ಗುರಜ್ಜನೂ ಹುಣಿಸೆಮರದ ಮೋಹಿನಿಯೂ

ಗುರಜ್ಜನೂ ಹುಣಿಸೆಮರದ ಮೋಹಿನಿಯೂ

ಅಗ್ಗದ ಬಾಡಿಗೆ ಕಲ್ಲಿನ ಮನೆಗಳ

ಓದುವ ಕೋಣೆಯ ವಠಾರ ವಾಸದಿ

ದೂಡಿದ ದಿನಗಳ ನೆನಪಿನ ಅಂಗಳ

ಭಾರೀ ಗಾತ್ರದ ಹುಣಿಸೆಯ ಮರದ

ಕೊಂಬೆಯ ನೆರಳಿನ ತಂಪಿನ ತಾಣದಿ

ನಲಿಯುತ ಕಳೆದಿಹ ಸಾಹಸ ದಿನಗಳು

ಈಗಿನ ದಿನಗಳ ದಿನಚರಿ ನೀರಸ

ಬೀಡಿಯ ಸೇದುತ ಗೂರಲು ಗುರಜ್ಜ

ಹೇಳಿದ ಮೋಹಿನಿ ಕತೆಗಳ ಮೋಹದ

ಸೆಳೆತದ ಸನ್ನಿಯ ಸುಳಿಯಲಿ ಸಿಲುಕಿದ

ಹುಡುಗರ ಪೇಚಿನ ಮೋಹಿನಿ ಪ್ರಸಂಗ

 

ಕರಾಳ ರಾತ್ರಿಯ ಚೇಷ್ಟೆಯ ದೆವ್ವದ 

ತಿಂಗಳ ಬೆಳಕಿನ ಮೋಹಿನಿ ಕತೆಗಳ

ಮೂಗನು ಅರಳಿಸಿ ಕಣ್ಣನು ಅಗಲಿಸಿ

ಭಯಾನಕ ಕತೆಗಳ ಭಯದಲು ಬಿಡದೆ

ಕೇಳಿದ ಹುಡುಗರು ರಾತ್ರಿಯ ಹೊತ್ತಲಿ

ಒಬ್ಬರೆ ಹೊರಗಡೆ ಹೋಗಲೆ ಒಲ್ಲರು

 

ಗಾಳಿಗೆ ಹಾರುವ ಕೆದರಿದ ಕೂದಲ

ಹಣೆಯಲಿ ಕಾಸಿನ ಅಗಲದ ಕುಂಕುಮ

ತಿಂಗಳ ಬೆಳಕಿನ ತಣ್ಣನೆ ರಾತ್ರಿಯ

ಹಾಲಿನ ಬಣ್ಣದ ಹೊಳೆಯುವ ಸೀರೆಯ

ಕಾಲಿನ ಗೆಜ್ಜೆಯ ಘಲ್ ಘಲ್ ಸದ್ದಿನ

ನಿರ್ಜನ ರಾತ್ರಿಯ ಹುಣ್ಣಿಮೆ ಬೆಳಕಲಿ

ಕಲ್ಲುಮುಳ್ಳು ಕರಗುವ ಹೊತ್ತಲಿ

ದೂರದಿ ಕೇಳುವ ಗೆಜ್ಜೆಯ ಸದ್ದಲಿ

ಮೋಹಿನಿ ನಡಿಗೆಯ ಹೆಜ್ಜೆಯ ತಾಳಕೆ

ಶೋಕದ ಹಾಡಿನ ರಾಗದ ವೇದನೆ

 

ಸ್ಮಶಾನ ನರಿಗಳ ಕರ್ಕಶ ಕೂಗಿಗೆ

ಗುಡ್ಡದ ಬದಿಯ ತೋಳಗಳುತ್ತರ

ನಾಯಿಯು ಬೊಗಳುವ ಹಿನ್ನೆಲೆ ಕೂಗಲಿ

ಕೋಪದಿ ಕಣ್ಣಿನ ಕೆಂಡವ ಕಾರುವ

ಕೋರೆಯ ಹಲ್ಲಿನ ರಕ್ತದ ನಾಲಿಗೆ

ತೋರುವ ಸಿಟ್ಟಿನ ಮಾಯಾ ಮೋಹಿನಿ

 

