ಗೋ ಸಮ್ಮೇಳನ
ಪಾಳೇಕರ್ ರಿಂದ ಕಂಡ "ಗೋಮಾತೆ" ಮತ್ತು ವಿಶ್ವ ಗೋ ಸಮ್ಮೇಳನ.
ರೈತಾಪಿ ಬದುಕನ್ನು ನಡೆಸುವ ನಾವು ಕೂಡು ಕುಟುಂಬದಲ್ಲೇ ಇದ್ದು ಬೆಳೆಯುವಾಗ ಅನೇಕ ನಾಟಿ ದನಗಳ ಹಾಗೂ ಹೈಬ್ರೀಡ್ ದನಗಳ ದೊಡ್ಡ ಕೊಟ್ಟಿಗೆ ಇತ್ತು. ಗೊಬ್ಬರಕ್ಕಾಗಿ ಈ ನಾಟಿ ದನಗಳನ್ನೂ ಹಾಲಿಗಾಗಿ ಹೈಬ್ರ್‍ಇಡ್ ದನಗಳನ್ನೂ ಸಾಕಿದ್ದರು. ರಸಾಯನಿಕ ಗೊಬ್ಬರದ ಬಳಕೆ ಪ್ರಾರಂಭವಾದಂತೆ ಕ್ರಮೇಣ ನಾಟೀ ದನಗಳ ಸಂಖ್ಯೆ ಕಡಿಮೆಯಾಗುತ್ತಾ ಬರೀ ಜರ್ಸಿ ದನಗಳು ಮಾತ್ರಾ ಉಳಿದವು. ಹೈಬ್ರ್‍ಈಡ್ ದನಗಳು ಗೊಬ್ಬರವನ್ನೂ ಹಾಲನ್ನೂ ದೊಡ್ಡ ಪ್ರಮಾಣದಲ್ಲಿ ಒದಗಿಸುವುದೆಂಬ ಅಕ್ಕರೆ ಒಂದೆಡೆಯಾದರೆ, ನಾಟಿ ಜಾನುವಾರು ಕೇವಲ ಬೇಲಿಹಾರಿ ತಾಪತ್ರೇಯ ಮಾಡುವ, ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅಡ್ಡಿಯುಂಟುಮಾಡುವ ಕೇವಲದ ಪ್ರಾಣಿಯಾಗಿ ನಮ್ಮ ಭಾವಕೋಶದಿಂದ ಅತೀ ದೂರಕ್ಕೆ ಹೋಗಿತ್ತು.
ಹೈಬ್ರೀಡ್ ಅಕ್ಕರೆಯೂ ಕ್ರಮೇಣ ತಲೆನೋವಿನ ವಿಚಾರವಾಗಿ ಮನೆಯವರಿಗೆ ಕಂಡಿತು. ಸೂಕ್ಷ್ಮ ದೇಹ ಪ್ರಕೃತಿಯ ಈ ಹೈಬ್ರೀಡ್ ದನಗಳಿಗೆ ಯಾವತ್ತೂ ವೆಟರ್ನರಿ ವೈದ್ಯರ ಸಹಾಯ ಬೇಕಾಗುತ್ತಿತ್ತು. ಕೊಟ್ಟಿಗೆ ಕೆಲಸ ಮಾಡುವವರ ಸಮಸ್ಯೆ. ಗೊಬ್ಬರವನ್ನು ಹೊರಗಡೆಯಿಂದ ಕೊಂಡರೆ ಅದೇ ಹೆಚ್ಚು ಅಗ್ಗವಾಗಿರುತ್ತಿತ್ತು. ಒಟ್ಟಾರೆಯಾಗಿ ಜಾನುವಾರು ಸಾಕುವುದು ನಷ್ಟದಾಯಕ ಅಂತ ನಮ್ಮ ಮನೆಯಲ್ಲಿ ಕೊಟ್ಟಿಗೆ ಬಂದ್ ಆಯಿತು. ದೀಪಾವಳಿಯ ಸಮಯದಂದು ಗೋಪೂಜೆ ಮಾಡಲೇ ನಮ್ಮಲ್ಲಿ ಹಸುಗಳಿರದೇ ಮೇಯಲು ಬಂದ ಯಾರದ್ದೋ ದನಕ್ಕೆ ನಾಮಕಾವಸ್ತೆ ಪೂಜೆ ಮಾಡುವಂತಹ ಪರಿಸ್ಥಿತಿ. ಗೋವುಗಳ ಜತೆಗಿನ ನಮ್ಮ ಸಂಸ್ಕೃತಿ ಹೀಗೆ ಆರಿಹೋಗಲು ರಸಾಯನಿಕ ಕೃಷಿವಿಧಾನ ಮತ್ತು ಆರ್ಥಿಕ ಲೆಕ್ಕಾಚಾರವೇ ಮುಖ್ಯ ಕಾರಣವಾಗಿತ್ತು. ಇಶ್ಟು ಹೊತ್ತಿಗಾಗಲೇ ಮನೆಯಲ್ಲಿ ಗೋವುಗಳಿರದೇ ಕೃಷಿಮಾಡುವ ಕ್ರಮವನ್ನೂ, ಡೈರೀ ಹಾಲನ್ನು ಬಳಸುವುದನ್ನು ವಿರೋಧಿಸಲು ಹಳಬರು ಇರಲಿಲ್ಲ. ಎಲ್ಲರೂ ನೆಹರೂ ಕಾಲದ ಆಧುನಿಕ ಶಿಕ್ಷಣವನ್ನು ಪಡೆದವರೇ. ಪ್ರಗತಿಪರ ರೈತರೆಂಬ ಖ್ಯಾತಿಯೂ ನಮಗಿತ್ತು.
ಹೀಗೆಯೇ ಸಾಗಿದ್ದ ನಮ್ಮ ರೈತಾಪಿ ಬದುಕು ಬರುಬರುತ್ತಾ ಆತಂಕವನ್ನು ಎದುರಿಸಬೇಕಾಗಿ ಬಂದಿತು. ಅಡಿಕೆಯ ಇಳುವರಿ ಕಡಿಮೆಯಾಗುತ್ತಾ ಬಂತು. ಬೇರುಹುಳಗಳ ಸಮಸ್ಯೆಯೂ ಗೋಚರಿಸಿದವು. ಭತ್ತ ಬೆಳೆಯುವ ಗದ್ದೆಗೆ ಕೀಟನಾಶಕಗಳ ಬಳಕೆ ಅನಿವಾರ್ಯವಾಗುತ್ತಾ ಬಂತು. ರಾನಡೇ ಎಂಬ ಮೈಕ್ರೋ ನ್ಯೂಟ್ರಿಯೆಂಟ್ ಗೊಬ್ಬರದವರು ನಮ್ಮ ಇಳುವರಿಯನ್ನು ದುಪ್ಪಟ್ಟು ಮಾಡುತ್ತೇವೆಂದೂ, ಯಾವುದೇ ಬೇಸಾಯ ಬೇಕಿಲ್ಲದೇ ಕೇವಲ ತಮ್ಮ ಗೊಬ್ಬರವನ್ನು ಬಳಸಿದರೆ ಸಾಕೆಂದೂ ನಮ್ಮ ಮನಸ್ಸನ್ನು ಸೂರೆಗೊಳಿಸಿದರು. ಆದರೆ ಈ ಯಾವುದೇ ಪ್ರಯತ್ನ ನಮ್ಮ ತೋಟದ ಏಳಿಗೆಯನ್ನು ಪೊರೆಯಲೇ ಇಲ್ಲ. ಬದಲಾಗಿ ವಿಪರೀತ ಕೊಳೆರೋಗ ನಮ್ಮನ್ನು ಕಂಗಾಲಾಗಿಸುತ್ತಾ ಬಂತು. ರಾನಡೇಯವರಿಂದ ಬಿರಿದ ಸಿಂಗಾರಗಳು ಮಳೇಗಾಲದ ವೈಪರಿತ್ಯವನ್ನು ಸಹಿಸದೇ ನಲುಗಿದವು. ಮೂರು-ನಾಲ್ಕು ವರ್ಷಗಳ ಈ ಅನುಭವವನ್ನು ಪಡೆದನಾವು ಬೇರೆ ರ್‍ಈತಿಯ ಕೃಷಿ ವಿಧಾನಕ್ಕಾಗಿ ಯೋಚಿಸುತ್ತಿದ್ದಾಗ ನಮಗೆ ದಾರಿ ತೋರಿದ್ದು ಪಾಳೇಕರ್.
