ಗೋವಿಂದ ಗೋ....ವಿಂದಾ

ಗೋವಿಂದ ಗೋ....ವಿಂದಾ

                                               ಗೋವಿಂದ ಗೋ....ವಿಂದಾ 

ತಿರುಪತಿ ನೋಡುವ ಬಹುದಿನದ ಆಸೆಯನ್ನು ಈಡೇರಿಸಿಕೊಳ್ಳುವ ಸಮಯ ಬಂದೇ ಬಿಟ್ಟಿದೆ.ಅವನಲ್ಲಿಗೆ ಹೋಗುತ್ತಿರುವುದು ಇದೆ ಮೊದಲ ಭಾರಿ. ಬಹಳಷ್ಟು ಜನಗಳ ಬಾಯಿಯಿಂದ ತಿರುಪತಿಯ ವಿಚಾರ ಮತ್ತು ಮಹಿಮೆಗಳ ಬಗ್ಗೆ ಸಾಕಷ್ಟು ತಿಳಿದು ಕೊಂಡಿದ್ದ.ಇವೆಲ್ಲದರ ಜೊತೆಗೆ ತಿರುಪತಿಯ ಬಗ್ಗೆ ಅವನಿಗೆ ನೂರೆಂಟು ಬಗೆಯ ಕಲ್ಪನೆಗಳೂ ಉಂಟು.ಅಷ್ಟೊಂದು ಜನ ಅಲ್ಲಿಗೆ ಏಕೆ ಹೋಗುತ್ತಾರೆ ? ಅಂತಹದ್ದು ಅಲ್ಲಿ ಏನಿದೆ ? ಇಲ್ಲಿ ಇರೋ ದೇವಾಲಯಗಳಿಗೂ , ಅಲ್ಲಿ ಇರುವ ಆ ದೇವಾಲಯಕ್ಕೂ ಏನು ಅಂತ ಮಹಾ ವ್ಯತ್ಯಾಸ ? ಹೀಗೆ  ಹತ್ತು ಹಲವು ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು.ಜೊತೆಗೆ ಅನೇಕ ತರ್ಕ ಬದ್ದ ವಿಚಾರಗಳನ್ನು ಸಹ ತಲೆಯಲ್ಲಿ ಇಟ್ಟುಕೊಂಡು  ಹೊರಟ ನಮ್ಮ ಪುನೀತ್, ಅವನ ಆಪ್ತ ಸ್ನೇಹಿತನ ಪರಿವಾರದ  ಜೊತೆಗೆ.ಪುನೀತನ  ಸ್ನೇಹಿತ ಮಹಾನ್ ದೈವ ಭಕ್ತ, ಇತ್ತೇಚಿಗಷ್ಟೇ  ಅವನ ಸ್ನೇಹಿತನ ಮದುವೆಯೂ ಕೂಡ ಆಗಿತ್ತು. ಆ ನವ ದಂಪತಿಗಳ ಜೊತೆಗೆ ಅವನ ತಂದೆ ತಾಯಿಗಳು, ಹೆಣ್ಣು ಕೊಟ್ಟ  ಅತ್ತೆ ಮಾವಂದಿರು ಕೂಡ ಇದ್ದರು. ಅದೊಂದು ತುಂಬು ಸಂಸಾರ.ಅವರೆಲ್ಲರ ನಡುವೆ ನಮ್ಮ  ಪುನೀತ್ ಮಾತ್ರ ಶಿವಪೂಜೆಯಲ್ಲಿ ಕರಡೀಯ ಹಾಗೆ ಇದ್ದ.ಪಾಪ ಅವರೆಂದೂ  ಪುನೀತನನ್ನು  ಹೊರಗಿನವನೆಂದು  ತಿಳಿದಿರಲಿಲ್ಲ , ಆದರೂ ಪುನೀತನಿಗೆ ಮಾತ್ರ ಮೊದ ಮೊದಲಿಗೆ ಮುಜಗರವಾದರೂ  ಆಮೇಲೆ ಎಲ್ಲರೊಡನೆ ಚೆನ್ನಾಗಿ ಬೆರೆತ.ಅವರಿಗೂ ಕೂಡ  ಪುನೀತ್ ಅಂದರೆ ಬಹು ಪ್ರೀತಿ. ಹಾಗಾಗಿ ಎಲ್ಲರೂ ಒಂದೇ ಕುಟುಂಬದವರ ರೀತಿ ತಿರುಪತಿಯ ತಿರುಮಲವಾಸ ಶ್ರೀ ಶ್ರೀನಿವಾಸನನ್ನು ನೋಡಲು ಹೊರಟರು.
            ಪುನೀತ್ ವಯಸ್ಸು ಅಂತದ್ದು,ವಯಸ್ಸಿಗೆ ತಕ್ಕ ಮನಸ್ಸು.ಗಾಳಿಯಂತೆ ಅಲ್ಲಿ ಇಲ್ಲಿ ನುಸುಳುತ್ತೆ , ನೀರಿನಂತೆ ಜಾರುಗಳಲ್ಲಿ ಹರಿದಾಡುತ್ತೆ.ಇನ್ನೂ ಅದೊಂದು ಪ್ರೌಡ ಅಥವಾ ಪ್ರಭುದ್ದ ಸ್ಥಿತಿಯನ್ನು ತಲುಪಿಲ್ಲ.ಇನ್ನೂ ನಿರ್ಧಾರಗಳು, ಆಲೋಚನೆಗಳು ಗಟ್ಟಿಯಾಗುವಷ್ಟು ಅನುಭವವೂ ಕೂಡ ಆಗಿಲ್ಲ.ಒಂದು ಸಾರಿ ದೇವರು ಇದಾನೆ ಅನ್ನುತ್ತೆ, ಇನ್ನೊಂದು ಸಾರಿ ಅದೇ ಮನಸ್ಸು ಇಲ್ಲ ಇಲ್ಲ  ದೇವರೆಲ್ಲಿ ಇದಾನೆ ಅನುತ್ತೆ. ತಲೆಯಲ್ಲಿ ಮಾತ್ರ ಯಾವುದು ಸರಿ ? ಯಾವುದು ತಪ್ಪು ? ಎಂಬ ತರ್ಕಗಳ ಸಂತೆ ಪ್ರತಿದಿನವೂ ನೆಡೆಯುತ್ತೆ. ಒಮ್ಮೊಮ್ಮೆ ನಿಜ ಅಂತ ಒಪ್ಪಿಕೊಂಡು ಮತ್ತೊಮ್ಮೆ ಅದು ತಪ್ಪೇನೋ ಅನ್ನೋ ಮನೋಭಾವ ಅವನದು.ಅವೆಲ್ಲದರ ಜೊತೆಗೆ ಎಲ್ಲೋ ಒಂದು ಕಡೆ ಅವನಿಗೆ ದೇವರಲ್ಲಿ ಅಚಲವಾದ ಭಕ್ತಿಯು ಇದೆ ಶ್ರದ್ದೆಯೂ ಇದೆ. ಅದು ದೇವರಲ್ಲೋ ಅಥವ ಪ್ರಕೃತಿಯ ಒಂದು ಶಕ್ತಿಯಲ್ಲೋ ಅವನಿಗೆ ಇನ್ನೂ ತಿಳಿದಿಲ್ಲ . ಆದರೂ  ಸಹ ಬಹು ಆಸ್ತಿಕನಾದ ಅವನ ಸ್ನೇಹಿತನೊಂದಿಗೆ ಮಾತ್ರ ಅವನ ಈ  ದೇವರ ದರ್ಶನ ಯಾತ್ರೆ  ಆರಂಭವಾಗಿಯೇ ಬಿಟ್ಟಿತು.
