ಗಾಲ್ಫ್ ಚೆಂಡಿನ ಜೀವನ ಸಿದ್ಧಾಂತ

ಗಾಲ್ಫ್ ಚೆಂಡಿನ ಜೀವನ ಸಿದ್ಧಾಂತ

ಚಿತ್ರ

    ಗಾಲ್ಫ್ ಆಟಗಾರನಾದ KNSK ತನ್ನ ಹೃದಯಕ್ಕೆ ಹತ್ತಿರವಾದ ಈ  ಪ್ರಸಂಗವನ್ನು ಮುಂದಿಡುತ್ತಾನೆ. ನಿಮ್ಮ ಜೀವನವು ಇನ್ನು ಭರಿಸಲಾಗದಷ್ಟು ಜಿಗುಪ್ಸೆಯೆನಿಸಿ ದಿನದ 24 ಘಂಟೆಗಳು ಅದಕ್ಕೆ ಸರಿಹೋಗಲಾರವು ಎಂದೆನೆಸಿದರೆ ಈ ಉಪ್ಪಿನಕಾಯಿಯ ಗಾಜಿನ ಜಾಡಿ ಮತ್ತು ಎರಡು ಕಪ್ ಕಾಫಿಯನ್ನು ನೆನೆಪಿಸಿಕೊಳ್ಳಿ!

   ತಮ್ಮ ತತ್ವಶಾಸ್ತ್ರದ ತರಗತಿಯನ್ನು ಪ್ರಾರಂಭಿಸುವುದಕ್ಕೆ ಮುನ್ನ ಪ್ರೊಫೆಸರರೊಬ್ಬರು ಹಲವು ವಸ್ತುಗಳನ್ನು ತಮ್ಮ ಮುಂದಿರಿಸಿಕೊಂಡು ನಿಂತರು.

  ಯಾವುದೇ ಮಾತಿಲ್ಲದೆ ತರಗತಿಯು ಪ್ರಾರಂಭವಾದಾಗ; ಒಂದು ಬಹುದೊಡ್ಡದಾದ ಮತ್ತು ಖಾಲಿಯಿದ್ದ ಗಾಜಿನ  ಜಾಡಿಯನ್ನು ತೆಗೆದುಕೊಂಡು ಅದರಲ್ಲಿ ಕೆಲವು ಗಾಲ್ಫ್ ಆಟದ ಚೆಂಡುಗಳನ್ನು ತುಂಬಿಸಿ ತಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಅದು ತುಂಬಿದೆಯೇ ಎಂದು ಪ್ರಶ್ನಿಸಿದರು.

    ವಿದ್ಯಾರ್ಥಿಗಳು ಅದು ತುಂಬಿದೆ ಎಂದು ಒಪ್ಪಿಕೊಂಡರು.
  
    ತದನಂತರ ಆ ಪ್ರೊಫೆಸರರು ಡಬ್ಬವೊಂದರಲ್ಲಿದ್ದ ಸಣ್ಣ ಹರಳು-ಕಲ್ಲುಗಳನ್ನೆತ್ತಿಕೊಂಡು ಆ ಜಾಡಿಯಲ್ಲಿ ಸುರಿಯುತ್ತಾ ಹೋದರು. ಅವರು ಜಾಡಿಯನ್ನು ಮೆಲುವಾಗಿ ಅಲುಗಾಡಿಸಿದರು. ಆಗ ಆ ಸಣ್ಣ ಹರಳುಗಳು ಗಾಲ್ಫ್ ಚೆಂಡುಗಳಿದ್ದ ಖಾಲಿ ಜಾಗದಲ್ಲಿ ಉರುಳುತ್ತಾ ಸಾಗಿದವು. ಆಗ ಪ್ರೊಫೆಸರರು ಮತ್ತೆ ತಮ್ಮ ವಿದ್ಯಾರ್ಥಿಗಳನ್ನು ಈ ಜಾಡಿಯು ತುಂಬಿದೆಯೇ ಎಂದು ಪ್ರಶ್ನಿಸಿದರು.

    ವಿದ್ಯಾರ್ಥಿಗಳು ಅದು ತುಂಬಿದೆ ಎಂದು ಒಪ್ಪಿಕೊಂಡರು.

    ಆಗ ಪ್ರೊಫೆಸರರು ಇನ್ನೊಂದು ಡಬ್ಬಿಯಲ್ಲಿದ್ದ ಮರಳನ್ನೆತ್ತಿಕೊಂಡು ಅ ಜಾಡಿಯೊಳಗೆ ಸುರಿಯುತ್ತಾ ಹೋದರು. ನೀವೆಣಿಸಿದಂತೆ ಆ ಜಾಡಿಯಲ್ಲಿದ್ದ ಖಾಲಿ ಸ್ಥಳವೆಲ್ಲಾ ಭರ್ತಿಯಾಯಿತು. ಆಗ ಪ್ರೊಫೆಸರರು ಮತ್ತೊಮ್ಮೆ ತಮ್ಮ ವಿದ್ಯಾರ್ಥಿಗಳನ್ನು ಆ ಜಾಡಿಯು ತುಂಬಿದೆಯೇ ಎಂದು ಪ್ರಶ್ನಿಸಿದರು.
  
