ಚಂಚಲ
ಕಿರುಕುಳಕೆ ಸಿಲುಕಿಹರ ಕಂಡೇಕೆ ನೀ ನಗುವೆ ?
ಕುರುಡಾಗಬೇಡಯ್ಯ ಹಣದ ಮದದಿಂದ
ಮರುಳ! ನಿಲ್ಲಳು ಲಕುಮಿ ನಿಂತಕಡೆ ಎಂದೆಂದು
ಬೆರಗುಪಡದಿರದುವೆ ಜಗದ ಕಟ್ಟಳೆಯು;
ಮರಳ ಗಡಿಯಾರವನ್ನೊಮ್ಮೆ ನೀನೋಡು
ಸರಿಯುತಿಹ ಕಾಲವನದೆತ್ತಿ ತೋರುವುದು
ಬರಿದಾದ್ದು ತುಂಬುವುದು ಗಳಿಗೆ ಕಳೆದಿರಲತ್ತ
ಭರದಲ್ಲಿ ತುಂಬಿದ್ದು ಗಳಿಗೆಯಲಿ ಬರಿದು !
ಸಂಸ್ಕೃತ ಮೂಲ:
ಆಪದ್ಗತಂ ಹಸಸಿ ಕಿಂ ದ್ರವಿಣಾಂಧ ಮೂಢ
ಲಕ್ಷ್ಮೀಸ್ಥಿರಾ ನ ಭವತೀತಿ ಕಿಮತ್ರ ಚಿತ್ರಮ್
ಏತಾನ್ ಪ್ರಪಶ್ಯಸಿ ಘಟಾಂ ಜಲಯಂತ್ರಚಕ್ರೇ
ರಿಕ್ತಾ ಭವಂತಿ ಭರಿತಾ ಭರಿತಾಶ್ಚ ರಿಕ್ತಾಃ
-ಹಂಸಾನಂದಿ
ಕೊ: ಮೂಲದಲ್ಲಿದ್ದ ನೀರ ಗಡಿಯಾರವನ್ನು ಮರಳಗಡಿಯಾರವಾಗಿ ಬದ್ಲಾಯಿಸಿದ್ದೇನೆ. ಅದಕ್ಕೆ, ಈಗ ನಮಗೆಲ್ಲ ಮೈಕ್ರೊಸಾಪ್ಟ್ ವಿಂಡೋಸ್ ದಯದಿಂದ ಹೊತ್ತು ಕಳೆವ ಮರಳುಗಡಿಯಾರ ನೀರಿನ ಗಳಿಗೆ ಬಟ್ಟಲಿಗಿಂತ ಹೆಚ್ಚು ಪರಿಚಿತ ಎನ್ನುವ ಕಾರಣಕ್ಕೆ. ನೀರ ಗಡಿಯಾರದಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ, ಚಿಕ್ಕ ತೂತೊಂದನ್ನುಳ್ಳ ಗಳಿಗೆ ಬಟ್ಟಲನ್ನು ತೇಲಿ ಬಿಡಲಾಗುತ್ತಿತ್ತು. ನೀರು ಏರಿ, ಆ ಬಟ್ಟಲು ಮುಳುಗಿದಾಗ, ಇನ್ನೊಂದು ಬಟ್ಟಲನ್ನು ಅಲ್ಲಿ ತೇಲಿ ಬಿಟ್ಟು, ಮುಳುಗಿದ್ದ ಬಟ್ಟಲನ್ನು ತೆಗೆಯಲಾಗುತ್ತಿತ್ತು. ಭಾಸ್ಕರಾಚಾರ್ಯ ಲೀಲಾವತಿ ಎನ್ನುವ ಗಣಿತದ ಪುಸ್ತಕ ಬರೆದಿರುವ ಹಿನ್ನಲೆಯಲ್ಲಿ ಈ ಗಳಿಗೆ ಬಟ್ಟಲಿನ ಕತೆಯೂ ಒಂದಿದೆ. ಅದನ್ನು ಆಸಕ್ತರು ಇಲ್ಲಿ ಓದಬಹುದು.
ಕೊ.ಕೊ: ಮೂಲದಲ್ಲಿ ಲಕ್ಷ್ಮಿ ಎಂಬುದು ಕೇವಲ ಹಣಕ್ಕಲ್ಲದೆ ಜಯ, ಯಶಸ್ಸು ಮೊದಲಾದ ಹಲವು ಭಾವಗಳನ್ನು ಸೂಸುತ್ತದೆ. ಅದನ್ನು ಕನ್ನಡದಲ್ಲಿ ಹಾಗೇ ತರಲಾಗಲಿಲ್ಲ ಅನ್ನುವುದು ನನ್ನ ಕೊರತೆಯಷ್ಟೇ.
ಕೊ.ಕೊ.ಕೊ: ಮೂಲದಲ್ಲಿಲ್ಲದ ಕೆಲವು ಪದಗಳು ಸೇರ್ಪಡೆಯಾಗಿದ್ದರೂ ಅದು ಪದ್ಯದ ಭಾವಕ್ಕೆ ಹೊಂದಿಕೆಯಾಗುವಂತಿದೆ ಎಂದು ನನ್ನೆಣಿಕೆ.
Comments
ಉ: ಚಂಚಲ
ನೋಟ್ ಪ್ಯಾಡ್ ನಿಂದ ಕಾಪಿ-ಪೇಸ್ಟ್ ಮಾಡಿದರೆ, ಎಲ್ಲ ಲೈನ್-ಬ್ರೇಕ್ ಗಳೂ ಹೋಗಿ, ಒಂದು ಗುಪ್ಪೆಯಾಗಿ ಬರುತ್ತಿದೆ, ಆದರೆ ಗೂಗಲ್ ಡಾಕ್ಸ್ ನಿಂದ ಕಾಪಿ-ಪೇಸ್ಟ್ ಮಾಡಿದಾಗ ಸರಿಯಾಗಿ ಬರುತ್ತಿದೆ. ಏನಿದರ ರಹಸ್ಯ?
In reply to ಉ: ಚಂಚಲ by hamsanandi
ಉ: ಚಂಚಲ
ಹಂಸಾನಂದಿಯವರೆ, 'ನಿಲ್ಲಳಷ್ಟ ಲಕುಮಿ' ಎಂದಿದ್ದರೆ ಎಲ್ಲಾ ಲಕ್ಷ್ಮಿಯರನ್ನು ಸೇರಿಸಿದಂತಾಗುತ್ತಿತ್ತು. ಆದರೆ ಈ ಕವನ ಛಂದಸ್ಸು, ಷಟ್ಪದಿಯ ಬಂಧದಲಿದ್ದರೆ ಹೊಂದಿಸುವುದು ಕಷ್ಟ ಸಾಧ್ಯ :-) ಟೆಕ್ಸ್ಟ್ ಎಡಿಟರಿನ ತೊಂದರೆ ನನ್ನ ಅನುಭವಕ್ಕೂ ಬಂದಿತ್ತು - ಅದರಲ್ಲೂ ಪ್ರತಿಕ್ರಿಯೆ ಹಾಕಿದಾಗ