ಚೀನೀ ಧಾಳಿ
ಈ ಅಕ್ಕಪಕ್ಕದ ಮನೆಯವರಿಂದಾಗಿ ನೆಮ್ಮದಿಯಲ್ಲಿ ಬಾಳುವುದು ನಮ್ಮ ಹಣೆಯಲ್ಲಿ ಬರೆದಿಲ್ಲ. ಇತ್ಲಾಗೆ ಬಾಂಗ್ಲಾ, ಅತ್ಲಾಗೆ ಪಾಕ್, ಮೇಲೆ ಚೀನಾ.. ಬಾಡಿಗೆ ಮನೆಯವರಾದರೆ ಇಂದಲ್ಲದಿದ್ದರೆ ನಾಳೆ ಬಿಟ್ಟುಹೋಗುತ್ತಾರೆ ಎಂದು ಅಡ್ಜಸ್ಟ್ ಮಾಡಿಕೊಂಡು ಇರಬಹುದು. ಇಲ್ಲಿ ಅದೂ ಸಾಧ್ಯವಿಲ್ಲ.
ಈ ಮ್ಯಾಡ್ ಇನ್ ಚೈನಾ ಮಂದಿಗೆ "ಅರುಣಾಚಲ"-ದಕ್ಷಿಣ ಟಿಬೆಟ್ ಅಂತೆ! ನಮ್ಮ "ಬಳ್ಳಾರಿ ಬೆಟ್ಟ" ಸಹ ಟಿಬೆಟ್ಟದಂತೆ ಗೋಚರಿಸಿತೋ ಏನೋ, ಅಲ್ಲಿನ ಅದಿರನ್ನು ಖಾಲಿ ಮಾಡಲು ಹೊರಟಿದ್ದರು. (ನಮ್ಮ ಚೈನಿ ಮಂದಿನೂ ಅವರಿಗೆ ಸಾಥ್ ನೀಡಿದ್ದರು ಬಿಡಿ)
ಅಕ್ಷಯ್‌ಚಿನ್ ನಮ್ಮದು ಅಂದರು.ತಪ್ಪು ಅವರದಲ್ಲ. "ಚಾಂದಿನಿ ಚೌಕ್ ಟು ಚೈನಾ"ದಲ್ಲಿ ಚೈನೀಸ್ ತರಹ ಆಕ್ಟ್ ಮಾಡಿದನಲ್ಲಾ-"ಅಕ್ಷಯ್"ಕುಮಾರಂದು! ನಮ್ಮ ಪುಣ್ಯ, ಚಿತ್ರ ತೋಪೆದ್ದು ಹೋಯಿತು. ಇಲ್ಲದಿದ್ದರೆ ಚೈನೀಸ್ ಮಂದಿ "ಚೈನಾ ಟು ಚಾಂದಿನಿ ಚೌಕ್" ಬಂದು ಬಾಲಿವುಡ್ ಪೂರ್ತಿ ಅವರೇ ತುಂಬಿರುತ್ತಿದ್ದರು.
ಸದ್ಯಕ್ಕೆ ಅವರು ಬರದಿದ್ದರೂ........ಮಕ್ಕಳ ಆಟಿಕೆಗಳು, ಸೊಳ್ಳೆ ಹೊಡೆಯುವ ಬ್ಯಾಟ್‌ನಿಂದ ಹಿಡಿದು, ದೀಪಗಳು, ಮೊಬೈಲ್..., ಎಲ್ಲಾ ಭಾರತದಲ್ಲಿ ಮೂರು ಕಾಸಿಗೆ ಸಿಗುತ್ತಿದೆ. ನಮ್ಮ ಕೆಲ ಯುವಕರೂ ಸಹ ಇಲ್ಲಿನ ಯೋಗ ಬಿಟ್ಟು ಅಲ್ಲಿನ "ತಾಯ್‌ಚೀ" ಕಲಿಯುತ್ತಿದ್ದಾರೆ.
