ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು

ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು

    ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ, ಕಾಫಿಗೆ ಬೇಕಾದ ಡಿಕಾಕ್ಷನ್ ಸಿದ್ದವಿಲ್ಲ. ಫಿಲ್ಟರ್ಗೆ ಹಾಕಬೇಕು. ಏಕೊ ಮೊದಲು ಅಮ್ಮ ಮಾಡುತ್ತಿದ್ದ ಹತ್ತಿ ಬಟ್ಟೆಯಲ್ಲಿ ಶೋದಿಸುವ ಪದ್ದತಿ ನೆನಪಿಗೆ ಬಂದಿತು. ಮನೆಯವರ ಹತ್ತಿರ ಅದನ್ನೆ ಕೇಳಿದೆ, 'ಡಿಕಾಕ್ಷನ್ ಸೋಸಲು ಬಟ್ಟೆ ಏನಾದರು ಇದೆಯಾ? ' ಎಂದು.
'ಛೀ| ಅಸಹ್ಯ ! ' ಎನ್ನುತ್ತ ಅದೇಮುಖ ಮಾಡಿದರು.'ನಿಮಗೇನು ಈಗ ಕಾಫಿ ಬೇಕು ತಾನೆ ಹೊರಗೆ ಕುಳಿತಿರಿ ಅಲ್ಲಿಗೆ ಬರುತ್ತೆ' ಅಂದರು. ಹೌದಲ್ಲವ ಕಾಫಿಕುಡಿಯಲು ಇಷ್ಟು ಸುಲುಭದ ದಾರಿ ಇರುವಾಗ ನಾನೇಕೆ ಕಷ್ಟಪಡಲಿ ಎನ್ನುತ್ತ ಹೊರಗೆ ಬಂದು ಕುಳಿತೆ.
    ನಂತರ ಕಾಫಿ ಕುಡಿಯುವಾಗ ಅನ್ನಿಸಿತು, 'ಅಲ್ಲ ಬಟ್ಟೆಯಲ್ಲಿ ಕಾಫಿ ಸೋಸುವದನ್ನು ಈಗಿನ ಹೆಂಗಸರು ಏಕೆ ಅಸಹ್ಯ ಅನ್ನುತ್ತಾರೆ?, ಟೀ ಸೋಸಲು ಬಳಸುವ ಜಾಲರಿ ಸ್ಟಿಲನದು  ಇಲ್ಲ ಪ್ಲಾಸ್ಟಿಕ್‌ನದೊ ಆದರೆ ಅದರೆ ಬಲೆಯಂತು ನೈಲಾನ್ ಅಥವ ಪ್ಲಾಸ್ಟಿಕ್ ಎಂತದೊ ಮಾಡಿರುತ್ತಾರೆ, ಅದೋ ಶುದ್ದವೊ ಅಲ್ಲವೋ ಯಾರಿಗು ಯೋಚನೆ ಬರಲ್ಲ, ಆದರೆ ಕಾಫಿಯ ಬಟ್ಟೆ ಅಸಹ್ಯ ಎನಿಸುತ್ತದೆ. ಹೀಗೆಯೆ ಹಲವು ಸಂಪ್ರದಾಯ, ಪದ್ದತಿಗಳು ಅದುನಿಕರಣಾದ ಅಲೆಗೆ ಸಿಕ್ಕಿ ಕಣ್ಮರೆಯಾಗುತ್ತವೆ. ಅಥವ ಕೆಲವೊಮ್ಮೆ ಆ ಪದ್ದತಿಯ ಪಳಿಯುಳಿಕೆಯ ರೂಪಗಳಂತೆ ಉಳಿಯಿತ್ತವೆ.


