' ಚಾರಣ '

' ಚಾರಣ '

ಚಿತ್ರ

 

 

 

            ಚಾರಣ

 

ಬೆಟ್ಟ ಗುಡ್ಡ ಕಣಿವೆ ಪರ್ವತ ಶಿಖರಗಳು

ನಿತ್ಯ ಹರಿದ್ವರ್ಣದ ಸಸ್ಯ ವನರಾಜಿಗಳು

ಹಿಮದ ಹೊದಿಕೆಯ ಹೊದ್ದ ಪರ್ವತ ಶ್ರೇಣಿಗಳು

ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ ಹಬ್ಬಿ

ಹರಡಿರುವ ನಿರ್ವಿಕಾರ ನಿರ್ದಯಿ ಮರಭೂಮಿಗಳು

ಪ್ರಕೃತಿಯ ಸುಂದರ ಭಿಭತ್ಸ ಕೊಡುಗೆಗಳು

 

ಕಡಿದಾದ ಹಿಮಾಚ್ಛಾದಿತ ಗಿರಿ ಶಿಖರಗಳು

ಚಾರಣಿಗರ ಆಕರ್ಷಣೆಯ ಕೇಂದ್ರಗಳು

ದೂರದಲಿ ಎತ್ತರಕಿರುವ ಆ ಸ್ನಿಗ್ಧ ಸೌಂದರ್ಯದ

ಚುಂಬಕ ಶಕ್ತಿಯಲಿ ಜೀವನದ ನಶ್ವರತೆಯ

ಆದರೆ ಬದುಕಿನ ಹಲವು ಸತ್ಯಗಳಿವೆ

ಬದುಕು ಶಾಶ್ವತವಲ್ಲ ಎಂಬುದು ಗೊತ್ತಿದ್ದರೂ

ಚಿರಂಜೀವಿಗಳೆಂದು ಭಾವಿಸಿ ಬದುಕುವ ನಮ್ಮ

ರೀತಿ ನೀತಿಗಳಿಗೆ ಕೆಲವು ಸಾಮ್ಯತೆಗಳಿವೆ

 

ಕಡಿದಾದ ಹಿಮಾಚ್ಛಾದಿತ ಗಿರಿ ಶಿಖರಗಳ

ಚಾರಣ ಹಗಲಿನಲಿ ಬಲು ಕಷ್ಟ !

ಎಲ್ಲವನೂ ತೆರೆದು ತೋರುವ ಬೆಳಕು

ಅಳ್ಳೆದೆಯವರಿಗ ಜೀವ ಭಯ ಹುಟ್ಟಿಸುತ್ತೆ

ಆದರೆ ಕತ್ತಲು ? ಚಾರಣಕೆ ಧೈರ್ಯ ನೀಡುತ್ತೆ

ಏರುವಿಕೆಯ ದಾರಿಯನು ತೆರೆದು ತೋರುತ್ತ

ಭಯ ಹುಟ್ಟಿಸುವ ಸುಂದರ ಕಣಿವೆಗಳನ್ನು

ಮುಚ್ಚಿಡುತ್ತ ಗುರಿಯೆಡೆಗೆ ಸಾಗಲು ನಮ್ಮನು

ಅಣಿಗೊಳಿಸುತ್ತೆ ! ಕತ್ತಲಲಿ ಏರುವಿಕೆ

ಸುಲಭ ಎಚ್ಚರ ತಪ್ಪಿತೋ ಅಧಃಪತನ !

 

 

ಚಾರಣಕೆ ದೇಹ ಮನಸುಗಳಲಿ ಕಸುವಿರಬೇಕು

ಹಗುರವಾಗಿರಬೇಕು ಶೀತೋಷ್ಣಗಳಲಿ

ಸಮತೆಯಿರಬೇಕು ಆಳದಲಿ ನಿಗಿ ನಿಗಿ ಕೆಂಡ

ಉರಿವ ಬೆಂಕಿ ಜ್ವಾಲೆಗಳ ಅಡಗಿಸಿಕೊಂಡು

ಮೇಲೆ ತಣ್ಣಗೆ ಮೈಕೊರೆವ ಹಿಮದ ಚಾದರ

ಶಿಖರಗಳ ಮಂಜು ಕರಗಿಮಣ್ಣು ಸೇರಿ

ಮಣ್ಣ ವಾಸನೆಯಂತಲ್ಲದ ಭಿನ್ನ ವಾಸನೆ

ಅದೊಂದು ಮುಸುಕಿನ ಮಾಯಾವಿ ಲೋಕ !

