ಚಲೊ ಮಲ್ಲೇಶ್ವರ - ೯

ಚಲೊ ಮಲ್ಲೇಶ್ವರ - ೯

                                                            ಚಲೊ ಮಲ್ಲೇಶ್ವರ - ೯
ನನಗೆ ಹೀಗೆ ಮಲ್ಲೇಶ್ವರಂಗೆ ಹೋಗೊ ಅಗತ್ಯ ಬಿತ್ತು, ಸಂಪಿಗೆ ರಸ್ತೆಯ ೧೮ನೆ ಕ್ರಾಸಿನಲ್ಲಿ ಮಗಳಿಗೆ C.E.T.ನಲ್ಲಿ B.E.ಗೆ ಕ್ಯಾಸುವಲ್ ರೌಂಡ್ ಇತ್ತು, ಹಾಗಾಗಿ ಮಗಳು ಹಾಗು ಪತ್ನಿಯ ಜೊತೆ ಆಟೋದಲ್ಲಿ ಹೊರಟಿದ್ದೆ. ಮಲ್ಲೇಶ್ವರ ಅಂದರೆ ನನಗೆ ಮಲೇಶಿಯ ಅನ್ನೊ ತರ, ಬೆಂಗಳೂರಿನಲ್ಲಿ ದಕ್ಷಿಣದ ಜಯನಗರದವರಿಗೆ ಮಲ್ಲೇಶ್ವರ ಯಶವಂತಪುರ ಅಂದರೆ ಉತ್ತರ ಭಾರತ ಹಾಗೆಯೆ ರಾಜಾಜಿನಗರದವರು ಜಯನಗರಕ್ಕೆ ಬಂದರೆ ರಸ್ತೆ ಸಿಗದೆ ಪರದಾಡುತ್ತಾರೆ. ಆಟೋ ಸಂಪಿಗೆ ರಸ್ತೆ ಸೇರುತ್ತಿರುವಂತೆ ನೆನಪಿಗೆ ಬಂದಿತು, ಗಣೇಶರ 'ಮಲ್ಲೇಶ್ವರಂ ಚಲೊ" ಅವರು ಹಾಗು ಸಂಪದಿಗರ ಗುಂಪು ಎಲ್ಲಿಯಾದರು ಕಂಡೀತ ಎಂದು ಅತ್ತ ಇತ್ತ ನೋಡುತ್ತ ಬರುತ್ತಿದೆ, ಒಂದು ಕಡೆ ಆಟೊ ನಿಂತಿತು ಟ್ರಾಫಿಕ್ ಸಿಗ್ನಲ್ಗಾಗಿ. ಮುಂದೆ ಒಬ್ಬಾಕೆ ಸ್ವಲ್ಪ ದಡೂತಿಯೆ ಪರಿಚಯದ ಮುಖ ಅನ್ನಿಸಿತು, ಜೊತೆ ಒಬ್ಬ ಹುಡುಗಿ ಅವಳ ಮಗಳಿರಬಹುದೇನೊ ಮತ್ತು ಒಬ್ಬ ೫೦ರ ಆಸುಪಾಸಿನ ಗಂಡಸು! ಬಹುಷಃ ಗಂಡ ಅನ್ನಿಸುತ್ತೆ, ರಸ್ತೆ ದಾಟುತ್ತಿದ್ದರು. ನನ್ನ ಪಕ್ಕದಲ್ಲಿದ ಮಗಳು
"ಅಪ್ಪ ಮಾರಿಮುತ್ತು ನೋಡು" ಅಂದಳು, ನನಗೀಗ ಹೊಳೆಯಿತು, ಅವಳ ಮುಖ ಪರಿಚಯವಿರುವುದು ಸಿನಿಮಾಗಳಲ್ಲಿ ಎಂದು,ಹಿಂದೆ ನೋಡಿದ ಆಟೊ ಡ್ರೈವರ್ , ಸಣ್ಣ ದ್ವನಿಯಲ್ಲಿ
"ಸಾರ್ ಆಕೆ ಮಾರಿಮುತ್ತು ಅಲ್ಲ ಅವಳ ಅಕ್ಕ ಬಾರಿಮುತ್ತು, ಅವಳ ಕಣ್ಣಿಗೆ ಬಿದ್ದರೆ ಅಷ್ಟೆ" ಎಂದವನೆ ಸಿಗ್ನಲ್ಲನು ಕೇರ್ ಮಾಡದೆ ಗಾಡಿ ಮುಂದೆ ಓಡಿಸಿದ.
ಹಾಗು ಹೀಗು C.E.T ಮುಂದೆ ಇಳಿದೆವು. ಒಳಗೆಲ್ಲ ಬಾರಿ ಗುಂಪು, ಸಂತೆ ಸೇರಿದಂತೆ. ನಮ್ಮ ಸರದಿ ಬರಲು ಒಂದು ಘಂಟೆಯಾದರು ಕಾಯಬೇಕು!

   ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎಂತದೊ ಗೊಂದಲ, ರಸ್ತೆಯಲ್ಲೆಲ್ಲ ಜನರು ಭಯಬಿದ್ದು ಓಡುತ್ತಿದ್ದರು, ಕೆಲವರು ಒಳಗು ನುಗ್ಗಿದರು, ಒಳಗಿದ್ದವರೆಲ್ಲ ಗಾಭರಿಯಾದರು. ಹತ್ತು ನಿಮಿಷ ಕಳೆಯಿತು, ದೊಡ್ಡ ಪರದೆಯಲ್ಲಿ ಕಾಣಿಸುತ್ತಿತ್ತು, "ಮಲ್ಲೇಶ್ವರಂ ನಲ್ಲಿ ಉಂಟಾಗಿರು ಗೊಂದಲದಿಂದ ಅಡಚಣೆಯಾಗಿದೆ, c.e.t. ಕಾರ್ಯಕ್ರಮವನ್ನು ಒಂದು ಘಂಟೆ ಮುಂದು ಹಾಕಲಾಗಿದೆ" ಅಂತ. ಛೇ! ಇದೆಂತಹ ಅಡಚಣೆ. ಮಗಳನ್ನು , ಹೆಂಡತಿಯನ್ನು ಅಲ್ಲಿಯೆ ಕೂಡಿಸಿ ನಾನು ಹೊರಗೆ ಬಂದೆ.

