ಗಾಯತ್ರಿ ಮಂತ್ರವೂ, ಅದರ ಅರ್ಥವೂ, ಮಹಾತ್ಮಾ ಗಾಂಧಿಯವರೂ

ಗಾಯತ್ರಿ ಮಂತ್ರವೂ, ಅದರ ಅರ್ಥವೂ, ಮಹಾತ್ಮಾ ಗಾಂಧಿಯವರೂ

ಗಾಯತ್ರಿ ಮಂತ್ರಕ್ಕೆ ನಮ್ಮ ದೇಶದಲ್ಲಿ ಬಹಳ ಗೌರವವಿದೆ.  ಅನೇಕರು ದಿನದ ಮೂರು ಹೊತ್ತು ಅದನ್ನು ಜಪಿಸುತ್ತಾರೆ. ಇನ್ನು ಅನೇಕರು ಅದರ ಧ್ವನಿಮುದ್ರಣ ಕೇಳುತ್ತಾರೆ.  ಆದರೆ ಅದರ ಅರ್ಥ ಏನು? 

 

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದಿಂದ ಇಳಿಸಿಕೊಂಡಿದ್ದ ಎರಡು ಪುಸ್ತಕಗಳಲ್ಲೂ ಅದು ಸಿಗಲಿಲ್ಲ. ಅದರ ಮಹತ್ವವನ್ನೇನೋ ಬಹಳಷ್ಟು ಹೇಳಿದ್ದಾರೆ.  ಯಾವ ಅಕ್ಷರ ಯಾವ ದೇವತೆ   ಇತ್ಯಾದಿ.  ಆದರೆ ಅರ್ಥ ಮಾತ್ರ ಸಿಗಲಿಲ್ಲ!

 

 

ಅಂತೂ ಒಂದೆಡೆ ಸಿಕ್ಕಿತು.  ಅದು ಶ್ರೀ ಜಿ.ಪಿ. ರಾಜರತ್ನಂ ಅವರ ಪುಸ್ತಕದಲ್ಲಿ , ಅದನ್ನು ಸಂಕ್ಷಿಪ್ತವಾಗಿ  ಹೀಗೆ ಹೇಳಬಹುದು -  

 

 

ಗಾಯಿತ್ರಿ ಎಂಬುದು ' ನಮ್ಮ  ಬುದ್ಧಿಶಕ್ತಿಯನ್ನು ಕೆರಳಿಸು'  ಎಂದು ಬೆಳಕಿನ ದೇವತೆಯಾದ ಸೂರ್ಯನನ್ನು ಪ್ರಾರ್ಥಿಸುವ ಮಂತ್ರ.  ದೈವ ಕೊಟ್ಟ  ಹೊರಗಿನ ಕಣ್ಣಿನ ಜತೆಗೆ ಮನುಷ್ಯನು ಸ್ಪಪ್ರಯತ್ನದಿಂದ  ಒಳಗಣ್ಣು  ಪಡೆಯುವುದೇ ಉಪ-ನಯನ.   ಗಾಯತ್ರಿ ಮಂತ್ರದ ಬಲದಿಂದ ತನ್ನ ಬುದ್ಧಿ ಯನ್ನು ಪ್ರಚೋದಿಸಿ  ಬ್ರಹ್ಮದ ಕಡೆಗೆ ಅಂದರೆ   ದೊಡ್ಡದರ  ಕಡೆಗೆ ನಡೆಯುವ ಬ್ರಹ್ಮಚರ್ಯವನ್ನು ಆರಂಭಿಸುವ ಕ್ರಿಯೆ ಉಪನಯನ.  ಅವನೇ ದ್ವಿಜ - ಎರಡನೆ ಸಲ ಹುಟ್ಟಿದವನು .  ಗಾಯಿತ್ರಿ  ಮಂತ್ರವನ್ನು ತಿಳಿದು ಅದನ್ನು ಸಾಧಿಸಿ  ಅದರಿಂದ ಬುದ್ಧಿಶಕ್ತಿಯನ್ನು ಕೆರಳಿಸಿ ತನ್ನ ಶೀಲವನ್ನೂ ಪ್ರಜ್ಞೆಯನ್ನೂ  ಬೆಳೆಸಿಕೊಂಡವನೇ ನಿಜವಾದ ಬ್ರಾಹ್ಮಣ.   ಇಂಥವನ ಬಲವು  ತೋಳು ಬಲಕ್ಕಿಂತ ಹೆಚ್ಚಿನದು ಎಂದು ವಿಶ್ವಾಮಿತ್ರನು ಕಂಡುಕೊಂಡು ಅದರ ಸಾಧನೆಗಾಗಿ ಗಾಯತ್ರಿ ಮಂತ್ರವನ್ನು   ಅವನು ಲೋಕಕ್ಕೆ ಕೊಟ್ಟನು. ಈ ಮಂತ್ರದಿಂದಾಗಿ ಇಡೀ ಮನುಕುಲವು   ದ್ವಿಜ ,  ಬ್ರಾಹ್ಮಣ ಆಗಬಲ್ಲುದಂತೆ. 

