ಚಿಟ್ಟಿ ನ ಕೋಯಿ ಸಂದೇಶ್.....

ಚಿಟ್ಟಿ ನ ಕೋಯಿ ಸಂದೇಶ್.....

ಚಿಟ್ಟಿ ನ ಕೋಯಿ ಸಂದೇಶ್.....

ಜಾನೆ ವೋಹ್ ಕೌನ್ ಸ ದೇಶ್ 

ಜಹಾ ತುಂ ಚಲೇ ಗಯೇ......

 ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಲಿ ಹನಿಗೂಡದೆ ಇರಲಾರೆವು. ಯಾರೋ ಆಪ್ತರು ದೂರವಾದ ಭಾವ, ಅಥವಾ ಅವರ ನೆನಪನ್ನು ಮನಸಿನ ಪುಟದ ಮೇಲೆ ಮೂಡಿಸುವ ಈ ಹಾಡು, ಇನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ.

ಈಹಾಡನ್ನು ಹಾಡಿದ ಹಕ್ಕಿ ಇಂದಿಗೆ ತನ್ನ ಇಹಲೋಕದ ಪಯಣ ಮುಗಿಸಿದೆ. ಇಂತಹ ಸ್ವರ ಮಾಂತ್ರಿಕ ಇನ್ನೊಮ್ಮೆ ಘಜಲ್ ಲೋಕದಲ್ಲಿ ಹುಟ್ಟುವರೋ ಇಲ್ಲವೋ ಎಂಬಂಥ ಒಂದು ಶೂನ್ಯ ಆವರಿಸಿಬಿಟ್ಟಿದೆ.

ಇಂದಿಗೂ ಮನಸಿಗೆ ಬೇಸರವಾದಾಗ ಜಗ್ಜಿತ್ರ ಹಾಡುಗಳು ಕೊಂಚ ಸಮಾಧಾನ ಹೇಳುತ್ತವೆ. ಆದರೆ ಇಂದಿಗೆ ಆ ಸ್ವರ ಇಲ್ಲವಾಗಿದೆ. ಇಂದು ಬಹಳಷ್ಟು ಬೇಸರವಾಗಿದೆ ಆದರೆ ಅವರ ಹಾಡುಗಳು ಇಂದು ಬೇಸರವನ್ನು ಇಮ್ಮಡಿಗೊಳಿಸಿದೆ.

   ಒಬ್ಬ ಸಂಗೀತಗಾರನಾಗಿ, ಗಾಯಕನಾಗಿ, ಹೆಚ್ಚಾಗಿ ಜನಪ್ರಿಯರಾಗಿದ್ದ ಜಗಜಿತ್ ಸಿಂಗ್, ಒಬ್ಬ ಎಂ.ಎ ಸ್ನಾತಕೋತ್ತರ ಪದವೀಧರರಾಗಿದ್ದರು. ತಮ್ಮ ಮಡದಿ ಚಿತ್ರ ಸಿಂಗ್ ರ ಜೊತೆಗಿನ ಅವರ ಸಂಗೀತ ಕಾರ್ಯಕ್ರಮಗಳು ಬಹಳಷ್ಟು ಜನಪ್ರಿಯವಾಗಿದ್ದವು. ಅವರು ದುಬೈನಲ್ಲಿ ನಡೆಸಿದ "ಪರ್ವಾಜ್" ಕಾರ್ಯಕ್ರಮ ಇಂದಿಗೂ ಬಹಳ ಅದ್ಭುತವಾಗಿದೆ. ಅವರು ಸಂಗೀತ ನಿರ್ದೇಶಕನಾಗಿ ದುಡಿದ ಚಿತ್ರ "ಅರ್ಥ" ದ ಹಾಡುಗಳು ಇಂದಿಗೂ ಬಹಳಷ್ಟು ಜೀವಂತವಾಗಿವೆ.

"ತುಂ ಇತನ ಜೋ ಮುಸ್ಕುರಾ ರಹೇ ಹೋ

  ಕ್ಯಾ ಘಂ ಹೈ ಜಿಸಕೋ ಛುಪಾ ರಹೇ ಹೋ"... ಯಾರೂ ಮರೆಯಲಾರರು. ಅಲ್ಲದೆ ಇನ್ನಿತರ ಸಾವಿರಾರು ಹಾಡುಗಳು ಕೇಳುಗರ ಮನದಲ್ಲಿ ಮನೆ ಮಾಡಿವೆ. " ಮೇ ನಶೆ ಮೇ ಹ್ಞೂ" ಅವರ ಇನ್ನೊಂದು ಜನಪ್ರಿಯ ಹಾಡು. ಅಷ್ಟೇ ಅಲ್ಲದೆ ಅವರಿಗೆ ಬಹಳಷ್ಟು ಯಶಸ್ಸನ್ನು ತಂದು ಕೊಟ್ಟ ಗೀತೆ " ಹೊಟೋ ಸೆ ಚೂಲೋ ತುಂ, ಮೇರ ಗೀತ ಅಮರ್ ಕರ್ದೋ"  ಹಿಪ್ ಹಾಪ್, ರಾಕ್ ಗಳ ಈ ಕಾಲ ಘಟ್ಟದಲ್ಲಿಯೂ ಬಹಳಷ್ಟು ಅಮರವಾಗಿದೆ.

