ಜಗತ್ತಿನ ಮನಗೆದ್ದ ಹಿಂದೂ ಸಂನ್ಯಾಸಿ ಸ್ವಾಮಿ ವಿವೇಕಾನಂದ

ಜಗತ್ತಿನ ಮನಗೆದ್ದ ಹಿಂದೂ ಸಂನ್ಯಾಸಿ ಸ್ವಾಮಿ ವಿವೇಕಾನಂದ

 

  "ವಿವೇಕಾನಂದ" ಹೆಸರೇ ಅದ್ಭುತ!ಬಹುಷ: ಸ್ವಾಮಿ ವಿವೇಕಾನಂದರ ಹೆಸರು ಮಾಡಿರುವಷ್ಟು ಪರಿಣಾಮವನ್ನು ಬೇರೆ ಯಾವುದೇ ಹೆಸರು ಮಾಡಿರಲು ಸಾಧ್ಯವಿಲ್ಲ! ಅವರ ಮಾತಿಗೇಕೆ ಅಷ್ಟು ಶಕ್ತಿ! ಅಮೆರಿಕೆಯ ಜನಗಳನ್ನು ಮಂತ್ರಮುಗ್ಧಗೊಳಿಸಿದ ಆ ಮಾತುಗಳಲ್ಲಿ ಅಂತಹ ಅದ್ಭುತ ಶಕ್ತಿ ಹೇಗೆ ಬಂತು? ಯಾವಾಗಲೂ ಹಾಗೆ, ಮಾತನಾಡುವ ವ್ಯಕ್ತಿಯ ತಪಸ್ಸಿಗೆ ಆ ಶಕ್ತಿ ಇರುತ್ತದೆ! ವಿವೇಕಾನಂದರು  ಭಾಷಣ ಆರಂಭಿಸಿದ್ದು “ಅಮೆರಿಕೆಯ ನನ್ನ ನೆಚ್ಚಿನ ಅಕ್ಕ ತಂಗಿಯರೇ, ಅಣ್ಣ- ತಮ್ಮಂದಿರೇ” … ಸಭಾಭವನ ಕಿತ್ತು ಹೋಗುವಂತೆ ಜನರ  ಚಪ್ಪಾಳೆ! ಸ್ವಾಮೀಜಿ ಅದೇನು ಮೋಡಿ ಮಾಡಿದರು? ಸ್ವಾಮೀಜಿ ವೇದಿಕೆಯ ಮೇಲೆ ಆಡಿದ ಎರಡು ಮಾತಿಗೆ ಸಿಕ್ಕಿದ ಚಪ್ಪಾಳೆಯಲ್ಲಾ ಅದು. ಪ್ರಪಂಚದ ಅತ್ಯಂತ ಪುರಾತನವಾದ ಭಾರತೀಯ ಸಂಸ್ಕೃತಿಯ ಬಗ್ಗೆ ಸ್ವಾಮೀಜಿಯವರಿಗಿದ್ದ ಅತೀವ ಶ್ರದ್ಧೆ! ಸಹಸ್ರಾರು ಋಷಿಮುನಿಗಳ ತಪಸ್ಸಿನ ಫಲವಾದ “ಸನಾತನ ಹಿಂದು ಸಂಸ್ಕೃತಿಯ ವಾರಸುದಾರನಾಗಿ ನಿರ್ಭೀತಿಯಿಂದ ಸಿಡಲಿನಂತೆ ಅವರ ಬಾಯಲ್ಲಿ ಬಂದ ಆ ಮಾತುಗಳೇ ಅಲ್ಲಿನ ಜನರಿಗೆ ಮಂತ್ರವಾಗಿ ಕಂಡವು. ಯಾವುದೋ ದೇಶದಿಂದ ಬಂದು ನಮ್ಮನ್ನು  ತನ್ನೆರಡು ಮಾತುಗಳಿಂದ ಹಿಡಿದಿಟ್ಟ ಈ ಕಾವಿದಾರಿ ಸಾಮಾನ್ಯನಲ್ಲಾ..ಇವನು ಏಸುವಿನ ಅಪರಾವತಾರವೇ ಇರಬೇಕು ! ಅಲ್ಲಿನ ಜನರು ವಿವೇಕಾನಂದರ  ವಿಚಾರದಲ್ಲಿ ಹುಚ್ಚರಾಗಿದ್ದರು. ಅವರ ಭಾಷಣಗಳನ್ನು ಎಲ್ಲೆಡೆ ಏರ್ಪಡಿಸಿದರು. ಸಾವಿರಾರು ಜನರು ಅವರ ಭಾಷಣವನ್ನು  ಕೇಳಲು ಕಾತುರರಾಗಿರುತ್ತಿದ್ದರು. ಅವರಿಗೆ ಈ ಶಕ್ತಿ ಹೇಗೆ ಬಂತು? ಅವರಲ್ಲಿದ್ದ ಮಾನವೀಯ ಸಹಜ ಕಳಕಳಿ ಮತ್ತು ಸನಾತನ ಧರ್ಮ-ಸಂಸ್ಕೃತಿಯಲ್ಲಿ ಅವರಿಗಿದ್ದ ಅಚಲ ನಂಬಿಕೆ ಅವರನ್ನು ಆ ಮಟ್ಟಕ್ಕೆ ಎತ್ತರಿಸಿತ್ತು!

ಆ ಹೊತ್ತಿಗಾಗಲೇ ಭಾರತದ ಎಲ್ಲೆಡೆ ಸಂಚರಿಸಿದ್ದ ವಿವೇಕಾನಂದರಿಗೆ ಭಾರತದ ಅತ್ಯಂತ ಶ್ರೀಮಂತಿಕೆ ಹಾಗೂ ಭಾರತದ ಅತ್ಯಂತ ಬಡತನ, ಭಾರತದ ಅತ್ಯಂತ ಉನ್ನತ ಮಟ್ಟದ ವಿದ್ವಾಂಸರು ಹಾಗೂ ಅತ್ಯಂತ ಅವಿದ್ಯಾವಂತರು…ಹೀಗೆ ಸಮಾಜದ ಎಲ್ಲಾ ಸ್ಥರದ ಪರಿಚಯವು ಚೆನ್ನಾಗಿಯೇ ಆಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿದ್ದ ನೂರಾರು ರಾಜಮಹಾರಾಜರು ಹಾಗೂ ಶ್ರೀಮಂತರು ವಿವೇಕಾನಂದರನ್ನು ಕರೆದು ರಾಜೋಪಚಾರ ಮಾಡಿದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಸಂಜೆಯ ಸಮಯದಲ್ಲಿ ಊರಿನ ಹೊರಗಿರುವ ಮುರುಕಲು ಜೋಪಡಿಯಲ್ಲಿ ವಾಸವಿರುತ್ತಿದ್ದ ದೀನ ದುರ್ಬಲರು ಕೊಟ್ಟ ಒಣಗಿದ ರೊಟ್ಟಿಯನ್ನು ತಿಂದು ದೇವಸ್ಥಾನದ ಜಗಲಿಯ ಮೇಲೆ ಮಲಗಲು ಬೇಸರ ಪಡುತ್ತಿರಲಿಲ್ಲ.

ಎರಡೂ ರೀತಿಯ ಅನುಭವವು ವಿವೇಕಾನಂದರಿಗೆ ಇತ್ತು. ಶ್ರೀಮಂತರ ಮಹಲುಗಳ ಸನಿಹದಲ್ಲೇ ಬಡವರ ಗುಡಿಸಲುಗಳು, ಶ್ರೀಮಂತರ ಐಶಾರಮೀ ಜೀವನ ಒಂದುಕಡೆ ಇದ್ದರೆ, ಒಪ್ಪತ್ತಿನ ಊಟಕ್ಕಿಲ್ಲದೆ ಹಸಿವಿನಿಂದ ನೆರಳುವ, ಮಾನ ಮುಚ್ಚಲು ಬಟ್ಟೆಯಿಲ್ಲದ ನಿರ್ಗತಿಕ ಜನರು ಮತ್ತೊಂದೆಡೆ!

ದೇವಾಲಯಗಳು ಒಂದೆಡೆಯಾದರೆ ಅದರ ಪಕ್ಕದಲ್ಲಿಯೇ ಕೊಳೆತು ನಾರುವ ಕಸದ ರಾಶಿಗಳು! ವೇದಮಂತ್ರಗಳ ಧ್ವನಿ  ಎಲ್ಲಿಂದಲೋ ಕಿವಿಗೆ ಬೀಳುತ್ತಿದ್ದರೆ, ಮತ್ತೆಲ್ಲಿಂದಲೋ ನರಳುವ, ಕಿರಿಚಾಡುವ, ಗೋಳಾಡುವ ಧ್ವನಿ!

ದೀನ ದಲಿತ, ದುರ್ಬಲ ಜನರ ಗೋಳಾಟವನ್ನು ಕಂಡ ವಿವೇಕಾನಂದರು ಮಮ್ಮಲ ಮರುಗಿದರು. ಏಕೆ ಹೀಗೆ ? ಭಾರತದಲ್ಲಿ ಹೇರಳವಾದ ಸಂಪತ್ತೂ ಇದೆ, ಅತ್ಯಂತ ಪ್ರಾಚೀನವಾದ ಜ್ಞಾನ ಸಂಪತ್ತೂ ಇದೆ.  ಆದರೂ ಜನರಲ್ಲಿ ಇಂತಹಾ ದಯನೀಯ ಸ್ಥಿತಿ  ಇದೆಯಲ್ಲಾ!

ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಬಂಡೆಯಮೇಲೆ ಕುಳಿತು ಧ್ಯಾನದಲ್ಲಿದ್ದ ಆ ಎರಡೂ ದಿನಗಳೂ ವಿವೇಕಾನಂದರು ಭಾರತದಲ್ಲಿನ  ಜನರ ಕಷ್ಟಗಳನ್ನು  ನಿವಾರಿಸಲು ಸಮಾಜಕ್ಕಾಗಿ ಏನಾದರೂ  ಮಾಡಲೇ  ಬೇಕೆಂಬ ಖಚಿತ ನಿಲುವಿನೊಂದಿಗೆ ಧ್ಯಾನದಿಂದ ಹೊರಬಂದರು. ನಮ್ಮ ದೇಶದ ಅತ್ಯಂತ ಶ್ರೀಮಂತರು ಮತ್ತು ಅತ್ಯಂತ ಬಡವರು, ಈ ಎರಡೂ ವರ್ಗಗಳೊಡನೆ ಅತ್ಯಂತ ನಿಕಟ ಸಂಪರ್ಕವನ್ನಿಟ್ಟುಕೊಂಡು ಅವರೊಡನೆ ಸಮಾಲೋಚಿಸಿ ನಮ್ಮ ರಾಷ್ಟ್ರದ ಅಂದಿನ ಸ್ಥಿತಿಯನ್ನು ಸಂಪೂರ್ಣ ಅವಲೋಕನ ನಡೆಸಿದರು. ಆವರಗಿನ ತಮ್ಮ ದೇಶ ಪರ್ಯಟನೆಯಿಂದ ದೊರೆತಿದ್ದ ಅನುಭವದೊಡನೆ ತನ್ನ ದೇಶದ ಜನರ ನೋವು ನಿವಾರಿಸಲು ಜಗನ್ಮಾತೆ ಕನ್ಯಾಕುಮಾರಿ ಸನ್ನಿಧಿಯಲ್ಲಿ ಆ ಎರಡೂ ದಿನಗಳು ಧ್ಯಾನವನ್ನು ಮಾಡಿದ್ದರು.

ಧ್ಯಾನ ಮಾಡಲು ಆರಿಸಿಕೊಂಡ ಸ್ಥಳವಾದರೋ ಕನ್ಯಾಕುಮಾರಿ ದೇವಾಲಯದಿಂದ ಎರಡು ಫರ್ಲಾಂಗ್ ದೂರದಲ್ಲಿ ಸಮುದ್ರದ ಮಧ್ಯೆ ಕಾಣುತ್ತಿದ್ದ ಕಲ್ಲು ಬಂಡೆ! ಆ ಬಂಡೆಯನ್ನು ತಲುಪುವುದಾದರೂ ಹೇಗೆ? ಅಲ್ಲೇ ಹತ್ತಿರದಲ್ಲಿ ಮೀನು ಹಿಡಿಯಲು ಬೆಸ್ತರು ಉಪಯೋಗಿಸುತ್ತಿದ್ದ ದೋಣಿಯವರನ್ನು ಕೇಳಿದರು. ಆ ದೋಣಿಯವನಾದರೋ “ಒಂದಾಣೆ” ಕೊಡಬೇಕೆಂದ. ಸ್ವಾಮೀಜಿಯೊಡನೆ ಒಂದಾಣೆಯೂ ಇಲ್ಲ!  ಹಿಂದೆ ಮುಂದೆ ನೋಡದೆ ಸ್ವಾಮೀಜಿ ಸಮುದ್ರಕ್ಕೆ ಹಾರಿಯೇ ಬಿಟ್ಟರು! ಅಲೆಗಳ ಏರಿಳಿತವನ್ನೂ ಲೆಕ್ಕಿಸದೆ ಅದನ್ನೂ ಭೇದಿಸಿಕೊಂಡು ಈಜು ಹೊಡೆಯುತ್ತಾ ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯನ್ನು ತಲುಪಿಯೇ ಬಿಟ್ಟರು! ಬಂಡೆಯಮೇಲೆ ಧ್ಯಾನಸ್ಥಿತಿಯಲ್ಲಿ ಕುಳಿತು ಬಿಟ್ಟರು! ಮನದಲ್ಲಿ ಮುಕ್ತಿಯ ವಿಚಾರವಿಲ್ಲ. ನಮ್ಮ ದೇಶದ ದೀನ ದು:ಖಿತ ಬಂದುಗಳ ಸೊರಗಿದ ಮುಖಗಳೇ, ಹಾಗೂ ದೀನ ಸ್ಥಿತಿಯ ಕಣ್ಣುಗಳೇ ವಿವೇಕಾನಂದರ ಕಣ್ಮುಂದೆ ಸುಳಿದಾಡುತ್ತವೆ. ಹೃದಯದಲ್ಲಿ ದು:ಖ ಉಮ್ಮಳಿಸುತ್ತದೆ. ಮೊದಲೇ ತಿಳಿಸಿದಂತೆ ನಮ್ಮ ದೇಶವು ಒಂದುಕಾಲದಲ್ಲಿ ಸಂಪತ್ ಭರಿತವಾಗಿತ್ತು! ಅತ್ಯಂತ ಮೇಧಾವಿಗಳಿದ್ದ ದೇಶ ಇದು! ನೂರಾರು ಜನ ಋಷಿಮುನಿಗಳು ತಪಸ್ಸು ಮಾಡಿದ ನೆಲ ಇದು!ಇಂತಹ ದೇಶದಲ್ಲಿ ಎಲ್ಲಿ ಹೋಯ್ತು ಅಂತಹ ಜ್ಞಾನ! ಸಂಪತ್ತು ಏಕೆ ನಷ್ಟವಾಯಿತು?  ಇಂತಹ  ಧರ್ಮ ಭೂಮಿಯಲ್ಲಿ ಅದೆಷ್ಟು ಜನ ಉಪವಾಸ ನೆರಳುತ್ತಿದ್ದಾರೆ! ಅದೆಷ್ಟು ಜನರಿಗೆ ಮಾನ ಮುಚ್ಚಲು ಬಟ್ಟೆ ಇಲ್ಲಾ!!  ಈ ಸ್ಥಿತಿಯಿಂದ ನಮ್ಮ ದೇಶವನ್ನು ಪಾರುಮಾಡುವ ಬಗೆಯಾದರೂ ಹೇಗೆ..?

ಅದಾಗಲೇ ನಮ್ಮ ದೇಶದ ಹಲವು ವಿಚಾರವಂತರ ಸಂಪರ್ಕ ವಿವೇಕಾನಂದರಿಗೆ ಆಗಿತ್ತು. ಈ ದೇಶದ ವಿದ್ಯಾವಂತರು ಮಾನಸಿಕ ದಾಸ್ಯದಲ್ಲಿ ಮುಳುಗಿಹೋಗಿದ್ದಾರಲ್ಲಾ ಏಕೆ? ನಮ್ಮಲ್ಲಿ ನಮಗೆ  ನಂಬಿಕೆ ಇಲ್ಲವಲ್ಲಾ! ಏಕೆ? ನಮ್ಮ ದೇಶದ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವುದಾದರೂ ಹೇಗೆ? ಈ ದೇಶದ ದೀನ ದುರ್ಬಲರ ಶೋಚನೀಯ ಸ್ಥಿತಿ ಇವರಿಗೇಕೆ ಅರ್ಥವಾಗುವುದಿಲ್ಲ! ನಮ್ಮ ದೇಶದ ಬಡವನ  ದೈನ್ಯ ಮುಖವು ವಿವೇಕಾನಂದರ ನಿದ್ದೆ ಗೆಡಿಸಿತ್ತು.

ನಮ್ಮ  ದೇಶದ ವಿಚಾರವಂತರೆನಿಸಿಕೊಂಡವರ ಮಾನಸಿಕತೆ ಹೇಗಿತ್ತು? “ನಮ್ಮ ದೇಶದ ಆಚರಣೆಗಳು, ನಂಬಿಕೆಗಳು ಎಲ್ಲಾ  ಸುಳ್ಳು, ನಮ್ಮ ಪರಂಪರೆಯೇ ಸುಳ್ಳು! ಪಾಶ್ಚಾತ್ಯ ದೇಶದಿಂದ ಬಂದಿರುವುದೇ ಸತ್ಯ! ನಾವು ಮುಂದುವರೆಯ ಬೇಕಾದರೆ ಪಾಶ್ಚಾತ್ಯ ವಿಚಾರಧಾರೆಯನ್ನು ಅನುಸರಿಸುವುದೇ ಸರಿಯಾದ ಮಾರ್ಗ! ಇಲ್ಲದಿದ್ದರೆ ನಮ್ಮ ದೇಶವು ಏಳಿಗೆ ಹೊಂದಲಾರದು!! ಈ ಭಾವನೆಯು ಜನಮಾನಸದಲ್ಲಿ ಹೊಕ್ಕಿರುವುದು ವಿವೇಕಾನಂದರಿಗೆ ಗೋಚರವಾಯ್ತು.

 ಮಹಾನ್ ಮಹಾನ್ ಮೇಧಾವಿಗಳೂ ಕೂಡ ಮಾನಸಿಕ ಗುಲಾಮಗಿರಿಗೆ ಶರಣಾಗಿದ್ದ ದುರ್ದೈವ ಸ್ಥಿತಿ ವಿವೇಕಾನಂದರಿಗೆ ಅತ್ಯಂತ ನೋವಿನ ವಿಚಾರವಾಗಿತ್ತು. ಇಂತಹ ಶೋಚನೀಯ ಸ್ಥಿತಿಯನ್ನು ವಿಚಾರವಂತರಲ್ಲಿ ಕಿತ್ತು ಹಾಕುವ ಬಗೆ  ಹೇಗೆ? ಎಂಬ ಬಗ್ಗೆ ವಿವೇಕಾನಂದರ ಮನದೊಳಗೆ ಮಂಥನ ನಡೆದಿತ್ತು.

