ಗೆಳೆಯರೋ, ವೈರಿಗಳೋ..?
- ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ. ಬಾಗಿಲು ತೆರೆದೇ ಇತ್ತು. ಹೊರಟು ರೆಡಿಯಾಗಿದ್ದ ರಾಜು ವಾಂತಿ ಮಾಡುತ್ತಿದ್ದನು. ವಿಚಾರಿಸಿದಾಗ “ಹೆಂಡತಿ ಅರ್ಜೆಂಟಿಗೆ ಪುಳಿಯೊಗರೆ ಮಾಡಿಟ್ಟು ಕೆಲಸಕ್ಕೆ ಹೋಗಿರುವಳು.ಪಿತ್ತವಾಗಿದೆ.ಅದಕ್ಕೆ ವಾಂತಿಯಾಯಿತು.ಸ್ವಲ್ಪ ಸುಧಾರಿಸಿಕೊಂಡು ಬರುವೆನು.”ಎಂದನು.ಕಪಾಟಿನಿಂದ ಜೆಲುಸಿಲ್ ತೆಗೆದು ಕುಡಿದನು.ತುಂಬಾ ಸುಸ್ತಾದವನಂತೆ ಕಾಣುತ್ತಿದ್ದುದರಿಂದ,ಅವನು ಬೇಡವೆಂದರೂ ಕೇಳದೇ ಸಮೀಪದ ಡಾಕ್ಟ್ರನ್ನು ಕಾಡಿಬೇಡಿ ಕರಕೊಂಡು ಬಂದೆನು.ಬರುವಾಗ ಅವನ ಹೆಂಡತಿಗೆ ಫೋನ್ ಮಾಡಿ ತಿಳಿಸಿದೆ. “ನಿನ್ನೆ ರಾತ್ರಿ ಬಹಳ ಹೊತ್ತು ಆಫೀಸಿನ ಕೆಲಸ ಮಾಡುತ್ತಿದ್ದರು.ನಿದ್ರೆ ಇಲ್ಲದೆ ಹಾಗಾಗಿದೆ.ಇನ್ನರ್ಧ ಘಂಟೆಯಲ್ಲಿ ಬರುವೆನು.ಸ್ವಲ್ಪ ನೋಡಿಕೊಳ್ಳಿ” ಎಂದರು.ಗೆಳೆಯರಿಗೆ ಫೋನ್ ಮಾಡಿದಾಗ “ಅವೊಮಿನ್ ಮಾತ್ರೆ ಕೊಟ್ಟು ಕರಕೊಂಡು ಬಾರೋ” ಎಂದರು. “ನಾವು ಬರುವುದಿಲ್ಲ.ನೀವು ಮುಂದುವರಿಸಿ” ಎಂದೆ.
- ಡಾಕ್ಟ್ರು ಬಂದು ಟೆಸ್ಟ್ ಮಾಡಿದವರೇ, ‘ಬಿ.ಪಿ. ಬಹಳ ಜಾಸ್ತಿಯಾಗಿದೆ.ಈ ಕೂಡಲೇ ಆಸ್ಪತ್ರೆಗೆ ಸೇರಿಸಬೇಕು’,ಎಂದರು. ಹೃದಯ ತಜ್ಞರಿಗೆ ಫೋನ್ ಮಾಡಿ ಅಪಾಯ್ಟ್ಮೆಂಟ್ ತೆಗೆದುಕೊಂಡರು. ನಾನು ಡಾಕ್ಟ್ರ ಚೀಟಿ,ಅವನ ಹಳೇ ಮೆಡಿಕಲ್ ರಿಪೋರ್ಟ್ಗಳನ್ನೆಲ್ಲಾ ತೆಗೆದುಕೊಂಡು,ಅವ್ನದೇ ಕಾರಲ್ಲಿ ಕರಕೊಂಡು ಹೊರಟೆ.ಅವನ ಹೆಂಡತಿಗೆ ಫೋನ್ ಮಾಡಿ ಆಸ್ಪತ್ರೆಗೆ ಬರಲು ತಿಳಿಸಿದೆ.
- ಹೌದು.ಬಹಳ ವರ್ಷಗಳಿಂದ ಗೆಳೆಯನಿಗೆ ಡಯಬಿಟಿಸ್ ರೋಗವಿದೆ.ಅವನು ಅನೇಕ ಬಾರಿ ಬೇಡ ಎಂದು ಹೇಳಿದರೂ ನಾವೆಲ್ಲಾ ಒತ್ತಾಯಿಸಿ ಟೀ,ಸ್ವೀಟ್ಸ್..,ಎಲ್ಲಾ ತಿನ್ನಿಸುತ್ತಿದ್ದೆವು. “ಅರ್ಧ ಮಾತ್ರೆ ಜಾಸ್ತಿ ತೆಗೆದುಕೊಳ್ಳೋ,ಎಲ್ಲಾ ಸರಿ ಹೋಗುತ್ತದೆ.ಡಾಕ್ಟ್ರಿಗೆ ಭಯಬೀಳಿಸುವುದೇ ಕೆಲಸ. ಇನ್ನಷ್ಟು ಟೆಸ್ಟ್ ಮಾಡಿಸಿ ಇನ್ನಷ್ಟು ಹಣ ಕೀಳುತ್ತಾರೆ” ಎನ್ನುತ್ತಿದ್ದೆವು.
