ಚಿಟ್ಟೆ ಹಿಡಿವ ಅಜ್ಜಿ

ಚಿಟ್ಟೆ ಹಿಡಿವ ಅಜ್ಜಿ

ಚಿತ್ರ

ಮೊಮ್ಮಗನ ಕೈಹಿಡಿದು ಅಜ್ಜಿ ದೂರದೂರಿನ ಬಸ್ಸು ಹಿಡಿದಿದ್ದಾರೆ. ಆ ಮೊಮ್ಮಗ ಚಿಕ್ಕವನೇನಲ್ಲ. ಹತ್ತು ವರ್ಷ ದಾಟಿದ ಚೂಟಿ ಹುಡುಗ. ಪುಟಿವ ಎಳೆತನ. ವಯಸ್ಸಾದ ಅಜ್ಜಿಯ ಮುದ್ದಿನ ಕೂಸು. ಹಾಗೆಯೆ ಅಜ್ಜಿಯೊಟ್ಟಿಗೆ ಬೇಸರವಿಲ್ಲದೆ ಸುತ್ತುವ, ಅವಳಿಗೆ ರೇಗಿಸಿ, ತರಲೆ ಮಾಡಿ, ನಗಿಸಿ ಸಾಕಪ್ಪಾ ಸಾಕು ಈ ಕೂಸಿನ ಸಹವಾಸ ಅನ್ನಿಸಿಬಿಡುವ ತರಲೆ ಅವನು.
 
ಅಜ್ಜಿ ನಗರದ ಮಗನ ಮನೆಯಲ್ಲಿದ್ದಾರೆ.  ಮೊಮ್ಮಗನೊಂದಿಗೆ  ಕಾಲ ಕಳೆಯುತ್ತಾರೆ. ಪತಿಯನ್ನು ಎಂಟು ವರ್ಷಗಳ ಹಿಂದೆ ಕಳೆದುಕೊಂಡ ದು:ಖ ಮೊಮ್ಮಗನಿಂದ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಮನೆಯಲ್ಲಿ ಎಲ್ಲರೊಂದಿಗೆ ಗಾಂಭೀರ್ಯ ಹೆಚ್ಚು.  ಅವರೆಂದರೆ ಎಲ್ಲರಿಗೂ ಗೌರವ, ಆದರಗಳು.  ಸಲಹೆಗಳಿದ್ದರೆ ಮಗ, ಸೊಸೆ ಅವರನ್ನೇ ಕೇಳುವುದು. 
 
ಮೊನ್ನೆ ಮಗನೊಂದಿಗೆ ಮಾತಾಡಿದರು, ತವರು ಮನೆಗೆ ಹೋಗಿ ಮೂರು ನಾಲ್ಕು ವರ್ಷಗಳಾಗಿವೆ, ಹಾಗಾಗಿ ಮುಂದಿನ ವಾರದಲ್ಲಿ ಅಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿದರು.
 
“ಅಮ್ಮ, ನೀನೊಬ್ಬಳೇ ಹೇಗೆ ಹೋಗುತ್ತೀಯ, ನಾವೆಲ್ಲ ಒಟ್ಟಿಗೆ ಇನ್ನು ಮೂರು ನಾಲ್ಕು ತಿಂಗಳು ಬಿಟ್ಟು ಹೋಗೋಣ” ಅಂದ ಮಗ.  
 
“ನಿನ್ನ ಕಾದರೆ ಪ್ರಯೋಜನ ಇಲ್ಲ. ನನ್ನ ತಮ್ಮ ಕರೆದಿದಾನೆ. ಅವನಿಗೂ ನನ್ನ ನೋಡಬೇಕು ಅನ್ನಿಸಿದೆಯಂತೆ.”
 
“ಆಗ್ಲಮ್ಮ, ಬಸ್ಸಲ್ಲಿ ಹೋಗ್ತೀಯ. ನಮ್ಮ ವಿಶೂನ ಕರ್ಕೊಂಡು ಹೋಗು, ಹಾಗಾದ್ರೆ. ಅವನು ಬುದ್ಧಿ ಬಂದಮೇಲೆ ಆ ಹಳ್ಳಿಗೆ ಹೋಗಿಲ್ಲ.”
 
ಮೊಮ್ಮಗನ್ನ ತನ್ನ ಜೊತೆ ಕಳುಹಿಸುತ್ತಿರುವುದಕ್ಕೆ ಖುಷಿಯಾಗಿ ಹೋಯ್ತು.  
 
