ಚೀನಾದಲ್ಲಿ ಜೀವಿಸಲು ಕಾರಣಗಳೆ ಇಲ್ಲವಂತೆ ?!
"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ್ಕೂ ಗಾಬರಿಯಾಯಿತು. 132 ಕೋಟಿ ಜನರ, ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದಲ್ಲಿಯೆ ಅತಿ ದೊಡ್ಡ ದೇಶವಾದ ಚೀನಾದ ಅಷ್ಟೂ ಜನರನ್ನು ಕಾರಣಗಳಿಲ್ಲದ ಬದುಕುತ್ತಿರುವ ಜನ ಎಂದು ಭಾವಿಸುವುದು ಕೇವಲ ಅಮಾನವೀಯ ಮಾತ್ರವಲ್ಲ ಜೀವವಿರೋಧಿಯೂ ಸಹ, ಅಲ್ಲವೆ?
ರವೀಂದ್ರ ಭಟ್ಟ ಎನ್ನುವವರು ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು. ಆಗಸ್ಟ್‌ನಲ್ಲಿ ಕರ್ನಾಟಕದ ಶಾಸಕರ ಎರಡು ತಂಡಗಳು
ಚೀನಾ ಪ್ರವಾಸ ಮಾಡಿದ್ದು ನಿಮಗೆ ನೆನಪಿರಬಹುದು. ಆ ಪ್ರವಾಸವನ್ನು ಕವರ್ ಮಾಡಲು ಪ್ರಜಾವಾಣಿ ವತಿಯಿಂದ ನಿಯುಕ್ತರಾದವರು ಭಟ್ಟರು. ಶಾಸಕರ ಪ್ರವಾಸದ ಬಗ್ಗೆ, ಅಲ್ಲಿ ಶಾಸಕರು ಮೊಬೈಲ್ ಸಿಮ್‌ಕಾರ್ಡ್ ದೊರಕಿಸಿಕೊಂಡ ಬಗ್ಗೆ, ಕನ್ನಡದ ಕುಟುಂಬವೊಂದು ಶಾಸಕರಿಗೆ ಭಾಷೆಯ ಮತ್ತು ಇಡ್ಲಿಸಂಬಾರ್‌ನಂತಹ ಭಾರತೀಯ ಊಟತಿಂಡಿಯ ವಿಚಾರಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಇವರು ಚೀನಾದಿಂದಲೆ ಪ್ರಜಾವಾಣಿಗೆ ಬರೆಯುತ್ತಿದ್ದ ನೇರಪ್ರಸಾರದ ವರದಿಗಳನ್ನು ಮುಂಚೆಯೇ ಓದಿದ್ದೆ. ಅವರು ಬರೆದದ್ದೆಲ್ಲವೂ ಬಹಳ ಮಟ್ಟಿಗೆ Human Interest Stories. ಆದರೆ ರಾಜ್ಯದ ಜನತೆಯ ಖರ್ಚಿನಲ್ಲಿ ಪ್ರವಾಸ ಹೋಗಿದ್ದ ಶಾಸಕರ ಮೂಲ ಉದ್ದೇಶವಾಗಿದ್ದ ಚೀನಾದ ಅಭಿವೃದ್ಧಿಯನ್ನು ಕುರಿತಾಗಿ ಶಾಸಕರು ಕಲಿತದ್ದನ್ನಾಗಲಿ, ಕಲಿಯಲು ಪ್ರಯತ್ನಿಸಿದ್ದಾನ್ನಾಗಲಿ ಭಟ್ಟರು ಬರೆದದ್ದು ಕಂಡುಬರಲಿಲ್ಲ. ಇದಕ್ಕೆ ಕಾರಣ ಅವರು ಬರೆಯದೆ ಇರುವುದಾಗಿರಬಹುದು ಅಥವ ಆ ಲೇಖನ ನನಗೆ ಕಾಣಸಿಗದೆ ಹೋಗಿದ್ದೂ ಆಗಿರಬಹುದು.