ನಾನು ಇಲ್ಲಿ ಪಾಳೇಕರ್ ಕೃಷಿ ವಿಧಾನವನ್ನು ವಿವರಿಸಲು ಹೋಗುವುದಿಲ್ಲ. ಕೇವಲ ಒಂದು ವರ್ಷದಿಂದ ಈ ಪದ್ಧತಿಯನ್ನು ಸಂಪೂರ್ಣವಾಗಿ ಅನುಸರಿಸುತ್ತಿರುವ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಲು ಇನ್ನೂ ಕೆಲಕಾಲ ಬೇಕಾಗುತ್ತದೆ. ನಾನಿಲ್ಲಿ ಹೇಳಬೇಕಾಗಿರುವುದು ಶ್ರೀ. ಸುಭಾಶ್ ಪಾಳೇಕರ್ ಕಾರಣದಿಂದಲೇ ನಮ್ಮ ಮನೆಗೆ ಪುನಃ ಮಲೆನಾಡಿನ ಪುರಾತನ ಜಾನುವಾರಾದ " ಮಲೆನಾಡು ಗಿಡ್ಡ" ನಮ್ಮ ಮನೆಯ ಕೊಟ್ಟಿಗೆಯನ್ನು ಅಲಂಕರಿಸಿದವು. ನಿಜಕ್ಕೂ ನಾನು ಈ ಜಾನುವಾರನ್ನು ಸೂಕ್ಷ್ಮವಾಗಿ ನೋಡಿದ್ದೇ ಈವಾಗ. ಅವುಗಳ ಬಣ್ಣ, ಕುತ್ತಿಗೆ ಕೆಳಗಿನ ಜೋತುಬಿದ್ದ ಚರ್ಮ, ಸೂಟಿಯಾದ ಕಣ್ಣೂ ಕಿವಿಗಳು, ಅವು ಅಂಬಾ ಎಂದು ಕೂಗುವ ರೀತಿ....
ಪಾಳೇಕರ್ ಅವರು ಕನ್ನಡದ ವಿಚಾರವಂತ ಸ್ವಾಮಿ ಆನಂದ್ ಮೂಲಕವಾಗಿ ಇವುಗಳ ಸಗಣಿ, ಗಂಜಲಗಳಲ್ಲಿ ಇರುವ ಅಸಾಮಾನ್ಯ ಶಕ್ತಿಯ ವಿಚಾರ ತಿಳಿಸಿದಾಗ ಹಾಗೂ ಈ ಕ್ರಮವನ್ನು ಬಳಸಿ ಯಶಸ್ಸು ಕಂಡವರನ್ನು ನೋಡಿದಾಗ ನಿಜಕ್ಕೂ ನಮ್ಮ ಇಂದಿನ ಕೃಷಿ ಚಟುವಟಿಕೆಗಳು ನಾಟಿಜಾನುವಾರುಗಳ ಕೃಪೆಯಿಂದ ಸಾಗುವ ಪದ್ದತಿಗೆ ಒಳಗಾಯಿತು. ಈ ನಾಟಿ ಜಾನುವಾರುಗಳು "ಗೋಮಾತೆ" ಯಾಗಿ ಕಾಣುವಂತಾಗಿದ್ದು ನಿಜವಾಗಿಯೂ ಈಗ!!