     ಈ ಕುರುಡು ಸಂಪ್ರಾದಯಗಳು , ಪದ್ದತಿಗಳು, ಆಚರಣೆಗಳು ಕೆಲವೊಂದು ವಿಚಿತ್ರ ಹಾಸ್ಯಾಸ್ಪದ ನಡುವಳಿಕೆಗು ಅಸ್ಪದ ಮಾಡಿಕೊಡುತ್ತವೆ.ನಾನು ಚಿಕ್ಕ ವಯಸ್ಸಿನಲ್ಲಿ ಮುಂದಿನ ಮನೆಯ ಅಜ್ಜಿ ಒಬ್ಬರಿದ್ದರು, ಮಡಿ ನೀರು ಹಿಡಿಯಲು ಆಕೆ ನಲ್ಲಿಯ ಬಾಯಿಗೆ ಹುಣಸೆಹಣ್ಣನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ನೀರು ಹಾಕಿ ತೊಳೆದು ನಂತರ ನೀರು ಹಿಡಿಯುತ್ತಿದ್ದರು.ನಾವು ಅಜ್ಜಿ ನೀನೇನೊ ಈ ತುದಿಯಲ್ಲಿ ಮಡಿ ಮಾಡುತ್ತೀರಿ, ಆ ತುದಿಯಲ್ಲಿ ನೀರನ್ನು ಬಿಡೊ ಮೈದೀನ್ ಬೇರಿ  ಸ್ನಾನನೆ ಮಾಡಿರಲ್ಲ ಅಂತ. ಆಗ ನೀರನ್ನು ಬಿಡುತ್ತಿದ್ದವನು ಅವನೆ. ಆಗ ಅಜ್ಜಿ ನಮ್ಮನ್ನು ಹೋಗ್ರೊ ತರಲೆಗಳ ಅಂತ ಬೈದು ಓಡಿಸುತ್ತಿದ್ದರು.
ತುಂಬಾವರ್ಷದ ಕೆಳಗೆ ಸೋದರಮಾವನ ಮನೆಯಲ್ಲಿ ಊಟಕ್ಕೆ ಅಂತ ಕರೆದಿದ್ದರು, ಹೋಗಿದ್ದೆ, ಆದಿನ ಅವರ ಮನೆಯಲ್ಲಿ ವೈದೀಕ. ಅವರಿಗೂ ನಮ್ಮ ಅಜ್ಜಿಗು ವಾಗ್ವಾದ ನಡೆದಿತ್ತು, 'ಮಿಕ್ಸೀ'ನಲ್ಲಿ ಹಿಟ್ಟು ರುಬ್ಬೋದು ಬೇಡ ಅದು ಮಡಿಗೆ ಬರಲ್ಲ ಅಂತ ಅಜ್ಜಿ, ಆಗಿನ್ನು ಮಿಕ್ಸಿ ಬಂದ ಹೊಸದು ಅವರ ಮನೆಗೆ,
'ಇದರಲ್ಲಿಯೆ ಹಾಕೋದು, ಪಿತೃಗಳಿಗೆ ವಡೆ ಬೇಡವಾದರೆ ಬರಿ ಅನ್ನ ಸಾರು ಹುಳಿ ತಿಂದು ಹೋಗಲಿ' ಅಂತ ಹೇಳುತ್ತಿದ್ದರು ಸೋದರಮಾವ ಕೋಪದಲ್ಲಿ.
ಹೀಗೆ ಅದುನೀಕರಣದಲ್ಲಿ ನಮ್ಮ ಹಳೆಯ ಪದ್ದತ್ತಿಗಳೆಲ್ಲ ಅರ್ಥಕಳೆದು ಕೊಳ್ಳುತ್ತಿದ್ದರೆ ನಾವಾದರೋ ನಮ್ಮ ಸಂಪ್ರಾದಯ ಬಿಟ್ಟೆವೆಂದೆ ಕೊರಗುತ್ತೇವೆ. ಆದರೆ ಪದ್ದತಿಗಳಿಗೂ ಸಂಪ್ರದಾಯಗಳಿಗು ಸಂಸ್ಕ್ರುತಿಗಳಿಗು  ನಡುವೆ ಇರುವ ಸಣ್ಣ ಗೆರೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಣ್ಣ ಕಥೆಯೊಂದನ್ನು ಹೇಳುತ್ತೇನೆ.