ಒಂದುಕಾಲದಲ್ಲಿ ಜಗತ್ತಿಗೆ ವಿಶ್ವಗುರುವಿನ ಸ್ಥಾನದಲ್ಲಿದ್ದ ಭಾರತವು ಇಂದು ಜಗತ್ತಿನ ಕಾಲ ಬಳಿ ಕುಳಿತು ಜ್ಞಾನಕ್ಕಾಗಿ,  ಏಳಿಗೆಗಾಗಿ  ಅಂಗಲಾಚುವ ದಯನೀಯ ಸ್ಥಿತಿ ಇದೆಯಲ್ಲಾ!ಇದನ್ನು ಏನಾದರೂ ಮಾಡಿ ಬದಲಾಯಿಸಲೇ ಬೇಕು. ಭಾರತವು ವಿಶ್ವಗುರುವಾಗಿ ಜಗತ್ತಿಗೆ ಜ್ಞಾನವನ್ನು ಕೊಟ್ಟಿದ್ದ ದಿನಗಳನ್ನು ಇವರಲ್ಲಿ ನೆನಪು ಮಾಡಲೇ ಬೇಕು. ಇಲ್ಲಿನ ವಿಚಾರವಂತರೆನಿಸಿಕೊಂಡವರಿಗೆ ನಮ್ಮ ಸಂಸ್ಕೃತಿ-ಪರಂಪರೆಗಳ ಸರಿಯಾದ ಪರಿಚಯವನ್ನು ಮಾಡಿಕೊಡಲೇ ಬೇಕು. ಜನರ ಹೃದಯದಲ್ಲಿ ಆತ್ಮ ವಿಶ್ವಾಸವನ್ನು ನಿರ್ಮಾಣಮಾಡಬೇಕು. ನಮ್ಮ ದೇಶೀಯ ಚಿಂತನೆಯಲ್ಲಿ ನಾವು ದೊಡ್ದವರಾಗಬಹುದು, ನಮ್ಮ ಪ್ರಗತಿಗಾಗಿ ಪಾಶ್ಚಾತ್ಯರ ಅನುಕರಣೆ ಮಾಡುವ ಅಗತ್ಯವಿಲ್ಲ,ಈ ವಿಚಾರವನ್ನು ಜನಮಾನಸದಲ್ಲಿ ತುಂಬಬೇಕು.. ಹೀಗೆ ವಿವೇಕಾನಂದರು ಸುಧೀರ್ಘ ಚಿಂತನೆ ನಡೆಸಿದ್ದರು.ನಮ್ಮ ಜನರಲ್ಲಿ ಆತ್ಮ ವಿಶ್ವಾಸವನ್ನು ತಂದು ನಮ್ಮ ಚಿಂತನೆಗಳಿಂದಲೇ ನಮ್ಮ ದೇಶದ ಪ್ರಗತಿಯನ್ನು ಉಂಟುಮಾಡಬೇಕು, ಅದುವರವಿಗೆ ವಿರಮಿಸಬಾರದು, ನನ್ನ ಸಂನ್ಯಾಸವಾದರೋ ನನ್ನ ವೈಯಕ್ತಿಕ ಮುಕ್ತಿಗಾಗಿ ಅಲ್ಲ, ನನ್ನ ದೇಶದ ಪ್ರಗತಿಯೇ ನನ್ನ ಧ್ಯೇಯ! ವಿವೇಕಾನಂದರ ಮನಸ್ಸಿನಲ್ಲಿ ಈ ವಿಚಾರಗಳು ಅತ್ಯಂತ ಗಟ್ಟಿಯಾಗಿ ಹೆಪ್ಪುಗಟ್ಟಿತ್ತು.

ಎಲ್ಲಿಯವರಗೆ ನನ್ನ ದೇಶದಲ್ಲಿ ಒಬ್ಬ  ವ್ಯಕ್ತಿ ಉಪವಾಸದಿಂದ ಬಳಲುತ್ತಾ ಇರುತ್ತಾನೆ, ಎಲ್ಲಿಯ ವರಗೆ ಒಬ್ಬ ವ್ಯಕ್ತಿ ಅಜ್ಞಾನಿಯಾಗಿರುತ್ತಾನೆ, ಅಲ್ಲಿಯವರಗೆ ನನಗೆ ಮೋಕ್ಷ ಬೇಕಿಲ್ಲ. ವಿವೇಕಾನಂದರು ಭಾವೋದ್ವೇಗಕ್ಕೆ ಒಳಗಾಗಿದ್ದರು. ಈ ವಿಚಾರಕ್ಕಾಗಿ ದುಡಿಯಲು ಸಂಕಲ್ಪ ತೊಟ್ಟರು. ಮದ್ರಾಸ್ ಪ್ರಾಂತದಲ್ಲಿ ವಿವೇಕಾನಂದರು ಪ್ರವಾಸ ಮಾಡುತ್ತಿರುವಾಗ ಕೆಲವು ಮಿತ್ರರು ಅವರಿಗೆ ಒಂದು ಸಲಹೆ ಕೊಟ್ಟರು “ ನಿಮ್ಮ ಧೀಶಕ್ತಿಗೆ ಸರಿಯಾದ ಬೆಲೆ ಸಿಗುವುದು ಹೊರದೇಶಗಳಲ್ಲಿ, ಅಲ್ಲಿ ಜ್ಞಾನಕ್ಕೆ ಬೆಲೆ ಇದೆ.ಅಲ್ಲಿನ ಜನರ ಹೃದಯವನ್ನು ನೀವು ಗೆಲ್ಲಬೇಕು. ಅಲ್ಲಿನ ಜನರು ನಿಮ್ಮನ್ನು ಮೆಚ್ಚಿದಾಗ  ಇಲ್ಲಿನ ಜನರು ನಿಮ್ಮ ಮಾತನ್ನು ಸ್ವೀಕರಿಸುತ್ತಾರೆ!

ವಿವೇಕಾನಂದರಿಗೆ ಮಿತ್ರರ ಸಲಹೆ ಸರಿ ಎನ್ನಿಸಿತು. “ಹೌದು ನಾನು ಹೊರ ದೇಶಕ್ಕೆ ಹೋಗುವೆ. ಅಲ್ಲಿನ ಜನರಿಗೆ ನಮ್ಮ ಋಷಿಮುನಿಗಳು ತಪಸ್ಸಿನಿಂದ ಗಳಿಸಿರುವ ಜ್ಞಾನದ ಬಗ್ಗೆ. ಅದರ ಶ್ರೇಷ್ಠತೆಯ ಬಗ್ಗೆ ಅವರಲ್ಲಿ  ಮನವರಿಕೆ ಮಾಡುವೆ” ನಮ್ಮ ದೇಶದ ಭವ್ಯವಾದ ಸಂಸ್ಕೃತಿ ,  ಜೀವನ ಧರ್ಮ,  ಶ್ರೇಷ್ಠ ಮೌಲ್ಯಗಳ ಪರಿಚಯವನ್ನು ಹೊರದೇಶದಲ್ಲಿ ಮಾಡುವ ಸಂಕಲ್ಪವನ್ನು ವಿವೇಕಾನಂದರು ಮಾಡಿದರು. ಮದ್ರಾಸ್ ನಗರದಲ್ಲಿ  ಇವರ ಶಿಷ್ಯರು ಮನೆ ಮನೆಯಲ್ಲಿ ಭಿಕ್ಷೆ ಬೇಡಿ ಹಣವನ್ನು ಸಂಗ್ರಹಿಸಿ ವಿವೇಕಾನಂದರನ್ನು ಚಿಕಾಗೋ ಧರ್ಮ ಸಮ್ಮೇಳನಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು. ಇದೊಂದು ಐತಿಹಾಸಿಕ ಘಟನೆ. ವಿವೇಕಾನಂದರು ಅಂದು ಹೊರದೇಶಕ್ಕೆ ಹೋಗಿ ಅಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಅಲ್ಲಿನ ಜನರ ಮೆಚ್ಚುಗೆ ಪಡೆದಿದ್ದರಿಂದಲೇ ಭಾರತದ ಜನರಿಗೆ ವಿವೇಕಾನಂದರ ಮೇರು ವ್ಯಕ್ತಿತ್ವದ ಪರಿಚಯವಾಗಿದ್ದು.

ಅಮೇರಿಕೆಯ ಚಿಕಾಗೋ ನಗರದಲ್ಲಿ ಸರ್ವಧರ್ಮದ ಹೆಸರಿನಲ್ಲಿ ಸಮ್ಮೇಳನ ಏರ್ಪಾಡಾಗಿದ್ದರೂ  ಸಮ್ಮೇಳನದಲ್ಲಿ ನಿಜವಾಗಿ ಕ್ರೈಸ್ತ ಮತದ ವೈಭವವನ್ನು ಪ್ರಪಂಚದಲ್ಲಿ ಸಾರಲು ಚಿಂತನೆ ನಡೆಸಲಾಗಿತ್ತು. ಬಿಡಿ ಸಂನ್ಯಾಸಿಯಾಗಿ ಭಾರತದಲ್ಲಿ ಸಂಚಾರಮಾಡುತ್ತಿದ್ದ ವಿವೇಕಾನಂದರಿಗೆ ಅಲ್ಲಿಯವರೆಗೂ ವಿವೇಕಾನಂದ ಎಂಬ ಹೆಸರಿರಲಿಲ್ಲ. ಶಿವಾನಂದ ಎಂಬ ಹೆಸರಲ್ಲೂ ಅವರನ್ನು ಕರೆಯಲಾಗುತ್ತಿತ್ತು.  ಸರ್ವ ಧರ್ಮ ಸಮ್ಮೇಳನಕ್ಕೆ ಹೊರಡುವ ಮುಂಚೆ   ಖೇತ್ರೀ ಮಹಾರಾಜರು ಇವರಿಗೆ  ಸ್ವಾಮಿ ವಿವೇಕಾನಂದ ಎಂಬ ಹೆಸರನ್ನಿಟ್ಟು ಹಡಗಿನಲ್ಲಿ ಈ ಹೆಸರಿನಲ್ಲಿ  ಟಿಕೆಟ್ ಬುಕ್ ಮಾಡಿದರು. ಅಂದಿನಿಂದಲೇ ಸ್ವಾಮಿ ವಿವೇಕಾನಂದರೆಂಬ ಹೆಸರು ಶಾಶ್ವತವಾಗಿ  ಉಳಿಯಿತು.

