ಚಲುವಿನರಸಿ - ಲಕ್ಷ್ಮೀಕಾಂತ ಇಟ್ನಾಳ
ಮುಗಿಲ ಮೇಲೆ ಚಂದ್ರ ಬಿಂಬ
ನಿಟ್ಟ ದೃಷ್ಟಿ ಬೊಟ್ಟಿನಂತೆ
ಎದೆಯ ಬಟ್ಟಲಲ್ಲಿ ಗೆಣತಿ ಮೂಡಿಸಿಟ್ಟ ಪಟ್ಟದರಸಿ
ಸವಿಯ ಗೊರಳು ಕೋಗಿಲಕ್ಕೆ
ನವಿಲದಕ್ಕೆ ಕುಣಿವ ರೆಕ್ಕೆ
ಗಿಳಿಗಳಂದ ಇವುಗಳಂದವೆಲ್ಲ ಪಡೆದ ಊರ್ವಶಿ
ಸಂಜೆ ಗೆಂಪು ರಾಗ ರಂಪಿ
ನಲ್ಲೆ ಕೆನ್ನೆ ಸೋಕಿ ಕಿರಣ
ಉಷೆಯ ರತಿಯ ನೆನಪು ಗರೆದು ನಿಶೆಯ ಸೇರಿತರಸಿ
ನಾನು ಬಳಿಗೆ ಬರದ ಗಳಿಗೆ
ಕಣ್ಣ ಕರಣ ಹರಣ ತೆರೆದು
ನನ್ನ ಬರುವಿಗಾಗಿ ತನ್ನ ಇರವ ಮರೆತು ಕಾಯುವರಸಿ
ಕಣ್ಣ ಕುಡಿಯ ಕಾವಲಿಟ್ಟು
ಮೂಗು ಬೊಟ್ಟು ಮಾಡಿ ಇಟ್ಟು
ತನ್ನ ತೆಕ್ಕೆಲಿಟ್ಟು ಪ್ರೀತಿ ಮಳೆಯಧಾರೆ ಸುರವ ಸರಸಿ
ಹೆಣ್ಣು ಕುಲದ ಬೇರೆ ಕಣ್ಣು
ನನ್ನ ಮನವ ಕದಿವ ಮುನ್ನ
ಉರಿಯಗಣ್ಣ ಬಿಟ್ಟು ಕಾಯ್ವ ತನ್ನ ಜಾತ ರಕ್ಕಸಿ
ಕಟ್ಟಿ ಜೊತೆಗೆ ಜೇನು ಹುಟ್ಟ
ಇರೆನು ನಾನು ಇವಳ ಬಿಟ್ಟ
ಬೇವು ಬೆಲ್ಲದಂತೆ ಬೆರೆವ ನನ್ನ ಚಲುವಿನರಸಿ
Rating
Comments
ಕವನ ಭಾಳ ಛಂದ ಬರೆದಿರಿ... "
ಕವನ ಭಾಳ ಛಂದ ಬರೆದಿರಿ... " ಚಲುವಿನರಸಿ" ಹೆಸರನ ಭಾಳ ಛಂದ ಒಪ್ಪೆದ..... ಸುಮನ್
In reply to ಕವನ ಭಾಳ ಛಂದ ಬರೆದಿರಿ... " by Suman Desai
ಸುಮನಜಿ, ಲಕ್ಷ್ಮೀಕಾಂತ ಇಟ್ನಾಳ ರ
ಸುಮನಜಿ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನಕ್ಕೆ ಪ್ರೋತ್ಸಹಪರ ಮೆಚ್ಚುಗೆಗೆ ದನ್ಯವಾದಗಳು.
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಚೆಲುವಿನರಿಸಿ ' ನಿಜಕೂ ಮನಕೆ ಮುದ ನೀಡುವ ಅರಸಿ, ಅವಳ ಆಗಮನ ಹರುಷ ತರುವಂತಹುದು. ತ್ರಿಪದಿಯಲ್ಲಿ ಉತ್ತಮವಾಗಿ ಕವನವನ್ನು ಹೆಣೆದಿದ್ದೀರಿ, ಕವನ ಬಹಳ ಇಷ್ಟವಾಯಿತು ಹೀಗೆಯೆ ಸತ್ವಪೂರ್ಣ ಕವನಗಳು ನಿಮ್ಮ ಲೇಖನಿಯಿಂದ ಮೂಡಿ ಬರಲಿ. ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳರಿಗೆ by H A Patil
ಹಿರಿಯರಾದ ಪಾಟೀಲರಿಗೆ,
ಹಿರಿಯರಾದ ಪಾಟೀಲರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹೌದು ತಾವು ಗುರುತಿಸಿದಂತೆ ಕವನ ತ್ರಿಪದಿಯಲ್ಲಿ 'ಭಾಮಿನಿ ಷಟ್ಪದಿ' ಯಲ್ಲಿ ಮೂಡಿಸಲು ಪ್ರಯತ್ನಮಾಡಿದ್ದೇನೆ. ಚಲುವಿನರಸಿ ಗೆ ಎಂದಿನಂತೆ ಮೆಚ್ಚುಗೆ ಸೂಚಿಸಿದ ತಮಗೆ ಮತ್ತೊಮ್ಮೆ ಧನ್ಯವಾದಗಳು.
ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ,
ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ,
ತುಂಬು ಸೊಗಡು, ಉತ್ಕಟ ಪ್ರೀತಿಯ ಮಾರ್ದವತೆ ತುಂಬಿ ತುಳುಕಿ ಲಹರಿಯಾಗಿ ಹರಿದಿದೆ, ಸೊಗಸಾದ ಪ್ರಾಮಾಣಿಕ ಬಿನ್ನವತ್ತಳೆ - ಚೆಲುವಿನರಿಸಿಗೆ ಖಂಡಿತ ಮುದ ಕೊಟ್ಟಿರಬೇಕು :-)
ನಾಗೇಶ ಮೈಸೂರು, ಸಿಂಗಪುರದಿಂದ
In reply to ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ, by nageshamysore
ಪ್ರಿಯ ನಾಗೇಶ ಮೈಸೂರು ರವರಿಗೆ,
ಪ್ರಿಯ ನಾಗೇಶ ಮೈಸೂರು ರವರಿಗೆ, ತಮ್ಮ ಪ್ರತಿಕ್ರಿಯೆ ನೋಡಿದೆ, ಅದರಲ್ಲಿ 'ಚೆಲುವಿನರಸಿಗೆ ಖಂಡಿತ ಮುದ ಕೊಟ್ಟಿರಬೇಕು' ಎಂದು ಕೂಡ ಹೇಳಿದ್ದೀರಿ. ಕವನದ ಕೆಲ ಸಾಲುಗಳನ್ನು ಸೆನ್ಸಾರ್ ಮಾಡಿ ತೋರಿಸಲು ಹರಕತ್ ಇಲ್ಲ. ಇಲ್ಲದಿದ್ದರೆ, 'ಅವಳಾರು' ನನ್ನ ರಕ್ಕಸಿ ಮಾಡಿದವಳು ಎಂದು ತಿರುಗಿಬಿದ್ದರೆ! ಧೈರ್ಯಸಾಲುತ್ತಿಲ್ಲ, ನಾಗೇಶ ರವರೇ,
ಬರೆದೆನಿದನು ಕವಿಯ ಹರಸಿ!
ಬರೆದೆನಿದನು ಕವಿಯ ಹರಸಿ!
In reply to ಬರೆದೆನಿದನು ಕವಿಯ ಹರಸಿ! by kavinagaraj
ಹ ಹ ಹ.............ಧನ್ಯವಾದ ಸರ್
ಹ ಹ ಹ.............ಧನ್ಯವಾದ ಸರ್