    ವೈದೀಕನೊಬ್ಬನ ಮನೆಯಲ್ಲಿ ಮನೆ ಮಕ್ಕಳೆಲ್ಲ ಸೇರಿ ಒಂದು ಬೆಕ್ಕು ಸಾಕಿದ್ದರು. ಅದು ಮುದ್ದಿನ ಬೆಕ್ಕು ಮನೆಯಲ್ಲೆಲ್ಲ ಅಡ್ಡಾಡುತ್ತಿತ್ತು. ಹೀಗಿರಲು ಮನೆಯಲ್ಲಿ ಹಿರಿಯರ ಕೆಲಸ ಅಂದರೆ ವೈದೀಕ ಬಂದಿತು. ಯಜಮಾನ ಚಿಂತಿಸಿದ, ಈ ಬೆಕ್ಕು ಎಲ್ಲವನ್ನು ಮುಟ್ಟಿ ಕುಲಗೆಡಿಸುತ್ತೆ. ತಿಥಿ ಭ್ರಾಹ್ಮಣರ ತೊಡೆಯೇರಿ ಕುಳಿತರು ಆಶ್ಚರ್ಯವೇನಿಲ್ಲ, ಬಂದು ಪಿಂಡಕ್ಕು ಬಾಯಿ ಹಾಕೀತು ಅಂತೆಲ್ಲ ಚಿಂತಿಸಿ, ಬೆಳಗ್ಗೆ ಒಂದು ಬುಟ್ಟಿಯನ್ನು ಹುಡುಕಿತಂದು ಮನೆಯ ಹಿಂದೆ ಆ ಬೆಕ್ಕಿನ ಮೇಲೆ ಬುಟ್ಟಿಯನ್ನು ಕವುಚಿ ಕದಲದಂತೆ ಮನೆಯಲ್ಲಿದ ರುಬ್ಬು ಕಲ್ಲನ್ನು ಅದರೆ ಮೇಲೆ ಹೇರಿದ.
ಮಕ್ಕಳೆಲ್ಲ ಏಕೆ ಅಂತ ಗಲಾಟೆ ಮಾಡಿದಾಗ ಹೇಳಿದ 'ಮಗು ಪಿತೃಗಳಿಗೆ ಬೆಕ್ಕು ಕಂಡಾರಾಗಲ್ಲ, ಈ ರೀತಿ ಕೂಡಿಟ್ಟು ಕಲ್ಲು ಹೇರಿದ್ದು ಅವರು ಕಂಡರೆ ಅವರ ಆತ್ಮಕ್ಕೆ ತೃಪ್ತಿ ಸಿಗುತ್ತೆ" . ಅವರೆಲ್ಲ ಸುಮ್ಮನಾದರು.
ಸ್ವಲ್ಪ ವರ್ಷ ಕಳೆಯಿತು, ಆ ಯಜಮಾನನು ಸ್ವರ್ಗ ಸೇರಿದ. ಅವನ ತಿಥಿ ಈಗ ಅವನ ಮಗನೆ ಮಾಡಬೇಕು. ಬೆಳಗ್ಗೆ ಅವನು ಅಪ್ಪನ ಮಾತು ನೆನೆಸಿಕೊಂಡ.ಆದರೆ ಮನೆಯಲ್ಲಿ ಈಗ ಬೆಕ್ಕೆ ಇರಲಿಲ್ಲ. ಹೇಗೊ ಕಷ್ಟಬಿದ್ದು ಅವರಿವರನ್ನು ಕೇಳಿ ಬೆಕ್ಕನ್ನು ಹೊಂದಿಸಿದ. ಬುಟ್ಟಿಯಲ್ಲಿ ಮುಚ್ಚಿ ಅದರ ಮೇಲೆ ಕಲ್ಲು ಹೇರಿದ. ಈಗ ಅವನ ಪುಟ್ಟ ಮಗ ಕೇಳಿದ ಏಕಪ್ಪ ಹೀಗೆ ಅಂತ. "ಮಗು ಹೀಗೆ ಮಾಡಿದರೆ ಪಿತೃಗಳಿಗೆ ತೃಪ್ತಿ ಸಿಗುತ್ತೆ, ಇದು ನಮ್ಮ ಮನೆಯ ಸಂಪ್ರದಾಯ'

