ಗೀತೆಯ ಗುಟ್ಟು - 2

ಗೀತೆಯ ಗುಟ್ಟು - 2

 ಭಾರತವೂ ಗೀತೆಯು:

ಇಲ್ಲಿ ಗೀತಾಗ್ರಂಥವೊಂದೇ ಪ್ರಸ್ತುತವಾಗಿರುವುದರಿಂದ ಅದರ ಮಹತ್ವವೂ ಮತ್ತು ಮಹಾತ್ಮ್ಯವೂ ಎಷ್ಟಿರುವುದೆಂಬುದನ್ನು ನೋಡಿ ಹೀಗಿರುವ ಕಾರಣಗಳನ್ನು ಸ್ವಲ್ಪ ಮಟ್ಟಿಗೆ ಈ ಪ್ರಕರಣದಲ್ಲಿ ಹೇಳಬೇಕಾಗಿದೆ. ಗೀತೆಯ ವಿಷಯದಲ್ಲಿ ಪ್ರಚ ಲಿತವಿದ್ದ

ಸರ್ವೋಪನಿಷದೋ ಗಾವೋ |

ದೋಗ್ಧಾ ಗೋಪಾಲನಂದನಃ ||

ಪಾರ್ಥೋ ವತ್ಸಃ ಸುಧೀರ್ಭೋಕ್ತಾ |

ದುಗ್ಧಂ ಗೀತಾಮೃತಂಮಹತ್ ||

ಎಂಬ ಶ್ಲೋಕವಂತೂ ಅಬಾಲವೃದ್ಧರಿಗೂ ಪರಿಚಿತವಿರುವುದು.

 ಶ್ರೀಕೃಷ್ಣನೆಂಬ ಗೌಳಿಗನು ಉಪನಿಷತ್ತುಗಳೆಂಬ ಆಕಳುಗಳನ್ನು ಹಿಂಡಿ ಗೀತಾಮೃತವೆಂಬ ಹಾಲನ್ನು ಅರ್ಜುನನಿಗೆ ಉಣಿಸಿದನೆಂಬುದು ಇದರ ಭಾವಾರ್ಥ. ಗೀತೆಯು ಉಪನಿಷತ್ತುಗಳ ಸಾರಸರ್ವಸ್ವ, ಗೀತೆಯು ಉಪನಿಷತ್ತುಗಳನ್ನು ಕಡೆದುತೆಗೆದ ಬೆಣ್ಣೆ ಎಂಬುದೇ ಇದರ ತಾತ್ಪರ್ಯ. ಅನೇಕ ಗ್ರಂಥಗಳಲ್ಲಿ ಬೇರೆ ಬೇರೆ ಋಷಿಮುನಿಗಳೂ, ವೇದಾಂತಿಗಳೂ, ವಿದ್ವಾಂಸರೂ ಗೀತೆಯ ಮಾಹಾತ್ಮ್ಯವನ್ನು ಪರಿಪರಿಯಿಂದ ವರ್ಣಿಸಿದ್ದಾರೆ. ಇದನ್ನೆಲ್ಲ ಇಲ್ಲಿ ವಿವರಿಸುವ ಕಾರಣವಿಲ್ಲ. ಆದರೆ ಯಾವ ಮಹಾಭಾರತದಲ್ಲಿ ಗೀತೆಯು ಇರುವುದೋ ಅದೇ ಗ್ರಂಥದಲ್ಲಿ ಗೀತೆಯ ವಿಷಯಕ್ಕಿಂತ ಒಂದು ಮಹತ್ವದ ಉಲ್ಲೇಖವನ್ನು ಇಲ್ಲಿ ಕೊಡುವೆ. ವೈಶಂಪಾಯನ ಮುನಿಗಳು ಜನಮೇಜಯನಿಗೆ ಗೀತಾ ಮಾಹಾತ್ಮ್ಯವನ್ನು ಹೇಳುವಾಗ ,