                 ಎಲ್ಲರೂ ರಾತ್ರಿ ಪ್ರಯಾಣ ಮುಗಿಸಿ, ದೇವಸ್ಥಾನಕ್ಕೆ ಹೊರಟಾಗ ಬೆಳಿಗ್ಗೆ 6.30 ರ ಸಮಯ. ಡಿಸೆಂಬರ್ ಕಾಲ ಸ್ವಲ್ಪ ಚಳಿ  ಇತ್ತು. ಆದರೂ ತಿರುಮಲೆಯನ್ನು ಅವರೆಲ್ಲರು ನಡೆದೇ ಬೆಟ್ಟ  ಏರಬೇಕೆಂದು ನಿರ್ಧರಿಸಿದ್ದರು. ನವ ದಂಪತಿಗಳ ತಂದೆ ತಾಯಿಯರ ಆಸೆಯೂ ಮತ್ತು ಹರಕೆಯೂ ಕೂಡ ಅದೇ ಆಗಿತ್ತು. ನನ್ನ ಸ್ನೇಹಿತನ ತಾಯಿಯು "ನನ್ನ ಸೊಸೆಯೊಂದಿಗೆ ನಾನು ನಡೆದುಕೊಂಡೆ ಹತ್ತುತ್ತೇನೆ, ನನ್ನ ಮಗನಿಗೆ  ಒಳ್ಳೆಯ ಹೆಂಡತಿ, ನನಗೆ ಒಳ್ಳೆಯ ಸೊಸೆ ಸಿಕ್ಕರೆ" ಅಂತ ಹರಕೆ  ಮಾಡಿಕೊಂಡಿದ್ದರಂತೆ ಹಿಂದಿನ ಸಾರಿ ತಿರುಮಲೆಗೆ  ಬಂದಾಗ !!!. ಹಾಗಾಗಿ ಅವರು ತಿರುಪತಿಯ ಗುಡ್ಡವನ್ನೇರಲು  ತಯಾರಿ   ಮಾಡಿಕೊಂಡರು.ಅದೇ ರೀತಿ ಬೆಳಗ್ಗೆ ವೇಗವಾಗಿ "ನಾವು ಬೆಟ್ಟವನ್ನು ಏರಬಹುದು,ಚಾರಣ ಬೇಗ ಸಾಗುವುದೆಂದು" ಅವಸರ ಅವಸರವಾಗಿ ಲಾಡ್ಜ್ ಇಂದ ಹೊರಟು, ಗುಡ್ಡ ಹತ್ತುವ ಜಾಗಕ್ಕೆ ಬಂದರು.
              ಏಳು ಬೆಟ್ಟಗಳ ನಡುವೆ ನೆಲೆಸಿರುವ ವೆಂಕಟೇಶ್ವರನನ್ನು  ನೋಡಲು,ಬಹಳಷ್ಟು  ಜನರು ಬರಿ  ಕಾಲಿನಲ್ಲೇ ಗುಡ್ಡ ಏರುತ್ತಾರೆ. ಹೋಗುವ ದಾರಿಯುದ್ದಕ್ಕೂ ವೆಂಕಟೇಶನ ಸ್ಮರಣೆ ಮಾಡುತ್ತ, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆಗಳನ್ನು  ಮಾಡುತ್ತಾ ಬೆಟ್ಟ ಏರುತ್ತಾರೆ. ಬಹಳ  ಎತ್ತರವಿರುವ  ಈ ಬೆಟ್ಟವನ್ನು ಬರಿಗಾಲಲ್ಲಿ ಕ್ರಮಿಸಿ  ದೇವರ ಸನ್ನಿದಿ  ಸೇರಲು ಕನಿಷ್ಟ 6 ರಿಂದ 8 ಗಂಟೆಯಾದರು ಬೇಕೇ ಬೇಕು. ಇಷ್ಟು ದೊಡ್ಡ ಬೆಟ್ಟವನ್ನು ಬಹುತೇಕ ಜನರು ಪಾದರಕ್ಷೆಗಳನ್ನು ಧರಿಸದೆಯೇ ಏರುವುದು ಮತ್ತೊಂದು ಅಲ್ಲಿಯ ವಿಶೇಷ. ಅದೇ ರೀತಿ  ಪುನೀತನ  ಸ್ನೇಹಿತ ಪರಿವಾರದವರು ಕೂಡ ಬರಿ  ಕಾಲಿನಲ್ಲೇ  ಬೆಟ್ಟ ಹತ್ತುವವರಿದ್ದರು. ಹತ್ತುವ ಮೊದಲು ಅಲ್ಲೊಂದು ವೆಂಕಟೇಶನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಭಕ್ತಾದಿಗಳು ಮುಂದೆ ಸಾಗುತ್ತಾರೆ.ಅದೇ ರೀತಿ ಇವರು ಪೂಜೆಗಳು ಸಲ್ಲಿಸಿ ಬೆಟ್ಟ ಏರುವ ಕಾರ್ಯಕ್ರಮವನ್ನು ತುಂಬಾ ಭಯ ಭಕ್ತಿಯಿಂದ ಶುರು ಮಾಡಿದರು.  ಪುನೀತನಿಗೆ ಇದೆಲ್ಲ ಹೊಸತು ಆದರೆ ಅವನ ಸ್ನೇಹಿತನಿಗೆ ಇದೆಲ್ಲವು  ಸಾಮಾನ್ಯವಾಗಿ ಹೋಗಿತ್ತು. ಅವನಿಗೆ ತಿರುಮಲೆಯು ವೆಂಕಟೇಶ್ವರ ಮನೆ ದೇವರು ಆಗಾಗ ಬಂದು ಹೋಗುತ್ತಿರುತ್ತಾನೆ. ಪುನೀತನಿಗೆ ಮಾತ್ರ ಇವೆಲ್ಲ ಏನೋ ಒಂದು ತರಹ ಕಾಣುತ್ತಿದ್ದೆ.  ಪುನೀತನೋ "ದೇವರು ಇರುವುದು ನಿಜ ಆದರೆ ಈ ರೀತಿ ಜನರು ಏಕೆ ಮಾಡುತ್ತಾರೆ ? ಆದರೂ ಇವೆಲ್ಲ  ಅವರವರ  ನಂಬಿಕೆಗಳು  ಬಿಡು" ಎಂದು ಯೋಚಿಸುತ್ತಾನೆ. ಪುನೀತ್ ಎತ್ತ ನೋಡಿದರತ್ತ  ಕಾಣುವ ಜನ ಸಾಗರ, ಅವರ ಭಕ್ತಿ, ಅವರು ಅಲ್ಲಿ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದ ರೀತಿ ಎಲ್ಲವೂ ಅವನಿಗೆ ಆಶ್ಚರ್ಯ ತರಿಸಿತ್ತು.  ಕೆಲವರು ತಾವು ಏರುವ ಒಂದೊಂದು ಮೆಟ್ಟಿಲುಗಳಿಗೂ ಅರಿಶಿನ ಕುಂಕುಮ ಹಚ್ಚುವರು , ಮತ್ತೆ ಕೆಲವರು ತುಪ್ಪದ ದೀಪಗಳನ್ನು ಪ್ರತಿ ಮೆಟ್ಟಿಲುಗಳಿಗೆ ಹಚ್ಚಿಡುವರು. ಇನ್ನು ಕೆಲವರು ಕಾಲು ಮಡಚಿಕೊಂಡು ಬರೀ ತಮ್ಮ ಮಂಡಿಯಲ್ಲೇ ಬೆಟ್ಟ ಏರಲು ಪ್ರಯತ್ನ ಪಡುತ್ತಿದ್ದರು. ಇದನೆಲ್ಲ ನೋಡಿ ಪುನೀತ್ " ದೇವರಿಗೆ ಇದೆಲ್ಲ ಬೇಕಾ ? ಇದೆಲ್ಲ ಮಾಡಿರಿ ಅಂತ ಅವನು ಎಂದಾದರು ಕೇಳಿರುವನೆ ? ದೇವರ ಸಾಕ್ಷಾತ್ಕಾರಕ್ಕೆ ಈ ರೀತಿ ಮಾಡಬೇಕ ? ಈ ನಂಬಿಕೆಗಳಿಗೆ ಅರ್ಥ ನಿಜವಾಗಿಯೂ ಉಂಟೋ ? " ಎಂಬ ನೂರೆಂಟು ಯೋಚನೆಗಳು ಒಂದು ಕಡೆ ಆದರೆ, ಮತ್ತೊಂದು ಕಡೆ ಅವನ ಮನಸ್ಸು  "ಹೋಗಲಿ ಬಿಡು ಜನರಿಗೆ ಇದನ್ನು ಮಾಡುವುದರಿಂದ ಶಾಂತಿ ಸಮಾಧಾನಗಳು ದೊರೆಯುವುದಾದರೆ ಇದನ್ನೇ ಮಾಡಲಿ , ಇದರಿಂದಂತು ಯಾರಿಗೂ ತೊಂದರೆ ಇಲ್ಲ ಅಂದ ಮೇಲೆ ಇದನ್ನು ಮಾಡಿದರೂ ತಪ್ಪಿಲ್ಲ " ಎನ್ನುವುದು.