 

ಮೇಲು ಮೇಲಕೆ ಮೇಲೆ ಗಗನದಲಿ ನಮ್ಮ

ನೆತ್ತಿಯ ಮೇಲೆ ಕಿಕ್ಕಿರಿದು ನೆರೆದ ‘ನಕ್ಷತ್ರ ಮೇಳ’’

ಅವವೆ ತಾರೆಗಳು ಅವರವರದೆ ಆದ

ಕಲ್ಪನಾ ಲೋಕ ಧರೆಗಿಳಿದ ವಿಸ್ಮೃತಿಯ ನಾಕ

ನಕ್ಷತ್ರಗಳ ದಾಟಿ ಮೇಲಕೇರುವ ಪರಿ

ದಣಿದ ಹೆಜ್ಜೆಗೆ ಶಕ್ತಿ ಸೋತ ಮನಕೆ ಶಮನ

ಆಯಾಸವಾದರೂ ನಿರಾಶೆಯಿಲ್ಲ

ದೇಹ ಬಸವಳಿದರೂ ಬೇಸರವಿಲ್ಲ

ಒಂಟಿಯೆಂದೆನಿಸಿದರೂ ಒಂಟಿತನವಿಲ್ಲ !

ಅಗಣಿತ ನಕ್ಷತ್ರ ತಾರೆಗಳ ಲೋಕದಲಿ

ಅಪ್ಸರೆಯರ ಸಾಂಗತ್ಯವಿದೆ ಹಸಿವು ನೀರಡಿಕೆಗಳ

ವಿಸರ್ಜನೆಗಳ ಕಾಟವಿಲ್ಲದಿರೆ ಈ ಸುಂದರ

ಲೋಕದ ಸಾಂಗತ್ಯ ಸಾಕಲ್ಲವೆ ?

 

ಹೆಜ್ಜೆ ಹೆಜ್ಜೆಗೂ ಕಷ್ಟ ಉಸಿರಿಗೆ ಒದ್ದಾಟ ಆದರೂ

ಶಿಖರದ ತುದಿಯೇರಿ ಮೆರೆವ ಹೆಬ್ಬಯಕೆ

ಕುಂದಿದ ಶಕ್ತಿಯ ಮರು ಸಂಚಯನ ಮತ್ತೆ

ಚಾರಣ ಉಸಿರಿನ ಮಹತ್ವದರಿವು ಶಿಖರಗಳ

ಏರುದಾರಿಯಲಿ ಏರುವಿಕೆಯ ಪಯಣದಲಿ

ಮಾತು ನಗಣ್ಯ ಆದರೆ ಮೌನ ಸಂಗಾತಿ

ಕಾರಿರುಳ ಕತ್ತಲಲಿ ಶಿಖರಾಗ್ರವನೇರೆ ದಶ

ದಿಕ್ಕುಗಳಿಂದ ಸಾಗಿ ಬರುತಿಹ ಬೆಳಕಿನ ಬಾಣಗಳು

ಅವು ಸಾಗಿ ಬಂದ ದಾರಿಯ ವಿರಾಟ ದರ್ಶನ !

ಸಾರ್ಥಕವಾದ  ನಮ್ಮ ಕನಸಿನ ಚಾರಣ !

 