 ರಸ್ತೆಯಲ್ಲಿ ಹೋಗುತ್ತಿದ್ದ ಯಾರನ್ನೊ ವಿಚಾರಿಸಿದೆ, ಎಂತದು ಗಲಾಟೆಯೆಲ್ಲ ಎಂದು. ಅವರು "ನೋಡಿ ಪುನಃ ರೌಡಿಗಳ ಗಲಾಟೆ ಪ್ರಾರಂಬವಾಗಿದೆ, ಸರ್ಕಾರ ಏನು ಮಾಡಲ್ಲ, ಪೋಲಿಸರು ಗಪ್ ಚುಪ್.ಅದಾರೊ ಬಾರಿಮುತ್ತುವಂತೆ ಯಾರ ಮೇಲೊ ಅಟ್ಯಾಕ್ ಮಾಡಿದ್ದಾಳೆ" ಎಂದ.
"ಅಯ್ಯೊ ಎಂತಹ ಕೆಲಸವಾಯಿತು, ಈಗತಾನೆ ಅವಳನ್ನು ರಸ್ತೆಯಲ್ಲಿ ನೋಡಿದೆ, ಅಲ್ಲಿಯೆ ಇದ್ದರೆ ಪ್ರತ್ಯಕ್ಷದರ್ಶಿಯಾಗಬಹುದಿತ್ತು" ಅನ್ನಿಸಿ ನಿರಾಸೆಯಾಯಿತು.ಕುತೂಹಲ ಎನಿಸಿ ಹೊರಟುಬಿಟ್ಟೆ ಮಲ್ಲೇಶ್ವರಂ ನ ಅದೆ ಸಂಪಿಗೆ ರಸ್ತೆಯಲ್ಲಿ. ಮುಂದೆ ಬರುತ್ತಿರುವಂತೆ ಸರ್ಕಲ್ ನಲ್ಲಿದ್ದ ಅಂಡರ್ ಬ್ರೀಡ್ಜ್ ಕಾಣಿಸಿತು, ಅದನ್ನು ಮುಂದು ದಾಟುತ್ತ ಗಮನಿಸಿದರೆ, ಕೆಳಗೆ ರಸ್ತೆಯಲ್ಲಿ , ನಾನು ಸ್ವಲ್ಪ ಮುಂಚೆ ನೋಡಿದ್ದ ಬಾರಿಮುತ್ತು , ಕೈಯಲ್ಲಿ ಮಚ್ಚು ಹಿಡಿದು ಯಾರೊ ಒಬ್ಬಾತನ ಹಿಂದೆ ಓಡುತ್ತಿದ್ದಳು, ಮುಂದೆ ಓಡುತ್ತಿದ್ದ ಆವ್ಯಕ್ತಿ ತನ್ನ ಬಾರಿ ಗಾತ್ರದಿಂದ ಹೆಚ್ಚು ಓಡಲಾರದೆ, ತಡವರಿಸುತ್ತಿದ್ದ, ನಾನು ಕೆಟ್ಟ ಕುತೂಹಲದಿಂದ , ಹಿಂದೆ ಸುತ್ತಿ ಹೇಗೊ ಕೆಳಗೆ ಬರುವಲ್ಲಿ, ಅವ್ಯಕ್ತಿ ಓಡಲಾರದೆ ಕೆಳಗೆ ಕುಳಿತುಬಿಟ್ಟಿದ್ದ, ಮಚ್ಚನ್ನು ಹಿಡಿದ ಬಾರಿಮುತ್ತು ಅವನ ಮುಂದೆ ನಿಂತು "ಲೋ ನಿನ್ನ ಇವತ್ತು ಉಳಿಸಲ್ಲ, ಯಾರ ಮುಖ ನೋಡಿ ಎದ್ದು ಬಂದ್ದಿದ್ದೀಯ " ಎಂದು ಅಬ್ಬರಿಸುತ್ತಿದ್ದಳು.ಸುತ್ತಲು, ಜನ ವೃತ್ತಕಾರದಲ್ಲಿ ಕಿಕ್ಕಿರಿದು ನಿಂತಿದ್ದರು ತಮಾಷೆ ನೋಡಲು.

