ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........
ಒಂದು ದಿನ ಅಳಿಲುಮರಿಯೊಂದು(ಕಾಗೆ ಅಟ್ಟಿಸಿಕೊಂಡು ಬರುವಾಗ) ಸೀದಾ ನಮ್ಮ ಮನೆ ಬಾಗಿಲಿಗೆ ಬಂತು.ಕಾಗೆಯನ್ನು ಓಡಿಸಿ ಮರಿಯನ್ನು ತೆಂಗಿನಮರದ ಬುಡದಲ್ಲಿ ಬಿಟ್ಟು ಹಿಂದೆ ಬಂದು ನೋಡಿದರೆ ನನ್ನ ಬಳಿಯಲ್ಲೇ ಬಂದಿತ್ತು. ಅಲ್ಲೆಲ್ಲೂ ಅದರ ತಾಯಿ ಕಾಣಿಸದಿದ್ದುರಿಂದ ಸ್ವಲ್ಪ ದೊಡ್ಡದಾಗುವವರೆಗೆ ಸಾಕುವ ಎಂದು ಒಳಗೆ ತಂದೆನು.ಅದೇ ಸಮಯದಲ್ಲಿಧರ್ಮಸ್ಥಳಕ್ಕೆ ಹೋಗಲಿಕ್ಕಿದ್ದುದರಿಂದ ಅದನ್ನೂ ಬುಟ್ಟಿಯಲ್ಲಿಟ್ಟುಕೊಂಡು,ಪಿಲ್ಲರಿನಲ್ಲಿ ಹಾಲು ಕೊಟ್ಟು,ಕಾರಲ್ಲಿ ೩ ದಿನ್ ಸುತ್ತಾಡಿಸಿ ಬಂದಿದ್ದೆವು.
ಹಿಂದಿರುಗಿದ ಮೇಲೆ ಹಗಲೆಲ್ಲ ಮನೆ ಸುತ್ತುವ ಸ್ವಾತಂತ್ರ್ಯ ಕೊಟ್ಟಿದ್ದೆವು. ರಾತ್ರಿ ಮಾತ್ರ ಅದನ್ನು ಗೂಡಲ್ಲಿ ಹಾಕುತಿದ್ದೆವು.ನನ್ನ ಮಗಳನ್ನಂತೂ ಅದು ಬಹಳ ಹಚ್ಚಿಕೊಂಡಿತ್ತು. ಅವಳ ರೂಮಿನಲ್ಲೇ ಹೆಚ್ಚಿನ ಸಮಯವಿದ್ದು, ಸ್ಕೂಲಿನಿಂದ ಅವಳು ಬರುವುದನ್ನೇ ಕಾಯುತಿತ್ತು. ದಿನಹೋದಂತೆ ಅದರ ಉಗುರು, ಹಲ್ಲು ಬೆಳೆದು ನಮ್ಮ ಮರದ ಸಾಮಾನುಗಳು,ಗೋಡೆಯನ್ನೆಲ್ಲಾ ಕೆರೆದು ಹಾಳು ಮಾಡುತಿತ್ತು.ಮಗಳನ್ನು ಬಿಟ್ಟು ಉಳಿದವರನ್ನೆಲ್ಲಾ ಕಚ್ಚಲು ಬರುತಿತ್ತು(ಅದಕ್ಕೆ ಆಟ). ಮಗಳು ಸ್ಕೂಲಿಗೆ ಹೋಗುವಾಗ ಅವಳ ರೂಮಲ್ಲಿ ಬಿಟ್ಟು ಬಾಗಿಲು ಚಿಲಕ ಹಾಕಿ ಹೋಗುತ್ತಿದ್ದಳು.ಎಲ್ಲಾದರು ತಪ್ಪಿ ಆ ರೂಮಿನ ಬಾಗಿಲು ತೆರೆದರೆ ನಾವು ಟೀಪಾಯಿಯಿಂದ, ಸೋಫಾ, ಸೋಫಾದಿಂದ ಮೇಜಿಗೆ ಜಿಗಿಯುತ್ತಾ ತಪ್ಪಿಸಿಕೊಳ್ಳಬೇಕಿತ್ತು.ಅದಕ್ಕೆ ತಿನ್ನಲು ಏನಾದರು ಹಾಕುತ್ತಾ,ಮಗಳ ಕೋಣೆ ತಲುಪಿ,ಅಲ್ಲಿಂದ ಅದು ತಿಂದು ಮುಗಿಸುವುದರೊಳಗೆ ಓಡಿ ಬಂದು ಬಾಗಿಲು ಹಾಕಬೇಕು.
ಅದನ್ನು ಹುಡುಕುವುದೂ ಕಷ್ಟವಿರಲಿಲ್ಲ. “ಗುಂಡೂ”ಅಂದರೆ ಸಾಕು ಅದು ಕಪಾಟಿನೊಳಗೆ busyಯಾಗಿದ್ದರೂ, ತಲೆ ಹೊರಹಾಕಿ ನೋಡುತಿತ್ತು.
ಒಂದು ದಿನ ನೆಂಟರೊಬ್ಬರು ಬಂದಿದ್ದರು. ಮಗಳ ಮೈಯಲ್ಲಿ ಆರಾಮ ಓಡಾಡುತ್ತಿದ್ದ ಅಳಿಲನ್ನು ನೋಡಿ ನಾವು ಬೇಡ ಬೇಡ ಎಂದರೂ “ಅದೇನೂ ಮಾಡುವುದಿಲ್ಲ,ನಮ್ಮ ಆಫೀಸಿನ ಹತ್ತಿರವೂ ಬಹಳ ಅಳಿಲುಗಳಿವೆ” ಎನ್ನುತ್ತಾ ಹಿಡಿಯಲು ಹೋದರು.”ಅಯ್ಯೋ” ಎಂದು ಕಿರುಚಿದವರೇ ಅದನ್ನು ಅಷ್ಟು ದೂರ ಎಸೆದಿದ್ದರು. ಪುಣ್ಯಕ್ಕೆ ಎನೂ ಆಗಿರಲಿಲ್ಲ.
ಇದೊಂದು ದೊಡ್ಡ ರಾಮಾಯಣವಾಗಲು ಸುರುವಾಯಿತು.ಅಳಿಲನ್ನು ಮರಕ್ಕೆ ಬಿಡು ಎಂದರೆ ಮಗಳು ರೆಡಿಯಿಲ್ಲ.ಅದೂ ಸಹ ಬಾಗಿಲು ತೆರೆದಿಟ್ಟರೂ ಹೊರಗೆ ಹೋಗಲು ರೆಡಿಯಿಲ್ಲ.(ಎಷ್ಟೇ ಕಚ್ಚಿಸಿಕೊಂಡರೂ ನಮಗೂ ಅದನ್ನು ಬಿಟ್ಟಿರಲು ಮನಸಿಲ್ಲ.)
ಒಂದು ದಿನ…………”ಗುಂಡೂ “ನಿನ್ನನ್ನು ಮರೆಯಲಾಗುತ್ತಿಲ್ಲ.
Comments
ಉ: ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........