************************************************************* **********************************************
ನಾನು ಇದನ್ನೆಲ್ಲ ಬರೆಯುತ್ತಿರುವ ಹೊತ್ತಿನಲ್ಲಿ ಗೋವುಗಳನ್ನು ಸಾಂಸ್ಕೃತಿಕವಾಗಿಯೂ, ಆರ್ಥಿಕವಾಗಿಯೂ ಮತ್ತು ಸಾವಯವ ಕೃಷಿ ವಿಧಾನದಲ್ಲೂ ಲಾಗಾಯ್ತಿನಿಂದ ಪಾಲಿಸಿಕೊಂಡು ಬರುತ್ತಿರುವ ರೈತರ ನೆನಪಿದೆ. ಹಾದಿ ತಪ್ಪಿದವರು ನಮ್ಮಂಥವರು ಎಂಬ ನಾಚಿಕೆಯೂ ನನಗಿದೆ. ಆದರೆ ನಮ್ಮ ಭಾವಕೋಶಕ್ಕೆ ಈ ಜಾನುವಾರುಗಳನ್ನು ಬಿತ್ತಿದ ಹೆಗ್ಗಳಿಕೆಯ ಪಾಳೇಕರ್ ಅವರನ್ನು ನಾನು ಇತ್ತೀಚೆಗೆ ನಡೆದ "ವಿಶ್ವ ಗೋ ಸಮ್ಮೇಳನ"ದಂದು ಪುನಃ ಪುನಃ ನೆನಪಿಸಿಕೊಂಡೆ. ನಿರಂತರವಾಗಿ ರೈತರೊಂದಿಗೆ ಅನುಭವಗಳನ್ನು ಹಂಚಿಕೊಳ್ಳುತ್ತಾ ದೇಶದ ಉದ್ದಗಲಕ್ಕೆ ಸಂಚರಿಸುತ್ತಾ ಶೂನ್ಯ ಬಂಡವಾಳದ ಕೃಷಿ ಮಾರ್ಗವನ್ನು ಕೈಗೊಳ್ಳಲು ಅರಿವನ್ನು ಬಿತ್ತುತ್ತಿರುವ ಸ್ವತಃ ಸಾಧಕರಾದ ಪಾಳೇಕರ್ ಇಂದಿನ ನಿಜವಾದ ದೇಶದ ಧಾರ್ಮಿಕ, ಸಾಮಾಜಿಕ ನಾಯಕನೆಂದರೆ ಅದು ಹೊಗಳಿಕೆ ಅಲ್ಲವೇಅಲ್ಲ.
************************************************************** **********************************************
************************************************************************************************************
ಕೈ ಮುಗಿದೋ ಟಾ ಟಾ ಮಾಡುತ್ತಲೋ ಇರುವ ನಮ್ಮ ಜನ ಸೇವಾಸಕ್ತ ರ್‍ಆಜಕಾರಣಿಗಳ ಬಣ್ಣದ ಪೋಸ್ಟರ್ ಗಳನ್ನೇ ನೋಡಿ ನೋಡೀ ಆಯಾಸವಾಗಿದ್ದ ಕಣ್ಣುಗಳಿಗೆ ಇಂದಿನ ದಿನಗಳಲ್ಲಿ ಸ್ವಲ್ಪ ಖುಷಿ ಕೊಟ್ಟಿದ್ದೆಂದರೆ ಶ್ರೀ ಶ್ರೀ ರಾಘವೇಶ್ವರ ಸ್ವಾಮಿಗಳು ಒಂದು ಕರುವನ್ನು ಮುದ್ದಿಸುತ್ತಿರುವ ಪೋಸ್ಟರ್. ಈ ಚಿತ್ರವನ್ನು ನಾನು ಸ್ವಾಮಿ ಆನಂದ್ ಅವರೊಂದಿಗೆ ಹೊಸನಗರ ಮಠಕ್ಕೆ ಅವರ ಜಾನುವಾರು ಕೊಟ್ಟಿಗೆಗಳನ್ನು ನೋಡಿಬರಲು ಹೋಗಿದ್ದಾಗಲೂ ನೋಡಿದ್ದೆ. ಯಾರೋ ಸ್ವಾಮಿಗಳಿಗೆ ಒಂದು ಒಳ್ಳೆಯ ಇಮೇಜನ್ನು ಕೊಟ್ಟಿದ್ದಾರೆ. ಇಂದಿನ ಅಮಾನವೀಯ ಕಾಲದಲ್ಲಿ ಇಂಥಹ ಚಿತ್ರಗಳು ಕೂಡಲೆ ಹೃದಯವನ್ನು ತಟ್ಟುತ್ತವೆ. ಹಾಗೆಂದೇ ಜಾಹಿರಾತುಗಾರರು ಬಹಳ ಜಾಣ್ಮೆಯಿಂದ ನಮ್ಮನ್ನು ಸೆಳೆಯುತ್ತಾರೆ. ಆ ಪೋಸ್ಟರ್ ಕೆಳಗಡೆಯೇ ಎಂದಿನಂತೆ ರಾಜಕಾರಣಿಗಳ ಚಿತ್ರ. ಎಶ್ಟೊಂದು ಕೆಲಸಗಳು ಒಟ್ಟಿಗೆ ಈಡೇರಬೇಕು ನೋಡಿ ಇಂಥ ಒಂದು ಕಾರಣದಿಂದ. ಅಂದು ಮಠದಲ್ಲಿ ನೋಡಿದ ಚಿತ್ರ ನನ್ನ ಹೃದಯವನ್ನು ಕದ್ದರೆ ಇಂದು ಇದು ಅಷ್ಟು ಮುಗ್ಧವಾಗಿ ಕಾಣಲಿಲ್ಲ. ಇವತ್ತಿನ ಮಾರ್ಕೆಟಿಂಗ್ ಕಾಲದಲ್ಲಿ ಏಲ್ಲವನ್ನೂ ಅನುಮಾನದಲ್ಲೇ ನೋಡುವ ಅನಿವಾರ್ಯತೆಯ ಕಾಲವಿದು.