ನಾನು ಸಂದಿಯಲ್ಲಿ ತೂರಿದೆ, ಪಕ್ಕದಲ್ಲಿದ್ದ ವ್ಯಕ್ತಿಯತ್ತ ನೋಡಿದರೆ ಎಲ್ಲೊ ನೋಡಿದಂತಿದೆಯಲ್ಲ ಅನ್ನಿಸಿತು, ಆದರು "ಏನಾಯಿತು ಸಾರ್ ಪ್ರಾಬ್ಲಂ ಪಾಪ ಏಕೆ ಅವ್ಯಕ್ತಿಯನ್ನು ಆಕೆ ಅಟ್ಯಾಕ್ ಮಾಡಿದ್ದಾಳೆ" ಎಂದೆ.
ಆತ ಸಣ್ಣ ದ್ವನಿಯಲ್ಲಿ "ಏನಿಲ್ಲ ಸಾರ್ , ಅಕೆಯ ಮುಂದೆ ಹೆದರಿ ಕುಳಿತಿರುವರು ಗಣೇಶ ಅಂತ ಸಂಪದ ಅಂತ ಒಂದಿದೆ, ಅಲ್ಲಿಯ ಬರಹಗಾರರು, ನಾವೆಲ್ಲ ಒಟ್ಟಿಗೆ ಹೋಗುತ್ತಿದ್ದೆವು, ಮುಂದೆ ಜಯಂತ್ ಅನ್ನುವವರು ಮತ್ತು ಗಣೇಶ ಹೋಗುತ್ತಿದ್ದರು, ಆ ಸಮಯದಲ್ಲಿ ಬಾರಿಮುತ್ತು ಮತ್ತು ಅವಳ ಗಂಡನನ್ನು ಕಂಡ ಗಣೇಶರು, ಅಕೆಯ ಗಂಡನನ್ನು ನಮ್ಮ ಸಂಪದದ ಪಾರ್ಥಸಾರಥಿ ಅಂತ ಗಲಿಬಿಲಿ ಮಾಡಿಕೊಂಡುಬಿಟ್ಟರು, ನೋಡಲು ಅ ವ್ಯಕ್ತಿ ಸ್ವಲ್ಪ ಅದೆ ರೀತಿ ಕಾಣಿಸುತ್ತಿದ್ದರು ನೋಡಿ, ಹಾಗಾಗಿ ಈ ಎಡವಟ್ಟು ಆಯಿತು, ಗಣೇಶರಿಗೆ ಅದೇನು ಆಯಿತೊ, ಇದ್ದಕ್ಕಿದ್ದಂತೆ ಅವರ ಮುಂದೆ ನಿಂತು, ನಮ್ಮ ಪಾರ್ಥಸಾರಥಿಯವರನ್ನು ನಮ್ಮ ಜೊತೆ ಚಲೊ ಮಲ್ಲೇಶ್ವರಂ ರಿಲೆಗೆ ಕಳುಹಿಸಿ, ಅಂತ ಬಾರಿಮುತ್ತುವಿಗೆ ರೋಫ್ ಹಾಕಿದರು, ಆಕೆ ಏನು ವಿಷಯವು ಗೊತ್ತಿಲ್ಲದೆ, ನೋಡಯ್ಯ ಅದೆಲ್ಲ ನನಗೆ ಗೊತ್ತಿಲ್ಲ ಬಿಟ್ಟು ಬಿಡು ಅಂತ ಮುಂದು ಹೊರಟಳು, ಗಣೇಶರು ಸುಮ್ಮನಾಗೊದು ತಾನೆ, ಅದುಬಿಟ್ಟು ಅದೇನಾಯಿತೊ, "ದಿಕ್ಕಾರ ದಿಕ್ಕಾರ" ಅಂತ ಕೂಗುತ್ತ ನಮ್ಮ ಸಂಪದದ ಪಾರ್ಥಸಾರಥಿಯವರಿಗೆ ಅನ್ಯಾಯವಾಗುತ್ತಿದೆ, ಮಗಳು ಹಾಗು ಹೆಂಡತಿ ಅವರನ್ನು ಎಲ್ಲು ಹೊರಗೆ ಕಳಿಸಲ್ಲ, ನಾವು ಪ್ರತಿಭಟಿಸೋಣ, ಅಂತ ಕೂಗುತ್ತ, ಆ ವ್ಯಕ್ತಿಯ ಕೈಹಿಡಿದು ಎಳೆದು "ನೀವು ಬನ್ನಿಸಾರ ನಮ್ಮ ಜೊತೆ ಈ ಯಮ್ಮನಿಗೆ ಕೇರ್ ಮಾಡಬೇಡಿ ನಾವೆಲ್ಲ ನಿಮ್ಮ ಜೊತೆ ಇದ್ದೇವೆ, ದಿಕ್ಕಾರ ದಿಕ್ಕಾರ ಅಂತ ಕೂಗಿದರು"

  ನನಗೆ ಈಗ ಹೊಳೆಯಿತು, ಪಾಪ ಗಣೇಶರು ನಾನು ಅಂತ ಯಾರನ್ನೊ ಪಾರ್ಥಸಾರಥಿ ಅಂತ ಹಿಂದೆಬಿದ್ದಿದ್ದಾರೆ, ಮತ್ತೆ , ನನ್ನ ಪಕ್ಕದಲ್ಲಿದ್ದ ವ್ಯಕ್ತಿ ಮುಂದುವರೆಸಿದ

" ಸಾರ್ ಅದೇನು ಶಕ್ತಿ ಸಾರ್ ಆಕೆಯದು, ನಮ್ಮ ಗಣೇಶರು ಪಾಪ ಮೋಹನರ ಕಾರು ಬಂದು ಗುದ್ದಿದರು ಅಲ್ಲಾಡದೆ ಇದ್ದ ಅಸಾಮಿ, ಆಕೆ ಒಮ್ಮೆ ಎದೆಗೆ ಕೈ ಹಾಕಿ ತಳ್ಳಿದಳು ನೋಡಿ, ಹತ್ತು ಅಡಿ ದೂರ ಹೋಗಿ ಬಿದ್ದರು, ಅಷ್ಟೇ ಗಾಭರಿ, ಇದೇನಾಯ್ತು ಅಂತ, ಆಕೆ ಸುಮ್ಮನಾಗದೆ "ಲಯ್, ಯಾವೊನೊ ನೀನು, ನನಗೆ ದಿಕ್ಕಾರ ಅಂತ ಕೂಗ್ತೀಯ, ಇವತ್ತು ನಿನ್ನ ಕಡೆ ದಿನ, ಮನೇಲಿ ವಡೆ ಹಾಕಕ್ಕೆ ಸಿದ್ದ ಮಾಡಿ ಬಂದಿದಿ ತಾನೆ, ಬಾರೋ, ಎಂದು ಅಬ್ಬರಿಸಿ ನಿಂತಳು, ಗಣೇಶರು ಎದ್ದು ನಿಲ್ಲಲ್ಲು ಹೋದರೆ ಆಗುತ್ತಲೆ ಇಲ್ಲ, ಅಷ್ಟರಲ್ಲಿ ಆಕೆಗೆ, ಪಿತ್ತ ನೆತ್ತಿಗೇರಿ, ಪಕ್ಕಕ್ಕೆ ಹೋಗಿ ಎಳನೀರು ಮಾರುವವನ ಹತ್ತಿರವಿದ್ದ ಮಚ್ಚನ್ನು ಎಳೆದುಕೊಂಡು, ಇವರತ್ತ ಓಡಿ ಬಂದಳು, ಪಾಪ ಗಣೇಶರು ತಮ್ಮ ಹಲವು "ಡಾಯಿ" ಕಿಲೊ ಕೈಕಾಲನ್ನು ಒದರುತ್ತ ಅರ್ಜೆಂಟನಲ್ಲಿ ಎದ್ದು ನಿಂತು, ಓಡಲು ತೊಡಗಿದರು, ಆಕೆ ಬಿಡಬೇಕಲ್ಲ , ಪಾಪ ಆಕೆಯ ಜೊತೆ ಇವರಿಗೆ ಓಡಲು ಸಾದ್ಯವೆ" ಅಂತ ಹೇಳಿದ ಆ ವ್ಯಕ್ತಿ ನನ್ನ ಮುಖವನ್ನು ಅನುಮಾನವಾಗಿ ನೋಡುತ್ತಿದ್ದ.

