ಚಂಚರೀಕ‌

ಚಂಚರೀಕ‌

ಚಂಚರೀಕ
 
ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ.
ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !
 
ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್ಕೊಳಗಾಗಿದ್ದ.
 
ತನಗಿಂತ ಅವನಲ್ಲಿ ಹೆಚ್ಚಿನದೇನಿದೆ ಎಂಬ ಅನ್ವೇಷಣೆ,
ಅವನಿಗಿಂತ ತನ್ನಲ್ಲೇನು ಕೊರತೆಯಿದೆ ಎಂಬ ಅವಲೋಕನೆ,
ತನ್ನಿಂದೇನಾದರೂ ತಪ್ಪಾಯಿತೋ ಎಂಬ ಆತ್ಮಶೋಧನೆ,
ಹೆಂಗಸಿಗೆ ಬೇಕಾದುದೇನು ಎಂಬ ಸಂಶೋಧನೆ,
 
ಒಂದೊಂದೂ ಎಷ್ಟು ಟನ್ನುಗಳ ತೂಕದ್ದೆಂದು ಅವನಿಗೇ ಗೊತ್ತಿರಲಿಲ್ಲ !
ಆಫ್‍ಕೋರ್ಸ್, ಆ ಭಾರ ಹೊರಗಿನವರಾರಿಗೂ ತಿಳಿಯುತ್ತಿರಲೂ ಇಲ್ಲ !
 
ಅವನ ಭಾವನಾಲೋಕದಲ್ಲಿ ಅಂತರ್ಯುದ್ಧವೊಂದು ನಿರಂತರವಾಗಿ ನಡೆಯುತ್ತಲೇ ಇತ್ತು.
ಹೋಲಿಕೆಗಳ ವಿಶ್ಲೇಷಣೆಯಿಂದ, ಚರ್ಯೆಗಳ ಪುನರ್ವಿಮರ್ಶೆಗಳಿಂದ ಅವನು ಹೈರಾಣಾಗಿಹೋಗಿದ್ದ.
ತುಮುಲಗಳ ಸಂಘರ್ಷದಿಂದ ಅವನ ಹೃದಯ ಛಿದ್ರವಾಗಿಬಿಟ್ಟಿತ್ತು.
ಇಷ್ಟೆಲ್ಲ ಭಾರಗಳ ಅಡಿಯಲ್ಲಿ ಅವನ ಆತ್ಮವಿಶ್ವಾಸ ನಲುಗಿಹೋಗಿತ್ತು !
 
ಆದರೀಗ ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ !
ಅವಳು ಆ ಬೇರೊಬ್ಬನನ್ನೂ ಬಿಟ್ಟುಹೋದಳು ಎಂಬ ಸಂಗತಿ ಇಷ್ಟೊಂದು ರಿಲೀ(ಲೈ)ಫ್ó ಕೊಡಬಹುದೆಂದು ಅವನು ಕನಸಿನಲ್ಲಿಯೂ ಊಹಿಸಿರಲಿಲ್ಲ !
 
ಅವನಿಗೆ ಪಂಚತಂತ್ರದ ಕಥೆಯೊಂದು ನೆನಪಾಯಿತು.
ಅದರ ಹೆಸರು ಲಬ್ಧಪ್ರಣಾಶ !
ಒಂದಕ್ಕಿಂತ ಒಂದು ಹೆಚ್ಚಿನ ಲಾಭದಾಯಕವಾದುದನ್ನು ಹುಡುಕಿಕೊಂಡು ಹೋಗುವ ಅತ್ಯಾಶಿಗಳಿಗೆ ಕೊನೆಗೆ ಲಭಿಸುವುದು ತಲೆಯಮೇಲೆ ಕೊರೆಯುತ್ತ ತಿರುಗುವ ಕ್ರೂರ ಚಕ್ರ. ಅಷ್ಟೇ !
 
ಅಲ್ಲದೆ, ಹೂವಿಂದ ಹೂವಿಗೆ ಬಂಡುಂಡು ಹಾರುವ ಚಂಚರೀಕದ ಬಗ್ಗೆ ಯಾವ ಹೂವೂ ಕೊರಗುತ್ತ ಕೂರುವುದಿಲ್ಲ.
ಜತನದಿಂದ ಮುಡಿಗೇರಿಸಿಕೊಂಡ ಕೈಗಳೇ ತನ್ನನ್ನು ಕಿತ್ತು ಬಿಸುಟಾಗಲಷ್ಟೇ ಅದರ ನಿಟ್ಟುಸಿರು !
 
ಸೋಜಿಗದ ಪ್ರಶ್ನೆಯೆಂದರೆ, 
ಕಾಲಚಕ್ರದ ತಿರುಗಣೆಯಲ್ಲಿ, ಪರಂಪರಾಗತ ಹೂವು-ದುಂಬಿಗಳ ಪಾತ್ರ ಅದಲು-ಬದಲಾಗಿಬಿಟ್ಟಿದೆಯೋ ?!
 
ಈ ಪ್ರಶ್ನೆ ಅಷ್ಟೇನೂ ತೂಕದ್ದಲ್ಲ !
 
24-02-2015 - ಎಸ್ ಎನ್ ಸಿಂಹ, ಮೇಲುಕೋಟೆ
 

Rating
No votes yet

Comments

Submitted by kavinagaraj Thu, 07/21/2016 - 11:23

ನೀತಿ: ಅಪಾತ್ರರಿಗೆ ಪ್ರೀತಿಯೂ ಸಲ್ಲದು!