ಮುಂದಿಟ್ಟ ಹೆಜ್ಜೆಯನು ಹಿಂದಿಡಬೇಡ

ಸಶಕ್ತ ದೇಹ ಮನಸುಗಳಷ್ಟೆ ಸಾವಧಾನದ

ಧೃಡ ನಡಿಗೆ ಬಲು ಮುಖ್ಯ ಜೊತೆಗೆ

ಗಿರಿ ಶಿಖರಗಳೆಡೆ ಒಂದು ಗೌರವ ಭಾವ ಬೇಕು

ಅವುಗಳನು ನಾವು ಅವಮಾನಿಸಿದೆವೋ

ಅವು ಮುನಿದು ಕೊಳ್ಳುತ್ತವೆ ಚಾರಣಧ ದಾರಿಯಲಿ

ಮೈಮರೆಯುವಿಕೆ ನಿದ್ರೆಗಳು ಸಲ್ಲ ಆರೋಹಣಕೆ

ತೊಡಗಿ ಮುಂದುವರಿಯಲೆ ಬೇಕು 

ಹಿಮ್ಮುಖದ ಪಯಣ ಸಲ್ಲ ಹಿಂದೆ ಕಾಯುವವರಿಲ್ಲ

ಮುಂದೆ ನಿರೀಕ್ಷೆಗಳಿಲ್ಲ ನಿರ್ಲಿಪ್ತ

ಮುಖವಾಡರಹಿತ ಭಾವಗಳು ಮುಖ್ಯ !

 

ಬೆಳಕು ಹರಿಯಿತೊ ಆರೋಹಣವಿಲ್ಲ ಸಾವಿನ

ಭಯವಿಲ್ಲ ಚಾರಣದ ಉತ್ತುಂಗಕ್ಕೇರಿದೆವೋ

ಅದೊಂದು ಸಂಭ್ರಮದ ಸಂತಸದ ಮಿಲನ ಅದು

ಅನುಭವ ವೇದ್ಯ ! ಹೆದರಿ ಕೊಂಡಷ್ಟೂ

ಚಾರಣ ಅಸಹನೀಯ ಸಂಕಷ್ಟಮಯ ಕಷ್ಟಗಳ

ನೀಗಿ ಪುಟಿದೇಳುವ ಶಕ್ತಿ ಬದುಕಿಗಿದೆ ತಾಳ್ಮೆ ಬೇಕು

ಕಾಲಚಕ್ರದ ಚಲನೆಯಲಿ ಎಲ್ಲವೂ ಸರಿ

 

ಬಯಲು ! ಬಯಲು !! ಕಣ್ಣು ಹಾಯಿಸಿದಷ್ಟೂ

ಬಯಲು !!! ಹಿಮದ ರಾಶಿಯ ಬಯಲು

ಮರಳುಗಾಡಿನ ಬಯಲು ಎಷ್ಟೊಂದು ವಿಸ್ತಾರದಲಿ

ವ್ಯಾಪಿಸಿದೆ ಈ ಜಗ ! ಭಗವಂತ ಸೃಷ್ಟಿಯ

ವಿಸ್ಮಯ ಲೋಕ ಮುಷ್ಟಿಯಗಲದ ನಮ್ಮ ಹೃದಯದಲಿ

ಈ ಸೃಷ್ಟಿ ಸೌಂದರ್ಯವನು ತುಂಬಿ ಕೊಳ್ಳುವುದ್ಹೇಗೆ ?

ನಾವೋ ಯಕಶ್ಚಿತ್ ಹುಲು ಮಾನವರು ನಿನ್ನದೋ

‘ಅಗಾಧ ವಿರಾಟ್ ಸ್ವರೂಪ ನಿನ್ನೆದುರಿನಲಿ

ನಾನೆಂಬ ಅಹಂಕಾರ ಕರಗಿ ಹೋಯೀತು ದೂರ

ದೂರಕೆ ಬಹು ದೂರಕೆ

 

ಪ್ರಕೃತಿ ನೀನೊಂದು ಬ್ರಹ್ಮಾಂಡ ! ನಾನೊಂದು ಅಣು !

ನಿನ್ನ ಆಕಾರ ರೂಪಗಳ ನಾನೆಣಿಸಲಾರೆ ನೀನು

ಅವ್ಯಕ್ತ ಅರೂಪ ನಮ್ಮ ಬದುಕಿನ

ಹೋರಾಟವೂ ಅಷ್ಟೆ ಎಲ್ಲವೂ ನಿನ್ನಯ ಆಟ

ನಿನ್ನ ದರ್ಶನ ಪಡೆದ ನಾನು ಧನ್ಯ

ಗಿರಿ ಶಿಖರಗಳ ರಾಜ ರಾಜಾಧಿರಾಜ

ದೇವರ ದೇವ ನಾನು ಧನ್ಯ ! ತಂದೆ  ಧನ್ಯ

 

             ****

 