  ನನಗೆ ಎಲ್ಲ ಅಯೋಮಯೋವಾಗಿತ್ತು, ಪಾಪ ಗಣೇಶರು ನನ್ನನ್ನು ಕಾಪಾಡಲು ಹೋಗಿ ಈ ವಿಪತ್ತಿಗೆ ಸಿಕ್ಕಿಬಿಟ್ಟರಲ್ಲ ,ಇದರಲ್ಲಿ ಎಂತದೊ ಮರ್ಮವಿದೆ ಅನ್ನಿಸಿತು, ಗಣೇಶರಂತು ನನ್ನನ್ನು ನೋಡಿಲ್ಲ, ಆದರೆ ಜಯಂತರಂತು ನನ್ನನ್ನು ಹಲವು ಬಾರಿ ನೋಡಿದ್ದಾರೆ, ಅವರು ಏಕೆ ತಡೆಯಲಿಲ್ಲ, ಹಿಂದೊಮ್ಮೆ, ಜಯಂತ ನನಗೆ ಮರದ ಮೇಲಿನ ಪ್ಲಾಷ್ಟಿಕ್ ಕವರ್ ನ ಚಿಕ್ಕು ಪಕ್ಷಿ ಅಂತ ಭಾವಿಸಿ ಫೋಟೋ ತೆಗೆಯಲು ಕಾದಿದ್ದನ್ನು ತಿಳಿಸಿದ್ದರು, ಆದರೆ ಅದನ್ನು ಗಣೇಶರಲ್ಲಿ ಅವರು ತಿಳಿಸಿರಲಿಲ್ಲ, ಈದಿನ ಆತ ಪಾರ್ಥಸಾರಥಿಯಲ್ಲ ಅಂತ ಗೊತ್ತಿದ್ದು, ಗಣೇಶರನ್ನು ತಡೆಯಲಿಲ್ಲ, ಅಲ್ಲಿಗೆ ಏನೊ ಬಾನಗಡಿ ನಡೆಯುತ್ತಿದೆ, ಅನ್ನಿಸಿತು, ಏನಾದರು ಮಾಡಿ ಗಣೇಶರನ್ನು ಬಾರಿಮುತ್ತುವಿನಿಂದ ಉಳಿಸಬೇಕಲ್ಲ ಅಂತ ನಾನು ಚಿಂತಿಸುತ್ತಿರುವಾಗ,

 ಬಾರಿಮುತ್ತು " ಏನಲೊ ತಲೆಕೆಟ್ಟಿದಿಯ, ನನ್ನ ಹತ್ತಿರ ಬಂದು ಯಾವನೊ ಪಾರ್ತ್ ತಿಥಿಯಂತ ಅವನಿಗೆ ಸ್ವತಂತ್ರವಂತೆ, ನನ್ನ ಗಂಡನ್ನೆ ಕೈಹಿಡಿದು ಎಳಿತೀಯ ಎಷ್ಟೋ ದೈರ್ಯ, ನನಗೆ ದಿಕ್ಕಾರ ಹಾಕ್ತೀಯ ನನ್ನ ಪವರ್ ಗೊತ್ತ ನಿನಗೆ...." ಮುಂತಾಗಿ ಅಬ್ಬರಿಸುತ್ತಿದ್ದಳು. ನಾನು ಅತ್ತ ತಿರುಗುವದರ ಒಳಗೆ ಗುಂಪಿನಿಂದ ಜಯಂತ್ ಇದ್ದಕ್ಕಿದ್ದಂತೆ ಮುಂದೆ ಬಂದು ಬಾರಿಮುತ್ತುವಿನ ಮುಂದೆ ನಿಂತು, ಅನುನಯನದಿಂದ

"ನೋಡಮ್ಮ ಪಾಪ ಅವರು ಬೇಕು ಅಂತ ಮಾಡಿದ್ದಲ್ಲ ಏನೊ ಕನ್ ಫ್ಯೂಸ್ ಆಗಿ ಹೋಗಿದೆ, ಗೊತ್ತಿಲ್ಲದೆ ನಿಮ್ಮ ಯಜಮಾನರನ್ನು ಬೇರೆ ಅಂತ ತಿಳಿದು, ಹಾಗೆ ಮಾಡಿದ್ದಾರೆ, ದಯಮಾಡಿ ಬಿಟ್ಟುಬಿಡಮ್ಮ, ಏನು ಮಾಡಬೇಡ" ಅಂತ ಪ್ರಾರ್ಥಿಸಿದರು,

ಆಕೆ "ಎಂತದೊ ಅದು ಕನ್ ಫ್ಯೂಸ್, ಏಯ್ ನಾನು ನಿಮ್ಮೆಲ್ಲರ "ಫ್ಯೂಸ್" ಕಿತ್ತು ಬಿಡ್ತೀನಿ ಅಷ್ಟೆ, ಮಕ್ಳ ನನ್ನ ಕೈಲಿ ಹುಡ್ಗಾಟ್ಕೆ, ನಗೆ ಚಾಟಿ ಮಾಡ್ತೀರ ನನ್ನ ಯಾರು ಅಂತ ಮಾಡಿದ್ದೀಯ?" ಎಂದಳು