               ತಿರುಪತಿಯಲ್ಲಿ  ಬಹಳಷ್ಟು ಜನರು ಇರುತ್ತಾರೆ ಅಂತ ಕೇಳಿದ್ದ  ಪುನೀತ್ , ಆದರೆ ತನ್ನ ಕಣ್ಣುಗಳಲ್ಲಿ ನೋಡಿದ್ದು ಇದೆ ಮೊದಲು. ಪೂಜೆ ಮಾಡುತ್ತಾ ಭಕ್ತರು "ಗೋವಿಂದಾ ಗೋವಿಂದಾ" ಎಂದು ಮುಗಿಲು ಮುಟ್ಟುವ ಹಾಗೆ ಕೂಗಿ ತಿರುಮಲೆಗಳ  ಮೂಲೆ  ಮೂಲೆಗಳಿಗೂ  ಕೇಳುವಂತೆ ವೆಂಕಟೇಶನ್ನನ್ನು ಸ್ಮರಿಸುತ್ತಾ ಇದ್ದರು. ಒಬ್ಬರು ಗೋವಿಂದ ಅಂದರೆ ಸಾಕು ಅದೆಷ್ಟೋ ಜನರು ಅದರಿಂದ ಪ್ರಚೋದನೆಗೊಂಡು ಅವರು ಕೂಡ "ಗೋವಿಂದ ಗೋವಿಂದ" ಎಂದು ತಮ್ಮ ದ್ವನಿಗೂಡಿಸುತ್ತಿದ್ದರು. ಪುನೀತನಿಗೋ ಅದೆಲ್ಲ ಒಂದು ತರಹ ಅನ್ನಿಸಿದರೂ ಪದೇ ಪದೇ "ಅವರವರ ಭಕ್ತಿ ಮತ್ತು ಅವರವರ ನಂಬಿಕೆ" ಎಂದು ಮನಸ್ಸಿನಲ್ಲೇ  ಅಂದುಕೊಳ್ಳುತ್ತಿದ್ದ. "ಇಷ್ಟೊಂದು ಜನರು ಈ ರೀತಿಯಾಗಿ ವೆಂಕಟೇಶನನ್ನು ನಂಬಿದ್ದಾರೆ ಅಂದರೆ ಆತನ ಮಹಿಮೆ ಆದೆಷ್ಟಿದೆ ? ಆತನ ಮೇಲೆ ಇವರಿಗೆ ಇಷ್ಟೊಂದು ನಂಬಿಕೆಯಾ ?  ಆ ನಂಬಿಕೆ ಬರಲು ಈ ದೇವರು ಇವರಿಗೆಲ್ಲ ಅಂತಾದ್ದೇನು ಕರುಣಿಸಿದ್ದಾನೆ ? " ಎಂಬ  ಹತ್ತಾರು ಪ್ರಶ್ನೆಗಳೊಂದಿಗೆ ಬೆಟ್ಟ ಏರಲು ಶುರು ಮಾಡೇ ಬಿಟ್ಟರು.
             ಎಲ್ಲೆಲ್ಲೂ ಜನರ ಗುಂಪು ಗುಂಪು, ಗೋವಿಂದ ಗೋವಿಂದ ಎಂದು ಕಿವಿ ಪೊರೆ ಗುಯ್ ಅನ್ನುವೊಷ್ಟು ಜೋರಾದ ಅವರ ಪ್ರಾರ್ಥನೆಗಳು  ಅವರ ಭಕ್ತಿಯ ಆ  ಪರಾಕಾಷ್ಟೇ ಮುಗಿಲು ಮುಟ್ಟಿ, ಬೆಟ್ಟದ ಮೂಲೆ  ಮೂಲೆಗೂ ತಗುಲಿ ಪ್ರತಿದ್ವನಿಸುತ್ತಿತ್ತು. ಬೆಟ್ಟ ಏರುವ ಆರಂಭದಲ್ಲೋಂತೂ   ಅವರ ಶಕ್ತಿ ಎಷ್ಟಿರುವುದೋ ಅಷ್ಟು ಒಂದುಗೂಡಿಸು "ಗೋವಿಂದ ಗೋವಿಂದ" ಅಂದು ಕೂಗುತ್ತಿದ್ದರು. ಪುನೀತ್  ಮತ್ತು ಅವನ ಸ್ನೇಹಿತನ ಅಪ್ಪ ಅಮ್ಮ ಜೊತೆಯಾಗಿ ನೆಡೆದರೆ, ಸ್ನೇಹಿತನ ಅತ್ತೆ ಮಾವ ಒಂದಾಗಿ ನೆಡೆಯುತ್ತಿದ್ದರು. ಅತ್ತೆ ಮಾವನವರು  ಸ್ವಲ್ಪ ತೇಳು ಮೈಕಟ್ಟಿನವರು. ಯಾವ ಆಯಾಸವಿಲ್ಲದೇ ಸರ ಸರ ಬೆಟ್ಟ ಏರುತ್ತಿದ್ದಾರೆ. ಪುನೀತ್  ಮತ್ತು ಅವನ ಜೊತೆಗಿದ್ದ ಅವನ ಸ್ನೇಹಿತನ ತಂದೆ ತಾಯಿಯರು ನಿಧಾನವಾಗಿ ಹೋಗುತ್ತಿದ್ದಾರೆ, ನವ ದಂಪತಿಗಳು ಸ್ವಲ್ಪ ಹಿಂದೆಯೇ ಇದ್ದರು. ಗುಡ್ಡ ಹತ್ತುವಾಗ ಮೈಯ ತಾಪ ಏರುತ್ತಿದ್ದರು ಅಲ್ಲಿ ಬೀಸುತ್ತಿದ್ದ ತಂಗಾಳಿ ತಣ್ಣನೆ ಅವರನ್ನೆಲ್ಲ ಸ್ಪರ್ಶಿಸಿ ಹಿತ ನೀಡುತ್ತಿತ್ತು.ದೂರದಲ್ಲೇ ಬೆಟ್ಟದ ಕೆಲವು ಭಾಗಗಳಲಿದ್ದ ದೇವಸ್ತಾನಗಳಿಂದ  ಸುಬ್ಬಲಕ್ಷ್ಮಿಯ ಹಿತವಾದ ಸಂಗೀತ ಚಾರಣದ  ದಣಿವನ್ನು ತಣಿಸುತಿತ್ತು. ದೇಹಕ್ಕೆ ಸ್ವಲ್ಪ ಸುಸ್ತು ಅನ್ನಿಸಿದರೂ ಅಲ್ಲೇ ಇದ್ದ ಮೆಟ್ಟಿಲುಗಳ ಮೇಲೆ ಕೂತು ನಂತರ ಚಾರಣ ಮುಂದುವರೆಯುತ್ತಿತ್ತು. ಹೀಗೆ ದೇವಸ್ಥಾನದ ಬಗೆಗೆ, ವೆಂಕಟೇಶನ ವಿಚಾರಗಳ ಬಗೆಗೆ ಮಾತನಾಡಿಕೊಳ್ಳುತ್ತ, ಆಗೊಂದು ಈಗೊಂದು ಫೋಟೋ ತೆಗೆಸಿಕೊಳ್ಳುತ್ತ  ಮುಂದೆ ಮುಂದೆ ಸಾಗಿತ್ತು  ಅವರ ಪ್ರಯಾಣ.  