ಗೊಂಬೆ

ಗೊಂಬೆ

ಮನದ ಕನವರಿಕೆಗಳೆಲ್ಲಾ
ಹೆಸರು ಪಡೆಯೋ ಆತುರದಲ್ಲಿ
ಹುಟ್ಟಿದ ಕಲ್ಪನೆಯೇ
ನನ್ನಿಂದ ಸೃಷ್ಟಿಯಾದ ನಿನಗೆ
ಅದೆಷ್ಟು ಬೇಗ ನನ್ನನ್ನಾವರಿಸುವ ತವಕ

ನನ್ನ ಬಲಹೀನ ಬೆರಳುಗಳ ತುದಿಯಿಂದ
ಹಗ್ಗದಲ್ಲಿ ನೇತಾಡುತ್ತಿರುವ ನೀನು
ಮತ್ತೆ ನನ್ನ ಬೆರಳುಗಳ ಕುಣಿಸುತ್ತಾ...
ನನ್ನ ಮೈ ಮರೆಸುತ್ತಾ
ಆಡುತ್ತಿರುವೆ ಕುಹಕ

ತಪ್ಪಿಸಲಾಗದ ಈ ದಾರಗಳು
ನೀನೆಸೆದ ಕುಣಿಕೆ
ಇಂದು ನಿನ್ನಾಟವನ್ನು
ಮುಗಿಸಲಾರದೇ ನನ್ನ ನೆವದಿಂದ
ಆವಿರ್ಭವಿಸಿರುವೆ ಇಡೀ ರಂಗದೊಳಗೆ

ನಿನ್ನ ಮಾಟವನ್ನು ಮೆಚ್ಚುತ್ತಾ
ಒಳಗೊಳಗೆ ನಿನ್ನ ಅಧೀನನಾಗಿರುವ
ನನ್ನ ಮನದಲ್ಲಿ ಮಾಸಿ ಹೋದ ಪ್ರಶ್ನೆ
ನೀನೇ ಗೊಂಬೆಯೋ
ನಿನ್ನನಾಡಿಸುವ ಭ್ರಮೆಯಿಂದಿಳಿದ ನಾನೋ?

Rating
No votes yet

Comments