ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!

ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!

ಏನು ಬ್ಯೂಸಿ ಅಂತೀರಾ...ನಮ್ಮ ಮಾತುಗಳು ಆರಂಭವಾಗುವುದೇ ಇಲ್ಲಿಂದ. ಪಿಕ್‌ನಿಕ್‌ಗೆ ಪುರುಸೊತ್ತು ಇದೆ, ಚಲನಚಿತ್ರ ಅಂದ್ರೆ ನಮ್ಮ ಕೆಲಸಗಳೆಲ್ಲಾ ಮರೆತು ಹೋಗತ್ತೆ. ಧಾರಾವಾಹಿ ನೋಡಲು ನಮ್ಮಲ್ಲಿ ಸಾಕಷ್ಟು ಸಮಯವಿದೆ. ಆದ್ರೂ ಒಂದಿಷ್ಟು ಕೆಲಸಗಳಿಗೆ ಮಾತ್ರ ನಮ್ಮದು ಅದೇ ರಾಗ! ಯಾವುದಾದರೂ ಒಳ್ಳೆ ಕೆಲಸ ಮಾಡುತ್ತೇವೆ, ಒಳ್ಳೆ ವಿಚಾರ ಹೇಳುತ್ತೇವೆ ಅಂತಾ ನಮ್ಮ ಈ ಪ್ಯಾಟಿ ಜನರನ್ನು ಕರೆದು ನೋಡಿ ಊಹುಂ ಸುತಾರಾಂ ಅವರಿಗೆ ಪುರುಸೊತ್ತಿರದು!
ಮೊನ್ನೆ ಅದ್ಯಾಕೋ ನನ್ನ ಸಂಚಿ ನಾಗಿ ಕಥೆ ಓದಿದ ವೆಂಕಟ ಲಕ್ಷ್ಮಿಯವರು ಇಂದಿನ ಕತೆಗಾರರ ಕುರಿತಾಗಿ ಮಾತಾಡಲು ಕುಳಿತರು. ಇವತ್ತಿನ ಬರಹಗಾರರಿಗೆಲ್ಲಾ ಪೇಶನ್ಸ್‌ ಇಲ್ಲ. ಕಥೆಗಳೆಲ್ಲಾ ಚಿಕ್ಕದಾಗುತ್ತಿದೆ. ವಿಷಯ ವಿಸ್ತಾರವಾದದ್ದನ್ನು ಆಯ್ದುಕೊಂಡು ನರೇಶನನ್ನು ಚಿಕ್ಕದಾಗಿ ಮಾಡುತ್ತಾರೆ. ನಿಮ್ಮ ಕಥೆಯೂ ಹಾಗೇ ಆಗಿದೆ ಅಂತಾ ಅವರು ಮಾತು ಮುಗಿಸಿದರು. ಆಫ್‌ಕೋರ್ಸ್ ಅದು ನಿಜ ಕೂಡಾ. ಆದರೆ ಅದಕ್ಕಿಂತ ಮುಖ್ಯವಾಗಿ ಕಥೆ ಓದುವ ಮಂದಿಗೆ ಎಷ್ಟು ಪೇಶನ್ಸ್‌ ಇದೆ ಅನ್ನೋದು ಮುಖ್ಯವಾಗತ್ತೆ.
ಶಿವರಾಮ ಕಾರಂತರು ಒಂದು ಕುಚೋದ್ಯ ಹೇಳುತ್ತಿದ್ದರು. ಅವರ ಮೂಕಜ್ಜಿಯ ಕನಸಿಗೆ ಪ್ರಶಸ್ತಿ ಬಂದಾಗ ಅನೇಕ ಕಡೆ ಅವರಿಗೆ ಸನ್ಮಾನ ಆಯಿತಂತೆ. ಸಾಕಷ್ಟು ಜನ ಅವರ ಕಾದಂಬರಿ ಗುಣಗಾನ ಮಾಡಿದರಂತೆ. ಆದ್ರೆ ಅದರಲ್ಲಿ ಮುಕ್ಕಾಲು ಪಾಲು ಜನ ಕಾದಂಬರಿ ಓದದೇ ಗುಣಗಾನ ಮಾಡಿದವರಂತೆ! ಈ ವಿಚಾರವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.
ಇತ್ತೀಚೆಗೆ ನನ್ನ ಬರಹವನ್ನು ಸುಮ್‌ಸುಮ್ನೆ ಹೊಗಳುವವರೆ ಹೆಚ್ಚಾಗಿದ್ದಾರೆ. ನಾನು ಬ್ಲಾಗ್‌ ನಿಲ್ಲಿಸುತ್ತೀನಿ ಅಂತಾ ಮೊನ್ನೆ ಚೇತನಕ್ಕಾ ಅದ್ಯಾಕೋ ಗುನುಗುತ್ತಿದ್ದರು. ತಕ್ಷಣ ನನಗೆ ಕಾರಂತರ ಮಾತು ನೆನಪಾಯಿತು. ಒಂದು ಕೃತಿಯನ್ನು, ಬರಹವನ್ನು ಪೂರ್ಣ ಓದದೇ ಹೊಗಳುವ ಟ್ರೆಂಡು ಆವತ್ತಿನಿಂದ ಇವತ್ತಿನವರೆಗೂ ಇದೆ. ಸುದೀರ್ಘ ಬರಹವನ್ನೋ, ಕಥೆಯನ್ನೋ ಬರೆದರೆ ಅದರಲ್ಲೂ ಇಂಟರ್‌ ನೆಟ್, ಬ್ಲಾಗ್‌ಗಳಲ್ಲಿ ಬರೆದರೆ ಖಂಡಿತಾ ಜನ ಓದಲ್ಲ. ಅಂದಹಾಗೆ ಬ್ಲಾಗ್‌ ಎಂಬುದು ನನ್ನ ಮಟ್ಟಿಗಂತೂ ಪ್ರಭಾವಶಾಲಿ ಅನ್ನಿಸುವ ಓದುವ ಮಾಧ್ಯಮವಲ್ಲ.
ಮೊನ್ನೆ ಹೀಗೆ ಪುತ್ತೂರಿನ ಕುಂಟನಿ ನಿವಾಸದಿಂದ ಅಮೆರಿಕದ ಕೆಲ ಮಿತ್ರರ ಬ್ಲಾಗ್‌ವರೆಗೂ ಸುಮ್ನೆ ಒಂದು ವಾಕಿಂಗ್‌ ಹೋಗಿ ಬಂದೆ. ಎಷ್ಟೊಂದು ಅದ್ಬುತ ಬರಹಗಳಿದ್ದವು ಅಂದ್ರೆ ಕೆಲವು ವಾಸ್ತವವಾಗಿ ಚರ್ಚೆಯಾಗಬೇಕಿತ್ತು. ಆದ್ರೆ ಒಂದು ಕಮ್ಮೆಂಟ್ ಕೂಡ ಕೆಲ ಬರಹಗಳಿಗೆ ಇರಲಿಲ್ಲ. ವಾಸ್ತವವಾಗಿ ಬರಹಗಾರ ಜನ ಕಮ್ಮೆಂಟ್ ಮಾಡಲಿ, ಪ್ರತಿಕ್ರಿಯೆ ನೀಡಲಿ ಅಂತಾ ಬರೆಯುವುದಿಲ್ಲ( ನನ್ನಂತಹವನು, ಇತರರ ಕುರಿತು ನನಗೆ ಗೊತ್ತಿಲ್ಲ) ಆದ್ರೂ ಅಂತಹ ಬರಹದ ಕುರಿತು ಕನಿಷ್ಟ ಪಕ್ಷ ಚರ್ಚೆ ನಡೆಸಬೇಕು. ಸಾಹಿತ್ಯವಲಯದಲ್ಲಿ ಒಂದಿಷ್ಟು ವಿಚಾರ ಚರ್ಚೆಯಾಗಬೇಕು( ಯಾಕಂದ್ರೆ ಇಂದಿನ ಸಾಹಿತ್ಯವಲಯ ಜನಪ್ರಿಯ ವಾಗಿರುವುದೇ ಮಾತಿಗಾಗಿ, ಉಪದೇಶಕ್ಕಾಗಿ, ಚರ್ಚೆಗಾಗಿ ಹೊರತು ಕೃತಿಗಾಗಿ, ಕಾರ್ಯಕ್ಕಾಗಿ ಅಲ್ಲ!)