ಬೆಟ್ಟ ಏರುವುದಂತೂ ಪುನೀತನಿಗೆ  ಸಕತ್ ಖುಶಿ ನೀಡುತ್ತಿತ್ತು. ಬಹಳಷ್ಟು  ದಿನದಿಂದ  ಒಳಗೇ ಅಡಗಿದ್ದ ಬೆವರು ಆದಿನ ಕಿತ್ತು  ಕಿತ್ತು  ಬರುತ್ತಿತ್ತು. ಹಿಡಿದಿಟ್ಟ  ನೀರು ಬಿಟ್ಟಾಗ ಹರಿವಂತೆ ಹರಿಯುತ್ತಿತ್ತು ಬೆವರು ಮೈಯಿಂದ. ಅಲ್ಲಿ ಇಲ್ಲಿ ನೀರು ಸಿಕ್ಕಾಗ ನೀರು ಕುಡಿದು, ದೇಹದ ಮೇಲೆ ಹಾಕಿಕೊಂಡು, ಮೆಟ್ಟಿಲ ಬಳಿ ಇರುವ ಮರಗಳ ಬುಡಗಳ  ಕೆಳಗೆ ಕೂತು ನೀಲಾಕಾಶ  ನೋಡಿದರೆ  ಏನೋ ಒಂದು  ಹಾಯಾದ ಅನುಭವ. ಮುಂದೆ ಹೋಗಬೇಕೆನ್ನುವ ಅವಸರ, ಇನ್ನೂ ಅನೇಕ ಬಗೆಯ ಅನುಭವಗಳಿಗೆ ಹಾತೊರೆಯುತ್ತಿರುವ ಮನ ಬೇಗ ಬೇಗ ಬೆಟ್ಟವನೇರು ಎಂದು ಹೇಳುತಿತ್ತು. ಒಮ್ಮೊಮ್ಮೆ ಅದೇ ಮನಸ್ಸು ಅಲ್ಲಿ ಕಾಣುತ್ತಿದ್ದ ಕೆಲವು ಭಕ್ತರ ಆಚರಣೆ ಮತ್ತು  ನಂಬಿಕೆಗಳನ್ನು ನೋಡಿ ಪುನೀತನನ್ನು ತರ್ಕಕ್ಕೆ ಎಳೆದು ತಂದು ಬಿಡುತ್ತಿತ್ತು. ಆದರೂ  ಪುನೀತ್  ಅತಿಯಾಗಿ ಯೋಚಿಸದೇ, ಯಾವುದೇ ತರ್ಕ ಮಾಡದೇ ಅಲ್ಲಿರುವ ಪ್ರಕೃತಿಯನ್ನು ಇಂಚು ಇಂಚಾಗಿ ಸವಿಯ ತೊಡಗಿದ. ನಿಜವಾಗಿಯೂ ಅದೊಂದು ಅದ್ಬುತ ವಾದ ವಾತಾವರಣ. ಅಲ್ಲಿ ಇಲ್ಲಿ ಕೂಗುವ ಪಕ್ಷಿಗಳು, ದೂರದಲ್ಲಿ ಏನನ್ನಾದೂರು ಕೊಟ್ಟಾರೆನೋ  ಅಂತ ಕಾಯುತ್ತಿರುವ ಮಂಗಗಳು, ಭಕ್ತಿ ಭಾವದಲ್ಲಿ ಒಬ್ಬರಿಗೊಬ್ಬರು ಆಸರೆ ಮಾಡಿಕೊಂಡು ಬೆಟ್ಟ ಏರುತ್ತಿರುವ ತಿಮ್ಮಪ್ಪನ ಭಕ್ತರು,  ನಿಜವಾಗಿಯೂ ಅಲ್ಲಿರುವ ಸ್ಥಳ  ಮಹಿಮೆಯ ಬಗ್ಗೆ ಹೇಳುತ್ತಿದ್ದಂತೆ ಕಾಣುತ್ತಿತ್ತು. ಈ ದೇವರು ಬೆಟ್ಟದ ಮೇಲೆ ನಿಜವಾಗಿ ಇದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಪ್ರಕೃತಿ ಮಾತ್ರ ನಿಜವಾದ ದೇವರ ತರ ಕಾಣುತ್ತಿತ್ತು ಪುನೀತನಿಗೆ. ಸುಸ್ತಾದ ದೇಹಕ್ಕೆ ತಂಗಾಳಿಯ  ಲೇಪನ ಮಾಡುತ್ತಿದ್ದ ಈ  ಪ್ರಕೃತಿ, ದಣಿದಿದ್ದ ಈ ದೇಹಗಳಿಗೆ ತಣ್ಣೀರು ಉಣಿಸುತಿದ್ದ ಈ ಪ್ರಕೃತಿ, ಮನಸ್ಸಿನಲ್ಲಿ  ಅದೇನೆಲ್ಲ ಯೋಚನೆಗಳಿದ್ದರೂ ಕ್ಷಣ ಕಾಲಕ್ಕೆ ಅವನ್ನೆಲ್ಲ  ದೂರಮಾಡಿ ಕಿವಿಗೆ ಇಂಪಾದ ಚಿಲಿಪಿಲಿ ಹಕ್ಕಿಗಳ  ಸಂಗೀತವನ್ನು ಉಣಬಡಿಸುತ್ತಿದ್ದ ಈ ಪ್ರಕೃತಿ, ನಿಜವಾದ ದೇವರು ಅಂದು ಪುನೀತನಿಗೆ  ಅನಿಸುತ್ತಿತ್ತು.       
               ಬಹಳಷ್ಟು  ಎತ್ತರ ಕ್ರಮಿಸಿದ ಅವರಿಗೆ ಗಾಳಿ ಗೋಪುರ ಎಂಬ ಒಂದು ಹೆಬ್ಬಾಗಿಲು ಸಿಕ್ಕಿತು. ಅದು ಅವರು ಏರಿದ ಮೊದಲ  ಬೆಟ್ಟದ ತುದಿ. ಅಲ್ಲಿಯವರೆಗೂ ಅವರು ಇನ್ನೂ ಕೇವಲ ಆರ್ದ ಭಾಗ ಮಾತ್ರ ಪ್ರಯಾಣವನ್ನು  ಸವೆಸಿದ್ದರು. "ಇನ್ನೂ ಅರ್ಧ ಹೋದಮೇಲೆಯೇ  ದೇವಾಲಯ ಸಿಗುವುದು, ಇನ್ನೂ ಮುಂದೆ ಈಗ ಬಂದೊಷ್ಟು ಕಡಿದಾದ ದಾರಿಯಿಲ್ಲ " ಎಂದು  ಪುನೀತನ  ಸ್ನೇಹಿತನ ತಂದೆ ಹೇಳುತ್ತಿದ್ದರು.ಗಾಳಿ ಗೋಪುರದ ಬಳಿ ಸ್ವಲ್ಪ ಹೊತ್ತು ಕೂತು ಅಲ್ಲಿ ದಣಿವಾರಿಸಿಕೊಂಡರು  ಬೀಸುವ ಆ ಭಾರಿ ಗಾಳಿಯ ಜೊತೆಗೆ ಸರಸವಾಡಿ. ಅಲ್ಲೇ ಇದ್ದ  ಹಳ್ಳಿ ಹೊಟೇಲು ಒಂದರಲ್ಲಿ ಒಬ್ಬಬ್ಬರು ಹಸಿದೆ ಹೊಟ್ಟೆಗೆ ಕಡಿಮೆ ಎಂದರೂ ಒಂದೊಂದು ದೋಸೆ ಹಾಕಿಕೊಂಡರು. ಪುನೀತ್ ಮಾತ್ರ  ದೋಸೆ, ಬಿಸಿ ಬಿಸಿ ಇಡ್ಲಿ ತಿನ್ನುವುದಲ್ಲದೇ ಜೊತೆಗೆ ಅಲ್ಲಿಯ ಮೆಣಸಿನಕಾಯಿ ಬೋಂಡಾದ ರುಚಿಯೂ ನೋಡಿದ.  ಸರಿಯಾಗಿ ಹೊಟ್ಟೆ ತುಂಬಿಸಿಕೊಂಡು ತಮ್ಮ ಹೊಟ್ಟೆ ದೇವರನ್ನು ತೃಪ್ತಿ ಪಡಿಸಿಕೊಂದಾಗ ಸಮಯ 9.30 ರಿಂದ  10 ಗಂಟೆ ಇರಬಹುದು. ಅಲ್ಲಿಂದ ಮತ್ತೆ ಪ್ರಯಾಣ ಶುರು ಆಯಿತು. ನಡೆದು ನಡೆದು ದೇಹದ ತ್ರಾಣವೆಲ್ಲ ನಿತ್ರಾಣವಾಗ ತೊಡಗಿತ್ತು. ಅಲ್ಲಿ ಇಲ್ಲಿ ಕೂತು ಮತ್ತೆ ಮತ್ತೆ ಪ್ರಕೃತಿಯ ಅಂದವನ್ನು ಅನುಭವಿಸುತ್ತಾ ಮುಕ್ಕಾಲು ಭಾಗ ಪ್ರಯಾಣವನ್ನು ಮುಗಿಸಿದ್ದರು. ಅಲ್ಲಿಗೆ ಅವರು ಆ ಚಾರಣದ 2 ಹಂತವನ್ನು ಮುಗಿಸಿದ್ದರು  .