************************************************************** **********************************************
ವಿಶ್ವ ಗೋ ಸಮ್ಮೇಳನವನ್ನು ಬಹಳ ದೊಡ್ಡಮಟ್ಟದಲ್ಲಿಯೇ ಶ್ರೀ. ಶ್ರೀ. ಗಳವರು ನಡೆಸಿದ್ದಾರೆ. ಆ ಸಮಯದಲ್ಲಿ ಟಿವಿ ಯಲ್ಲಿ ಅವರ ಮಾತುಗಳನ್ನು ಕೇಳಿದೆ. ಅವರೊಮ್ಮೆ ಆಂದ್ರಾಕ್ಕೆ ಹೋಗಿದ್ದಾಗ ಅಲ್ಲಿ ಕಂಡ ಒಂದು ನಾಟೀ ತಳಿಯ ಬಸವ ಅವರ ಮನಸ್ಸನ್ನು ಆಕ್ರಮಿಸಿಕೊಂಡು ಅದನ್ನು ತಮ್ಮ ಹೊಸನಗರ ಆಶ್ರಮಕ್ಕೆ ತರಿಸಿಕೊಳ್ಳುವವರೆಗೂ ಕಾಡಿತಂತೆ. ಇದೇ ಇವರ ಮುಂದಿನ ಗೋವುಗಳ ವಿಚಾರದ ಮುಂದಿನ ಎಲ್ಲಾ ಕೆಲಸಗಳಿಗೆ ಮೂಲಪ್ರೇರಣೆ ಆಯಿತೆಂದು ಹೇಳುವುದನ್ನು ಕೇಳಿದೆ. ಇಂಥ ಕಾಡುವಿಕೆಯೇ ವಿಶೇಷವಾದದ್ದು . ನಾನು ಇವರೊಂದಿಗೆ ಕೆಲವು ವರ್ಷಗಳ ಹಿಂದೆ ಕಾರ್ಯನಿಮಿತ್ತ ಹೊನ್ನಾವರ ಸಮೀಪದ ಇವರ ಮಠಕ್ಕೆ ಹೋಗಿದ್ದೆ. ಅಲ್ಲಿ ಒಂದು ಸಣ್ಣ ಜಲಪಾತವಿತ್ತು. ಅದನ್ನು ನೋಡುತ್ತಾ ಮುಗ್ಧರಾಗಿ ನಿಂತ ಇವರ ಭಾವಚಿತ್ರವನ್ನು ಸೆರೆಹಿಡಿದು ನನ್ನ ಆಪೀಸಿನಲ್ಲಿ ಅಂಟಿಸಿದ್ದೆ. ಅಂದೂ ಕೂಡ ಇವರ ನಿರ್ಮಲ ಆಸಕ್ತಿಗಳು, ಬಾಡದ ಉತ್ಸಾಹ ಮುಂತಾದ ಗುಣಗಳನ್ನು ಗಮನಿಸಿದ್ದೆ. ಹವ್ಯಕ ಸಮುದಾಯಕ್ಕೆ ಹೊಸ ಹುರುಪನ್ನು ಮೂಡಿಸುತ್ತಿದ್ದಾರೆ ಎಂದೆನಿಸುತ್ತಿತ್ತು. ಇಂಥ ಸಾಮರ್ಥ್ಯವಿರುವ ಈ ಸ್ವಾಮೀಜಿ ನಮ್ಮ ಮಲೆನಾಡಿನ ಪರಿಸರದಲ್ಲಿ ಈಗ ಬಹಳ ಪ್ರತಿಷ್ಟೆಯನ್ನು ಪಡೆಯುತ್ತಿರುವುದು, ನಮ್ಮ ಗ್ರಾಮ ವಾಸ್ಥವ್ಯದ ಮುಖ್ಯಮಂತ್ರಿಗಳಿಗೇ ಒಂದು ಹಸುವನ್ನು ನೀಡೀ ಅದನ್ನು ತಮ್ಮ ಮನೆಯಲ್ಲಿಯೇ ಸಾಕುವಂತೆ ಪ್ರೇರೇಪಿಸಿದ್ದು ಒಳ್ಳೆಯ ಬೆಳವಣಿಗೆ. ಹೀಗೆ ನಮ್ಮ ಮಲೆನಾಡಿನ ಪರಿಸರ, ಜನರ ಬದುಕು ಜಾಗತಿಕ ಜನರ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಇಂಥಹ ಒಬ್ಬರು ಗಟ್ಟಿಯಾಗಿ ಬೆಳೆಯಲಿ ಎಂಬ ಒಳ ಆಸೆಯೊಂದಿಗೆ ಇವರ ಇಂದಿನ ಗೋ ಸಮ್ಮೇಳನವನ್ನು ಗಮನಿಸುತ್ತಿದ್ದೆ.
************************************************************** ********************************************
ಆ ಸಮ್ಮೇಳನಕ್ಕೆ ಹೋಗಿಬಂದವರೆಲ್ಲಾ ಬಹಳ ಖುಷಿ ಪಟ್ಟಿದ್ದಾರೆ. ಬೃಹದಾಕಾರದ ಭಾರತೀಯ ಜಾನುವಾರುಗಳು, ಅಲ್ಲಿ ಸಮ್ಮೇಳನಕ್ಕೆ ಆಗಮಿಸಿದ ಸಾವಿರಾರು ಕಾರ್ಯಕರ್ತರ ನಿಸ್ಪ್ರುಹ ಸೇವೆ, ಸಾವಿರಾರು ಜನಕ್ಕೆ ವ್ಯವಸ್ಥಿತವಾಗಿ ಊಟವನ್ನು ಒದಗಿಸುತ್ತಿದ್ದುದು, ನಿಲ್ಲದ ಭಜನೆಗಳು, ಕೊಳಲುವಾದನ..... ಇವೆಲ್ಲವನ್ನೂ ಜನರು ಮೆಚ್ಚಿದ್ದಾರೆ. ಇವರ ಈ ಕೆಲಸಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನನೀಡಿದೆ. ಜಾನುವಾರುಗಳ ಬಗೆಗೆ ಜನಮನದಲ್ಲಿ ಮೂಡುತ್ತಿದ್ದ ವಿಸ್ಮೃತಿಯನ್ನು ತಿಳಿಸಲು ಸಮ್ಮೇಳನ ಪ್ರಯತ್ನಿಸಿದೆ. ಈ ಹೊತ್ತಿನಲ್ಲಿ ನಮ್ಮ ಹಳ್ಳಿಗಳಲ್ಲಿ ಗೋಮಾಳಗಳೆಲ್ಲಾ ಮಾಯವಾಗಿವೆ. ಒಂದು ಭೂರಹಿತ ಬಡಕುಟುಂಬವು ಜಾನುವಾರನ್ನು ಸಾಕದಹಾಗೆ ಇಂದಿನ ಪರಿಸ್ಥಿತಿಯಿದೆ. ಸಮ್ಮೇಳನ ಈ ಕುರಿತಾದ ಯಾವ ಚಿಂತನೆಯನ್ನೂ ನಡೆಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ಗೋವುಗಳಿಗೆ ಮಾಡಿದ ತುಲಾಭಾರಕ್ಕೆ ಹುಲ್ಲು ಹಿಂಡಿಗಳನ್ನು ಹಾಕಿದ್ದರೆ ಒಳ್ಳೇಯದಿತ್ತು ಅಂತ ಯಾರೋ ಹೇಳಿದ್ದು; ಎಮ್ಮೆ, ಕುರಿ ಆಡುಗಳೂ ಕಡಿಮೆಯೇ ಎಂದು ಮೂಗು ಮುರಿದಿದ್ದು ಅಪ್ರಸ್ತುತ ಅಂತ ನನಗೆ ಅನ್ನಿಸಲಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ನಾಟೀ ಜಾನುವಾರುಗಳ ಹಾಲಿಗಿಂತ ಅವುಗಳ ಮೂತ್ರ ಮತ್ತು ಸಗಣಿಗೆ ಬಹಳ ಬೆಲೆ ಬರಬಹುದು. ಆಗ ಬಡ ರೈತರೂ ಇವನ್ನು ಸಾಕಲು ಸಾದ್ಯವಾಗಬಹುದು. ಮುದಿಯಾದರೂ ಅವುಗಳನ್ನು ಮಾರಬೇಕಿಲ್ಲ. ಸಾಯಿಸಬೇಕಿಲ್ಲ. ಸಮ್ಮೇಳನದಲ್ಲಿ ಗೋಮೂತ್ರವನ್ನು ಮಾರ್ಕೆಟ್ ಮಾಡುವ ಕೆಲಸವನ್ನೂ ಚೆನ್ನಾಗಿಯೇ ಮಾಡಿದ್ದಾರಂತೆ.
************************************************************************************************************
ಇಂಥಹ ದೊಡ್ಡ ಮಟ್ಟದ ಜಾತ್ರೆ ನಡೆಸಲು ಮಠದವರು ಸುತ್ತಲಿನ ಅರಣ್ಯಭೂಮಿಯನ್ನು ವಿಕಾರವಾಗಿ ಬಳಸಿಕೊಂಡಿರುವುದು ಮಾತ್ರ ತಪ್ಪೆಂದು ಹೇಳಲೇ ಬೇಕು. ಸ್ವಾಮೀಜಿಯವರು ಇದ್ದ ಕಾಡಿನ ನಡುವೆಯೇ ಇರುವಹಾಗೆಯೇ ನಡೆಸಲು ಸಾದ್ಯವಿತ್ತು. ಜೊತೆಗೆ ಸಮ್ಮೇಳನದ ಕಲ್ಮಷದಿಂದ ನದಿಯ ಮೀನುಗಳು ಸತ್ತಿವೆ ಎಂದರೆ ಇದನ್ನು ನಗಣ್ಯವೆಂದು ನಾವು ಕಾಣಬೇಕೆ?
ತಮ್ಮ ಸಂವೇದನಾಯುಕ್ತ ಕೆಲಸಕ್ಕೆ ಇದು ಅಪವಾದವಾಯಿತು. ನಮ್ಮ ಸಾಗರ- ಹೊಸನಗರ ಕಡೆಯ ಪ್ರಗತಿಪರ ಹೋರಾಟಗಾರರ ಈ ಸಿಟ್ಟಿನ್ನು ಸ್ವಾಮಿಗಳು ತೆರೆದ ಮನಸ್ಸಿನಿಂದ ನೋಡಬೇಕು ಎಂದೆನಿಸುತ್ತದೆ. ಗೋವುಗಳ ಮೂಲಕವಾಗಿ ನಾವು ಇಡೀ ಜೀವಸಂಕುಲವನ್ನೇ ಕರುಣೆಯಿಂದ ಪ್ರೀತಿಯಿಂದ ನೋಡುವ ನಮ್ಮ ಬೆಳವಣಿಗೆಗೆ ಈ ಸಮ್ಮೇಳನ ನಾಂದಿಯಾಗಬೇಕು ಎಂದು ಭಾವಿಸುತ್ತೇನೆ.
*************************************************************************************************************
ಕೆ. ಜಿ. ಶ್ರೀಧರ್
೧೨.೦೫.೨೦೦೭
Comments
ಉ: ಗೋ ಸಮ್ಮೇಳನ