ಅವರ ಅನೇಕ ಹಾಡುಗಳು ಈಗ ಮನಸಿನಲ್ಲಿ ಧ್ವನಿಸುತ್ತಿದೆ...

"ಕಲ್ ಚೌಧ್ವಿ ಕಿ ರಾತ್ ತಿ", " "ವೊಹ್ ಕಾಗಜ್ ಕಿ ಕಷ್ತಿ ವೊಹ್ ಬಾರಿಶ್ ಕ ಪಾನಿ", " ಹಾತ್ ಚೂಟೆ ಭಿ ತೊಹ್ ರಿಶ್ತೆ ನಹಿ ಚೋಡ ಕರ್ತೆ", "ಹೋಶ್ ವಾಲೋನ್ ಕೋ ಖಬರ್ ಕ್ಯಾ", " ಝುಕಿ ಝುಕಿ ಸಿ ನಜರ್", " ತೇರೇ ಖುಶುಬೂ ಮೇ ಬಸೇ ಖತ್  ಕೋ ಮೇ ಜಲಾತ ಕೈಸೆ", " ಕೈಸೆ ಕೈಸೆ ಹಾದಸೆ ಸೆಹೆತೆ ರಹೇ" ಹೀಗೆ ಬರೆಯುತ್ತಿದ್ದರೆ ಬೆಳೆಯುತ್ತಲೇ ಇರುವ ಪಟ್ಟಿ. ಎಲ್ಲರ ಮನಸನ್ನು ಕೆಲವೊಮ್ಮೆ ಸಮಾಧಾನ ಪಡಿಸಿದ್ದರೆ, ಇನ್ನೊಮ್ಮೆ ಮನಸಿನ ಆ ತುಮುಲಗಳ ದರ್ಶನ ಮಾಡಿಸುತ್ತವೆ. ಆ ಗಂಭೀರ ಧ್ವನಿ ಎಂಥವರನ್ನಾದರೂ ತಮ್ಮೆಡೆಗೆ ಸೆಳೆದುಬಿಡುತ್ತವೆ. ಇಂತಹ ಸ್ವರ ಸಾಮ್ರಾಟರಿಗೆ ಜೀವನದ ಬಹು ದೊಡ್ಡ ದುರಂತವೆಂದರೆ, ತಮ್ಮ ೧೯ ವರ್ಷದ ಒಬ್ಬನೇ ಮಗ ವಿವೇಕ್ನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡದ್ದು. ಅದರ ನಂತರ ಮಡದಿ ಚಿತ್ರ ಸಂಗೀತ ಕಾರ್ಯಕ್ರಮಗಳನ್ನು ನೀಡುವುದನ್ನು ನಿಲ್ಲಿಸಿಬಿಟ್ಟರು. ಜಗಜಿತ್ ಸಿಂಗ್ ಮತ್ತು ಗುಲ್ಜಾರ್ ರ ಸಮ್ಮಿಲನದಲ್ಲಿ ಬಂದ "ಮರಾಸಿಂ" ಹಾಡುಗಳ ಸಂಪುಟ ನಿಜಕ್ಕೂ ಅದ್ಭುತವಾದ ಒಂದು ಕೃತಿ ಎಂದೇ ಹೇಳಬೇಕು.

ಹೀಗೆಯೇ ಹಾಡುತ್ತಲೇ ಎಷ್ಟೋ ದಶಕಗಳಿಂದ ನಮ್ಮ ಮನಸಿಗೆ ಸಾಂತ್ವನ ನೀಡುತ್ತಿದ್ದ ಹಾಡು ಹಕ್ಕಿ ಇಂದಿಗೆ ತನ್ನ ಪಯಣವನ್ನು ಮುಗಿಸಿದೆ. ಈ ಲೇಖನದ ಮೂಲಕ, ನನ್ನೆದೆಯ ಗೂಡಿನಲ್ಲಿ ಉಳಿದಿರುವ ಈ ಹಾಡುಗಳನ್ನು ನೆನೆದು ಎಂದಿಗೂ ಜಗ್ಜಿತ್ರನ್ನು ನೆನೆಯಬಯಸುತ್ತೇನೆ. ಜಗಜಿತ್ ಸಹಬ್ ನಿಮಗಿದೋ ನಮ್ಮ ನುಡಿ ನಮನ.......
Rating
No votes yet

Comments