ಸುಂದರ ರೂಪದ ಹುಡುಗರ ಸೆಳೆಯುತ

ಸಂಮೋಹನದಲಿ ದೂರಕೆ ಸೆಳೆಯುವ

ಮೋಹಿನಿ ದೆವ್ವದ ತೆಕ್ಕೆಗೆ ಬೀಳುವ

ರಕ್ತವ ಕಾರಿಸಿ ಪ್ರಾಣವ ಹೀರುವ

ಭೀಬತ್ಸ ಚಿತ್ರದ ಭಯಾನಕ ಕತೆಗಳ   

ಬಣ್ಣಿಸಿ ಹೇಳುವ ಗೂರಲು ಗುರಜ್ಜ

 

ಕತೆಯನು ಕೇಳಿದ ಹುಡುಗರ ಮುಖಗಳು

ಹೆದರಿಕೆ ಭಯದಲಿ ಮೌನದಲಿದ್ದರೆ

ಹುಣ್ಣಿಮೆ ಬರುವುದು ಎರೆಡೇ ದಿನದಲಿ

ಹುಣಿಸೇ ಮರದಲಿ ಮೋಹಿನಿ ಇರುವಳು

ಮದುವೆಯೆ ಆಗದ ಹುಡುಗರ ಕಂಡರೆ

ಬಿಡದೇ ಕಾಡುವ ಮೋಹಿನಿ ಕಾಟಕೆ

ತಾಯಿತ ಸಿಗುವವು ರಟ್ಟೆಗೆ ಕಟ್ಟಲು

ಒಂದೇ ರೂಪಾಯಿಗೊಂದು ತಾಯಿತ

ಬೀಡಿಯ ಸೇದುತ ಹೊಗೆಯನು ಬಿಟ್ಟು

ಪುಕ್ಕಟೆ ಸಲಹೆಯ ಕೊಟ್ಟನು ಗುರಜ್ಜ

 

ಮನದಲಿ ಕಾಸಿನ ಲೆಕ್ಕವ ಹಾಕುತ

ಕಂಬಳಿ ಕೊಡವಿ ಹೊದ್ದನು ಮಲಗಲು

ಮಲಗಿದ ಕೂಡಲೆ ಗೊರಕೆಯ ಹೊಡೆಯುವ

ಗುರಜ್ಜ ಮುಗಿಸಿದ ಮೋಹಿನಿ ಕತೆಯನು

 

ಊಟದ ನಂತರ ಮಲಗಲು ಆಗದೆ

ಮೋಹಿನಿ ನೆನಪಲಿ ಓದಲು ಆಗದೆ

ಕತ್ತಲ ಕೋಣೆಯ ಹೆದರಿಕೆ ದಿಗಿಲಿಗೆ

ಬೆಳಕಿನ ದೀಪವ ಆರಿಸಲಾಗದೆ

ಗುಂಪಲಿ ಕುಳಿತು ಪಿಳಿಪಿಳಿ ಕಣ್ಣಲಿ

ನಿದ್ದೆಯ ಮಾಡದೆ ರಾತ್ರಿಯ ಕಳೆಯುವ

ಗೋಳಿನ ನಡುವೆ ನೀರವ ನಿಃಶಬ್ದದ

ಭಯವನು ಬಿತ್ತುವ ಹುಣ್ಣಿಮೆ ರಾತ್ರಿಯು

 