“ಒಳ್ಳೆದಾಯ್ತು ಬಿಡು.  ವಿಶೂಗೆ ಹೇಗೂ ಒಂದು ವಾರ ಸ್ಕೂಲಿಗೆ ರಜವಿದೆ. ಕರ್ಕೊಂಡು ಹೋಗ್ತೀನಿ” ಅಂದರು.
 
ಸೋಮವಾರದ ಮೊದಲ ಬಸ್ಸಿಗೆ ಇಬ್ಬರ ಸವಾರಿ ೨೦೦ ಮೈಲಿ ದೂರದ ತವರಿಗೆ ಹೊರಟಿತು. ವಿಶೂ ದಾರಿಯಲ್ಲಿ ಪ್ರಶ್ನೆಗಳನ್ನು ಸುರಿಸುತ್ತಿದ್ದ. ಅಜ್ಜಿ ಸ್ವಲ್ಪವೇ ಉತ್ತರಿಸುತ್ತಾ ಗಾಢ ಯೋಚನೆಯಲ್ಲಿದ್ದರು.  ಪ್ರಯಾಣದ ಮಧ್ಯೆ ತಾವು ತೆಗೆದುಕೊಂಡುಹೋಗಿದ್ದ ಅವಲಕ್ಕಿ ಚಿತ್ರಾನ್ನ ತಿಂದರು.  ೫ ಗಂಟೆ ಪ್ರಯಾಣಿಸಿ ಸುಮಾರು ೧೧ ಕ್ಕೆ ಆ ಹಳ್ಳಿ ತಲಪಿದರು.
 
ಅವರು ಇಳಿದದ್ದು ಮುಖ್ಯ ರಸ್ತೆ. ಅಲ್ಲಿಂದ ಕಡಿಮೆ ಅಂದರೂ ಒಂದು ಮೈಲಿಯಾದರೂ ಅಜ್ಜಿ ತಾನು ಹುಟ್ಟಿ ಬೆಳೆದ ಮನೆಗೆ ನಡೆಯಬೇಕು. ಯೋಚನೆ ಈ ವಿಶೂ ಅಷ್ಟುದೂರ ನಡೆದಾನೆಯೆ ಎಂದು.
 
ವಿಶೂ ಉತ್ಸಾಹಿ. ಸಣ್ಣ ಚೀಲ ಅವನ ಹೆಗಲಲ್ಲಿ. ಮತ್ತೊಂದು ಸಣ್ಣ ಚೀಲ ಅಜ್ಜಿಯ ಕೈಯಲ್ಲಿ. ನಡೆಯತೊಡಗಿದರು. ಆಯಾಸವೆನಿಸದ ಹದ ಬಿಸಿಲು.
 
ಸ್ವಲ್ಪ ಸಮಯದಲ್ಲೆ ಎದುರಿಗೆ ಒಂದಿಬ್ಬರು ಯುವಕ ಯುವತಿಯರು ನಡೆದು ಬಂದರು. ಅಜ್ಜಿ ಅವರನ್ನು ಆಸಕ್ತಿಯಿಂದ ನಿರುಕಿಸುತ್ತಲೆ ಇದ್ದರು. ಅವರು ಯಾರೂ ಇವರ ಮಾತಾಡಿಸಲಿಲ್ಲ. 
 
"ಎಲ್ಲ ಹೊಸಬರಂತೆ ಕಾಣುತ್ತಿದ್ದಾರೆ" ಅಜ್ಜಿ ಗೊಣಗು.
 
ಇನ್ನೈದು ನಿಮಿಷಕ್ಕೆ ರಸ್ತೆ ಬದಿಯಿಂದ ಯಾರೊ ಕೂಗಿದರು. "ಯಾರದು, ನಮ್ಮ ಶಾಲಿನಿ ಥರ ಕಾಣ್ಸಿತಿದೆ"
 
ಅಲ್ಲಿ ಒಬ್ಬರು ವಯಸ್ಸಾದ ಹೆಂಗಸು ನಗುತ್ತಾ ಬರುತ್ತಿದ್ದಾರೆ. ಬಳಿ ಬಂದು ನಗುತ್ತಾ ನಿಂತರು. ಇಬ್ಬರೂ ನಗುತ್ತಲೆ ಒಬ್ಬರ ಮುಖ ಒಬ್ಬರು ನೋಡುತ್ತಲೆ ಇದ್ದರು. ನಂತರ ಮಾತು ಶುರು. ಇಬ್ಬರೂ ಸಂಭ್ರಮಿಸುತ್ತಿರುವುದು ವಿಶೂಗೆ ಗೊತ್ತಾಗುತ್ತಿತ್ತು. ಅವರು ವಿಶೂನ ಮುದ್ದು ಮಾಡಿದರು ಕೂಡ.
 