ಜಯಂತರು ಮತ್ತೆ "ಇಲ್ಲಮ್ಮ ನಿಜವಾಗಿ ಬೇಕಾದರೆ ಮಲ್ಲೇಶ್ವರದಲ್ಲಿರುವ ಎಲ್ಲ ದೇವರ ಮೇಲೆ ಆಣೆ ಪ್ರಮಾಣ ಮಾಡ್ತೀವಿ ಇನ್ನೊಮ್ಮೆ ಹೀಗಾಗಲ್ಲ, ಸುಮ್ಮನಾಗು" ಎಂದರು,

ಅದಕ್ಕೆ ಬಾರಿಮುತ್ತು "ಏಯ್ ಯಾರ್ಲೆ ನೀನು, ನೋಡಕ್ಕೆ, ಒಳ್ಳೆ ಪೂಜಾರ್ರು ಮನೆ ಹುಡುಗನಂಗೆ ಕಾಣ್ತೀಯ, ನಿನ್ನ ಹಣೇ ಮೇಲಿರುವ ಎಲ್ಲ ದೇವರ ಕುಂಕುಮ, ಕಿವಿಲಿರೊ ಹೂ ನೋಡ್ತಿದ್ರೆ, ಒಳ್ಳೆ ಹುಡ್ಗ ಅನ್ಸಿದ್ದೆ,ಅದಕ್ಕೆ ಬಾರಿಮುತ್ತು ಮೊದಲ್ನೆ ಸಾರಿ ಬಿಡ್ತಾವ್ಳೇ, ಹೋಗ್ ಬದುಕ್ಕ, ನೋಡೊ ಐದ್ ಮಿನಿಟ್ ಟೈಮ್ ಕೊಡ್ತೀನಿ ಅಷ್ಟರೊಳ್ಗೆ ಕಳಚ್ಗ ಬೇಕು, ಮತ್ತೆ ನನ್ನ ಏರಿಯದಲ್ಲಿ ಮುಖ ಕಾಣಿಸಬಾರದು, ಕಾಣ್ಸಿದ್ರೆ ಅಷ್ಟೆ" ಎಂದವಳೆ,

ಮಚ್ಚನ್ನು ಅಲ್ಲಿಂದ ಇನ್ನೂರು ಅಡಿ ದೂರದಲ್ಲಿದ್ದ, ಎಳನೀರಿನವನತ್ತ, "ಲೇಯ್ ನಿನ್ನ ಮಚ್ಚ ತಗ ಇದು ಎಳನೀರ್ ಕೊಚ್ಚಕ್ಕೆ  ಲಾಯಕ್ಕು" ಅಂದವಳೆ ರೋಯ್ ಅಂತ ಗಾಳಿಯಲ್ಲಿ ಎಸೆದಳು, ಅದಿ ಗಿರಿಗುಟ್ಟುತ್ತ ಗಾಳಿಯಲ್ಲಿ, ಹಾರಿಹೋಗಿ ಎಳೆನೀರಿನವನ ಮುಂದೆ ಬಿತ್ತು.

