ಗ್ರೇ ಫ್ಯಾನ್ಸಿ
ಬೆಳಿಗ್ಗಿನ ಚುಮು ಚುಮು ಚಳಿ, ಕಾಫಿ ಹೀರುತ್ತಾ ತೋಟದ ಕಡೆ ಕಣ್ಣು ಹಾಯಿಸಿದರೆ ಅರಳುತ್ತಿರುವ ಹೂವಿನ ಮೇಲೆ ಹಾರುತ್ತಿರುವ ಹಲವು ಬಗೆಯ ಚಿಟ್ಟೆಗಳು. ದೂರದಿಂದ, ಅದು ಹಾರುವ ಪರಿ, ಅದರ ಬಣ್ಣಗಳಿಂದ ವ್ಯಾಮೋಹಿತನಾಗಿದ್ದೆನಾದರೂ ಹತ್ತಿರದಿಂದ ಅದನ್ನು ವೀಕ್ಷಿಸಿ, ಅದರ ಜಾತಕ ತಿಳಿಯುವ ಪ್ರಯತ್ನ, ನನ್ನ ಕೈಗೆ ಕ್ಯಾಮಾರ ಬರುವವರೆಗೂ ಮಾಡಿರಲಿಲ್ಲ.
ಇವತ್ತು ಯಾವುದಾದರೂ ಒಂದು ಚಿಟ್ಟೆ ಹಿಂದೆ ಬಿದ್ದು ಅದರ ಕ್ಲೋಸ್ ಅಪ್ ತೆಗೆಯಬೇಕೆಂದು ನಿರ್ಧರಿಸಿ, ಮೊದಲು ಕಣ್ಣಿಗೆ ಬಿದ್ದ "ಗ್ರೇ ಫ್ಯಾನ್ಸಿ" ಎಂಬ ಚಿಟ್ಟೆಯ ಬೆನ್ನು ಹತ್ತಿದೆ. ನಾನು ಒಳ್ಳೆಯವನು ಅಂತ ನನಗೆ ಗೊತ್ತು ಆದರೆ ಆ ಚಿಟ್ಟೆಗೇನು ಗೊತ್ತು ಪಾಪ. ಹತ್ತಿರ ಹೋದಂತೆಲ್ಲಾ, ಬೆದರಿ ನನ್ನಿಂದ ದೂರ ಹೋಗಿ ಕುಳಿತುಕೊಳ್ಳಲು ಆರಂಭಿಸಿತು. ನಾನೂ ಕ್ಯಾಮರಾ ಹೆಗಲಿಗೆ ನೇತು ಹಾಕಿಕೊಂಡು ಅದು ಹೋದಲ್ಲೆಲ್ಲಾ ಅದನ್ನು ಹಿಂಬಾಲಿಸಿದೆ.
ಹೀಗೆ ತನ್ನ ಹಿಂದೆ ಬಿದ್ದ ನನ್ನನ್ನು ಕಂಡು, ಈಗ ಅದಕ್ಕೂ ಒಂದು ರೀತಿಯ ಆಶ್ಚರ್ಯವಾಗತೊಡಗಿತು. ಹೂವಿನಿಂದ ಹಾರಿ ದೂರದ ಒಂದು ಎಲೆಯ ಮೇಲೆ ಕುಳಿತುಕೊಂಡು ನನ್ನ ಕಡೆಗೇ ನೋಡತೊಡಗಿತು. ಕ್ಯಾಮರಾದ ಕಣ್ಣಿನಲ್ಲಿ ನೋಡುತ್ತಾ ಹಾಗೇ ಮುಂದುವರಿದಂತೆ ನನಗೆ ಚಿತ್ರ ತೆಗೆಯಲು ಬೇಕಾಗಿದ್ದ ಅಂತರ ಸಿಕ್ಕಿತ್ತು. ಕ್ಯಾಮರ ಕ್ಲಿಕ್ಕಿಸಿ, ಬರಿಗಣ್ಣಿನಿಂದ ನೋಡಿದರೆ ಚಿಟ್ಟೆ ಒಂದೇ ಮಾರಿನ ಅಂತರದಲ್ಲಿತ್ತು.
ಮತ್ತೆ ಅದಕ್ಕೆ ಸಂದೇಹ ಬಂತೋ ಎನೋ, ದೂರದಲ್ಲಿ ಬಿದ್ದಿದ್ದ ತೆಂಗಿನ ಗರಿಯೊಂದರ ಮೇಲೆ ಕುಳಿತು ಎನೋ ಯೋಚಿಸತೊಡಗಿತು. ಈ ಬಾರಿ ಮತ್ತೆ ಅದರ ಹತ್ತಿರ ಹೋಗಿ ನಾಲ್ಕೈದು ಚಿತ್ರ ತೆಗೆದೆ.