ಆದರೆ, ಪ್ರವಾಸ ಮುಗಿದ ನಂತರ ಭಟ್ಟರು ತಮ್ಮ ಇಡೀ ಪ್ರವಾಸದ ಅನುಭವವನ್ನು, ಗ್ರಹಿಕೆಯನ್ನು ಸಾಪ್ತಾಹಿಕ ಪುರವಣಿಯ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಎದ್ದು ಕಾಣುವುದು, "ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ," "ಚೀನಾದಲ್ಲಿ ವೈವಿಧ್ಯತೆಯೆ ಇಲ್ಲ, ಅದರಿಂದಾಗಿ ಅಲ್ಲಿ ಜೀವನಾಸಕ್ತಿಯೇ ಇಲ್ಲ," "ಭಾರತದಲ್ಲಿಯ ಭಾಷಾ ವೈವಿಧ್ಯದಿಂದಾಗಿ ಹಾಗೂ ಜಾತಿವ್ಯವಸ್ಥೆಯಿಂದಾಗಿ ಇಲ್ಲಿ ಜೀವನೋತ್ಸಾಹ ಉಕ್ಕಿ ಹರಿಯುತ್ತಿದೆ," "ಅಲ್ಲಿ ದೇವಸ್ಥಾನ ಎಂಬುದಿಲ್ಲ, ಇರುವುದೆಲ್ಲ ಸ್ಮಾರಕಗಳೆ ಹಾಗೂ ಅಲ್ಲಿ ಇಂಗ್ಲಿಷ್ ಕಲಿತವರು ಕ್ರೈಸ್ತ ಮತವನ್ನೂ ಸ್ವೀಕರಿಸುತ್ತಿದ್ದಾರೆ," "ಅಲ್ಲಿ ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ," ಎನ್ನುವಂತಹ ಭಾರತ ಮತ್ತು ಚೀನಾದ ಸಾಮಾಜಿಕ ಸ್ಥಿತಿಗತಿಗಳನ್ನು ತುಲನೆ ಮಾಡುವ ಖಡಾಖಂಡಿತ ಮಾತುಗಳು.
ಕಳೆದ ಆರು ವರ್ಷಗಳಿಂದ ಚೀನಾ ಮೂಲದ ನಾಲ್ಕಾರು ಜನರೊಡನೆ ಸ್ವತಃ ಒಡನಾಡಿದ ಅನುಭವವುಳ್ಳ, ಕೆಲಸದ ಪ್ರಯುಕ್ತ ಒಂದಿಬ್ಬರೊಡನೆ ಪ್ರತಿದಿನವೂ ವ್ಯವಹರಿಸಬೇಕಾದ ಅಗತ್ಯತೆ ಇರುವ ನನಗೆ ಭಟ್ಟರ ಲೇಖನ ಪಕ್ಕಾ Racist ಮಾತ್ರವಲ್ಲ, ದುರುದ್ದೇಶಪೂರಿತವಾದ, ಅವರಿಗಷ್ಟೆ ಗೊತ್ತಿರಬಹುದಾದ ದ್ವೇಷಮಯ ಕಾರಣಗಳಿಂದ ಪ್ರೇರಿತವಾದದ್ದು ಎನ್ನಿಸಿತು.
ಇಷ್ಟೇ ಅಪಾಯಕಾರಿಯಾದದ್ದು ಜಾತಿವಾದಕ್ಕೆ ಭಟ್ಟರು ಕೊಡುತ್ತಿದ್ದ ನೇರ ಸಮರ್ಥನೆ. 'ಭಾರತದಲ್ಲಿಯ ಜೀವನೋತ್ಸಾಹಕ್ಕೆ ಇಲ್ಲಿರುವ ಜಾತಿವೈವಿಧ್ಯತೆಯೂ ಒಂದು ಪ್ರಮುಖ ಕಾರಣ' ಎನ್ನುವ ನೂತನ-ಸಂಶೋಧನೆಯನ್ನು ಎರಡು ಕಡೆ ಒತ್ತಿ ಹೇಳುತ್ತಾರೆ. ಇವರ ಪ್ರಕಾರ ಜಾತಿವೈವಿಧ್ಯ ಹಾಗೂ ಭಾಷಾವೈವಿಧ್ಯಗಳಿಲ್ಲದ ಸಮಾಜ ಮತ್ತು ದೇಶಗಳಲ್ಲಿ ಜೀವನೋತ್ಸಾಹ ಇಲ್ಲ ಮತ್ತು ಅಲ್ಲಿನ ಜನಕ್ಕೆ ಜೀವಿಸಲು ಕಾರಣಗಳೂ ಇಲ್ಲ.