ದೂರದಿ ಮೆಲ್ಲನೆ ಗೆಜ್ಜೆಯ ಶಬ್ದವ

ಕೇಳಿದ ಹುಡುಗರ ಎದೆಯಲಿ ನಡುಕ

ಕಾಲಿನ ಗೆಜ್ಜೆಯ ಘಲ್ ಘಲ್ ಶಬ್ದವು

ಕೋಣೆಯ ಕಿಡಿಕಿಗೆ ಹತ್ತಿರವಾಗಲು

ವಿದ್ಯುತ್ ದೀಪವು ಪಕ್ಕನೆ ಆರಲು

ದೂರದಿ ನರಿಗಳು ಒಮ್ಮೆಲೆ ಊಳಿಡೆ

ಓಣಿಯ ನಾಯಿಗಳೆಲ್ಲವು ಅಳುತಿರೆ

ಹುಣಿಸೆ ಮರದ ಮಾಯಾ ಮೋಹಿನಿ

ನಮ್ಮನೆ ಹಿಡಿಯಲು ಬಂದಿಹಳೆಂದು

ಮಡಿಸಿದ ಹೊದಿಕೆಯ ಪಕ್ಕನೆ ಬಿಡಿಸಿ

ಬುರಿಕೆಯ ಹೊದೆಯುತ ಕಣ್ಗಳ ಮುಚ್ಚಿ

ಬೆರಳುಗಳೆರಡನು ಕಿವಿಯೊಳು ತೂರಿಸಿ

ಮೈಯನು ಬಿಗಿದು ಗೂಡ್ರಿಸಿ ಮಲಗಲು

ಕನಸಲು ಬಿಡದ ಮೋಹಿನಿ ಭಯದಲಿ

ನಿದ್ರೆಗೆ ಜಾರಿದ ವಠಾರ ಹುಡುಗರು

 

 

ಮೋಹಿನಿ ಕತೆಯ ಗುಂಗಲೆ ಎದ್ದೆವು

ಘಲ್ ಘಲ್ ಸದ್ದದು ಕಿವಿಯಲಿ ಮೊರೆದಿರೆ

ಗೆಜ್ಜೆಯ ಸದ್ದಿನ ಮೂಲವ ತಿಳಿಯಲು

ಹುಣಿಸೆಮರವನು ಸೂಕ್ಷ್ಮದಿ ಶೋಧಿಸೆ

ರೆಂಬೆಗೆ ಸುತ್ತಿದ ಗೆಜ್ಜೆಯ ಸರವದು

ಗಾಳಿಯು ಬೀಸಲು ಘಲ್ ಘಲ್ ಸದ್ದಿನ

ನಿಯಮಿತ ತಾನದಿ ಹೆಚ್ಚುವ ಭಯವು

ಗುರಜ್ಜನ ಕಾಣದೆ ಕೂಗಿದ ಹುಡುಗರು

ಮನೆಯನು ಹುಡುಕಿ ಗುರಜ್ಜನ ಕೂಗಲು  

ಅಳುತಲೆ ಬಂದನು ಹೊರಗಡೆ ಮಗನು

ವಾರದ ಹಿಂದೆಯೆ ಸತ್ತಿಹ ಅಪ್ಪನ

ಸುದ್ದಿಯ ತಿಳಿಸಲು ಮಾತೇ ಹೊರಡದೆ

ಕುಳಿತೆವು ಕುಸಿಯುತ ಕೋಣೆಗೆ ಬಂದು

ಕಿವಿಯಲಿ ಮೋಹಿನಿ ಕತೆಯಾ ಮೊರೆತ

ಕಣ್ಣಿಗೆ ಕಟ್ಟುವ ಬೀಡಿಯು ಪೊಟ್ಟಣ

ಬೀಡಿಯು ಹಚ್ಚುತ ದಮ್ಮನು ಎಳೆಯುವ

ಗೂರಲು ಕೆಮ್ಮಿನ ಬೀಡಿಯ ಗುರಜ್ಜ

ಎದುರಿಗೆ ಕಾಣುವ ಮಡಿಸಿದ ಕಂಬಳಿ

ಕೆಳಗಡೆ ಹರಡಿದ ಬೀಡಿಯ ತುಣುಕು

ಕುಣಿಯುತ ನಕ್ಕವು ನಮ್ಮನು ನೋಡಿ.  

Rating
No votes yet