            ಎರೆಡು ಬೆಟ್ಟಗಳ ನಡುವಿನ ಒಂದು ರಸ್ತೆ ದಾಟಿ ಮತ್ತೊಂದು ಅಂದರೆ ಮೂರನೇ ಹಂತವನ್ನು ಶುರು ಮಾಡೋಕೂ ಮುಂಚೆ ಆ ಮೂರನೇ ಬೆಟ್ಟವನ್ನು  ನೋಡಿ ಪುನೀತ್  ಒಂದು ಕ್ಷಣ ಯೋಚಿಸಿ "ಓ ಓ ಇನ್ನೂ ಇದನ್ನೂ ಹತ್ತಬೇಕಾ " ಎಂದಾಗ ಅಲ್ಲೇ ಇದ್ದ ಅವನ ಸ್ನೇಹಿತನ ತಂದೆ "ನೋಡು ಇದೊಂದೇ ಒಂದು ಬೆಟ್ಟ , ಅವರಿಗೆ  ಕಾಣುವೋಷ್ಟು ದೂರ ಕೈ ತೋರಿಸಿ , ಅಲ್ಲಿತನಕ ಮಾತ್ರ ಕಡಿದಾಗಿದೆ, ಇದನ್ನು ಹತ್ತಿದರೆ ಮುಗೀತು ಆಮೇಲೆ  ನೇರ ಹಾದಿ. ಅದೇ ಹಾದಿಯಲ್ಲಿ ಸ್ವಲ್ಪ ಮುಂದೆ ಹೋದರೆ ಸಾಕು ದೇವಸ್ತಾನ ಸಿಕ್ಕೇ ಬಿಡುತ್ತೆ " ಅಂದರು. ಈ ಮಾತನ್ನು ಕೇಳಿ ,  ಇಳಿದು ಹೋಗಿದ್ದ ದೇಹ ಚೇತನ ಮತ್ತೆ ಜಾಗೃತವಾಗಿ ಮೂರನೇ ಹಂತವನ್ನು ಏರಲು ಶುರು ಮಾಡಿಯೇ ಬಿಟ್ಟಿತು. ಅಲ್ಲೊಂದು ಮತ್ತೆ ಆಶ್ಚರ್ಯಕರ ನಂಬಿಕೆ ನಡೆಯುತ್ತಿತ್ತು. ಆ ಕಡಿದಾದ ಬೆಟ್ಟಕೆ ಮೆಟ್ಟಿಲುಗಳಿದ್ದವು. ಅವುಗಳೆಲ್ಲ ಕುಂಕುಮ ಹರಿಷಣಗಳ ಮುದ್ದೆಯಾಗಿದ್ದವು. ಜನರು ಆ ಮೆಟ್ಟಿಲುಗಳನ್ನು ಮಂಡಿಯೂರಿ  ಹತ್ತುತಿದ್ದರು. ಅದೇ ರೀತಿ ನಮ್ಮ ಸ್ನೇಹಿತನ ಹೆಂಡತಿಯು ಕೂಡ ಒಂದು ಹತ್ತೋ ಹನ್ನೊಂದು ಮೆಟ್ಟಿಲನ್ನು ತನ್ನ ಗಂಡನ ಶ್ರೇಯಸ್ಸಿಗೆಂದು ಮಂಡಿಯಲ್ಲೇ ನೆಡೆದೆ ಹತ್ತಿದರು. ಆಮೇಲೆ ಮತ್ತೆ  ಈ ಬೆಟ್ಟವನ್ನೇರುವಾಗ ಮೊದಲಿನಹಾಗೆಯೇ ಶುರುವಾಯಿತು ಬೆವರು.ತೀರಾ ಕಡಿದಾದ ಆ ಜಾಗ ಮಾತ್ರ  ತುಂಬಾ ಪ್ರಯಾಸದಾಯಕವಾಗಿತ್ತು ಹತ್ತುವುದಕ್ಕೆ. ಹಾಗೂ-ಹೀಗೂ ಮಾಡಿ ಪುನೀತ್  ಮತ್ತು ಸ್ನೇಹಿತನ ಪರಿವಾರ ಅದನ್ನು ಕೂಡ ಹತ್ತಿಯೇ ಬಿಟ್ಟರು. ಮೇಲೆ ಹೋಗಿ ನಿಟ್ಟುಸಿರು ಬಿಟ್ಟು " ಗೋವಿಂದ ಗೋವಿಂದ " ಎಂದು ದೇವರನ್ನು ಒಮ್ಮೆ ಪ್ರಾರ್ಥಿಸಿ ಅಡಗಿದ್ದ ತಮ್ಮ ದೇಹ ಶಕ್ತಿಯನ್ನು ಮತ್ತೊಮ್ಮೆ ಕ್ರೋಡೀಕರಿಸಿ "ಇನ್ನೇನು ಬಂದೆ ಬಿಟ್ಟಿತು ದೇವಸ್ಥಾನ "ಎಂದು ಪುನೀತನಿಗೆ ಅವರೆಲ್ಲರೂ ಹೇಳುತ್ತಾ  ಮತ್ತೆ ನಡೆಯತೊಡಗಿದರು.