ಕನ್ನಡದ ಪತ್ರಕರ್ತರಾಗಿರುವ ರವೀಂದ್ರ ಭಟ್ಟರಿಗೆ ಚೀನಾದಲ್ಲಿಯ ಬಹುಸಂಖ್ಯಾತ ಜನ ಮಾತನಾಡುವ ಮ್ಯಾಂಡರಿನ್ ಭಾಷೆಯಾಗಲಿ, ಅಥವ ಕ್ಯಾಂಟೊನಿಸ್ ಭಾಷೆಯಾಗಲಿ ಗೊತ್ತಿರುವ ಸಾಧ್ಯತೆ ಕಡಿಮೆ ಎಂದು ಭಾವಿಸಿಕೊಳ್ಳುತ್ತ ಹೇಳಬಹುದಾದರೆ, ಅವರು ಕನಿಷ್ಠ ಒಂದೆರಡು ಚೀಣೀ ಕುಟುಂಬಗಳೊಡನೆ ಒಡನಾಡಿರುವ ಸಾಧ್ಯತೆಗಳೂ ಇಲ್ಲ ಎಂದುಕೊಳ್ಳಬಹುದು. ಅಷ್ಟಕ್ಕೂ ಅವರು ಹೋಗಿದ್ದದ್ದು ನಮ್ಮ ಸರ್ಕಾರದ ಖರ್ಚಿನಲ್ಲಿ ಮತ್ತು ಬಹುಶಃ ಅಲ್ಲಿನ ಸರ್ಕಾರದ ಅತಿಥಿಯಾಗಿ. ಈ ತರಹದ "ಅಧಿಕೃತ ಪ್ರವಾಸ" ದಲ್ಲಿ ಆಗಬಹುದಾದ ಅನುಭವಗಳ ಆಧಾರದ ಮೇಲೆಯೆ 132 ಕೋಟಿ ಜನಸಂಖ್ಯೆಯ ಚೀನಾದಲ್ಲಿ "ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ" ಎನ್ನುವುದು ಅಹಂಕಾರದ ಮಾತಷ್ಟೆ ಅಲ್ಲ, ಅದು ಓದುಗರಿಗೂ ಮಾಡುವ ಅಪಚಾರ ಮತ್ತು ಮೋಸ.
ಈ ಲೇಖನವನ್ನು ಓದಿದ ಮಾರನೆಯ ದಿನವೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಚೀನಾದಿಂದ ಅಮೇರಿಕಕ್ಕೆ ಬಂದಿರುವ ನನ್ನ ಸಹೋದ್ಯೋಗಿಯನ್ನು ಕಾಫಿಗೆ ಕರೆದುಕೊಂಡು ಹೋಗಿ, "ಚೀನಾದಲ್ಲಿಯ ಕುಟುಂಬ ವ್ಯವಸ್ಥೆ ಮತ್ತು ನಿಮ್ಮ ಕೆಲವು ಕೌಟುಂಬಿಕ ವಿಚಾರಗಳನ್ನು ಹೇಳಿ," ಎಂದೆ. ನಾನು ಕಳೆದ ಸಾರಿ ಒಬ್ಬನೆ ಭಾರತಕ್ಕೆ ಬಂದಿದ್ದಾಗ ನಮ್ಮ ಮನೆಗೂ ಬಂದು ನನ್ನ ಹೆಂಡತಿಯನ್ನೂ, ಪುಟ್ಟ ಮಗುವನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದ ಆಕೆಗೆ ನನ್ನ ಬಗ್ಗೆ ಬಹಳ ವಿಶ್ವಾಸವಿದೆ. ಹಾಗಾಗಿ ಆಕೆ ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಮುಕ್ತವಾಗಿ ಹೇಳಿದಳು. ತನಗೆ ಹೇಳಲು ಗೊತ್ತಾಗದೆ ಇದ್ದದ್ದನ್ನು ತನ್ನ ಇನ್ನೊಬ್ಬ ಚೀಣೀ ಸ್ನೇಹಿತೆಯನ್ನು ಕರೆದು ಆಕೆಯಿಂದ ಹೇಳಿಸಿದಳು. ಆಕೆ ಎರಡನೆಯ ತಲೆಮಾರಿನ ಚೀಣೀ ಕ್ರೈಸ್ತಳು. ಮದುವೆಯಾಗಿರುವುದು ಬೌದ್ಧ ಮತದ ಮೂಲದವನನ್ನು. ನಮ್ಮಲ್ಲಿಯ ಅಂತರ್ಜಾತೀಯ ವಿವಾಹಕ್ಕೆ ಎದುರಾಗುವ ಅಡ್ಡಿಗಳ ಹಿನ್ನೆಲೆಯಲ್ಲಿ 'ಚೀನಾದಲ್ಲಿ ಕ್ರೈಸ್ತರು ಬೌದ್ಧ ಮತದವರನ್ನು ಮದುವೆಯಾಗಲು ಸಮಾಜ ಅಡ್ಡಿ ಮಾಡುವುದಿಲ್ಲವೆ' ಎಂದು ಕೇಳಿದೆ. ಅದಕ್ಕೆ ಆಕೆ ನನ್ನತ್ತ ಕನಿಕರದಿಂದ ನೋಡಿದಳು! ಅವರಿಬ್ಬರೊಡನೆ ಮಾತನಾಡಿದ ಮೇಲೆ ನನಗೆ ಭಟ್ಟರ ಬಗ್ಗೆ ಮತ್ತು ಅವರ ದುರುದ್ದೇಶಪೂರಿತ, ಪೂರ್ವಗ್ರಹಪೀಡಿತ, ಅರೆಬರೆ ಸುಳ್ಳುಗಳ ಲೇಖನದ ಬಗ್ಗೆ, ಮತ್ತು ನಮಗೆ ಓದಲು ಸಿಗುವ ಲೇಖನಗಳ ಖಚಿತತೆಯ ದುರದೃಷ್ಟತೆಯ ಬಗ್ಗೆ ಕನಿಕರ ಹೆಚ್ಚುತ್ತ ಹೋಯಿತು.