    ಆಗ ವಿದ್ಯಾರ್ಥಿಗಳೆಲ್ಲರೂ ಒಕ್ಕೊರಿಲಿನಿಂದ "ಹೌದು" ಎಂದರು.
  
    ಆಗ ಪ್ರೊಫೆಸರರು ಮೇಜಿನ ಅಡಿಯಿಂದ ಎರಡು ಲೋಟ ಕಾಫಿಯನ್ನು ಹೊರತೆಗೆದು ಅವುಗಳಲ್ಲಿದ್ದ ಕಾಫಿಯನ್ನೆಲ್ಲಾ ಆ ಜಾಡಿಯೊಳಕ್ಕೆ ಸುರಿದರು ಆಗ ಜಾಡಿಯಲ್ಲಿದ್ದ ಮರಳುಕಣಗಳ ಮಧ್ಯೆ ಇದ್ದ ಖಾಲಿ ಸ್ಥಳವೆಲ್ಲಾ ಪರಿಪೂರ್ಣವಾಗಿ ತುಂಬಿಹೋಯಿತು. ಆಗ ವಿದ್ಯಾರ್ಥಿಗಳು ನಕ್ಕರು.
   
    ನಗುವಿನ ಅಲೆಯಡುಗುತ್ತಲೆ, ಆ ಪ್ರೊಫೆಸರರು ಪ್ರಾರಂಭಿಸಿದರು, "ಈಗ, ನಾನು ನಿಮಗೆ ತಿಳಿಯ ಹೇಳುವ ವಿಚಾರವೇನೆಂದರೆ ಈ ಜಾಡಿಯು ನಿಮ್ಮ ಜೀವನದಂತೆ. ಗಾಲ್ಫ್ ಚೆಂಡುಗಳು ಮುಖ್ಯವಾದ ವಿಷಯಗಳಂತೆ, ಕುಟುಂಬ, ಮಕ್ಕಳು, ಆರೋಗ್ಯ, ಸ್ನೇಹಿತರು ಹಾಗೂ ಆಸಕ್ತಿದಾಯಕ ವಿಷಯಗಳು; ಇವಿದ್ದರೆ ನೀವು ಎಲ್ಲವನ್ನೂ ಕಳೆದುಕೊಂಡರೂ ಪರಿಪೂರ್ಣರಾಗಿರುತ್ತೀರಿ. ಕಲ್ಲಿನ ಹರಳುಗಳು ನಿಮ್ಮ ಜೀವನಕ್ಕೆ ಬೇಕಾಗುವ ಇತರೆ ವಸ್ತುಗಳು: ಉದ್ಯೋಗ, ಮನೆ, ಕಾರು ಇತ್ಯಾದಿ. ಉಳಿದ ಎಲ್ಲಾ ಸಂಗತಿಗಳು ಮರಳಿನಂತೆ ಸಣ್ಣಪುಟ್ಟ ವಿಷಯಗಳು.

    "ನೀವು ಒಂದು ವೇಳೆ ಮರಳನ್ನು ಜಾಡಿಯಲ್ಲಿ ತುಂಬಿಸಿದ್ದೇ ಆದರೆ  ಕಲ್ಲಿನ ಹರಳುಗಳಿಗಾಗಲಿ ಅಥವಾ ಗಾಲ್ಫ್ ಚೆಂಡುಗಳಿಗಾಗಲಿ ಅಲ್ಲಿ ಸ್ಥಳವಿರುವುದಿಲ್ಲ. ಇದೇ ತತ್ವ ಜೀವನಕ್ಕೂ ಅನ್ವಯಿಸುತ್ತದೆ; ಅದೇನೆಂದರೆ ನೀವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ಹೆಚ್ಚು ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದರೆ, ನಿಮಗೆ ಮುಖ್ಯವಾದ ವಿಷಯಗಳೆಡೆಗೆ ಗಮನ ಕೊಡಲು ಅವಕಾಶವೇ ಇರುವುದಿಲ್ಲ."