            ದೇವಸ್ತಾನವೂ ದೂರದಿಂದಲೇ ಕಂಡಿತು. ಎಲ್ಲರೂ ಅಲ್ಲಿಂದಲೇ ಒಮ್ಮೆ ಕೈ ಮುಗಿದು "ಗೋವಿಂದ ಗೋವಿಂದ" ಎಂದರು. ಪುನೀತನು ಅದೇ ರೀತಿ ಮಾಡಿದ. ಹೇಳಿಕೇಳಿ ಅತ್ಯಂತ ಶ್ರೀಮಂತ  ದೇವರು. ಅದ್ಬುತವಾದ ಜಾಗದಲ್ಲಿ ಸುಂದರವಾದ ಅನೇಕ ದೇವಸ್ಥಾನಗಳು, ಮಂಟಪಗಳ ನಡುವೆ ನಿಂತಿದೆ ವೆಂಕಟರಮಣ ದೇವಸ್ಥಾನದ ಆ ಬಾರಿ ಗೋಪುರ. ಪಕ್ಕದಲ್ಲಿ ಒಂದು ದೊಡ್ದ ನೀರಿನ ಪುಷ್ಕರಣಿ. ಎತ್ತ ನೋಡಿದರು ಅತ್ತ ಜನ ಸಾಗರ.ಬಹುಪಾಲು ಜನ ಮುಡಿಕೊಟ್ಟು ಬೋಳು ತಲೆಗಳನ್ನು ಬಿಟ್ಟುಕೊಂಡು ಅಡ್ಡಾಡುತ್ತಿದ್ದಾರೆ, ಕಪ್ಪು ಬಟ್ಟೆಗಳನ್ನು ಧರಿಸಿದ ಅಯ್ಯಪ್ಪ  ಸ್ವಾಮಿಯ ಭಕ್ತರು ಕಣ್ಣಿಗೆ ಕಾಣುತ್ತಿದ್ದಾರೆ.ಬೆಟ್ಟವನ್ನು ಏರಿ ಬೆವರಿ ಬಂದಿದ್ದ ದೇಹಗಳನ್ನು ಅಲ್ಲೇ ದೇವಸ್ಥಾನದ ಪಕ್ಕದಲಿದ್ದ ಪುಷ್ಕರಣಿಯಲ್ಲಿ ಮುಳುಗಿಸೆದ್ದರು.ತಮ್ಮ ದೇಹದ ದಣಿವನ್ನೆಲ್ಲ  ಮೈಯ ಮೇಲೆ ನೀರು ಬಿದ್ದ ಕ್ಷಣವೇ ಮರೆತರು.ಶುಭ್ರ  ಬಟ್ಟೆ ಧರಿಸಿ ದೇವರ ದರುಶನಕ್ಕೆ ಹೊರಟರು. 
        ಇದುವರೆಗೂ ಬೆಟ್ಟ ಏರಿ ದಣಿದರು,ಬೆವರಿದರು,ಸೋತರೂ ಅವುಗಳನ್ನೆಲ್ಲ ಮರೆತು ದೇವರ ದರುಶನಕ್ಕೆ ಕಾತುರರಾಗಿದ್ದರು. ಬಾರಿ ಸಾಲುಗಳಲ್ಲಿ ಜನರು ಕಾಯುತ್ತಾ ನಿಂತಿದ್ದರು. ಸಾವಿರಾರು ಜನರು ಅದೆಷ್ಟು ಗಂಟೆಯಿಂದ ಕಾದಿದ್ದರೋ ಗೊತ್ತಿಲ್ಲ. ಬೆಟ್ಟವನ್ನು ನಡೆದು ಬಂದವರಿಗೆ ಪ್ರತ್ಯೇಕವಾದ ಸಾಲು ಕೂಡ ಇತ್ತು. ಅವರು ಕೂಡ ಅದೇ ಸಾಲಿಗೆ ಸೇರಿಕೊಂಡರು.ಸಾಲಿನಲ್ಲಿ ನಿಂತು ಎಷ್ಟು ಹೊತ್ತು ಕಳೆದರೂ ಅವರ ಸಾಲು ಮುಂದೆ ಹೋಗುತ್ತಿಲ್ಲ. "ಏಕೆ ಹೀಗೆ ಆಗುತ್ತಿದೆ ? ಇಷ್ಟು ಹೊತ್ತಿಗೆ ನಾವು ಸ್ವಲ್ಪ ದೂರ ಹೋಗಿರಲೇ ಬೇಕಿತ್ತು. ಯಾಕೆ ನಿಂತ ಸಾಲುಗಳು ನಿಂತ  ಆಗೆ  ಇವೆ ? " ಎಂದು ಪುನೀತನ   ಸ್ನೇಹಿತನ ತಂದೆಯವರು ಹೇಳಿದರು.ಬೆಟ್ಟ ಏರಿ ಬಂದಿದ್ದ ಅವರ ಕಾಲುಗಳು ಬಹಾಳೋಷ್ಟು  ಅಂದರೆ 2 ಗಂಟೆ ನಿಂತ ಮೇಲೆ ನೋವನ್ನು ತಾಳಲಾರದೆ  ಮಾತಾಡ ತೊಡಗಿದವು. ನೀರಿನಲ್ಲಿ ಮಿಂದೆದ್ದು ಬಂದಿದ್ದ ದೇಹಗಳು ಮರೆತಿದ್ದ ನೋವನ್ನು ಮತ್ತೆ ನೆನಸಿಕೊಂಡವು. ಆದರೆ ಅಲ್ಲಿ ಎಲ್ಲರೂ ಅಸಹಾಯಕರು.ನಾವು ಏನು ಮಾಡಲು ಸಾದ್ಯವೆ  ಇಲ್ಲ. ಎಲ್ಲರೂ ಅವರಂತೆಯೇ ಸಾಮಾನ್ಯ ಭಕ್ತರು. ಆ ಭಕ್ತ  ಸಾಗರದಲ್ಲಿ ಅವರುಗಳು ಕೂಡ ಒಂದು ಸಣ್ಣ ಮೀನುಗಳ ಗುಂಪಷ್ಟೇ.
        ಬೇಜಾರು ಕಳೆಯಲು ಒಬ್ಬರಿಗೊಬ್ಬರು ಮಾತನಾಡಿಕೊಂಡರು.ಅಕ್ಕ ಪಕ್ಕದಲ್ಲಿದ ಬೇರೆ ಭಕ್ತರನ್ನು ಕೂಡ ಮಾತಾಡಿಸಿದರು. ಮಾತುಗಳೆಲ್ಲ  ಖಾಲಿ ಆದವು.ಸಾಲು ಮಾತ್ರ ನಿಂತಲ್ಲೇ ನಿಂತಿದೆ. ಮುಂದೆ ಒಂದಿಂಚು  ಕೂಡ ಸಾಗುತ್ತಿಲ್ಲ. ಮಾತುಗಳೆಲ್ಲ ಮುಗಿದ ಮೇಲೆ ಹಾಗೆ ಎಲ್ಲರೂ ಅಂತರ್ಮುಖಿಗಳಾದರು. ದಣಿದಿದ್ದ  ದೇಹಗಳೆಲ್ಲ ಸುಮ್ಮನಾಗಿ , ಕುಳಿತು ಕೊಳ್ಳಲು  ಜಾಗಗಳನ್ನು ಬಯಸಿದವು.ಅಷ್ಟರಲ್ಲಿ ಅವರ ಸಾಲು ನಿಧಾನವಾಗಿ ಮುಂದೆ ಚಲಿಸಿತು. ಹೋಗಿದ್ದ ಶಕ್ತಿ ಮತ್ತೆ ಬಂತು."ಇನ್ನೂ ಕನಿಷ್ಟ 2 ಗಂಟೆಯಾದರೂ ಬೇಕು ದರುಶನಕ್ಕೆ" ಎಂದು ಅವನ ಸ್ನೇಹಿತ ಹೇಳಿದಾಗ ಪುನೀತ್  "ಹೌದೇನೋ ? ನಾ ಏನೋ ಮುಗಿದೆ ಹೋಯಿತು,ಇನ್ನೇನು ದರುಶನ  ಆಗಿಯೇ ಬಿಡುತ್ತೆ ಅಂತ  ಅಂದುಕೊಂಡಿದ್ದೆ " ಎಂದು ನಿಟ್ಟುಸಿರು ಬಿಟ್ಟನು. ಅಷ್ಟರಲ್ಲಿ ಸಾಲಿನಲ್ಲಿ ಇದ್ದ ಅವರು ಮುಂದೆ ಹೋಗಿ, ಕೆಲವು ಪಂಜರದಂತಹ ಕೆಲವು ಕೋಣೆಯೊಳಗೆ ಹೋದರು. ಅಲ್ಲಿ ಕೆಲ ನಿಮಿಷಗಳವರೆಗೆ ಕಾಯಬೇಕಿತ್ತು. ಅವುಗಳು ಥೇಟ್  ಪಂಜರಗಳೇ  ಆದರೆ  ಕೂರಲು ಮಾತ್ರ ಮರದ ಬೆಂಚುಗಳಿದ್ದವು.ಅವುಗಳ  ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ಅಲ್ಲಿಗೆ ಕಳಿಸಲಾಗಿತ್ತು. ಪಾಪ ದೇವಸ್ಥಾನದ ಆಡಳಿತ  ಮಂಡಳಿಯವರೇನು  ಮಾಡಿಯಾರು ಈ ಜನ ಸಾಗರವನ್ನು ನಿಯಂತ್ರಿಸಲು.