     ಹೀಗಾಗಿ ಪದ್ದತ್ತಿಗಳೆಂದರೆ ನಾನು ಅನುಸರಿಸಿಕೊಂಡು ಬಂದಿರುವ ಜೀವನ ವಿದಾನಗಳು, ಅದು ಬದಲಾಗುತ್ತ ಸಾಗಬಹುದು ಅದೇನು ನಿಂತ ನೀರಲ್ಲ.
   ಮತ್ತೆ ನಮ್ಮ ಸಂಸ್ಕೃತಿ ಎಂದರೇನು. ಇದು ನಮ್ಮ ವ್ಯಕ್ತಿತ್ವ , ನಡವಳಿಕೆಗಳು. ಹಿರಿಯರಿಂದ ತಲೆ ತಲಾಂತರಗಳಿಂದ ನಮ್ಮೊಳಗೆ ನಮ್ಮ ಸಮಾಜದೊಳಗೆ ಅಂತರ್ಗತವಾಗಿ ಬೆರೆತು ಸಾಗುತ್ತಿರುವ ಕಣ್ಣಿಗೆ ಎದ್ದು ಕಾಣುವ ನಮ್ಮ ರೀತಿನೀತಿಗಳು. ನಮ್ಮ ಉಡುಪು ತೊಡಗೆಗಳು, ಹಬ್ಬಹರಿದಿನಗಳ ಆಚರಣೆಗಳು, ನಮ್ಮ ಸಾಮಜಿಕ ಆಚರಣೆಗಳು (ಉದಾ: ಮೈಸೂರು ದಸರ), ನಮ್ಮ ಧರ್ಮ ಆಚರಣೆಗಳು, ನಮ್ಮ ಕಲೆ ಸಂಗೀತ ಸಾಹಿತ್ಯ  ಇವೆಲ್ಲ ನಮ್ಮ ನಾಡಿನ ಸಂಸ್ಕೃತಿಗಳೆ
    ಮತ್ತೆ ಸಂಸ್ಕಾರವೆಂದರೆ ಒಬ್ಬರು ಮತ್ತೊಬ್ಬರನ್ನು ಗೌರವಿಸುವ ನಮ್ಮ ಮನಸ್ಸು. ಒಬ್ಬರ ವಿದ್ಯೆಯನ್ನು,ಬುದ್ದಿಯನ್ನು,ಚಮತ್ಕಾರಗಳನ್ನು ಅರಿತು ಅಸೂಯೆ ಪಡದೆ ಗೌರವಿಸುವ ನಮ್ಮ ಪರಿಯನ್ನು ಸಂಸ್ಕಾರವೆನ್ನಬಹುದು.

   ಮತ್ತೆ ಹೀಗೆ ನಾನು ಹೇಳಿರುವದೆಲ್ಲ ಹೀಗೆ ಅಂತ ಏನಿಲ್ಲ ಇದು ನನ್ನ ಮನಸಿನ ಭಾವನೆಗಳು ಅಷ್ಟೆ. ಇದು ಹೀಗೆ ಇರಬೇಕೆಂದಿಲ್ಲ , ಅವರವರ ಭಾವಕ್ಕೆ ತಕ್ಕಂತೆ ಬದಲಾಗಬಹುದು.

                                                              (ವಾಕ್ಪಥದಲ್ಲಿ ಆಡಿದ ಮಾತುಗಳು)


 

Rating
No votes yet

Comments