"ಎರಡು ದಿನ ಇರ್ತೀನಿ ಕಣೆ ಅಚ್ಚು. ದಿನಾ ಸಿಕ್ಕು. ತುಂಬಾ ಮಾತಾಡೊದಿದೆ.." ಹೇಳುತ್ತಾ ಬೀಳ್ಕೊಟ್ಟರು.
 
ಅಜ್ಜಿಯ ನಡಿಗೆ ವೇಗವಾಗಿದೆ. ವಿಶೂಗೆ ಆಶ್ಚರ್ಯ.
 
 "ಏನಜ್ಜಿ, ಇಷ್ಟು ಫ಼ಾಸ್ಟ್ ನಡೀತೀರ. ಮತ್ತೆ ಮನೆಯಲ್ಲಿ ನೀವು ಎಲ್ಲರಿಗಿಂತ ಸ್ಲೋ!? ನಿಮ್ಮನ್ನ ಇಲ್ಲಿ ಶಾಲಿನಿ ಅಂತ ಕರಿತಾರ? ನಂಗೆ ಗೊತ್ತೇ ಇರ್ಲಿಲ್ಲ.  ಹೆಸರು ಚೆನ್ನಾಗಿದೆ!"
 
ಅಷ್ಟರಲ್ಲಿ ಇನ್ನಿಬ್ಬರು ಹೆಂಗಸರು ಸಿಕ್ಕಿದರು. ವಿಶೂನ ಅಮ್ಮನ ವಯಸ್ಸಿನವರ ಥರದವರು.  ಅವರಿಬ್ಬರೂ ಹತ್ತಿರ ಬಂದು, "ಶಾಲಿನಿ ಆಂಟಿ, ಈವಾಗ  ಬರ್ತಾಇದೀರ. ಹೇಗಿದೀರಿ. ಇವನ್ಯಾರು. ಮೊಮ್ಮಗನ?" 
 
ಅವರೆಲ್ಲರಲ್ಲಿ ಬಹಳ ಉತ್ಸಾಹದ ಮಾತುಗಳಿದ್ದವು. ಅಜ್ಜಿಯಿಂದ ಬಹಳ ಜನಗಳ ವಿಚಾರಣೆ ನಡೆಯಿತು!  ಆ ಹೆಂಗಸರು ವರದಿ ಒಪ್ಪಿಸಿದ್ದೇ ಒಪ್ಪಿಸಿದ್ದು. 
 
"ಆಯ್ತು, ನೀವೆಲ್ಲ ನಾಳೆ ಸಿಕ್ತೀರಲ್ಲ. ನಾನು ಎರಡು ದಿನ ಇರ್ತೀನಿ" 
 
ಅವರಿಬ್ಬರೂ ಹೊರಟಮೇಲೆ ಮತ್ತೆ ನಡಿಗೆ ಶುರು.  "ಇನ್ನು ಐದು ನಿಮಿಷ ಕಣೊ ವಿಶು. ಮನೆ ಬಂತು"
 
ಆಗಲೆ ಸಿಕ್ಕಿದ್ದು ಆ ಪದ್ದಮ್ಮ ಕೂಡ. ಬಂದವರೇ "ಶಲ್ಲೂ" ಅಂತ ತಬ್ಬಿಕೊಂಡರು.  ಆಮೇಲೆ ಇಬ್ಬರೂ ಬಹಳ ಹೊತ್ತು ಬೈದಾಡಿಕೊಂಡರು! ಒಬ್ಬರಿಗೊಬ್ಬರು ಹೀಯಾಳಿಸಿದರು! ಜೊತೆಗೆ ನಕ್ಕರು!!  ಆಗಾಗ ಇಬ್ಬರ ಕಣ್ಣಲ್ಲೂ ನೀರು ಹರಿದದ್ದನ್ನು ವಿಶು ನೋಡಿದ.  ಅವರಿಬ್ಬರ ಜಗಳ ತಾನು ತನ್ನ ಕ್ಲಾಸ್ ಮೇಟ್ ಬಿಜ್ಜು ಜೊತೆ ಮಾಡುವ ಜಗಳದಂತೆ ಅನ್ನಿಸಿತು.  ಬಹಳ ಹೊತ್ತು ಆಟವಾಡಿದ ಖುಷಿಯ ದಣಿವು ಅವರಿಬ್ಬರಲ್ಲೂ. ಮತ್ತೆ ಅಜ್ಜಿ "ನಾಳೆ ಖಂಡಿತಾ ಸಿಕ್ತೀಯಲ್ಲ?" ಅಂತ ಹೊರಟುಬಿಟ್ಟರು.
 