              ಆರ್ದ ಗಂಟೆ ಕಳೆಯಿತು, ಒಂದು ಗಂಟೆ ಕಳೆಯಿತು,ಎರೆಡು, ಮೂರು ಮತ್ತು ನಾಲ್ಕೂ ಗಂಟೆಗಳು ಕಳೆದರೂ ಇನ್ನೂ ಆ ಪಂಜರದಿಂದ ಅವರಿಗೆ  ಮುಕ್ತಿ ಸಿಗಲಿಲ್ಲ. ಅಲ್ಲೇ ಕೂತು ಕಾಲ ಕಳೆಯಲು ಕಷ್ಟವಾಯಿತು. ಜನರಿಗೆ ದೇವರ ದರುಶನದ ಕಾತರ ಹೆಚ್ಚಿತು.ಎಷ್ಟೋ ಮಂದಿ ದೇವರ ಸ್ಮರಣೆಯಲ್ಲಿ ಕೂತಿದ್ದಾರೆ. ಕೆಲವರಿಗೆ ಕಾದು ಕಾದು  ದೇವರ ಮೇಲೆ ಭಕ್ತಿಯು  ಹೊರಟು ಹೋಗಿ ಕೇವಲ ಆತನನ್ನು ನೋಡಬೇಕು, ನೋಡಿದರೆ ಸಾಕು ಅಷ್ಟೇ ಎನ್ನುವ ಮನೋಭಾವ ಬೆಳೆಯಿತು. ಕೆಲವರಿಗೆ ಅಲ್ಲಿಯ ಆಡಳಿತ ಮಂಡಳಿಯ ಬಗ್ಗೆ ಅಸಹನೆ ಮೂಡಿತು. ಅಲ್ಲಿ ಭಕ್ತರನ್ನು ಕೇಳುವವರು ಯಾರು ಇಲ್ಲ. ಆಡಳಿತ ಮಂಡಳಿಯು ಭಕ್ತರ  ಮೊರೆ ಕೇಳಲು, ಭಕ್ತರೇನು ಒಬ್ಬರೇ ಇಬ್ಬರೇ.ಲಕ್ಷಾಂತರ ಮಂದಿ.ಆ ಭಕ್ತರಲ್ಲಿ ಪುಂಡ ಪೋಲಿಗಳು ಕೂಡ ಇದ್ದರು, ವೃದ್ದರು, ಹೆಣ್ಣುಮಕ್ಕಳು,ಚಿಕ್ಕಮಕ್ಕಳೂ  ಅನೇಕರು. ಅಲ್ಲೇ ಪಂಜರದೊಳಕೆ ನೀಡಿದ ಪ್ರಸಾದವನ್ನು ಎದ್ದೋ ಬಿದ್ದೋ ಕೆಲವು ಗಟ್ಟಿ ಭಕ್ತರು  ಗಿಟ್ಟಿಸಿಕೊಂಡು ತಿಂದರು. ತಮ್ಮ ತಮ್ಮ ಹೆಂಡತಿ ಮಕ್ಕಳಿಗಾಗಿ  ಬೇರೆ ಬೇರೆ ವಯಸ್ಸಾದವರನ್ನು, ಹೆಂಗಸರನ್ನು , ಮಕ್ಕಳನ್ನು ದೂಡಿ  ಬೀಳಿಸಿ ಪ್ರಸಾದವನ್ನು ಪಡೆದು ತಮ್ಮ ಹೆಂಡಿರು ಮಕ್ಕಳಿಗೆ ಕೊಟ್ಟರು . ಪಾಪ ಕೆಲವರು ಏನು ಸಿಗದೆ ಹಾಗೆಯೇ   ಕುಳಿತರು.ಅಷ್ಟರಲ್ಲಿ  ಅಲ್ಲಿ ನಡೆಯುತಿದ್ದ ಅನೇಕ ಘಟನೆಗಳನ್ನು ನೋಡಿ ಪುನೀತ್  ಮನಸ್ಸಿಗೆ ಬಲು ಬೇಜಾರಾಯಿತು. ಅವನ ಆಸ್ತಿಕ ಭಾವ ಕಡಿಮೆ ಆಗುತ್ತಾ ನಾಸ್ತಿಕ ಭಾವ ಅವನನ್ನು ಆಳಲು ಶುರು ಮಾಡಿತ್ತು. " ನಿಜವಾಗಿಯು  ಏಕೆ  ಹೀಗೆ ?? ಏಕೆ  ಈ ರೀತಿ  ಜನರು ಒಬ್ಬರನ್ನೊಬ್ಬರು ತುಳಿದು, ಹೆಂಗಸರು,ಚಿಕ್ಕ ಮಕ್ಕಳೂ  ಎಂದು ಲೆಕ್ಕಿಸದೆ. ಆ ಪ್ರಸಾದ ತಮಗೆ ಸಿಗಬೇಕೆಂದು   ಒಬ್ಬರನ್ನೊಬ್ಬರು ತುಳಿದು, ಎಳೆದಾಡಿ  ಪ್ರಸಾದ ಪಡೆಯುತ್ತಿದ್ದಾರೆ. ಇವೆಲ್ಲದರ ನಡುವೆ  ಮಕ್ಕಳಿಗೆ, ಆ ಹೆಂಗಸರಿಗೆ ಆಗುವ ನೋವುಗಳನ್ನು ಯಾಕೆ ಅವರೆಲ್ಲ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಇರುವರೆಲ್ಲರೂ ಮನುಷ್ಯರೇ. ಎಲ್ಲರೂ ಆ ದೇವರ ದರುಶನಕ್ಕಾಗಿಯೇ ಬಂದಿರುವುದು. ಏಕೆ  ಇವರೆಲ್ಲರು  ಸಮಾಧಾನದಲ್ಲಿ ವರ್ತಿಸುತ್ತಿಲ್ಲ.ಒಬ್ಬ ಸ್ವಲ್ಪ ಮುಂದ ಹೋದರೆ ಸಾಕು ಇನ್ನೊಬ್ಬ ಆವಾಚ್ಯಾ ಶಬ್ದಗಳಿಂದ ಮತ್ತೊಬ್ಬನನ್ನು ಬಯ್ಯುತ್ತಾನೆ. ಹೇಗೆ ಬೇಕೋ ಹಾಗೆ ಒಬ್ಬರ ಮೇಲೊಬ್ಬರು ಬೀಳುತ್ತಾರೆ . ಎರೆಡು  ನಿಮಿಷ ತಡವಾಗಿ ಹೋದರೆ ಅವರಿಗೆ ದೇವರು ಕಾಣುವುದಿಲ್ಲವೇನು ?. ಇಷ್ಟು ಕಷ್ಟ ಪಟ್ಟು, ಇನ್ನೊಬ್ಬರನು ನೋಯಿಸಿ, ಚಿಕ್ಕ ಮಕ್ಕಳು, ಹೆಂಗಸರನ್ನು ತುಳಿದು ಮುನ್ನುಗ್ಗಿ ದೇವರನ್ನು ಕಂಡು ನಾವು ಮಾಡಬೇಕಾಗಿರುವುದಾರು ಏನು ?. ದೇವರು ನಿಜವಾಗಿಯೂ ಇದನ್ನೆಲ್ಲ ನೋಡುವುದಿಲ್ಲವೇ. ದೇವರು ನಿಜವಾಗಿಯೂ ಇದ್ದಿದ್ದರೆ ಹೀಗೆಲ್ಲ ಆಗುತ್ತಿದ್ದರೂ, ಅಲ್ಲೇ ಯಾಕೆ ಕೂತಿದ್ದಾನೆ. ಭಕ್ತ ರಕ್ಷಕನೆಂದು ಕರೆಸಿಕೊಳ್ಳುವ ಅವನು, ಅವನ ಅನೇಕ  ಭಕ್ತರಿಗೆ ಇಲ್ಲಿ ಆಗುವ ನೋವುಗಳಿಗೆ ಏಕೆ  ಸ್ಪಂದಿಸುತ್ತಿಲ್ಲ ?  ನಿಜವಾಗಿಯೂ ದೇವರು ಇರುವನೇ ? ಬೇರೆಯವರಿಗೆ ನೋವುಂಟು ಮಾಡಿ ದೇವರನ್ನು ಕಂಡು ನಾವು ಪಡಬೇಕಾಗಿರುವ ಸುಖವಾದರೂ ಏನು ? ಅದರಿಂದ ನಮಗೆ ತೃಪ್ತಿ ಆಗಲು ಸಾದ್ಯವೇ ?. ಶಾಂತಿ, ಸಮಾಧಾನ ಪ್ರೀತಿಗಳಲ್ಲವೇ ದೇವರು. ಅವು ಸಿಗದಿದ್ದರೆ ನಾವಿಲ್ಲಿಗೆ ಬಂದದ್ದಾದರೂ ಏಕೆ ?. ಅವುಗಳನ್ನರಸಿ ಇಲ್ಲಿಗೆ ಬಂದರೂ  ಅವು ನಮಗೆ ಇಲ್ಲಿ ಸಿಗಲಿಲ್ಲ ಅಂದರೆ ಹೇಗೆ ?" ಹೀಗೆ ಅನೇಕ ಪ್ರಶ್ನೆಗಳು, ತರ್ಕಗಳು  ಪುನೀತನನ್ನು ಕೆರಳಿಸಿದವು,ಯೋಚನೆಯ ಹಾದಿಗೆ ದೂಡಿದವು.ಹಾಗೂ-ಹೀಗೂ ಬಹಳಷ್ಟು ಸಮಯ ಕಾದ ನಂತರ , ಕೊನೆಗೊಮ್ಮೆ ಆ ಪಂಜರಗಳಿಂದ  ಮುಕ್ತಿಯೂ ಸಿಕ್ಕಿತು. ದೇವರ ದರುಶನವೂ ಆಯಿತು.