 ಭಾರತಂ ಸರ್ವಶಾಸ್ತ್ರೇಷು ಭಾರತೇ ಗೀತಿಕಾ ವರಾ |

ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರಸಂಗ್ರಹೈ |

ಸರ್ವಶಾಸ್ತ್ರಮಯೀ ಗೀತಾ . . . . . |

ಭಾರತಾಮೃತಸರ್ವಸ್ಯ ಗೀತಾಯಾ ಮಥಿತಸ್ಯ ಚ |

ಸಾರಮುದ್ಧೃತ್ಯ ಕೃಷ್ಣೇನ ಅರ್ಜುನಸ್ಯ ಮುಖೇ ಹುತಮ್ ||

 ಅಂದರೆ “ಅನೇಕ ಶಾಸ್ತ್ರಗಳನ್ನು ಸಂಗ್ರಹಿಸುವುದಕ್ಕಿಂತ ಗೀತೆಯನ್ನು ಚೆನ್ನಾಗಿ ಅಭ್ಯಸಿಸಬೇಕು. ಗೀತೆಯು ಸರ್ವಶಾಸ್ತ್ರಮಯಿಯಾದುದು. ಭಾರತದ ತಿರುಳನ್ನು ತೆಗೆದು ಗೀತಾರೂಪದಿಂದ ಅದನ್ನು ಕೃಷ್ಣನು ಅರ್ಜುನನಿಗೆ ಉಪದೇಶಿಸಿದನು” ಎಂದು ಅಂದಿರುವರು. ಇಡೀ ಮಹಾಭಾರತದಲ್ಲಿ ಇನ್ನಾವ ಗ್ರಂಥದ ಬಗ್ಗೆಯೂ ಇಷ್ಟು ಗೌರವಯುಕ್ತ  ಉಲ್ಲೇಖವಿಲ್ಲ.

 ಪ್ರಸ್ಥಾನತ್ರಯಿಯು:

 ಹಿಂದೂ ತತ್ವಜ್ಞಾನದ, ಹಿಂದೂ ಧರ್ಮದ, ಹಿಂದೂ ನೀತಿಶಾಸ್ತ್ರದ ಅತ್ಯಂತ ಶ್ರೇಷ್ಠವಾದ ಆದಿಗ್ರಂಥಗಳಲ್ಲಿ ಶ್ರೀಮದ್ಭಗವದ್ಗೀತೆಯು ಒಂದು. ಏನಿಲ್ಲೆಂದರೂ ಇದು 2000 ವರ್ಷಗಳ ಆಚಿನದೆಂದು ವಿದ್ವಾಂಸರ ಮತವಿರುವುದು. ಕ್ರಿಸ್ತೀಶಕದ  ಸುಮಾರು 300 ವರ್ಷ ಪೂರ್ವದಲ್ಲಿ ಈ ಗ್ರಂಥಕ್ಕೆ ಸದ್ಯಕ್ಕಿರುವ ರೂಪವು ಕೊಡಲ್ಪಟ್ಟಿತೆಂದು ತಜ್ಞರ ಅಭಿಮತ.  ಆರ್ಯರ ತತ್ವಜ್ಞಾನದ ಮತ್ತು ಧರ್ಮದ ವಿರುದ್ಧ ಎಲ್ಲಕ್ಕೂ ಬಲವಾದ ಮೊದಲನೆಯ ದಾಳಿಯು ನಮ್ಮ ಆರ್ಯಧರ್ಮದಿಂದಲೇ ಭರತಖಂಡದಲ್ಲಿ ಹುಟ್ಟಿದ ಬೌದ್ಧಧರ್ಮದ್ದು. ಆ ದಾಳಿಯನ್ನು ಹಿಮ್ಮೆಟ್ಟಿಸುವಾಗ, ಆ ಯುದ್ಧದಲ್ಲಿ ಯಶಸ್ವಿಯಾಗಿ ಬದುಕಿಬಾಳುವ ಪ್ರಸಂಗವು ಒದಗಿದಾಗ, ವೈದಿಕ ಮತದ ಆರ್ಯರು ತಮ್ಮ ಧರ್ಮ ತತ್ವಗಳ ಪುನಃ ಸ್ಥಾಪನೆಮಾಡಬೇಕಾಯಿತು. ಆಗ ತಮ್ಮ ತತ್ವಗಳಿಗೆ ಆಧಾರ ಭೂತವಾದ, ಮೂಲ ಮುಖ್ಯ ಮೂರು ಗ್ರಂಥಗಳು, ಎಂದು ಮನ್ನಿಸಿ, ಧರ್ಮ ಸಂಸ್ಥಾಪಕರಾದ ಆಚಾರ್ಯರು ಅವುಗಳನ್ನವಲಂಬಿಸಿ, ಮೃತಪ್ರಾಯವಾದ ಹಿಂದೂ ಧರ್ಮದಲ್ಲಿ ಜೀವಕಳೆ ತುಂಬಿದರು. ಆ ಮೂರು ಗ್ರಂಥಗಳಲ್ಲಿ ಗೀತೆಯೂ ಒಂದು. ದಶೋಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಹೀಗೆ ಮೂರು ಗ್ರಂಥಗಳು “ಪ್ರಸ್ಥಾನತ್ರಯಿ” ಎಂಬ ಉಚ್ಛ ಹೆಸರನ್ನು ಪಡೆದಿರುವವು. ಈ ಮೂರು ಗ್ರಂಥಗಳ ಗಟ್ಟಿ ತಳಹದಿಯ ಮೆಲೆ ಆರ್ಯಧರ್ಮದ ಭದ್ರ ಕೋಟೆಯು ಕಟ್ಟಲ್ಪಟ್ಟಿರುವುದು. ಅಂದಿನಿಂದ ಇಂದಿನವರೆಗೆ ಗೀತೆಯ ಮಹತ್ವವು ಬೆಳೆಯುತ್ತಲೇ ಬಂದಿರುವುದು. ಪ್ರಸ್ಥಾನತ್ರಯಿಯಲ್ಲಿ ಸೇರುವುದಕ್ಕೂ ಪೂರ್ವದಲ್ಲಿಯೇ ಗೀತೆಯು ಒಂದು ಒಳ್ಳೆಯ ಸನ್ಮಾನ್ಯ ಗ್ರಂಥವಾಗಿತ್ತು. ಅದಕ್ಕೆ ಎಷ್ಟೋಭಾಷ್ಯಗಳು ಬರೆಯಲ್ಪಟ್ಟಿದ್ದವು. ಅದು ನಿತ್ಯ ಪಾಠದ ಪವಿತ್ರ ಪುಸ್ತಕವಾಗಿತ್ತು. ಆಧ್ಯಾತ್ಮ ಪ್ರಗತಿಯ ಶ್ರೇಷ್ಠ ಸಾಧನವಾಗಿತ್ತು. ಆದುದರಿಂದಲೇ ಅದಕ್ಕೆ ಪ್ರಸ್ಥಾನತ್ರಯಿಯಲ್ಲಿ ಸ್ಥಾನವು ದೊರಕಿತು.  ಅಂದಿನಿಂದ ಇದುವರೆಗೆ ಅಚ್ಚಳಿಯದೇ ಗೀತೆಯು ಆರ್ಯಧರ್ಮ ಪ್ರಕಾಶವನ್ನು ಬೀರುತ್ತಿರುವುದು, ಆರ್ಯರನ್ನು ಉದ್ಧರಿಸುತ್ತಿರುವುದು. ನಮ್ಮ ಅಧೋಗತಿಯ ಕಾಲಕ್ಕೆ ಅದರ ಸೊಲ್ಲು ಅಡಗಿಕೊಳ್ಳುತ್ತಿದ್ದರೂ ಗಾಳಿ ಬಿಟ್ಟಕೂಡಲೇ ಪ್ರಜ್ವಲಿಸಲನುವಾಗುವ ಬೆಂಕಿಯಂತೆ ಗೀತೆಯ ಜ್ಯೋತಿಯು ಉದಯ ಕಾಲದ ಸಂಧಿಗೆ ನಮ್ಮ ಭೂಮಿಯಲ್ಲಿ ಬೆಳಗಿ ನಮಗೆ ಆಗಾಗ್ಗೆ ಜ್ಞಾನ, ಭಕ್ತಿ, ಶಕ್ತಿಗಳನ್ನು ಕೊಟ್ಟು ಕಾಪಾಡುತ್ತಿರುವುದು.

(ಮುಂದುವರೆಯುವುದು......)

 

 

Rating
No votes yet

Comments