ಹತ್ತಿರ ಬಂದೂ ಎನೂ ಮಾಡದ ನನ್ನ ನೋಡಿ ಈಗ ಅದಕ್ಕೆ ಕೊಂಚ ಧೈರ್ಯ ಬಂದಿತ್ತು. ಹಾಗೆಯೇ ಬಳಿಯಿದ್ದ ದಾಸವಾಳದ ಮೊಗ್ಗಿನ ಮೇಲೆ ಕುಳಿತು ಬಾ ಎಂಬಂತೆ ನಗು ಮೊಗದಿಂದ ನನ್ನ ಕರೆಯಿತು. ಹತ್ತಿರ ಹೋಗಿ ಮತ್ತೆ ಚಿತ್ರ ತೆಗೆದು ಅಲ್ಲಿಯೇ ನಿಂತಿದ್ದೆ.
ಈಗ ಆಶ್ಚರ್ಯ ಪಡುವ ಸರದಿ ನನ್ನದಾಗಿತ್ತು. ಮೊಗ್ಗಿನ ಮೇಲೆ ಕೂತಿದ್ದ ಚಿಟ್ಟೆ ಹಾರಿ ನನ್ನ ಎಡ ಹೆಗಲ ಮೇಲೇ ಬಂದು ಕೂತಿತು. ಎನೋ ಒಂದು ಬಗೆಯ ಸಂತಸ, ಪ್ರಿಯಕರನ ಪ್ರೇಮ ನಿವೇದನೆಯನ್ನು ಪ್ರೇಯಸಿ ಒಪ್ಪಿಕೊಂಡಾಗ ಆತನಿಗೆ ಆಗಬಹುದಾದಂತ ಸಂಭ್ರಮ, ನನ್ನ ಮೇಲೆ ಭರವಸೆಯಿಟ್ಟಿ ಚಿಟ್ಟೆಯಿಂದ ಮೂಡಿತು.
ಇದುವರೆಗೂ ರೆಕ್ಕೆ ಬಿಡಿಸಿ ಕೂತುಕೊಂಡ ಚಿತ್ರ ತೆಗೆಯಲು ಅನುಕೂಲವಾಗಿರಲಿಲ್ಲ. ಹೀಗೆ ಸ್ವಲ್ಪ ಸಮಯ ಹೆಗಲ ಮೇಲಿದ್ದ ಚಿಟ್ಟೆ ಪಕ್ಕದಲ್ಲಿದ್ದ ಹೂವಿನ ಮೇಲೆ ಕುಳಿತು ರೆಕ್ಕೆಯನ್ನು ಸಂಪೂರ್ಣವಾಗಿ ಬಿಚ್ಚಿ ಫೋಸು ನೀಡತೊಡಗಿತು.
ಹಾರಿ ಹಾರಿ ಹಸಿವಾಗಿತ್ತೋ ಎನೋ, ಕೊಳವೆಯಂತಹ ತನ್ನ ನಾಲಗೆ ಚಾಚಿ ಮಕರಂದ ಹೀರತೊಡಗಿತು.
ಅದರ ಹಿಂದೆ ಸುತ್ತಿ ಸುತ್ತಿ ನನಗೂ ಹಸಿವಾಗ ತೊಡಗಿತ್ತು. ಇನ್ನೂ ಸಮೀಪ ತೆರಳಿ ಇನ್ನೊಂದು ಚಿತ್ರ ತೆಗೆದು, ಅದರ ಸ್ನೇಹಕ್ಕೆ ಋಣಿಯಾಗಿ ಮನೆಯ ಕಡೆ ಅಡಿಯಿಟ್ಟೆ.
ಗ್ರೇ ಫ್ಯಾನ್ಸಿಯ ಜಾತಕ:
Kingdom: Animalia
Phylum: Arthropoda
Class: Insecta
Order: Lepidoptera
Family: Nymphalidae
Subfamily: Nymphalinae
Genus: Junonia
Species: J. atlites
Comments
ಉ: ಗ್ರೇ ಫ್ಯಾನ್ಸಿ
ಉ: ಗ್ರೇ ಫ್ಯಾನ್ಸಿ
ಉ: ಗ್ರೇ ಫ್ಯಾನ್ಸಿ
ಉ: ಗ್ರೇ ಫ್ಯಾನ್ಸಿ
ಉ: ಗ್ರೇ ಫ್ಯಾನ್ಸಿ
In reply to ಉ: ಗ್ರೇ ಫ್ಯಾನ್ಸಿ by nkumar
ಉ: ಗ್ರೇ ಫ್ಯಾನ್ಸಿ
In reply to ಉ: ಗ್ರೇ ಫ್ಯಾನ್ಸಿ by palachandra
ಉ: ಗ್ರೇ ಫ್ಯಾನ್ಸಿ
In reply to ಉ: ಗ್ರೇ ಫ್ಯಾನ್ಸಿ by hamsanandi
ಉ: ಗ್ರೇ ಫ್ಯಾನ್ಸಿ