ಚಿತ್ರಕೃಪೆ : ಅಂತರ್ಜಾಲ

 

Rating
No votes yet

Comments

Submitted by nageshamysore Sat, 12/21/2013 - 03:32

ಪಾಟೀಲರೆ ನಮಸ್ಕಾರ. ಬರಿ ಸಾಮಾನ್ಯ ಚಾರಣವೊಂದರ ದರ್ಶನ ಮಾಡಿಸುತ್ತಿರೆಂದರೆ, ಅಸಾಧಾರಣ ಭೌತಿಕಾಧ್ಯಾತ್ಮಿಕ ಸ್ತರಗಳನ್ನೆಲ್ಲ ಅದ್ವೈತಗೊಳಿಸಿಬಿಟ್ಟಿದ್ದೀರ. ಕತ್ತಲೆಯಲಿ ಚಾರಣದ ಸೂಕ್ತತೆಯ ಪ್ರತಿಮಾತ್ಮಕತೆ ಚೆನ್ನಾಗಿದೆ - ತಮದಿಂದ ಪ್ರಕಾಶದತ್ತ ಚಾರಣಕೆ ಹೊರಡಿಸಿದಂತೆ. ಚಾರಣವನ್ನು, ಬದುಕಿನ ದರ್ಶನವಾಗಿಸಹೊರಟ ಹಂಬಲವು ಪ್ರತಿಫಲಿತವಾಗಿದೆ. ಒಟ್ಟಾರೆ ಚೆನ್ನಾಗಿದೆ :-)

Submitted by H A Patil Sat, 12/21/2013 - 17:31

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಚಾರಣ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಈ ಕವನಕ್ಕೆ ಪ್ರೇರಣೆ ಸಹ್ಯಾದ್ರಿ ಮತ್ತು ಹಿಮಾಲಯದ ಗಿರಿ ಶಿಖರ ಪರ್ವತ ಶ್ರೇಣಿಗಳು, ಅವುಗಳ ದರ್ಶನ ( ಟೆಲಿವಿಜನ್ ಮತ್ತು ಪ್ರಿಂಟ್ ಮೀಡಿಯಾಗಳಲ್ಲಿ ಮಾತ್ರ ) ನನಗೆ ಅವ್ಯಕ್ತ ಆನಂದವನ್ನುಂಟು ಮಾಡುತ್ತದೆ. ಅವೊಂದು ಅನಿರ್ವಚನೀಯ ಗಳಿಗೆ ಗಳು, ಆಗ ಮೂಡುವ ಭಾವನೆಗಳ ವ್ಯಕ್ತ ರೂಪವೆ ಈ ಕವನ. ಕವನದಲ್ಲಿ ಆಧ್ಯಾತ್ಮಕ ಅಂಶಗಳನ್ನು ತಾವು ಗ್ರಹಿಸಿದ್ದೀರಿ, ಅದು ಕವನದ ಶಕ್ತಿಯಲ್ಲ ತಮ್ಮ ಗ್ರಹಿಕೆಯ ಶಕ್ತಿ, ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by lpitnal Sat, 12/21/2013 - 18:43

ಮಾಗಿದ ಮನಸ್ಸಿನ ಸುಂದರ ಅಭಿವ್ಯಕ್ತಿಯ ಕವನ. ಚಾರಣ ಚಿಂತನೆಗೆ ಹಚ್ಚುತ್ತ ತನ್ನನ್ನು ತೆರೆದುಕೊಳ್ಳುವ ಪರಿ ಚನ್ನಾಗಿ ಮೂಡಿಬಂದಿದೆ. ಉತ್ತಮ ಕವನ ನೀಡಿದ್ದಕ್ಕೆ ವಂದನೆಗಳು ಪಾಟೀಲ್ ರವರೇ. ಧನ್ಯವಾದಗಳು

Submitted by H A Patil Sat, 12/21/2013 - 19:00

In reply to by lpitnal

ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
ಈ ಕವನದ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by partha1059 Sat, 12/21/2013 - 19:24