- ಕೆಲ ತಿಂಗಳ ನಂತರ ‘ಶುಗರ್ ಕಂಟ್ರೋಲ್ಗೆ ಬರುತ್ತಿಲ್ಲ ಕಣ್ರೋ,ಇನ್ಸುಲಿನ್ ಇಂಜಕ್ಷನ್ ತೆಗೆದುಕೊಳ್ಳಲು ಹೇಳಿದ್ದಾರೆ.’ ಎಂದಾಗಲೂ “ಇನ್ಸುಲಿನ್ ತೆಗೆದುಕೊಂಡರೆ ಜೀವನಪರ್ಯಂತ ತೆಗೆದುಕೊಳ್ಳಬೇಕು. ಬೆಳಗೆದ್ದು ಮೆಂತ್ಯ ತಿನ್ನು,ಹಾಗಲ ರಸ ಕುಡಿ” ಎಂದು ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಕೊಟ್ಟೆವು. ಇನ್ನು ಕೆಲವರು ತಮ್ಮ ತಂದೆಗೆ ಈ ಮಾತ್ರೆಯಲ್ಲಿ ಶುಗರ್ ಕಂಟ್ರೋಲ್ ಇದೆ ಎಂದು ಮಾತ್ರೆಗಳನ್ನೂ ತಂದು ಕೊಟ್ಟರು.ಅವನೂ ಸಹ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮುಂದೆ ಹಾಕುತ್ತಾ ಬಂದನು. ಒಂದು ಸಂಜೆ “ಕಣ್ಣು ಮಂಜಾದ ಹಾಗೆ ಆಗುತ್ತಿದೆ.ರಸ್ತೆ ಡಿವೈಡರ್,ಹಂಪ್ಗಳ ಅಂದಾಜು ಸಿಗುತ್ತಿಲ್ಲಾ,ಕೂಡಲೇ ಬಾ” ಎಂದು ಕರೆದಲ್ಲಿಗೆ ಹೋಗಿ ಅವನನ್ನು ಮನೆಗೆ ಬಿಟ್ಟು ಬಂದಿದ್ದೆ.ಮಾರನೇ ದಿನ ಕಣ್ಣಿನ ಡಾಕ್ಟ್ರಲ್ಲಿಗೆ ಹೋದಾಗ “ ಕಣ್ಣಿನ ಒಳಗಿನ ಪ್ರೆಷರ್ ಜಾಸ್ತಿಯಾಗಿದೆ.ಕಣ್ಣಿನ ಒಳಗಡೆ ಬ್ಲೀಡಿಂಗ್ ಬೇರೆ ಆಗಿದೆ.ಶುಗರ್ ಆದಷ್ಟು ಬೇಗ ಕಂಟ್ರೋಲ್ಗೆ ತರಬೇಕು.ಇಲ್ಲದಿದ್ದರೆ ತೊಂದರೆ”ಎಂದು ಹೇಳಿದರು.ಒಂದು ವಾರ ರಜೆ ಮಾಡಿ ಕಣ್ಣಿನ ಆಪರೇಷನ್ನೋ,ಲೇಸರೋ ಏನೋ ಒಂದು ಮಾಡಿಸಿಕೊಂಡು ಬಂದಿದ್ದನು.ಆವಾಗಲೂ ಗೆಳೆಯರು,ಸಂಬಂಧಿಗಳು ತಮ್ಮ ಎಕ್ಸ್ಪರ್ಟ್ ಒಪೀನಿಯನ್ ಕೊಡುವುದನ್ನು ಬಿಡಲಿಲ್ಲ.ಕೆಲಸದ ಒತ್ತಡ ಜಾಸ್ತಿಯಾಯಿತು/ತಲೆಗೆ ಎಣ್ಣೆ ಹಚ್ಚಿ ಮಲಗಿಕೊ/ಸ್ನಾನಕ್ಕೆ ಮೊದಲು ನವರತ್ನ ತೈಲ ಹಾಕಿ ತಲೆಗೆ ಮಾಲೀಸ್ ಮಾಡು/ಕಣ್ಣರೆಪ್ಪೆಗೆ ಮಲಗುವಾಗ ಎಣ್ಣೆ ಹಚ್ಚಿಕೊ,ಕೆಲ ಕಣ್ಣಿನ ಡ್ರಾಪ್ಸ್ಗಳನ್ನೂ ಹಾಕಲು ಹೇಳಿದರು.