ಭಟ್ಟರ ಹಾಗೆ ಪ್ರವಾಸ ಹೋಗಿಬಂದವರು ಬರೆದದ್ದನ್ನು ಸಾಮಾನ್ಯವಾಗಿ ಬಹಳಷ್ಟು ಜನ ಮುಗ್ಧ ಓದುಗರು ಪ್ರಶ್ನಿಸದೆ ಒಪ್ಪಿಕೊಂಡು ಬಿಡುತ್ತಾರೆ. ಇವೆಲ್ಲವೂ ಇನ್ನೊಂದು ದೇಶದ ಬಗ್ಗೆ ಲೇಖಕರೊಬ್ಬರು ನೀಡುತ್ತಿರುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ದಾಖಲೆಗಳು. ಓದುಗರು ಇಂತಹ ಲೇಖನಗಳ ಆಧಾರದ ಮೇಲೆ ಒಂದು ಇಡೀ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾರೆ. ಹಾಗಾಗಿಯೆ ಇಂತಹ ಲೇಖನಗಳನ್ನು ಬರೆಯುವಾಗ ಬರಹಗಾರರು ಬಹಳ ಎಚ್ಚರಿಕೆಯಿಂದ ಇರಬೇಕು. ಇದೇ ಲೇಖನ ಇಂಗ್ಲಿಷಿನಲ್ಲಿಯೊ, ಅಂತರ್ಜಾಲದಲ್ಲಿಯೊ ಬಂದಿದ್ದರೆ ಅದರ ಸರಿತಪ್ಪುಗಳ ಬಗ್ಗೆ ಯಾರಾದರೂ ಪ್ರತಿಕ್ರಿಯಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂತಹ ಸಂದರ್ಭಗಳಲ್ಲಿ ಕೊನೆಗೆ ನಿಲ್ಲುವುದು ಅದರ ಸರಿತಪ್ಪುಗಳ ಚರ್ಚೆಯ ಅಂತಿಮ ಮಾತು. ಆದರೆ ಕನ್ನಡದ ಪತ್ರಿಕೆಗಳ ಮಟ್ಟಿಗೆ ಹೇಳಬಹುದಾದರೆ ಇಂತಹ ವಿಷಯಕ್ಕೆ ನಾವು ದುರದೃಷ್ಟವಂತರು. ಯಾರೂ ಪ್ರತಿಕ್ರಿಯಿಸದೆ ಹೋಗುವ ಸಂಭವ ಹೆಚ್ಚಿರುವಾಗ ಲೇಖಕನ ಅರೆಬರೆ ಮಾತುಗಳೆ ಅಂತಿಮ ಸತ್ಯವಾಗಿ ಬಿಡುತ್ತದೆ.
ಇದನ್ನೆಲ್ಲ ನಮ್ಮವರು ಗಮನಿಸುವುದು ಯಾವಾಗ?
(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 5, 2007 ರ ಸಂಚಿಕೆಯಲ್ಲಿನ ಬರಹ)
ಪ್ರಜಾವಾಣಿಯಲ್ಲಿಯ ರವೀಂದ್ರ ಭಟ್ಟರ ಲೇಖನ:
http://www.prajavani.net/Content/Sep162007/weekly2007091445995.asp