    "ಆದ್ದರಿಂದ ನಿಮ್ಮ ಸಂತೋಷಕ್ಕೆ ಬಹಳ ಮುಖ್ಯವಾದ ವಿಷಯಗಳಿಗೆ ಗಮನ ಹರಿಸಿ. ನಿಮ್ಮ ಮಕ್ಕಳೊಂದಿಗೆ ಆಟವಾಡಿ, ಆರೋಗ್ಯ ತಪಾಸಣೆಗೆ ಸಮಯ ಮೀಸಲಿಡಿ, ನಿಮ್ಮ ಸಂಗಾತಿಯನ್ನು ಜೌತಣಗಳಿಗೆ ಹೊರಗಡೆ ಕರೆದೊಯ್ಯಿರಿ. ಮತ್ತೊಂದು ಸುತ್ತು ಗಾಲ್ಫ್ ಆಟವನ್ನು ಆಡಿ. ನಿಮಗೆ ಯಾವಾಗಲೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಹುಲ್ಲುಗಾವಲನ್ನು ಮೊಟಕುಗೊಳಿಸಲು ಸಮಯವಿದ್ದೇ ಇರುತ್ತದೆ. ನಿಮ್ಮ ಆದ್ಯತೆಗಳನ್ನು ಗುರುತಿಸಿ; ಆಗ ಬಾಕಿಯೆಲ್ಲಾ ಮರಳೆಂದು ಸಣ್ಣದಾಗಿ ತೋರುವುದು."

    ಆಗ ವಿದ್ಯಾರ್ಥಿನಿಯೋರ್ವಳು ತನ್ನ ಕೈಯ್ಯನ್ನು ಮೇಲೆತ್ತಿ ವಿಚಾರಿಸಿದಳು, "ಹಾಗಾದರೆ ಕಾಫಿಯು ಏನನ್ನು ಪ್ರತಿನಿಧಿಸುತ್ತದೆ?"

    ಪ್ರೊಫೆಸರರು ಹಸನ್ಮುಖರಾಗಿ, ನೀನು ಈ ಪ್ರಶ್ನೆಯನ್ನು ಕೇಳಿದ್ದಕ್ಕೆ ಖುಷಿಯಾಯ್ತು. ನಮ್ಮ ಜೀವನ ಎಷ್ಟೇ ಭರ್ತಿಯಾಗಿದೆಯೆಂದರೂ ಕೂಡ ಅಲ್ಲಿ ಯಾವಾಗಲೂ ಸ್ನೇಹಿತರೊಂದಿಗೆ ಒಂದು ಕಪ್ ಕಾಫಿ ಸೇವಿಸಲು ಸ್ಥಳವಿದ್ದೇ ಇರುತ್ತದೆ.
=================================================================================================
ವಿ.ಸೂ: ಇದನ್ನು ಸಂಪದಿಗ ಗೆಳೆಯ ಶ್ರೀಕರ್ ಮಿಂಚಂಚೆಯಲ್ಲಿ ಕಳುಹಿಸಿದ ಇಂಗ್ಲೀಷ್ ಲೇಖನದ ಕನ್ನಡ ಅನುವಾದ.
ಮೂಲ ಕೊಂಡಿಗಾಗಿ ಇಲ್ಲಿ ನೋಡಿ.

http://churumuri.wordpress.com/2007/01/11/the-golf-ball-theory-of-life/#comment-153704.

    ನೀವು "Mayonnaise Jar and two cups of coffee" ಎಂಬ ಹುಡುಕು ಪದವನ್ನು ಬೆರಳಚ್ಚಿಸಿ 'ಗೂಗಲಿಸಿ' ನೋಡಿ, ನಾಲ್ಕು ಲಕ್ಷಕ್ಕೂ ಅಧಿಕ ಕೊಂಡಿಗಳು ಇದರ ಬಗ್ಗೆ ಸಿಗುತ್ತವೆ! Mayonnaise Jar ಎನ್ನುವುದಕ್ಕೆ ನನಗೆ ಸರಿಯಾದ ರೂಪಾಂತರ ಸಿಕ್ಕಲಿಲ್ಲ ಆದರೆ ಕೊಂಡಿಯೊಂದರಲ್ಲಿ ಅದರ ಚಿತ್ರವಿದ್ದುದರಿಂದ ಅದು ಉಪ್ಪಿನಕಾಯಿಯ ಜಾಡಿಯಂತೆ ಇದ್ದು ಗಾಜಿನಿಂದ ಮಾಡಲ್ಪಟ್ಟಿರುತ್ತದೆ ಎನ್ನುವುದು ತಿಳಿಯಿತು, ಹಾಗಾಗಿ ಅದನ್ನು ಉಪ್ಪಿನಕಾಯಿ ಜಾಡಿ ಎಂದು ಅನುವಾದ ಮಾಡಿದ್ದೇನೆ. ಇನ್ನು KNSKಗೆ ಸರಿಯಾದ ವಿವರಣೆ ಸಿಕ್ಕಲಿಲ್ಲ ಅದನ್ನು ಹೇಗಿದ್ದರೂ ಶ್ರೀಕರ್ ಅಥವಾ ಅಂಡಾಂಡಭಂಡ ಗಣೇಶರು ಒದಗಿಸುತ್ತಾರೆ ಬಿಡಿ, ಸಂಶಯವೇಕೆ? :)

ಚಿತ್ರ ಕೃಪೆಃ ಗೂಗಲ್

 

 

Rating
No votes yet

Comments