚ್ಚುಗೆಯಿಂದ.
  1958-59 ರಲ್ಲಿ  ಲತಾ ಮಂಗೇಶಕರ ಹಾಗೂ ನೌಶಾದ್ ಅವರ ನಡುವೆ ಸಂಭವಿಸಿದ ಘಟನೆ. ಅದು ಮೊಘಲ್ – ಎ- ಆಜಮ್ (1960) ಚಿತ್ರದ ಗೀತೆಗಳ ಧ್ವನಿ ಮುದ್ರಣದ ಸಮಯ..
   ಅಂದು ಮೆಹಬೂಬ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಸಮಯ. ಎಂಭತ್ತಕ್ಕೂ ಹೆಚ್ಚು ಸಂಗೀತಗಾರರ ಮೇಳ. ನಲವತ್ತು ವಯೋಲಿನ್ ನುಡಿಸುವವರು. ಮತ್ತೆ ಮತ್ತೆ ರಿಹರ್ಸಲ್ ನಡೆದೇ ಇತ್ತು. ಮುಂಜಾನೆಯೇ ರೆಕಾರ್ಡಿಂಗ್ ಗೆ ಬರಹೇಳಿದ್ದರಿಂದ ನಿಗದಿತ ಸಮಯಕ್ಕೆ ಎಂದಿನಂತೆ ಲತಾ ಮಂಗೇಶ್ಕರ ಬರುವ ವೇಳೆಗಾಗಲೇ  ಒಂದು ತಾಸು ಸತತವಾಗಿ ರಿಹರ್ಸಲ್ ನಡೆದು ಎಲ್ಲ ಆರ್ಕೆಸ್ಟ್ರಾ ರೆಕಾರ್ಡಿಂಗ್ ಗೆ ತಯಾರಾಗಿತ್ತು.
     ನೌಶಾದ ಅವರ ಜೊತೆ ಒಂದು ಸಾರಿ ತಾಲೀಮ್ ಮಾಡಿದ ಲತಾಜಿಗೆ ಒಮ್ಮೆಲೆ ನೌಶಾದರು,  "ತಯಾರಿಯಾಯಿತಲ್ಲ. ಹಾಡಿಬಿಡಿ. ಟೇಕ್ ಆಗಿ ಬಿಡ್ಲಿ" ಎಂದರು. ಲತಾ ಅವರು ಇನ್ನೊಮ್ಮೆ ರಿಹರ್ಸಲ್ ಮಾಡಿಬಿಡೋಣವೇ ಎಂದಾಗ ನೌಶಾದರು ಅವರೊಡನೆ  ಹಾರ್ವೋನಿಯಮ್ ಸಾಥ್ ನೀಡಿ ರಿಹರ್ಸಲ್ ಮಾಡಿದರು.
  ಲತಾ ಕಡೆಗೆ ತಿರುಗಿ, “ಹಾಡನ್ನು ನಾನು ಕಂಪೋಸ್ ಮಾಡಿದರೂ ನನಗೆ ನಾಲ್ಕು ಚಂದಿರರನ್ನು ಆ ಹಾಡಿಗೆ(ಚಾರ ಚಾಂದ) ತುಂಬಲು ಸಾಧ್ಯವಾಗದು,  ಈಗ ಗೀತೆಗೆ ಜೀವ ತುಂಬುವ ಜೊತೆಗೆ ಅದರಲ್ಲಿ ನಾಲ್ಕು ಚಂದಿರರನ್ನು ಅದರಲ್ಲಿ ತುಂಬಿ ಎಂದು ಹೇಳಿದರು.
   ಲತಾಜಿ “ನಾನು ರೆಡಿ,  ನೀವು ರೆಡಿಯಾಗಿದ್ದೀರಾ?” ಎಂದು ಕೇಳಿ, ಕ್ಯಾಬಿನ್ ನಲ್ಲಿ ಮೈಕ್ ಹತ್ತಿರ ಹೋದರು. ರೆಕಾರ್ಡಿಂಗ್  ಪ್ರಾರಂಭವಾದ ಕೆಲವೇ ಸೆಕಂಡುಗಳಲ್ಲಿ  ಹಾಡುವುದನ್ನು ನಿಲ್ಲಿಸಿದರು. ನೌಶಾದ್ ಏನಾಯಿತೆಂದು ಕೇಳಿದರು. ನಲವತ್ತು ವಯೋಲಿನ್ ನುಡಿಸುವವರಲ್ಲಿ ಒಬ್ಬ ನೀಲಿ ಶರ್ಟಿನ ಹುಡುಗನ ಕಡೆಗೆ ಕೈತೋರಿಸಿ ಆ ಹುಡುಗ ಸುರ್ ಸರಿಯಾಗಿ ಹಿಡಿಯುತ್ತಿಲ್ಲ. ಇದರಿಂದ ನಾನು ಬೇಸುರ್ ಹೋಗುತ್ತಿದ್ದೇನೆ. ” ಎಂದರು. ಆದರೆ ನೀವು ಬೇಸುರ್ ಆಗಿಲ್ಲವಲ್ಲ ಎಂದರು ನೌಶಾದ್. ಹೌದು ನಾನಿನ್ನು ಬೇಸುರ್ ಆಗಿಲ್ಲ ಆದರೆ ಅವನ ಟ್ಯೂನ್ ನಿಂದ ನಾನು ಬೇಸುರ್ ಹೋಗುವವಳಿದ್ದೆ. ಅವನಿಗೆ ನುಡಿಸದಿರಲು ಹೇಳಿ ಎಂದರು.
   ನೌಶಾದರು  ಮುಂಜಾನೆಯ ಸಮಯವಿದ್ದುದರಿಂದ ಇನ್ನೂ ಲತಾ ಸುರ್ ಗೆ ಹೊಂದಿಕೊಳ್ಳುವುದು ಆಗುತ್ತಿಲ್ಲವೆಂದು ತಿಳಿದು, “ಲತಾಜಿ, ನೀವು ಬರುವುದಕ್ಕಿಂತಲೂ ಮೊದಲು ಒಂದು ತಾಸಿನವರೆಗೆ ರಿಹರ್ಸಲ್ ಆಗಿದೆ. ಆವಾಗ ಎಲ್ಲಿಯೂ ಬೇಸುರ್ ಆಗಿಲ್ಲ. ನೀವೇನೂ ತಲೆಕೆಡಿಸಿಕೊಳ್ಳಬೇಡಿ, ಎಲ್ಲವೂ ಸರಿಯಾಗಿಯೇ ಇದೆ. ಹಾಡಿ” ಎಂದರು.
   ನೌಶಾದ್ ಅವರು ಹೇಳಿದ ಮೇಲೆ, ಮತ್ತೆ ಟೇಕ್ ಶುರುವಾಯಿತು. ಕೆಲವೇ ಸೆಕೆಂಡುಗಳಲ್ಲಿ ಲತಾಜಿ ಮತ್ತೆ ನಿಲ್ಲಿಸಿದರು. ನೌಶಾದರು ‘ಸರಿಯಾಗಿದೆ , ಏನೂ ತಪ್ಪಾಗಿಲ್ಲ ಹಾಡಿ’  ಎಂದರೂ ಲತಾ ಹಾಡಲೊಲ್ಲರು. ನೌಶಾದ ಅವರ ಒತ್ತಾಸೆ ಮೇರೆಗೆ ಮತ್ತೆ ಹಾಡಲು ಶುರು ವಿಟ್ಟೊಡನೇ ಲತಾ ನಿಲ್ಲಿಸುವುದು ನಡೆಯಿತು.
    ಕೊನೆಗೆ ಲತಾ ಹೇಳಿದರು. “ತಾವು ಒಂದು ಕೆಲಸ ಮಾಡಿ. ನಾನು ಸರಿಯುತ್ತೇನೆ. ಬೇರೆ ಯಾರಾದರೂ ಇದನ್ನು ಹಾಡಬಲ್ಲರು. ಅವರಿಂದ ಹಾಡಿಸಿ” ಎಂದು ಕ್ಯಾಬಿನ್ ನಿಂದ ಹೊರಬಂದರು.  ಏನು ಮಾಡುತ್ತಿರುವಿರಿ ನೀವು ಲತಾಜಿ.  ನಾನು ಈ ಹಾಡನ್ನು ಎರಡು ವರ್ಷಗಳಿಂದ ಸಂಯೋಜಿಸುತ್ತಿದ್ದೇನೆ. ನಿಮ್ಮಂತಹ ಇನ್ನೊಬ್ಬ ಹಾಡುಗಾರರು ಈ ಭೂಮಿಯ ಮೇಲೆ ಮಾತ್ರವಲ್ಲ,  ಸ್ವರ್ಗದಲ್ಲಿಯೂ, ನರಕದಲ್ಲಿಯು ಹುಡುಕಿದರೂ ಸಿಗುವುದಿಲ್ಲ. ಈ ಭೂ ಗ್ರಹದ ಮೇಲಿರುವ ಏಕೈಕ ಫಿನಾಮಿನಾ ನೀವು. ನೀವು ಹೀಗೆ ಮಾಡಬೇಡಿ ಎಂದು ವಿನಂತಿಸಿದರು.  
