ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

"ಮನುಷ್ಯ ಸುಖವಾಗಿರುವಾಗ ದೇವರು , ಡಾಕ್ಟರ್ ಹಾಗು ಯೋಧರನ್ನು ಮರೆತುಬಿದುತ್ತಾನೆ" ಅಂತ ಮೊನ್ನೆ ರೇಡಿಯೋದಲ್ಲಿ ರವಿ ಬೆಳಗೆರೆ ಹೇಳುತ್ತಿದ್ದರು. ಅವರಿಗೆ ಈ ಮಾತನ್ನು ಹೇಳಿದ್ದು ಕಾರ್ಗಿಲ್ ಸಮರದಲ್ಲಿ ವೀರ ಮರಣವನ್ನಪ್ಪಿದ 'ಪುರುಷೋತ್ತಮ್' ಎಂಬವರು.
ಈ ದಿನ ಅಂತ ವೀರ ಯೋಧರ ನೆನಪಿಗಾಗಿ ಈ ಲೇಖನ. ಅಂದ ಹಾಗೆ ವೀರ ಯೋಧರ ನೆನಪಾಗಲು ಕಾರಣವೇನು ಗೊತ್ತೇ, 'ಮಕ್ಕಳ ದಿನಾಚರಣೆ'.

ಮಕ್ಕಳ ದಿನಾಚರಣೆ ಎಂದರೆ ತಟ್ಟನೆ ನೆನಪಿಗೆ ಬರುವವರು ಚಾ ಚಾ ನೆಹರು. ಅವರ ಹುಟ್ಟು ಹಬ್ಬವನ್ನು ತಾನೆ ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುವುದು. ಮಕ್ಕಳಿಗೆ ಚಾ ಚಾ ನ ಬಗ್ಗೆ ಕೇಳಿ, "ಅವರು ಭಾರತದ ಮೊದಲ ಪ್ರಧಾನ ಮಂತ್ರಿ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅವರಿಗೆ ಮಕ್ಕಳು ಹಾಗು ಕೆಂಪು ಗುಲಾಬಿ ಎಂದರೆ ಬಹಳ ಇಷ್ಟ " ಈ ರೀತಿ ಉತ್ತರ ಬರುತ್ತದೆ.
ಆದರೆ ಇಂದು ರೇಡಿಯೋದಲ್ಲಿ ಈ ಮಕ್ಕಳ ದಿನಾಚರಣೆ ಅಂಗವಾಗಿ ಮಾತನಾಡುವಾಗ ನನಗೆ ನೆನಪಾಗಿದ್ದು , ಇಂದಿಗೆ ೪೬ ವರ್ಷಗಳ ಹಿಂದೆ ನಡೆದ ಒಂದು ಘಟನೆ, ಅದು ಭಾರತೀಯರಿಗೆ ಹಾಗು ಭಾರತಕ್ಕೆ ಮರೆಯಲಾಗದಂತಹ ಕರಾಳ ನೆನಪು ತರುವಂತದ್ದು. ಹೌದು ನಾನು ಹೇಳುತ್ತಿರುವುದು ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ಧದ ಬಗ್ಗೆ. ಅದರ ಬಗ್ಗೆಯೇ ಇಲ್ಲಿ ಬರೆದಿದ್ದೇನೆ.
ಈ ಲೇಖನಕ್ಕೆ ಮೂಲ ಆಧಾರ "ಹಿಮಾಲಯನ್ ಬ್ಲಂಡರ್" ಎಂಬ ಹೊತ್ತಿಗೆ "ಬ್ರಿಗೇಡಿಯರ್ ಜಾನ್.ಪಿ ದಳವಿ" ಅವರು ಬರೆದಿದ್ದು , ಅದನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಘಟನೆಗಳನ್ನು ನನಗೆ ಅನ್ನಿಸಿದ ರೀತಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಕೊಳ್ಳಿ.