ಇವೆಲ್ಲಕ್ಕಿಂತಲೂ ಬೇಸರದ ಸಂಗತಿ ಅಲ್ಲಿನ ಮೂಢನಂಬಿಕೆಗಳು ನಮ್ಮ ಮನೆಮನೆಯೊಳಗೆ ಹೊಕ್ಕಿವೆ- ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಅವನ ಟಿ.ವಿಯ ಮೇಲೆ ಈ "ಕಪ್ಪೆ" ಕೂತಿತ್ತು.
"ಡಿಸ್ಕವರಿ ಚಾನಲ್ ನೋಡುವಾಗ ಒಂದು ವಿಚಿತ್ರ ಕಪ್ಪೆ ಟಿ.ವಿಯೊಳಗಿಂದ ಮೇಲಕ್ಕೆ ಜಿಗಿದಿದೆ ನೋಡು" ಎಂದು ಹೇಳಿದೆ. " ಇಲ್ಲ. ಅದು ೩ ಕಾಲಿನ ಕಪ್ಪೆ. ಚೀನಾದವರ ಪ್ರಕಾರ ಅದೃಷ್ಠದ ಸಂಕೇತ. ಹಣ ಒದ್ದುಕೊಂಡು ಮನೆಯೊಳಗೆ ಬರುತ್ತದೆ!" ಅಂದ. ನಂತರ ಅವನ ಮನೆಯಲ್ಲಿದ್ದ ಕೆಲವು ಚೀನೀ ಮೂಢನಂಬಿಕೆಯ ಐಟಂಗಳನ್ನು ತೋರಿಸಿದನು.
"ನೋಡು, ತಪ್ಪು ತಿಳಿಯಬೇಡ. ಈ ಚೀನಾದವರನ್ನು ನಂಬಲಾಗುವುದಿಲ್ಲ. ಆ ಕಪ್ಪೆಯ ಕಣ್ಣು ನೋಡಿದರೆ ನನಗೆ ಡೌಟ್ ಬರುತ್ತದೆ. ಇಲ್ಲಿಂದ ನಿಮ್ಮ ಮನೆ ಸಂಗತಿಯೆಲ್ಲಾ ಚೀನಾಕ್ಕೆ ರವಾನೆಯಾಗುತ್ತಿರಬಹುದು. ಅದೂ ಬೇರೆ ನೀವು ಎಲ್ಲರೂ, ಮನೆಯಲ್ಲೂ ಇಂಗ್ಲೀಷಲ್ಲೇ ಮಾತನಾಡುವುದು. ಚೀನೀಯರಿಗೆ ಚೀನೀ ಬಾಷೆ ಬಿಟ್ಟರೆ ಇಂಗ್ಲೀಷಲ್ಲಿ ಆಸಕ್ತಿ ಜಾಸ್ತಿ..." ಎಂದು ಹೆದರಿಸಿದೆ.
"ಹಾಗಿದ್ದರೆ, ನೀನೇ ತೆಗೆದುಕೊಂಡು ಹೋಗು ಮಾರಾಯ. ನಿಮ್ಮಲ್ಲಿ ಎಲ್ಲರೂ ಕನ್ನಡ ಮಾತನಾಡುವುದಲ್ಲವಾ.." ಅಂದನು.
"ಅದೇ ತೊಂದರೆಯಾಗಿರುವುದು. ನಮ್ಮ ಕನ್ನಡದ ಮಾತು ಅವರಿಗೆ ಇಷ್ಟವಾಗಿ, ಆ ಕೋಟ್ಯಾಂತರ ಚೀನೀಯರು ಕನ್ನಡ ಕಲಿಯಲು ಹೊರಟರೆ............!!!!!!!!"
-ಗಣೇಶ.
Comments
ಉ: ಚೀನೀ ಧಾಳಿ
In reply to ಉ: ಚೀನೀ ಧಾಳಿ by venkatb83
ಉ: ಚೀನೀ ಧಾಳಿ
In reply to ಉ: ಚೀನೀ ಧಾಳಿ by ಗಣೇಶ
ಉ: ಚೀನೀ ಧಾಳಿ
In reply to ಉ: ಚೀನೀ ಧಾಳಿ by venkatb83
ಉ: ಚೀನೀ ಧಾಳಿ
In reply to ಉ: ಚೀನೀ ಧಾಳಿ by ಗಣೇಶ
ಉ: ಚೀನೀ ಧಾಳಿ