   “ನಾನು ಅಷ್ಟು ಹೇಳಿದರೂ ತಾವು ಆ ಹುಡುಗನನ್ನು ನಿಲ್ಲಿಸುತ್ತಿಲ್ಲವಲ್ಲ” ಲತಾಜಿ ಹೇಳಿದಾಗ ನೌಶಾದ್ ಮತ್ತೊಮ್ಮೆ ಆರ್ಕೆಸ್ಟ್ರಾ ಕೇಳುವುದಾಗಿ ಹೇಳಿ ಈ ಸಾರೆ ಧ್ಯಾನದಿಂದ ಆರ್ಕೆಸ್ಟ್ರಾ ಆಲಿಸಿದರು.
    ತಲ್ಲೀನರಾಗಿ ಆರ್ಕೆಸ್ಟ್ರಾ ಕೇಳಿ, ತಮ್ಮ ಎರಡೂ ಕೈಗಳನ್ನು ಇವರತ್ತ ಜೋಡಿಸಿ, “ನನಗೆ ಎರಡು ವರ್ಷಗಳಿಂದ ಒಮ್ಮೆಯೂ ಗುರುತಿಸಲಿಕ್ಕಾಗದ,  ಆ ನಲವತ್ತು ಜನರ ವಯೋಲಿನ್ ತಂಡದ ಒಬ್ಬ ಬೇಸುರ್ ನುಡಿಸುವವನನ್ನು ಒಂದೇ ಟೇಕ್ ನಲ್ಲಿ ಗುರುತಿಸಿ, ಅವನೇ ತಪ್ಪೆಸಗುತ್ತಿದ್ದಾನೆ ಎಂದು ನಿಖರವಾಗಿ ಹೇಳುವ ನಿಮ್ಮನ್ನು ಜಗತ್ತು  ಸಂಗೀತ ಸರಸ್ವತಿ ಎಂದು ಸುಮ್ಮನೇ ಅನ್ನುವುದಿಲ್ಲ, ತಾವು ಸಾಕ್ಷಾತ್ ಗಾನಸರಸ್ವತಿಯೇ ಸರಿ” ಎಂದು ಇವರತ್ತ ಕೈಜೋಡಿಸಿ ನಮಿಸಿದರು. ಆ ಹುಡುಗನನ್ನು ಬಿಟ್ಟು ರಿಹರ್ಸಲ್ ಒಂದೇ ಟೇಕ್ ನಲ್ಲಾಯಿತು,. ಕೆಲವೇ ಕ್ಷಣಗಳ ಹಿಂದೆ ರೆಕಾರ್ಡಿಂಗ್ ರೂಮ್ ತೊರೆಯಲು ಸಿಧ್ದಳಾದ ಲತಾ ಅವರನ್ನು ನೌಶಾದರು ಸರಿಯಾದ ಸಮಯದಲ್ಲಿ ಎಚ್ಚತ್ತುಕೊಳ್ಳದೇ ಹೋಗಿದ್ದರೆ, ಲತಾ ಹೊರಬಂದು ಬಿಡುತ್ತಿದ್ದರು.  ಜಗತ್ತಿಗೆ  'ಮೊಘಲ್ –ಎ- ಆಜಮ್’ ನ ಇಂಪಾದ  ಗೀತೆಗಳು ಕೇಳಲಿಕ್ಕೆ ಸಿಗುತ್ತಿರಲಿಲ್ಲ. ಆ ಪ್ರಸಂಗದ ಅಂದಿನ ಆ ಹಾಡು, “ ರಾತ್ ಇತ್ನಿ ಮತ್ವಾಲಿ ಸುಬಹ್ ಕಾ ಆಲಮ್ ಕ್ಯಾ ಹೋಗಾ” ವೊಗಲ್ ಎ ಆಜಮ್ ಚಿತ್ರದ್ದು.  ಅಂದ ಹಾಗೆ ‘ಪ್ಯಾರ ಕಿಯಾ ತೊ ಡರನಾ ಕ್ಯಾ’ ಮುಂತಾದ ಹಾಡುಗಳು ಕೂಡ ಇದೇ ಚಿತ್ರದಲ್ಲಿವೆ.  ದ್ಯಾಟ್ ಈಸ್ ಲತಾ ಮಂಗೇಶಕರ್. ದಿ ಲಿವಿಂಗ್ ಲೀಜೆಂಡ್!
( ಎಲ್ಲಿಯೋ ಓದಿದ್ದು, ಮೂಲ ಲೇಖಕರು ಯಾರಿದ್ದರೂ. ಅವರಿಗೆ ಕೃತಜ್ಞತೆಗಳು)