ಸ್ವಾಮಿ ವಿವೇಕಾನಂದರು ಅಮೆರಿಕೆಯನ್ನೇನೋ ತಲುಪಿ ಬಿಟ್ಟರು. ಮುಂದೆ?  ಕೈನಲ್ಲಿ ಹಣವಿಲ್ಲ.ಹಾಕಿರುವುದು ಒಂದು ಕಾವಿ ಬಟ್ಟೆ. ಅದು ಬಿಟ್ಟರೆ ಬೇರೇನೂ ಇಲ್ಲ.ಆದರೆ ಹಡಗಿನಲ್ಲಿ ಒಬ್ಬ ಮಹಿಳೆಯ ಪರಿಚಯವಾಗಿತ್ತು. ಸ್ವಾಮೀಜಿಯವರ ತೇಜಸ್ಸನ್ನು ಕಂಡ ಆ ಮಹಿಳೆ ಸ್ವಾಮೀಜಿಯವರನ್ನು ಅವಳ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಳು. ಅಮೆರಿಕೆಯ ಶ್ರೀಮಂತ ಹೆಣ್ಣು ಮಕ್ಕಳಿಗೆ ಒಂದು ವಿಚಿತ್ರ ಆಸೆ. ಅದೇನದು? ಬೇರೇ ಯಾರಲ್ಲಿ ಇಲ್ಲದಿರುವ ವಸ್ತುವನ್ನು ತಾವು ಪಡೆದು ಅದನ್ನು ಅವರ ಸ್ನೇಹಿತೆಯರಿಗೆ ತೋರಿಸಿ ಹೆಮ್ಮೆ ಪಡಬೇಕು. ಈ ಹೆಣ್ಣು ಮಗಳೂ ಹಾಗೇ ಮಾಡಿದಳು. ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದ  ಈ ಸಂನ್ಯಾಸಿಯ ತೇಜಸ್ಸಿನ ಬಗ್ಗೆ ಅವಳೆಲ್ಲಾ ಸ್ನೇಹಿತೆಯರೊಡನೆ ಹೇಳಿಕೊಂಡಳು. 
                ನಿತ್ಯವೂ ಈಕೆಯ ಮನೆಗೆ ಬಂದು ವಿವೇಕಾನಂದರನ್ನು ನೋಡುವವರ ಸಂಖ್ಯೆ ಬೆಳೆಯುತ್ತಾ ಹೋಯ್ತು.ಭಾರತೀಯ ಸಂಸ್ಕೃತಿ-ಪರಂಪರೆಯ ಬಗ್ಗೆ ,ಹಿಂದು ಧರ್ಮದ ಬಗ್ಗೆ ವಿವೇಕಾನಂದರಿಗಿದ್ದ ಆಳವಾದ ಅಧ್ಯಯನ ಮತ್ತು ಭಾವನಾತ್ಮಕ ಸಂಬಂಧದ ಪರಿಣಾಮ ವಿವೇಕಾನಂದರು ತಮ್ಮ ಮಾತಿನ ಮೋಡಿಯಿಂದ ತಮ್ಮನ್ನು ನೋಡಲು    ಬಂದವರ ಮೇಲೆ ತೀವ್ರ  ಪರಿಣಾಮವನ್ನು ಬೀರಿದರು. ಎಲ್ಲರಿಗೂ ವಿವೇಕಾನಂದರ ಮಾತನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು. ಅಂತವರಲ್ಲಿ ಒಬ್ಬರು ಹಾರ್ವರ್ಡ್  ವಿಶ್ವವಿದ್ಯಾಲಯದ ಪ್ರೊಫೆಸರ್ ಜೆ.ಹೆಚ್.ರೈಟ್. ಪ್ರೊಫೆಸರ್ ರೈಟ್ ರೊಡನೆ ಮೂರ್ನಾಲ್ಕು ಗಂಟೆಗಳ ಕಾಲ ವಿವೇಕಾನಂದರು ಮಾತನಾಡುತ್ತಾರೆ. ಸ್ವಾಮೀಜಿಯವರಾದರೋ ಸಾಧಾರಣ ವ್ಯಕ್ತಿಯಂತಿದ್ದಾರೆ. ಆದರೆ ಅವರಲ್ಲಿನ   ಆಳವಾದ ವಿಷಯ ಜ್ಞಾನ ಕಂಡು ಪ್ರೊಫೆಸರ್ ರೈಟ್  ಭಾವಪರವಶರಾಗಿ ಬಿಟ್ಟರು . ಈ ಮಹಾನ್ ವ್ಯಕ್ತಿಯ ಮಾತುಗಳನ್ನು ಜಗತ್ತಿಗೆ ಕೇಳಿಸಬೇಕೆಂಬ  ಮಹತ್ವಾಕಾಂಕ್ಷೆಯು ಇವರಲ್ಲಿ ಮೂಡಿ ವಿವೇಕಾನಂದರಲ್ಲಿ ವಿನಂತಿಸಿದರು." ಸ್ವಾಮೀಜಿ ತಮ್ಮ ಮಾತನ್ನು ಇಡೀ ಜಗತ್ತು ಕೇಳಬೇಕು" 

ಇಡೀ ಜಗತ್ತಿಗೆ ತಮ್ಮ ಮಾತನ್ನು ಕೇಳಿಸಲೆಂದೇ ವಿವೇಕಾನಂದರು ಬಂದಿದ್ದರೂ ಸಹ  world parliament of religions ಹೆಸರಿನ ಮಹಾ ಸಮ್ಮೇಳನದಲ್ಲಿ  ಮಾತನಾಡಬೇಕೆಂದರೆ  ಹೆಸರಾಂತ ಸಂಸ್ಥೆಗಳ ಪ್ರತಿನಿಧಿಯಾಗಿ ಅಲ್ಲಿಗೆ ಬಂದು ಬಹಳ ಮುಂಚಿತವಾಗಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಸ್ವಾಮೀಜಿಯವರಿಗೆ ಇದಾವ ವಿಚಾರದ ಅರಿವಿಲ್ಲದೆ ನೇರವಾಗಿ ಏಕಾಂಗಿಯಾಗಿ  ಚಿಕಾಗೋ ಗೆ ಬಂದು ಬಿಟ್ಟಿದ್ದರು. ಇದೆಲ್ಲವನ್ನೂ ಅರಿತ ಪ್ರೊಫೆಸರ್ ರೈಟ್ ಹೇಳುತ್ತಾರೆ" ನಿತ್ಯ ಬೆಳಗುವ ಸೂರ್ಯನಿಗೆ ಯಾರ ಅಪ್ಪಣೆ ಬೇಕು?" ನೀವೊಬ್ಬ ಸ್ವಯಂ ಪ್ರಕಾಶಿಸುವ ಸೂರ್ಯನಂತೆ. ನಿಮಗೆ ಅವಕಾಶವನ್ನು ನಾನು ಮಾಡುತ್ತೇನೆ. ಹೀಗೆಂದು ಹೇಳಿದ ಪ್ರೊಫೆಸರ್ ರೈಟ್ ಒಂದು ಪರಿಚಯ ಪತ್ರವನ್ನು ಬರೆದುಕೊಡುತ್ತಾರೆ. ಆ ಪರಿಚಯ ಪತ್ರದಲ್ಲಿ ಏನಿತ್ತು?

ಆ ಪತ್ರದ ಒಂದು ಸಾಲು ನೋಡಿ

“here is a man who is more intelligent than  all intelligent people of America put together”

"ಇಲ್ಲಿ     ಒಬ್ಬ ವ್ಯಕ್ತಿ ಇದ್ದಾನೆ. ಅಮೆರಿಕಾ ದೇಶದ ಎಲ್ಲಾ ಬುದ್ಧಿವಂತರ ಬುದ್ಧಿಯನ್ನು ಒಟ್ಟು ಸೇರಿಸಿದರೂ ಈತನ ಬುದ್ಧಿಶಕ್ತಿಗೆ ಸರಿಸಾಟಿಯಾಗದು. ಅಂತಹ ವ್ಯಕ್ತಿಯನ್ನು ಕಳಿಸಿಕೊಡುತ್ತಿರುವೆ. ಅವರಿಗೆ ಸಮ್ಮೇಳನದಲ್ಲಿ ಮಾತನಾಡಲು   ಅವಕಾಶ ಕೊಡಿ"

1893 ರ ಸಪ್ಟೆಂಬರ್ 11 ರಂದು world parliament of religions ಸ್ಥಳಕ್ಕೆ ವಿವೇಕಾನಂದರು ಹೋಗುತ್ತಾರೆ. ಅಲ್ಲಿನ ವ್ಯವಸ್ಥೆ ನೋಡಿ ಇವರು ಸ್ಥಂಭೀಭೂತರಾಗುತ್ತಾರೆ. ಎಂಟು ಸಹಸ್ರ ಜನ ಮೇಧಾವಿಗಳು  ಸಮ್ಮೇಳನ ನಡೆಯುವ ಗ್ರೇಟ್ ಕೊಲಂಬಿಯನ್ ಹಾಲ್ ನಲ್ಲಿ ಸೇರಿದ್ದಾರೆ. ಜಗತ್ತಿನ ಎಲ್ಲಾ ಮತಗಳ ಪ್ರತಿನಿಧಿಗಳು ಸೇರಿದ್ದರು. ದೊಡ್ದ ದೊಡ್ದ ಗುರುಗಳು ,ಮೇಧಾವಿಗಳು ಅವರವರ ಮತದ ಬಗ್ಗೆ ಮಾತನಾಡಲು ಸಿದ್ಧತೆ ನಡೆಸಿಕೊಂಡಿದ್ದರು. ಸ್ವಾಮೀಜಿಯಾದರೋ ಇಂತಹ ಮಹಾನ್ ಸಭೆಯನ್ನೇ ನೋಡಿರಲಿಲ್ಲ.

 ಸಭೆ ಆರಂಭವಾಗಿದೆ .ಆದರೆ ವಿವೇಕಾನಂದರಿಗೆ ಒಂದು ರೀತಿಯಲ್ಲಿ ಮುಜುಗರವಾಗಿದೆ. ಎಲ್ಲರೂ ಮಹಾನ್ ಮಹಾನ್ ಗುರುಗಳು. ನಾನಾದರೋ ಭಾರತದ ಒಬ್ಬ ಬಿಡಿ ಸಂನ್ಯಾಸಿ. ಸ್ವಾಮೀಜಿಯ ಪರಿಚಯ ಪತ್ರವನ್ನು ನೋಡಿದ್ದ  ಸಮ್ಮೇಳನ ವ್ಯವಸ್ಥಾಪಕರಾಗಿದ್ದ ಡಾ. ಬ್ಯಾರೋಸ್   ಆರಂಭದಲ್ಲಿ ಮೂರ್ನಾಲ್ಕು ಜನ ಧರ್ಮ ಗುರುಗಳು ಭಾಷಣ ಮಾಡಿದ ಕೂಡ್ಲೇ ವಿವೇಕಾನಂದರಿಗೆ ಅವಕಾಶ ಕೊಡುವುದಾಗಿ ಹೇಳಿದರು. ಆದರೆ ವಿವೇಕಾನಂದರು  " ಈಗಲೇ ಬೇಡ, ಆಮೇಲೆ ಮಾತನಾಡುತ್ತೇನೆಂದು ಮೂರ್ನಾಲ್ಕು  ಅವಕಾಶಗಳನ್ನು     ಮುಂದೆ ಹಾಕಿದರು. ಎಲ್ಲಾ ಧರ್ಮಗುರುಗಳೂ ಭಾಷಣವನ್ನು ಸಿದ್ಧ ಪಡಿಸಿಕೊಂಡು ಬಂದು ತಮ್ಮ ವಿಚಾರವನ್ನು ಮಂಡಿಸುತ್ತಿದ್ದರು. ಆದರೆ ವಿವೇಕಾನಂದರು ಯಾವ ತಯಾರಿ ಮಾಡಿಕೊಂಡಿರಲಿಲ್ಲ.. ಬ್ಯಾರೋಸ್ ಅವರು ಅವಕಾಶ ಕೊಡುತ್ತೀನೆಂದಾಗೆಲ್ಲಾ ಸ್ವಲ್ಪ ಸಮಯವಾಗಲೀ, ಎಂದೇ ಮುಂದೂಡುತ್ತಿದ್ದನ್ನು ಕಂಡ  ಡಾ.ಬ್ಯಾರೋಸ್ ಗೆ ವಿವೇಕಾನಂದರ ಬಗ್ಗೆ ಅನುಮಾನ ಬರಲು ಶುರುವಾಯ್ತು. ಪ್ರೊ.ರೈಟ್ ಅವರು   ವಿವೇಕಾನಂದರ ಬಗ್ಗೆ ಇಷ್ಟೊಂದು ಒಳ್ಲೆಯ ಪತ್ರ ಕೊಟ್ಟಿದ್ದಾರೆ, ಆದರೆ ಇವರ್ಯಾಕೋ ಹಿಂಜೆರಿಯುತ್ತಿದ್ದಾರಲ್ಲಾ! ಹೀಗೇ ಆದರೆ ಇವರು ಮಾತನ್ನೇ ಆಡಲಾರರು  ಎಂದು ಭಾವಿಸಿ ಮತ್ತೆ ವಿವೇಕಾನಂದರನ್ನು ಕೇಳದೆ " ಈಗ ಭಾರತದ ಸಂನ್ಯಾಸಿ ವಿವೇಕಾನಂದರು ಮಾತನಾಡುತ್ತಾರೆಂಡು ಪ್ರಕಟಿಸಿ ಬಿಟ್ಟರು. ಆಗ ಅನಿವಾರ್ಯವಾಗಿ ವಿವೇಕಾನಂದರು ಎದ್ದು ಬರಲೇ ಬೇಕಾಯ್ತು. ಆಗಿನ ಅವರ ಮಾನಸಿಕ ಸ್ಥಿತಿಯನ್ನು  ವಿವೇಕಾನಂದರು ದಾಖಲಿಸಿದ್ದಾರೆ-" ಆಗ ಮನದಲ್ಲಿ ಭಯ ಆವರಿಸಿತ್ತು.ಕೈ ಕಾಲು ನಡುಗುತ್ತಿತ್ತು" 