ತಣ್ಣಗೆ ಕೊರೆಯುತ್ತಿರುವ ಚಳಿ, ಕಣ್ಣರಳಿಸಿದಷ್ಟು ದೂರ ಕಾಣುವ ಬೆಳ್ಳ ಬಿಳುಪಿನ ಮಂಜು, ಧರಿಸಿರುವ ತೆಳ್ಳನೆ ಕಾಟನ್ ಶಿರ್ಟನ್ನು ಸೀಳಿ ಹೊಳ ನುಗ್ಗುತ್ತಿರುವ ಹಿಮಗಾಳಿಗೆ ಜೀವ ಹಿಂಡಿದಂತಾಗುತ್ತಿದೆ , 'ಶೂ' ಗಳು ಹಳೆಯದಾಗಿ ತಳ ಸವೆದಿದೆ, ಫಳ ಫಳಿಸುವ ಸೂರ್ಯನ ಏನಾದರು ಕಣ್ಣು ಬಿಟ್ಟನೆಂದರೆ ಅಷ್ಟೆ , ಬೆಳಕಿನ ಪ್ರತಿಫಲನದಿಂದ 'ಲುಂಫೋ 'ದ ತುತ್ತ ತುದಿಯಲ್ಲಿ ನಿಂತು 'ಭಾರತ ಮಾತೆ'ಯ ರಕ್ಷಣೆ ಮಾಡುತ್ತಿರುವ ವೀರ ಯೋಧನ ಕಣ್ಣೆ ಶಾಶ್ವತವಾಗಿ ಕುರುಡಾಗುತ್ತವೆ.ಆದರು ಅವನು ಛಲ ಬಿಟ್ಟಿಲ್ಲ, ತಾಯ್ನೆಲದ ರಕ್ಷಣೆಗೆ ಟೊಂಕಕಟ್ಟಿ ನಿಂತವನ ಮೈ ಮುಚ್ಚಲು ಸರಿಯಾದ ಬಟ್ಟೆಗಳಿಲ್ಲ.

ಹೌದು, ಅದು ಅಕ್ಟೋಬರ್ ತಿಂಗಳು ೧೯೬೨ನೆ ಇಸವಿ. ಅತ್ತ ದೂರದ 'ಲುಂಫೋ'ದಲ್ಲಿ 'ಭರತ ಮಾತೆ'ಯ ವೀರ ಪುತ್ರ ಚಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ, ಯಾರು ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಅರೆಬೇತ್ತಲೆಯಾಗಿ ನಿಂತಿದ್ದಾರೆ,
ಇತ್ತ ದೂರದ 'ದೆಹಲಿ'ಯಲ್ಲಿ ಭವ್ಯವಾದ ಹವಾ ನಿಯಂತ್ರಿತ ಕೋಣೆಯಲ್ಲಿ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆ, ಎಡಗೈನಲ್ಲಿ 'ಕೆಂಪು ಗುಲಾಬಿ' (ಪ್ರೀತಿಯ ಸಂಕೇತ) , ಬಲಗೈನಲ್ಲೊಂದು 'ಬಿಳಿ ಪಾರಿವಾಳ' (ಶಾಂತಿಯ ಸಂಕೇತ') ಹಿಡಿದು ನಿಂತಿದ್ದರು 'ಚಾ ಚಾ ನೆಹರು'!

ಭಾರತ-ಚೀನಾ ಯುದ್ಧ ಶುರುವಾಗಿದೆ, ನಮ್ಮ ಬಳಿ ಯೋಧರ ಸಂಖೆಯು ಕಡಿಮೆ, ಇದ್ದ ಧೀರ ಯೋಧರ ಬಳಿ ಬಟ್ಟೆ ,ಶೂ ,ಬಂದೂಕು, ಬಾಂಬೂ, ಕಾಡತೂಸು, ಕಡೆಗೆ 'ಆಹಾರ'ವು ಸರಿಯಾಗಿ ಇರಲಿಲ್ಲ.
ಆದರೆ ಇದಾವುದರ ಪರಿವೆ ಇಲ್ಲದವರಂತೆ 'ಚಾ ಚಾ ನೆಹರು' ಮೃಷ್ಟಾನ್ನ ಭೋಜನವನ್ನು ಮುಗಿಸಿ , ವಿಮಾನವೇರಿ 'ಇಂಗ್ಲೆಂಡ್,ನೈಜೀರಿಯ,ಶ್ರೀಲಂಖ'ದಲ್ಲಿ 'ಶಾಂತಿ' ಸಂದೇಶ ಸಾರಲು ಹೊರಟಿದ್ದರು. ಇಲ್ಲಿ ಭಾರತ ಚೀನಿ ಶತ್ರುಗಳ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ, ನಮ್ಮ 'so called' ಸ್ವಾತಂತ್ರ್ಯ ಹೋರಾಟಗಾರ ಪ್ರಪಂಚ ಪರ್ಯಟನೆ ಮಾಡುತ್ತಿದ್ದರು.