Rating
No votes yet

Comments

Submitted by H A Patil Thu, 10/11/2012 - 17:34

ಲಕ್ಷ್ಮಿಕಾಂತ ಇಟ್ನಾಳ ರವರ್ಇಗರೆ ವಂದನೆಗಳು
ಗಾನ ಕೋಗಿಲೆ, ಗಾನ ಸರಸ್ವತಿ ಎಂಬೆಲ್ಲ ವಿಶೇಷಣಗಳಿಂದ ಗುರುತಿಸಲ್ಪಡುವ ಭಾರತದ ಸುರ್ ಸಿಂಗಾರ್ ' ಲತಾ ಮಂಗೇಶಕರ ' ಬಗ್ಗೆ ಬಹಳ ಅಪ್ಯಾಯ ಮಾನವಾಗಿ ಬರೆದಿದ್ದೀರಿ." ಮೊಗಲ್ ಏ ಅಝಮ್ " ಒಂದು ಸಾರ್ವಕಾಲಿಕ ಚಿತ್ರಗಳ ಪೈಕಿ ಒಂದು, ನೌಶಾದರ ಸಂಗೀತ ಸಂಯೋಜನೆ ಚಿತ್ರಕ್ಕೆ ಒಂದು ಅಲೌಕಿಕ ಕಳೆ ನೀಡಿದೆ ಎನ್ನುವುದು ಅತಿಶಯೋಕ್ತಿ ಅಲ್ಲ, ಈ ಚಿತ್ರದ ಎಲ್ಲ ಹಾಡುಗಳೂ ಮೆಲುಕು ಹಾಕುವಂತ ಹವು. ನೌಶಾದರ ಸಂಗೀತ ಸಂಯೋಜನೆಯ ಗೈರತ್ತು ಅಂತಹುದು, ಇಂದಿಗೂ ಆ ಚಿತ್ರದ ಯಾವ ಹಾಡುಗಳೂ ರೇಡಿಯೋದಲ್ಲಿ ಯಾಗಲಿ ದೂರದರ್ಶನದಲ್ಲಿಯಾಗಲಿ ಬಂದರೆ ನಾನು ಅವುಗಳಿಗೆ ಕಿವಿಯಾಗುತ್ತೇನೆ, ಮನಸ್ಸು ಅವ್ಯಕ್ತ ಆನಂದದಲ್ಲಿ ತೇಲಿ ಮುಳುಗುತ್ತದೆ. ಈ ಚಿತ್ರದ ' ಮೋಹೆ ಪನಘಟಪೆ ನಂದಲಾಲ ಮೋರ ಗಯೋರೆ ' ನನ್ನ ಬಹಳ ಇಷ್ಟದ ಹಾಡು.
ಆಗಿನ ಕಾಲದಲ್ಲಿ ಹಾಡುಗಳ ತಟ್ಟೆಗಳ ಮೇಲೆ ಗಾಯಕ ಗಾಯಕಿಯರ ಹೆಸರುಗಳನ್ನು ನಮೂದಿಸುತ್ತಿರಲಿಲ್ಲ, ಮತ್ತು ಹಾಡುಗಾರರಿಗೆ ರಾಯಲ್ಟಿಯ ಸಂದಾಯ ವಾಗುತ್ತಿರಲಿಲ್ಲ. ಇದನ್ನು ಲತಾ ಮಂಗೇಶಕರ ವಿರೋಧಿಸಿದ್ದರು. ಾದರೆ ಮಹಮ್ಮದ್ ರಫಿಯವರಿಗೆ ಮತ್ತು ಲತಾರಲ್ಲಿ ಮತಬೇಧವಿತ್ತು ಹೀಗಾಗಿ ಅವರಿಬ್ಬರು ಅನೇಕ ದಿನಗಳ ಕಾಲ ಯುಗಳ ಗೀತೆಗಳನ್ನು ಹಾಡಲಿಲ್ಲ, ಸೋಲೋ ಗೀತೆಗಳನ್ನು ಮಾತ್ರ ಹಾಡುತ್ತಿದ್ದ ಲತಾ ರಫಿ, ಯುಗಳ ಗೀತೆಗಳನ್ನು ಹಾಡುತ್ತಿರಲಿಲ್ಲ, ಆ ಕಾಲದಲ್ಲಿ ರಫಿ ಜೊತೆಗೆ ಬಹಳಷ್ಟು ಯುಗಳ ಗೀತೆಗಳನ್ನು ಹಾಡುವ ಅವಕಾಶ ಸುಮನ ಕಲ್ಯಾಣಪೂರ ರವರಿಗೆ ದೊರಕಿತು. ಲತಾರ ಈ ಹೋರಾಟ ದಿಂದಾಗಿ ಹಾಡುಗಾರರ ಹೆಸರುಗಳು ಧ್ವನಿ ಮುದ್ರಿಕೆಗಳ ಮೇಲೆ ಬಂದವು, ರಾಯಲ್ಟಿ ಸಹ ದೊರೆಯಲು ಪ್ರಾರಂಭವಾಯಿತು. ಲತಾರಲ್ಲಿ ಒಬ್ಬ ಕೋಮಲಭಾವದ ಗಾಯಕಿಯಂತೆ ಹೋರಾಟದ ಒಬ್ಬ ಹೋರಾಟಗಾರ್ತಿಯೂ ಅವರಲ್ಲಿದ್ದಾಳೆ. ಲತಾರ ಹಾಡುಗಾರಿಕೆಗೆ ಮುದ ನೀಡುವ ನೋವನ್ನು ಮರೆಸುವ ಅದ್ಭುತ ಮೋಡಿಯಿದೆ. ನಾನು ಮೊದಲ ಬಾರಿಗೆ ನಾಲ್ಕು ವರ್ಷಗಳ ಕಾಲ ಹಣ ಕೂಡಿಟ್ಟು ಖರೀದಿಸಿದ್ದು ಒಂದು ಫಿಲಿಫ್ಸ್ ಟ್ರಾನ್ಸಿಸ್ಟರ್ ಯಾಕೆಂದರೆ ಅದ್ಭುತ ಹಿಂದಿ ಹಾಡುಗಳ ಮಾಧುರ್ಯ ಸವಿಯಲು, ಅದು ಗಾಯಕ ಗಾಯಕಿಯರು ಲತಾ, ಆಶಾ, ನೂರ ಜಹಾನ, ರಫಿ, ಮುಖೇಶ್, ಮನ್ನಾಡೆ, ತಲಕ ಮೆಹಮ್ಮೂದ್, ಹೇಮಂತ ದಾ ಮಂತಾದವರು ಯಾರೇ ಇರಲಿ. ಹಿಂದಿ ಕನ್ನಡ ಯಾವುದೇ ಇರಲಿ ಮಾಧುರ್ಯಪೂರ್ಣ ಹಾಡುಗಳು ಮನರಂಜಿಸುತ್ತವೆ. ಮೋಡಿ ಮಾಡುವ ಲೇಖನ ಧನ್ಯವಾದಗಳು.