ಇನ್ನೇನು ಮನೆ ಬಂದೇ ಬಿಡ್ತು ಅನ್ನುವುದರಲ್ಲೆ "ಶಾಲೀ.." ಯಾರೋ ವಯಸ್ಸಾದವರು ಕರೆದಂತೆ ಆಯ್ತು.  ದಾರಿ ಬದಿಯಲ್ಲಿ ಒಬ್ಬರು  ಹಿರಿಯ ವ್ಯಕ್ತಿ. ಬಿಳಿಯ ಅಂಗಿ, ಪಂಚೆ ಉಟ್ಟವರು ನಿಂತಿದ್ದರು. ವಿಶೂಗೆ ಗೊತ್ತಾಗಿದ್ದು, ಅವರು ಯಾರನ್ನು ಕರೆಯುತ್ತಿದ್ದಾರೆ ಅನ್ನುವುದು. 
 
"ಅಲ್ನೋಡಜ್ಜಿ, ನಿಮ್ಮನ್ನೆ ಅವರು ಕರೀತಿರೋದು"  ಅಂದ ವಿಶು.
 
ಅಜ್ಜಿ ಮನಸ್ಸಿಲ್ಲದ ಮನಸ್ಸಿನಿಂದ ನಿಂತಹಾಗೆ ಕಾಣಿಸಿತು.  ಒಮ್ಮೆ ಅವರನ್ನು ನೋಡಿ ಮಾತಾಡದೆ ನಿಂತಳು. ಅವರು ಸ್ವಲ್ಪ ಹತ್ತಿರ ಬಂದು, ಮೊದಲು ವಿಶೂನ ಮಾತಾಡಿಸಿದರು.
 
 "ಏನು ಪುಟ್ಟು ನಿನ್ನ ಹೆಸರು, ಏನು ಓದ್ತಾ ಇದೀಯ?".  ವಿಶು ವರದಿ ಒಪ್ಪಿಸಿದ.  ಅಜ್ಜಿ ಮೆಲ್ಲನೆ  "ಹೇಗಿದೀಯ ಸೂರಿ?" ಕೇಳಿದರು.
 
"ಚೆನ್ನಾಗಿದೀನಿ ಕಣೆ. ನಿನ್ನ ನೋಡಿ ಐದಾರು ವರ್ಷಗಳಾಯ್ತು. ಆದ್ರೂ ಏನೂ ಬದಲಾವಣೆ ಇಲ್ಲ. ಚೆನ್ನಾಗಿಯೆ ಕಾಣ್ತೀಯ"
 
ಅಜ್ಜಿ ಸ್ವಲ್ಪ ನಾಚಿದರು.  ಮತ್ತೆ ನಿಟ್ಟುಸಿರು ಬಿಟ್ಟು, "ಆಯ್ತು, ನಾ ಹೋಗಿರ್ತೀನಿ. ಮನೆಕಡೆ ನಾಳೆನೊ, ನಾಡಿದ್ದೋ ಬಾ, ಮಾತಾಡೋಣ..." .
 
ಮನೆ ಬಂದಿದ್ದೆ ತಡ, ಅಜ್ಜಿ ಹೆಜ್ಜೆಗಳು ಪುಟಿದವು. ವಿಶೂನ ಕೈ ಬಿಟ್ಟು ದಡ ದಡ ಅಂತ ಮನೆ ಮುಂಬಾಗಿಲ ಬಳಿ ಹೋಗಿ  "ಶ್ಯಾಮ.." ಅಂತ ತನ್ನ ತಮ್ಮನ ಕರೆದ ಒಂದು ನಿಮಿಷಕ್ಕೇ  ಒಳಗಿನಿಂದ ಶ್ಯಾಮ ಮತ್ತವನ ಹೆಂಡತಿ  "ಓ ಅಕ್ಕಾ.. " ಕರೆಯುತ್ತಾ ಹೊರಗೆ ತಲೆ ಇಟ್ಟರು.
 
ಆ ದಿನವೆಲ್ಲ ಅವರದೇ ಮಾತು, ಕತೆ, ಓಡಾಟ.  ಮನೆಯವರನ್ನೆಲ್ಲ ನಗುನಗುತ್ತ ಮಾತಾಡಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ ತಂಟೆ ಮಾಡುತ್ತಾ.
 