 ನಮ್ಮ ಪರಂಪರೆಯಂತೆ ತಾಯಿ ಶಾರದೆಯನ್ನು ಮನದಲ್ಲಿ ನೆನದ ಕೂಡಲೇ  ನಕಶಿಕಾಂತ ಚೈತನ್ಯವು ತುಂಬಿಹೋಯ್ತು. ಭಯವೆಲ್ಲಾ ಮಾಯವಾಗಿತ್ತು.   ಧೀಮಂತ ಸ್ಥಿತಿಯಲ್ಲಿ ನಿಂತ ವಿವೇಕಾನಂದರು  ಒಮ್ಮೆ ಸಭೆಯನ್ನು ನೋಡಿದರು. ತೇಜಸ್ಸು ತುಂಬಿದ ಆ ನೋಟದಿಂದಲೇ ಅಮೆರಿಕೆಯ ಜನರನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದರು .ಅವರ ಬಾಯಿಂದ ಮೂರು ಪದ ಹೊರಬಿತ್ತು" Dear sisters and brothers of Amerika" 

ಕೇವಲ ಅಕ್ಷರವಾಗಿ ಸ್ವೀಕರಿಸಿದರೆ ಭಾರತೀಯರಿಗೆ ಇದು ಸರ್ವೇ ಸಾಮಾನ್ಯ. ಆದರೆ ಅವರ ಮಾತಿಗಿಂತ ಹೆಚ್ಚಾಗಿ ಅವರ ಭಾವನೆಗಳು ಅಮೆರಿಕಾ ಜನರಿಗೆ ಬಲು ಇಷ್ಟವಾಯ್ತು. ಎಲ್ಲಿಂದಲೋ ಬಂದಿರುವ ಸಂನ್ಯಾಸಿ ನಮ್ಮನ್ನು  ಅಣ್ಣ -ತಮ್ಮ, ಅಕ್ಕ-ತಂಗಿ ಎಂದು ಕರೆಯುತ್ತಾರಲ್ಲಾ! ಸ್ವಾಮೀಜಿಯವರ ಮಾತಿನ ಪ್ರತಿ ಅಕ್ಷರವೂ ಅಲ್ಲಿನ ಜನರಿಗೆ ಮಂತ್ರವಾಗಿ ಕಂಡವು. ಅವರ ಹೃದಯವನ್ನು ಹೊಕ್ಕವು. ಚಪ್ಪಾಳೆಗಳ ಸುರಿಮಳೆಯಾಯ್ತು. ಒಂದು ವಿಚಾರ ನಮಗೆ ತಿಳಿದಿರಬೇಕು. ಜಗತ್ತಿನ ವೇದಿಕೆಯಲ್ಲಿ ಮೊಟ್ಟಮೊದಲ ಭಾರಿಗೆ  ಅಂತಹ ಮಾತುಗಳು ಕೇಳಿಸಿದ್ದವು. ಆ ಎರಡು ಪದಗಳಲ್ಲಿ ಭಾರತೀಯ ಸಿದ್ಧಾಂತವೇ   ಅಡಕವಾಗಿತ್ತು. ಅದುವರಗೆ ಒಂದು ದೇಶದ ಜನರು ಮತ್ತೊಂದು ದೇಶದವರನ್ನು ಸೋದರ ಎಂದು ಕರೆಯಬಹುದೆಂದ ಕಲ್ಪನೆಯೇ ಅವರಿಗಿರಲಿಲ್ಲ. ಇಡೀ ಮಾನವ ಕೋಟಿ ನಮ್ಮ ಸೋದರರೆಂಬ ಕಲ್ಪನೆಯೇ ಅಲ್ಲಿನ ಜನರಿಗಿರಲಿಲ್ಲ.  ಆತ್ಮೀಯ ಭಾವದಿಂದ " ಅಮೆರಿಕೆಯ ನನ್ನ ಸೋದರ-ಸೋದರಿಯರೇ" ಎಂದು ಕರೆದದ್ದು ನಿಜವಾಗಿ ಅವರ ಹೃದಯವನ್ನು ತಟ್ಟಿತ್ತು !ಜನರು ಚಪ್ಪಾಳೆ ತಟ್ಟುತ್ತಾ ಕುಣಿಯಲು ಶುರುಮಾಡಿದರು ಆ ಸ್ಥಿತಿಯಿಂದ ಸಾಮಾನ್ಯಸ್ಥಿತಿಗೆ ಮರಳಲು ಮೂರ್ನಾಲ್ಕು ನಿಮಿಷಗಳೇ ಬೇಕಾಯ್ತು. ಆನಂತರ ಇಪ್ಪತ್ತು ನಿಮಿಷಗಳು ದಿಟ್ಟತನದಿಂದ  ಭಾಷಣವನ್ನು ಮಾಡಿದರು. ಅದುವರಗೆ  ಅಲ್ಲಿ ಸೇರಿದ್ದ ಎಲ್ಲಾ ಧರ್ಮ ಗುರುಗಳೂ ಅವರವರ ಮತವೇ ಶ್ರೇಷ್ಠವೆಂದು ವಿಚಾರ ಮಂಡಿಸಿದ್ದರು. ಅದನ್ನೆಲ್ಲಾ ಕೇಳಿದ್ದ ವಿವೇಕಾನಂದರು

ಕೂಪ ಮಂಡೂಕದ ಕಥೆಯನ್ನು ಹೇಳುತ್ತಾರೆ. ಭಾವಿಯಲ್ಲಿರುವ ಕಪ್ಪೆಯು "ತಾನಿರುವ ಭಾವಿ ಎಷ್ಟು ದೊಡ್ದದಾಗಿದೆ ಎಂದು ಸಮುದ್ರದ ಕಪ್ಪೆಯೊಡನೆ ಜಂಬ ಮಾಡಿ ದಂತಾಯ್ತು .ಸಮುದ್ರದ ವಿಸ್ತೀರ್ಣ ವೆಲ್ಲಿ? ಭಾವಿಯ ವಿಸ್ತೀರ್ಣವೆಲ್ಲಿ? ಒಂದೊಕ್ಕೊಂದು ಹೋಲಿಸಲು ಸಾಧ್ಯವೇ? ಇಲ್ಲಿಯ ವರೆಗೂ ಭಾಷಣ ಮಾಡಿರುವವರೆಲ್ಲಾ ಭಾವಿಯ ಕಪ್ಪೆಯಂತೆ"..ಅಂದು ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತದ ಸಂನ್ಯಾಸಿಯೊಬ್ಬ  ಇಷ್ಟು ಕಠೋರವಾಗಿ ಹೇಳಬೇಕಾದರೆ  ವಿವೇಕಾನಂದರ ಗುಂಡಿಗೆ ಎಷ್ಟಿತ್ತೆಂಬುದನ್ನು ಯೋಚಿಸಬೇಕು. ಭಾರತೀಯರನ್ನು ಅತೀ ತುಚ್ಚವಾಗಿ ಕಾಣುತ್ತಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ವಿವೇಕಾನಂದರ  ಇಂತಹ ಕಠೋರ ನುಡಿಗಳು!

ವಿವೇಕಾನಂದರು ಹೇಳುತ್ತಾರೆ " ನಮ್ಮ ಮತ ಶ್ರೇಷ್ಠ! ನಮ್ಮ ದೇವರು ಶ್ರೇಷ್ಠ! ಎಂದು ದೇವರನ್ನು ಯಾಕೆ ಕಟ್ಟಿ   ಹಾಕುವಿರಿ? ಅನಂತನಾದ ಆ ಭಗವಂತನನ್ನು  ಏಸು ಮಾತ್ರವೇ ದೇವರು, ಬೇರೆ ದೇವರಿಲ್ಲ! ಎಂದು ಯಾಕೆ ಸೀಮಿತ ಗೊಳಿಸುತ್ತೀರಿ. ನಾವು ಭಾರತೀಯರು ಹೇಳುತ್ತೇವೆ."ಏಕಂ ಸತ್ ವಿಪ್ರಾ ಬಹುದಾ ವದಂತಿ"  ಸತ್ಯ ಒಂದೇ ಅಂದರೆ ದೇವರು ಒಬ್ಬನೇ ಆದರೆ ತಿಳಿದವರು ಅವನನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ"

ವಿವೇಕಾನಂದರು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು  ಎಳೆ ಎಳೆಯಾಗಿ ತೆರೆದಿಟ್ಟಿದ್ದರು. ನಾವೆಲ್ಲಾ ಪರಸ್ಪರ ಅಣ್ಣ  ತಮ್ಮಂದಿರು,ನಾವೆಲ್ಲಾ ಪರಸ್ಪರ ಅಕ್ಕ-ತಂಗಿಯರು, ನಾವೆಲ್ಲಾ ಆ ಭಗವಂತನ ಮಕ್ಕಳು!! 