Submitted by lpitnal@gmail.com Thu, 10/11/2012 - 18:24

In reply to by H A Patil

ಶ್ರೀ ಹನುಮಂತ ಅನಂತ ಪಾಟೀಲರೇ, ಅಂದಿನ ಕಾಲದ ಸಂಗೀತಯುಗದ ಕುರಿತು ತಾವು ಮೆಲುಕಿಸಿದ ಸಂಗತಿಗಳು ಮತ್ತೊಮ್ಮೆ ಆ ದಿನಗಳಿಗೆ ಕೊಂಡೊಯ್ಯುತ್ತವೆ ಹಾಗೂ ಮನಕ್ಕೆ ಇಂಪಾದ ಲಾಲಿ ಹಾಡುತ್ತವೆ. ಈ ತಿಂಗಳ ಕಸ್ತೂರಿಯಲ್ಲಿ ಆ ದಿನಗಳ ಸಂಗೀತದ ಕುರಿತು ತುಂಬ ಚನ್ನಾಗಿ ಒಂದು ಲೇಖನ ಬಂದಿದೆ. ಸಂಗ್ರಹ ಯೋಗ್ಯ ಸಂಚಿಕೆ. ಇಂತಹ ಹಾಡುಗಳಿಗಾಗಿ ನಾನೂ ಕೂಡ ತೀರ ಇತ್ತೀಚೆಗೆ ಒಂದು ಉತ್ತಮ ಫಿಲಿಪ್ಸ್ ರೇಡಿಯೋ ಕೂಡ ಕೊಂಡೆ. ಬಹಳಷ್ಟು ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು.

Submitted by Prakash Narasimhaiya Thu, 10/11/2012 - 23:02

In reply to by lpitnal@gmail.com

ಆತ್ಮೀಯ ಇಟ್ನಾಳರೆ,
ಗಾನ ಸರಸ್ವತಿಯ ಲೇಖನ ಚನ್ನಾಗಿ ಮೂಡಿ ಬಂದಿದೆ. ಆದ್ರೆ ಲತಾ ದಿದಿ ವಿವಾದ ಪ್ರಿಯಳು ಹೌದು! ಈಕೆಯ ಕಂಠ ಸಿರಿಯಾ ಮುಂದೆ ಇವೆಲ್ಲ ಗೌಣವಾಗಿದೆ. ಈಕೆಯ ಸಾಧನೆಯನ್ನು ಮೆಚ್ಚ ತಕ್ಕದ್ದೇ! ಧನ್ಯವಾದಗಳು

Submitted by lpitnal@gmail.com Fri, 10/12/2012 - 09:19

In reply to by Prakash Narasimhaiya

ಗೆಳೆಯ ಪ್ರಕಾಶ ನರಸಿಂಹಯ್ಯನವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಲತಾ ಅವರ ಕುರಿತು ಮೆಚ್ಚುಗೆಯಲ್ಲದೆ ಅವರ ಹೋರಾಟದ ಮುಖವನ್ನು ನೆನಪಿಸಿದ ತಮಗೆ ಧನ್ಯವಾದಗಳು.

Submitted by lpitnal@gmail.com Fri, 10/12/2012 - 14:01

In reply to by kavinagaraj

ಆತ್ಮೀಯ ಕವಿನಾಗರಾಜ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಲೇಖನದ ಪ್ರತಿಕ್ರಿಯೆಯು ನನಗೆ ಇನ್ನೂ ಹೆಚ್ಚು ಪ್ರೋತ್ಸಾಹಿಸಿದೆ. ತಮಗೆ ಧನ್ಯವಾದಗಳು.