ಮರುದಿನ ಅಜ್ಜಿ ಬೇಗ ಎದ್ದು ವಿಶೂಗೆ, "ಬೇಗ ಸ್ನಾನ, ತಿಂಡಿ ಮುಗಿಸು. ತೋಟಕ್ಕೆ ಹೋಗೋಣ.  ಅಲ್ಲಿ ತುಂಬಾ ಹೂಗಿಡಗಳಿದಾವಂತೆ.  ನಾನು ಅವನ್ನೆಲ್ಲಾ ನೋಡಬೇಕು. ಹಾಗೇ ಅಲ್ಲಿ ತುಂಬಾ ಸೀಬೆ ಮರಗಳಿವೆ.  ನಿನಗೆ ಸೀಬೆ ನಾನೆ ಕಿತ್ತು ಕೊಡ್ತೀನಿ ಆಯ್ತಾ?" ಅಂದರು. 
 
ತೋಟಕ್ಕೆ ಹೊರಟಾಗ ಹಳ್ಳಿಯ ಬಹಳ ಜನ ಸಿಕ್ಕಿದರು. ಅವರೆಲ್ಲ ಅಕ್ಕರೆಯಿಂದ ವಿಶೂನನ್ನೂ ಮಾತಾಡಿಸುತ್ತಿದ್ದರು. ಹೇಳತೀರದ ಸಂಭ್ರಮದಲ್ಲಿ ವಿಶೂನ ಕೈಹಿಡಿದು ಪುಟ್ಟ ಹುಡುಗಿಯಂತೆ ನಡೆಯುತೊಡಗಿದರು ಅಜ್ಜಿ.
 
ವಿಶೂಗೆ ಅಚಾನಕ ಅನ್ನಿಸಿದ್ದು ಅಜ್ಜಿ ತನ್ನ ತರಗತಿಯ ಗೆಳತಿ ಚಂಪಾಳಂತೆ ಚೂಟಿಯಾಗಿ, ಚುರುಕು, ಲವಲವಿಕೆಯಲ್ಲಿ, ಆಟವಾಡಿತ್ತಿರುವ ರೀತಿ ಬದಲಾಗಿದ್ದಾರೆ!
 
ತಾನು ಕಬಡ್ಡಿ, ಝೂಟಾಟ ಆಡಲೂ ಬಹುದೇನೋ ಅನ್ನಿಸಿತು!  ತೋಟದಲ್ಲಿ ಹೂಗಿಡಗಳಿವೆಯಂತೆ. ಹಾಗಾದರೆ ಅಲ್ಲಿ ತುಂಬಾ ಚಿಟ್ಟೆಗಳು ಹಾರಾಡುತ್ತಿರುತ್ತವೆ. ಅಜ್ಜಿ ಖಂಡಿತ ಎರಡಾದರೂ ಒಳ್ಳೆಯಬಣ್ಣದ ಚಿಟ್ಟೆ ಹಿಡಿದು ಕೊಡುತ್ತಾಳೆ ಅನ್ನುವ ಭರವಸೆ ಅವನಿಗೆ ಬಂತು. 
 
ತನ್ನ ಅಜ್ಜಿ ಇಲ್ಲಿಗೆ ಬಂದಮೇಲೆ ಹುಡುಗಿಯಾಗಿಬಿಟ್ಟದ್ದು ಹೇಗೆ ಅಂತ ವಿಶೂ ಮತ್ತೆ ಮತ್ತೆ ಆಶ್ಚರ್ಯಪಡುತ್ತಲೇ ಇದ್ದ. ಅವನ ಹೆಜ್ಜೆಗಳು ’ಶಾಲಿನಿ’ ಯಷ್ಟು ವೇಗವಿಲ್ಲ ಅನ್ನುವುದೂ ಅವನ ತಿಳಿವಳಿಕೆಗೆ ಬರತೊಡಗಿತು.  ಆದಷ್ಟೂ ರಭಸ ಹೆಚ್ಚಿಸಿಕೊಳ್ಳುವ   ಸ್ಪರ್ಧೆಗೆ ಅವನ ಕಾಲುಗಳು ತಯಾರಾಗತೊಡಗಿದವು.
 
***
-ಅನಂತ ರಮೇಶ್
(ಚಿತ್ರ ಕೃಪೆ:ಅಂತರ್ಜಾಲ)
 
 

Rating
No votes yet

Comments