 ನಾನು ನೋಡುವಷ್ಟರಲ್ಲಿ, ಜಯಂತ ಮತ್ತು ಗಣೇಶರು ಆಟೋ ಹತ್ತುತ್ತಿದ್ದರು, ನಾನು ಹತ್ತಿರ ಹೋಗಲ ಅಂದುಕೊಂಡೆ, ಆದರೆ ಏಕೊ ನಾನು ಚಲೊ ಮಲ್ಲೇಶ್ವರಕ್ಕೆ ಎಂಟ್ರಿ ಕೊಡಕ್ಕೆ ಸರಿಯಾದ ಟೈಮ ಅಲ್ಲ ಅಂತ ಅನ್ನಿಸ್ತು. ನನ್ನ ಕಾಪಾಡಲು ದಿಕ್ಕಾರ ಹಾಕಿ ತೊಂದರೆಪಟ್ಟ ಗಣೇಶರನ್ನು ನನ್ನ ಮನ ಒದ್ದೆ ಮನಸಿನಿಂದ ನೆನೆಯಿತು. ಹಾಗೆ ಗಣೇಶರನ್ನು ಒಮ್ಮೆ ಮನೆಗೆ ಕರೆದು ಅವರಿಗೆ ನಮ್ಮವಳು ಮಾಡುವ ನನ್ನ ಫೇವರೆಟ್ ಅಕ್ಕಿರೊಟ್ಟಿಯನ್ನು ಮಾಡಿಸಿ ಹಾಕಿದರೆ ಅವರಿಗೆ ನನ್ನ ಬಗ್ಗೆ ಇರುವ ಆತಂಕ ದೂರವಾಗಬಹುದು ಅನ್ನಿಸಿತು, ಆ ನಂತರವಷ್ಟೆ ನನ್ನ ಎಂಟ್ರಿ ಸರಿಯಾಗುತ್ತೆ ಇಲ್ಲದಿದ್ದಲ್ಲಿ  ಚಲೊ ಮಲ್ಲೇಶ್ವರಗೆ ನನ್ನದು wrong entry ಅಂದುಕೊಂಡೆ

ಅಷ್ಟರಲ್ಲಿ ನನ್ನ ಪಕ್ಕದಲ್ಲಿದ್ದ ವ್ಯಕ್ತಿಗೆ ನನ್ನ ಮೇಲೆ ಅನುಮಾನ ಪೂರ್ತಿಯಾಗಿ ಬಂದಿತು ಅನ್ನಿಸುತ್ತೆ "ಸಾರ್ ನಿಮ್ಮ ಹೆಸರೇನು" ಅಂದ,

ನಾನು "ಅಯ್ಯೋ ಬಿಡಿ, ನಾನು ಹೀಗೆ C.E.T. ಅಂತ ಬಂದಿದ್ದೆ ನೋಡಿ, ಹಾಗೆ ಇಲ್ಲಿ ಬಂದೆ" ಅನ್ನುತ್ತ, ಹೇಗೊ ತಪ್ಪಿಸಿಕೊಂಡು ಅಲ್ಲಿಂದ ಹೊರಟೆ. ಇದ್ದಕ್ಕಿದ್ದ ಹಾಗೆ ಹೊಳೆಯಿತು, ಹೌದು ನನ್ನ ಜೊತೆ ಮಾತನಾಡುತ್ತಿದ್ದವರು , "ಚಿಕ್ಕು" ಅರೆ ಹೌದಲ್ವ, ಅಂತ ಖುಶಿಯಾಯ್ತು, ಅದು ಸರಿ ಈ ರಾಮಮೋಹನ, ಮಂಜು ಇವರೆಲ್ಲ ಎಲ್ಲಿದ್ದಾರೆ ಅಂತ ತಿಳಿಯಲಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಪಾಪ ಮಗಳು ಕಾಯ್ತಿರ್ತಾಳೆ ಅನ್ನಿಸಿ ಬೇಗ ಬೇಗ ಹೊರಟು , ೧೮ನೆ ಕ್ರಾಸಿಗೆ ಬಂದು ನೋಡಿದರೆ , ಕ್ಯಾಸುವಲ್ ರೌಂಡ್ ಪುನಃ ಪ್ರಾರಂಬ ವಾಗಿತ್ತು, ಎಲ್ಲಿ ಹೋದರೊ ಅಂತ ಆತಂಕದಿಂದ ಗೇಟಿನ ಹತ್ತಿರವೆ ಕಾಯುತ್ತಿದ ಮಗಳ ಜೊತೆ ಒಳಗೆ ನಡೆದೆ.

  ++++++++++++++++++++++++++++++++++++++++++++++++++++++++++++++++++++

    


    

Rating
No votes yet

Comments