 

ಮುಂದುವರಿದು ರಾಜರತ್ನಂ ಹೀಗೆ ಹೇಳುತ್ತಾರೆ: -

 

ಈ ಮಂತ್ರದಲ್ಲಿ  ಯಾವ ಸೂರ್ಯನನ್ನು  ಕುರಿತು ಧ್ಯಾನ ಮಾಡುತ್ತೇವೆಯೋ ಆ ಸೂರ್ಯನ ಹಾಗೆ ತಮ್ಮ  ಪ್ರಭಾವವನ್ನು ಹತ್ತು ದಿಕ್ಕಿಗೂ ಬೀರಿ , ವ್ಯಕ್ತಿಜೀವನ, ಜನಜೀವನ, ರಾಷ್ಟ್ರ ಜೀವನದ ಹಲವಾರು ಕ್ಷೇತ್ರಗಳನ್ನು ಗಾಂಧಿಯವರ ಹಾಗೆ  ಮುಟ್ಟಿ ಅಲ್ಲೆಲ್ಲ ಬೆಳವಣಿಗೆಯನ್ನು ಕೆರಳಿಸಿದವರಲ್ಲಿ ಗಾಂಧಿಯವರ ಸಮ ಯಾರೂ ಇಲ್ಲ ಎಂದು ಲೋಕವೇ ಹೇಳುತ್ತಿದೆ. ಹೀಗೆ ನಮ್ಮ ಪಾಲಿನ ಸೂರ್ಯನಾದ ಗಾಂಧಿಯವರು ನಮ್ಮ  ಒಳಗನ್ನು  ಪ್ರಚೋದಿಸಲು ಏನು ಮಾಡಬೇಕೆಂದು ನಮಗೆ ತಿಳಿಸಿಕೊಟ್ಟರು -   ಸಂಯಮವನ್ನು ಹೊಂದಿರಿ, ಸಾಮರಸ್ಯದಿಂದ  ಅಂದರೆ ಪರಸ್ಪರ ಹೊಂದಿಕೊಂಡು ಬಾಳಿರಿ,  ( ಹೊಂದಿ ಬಾಳುವುದು  ಹೇಗೆ ಅನ್ನುವುದು  , ನಾನು  ಮುಂದೆ ಹೇಳುವ ಪುಸ್ತಕ ದಲ್ಲಿದೆ) ನಿಮ್ಮ ಸಾರವನ್ನು ಹೆಚ್ಚಿಸಿಕೊಳ್ಳಿ. ಇದನ್ನೇ   ಹಿಂದಿನ ಋಷಿಗಳು  ಹೇಳಿದ್ದಾರೆ.

 

ಒಂದು ಉಪನಿಷತ್ ವಾಕ್ಯವಿದೆ - ಏಳಿ, ಎದ್ದೇಳಿ, ಉತ್ಕೃಷ್ಟವಾದವುಗಳನ್ನು ಪಡೆದುಕೋ , ಅವುಗಳಲ್ಲಿ ಅತ್ಯುತ್ಕೃಷ್ಟವಾದುದನ್ನು ಕಂಡುಕೋ.

 