 ವಿವೇಕಾನಂದರ ಸಿಡಿಲ ನುಡಿಗಳು ಅಮೆರಿಕೆಯರ ಹೃದಯವನ್ನು ತಟ್ಟಿತ್ತು. ಅವರಲ್ಲಿ  ವೈಚಾರಿಕ ಕಿಡಿಯನ್ನು ವಿವೇಕಾನಂದರು ಪ್ರಜ್ವಲಿಸಿದ್ದರು. ಸಮ್ಮೇಳನ ಇನ್ನೂ ಎರಡು-ಮೂರು ದಿನ ನಡೆಯಬೇಕಾಗಿದೆ. ಹಲವಾರು ಧರ್ಮಗುರುಗಳು, ಮೇಧಾವಿಗಳು ಮಾತನಾಡ ಬೇಕಾಗಿದೆ. ಆದರೆ  ವಿವೇಕಾನಂದರ ಭಾಷಣ ಕೇಳಿದ ಜನರಿಗೆ ಉಳಿದವರ ಭಾಷಣವಾದರೋ ಸಪ್ಪೆ ಎನಿಸುತ್ತದೆ. ಎಲ್ಲರ ಮನದಲ್ಲಿ ವಿವೇಕಾನಂದರು ಸ್ಥಾಪಿಸಲ್ಪಟ್ಟಿದ್ದಾರೆ. ವೇದಿಕೆಯಲ್ಲಿ  ವಿವೇಕಾನಂದರನ್ನು ಕಾಣದಿದ್ದರೆ  ಸಭಾ ಮಂಟಪ ಖಾಲಿಯಾಗಿ ಬಿಡುತ್ತಿತ್ತು. ವ್ಯವಸ್ಥಾಪಕರಿಗೆ ಇದು  ಯೋಚನೆಗೆ ಕಾರಣವಾಯ್ತು.      ಸಭೆಯಲ್ಲಿ ಜನರಿರಬೇಕೆಂದರೆ ವಿವೇಕಾನಂದರನ್ನು ವೇದಿಕೆಯಲ್ಲಿ ಕುಳ್ಳಿರಿಸುತ್ತಿದ್ದರು. ವಿವೇಕಾನಂದರನ್ನು ನೋಡಲು ಆಗ ಜನರು ಜಮಾಯಿಸುತ್ತಿದ್ದರು. ಜನರು ವಿವೇಕಾನಂದರ ಬಗ್ಗೆ ಹುಚ್ಚಾಗಿ ಬಿಟ್ಟಿದ್ದರು.

          ವಿವೇಕಾನಂದರ ಭಾಷಣ ನಡೆದ ಮಾರನೇ ದಿನ ವಿವೇಕಾನಂದ ವಿಚಾರಗಳು  ಪತ್ರಿಕೆಗಳಲ್ಲಿ ಮುಖ ಪುಟದಲ್ಲಿ ದಪ್ಪಕ್ಷರದ ಸುದ್ಧಿಯಾಯ್ತು. ಚಿಕಾಗೋ ನಗರದ ಗೋಡೆಗಳ ಮೇಲೆಲ್ಲಾ ವಿವೇಕಾನಂದರ ಆಳೆತ್ತರದ ಚಿತ್ರಗಳು ಜನರ ಆಕರ್ಷಣೆಗೆ ಕಾರಣ ವಾದವು. ಎಲ್ಲರ ಬಾಯಲ್ಲೂ ವಿವೇಕಾನಂದರ ಹೆಸರು ಉಲಿದಾಡಿದವು. ಪತ್ರಿಕೆಗಳು ಬರೆದವು " ಜನರ ಮನ ಗೆದ್ದ ಹಿಂದೂ ಸಂನ್ಯಾಸಿ". ಒಂದು ಪತ್ರಿಕೆಯಂತೂ ತನ್ನ ಸಂಪಾದಕೀಯದಲ್ಲಿ ಬರೆಯಿತು. "ಇಂತಹ ಭವ್ಯ ಪರಂಪರೆ ಇರುವ ಭಾರತದಂತಹ ದೇಶಕ್ಕೆ  ಕ್ರೈಸ್ತ ಮತಪ್ರಚಾರಕ್ಕೆ ಕಳಿಸುವುದು ನಮ್ಮ ಮೂರ್ಖತನ".

 ವಿವೇಕಾನಂದರು ಸಮ್ಮೇಳನ ಸಭಾ ಮಂಟಪದಿಂದ ಹೊರ ಬರುತ್ತಾರೆ. ಅಲ್ಲಿನ ಜನರಾದರೋ ಇವರನ್ನು ಮುತ್ತಿಕೊಂಡಿದ್ದಾರೆ. ಇವರೊಡನೆ ಮಾತನಾಡುವ ಬಯಕೆ ಹಲವರದ್ದಾದರೆ, ಕೆಲವರದ್ದು ಈ ಕಾವಿ ಬಟ್ಟೆಗೆ ಮುತ್ತಿಕ್ಕುವ ಆಸೆ. ಅಷ್ಟರಲ್ಲಿ  ರಲ್ಲಿ  ದಂಪತಿಗಳಿಬ್ಬರು ಇವರ ಎದಿರು ನಿಂತರು. ಅವರನ್ನು ನೋಡಿದ ಕೂಡಲೇ ಜನರೆಲ್ಲಾ ಅವರಿಗೆ ದಾರಿ ಬಿಟ್ಟುಕೊಟ್ಟರು. ಅವರ್ಯಾರು ಎಂಬ ಅರಿವಿಲ್ಲ. "ಸ್ವಾಮೀಜಿ ,ಇಂದು ತಾವು ನಮ್ಮ ಮನೆಗೆ ಅತಿಥಿಯಾಗಿ ಬರಬೇಕು. ನಮ್ಮ ಮನೆಯಲ್ಲಿ ತಾವು ಭೋಜನ ಸ್ವೀಕರಿಸಿ ವಿಶ್ರಾಂತಿ ಪಡೆಯಬೇಕು." ಬಿಡದೆ ಸ್ವಾಮೀಜಿಯವರನ್ನು ಕರೆದು ಕೊಂಡು ಅವರ ಮನೆಗೆ ಹೋಗುತ್ತಾರೆ. ಅತ್ಯಂತ ಶ್ರೀಮಂತರ ಮನೆ. ವಿವೇಕಾನಂದರು ಬರುತ್ತಾರೆಂದು ಅತ್ಯಂತ        ಭವ್ಯವಾಗಿ  ಮನೆಯನ್ನು ಸಿಂಗರಿಸಿದ್ದಾರೆ.  ಸ್ವಾಮೀಜಿಯವರಿಗಾಗಿಯೇ ವಿಶೇಷ      ಔತಣ ಕೂಟ. ಶ್ರೀಮಂತ ಮಿತ್ರರನ್ನು ಆಹ್ವಾನಿಸಿದ್ದಾರೆ. ಸ್ವಾಮೀಜಿಗಾದರೋ ಅದೆಲ್ಲಾ ವ್ಯವಸ್ಥೆಗಳನ್ನು ನೋಡಿ ಹುಚ್ಚು ಹಿಡಿದಂತಾಗಿದೆ.  ಒಂದೆರಡು ದಿನಗಳ  ಹಿಂದೆಯಷ್ಟೇ   ಕುಡಿಯಲು ನೀರು ಕೇಳಿದರೆ ಕೊಡುವವರಿಲ್ಲ" You begger get out" ಎನ್ನುತ್ತಿದ್ದ  ಊರಿನಲ್ಲಿಯೇ ಇಂದು ರಾಜ ಮರ್ಯಾದೆ!

 ಆ ಶ್ರೀಮಂತನ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಅತ್ಯಂತ ಬೆಲೆಬಾಳುವ ಸುಪ್ಪತ್ತಿಗೆಯಲ್ಲಿ  ವಿವೇಕಾನಂದರಿಗೆ ಮಲಗಲು ವ್ಯವಸ್ಥೆ  ಮಾಡಿದ್ದಾರೆ. ಅದರ ಸ್ಪರ್ಶ ಆದ ತಕ್ಷಣ ಇವರಿಗೆ ಮುಳ್ಳು ಚುಚ್ಚಿದಂತಾಗಿ ಬಿಡುತ್ತದೆ. ಭಾರತದ ಬಡತನದ ದೃಶ್ಯ ಕಣ್ಮುಂದೆ ಸುಳಿಯುತ್ತದೆ.ಸಂಕಟ ತಡೆಯಲಾಗಲಿಲ್ಲ. ಗಳ ಗಳ ಅಳುತ್ತಾರೆ.  ಸುಪ್ಪತ್ತಿಗೆ ಮೇಲೆ ನಿದ್ರೆ ಮಾಡಲು ಅವರ ಮನಸ್ಸು ಒಪ್ಪಲಿಲ್ಲ. ಬರಿ ನೆಲದ ಮೇಲೆ ಇಡೀ ರಾತ್ರಿ ನಿದ್ರೆ ಮಾಡದೆ ಕಳೆಯುತ್ತಾರೆ.  ಮನದಲ್ಲಿಯೇ     ಜಗನ್ಮಾತೆಯಲ್ಲಿ ಮೊರೆ ಇಡುತ್ತಾರೆ "ತಾಯಿ, ಅಮೆರಿಕಾ ಜನರಲ್ಲಿ ಇಷ್ಟೊಂದು ಐಶ್ವರ್ಯ ಕೊಟ್ಟಿದ್ದೀಯ. ಆದರೆ ಭಾರತದಲ್ಲಿ  ಲಕ್ಷ ಲಕ್ಷ ಜನರಿಗೆ ಹೊತ್ತಿಗೆ ತುತ್ತು ಅನ್ನಕ್ಕೆ ಗತಿ ಇಲ್ಲ, ಮಾನ ಮುಚ್ಚಲು ಬಟ್ಟೆ ಇಲ್ಲ. ಇದನ್ನು ಸರಿಪಡಿಸುವುದು ಹೇಗೆ. ಸದಾ ಇದೇ ಯೋಚನೆ. ವೈಯಕ್ತಿಕ ಸಾಧನೆಯಲ್ಲಿ ಉತ್ತುಂಗ ಶಿಖರದಲ್ಲಿದ್ದರೂ ಮನದಲ್ಲಿ ಮಾತ್ರ ಇದೇ ಚಿಂತೆ ಕಾಡುತ್ತಿತ್ತು. ನಮ್ಮ ದೇಶದ ಬಡವರ ಕಣ್ಣೀರು ಒರೆಸಲು ಏನಾದರೂ ಮಾಡಬೇಕೆಂದು ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರಿಗೆ  ಅಮೆರಿಕೆಯಿಂದ     ಬರೆದಿರುವ ಪತ್ರದಲ್ಲಿ ಕಳಕಳಿಯ  ಮನವಿ ಮಾಡಿದ್ದಾರೆ. ಇದೇ ರೀತಿಯ ಹಲವು ಪತ್ರಗಳನ್ನು ರಾಮಕೃಷ್ಣ ಪರಮ ಹಂಸರ ಶಿಷ್ಯರಿಗೂ ಬರೆದಿದ್ದಾರೆ.

 ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಪಾದ್ರಿಗಳು  ಭಾರತದ ಬಗ್ಗೆ ಎಂತಹ ಕೆಟ್ಟ ಚಿತ್ರವನ್ನು ಮೂಡಿಸಿದ್ದರೆಂಬುದಕ್ಕೆ ಅಲ್ಲಿನ ಕೆಲವರು ಅಲ್ಲಿನ ಪತ್ರಿಕೆಗಳಲ್ಲಿನ ಬರಹಗಳನ್ನು ವಿವೇಕಾನಂದರಿಗೆ ತೋರಿಸುತ್ತಾರೆ." ಸ್ವಾಮೀಜಿ ನೀವೇನೋ ಭಾರತದ ಬಗ್ಗೆ  ಇಷ್ಟು  ಭವ್ಯವಾಗಿ ಭಾಷಣ  ಮಾಡುತ್ತಿದ್ದೀರಿ. ಆದರೆ ಭಾರತದ ಬಗ್ಗೆ ಇಲ್ಲೆಲ್ಲಾ ಏನು ಪ್ರಚಾರ ನಡೆದಿದೆ ಗೊತ್ತೇ? ಭಾರತ  ಎಂತಹ ಅನಾಗರೀಕ ದೇಶವೆಂದರೆ ಆಗತಾನೇ ಹುಟ್ಟುವ ಮಕ್ಕಳನ್ನು ನದಿಗೆ ಎಸೆದು ಮೊಸಳೆಗಳು ಮಕ್ಕಳನ್ನು ತಿನ್ನುವುದನ್ನು ನೋಡಿ ಅಲ್ಲಿನ ಜನ ಕೇಕೆ ಹಾಕಿ ನಲಿಯುತ್ತಾರೆ. ಅಷ್ಟು ಅನಾಗರೀಕರು!

ಸ್ವಾಮೀಜಿಯವರಿಗೆ ಅತ್ಯಂತ ದು:ಖವಾಗುತ್ತದೆ. ಭಾರತದ ಜನರನ್ನು ಅನಾಗರೀಕರೆಂದೂ ಅವರನ್ನು  ಉದ್ಧರಿಸುವ ಹೆಸರಿನಲ್ಲಿ   ಅಲ್ಲಿನ ಜನರಿಂದ ಹಣವನ್ನು ಸಂಗ್ರಹಿಸಲಾಗುತ್ತಿತ್ತು.   ಅದೆಷ್ಟು ಸುಳ್ಳುಪ್ರಚಾರ ನಡೆದಿದೆ! ವಿವೇಕಾನಂದರಿಗೆ ಅತೀವ ದು:ಖವಾಗುತ್ತದೆ. ಸ್ವಾಮೀಜಿಯವರ ಭಾಷಣಗಳಿಂದ ಅಲ್ಲಿನ ಜನರಿಗೆ ಸತ್ಯದ ಅರಿವಾಗಿ  ಕೆಲವರಂತೂ ತಮ್ಮ ಮನೆ ಆಸ್ತಿಯನ್ನು ಮಾರಾಟಮಾಡಿ ಸ್ವಾಮೀಜಿಯವರ  ಹಿಂದೆ ಶಿಷ್ಯರಾಗಿ ಹೊರಟು ಬಿಡುತ್ತಾರೆ.

 1897 ಜನವರಿ 15 ಕ್ಕೆ ಸ್ವಾಮೀಜಿಯವರು ಸ್ವದೇಶಕ್ಕೆ ಮರಳುತ್ತಾರೆ. ಹಡಗಿನಲ್ಲಿ ಅಲ್ಲಿನ ಜನರು ಕೇಳುತ್ತಾರೆ " ಸ್ವಾಮೀಜಿ ಸುಮಾರು ನಾಲ್ಕು ವರ್ಷಗಳು ನೀವು ಪಶ್ಚಿಮ ದೇಶಗಳಲ್ಲಿ ತಿರುಗಿ ಇಲ್ಲಿನ ಭೋಗ ಜೀವನವನ್ನು ಕಂಡಿದ್ದೀರಿ. ಈಗ ಸ್ವದೇಶಕ್ಕೆ ಹಿಂದಿರುಗುತ್ತಿರುವಿರಿ. ಈಗ ನಿಮ್ಮ ದೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಆಗ ಸ್ವಾಮೀಜಿ ಹೇಳುತ್ತಾರೆ. " ನಾನು ಭಾರತವನ್ನು ಬಿಡುವಾಗ ನಾನು ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ಅದರ ಒಂದೊಂದು ಧೂಳಿನ ಕಣವೂ ನನಗೆ ಪವಿತ್ರವಾಗಿ ಕಾಣುತ್ತಿದೆ." ಎಂತಹ ಅದ್ಭುತ ಮಾತೃ ಭಕ್ತಿ!

 ಹಡಗು ಭಾರತವನ್ನು ಸಮೀಪಿಸುತ್ತಿದ್ದಂತೆ ತೆಂಗಿನ ಮರಗಳನ್ನು ಕಂಡ ವಿವೇಕಾನಂದರು ಹಡಗಿನ ಕ್ಯಾಪ್ಟನ್ ನ್ನು ಕೇಳುತ್ತಾರೆ" ಅಲ್ಲಿ ತೆಂಗಿನ ಮರಗಳು ಕಾಣುತ್ತಿವೆಯಲ್ಲಾ, ಆ ಪ್ರದೇಶ ಯಾವುದು? 

"ಅದು ಭಾರತ" ಕ್ಯಾಪ್ಟನ್ ಬಾಯಿಯಲ್ಲಿ ಹೊರಟ ಈ ಮೂರಕ್ಷರ ಕೇಳುತ್ತಲೇ ಆದಿಕ್ಕಿನಲ್ಲಿ ಹಡಗಿನಲ್ಲಿಯೇ ದೀರ್ಘ ದಂಡ ನಮಸ್ಕಾರವನ್ನು ಹಾಕುತ್ತಾರೆ.

 ಸಿಲೋನಿನ    ಕೊಲೊಂಬೋ [ಆಗ ಭಾರತದ ಭಾಗ] ಬಂದರಿನಲ್ಲಿ ಹಡಗು  ಬಂದು ನಿಲ್ಲುತ್ತದೆ. ವಿವೇಕಾನಂದರು ಭಾವೋದ್ವೇಗಕ್ಕೆ ಒಳಗಾಗಿದ್ದರು! ಭಾರತದ ನೆಲದ ಸ್ಪರ್ಷಕ್ಕಾಗಿ ಹಾತೊರೆಯುತ್ತಿದ್ದರು. ಅದಾಗಲೇ ಭಾರತದಲ್ಲಿ     ವಿವೇಕಾನಂದರ ಬಗ್ಗೆ ಅತ್ಯಂತ ಎತ್ತರದ  ಸ್ಥಾನ ದೊರೆಕಿತ್ತು. ಭಾರತದ ಅತ್ಯಂತ ಶ್ರೀಮಂತರು, ಮೇಧಾಮಿಗಳು, ಸಾದು ಸಂತರು, ನೇತಾರರು ವಿವೇಕಾನಂದರನ್ನು ಸ್ವಾಗತಿಸಲು ಭವ್ಯವಾದ ಏರ್ಪಾಡುಗಳನ್ನು ಮಾಡಿಕೊಂಡು ಹಾರ ತುರಾಯಿಗಳೊಡನೆ ವಿವೇಕಾನಂದರ ಬರುವಿಗಾಗಿ ಬಂದರಿನಲ್ಲಿ ಕಾಯುತ್ತಿದ್ದರು. ಆದರೆ ವಿವೇಕಾನಂದರು ಭಾರತದ ನೆಲದಮೇಲೆ ಕಾಲಿಡುತ್ತಲೇ ಮೊದಲು ಮಾಡಿದ ಕೆಲಸ ವಾದರೂ ಏನು?

ಸಮುದ್ರದ ದಂಡೆಯ ಮರಳನ್ನು  ಎತ್ತಿ ಮೈ ಮೇಲೆ ಸುರಿದುಕೊಂಡರು. ಅಕ್ಷರ ಶ: ಮರಳಿನ ಸ್ನಾನ!  ನಾಲ್ಕು ವರ್ಷಗಳು ಭೋಗದ ಭೂಮಿಯಲ್ಲಿದ್ದು ಬಂದುದಕ್ಕಾಗಿ ಪಾಪದ ಕೊಳೆಯನ್ನು ತೊಳೆದುಕೊಳ್ಳುವ ಭಾವ!

ಎದುರಲ್ಲಿ ಭಾರತದ ಅತ್ಯಂತ ಗಣ್ಯಾತಿಗಣ್ಯರು ಇವರಿಗಾಗಿ ಎದಿರು ನೋಡುತ್ತಿದ್ದರೆ ವಿವೇಕಾನಂದರು ಮಣ್ಣನ್ನು ಎತ್ತಿ ಮೈಮೇಲೆ ಸುರಿದುಕೊಳ್ಳುತ್ತಿದ್ದಾರೆ! ಅಲ್ಲಿದ್ದ ಸ್ವಾಮಿ ಯೋಗಾನಂದರು ಹೇಳುತ್ತಾರೆ" ಏನಿದು ಸ್ವಾಮೀಜಿ , ಅಲ್ಲಿ ನೋಡಿ ನಿಮ್ಮನ್ನು ಸ್ವಾಗತಿಸಲು ಎಂತಾ ಗಣ್ಯಾತಿಗಣ್ಯರು ಆಗಮಿಸಿದ್ದಾರೆ! ಆದರೆ ನೀವು ಮಾಡುತ್ತಿರುವುದೇನು? ಇದೇನು ಹುಚ್ಚಾಟ?