ಚಾರಣದಲ್ಲು ಅದ್ಯಾತ್ಮ!!
ಉತ್ತಮ ಕವನ ಪಾಟೀಲರೆ

Submitted by H A Patil Sun, 12/22/2013 - 18:58

In reply to by partha1059

ಪಾರ್ಥ ಸಾರಥಿ ಯವರಿಗೆ ವಂದನೆಗಳು.
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ತಮ್ಮ ಅಭಿಪ್ರಾಯ ಸರಿಯಿದೆ, ಇತ್ತೀಚಿನ ನನ್ನ ಬರಹಗಳಲ್ಲಿ ವಿಶೇಷವಾಗಿ ಕವನ ಗಳಲ್ಲಿ ಲೌಕಿಕಕ್ಕಿಂತ ಪಾರಮಾರ್ಥಿಕ ವಿಷಯಗಳೆ ಹೆಚ್ಚಾಗುತ್ತಿವೆಯೆ ಹಾಗಿದ್ದರೆ ಏನು ಕಾರಣ ವಯಸ್ಸಾಗುತ್ತ ಹೋದಂತೆ ಮನುಷ್ಯನನ್ನು ಈ ಅಲೌಕಿಕ ಚಿಂತನೆ ಪ್ರಾರಂಭವಾಗುತ್ತದೆಯೆ ? ನನ್ನ ಬರವಣಿಗೆ ಸಾಗುತ್ತಿರುವ ದಿಕ್ಕು ನೋಡಿದರೆ ಹಾಗೆನಿಸುತ್ತದೆ. ಆದರೂ ಬೇಸರಿಸದೆ ನೀವೆಲ್ಲ ಪ್ರತಿಕ್ರಿಯಿಸುವುದು ನನ್ನಲ್ಲಿ ಹುಮ್ಮಸು ಮೂಡಿಸುತ್ತಿರುವುದು ಸುಳ್ಳಲ್ಲ ! ನಿಮ್ಮದು ಆತ್ಮೀಯ ಪ್ರತಿಕ್ರಿಯೆ ನನಗೆ ಸಂತಸವಾಗಿದೆ, ಹೀಗೆಯೆ ಪ್ರತಿಕ್ರಿಯಿಸುತ್ತ ಇರಿ ಧನ್ಯವಾದಗಳು.

Submitted by ಗಣೇಶ Sun, 12/22/2013 - 21:32

ಪಾಟೀಲರೆ, ಕವನ ಇಷ್ಟವಾಯಿತು.
-ಗಿರಿ ಶಿಖರಗಳೆಡೆ ಒಂದು ಗೌರವ ಭಾವ ಬೇಕು / ಅವುಗಳನು ನಾವು ಅವಮಾನಿಸಿದೆವೋ /ಅವು ಮುನಿದು ಕೊಳ್ಳುತ್ತವೆ ಚಾರಣದ ದಾರಿಯಲಿ
+೧.

Submitted by H A Patil Mon, 12/23/2013 - 13:47

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ಈ ಕವನದ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಮೆಚ್ಚುಗೆಯ ಅಭಿಪ್ರಾಯಕ್ಕೆ ವಂದನೆಗಳು.

Submitted by kavinagaraj Thu, 12/26/2013 - 10:34

ಸುಂದರ 'ದರ್ಶನ'! ಧನ್ಯವಾದಗಳು.

Submitted by H A Patil Thu, 12/26/2013 - 19:25

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು,
ತಮ್ಮ ಪ್ರತಿಕ್ರಿಯೆ ಓದಿದೆ. ಪ್ರತಿದಿನವೂ ಪ್ರಕೃತಿ ಮಾಡಿಸುವ ದರ್ಶನ ನನಗೆ ಸಂತಸವೀಯುತ್ತವೆ, ಅಲ್ಲದೆ ಜನ ವಸತಿ ರಹಿತ ಗುಡ್ಡ ಬೆಟ್ಟಗಳು, ಕಾಡು ಮೇಡುಗಳು ಮತ್ತು ಹಿಮಾಚ್ಛಾದಿತ ಪರ್ವತ ಶ್ರೇಣಿಗಳು ನನ್ನಲ್ಲಿ ಉಂಟು ಮಾಡುವ ಬೆರಗು ಈ ಕವನಕ್ಕೆ ಪ್ರೇರಣೆ, ನಿಮ್ಮಂತಹ ಸಹೃದಯ ಸಂಪದಿಗರು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.