- ಕೆಲಸಕ್ಕೆ ಸೇರಿದ ಹೊಸತರಲ್ಲಿ ಬೆಳಗೆದ್ದು ಜಾಗಿಂಗ್ ಮಾಡಿ,ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡಿ,ಸೈಕಲ್ನಲ್ಲಿ ಕೆಲಸಕ್ಕೆ ಹೋಗಿಬಂದು,ಸಂಜೆ ಷಟ್ಲ್ ಬ್ಯಾಡ್ಮಿಂಟನ್ ಆಡಿ,ರಾತ್ರಿ ವಾಕಿಂಗ್ ಹೋಗುತ್ತಿದ್ದರೂ ಸುಸ್ತು ಎನ್ನದಿದ್ದವನು,ಈಗ ಎರಡು ಸಲ ವಾಂತಿಗೇ ಸುಸ್ತಾಗಿ ಮಲಗಿರುವವನನ್ನು ನೋಡುವಾಗ ನನ್ನ ಕಣ್ಣು ಮಂಜಾಯಿತು.ಆಸ್ಪತ್ರೆಗೆ ಹೋಗಿ ಡಾಕ್ಟ್ರ ವಶಕ್ಕೆ ಕೊಟ್ಟ ಮೇಲೆ ನನ್ನ ಗಾಬರಿ ಕಡಿಮೆಯಾಯಿತು.ಮಧ್ಯಾಹ್ನದ ವೇಳೆಗೆ ಟೆಸ್ಟ್ ರಿಪೋರ್ಟ್ಗಳೆಲ್ಲಾ ಸಿಕ್ಕಿ ಹೃದಯದ ಡಾಕ್ಟ್ರು ಬಂದವರು “ಹೃದಯಕ್ಕೆ ಅಷ್ಟೊಂದು ತೊಂದರೆ ಆಗಿಲ್ಲ.”ಎಂದಾಗ ಸಮಾಧಾನವಾಯಿತು. “ಆದರೆ.. ..(ಪುನಃ ಟೆನ್ಷನ್ ಸುರು) ಕಿಡ್ನಿ ತೊಂದರೆ ಸುರುವಾಗಿದೆ.ಆದರಿಂದಲೇ ಬಿ.ಪಿ. ಕಂಟ್ರೋಲ್ ಆಗುತ್ತಿಲ್ಲ.ಅದಕ್ಕೆ ಸಂಬಂಧಿಸಿದ ಡಾಕ್ಟರ್ ಬಂದಿದ್ದಾರೆ.ಇನ್ನೆರಡು ದಿನ ಆಸ್ಪತ್ರೆಯಲ್ಲಿರಬೇಕು .ಇಪ್ಪತ್ನಾಲ್ಕು ಗಂಟೆಯ ಮೂತ್ರ ಸಂಗ್ರಹಿಸಿ ಟೆಸ್ಟ್ ಮಾಡಬೇಕು.ನಾವು ಹೇಳಿದ ಡಯಟ್ ಬಿಟ್ಟು ಬೇರೆ ಕೊಡಬಾರದು” ಎಂದು ಕೆಲವು ಪಥ್ಯಗಳನ್ನು ಹೇಳಿ ಹೋದರು.
- ಕಿಡ್ನಿಗೂ, ಬಿ.ಪಿ.ಗೂ ಸಂಬಂಧ ನಮಗೆ ಹೊಸದು.ಆದರೂ ನಮ್ಮ ಉಚಿತ ಸಲಹೆ ನಿಲ್ಲಲಿಲ್ಲ-ಧ್ಯಾನ ಮಾಡಿದರಾಯಿತು. ..ಸ್ವಾಮಿಯ ಯೋಗ ಶಿಬಿರಕ್ಕೆ ಸೇರು...,
- ನನ್ನ ಗೆಳೆಯ ಪಕ್ಕಕ್ಕೆ ಕರೆದು ಕೇಳಿದ “ಸಿಗರೇಟು ಸೇದಲಿಲ್ಲ,ಕುಡಿತವಿಲ್ಲ,ಹೆಂಗಸರ ಸಹವಾಸವಿಲ್ಲ,ಎಲ್ಲರಿಗೂ ಸಹಾಯ ಮಾಡಿದ್ದೇನೆ ಹೊರತು ಕೆಟ್ಟದು ಮಾಡಲಿಲ್ಲ.ಆದ್ರೂ ನನಗೇ ಏಕೆ ಈ ಎಲ್ಲಾ ತೊಂದರೆಗಳು?”