      ನಿಜವಾಗಿಯೂ ದೇವರ ಮೂರ್ತಿ ಅದ್ಭುತವಾಗಿತ್ತು. ಒಂದು ಕ್ಷಣ ಪುನೀತ್ ದೇವರಲ್ಲಿ ಲೀನನಾಗಿ, ಎಲ್ಲವನ್ನು ಮರೆತು "ಶಾಂತಿ, ಸಮಾಧಾನ ಕೊಡಪ್ಪಾ ನನಗೂ ಮತ್ತು ನನ್ನಂಥಹ ಎಲ್ಲಾ ಭಕ್ತರಿಗು" ಎಂದು ಬೇಡಿಕೊಂಡನು.ತನಗೆಂದು ಏನು ಕೇಳಲಾಗಲಿಲ್ಲ, ಕೇಳಲು ಮನಸ್ಸು ಬರಲಿಲ್ಲ , ತನಗಾಗಿ ಏನಾದರು ಕೇಳಿ ಕೊಳ್ಳುವೊಷ್ಟು ಆಸ್ತಿಕ ಭಾವನೆಯು  ಹೊರಟು ಹೋಗಿ, ಸ್ವಾಮಿಯ ವಿಗ್ರಹದ ಮುಂದೆ ಮಾತು ಬರದವನಂತೆ  ಮೂಕನಾಗಿದ್ದನು. ಅಷ್ಟೊತ್ತಿಗೆ ತಡ ರಾತ್ರಿಯೂ ಆಗಿತ್ತು. ಗೊಂದಲದ ಗೂಡಾಗಿದ್ದ ಮನಸ್ಸಿಗೆ ದೇವರ ದರ್ಶನ, ಅದರ ಸೌಂದರ್ಯ ಸ್ವಲ್ಪ ನೆಮ್ಮದಿ ತಂದಿತ್ತು. ಆದರೂ ಅವನ ಮನಸ್ಸಿನಲ್ಲಿ  ಎಲ್ಲೋ ಒಂದು ಬಗೆಯ ಬೇಸರ ಇತ್ತು. ದೇವಸ್ಥಾನದ  ಆಡಳಿತ ಮಂಡಳಿಯವರು ಅಷ್ಟೊಂದು ವ್ಯವಸ್ಥೆ  ಮತ್ತು ಉತ್ತಮ ಸೌಕರ್ಯಗಳನ್ನು ಕಲ್ಪಿಸಿದ್ದರೂ ಭಕ್ತರೆ ಸಹನೆ ಕಳೆದುಕೊಂಡು ಅಸ್ತವ್ಯಸ್ತಕ್ಕೆ ಕಾರಣರಾಗುತ್ತಾರೆ. ಹೇಗೋ ಒಮ್ಮೆ ದೇವರ ದರ್ಶನ ಮಾಡಿದರೆ ಸಾಕು ಎಂಬ ಸಣ್ಣ ಯೋಚನೆಯಲ್ಲಿ ನಿಜವಾದ ಭಕ್ತಿ ಮತ್ತು ಪ್ರಾರ್ಥನೆಗಳ ಸ್ವರೂಪವನ್ನೇ ಬದಲಿಸಿಕೊಳ್ಳುತ್ತಾರೆ. " ಇಲ್ಲಿ ನಾವು  ದೇವರನ್ನು ಬೈದುಕೊಂಡು, ಅವನ ಇರುವಿಕೆಯನ್ನೇ ಪ್ರಶ್ನೆ ಮಾಡಬೇಕೋ ? ಅಥವಾ ಮಹಾ ಭಕ್ತರುಗಳಾದ ನಮ್ಮ ತೀರಾ ಕೆಟ್ಟ ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕೋ ? ಏಕೆ ಹೀಗೆ ?? " ಎಂದು ಪುನೀತ್   ಮನಸ್ಸಿನಲ್ಲಿ  ಸಾವಿರಾರು  ಪ್ರಶ್ನೆಗಳೆದ್ದವು. ಆದರೂ ಆ ದೇವರಿಗೆ ನಮಸ್ಕಾರ ಸಲ್ಲಿಸಿ ಜೀವನದಲ್ಲಿ ಒಮ್ಮೆಯಾದರೂ ವೆಂಕಟೇಶನ ದರ್ಶನ ಮಾಡಬೇಕು, ಅದನ್ನು ನೋಡಬೇಕು  ಅಂತ ಅಂದುಕೊಂಡಿದ್ದ ಅವನ ಆಸೆ ಈಡೇರಿದ  ಮೇಲೆ ಅವನ ಸ್ನೇಹಿತನಿಗೆ ದನ್ಯವಾದ ತಿಳಿಸಿ, " ನಿನ್ನ ದೆಸೆಯಿಂದ ನಾನು ಈ ದಿನ ಇಲ್ಲಿಗೆ ಬಂದೆ. ಇಲ್ಲಿ ಅನೇಕ ವಿಷಯಗಳು ನನ್ನ ಮನಸ್ಸಿನಲಿ ಸುಳಿದಾಡಿದವು, ದೇವರು ನಿಜವಾಗಿಯೂ ಇದಾನೋ ಇಲ್ಲವೋ ಗೊತ್ತಿಲ್ಲ, ಆದರೂ ಇಲ್ಲಿ ಏನೋ ಒಂದು ಬಗೆ ಶಕ್ತಿ ಇದೆ, ಬೆಳಿಗ್ಗೆ ತಿರುಪತಿಯ ಬೆಟ್ಟ ಹತ್ತಿ ಬಂದ ಅನುಭವವೊಂದು ಅದ್ಭುತ. ಅದನ್ನು ನಾ ಎಂದಿಗೂ ಮರೆಯುವುದಿಲ್ಲ " ಎಂದು ಅವನಿಗೆ  ಕೃತಜ್ಞತೆ ಸಲ್ಲಿಸದನು.
ನಿಮಗಾಗಿ
ನಿರಂಜನ್

 

Rating
No votes yet