ಚಂದ್ರನನ್ನೇ ಮದುವೆಯಾಗುತ್ತೇನೆ..

ಚಂದ್ರನನ್ನೇ ಮದುವೆಯಾಗುತ್ತೇನೆ..

 

ನನ್ನ ಮನಸ್ಯಾಕೋ ಸದಾ

ಬಾನಂಗಳದ ಚಂದ್ರನನ್ನೇ ಬಯಸುತ್ತದೆ

ಪ್ರತಿ ಕ್ಷಣವೂ ಪ್ರತಿ ನಿಮಿಶವೂ

ಅವನೇ ನನ್ನೊಳಗೆ ತುಂಬಿಕೊಳ್ಳುತ್ತಾನೆ

ಯಾಕಾಗಿ ಹೀಗೆ ಕಾಡುವನೋ ಗೊತ್ತಾಗುತ್ತಿಲ್ಲ ?.

 

ಬೆಳ್ಳಿಯ ಚಿಕ್ಕಿಗಳ ಮಧ್ಯೆ

ವಿಶಾಲ ಆಗಸದಲ್ಲಿ

ಅವನು ನಸು ನಕ್ಕು ನೋಡಿದರೆ

ನನ್ನ ಮನಸ್ಸು ಪುಳಕಗೊಳ್ಳುತ್ತದೆ.

ಒಮ್ಮೆ ಅವನನ್ನೇ ನೋಡುತ್ತ

ನನ್ನ ನಾನು ಮರೆಯುತ್ತೇನೆ

ಅವನೇ ನನ್ನ ಇನಿಯನೆಂದುಕೊಳ್ಳುತ್ತೇನೆ.

 

ನಾ ಚಿಕ್ಕವಳಿದ್ದಾಗ ನನ್ನಮ್ಮ 

ಮಡಿಲಲ್ಲಿ ಮಲಗಿಸಿಕೊಂಡು

ನನಗೆ ತುತ್ತು ತಿನ್ನಿಸುತ್ತ

“ನೋಡು ನೀ ತಿನ್ನದಿದ್ದರೆ

ಆ ಚಂದ್ರನಿಗೆ ನಿನ್ನನ್ನ ಕೊಟ್ಟು

ಮದುವೆ ಮಾಡಿಬಿಡುತ್ತೇನೆ”

ಆ ಚುಕ್ಕಿಗಳಂತೆ 

ನಿನ್ನ ಬಿಟ್ಟು ಹಾರಿ ಹೋಗುತ್ತೇನೆ

ಎಂದು ಭಯ ಪಡಿಸುತ್ತಿದ್ದಳು.

 

ಆಗ ನಾನು ತುಂಬಾ ಹೆದುರುತ್ತಿದ್ದೆ

ಅವನ ನೋಡದೆನೆಯೇ

ಕಣ್ಣು ಬಿಗಿಯಿಡುತ್ತಿದ್ದೆ.

ಮನೆಯೊಳಗೆ ಓಡಿ ಬಾಗಿಲ 

ಸಂದಿಯಲ್ಲಿ ಬಚ್ಚಿಟ್ಟುಕೊಳ್ಳುತ್ತದ್ದೆ.

ಆಗಸದ ತುಂಬೆಲ್ಲಾ

ಕತ್ತಲು ಕವಿದಾಗ ಮಾತ್ರ

ಹೊರಗೆ ಬಂದು ಕುಶಿಪಡುತ್ತಿದ್ದೆ.

 

ಈಗ ಹಿಂದಿನ ಕುಶಿಯಲ್ಲ,

ಭಯವಿಲ್ಲ, ಮನೆಯೊಳಗೆ ಓಡಿ

ನಾ ಬಚ್ಚಿಟ್ಟುಕೊಳ್ಳುವುದಿಲ್ಲ.

ಚಂದ್ರನಿಗೆ ನನ್ನ ಕೊಟ್ಟು

ಯಾರೂ ಮದುವೆ ಮಾಡುವವರಿಲ್ಲ.

 

ನನ್ನಮ್ಮ ನನ್ನ ಬಿಟ್ಟು 

ಆಗಸದಲ್ಲಿ ಮರೆಯಾಗಿದ್ದಾಳೆ

ಈಗವಳು ತಾರೆಯಾಗಿ

ಮಿನುಗುತ್ತಿದ್ದಾಳೆ.

ಅಲ್ಲಿಂದಲೆ ನನ್ನ ನೋಡುತ್ತಾಳೆ.

 

ಪ್ರತಿ ರಾತ್ರಿಯೂ ನಾ

ಚಂದ್ರನಿಗಾಗಿ ಕಾಯುತ್ತೇನೆ.

ಅವನ ತಣ್ಣನೆಯ ಸ್ವರ್ಷಕ್ಕಾಗಿ

ಹಾತೊರೆಯುತ್ತೇನೆ.

ಆಗಸದ ತೋಟದ ತುಂಬಾ

ತಾರೆಗಳ ಹೂಗಳು ಅರಳುವುದನ್ನೇ

ಕಣ್ಣು ತುಂಬಿಕೊಳ್ಳುತ್ತೇನೆ.

 

ಒಂದಲ್ಲ ಒಂದು ದಿನ

ನನ್ನಮ್ಮ ಬಾನಂಗಳದಲ್ಲಿ

ತಾರೆಯಾಗಿ ಮಿನುಗುವಂತೆ

ನಾನೂ ಅವಳ ಜೊತೆಯಲ್ಲೇ 

ಬೆಳಕಾಗಿ ಹೊಳೆಯುತ್ತೇನೆ

ಅವಳ ಮಾತಿನಂತೇ

ಚಂದ್ರನನ್ನೇ ಮದುವೆಯಾಗುತ್ತೇನೆ..

 

                                                                ವಸಂತ್ 

 ಚಿತ್ರಕೃಪೆ. http://images2.layoutsparks.com

 

 

Rating
No votes yet

Comments