'ಕೃಷ್ಣನ್ ಮೆನನ್' ಎಂಬ ಒಬ್ಬ ರಕ್ಷಣಾ ಸಚಿವ, ದೇಶದ ರಕ್ಷಣೆಗೆ ಬಗ್ಗೆ ಯೋಚಿಸಬೇಕಾದವ 'ಚಾ ಚಾ'ನೊಂದಿಗೆ ವಿದೇಶ ಪ್ರಯಾಣ ಮಾಡುತ್ತಿದ್ದರು. ಜನರಲ್ ತೋಪರ್ ದಿಲ್ಲಿಯಲ್ಲಿ ಮಲಗಿದ್ದರೆ, ಜನರಲ್ ಕೌಲ ಸಂಸಾರ ಸಮೇತ ಕಾಶ್ಮೀರದಲ್ಲಿ ರಜೆಯಲ್ಲಿದ್ದ.

ಹೀಗೆ 'ಚಾ ಚಾ ನೆಹರು' ಎಂಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗು ಇತರೆ ಮೂವರು ಸೇರಿಕೊಂಡು ಅಖಂಡ ಭಾರತವನ್ನು ಚಿನಿಗಳ ಪಾದದ ಬಳಿ ಇಟ್ಟುಬಿಟ್ಟರು.

ಅಂದು ಚಾ ಚಾ ನೆಹರುರವರ ಹುಚ್ಚಾಟಕ್ಕೆ ಬಲಿಯಾದವರ ಸಂಖ್ಯೆ ಹತ್ತಿರ ೩-೪ ಸಾವಿರದಷ್ಟು. ಆ ವೀರ ಯೋಧರ ತಂದೆ,ತಾಯಿ,ಹೆಂಡತಿ,ಮಕ್ಕಳು,ಅನ್ನ,ಅಕ್ಕ,ತಮ್ಮಂದಿರ ಗೋಳು ಸಹ ಬಹುಷಃ ಭಾರತ ರತ್ನ ಚಾ ಚಾರಿಗೆ ಕೇಳಲೇ ಇಲ್ಲ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿಜಿಯವರ ನಂತರದ 'ಶಾಂತಿ ದೂತ'ಎನಿಸಿಕೊಳ್ಳುವ ಹುಚ್ಚು ಹಂಬಲವಿತ್ತೆನೂ,
ಅದೇ ಕಾರಣದಿಂದಾಗಿ ಇಂದಿಗೂ 'ಕಾಶ್ಮೀರ' ಸಮಸ್ಯೆ ಎಂಬ ಭೂತ ಬೆಂಬಿಡದೆ ನಮ್ಮನ್ನು ಕಾಡುತ್ತಿದೆ. ೧೯೪೯ರಲ್ಲಿ ನಡೆದ 'ಭಾರತ-ಪಾಕಿಸ್ತಾನ' ಯುದ್ಧದಲ್ಲಿ ನಮ್ಮ ಸೈನಿಕರನ್ನು ಚಾ ಚಾ ತಡೆಯದಿದ್ದರೆ ಇವತ್ತಿಗೆ 'ಕಾಶ್ಮೀರ ಕಣಿವೆ' ಭಾರತ ಮಾತೆಯ ಕೀರೆಟವಾಗಿ ಮೆರೆಯುತಿತ್ತು. ಬಹುಷಃ ಈಗ ಕಾಡುತ್ತಿರುವ ಭಯೋತ್ಪಾದನೆ ಎಂಬ ಭೂತವು ಇರುತ್ತಿರಲಿಲ್ಲ. ಆದರೆ ಚಾ ಚಾ ರಕ್ತ ಪಾತ ಬೇಡ,ಇದನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ದ ನಾನೇ ಪರಿಹರಿಸುವೆ ಅಂತ ಹೇಳುತ್ತಾ , ನಮ್ಮ ನಮ್ಮ ನಡುವಿನ ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡಿದರು. ಅವರು ಅಂದು ಮಾಡಿದ ತಪ್ಪಿನಿಂದಾಗಿ ಇಂದು ೨ ಶತ್ರು ರಾಷ್ಟ್ರಗಳು ಬಲಿತು ಕುಂತಿವೆ, ಅದು ಅಣ್ವಸ್ತ್ರದೊಂದಿಗೆ ನೆನಪಿರಲಿ.