ಆಗ ಸ್ವಾಮೀಜಿ ಹೇಳುತ್ತಾರೆ" ನಾಲ್ಕು ವರ್ಷಗಳ ಕಾಲ  ಭೋಗ ಭೂಮಿಯಲ್ಲಿದ್ದು ಬಂದಿರುವೆ.ಅಲ್ಲಿನ ಭೋಗದ ಅಂಶವೇನಾದರೂ ನನಗೆ ತಾಕಿ ಅದರಿಂದ ಉಂಟಾಗಿರಬಹುದಾದ ಪಾಪವನ್ನು  ಭಾರತದ ಪವಿತ್ರ ಮಣ್ಣಿನಿಂದ ಮೊದಲು ತೊಳೆದುಕೊಳ್ಳುವೆ"

 ಈ ಮಣ್ಣು ಪವಿತ್ರ ವೆಂಬುದು ಕೇವಲ ಬಾಯ್ಮಾತಿನ ವಸ್ತುವಾಗಿರಲಿಲ್ಲ. ವಿವೇಕಾನಂದರ ರಕ್ತದ ಕಣಕಣದಲ್ಲೂ ನಮ್ಮ ಭೂಮಿಯ ಮಣ್ಣಿಬಗ್ಗೆ ಅತ್ಯಂತ ಪಾವಿತ್ರ್ಯದ ಭಾವ ತುಂಬಿ ಹೋಗಿತ್ತು.

ಆದ್ದರಿಂದಲೇ ಅವರ ಹೆಸರಿಗೆ ಅಷ್ಟೊಂದು ಆಕರ್ಶಣೆ! ಅವರ ಹೆಸರಿಗೆ ಅಷ್ಟೊಂದು ಶಕ್ತಿ! ಅವರ ಮಾತುಗಳು ಮಂತ್ರವಾಗಲು ಈ ಶ್ರೇಷ್ಠ ಭಾವನೆಗಳೇ ಕಾರಣ!

ವಿವೇಕಾನಂದರನ್ನು ಬದುಕಿದ್ದಾಗ ನೋಡದ ಅವರು ಸ್ವರ್ಗಸ್ಥರಾದ ಮೂವತ್ತು ವರ್ಷಗಳ  ನಂತರ ಅವರ ಸಾಹಿತ್ಯವನ್ನು ಓದಿದ ಫ್ರೆಂಚ್ ಸಾಹಿತಿ ರೊಮ್ಯಾನ್ ರೊಲ್ಯಾಂಡ್ ಹೇಳುತ್ತಾರೆ" ವಿವೇಕಾನಂದರ ಪ್ರತಿ ಮಾತುಗಳೂ ರೋಮಾಂಚನಕಾರಿ! ಪ್ರತೀ ವಾಕ್ಯವನ್ನು ಓದುವಾಗ ನನ್ನ ಮೈ ನವಿರೇಳುತ್ತದೆ! ಮುಂದುವರೆದು ಹೇಳುತ್ತಾನೆ. ಅವರ ಸಾಹಿತ್ಯ ಓದುವಾಗಲೇ ನನಗೆ ಇಂತಾ ಅನುಭವವಾಗುತ್ತದಲ್ಲಾ! ಅವರ ತುಟಿಗಳಿಂದ ನೇರವಾಗಿ ಮಾತನ್ನು ಕೇಳಿದ ಆ ಭಾಗ್ಯಶಾಲಿಗಳಿಗೆ ಇನ್ನೆಂತಾ ಅನುಭವವಾಗಿರಬೇಕು!

ವಿವೇಕಾನಂದರ 150ನೇ ಜನ್ಮ    ವರ್ಷದಲ್ಲಿ ಅವರ ವಿಚಾರ ಧಾರೆಯು ನಮ್ಮನ್ನು ಎಚ್ಚರಿಸಬೇಕಾಗಿದೆ. ಎಚ್ಚೆತ್ತ ಭಾರತವು ವಿಶ್ಚ್ವವನ್ನು  ಎಚ್ಚರಿಸಿ ವಿಶ್ವಕಲ್ಯಾಣಕ್ಕೆ ಕಾರಣವಾಗಬೇಕಾಗಿದೆ. ಬನ್ನಿ, ವಿವೇಕಾನಂದರ 150ನೇ ಜನ್ಮ    ವರ್ಷಅಭಿಯಾನದಲ್ಲಿ ಕೈ ಜೋಡಿ ಸೋಣ, ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.

 

Rating
No votes yet

Comments

Submitted by kavinagaraj Sat, 01/12/2013 - 09:26

ಸಕಾಲಿಕ ಮತ್ತು ಸಮಯೋಚಿತ ಲೇಖನಕ್ಕಾಗಿ ಅಭಿನಂದನೆಗಳು, ಶ್ರೀಧರ್.
ಸ್ವಾಮಿ ವಿವೇಕಾನಂದರ ಈ ವಾಣಿ ನೆನಪಿನಲ್ಲಿಟ್ಟುಕೊಳ್ಳೋಣ:
"ಎಲ್ಲಕ್ಕಿಂತ ಹೆಚ್ಚಾಗಿ, ರಾಜಿಯಾಗುವ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ತತ್ವ, ಧ್ಯೇಯಗಳಿಗೆ ಅಂಟಿಕೊಂಡಿರಿ ಮತ್ತು ಬೆಂಬಲಿಗರನ್ನು ಗಳಿಸುವ ಆಸೆಂದ, ಇತರರ "ಹುಚ್ಚು ಭ್ರಮೆ"ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವೇ ವಿಶ್ವಕ್ಕೆ ಆಧಾರವಾಗಿದೆ, ನಿಮಗೆ ಇನ್ನು ಯಾವ ಆಧಾರದ ಅಗತ್ಯವಿದೆ?"
ನಂಬಿದ ಮಾರ್ಗ ಮುಖ್ಯ. ಇತರರ ಮೆಚ್ಚುಗೆ, ಟೀಕೆ ಎರಡನೆಯದು.

Submitted by hariharapurasridhar Sat, 01/12/2013 - 21:18

In reply to by kavinagaraj

ನಾಗರಾಜ್, ಜನರ ಹೊಗಳಿಕೆ-ತೆಗಳಿಕೆಗೆ ಒಂದು ಕಾಲದಲ್ಲಿ ತಲೆಕೆಡಸಿಕೊಂಡು ಸಂಪದ ಸಾಕಪ್ಪ! ಎಂದು ಹೊರಹೋಗಿದ್ದ ಕಾಲವೂ ಇತ್ತು. ಈಗ ಒಂದು ಲೇಖನ ಬರೆದು ಮತ್ತೆ ಪುರಸತ್ತಾದಾಗ ಇಲ್ಲಿ ಬರುವೆ. ಇವತ್ತು ಬಂದೆ. ಆಶ್ಚರ್ಯವಾಯ್ತು. ಐನೂರಕ್ಕೂ ಹೆಚ್ಚು ಜನ ನೋಡಿದ್ದಾರೆ. ಒಂದು ಮಾತು ಹೇಳಬಯಸುವೆ. ಮಾತುಗಳು ತಲೆಯಿಂದ ಬಂದದ್ದಲ್ಲ. ಹೃದಯದಿಂದ ಬಂದದ್ದು.

Submitted by ಮಮತಾ ಕಾಪು Sat, 01/12/2013 - 12:37

ಸ್ವಾಮಿ ವಿವೇಕಾನಂದರ ಈ ವಾಣಿ ನೆನಪಿನಲ್ಲಿಟ್ಟುಕೊಳ್ಳೋಣ: "ಎಲ್ಲಕ್ಕಿಂತ ಹೆಚ್ಚಾಗಿ, ರಾಜಿಯಾಗುವ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ತತ್ವ, ಧ್ಯೇಯಗಳಿಗೆ ಅಂಟಿಕೊಂಡಿರಿ ಮತ್ತು ಬೆಂಬಲಿಗರನ್ನು ಗಳಿಸುವ ಆಸೆಂದ, ಇತರರ "ಹುಚ್ಚು ಭ್ರಮೆ"ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಡಿ" . ಅವರವರ ವಿಚಾರಗಳು ಅವರವರಿಗೆ ಸರಿ ಎಂದೆನಿಸುವುದು ಸಹಜ. ಆದರೆ ಇನ್ನೊಬ್ಬರ ನಂಬಿಕೆ ವಿಚಾರಗಳನ್ನು ಟೀಕಿಸುವುದು ಸರಿಯಲ್ಲ, ಒಳ್ಳೆಯ ವಿಚಾರಗಳನ್ನು ಮಾತ್ರ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳೋಣ..

Submitted by rasikathe Mon, 01/21/2013 - 04:37

ನಮಸ್ಕಾರ‌ ಸ್ರಿಧರ್ ಅವರೆ, ಒಳ್ಳೆಯ‌ ಲೇಖನ‌ , ಇದರ‌ ಬಗ್ಗೆ ಒಮ್ದು ಯು ಟ್ಯುಬ್ ಕೂಡಾ ಇದೆ. ನಾನು ಅವರ‌ ಜೇವನ‌ ಕಥೆ ಫ್ರೆ0ಛ್ ಕವಿ ಬರೆದಿದ್ದು ಓದಿದ್ದೆ. ತು0ಬಾ ಖುಷಿಯಾಯಿತು ಓದಿ.
ಮೀನಾ ಸುಬ್ಬರಾವ್.

Submitted by hariharapurasridhar Mon, 01/21/2013 - 20:14

In reply to by rasikathe

ಆತ್ಮೀಯರಾದ ಮೀನಾ ಸುಬ್ಬರಾವ್, ನಮಸ್ತೆ, ನಿಮ್ಮ [ಪ್ರೋತ್ಸಾಹಕ್ಕೆ ಧನ್ಯವಾದಗಳು. ಇದೇ ವಿಷಯದಲ್ಲಿ ನಾನು ಮಾಡಿರುವ ಭಾಷಣದ ಧ್ವನಿ ಈ ಕೊಂಡಿಯಲ್ಲಿದೆ. ಕೇಳಿ.ನಿಮ್ಮ ಅಭಿಪ್ರಾಯ ತಿಳಿಸಿ. http://vivekananda150hassan.blogspot.in