ಒಳ್ಳೆಯದನ್ನೂ ಕೆಟ್ಟದ್ದನ್ನೂ ವಿಂಗಡಿಸಿ ತಿಳಿಯುವುದು ಸುಲಭ. ಆದರೆ ಒಂದಕ್ಕಿಂತ ಹೆಚ್ಚು  ಒಳ್ಳೆಯದರಲ್ಲಿ ಒಂದನ್ನೇ ಆಯ್ದುಕೊಳ್ಳಬೇಕಾಗಿ ಬಂದಾಗ ಅದರಲ್ಲಿ ತುಂಬ ಒಳ್ಳೆಯದು ಯಾವುದೆಂದು ತಿಳಿಯುವುದು ತುಂಬಾ ಕಠಿಣ' ಅದಕ್ಕೆ ಬುದ್ಧಿಶಕ್ತಿ ತೀಕ್ಷ್ಣವಾಗಿರಬೇಕು. ಕಠೋಪನಿಷತ್ತಿನಲ್ಲಿ ಹೇಳುವಂತೆ  ಪ್ರೇಯಸ್ಸನ್ನೂ ಶ್ರೇಯಸ್ಸನ್ನೂ ಉಂಟು ಮಾಡುವ ವಸ್ತುಗಳು ಮನುಷ್ಯನ ಮುಂದೆ ಬರುತ್ತವೆ.  ಇಲ್ಲಿ   ಪ್ರೇಯಸ್ಸು ಎಂದರೆ ಪ್ರಿಯವನ್ನು  ಉಂಟು ಮಾಡುವ ಒಳ್ಳೆಯ ವಸ್ತುಗಳು - ಶ್ರೇಯಸ್ಸು  ಆ ಒಳ್ಳೆಯ ವಸ್ತುಗಳಲ್ಲಿ ತುಂಬ ಒಳ್ಳೆಯದಾದದ್ದು.  ಜಾಣನಾದವನು ಅದನ್ನು ಕಂಡುಕೊಂಡು ಅದನ್ನು ಆಯ್ದುಕೊಳ್ಳುತ್ತಾನೆ.  ಅದನ್ನು ಕಂಡುಕೊಳ್ಳಲು ಹರಿತ ಬುದ್ಧಿ ಬೇಕು.  ನಮ್ಮ ಜ್ಞಾನ ಅಷ್ಟು 

ಹರಿತವಾಗುವ ಹಾಗೆ ಮಾಡು ಎಂದು ದೈವವನ್ನು ಬೇಡುವುದೇ ಗಾಯತ್ರಿ ಯ ಉದ್ದೇಶ. 

 

ಮನುಷ್ಯ ನಿಜವಾಗಿ ಬದುಕಬೇಕಾದರೆ ಹರಿತವಾಗಲೇ ಬೇಕಾದ ಜ್ಞಾನಕ್ಕೆ ಅಡ್ಡಿಯಾಗುವವು  , ಕಾಮ , ಕ್ರೋಧ , ಲೋಭ, ಮದ, ಮತ್ಸರ,  ಮತ್ತು ಲೋಭ . ಅವುಗಳಿಂದ ಪಾರಾಗಲು  ಎಚ್ಚರವಾಗಿರಬೇಕು. ಅದಕ್ಕೆ  ಸಂಯಮ ಅಗತ್ಯ , ಅದರಿಂದ ಸಮವಾಯ  ಅಂದರೆ ಹೊಂದಿಕೊಂಡು ಬಾಳುವುದು ಸಾಧ್ಯವಾಗುತ್ತದೆ   , ಅದರಿಂದ  ಸಾರ ವೃದ್ಧಿ ಆಗುತ್ತದೆ. 

ಅದಕ್ಕಾಗಿ ಸದಾಕಾಲವೂ ನಮ್ಮ ನಡೆ ನುಡಿ 

ನೇರವಾಗಿ ಇರುವಂತೆ ಗಾಂಧಿಯವರು ತಮ್ಮನ್ನು ತಿದ್ದಲಿ ಎಂದು ಬೇಡಿಕೊಳ್ಳೋಣ - ಗಾಯತ್ರಿ ಮಂತ್ರದಲ್ಲಿ ಸೂರ್ಯನನ್ನು ದಿನಕ್ಕೆ ಮೂರು ಸಲ  ಬೇಡಿಕೊಳ್ಳುವ ಹಾಗೆ . ಅಂತ  ಜಿ.ಪಿ. ರಾಜರತ್ನಂ ಅವರು  'ಮಹಾತ್ಮರ ಮರಣ' ಎಂಬ ಪುಸ್ತಕದಲ್ಲಿ ಗಾಂಧಿಗಾಯತ್ರಿ ಎಂಬ ಅಧ್ಯಾಯದಲ್ಲಿ ಹೇಳಿದ್ದಾರೆ.

 

 

 

ಈ ಜಿ. ಪಿ. ರಾಜರತ್ನಂ ಮತ್ತು ಶಂ.ಬಾ. ಜೋಶಿ ಅವರು   (ಇದನ್ನು   ' ಯಕ್ಷಪ್ರಶ್ನೆ'  ಪುಸ್ತಕದಲ್ಲಿ ನೋಡಬಹುದು)    ಮಹಾತ್ಮಾ  ಗಾಂಧಿಯವರನ್ನು ಮಹಾಭಾರತದ   ಧರ್ಮರಾಯನ ಅವತಾರವೇ ಎಂದು ತಿಳಿಯುತ್ತಾರೆ ಎಂದು ಗಮನಿಸಿ.  ಇವತ್ತು ಈ ಮಹಾತ್ಮಾ ಗಾಂಧಿಯವರ   150ನೇ ಜನ್ಮದಿನ. ಅವರಿಗೆ  ನಮಿಸೋಣ.

 

 

Rating
Average: 3 (4 votes)