ಅಂದು ಚೀನಾ 'ಟಿಬೆಟ್' ಅನ್ನು ವಶಪಡಿಸಿಕೊಂಡಾಗ ಇಡಿ ವಿಶ್ವವೇ ಅವರ ವಿರುದ್ಧ ತಿರುಗಿ ಬಿದ್ದಿತ್ತು, ಕೇವಲ 'ಚಾ ಚಾ ನೆಹರುವಿನ ಭಾರತ'ವೊಂದನ್ನು ಬಿಟ್ಟು. ಟಿಬೆಟ್ನ ಸ್ವಾತಂತ್ರ್ಯ ಹೋರಾಟಗಾರರು ಹೊರಜಗತ್ತಿನ ಬೆಂಬಲಕ್ಕೆ ಅಂಗಲಾಚುತಿದ್ದರು, ಇತ್ತ ವಿಶ್ವ ಸಂಸ್ಥೆಯಲ್ಲಿ 'ಚೀನಾ-ಟಿಬೆಟ್' ನ ವಿಷಯ ಪ್ರಸ್ತಾಪವಾದಗಳೆಲ್ಲ ಚೀನಾದ ಪರವಹಿಸಿದ್ದು 'ಚಾ ಚಾ ನೆಹರು'. ಅದು ಅವರಿಬ್ಬರ ಆಂತರಿಕ ವಿಷಯ ಅದರಲ್ಲಿ ನಾವು ತಲೆ ಹಾಕುವುದು ಬೇಡ ಅಂತ ಬೋಧನೆ ಮಾಡಿದ್ದು ಇದೆ ಚಾ ಚಾ.

ಬಹುಷಃ ಕಾಮನ್ ಸೆನ್ಸ್ ಇರುವಂತ ಮನುಷ್ಯನಿಗೆ ತಿಳಿಯಬಹುದಾದ ವಿಷಯವೇನೆಂದರೆ ಚೀನಾ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ರಹದಾರಿಯಾಗಿ ಬಳಸುತ್ತದೆ ಎಂದು, ಅದು ನಮ್ಮ ಮುತ್ಸದ್ದಿಗೆ ತಿಳಿಯಲೇ ಇಲ್ಲ.
ಇಂದು ಅದೇ ಚೀನಾ ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡುವುದನ್ನು ವಿರೋಧಿಸುತ್ತಿದೆ, ಅಮೇರಿಕಾದೊಂದಿಗಿನ ಅಣ್ವಸ್ತ್ರ ಒಪ್ಪಂದಕ್ಕೆ ಅಡ್ಡಿಪದಿಸುತ್ತದೆ.

ತಪ್ಪು ಮಾಡಿದ್ದು ಅವರು ಅನುಭವಿಸಬೇಕಾದವರು ನಾವು. ಇದೆಲ್ಲಿಯ ನ್ಯಾಯ ಚಾ ಚಾ.

Rating
No votes yet