- ಚೌಕಟ್ಟು -

- ಚೌಕಟ್ಟು -

ನನ್ನ ಕವಿತೆಗಳು ಅಡಿಗೆ ಮನೆಯಿಂದ ಹೊರ ಬರುವುದೇ ಇಲ್ಲ.

ಪಾತ್ರೆ ತೊಳೆಯುವಾಗ ಅಕ್ಕಿ ಬೇಯಿಸುವಾಗ
ಚಪಾತಿ ಲಟ್ಟಿಸುವಾಗ ಹಪ್ಪಳ ಕಾಯಿಸುವಾಗ
ಪದಗಳು ಜೋಡುತ್ತವೆ.

ತೊಳೆದ ಪಾತ್ರೆಯಲ್ಲಿ
ಬೇಯಿಸಿದ ಅನ್ನದಲ್ಲಿ
ಕಾಯ್ದ ಹಪ್ಪಳದಲ್ಲಿ
ನನ್ನ ಕವಿತೆಗಳು ಹುಟ್ಟಿಕೊಳ್ಳುತ್ತವೆ.
ಚಪ್ಪರಿಸಿದವರ ಬಾಯಿಗಳಲ್ಲಿ ನಲಿಯುತ್ತವೆ.

ನನ್ನ ಕತೆಗಳು ಮನೆ ಬಿಟ್ಟು ಹೊರ ಹೋಗುವುದೇ ಇಲ್ಲ.

ಕಸ ಗುಡಿಸುವಾಗ ನೆಲ ವರೆಸುವಾಗ
ಬಟ್ಟೆ ಒಗೆಯುವಾಗ ಮನೆ ಸಿಂಗರಿಸುವಾಗ
ಪಾತ್ರಗಳು ಮಾತನಾಡುತ್ತವೆ.

ಸ್ವಚ್ಛಗೊಂಡ ನೆಲದಲ್ಲಿ
ಒಣಗಿದ ಬಟ್ಟೆಗಳಲ್ಲಿ
ಸಿಂಗಾರಗೊಂಡ ಮನೆಯೊಳಗೆ
ನನ್ನ ಕತೆಗಳು ಅರ್ಥಪಡೆದುಕೊಳ್ಳುತ್ತವೆ.
ಮನೆಯೊಳಗಿನ ಮನಗಳಲ್ಲಿ ನೆಲೆ ನಿಲ್ಲುತ್ತವೆ.

ನನ್ನ ಕವಿತೆಗಳು ನನ್ನ ಕತೆಗಳು
ಮನೆಯಲ್ಲಿ ನಲಿದರೂ ...
ಮನಗಳಲ್ಲಿ ನೆಲೆ ನಿಂತರೂ ...

ಅಕ್ಷರಗಳಾಗುವುದಿಲ್ಲ.
ಹಾಳೆಗೆ ಇಳಿಯುವುದಿಲ್ಲ.

ಹೊತ್ತಗೆಯ ರೂಪವನ್ನಂತೂ ...
ಹೊರುವುದೇ ಇಲ್ಲ.

Rating
No votes yet

Comments