- “ಮಾಡಬೇಕಾದುದನ್ನು ಮಾಡಲಿಲ್ಲ.ಡಯಬಿಟಿಸ್ನ್ನು ಬೆಳೆಯಲು ಬಿಡಬಾರದಿತ್ತು.”ಎನ್ನಬೇಕೆಂದಿದ್ದೆ.ಆತನ ಡಯಬಿಟಿಸ್ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾಲೂ ಇದೆಯಲ್ಲವೆ.ನಾವು ಆರೋಗ್ಯ ವಿಷಯದಲ್ಲಿ ಅನಗತ್ಯ ಸಲಹೆ ಕೊಡುವುದನ್ನು ನಿಲ್ಲಿಸುವುದು ಒಳಿತಲ್ಲವೆ?
Comments
ಉ: ಗೆಳೆಯರೋ, ವೈರಿಗಳೋ..?
ಉ: ಗೆಳೆಯರೋ, ವೈರಿಗಳೋ..?
In reply to ಉ: ಗೆಳೆಯರೋ, ವೈರಿಗಳೋ..? by muralihr
ತುಂಬಾ ಒಳ್ಳೇ ಮಾತು !
In reply to ತುಂಬಾ ಒಳ್ಳೇ ಮಾತು ! by ಗಣೇಶ
ಉ: ಗೆಳೆಯರೋ, ವೈರಿಗಳೋ..?
ಗಣೇಶರೆ, ನೀವೂ ಕೂಡ ಮನ ಕಲಕುವಂತಹ ಬರಹಗಳನ್ನು ಬರೆಯಬಲ್ಲಿರೆಂದು ಗೊತ್ತಿರಲಿಲ್ಲ.
ತುಂಬಾ ಒಳ್ಳೆಯ ಬರಹ. ನಿಮ್ಮ ಗೆಳೆಯನು ಆರಾಮವಿರುವರೆಂದು ತಿಳಿದು ಸಮಾಧಾನವಾಯಿತು. ಅವರ ಪತ್ನಿಗೆ hats off!
In reply to ಉ: ಗೆಳೆಯರೋ, ವೈರಿಗಳೋ..? by ಶ್ರೀನಿವಾಸ ವೀ. ಬ೦ಗೋಡಿ
ಉ: ಗೆಳೆಯರೋ, ವೈರಿಗಳೋ..?
ಶ್ರೀನಿವಾಸರೆ,
ರೋಗದ ಬಗ್ಗೆ ಸಾಮಾನ್ಯ ಜನರೂ ಬಹಳ ತಿಳಿದವರಂತೆ ತಮ್ಮ ಅಭಿಪ್ರಾಯವನ್ನು ರೋಗಿಯ+ಅವರ ಮನೆಯವರ ಮೇಲೆ ಹೇರುವುದು ತುಂಬಾ ತಪ್ಪು. ಇದನ್ನು ಓದಿ ಕೆಲವರಾದರೂ ತಿದ್ದಿಕೊಂಡಾರು ಎಂಬ ಆಶಯದಿಂದ ಬರೆದದ್ದು. ಧನ್ಯವಾದಗಳು.
ಉ: ಗೆಳೆಯರೋ, ವೈರಿಗಳೋ..?
In reply to ಉ: ಗೆಳೆಯರೋ, ವೈರಿಗಳೋ..? by venkatb83
ಉ: ಗೆಳೆಯರೋ, ವೈರಿಗಳೋ..?
ಸಪ್ತಗಿರಿವಾಸಿಯವರೆ,
ಪುನಃ ಅದೇ ತಪ್ಪು ಮಾಡಿದೆ. ತಮ್ಮ ಪ್ರತಿಕ್ರಿಯೆ ನೋಡೇ ಇರಲಿಲ್ಲ. ಕ್ಷಮಿಸಿ. ಎಲ್ಲಾ ಬರಹಗಳನ್ನು ಓದಿ ಪ್ರತಿಕ್ರಿಯೆ ನೀಡುತ್ತಿದ್ದ ನೀವು ಇತ್ತೀಚೆಗೆ ಸಂಪದದಲ್ಲಿ ಕಾಣಿಸುವುದು ಬಹಳ ಕಮ್ಮಿಯಾಗಿದೆ. ನಿಮ್ಮ ಲೇಖನದ ನಿರೀಕ್ಷೆಯಲ್ಲಿರುವ-ಗಣೇಶ.
ಹಾಗೇ ಪ್ರತಿಕ್ರಿಯೆ ನೀಡಿದ ಮೂರ್ತಿಯವರಿಗೂ ಧನ್ಯವಾದಗಳು.