"ಇನ್ನೊಂದು ಸಾಹಿತ್ಯ ಚರಿತ್ರೆ" ಅಂತಾ ಆ ಪುಸ್ತಕದ ಹೆಸರು. ಸುಮತೀಂದ್ರ ನಾಡಿಗರು ಬರೆದ ಪುಸ್ತಕ. ಆಗಿನ ಕಾಲದಲ್ಲಿ ಸಾಹಿತಿಯೊಬ್ಬನ ಕವನ, ಲೇಖನಗಳು ಹೇಗೆ ಚರ್ಚೆಯಾಗುತ್ತಿತ್ತು, ಅನಂತಮೂರ್ತಿ, ಅಡಿಗರಂತಹ ದಿಗ್ಗಜರ ನಡುವೆ ಯಾವ ತರಹ ಒಂದು ವಿಚಾರದ ಕುರಿತಾಗಿ ಚರ್ಚೆ ನಡೆಯುತ್ತಿತ್ತು ಅನ್ನುವುದು ವಿವರಿಸುವ ಅದ್ಬುತ ಪುಸ್ತಕವದು. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರನೊಬ್ಬ ಹೇಗೆ ವಿಕಸಿತಗೊಳ್ಳುತ್ತಾ ಹೋಗುತ್ತಾನೆ ಎಂಬುದನ್ನು ಆ ಪುಸ್ತಕದಿಂದ ಅರಿತುಕೊಳ್ಳಬಹುದು.
ಯಾವೊಬ್ಬನೂ ಹುಟ್ಟುತಲೇ ಸರ್ವಜ್ಞನಾಗುವುದಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುತ್ತಲೇ ಫ್ರೌಡನಾಗುತ್ತಾ ಹೋಗುತ್ತಾನೆ. ಹಾಗೇ ಬರಹಗಾರನೊಬ್ಬ ಪ್ರೌಡನಾಗಲು ಆತನ ಲೇಖನದ ಮೇಲೆ ನಾವು ಹುಟ್ಟುಹಾಕುವ ಚರ್ಚೆ ಸಹಕಾರಿಯಾಗುತ್ತದೆ. ಜತೆಗೆ ನಮ್ಮ ಚಿಂತನಾ ಲಹರಿಯೂ ವಿಕಸಿತಗೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಪು.ತಿ.ನ, ಅ.ನಕೃ, ಅಡಿಗ, ಮೊದಲಾದ ಸಾಹಿತಿಗಳ ಕಾಲದಲ್ಲಿ ಸಾಹಿತ್ಯ ಸಮಾಜದ ಚರ್ಚಿತ ವಿಷಯಗಳಲ್ಲಿ ಒಂದಾಗಿದ್ದು (ಲಂಕೇಶ್, ಅನಂತಮೂರ್ತಿ, ತೇಜಸ್ವಿ ಕಾಲದ ಸಾಹಿತ್ಯ ಸಮರವೇ ಬೇರೆ ತರಹದ್ದು!)ಅಂತಾ ನನ್ನಗನ್ನಿಸುತ್ತದೆ.
ಆದರೆ ಇವತ್ತು ನಮ್ಗೆ ಒಂದು ವಿಚಾರದ ಕುರಿತು ಚರ್ಚೆ ಮಾಡುವುದು ಹಾಳಾಗಲೀ, ಬರಹವನ್ನು ಸಂಪೂರ್ಣ ಓದುವಷ್ಟು ಪುರುಸೊತ್ತು ಇಲ್ಲ ಅಲ್ವಾ? ಅಂದಿನ ಜನಾಂಗಕ್ಕೂ ಇಂದಿನ ಪೀಳಿಗೆಗೂ ಇರುವ ವ್ಯತ್ಯಾಸ ಅದೇಷ್ಟು ಅಲ್ವಾ? ಹಾಗಾಗಿಯ ನಾನಂತೂ ಚಿಕ್ಕ ಚಿಕ್ಕ ಕಥೆಯನ್ನೇ ಬರೆಯುವುದು! ಅದು ಕಥೆಯೋ, ಬರಹವೋ ಅಂತಾ ನನಗೂ ಕೆಲವೊಮ್ಮೆ ಅರ್ಥವಾಗುವುದಿಲ್ಲ!

Rating
No votes yet