ಜಯಂತ ಕಾಯ್ಕಿಣಿಯವರ 'ಸೇವಂತಿ ಪ್ರಸಂಗ ' ನಾಟಕ ಮತ್ತು ಒಂದು ಹಾಡು

ಜಯಂತ ಕಾಯ್ಕಿಣಿಯವರ 'ಸೇವಂತಿ ಪ್ರಸಂಗ ' ನಾಟಕ ಮತ್ತು ಒಂದು ಹಾಡು

ಹೋದ ವಾರ ನಾನು ಧಾರವಾಡಕ್ಕೆ ಹೋದಾಗ ಇನ್ನೊಂದು ಕಂತು ಪುಸ್ತಕ ಖರೀದಿ ಮಾಡಿದೆ . ಹಿಂದೆ ಬಿ.ಜಿ.ಎಲ್. ಸ್ವಾಮಿಯವರ ಹಸಿರು ಹೊನ್ನು ಓದಿದ್ದೆ ; ಬಹಳ ಚೆನ್ನಾಗಿದೆ; ನನ್ನ ಸಂಗ್ರಹದಲ್ಲಿ ಇರಲಿ ಎನ್ನಿಸಿ ತಗೊಂಡೆ. ಜತೆಗೆ ಜಯಂತ ಕಾಯ್ಕಿಣಿಯವರ ಎರಡು ನಾಟಕಗಳು- ಜತೆಗಿರುವನು ಚಂದಿರ ಮತ್ತು ಸೇವಂತಿ ಪ್ರಸಂಗ . ಎರಡೂ ಚೆನ್ನಾಗಿವೆ. ಇದರಲ್ಲಿ ಸೇವಂತಿ ಪ್ರಸಂಗ ಬರ್ನಾರ್ಡ್ ಶಾ ನ ಪಿಗ್ಮೇಲಿಯನ್ ಆಧಾರಿತ - ಹೂ ಹುಡುಗಿ ಎಂಬ ಹೆಸರಿನಲ್ಲಿ ಚಂದನ/ಡಿ.ಡಿ.೧ ರಲ್ಲಿ ಆಗಾಗ ಬರುತ್ತಿತ್ತು . ಆಕಾಶವಾಣಿಯಲ್ಲಿ ರಾಷ್ಟ್ರೀಯ ನಾಟಕವಾಗಿಯೂ ಬಂದಿತ್ತು. ಜೋಪಡಿಯ ಹುಡುಗಿಯೊಬ್ಬಳನ್ನು ಒಬ್ಬ ಭಾಷಾಶಾಸ್ತ್ರಿ ತನ್ನ ಗೆಳೆಯ ಸಮಾಜಶಾಸ್ತ್ರಜ್ಞನ ಜತೆ ಸೇರಿ ಸುಧಾರಿಸಿ ಸೌಂದರ್ಯರಾಣಿ ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾಡುವದು ಕಥೆಯ ಹಂದರ .ನಾಟಕ ಚುರುಕಾಗಿದ್ದು , ಲವಲವಿಕೆಯ ಸಂಭಾಷಣೆಗಳಿವೆ. ಒಳ್ಳೊಳ್ಳೆ ಹಾಡುಗಳು ಇದರಲ್ಲಿದ್ದು , ನೆನಪಿನಲ್ಲಿ ಉಳಿದಿದ್ದವು .

ಅಲ್ಲಿನ ಒಂದು ಹಾಡು ನಿಮ್ಮ ಸಂತೋಷಕ್ಕಾಗಿ .

ಭಾರ್ಗವನ ಬ್ರಹ್ಮಚರ್ಯದ ಹಾಡು: -

ಇದ್ದೀನಪ್ಪಾ ಹಾಯಾಗಿ ಬೇಡಾ ಹೆಣ್ಣಿನ ತಂಟೆ
ರಾತ್ರಿ ಕಂಡ ಬಾವೀಲಿ ಹಗಲೇ ಬೀಳೋದುಂಟೆ ||

ಬೇಕಾದಾಗ ಏಳ್ತೀನಿ ಬೇಕಾದಾಗ ಮಲಗ್ತೀನಿ
ಒದ್ದೆ ಟವೆಲ್, ಬೆವರಿನ ಶರ್ಟು ಬೇಕೆಂದಲ್ಲಿ ಹಾಕ್ತೀನಿ
ಶೇವಿಂಗ ಸೆಟ್ಟು ತೊಳೆಯದೆ ಹಾಗೇ ಕನ್ನ್ಡಿ ಎದ್ರು ಬಿಡ್ತೀನಿ
ಇಡೀ ರಾತ್ರಿ ಎಲ್ಲಾ ಕೋಣೆಯ ದೀಪಾ ಫ಼್ಯಾನು ಹಚ್ತೀನಿ|| ಇದ್ದೀನಪ್ಪಾ ||

ಬೇಕಾದವರಿಗೆ ಬೇಕೆಂದಾಗ ಬರಿತೀನಿ ಪತ್ರ
ಕೆಲಸಾ ಬಿಟ್ಟು ಓಡ್‍ಹೋಗತೀನಿ ಕರೆದಾಗೆಲ್ಲ ಮಿತ್ರ
ಸೆಮಿನಾರು ಸಮಾರಂಭ ಪಾರ್‍ಟಿಗೀರ್‍ಟಿ ಬಂತೆ
ಇಡೀ ರಾತ್ರಿ ಮೆರಿತೀನಿ ಇಲ್ದೆ ಮನೆ ಚಿಂತೆ ||ಇದ್ದೀನಪ್ಪಾ ||

ರಾಗದಲ್ಲಿ ಮಾತು -
ನೀವು ಹೊಸಾ ಬಟ್ಟೆ ಹಾಕ್ಕೊಂಡಿದೀರಾ
ಹೇಗಿದೇಂತಾ ಕೇಳ್ತೀರಾ
ಆಗ ನಾನು ಏನ್ ಹೇಳಬೇಕು?
ಕಲ್ಯಾಣಪುರ್: ಹೇಗಿದೇಂತ
ಬಾರ್ಗವಶಾಸ್ತ್ರಿ :
ಊಹುಂ ಊಹುಂ ಊಹುಂ ಚೆನ್ನಾಗಿದೇ ಅಂತ
ಹೇಗಿದ್ದರೂ ಕೂಡ ಚೆನ್ನಾಗಿದೇ ಅಂತ

ನೀವು ಹೊಸಾ ತಿಂಡಿ ಮಾಡ್ತೀರಾ
ಹೇಗಿದೇಂತಾ ಕೇಳ್ತೀರಾ
ಆಗ ನಾನು ಏನ್ ಹೇಳಬೇಕು?
ಕಲ್ಯಾಣಪುರ್: ಹೇಗಿದೇಂತ
ಬಾರ್ಗವಶಾಸ್ತ್ರಿ :
ಊಹುಂ ಊಹುಂ ಊಹುಂ ಚೆನ್ನಾಗಿದೇ ಅಂತ
ಹೇಗಿದ್ದರೂ ಕೂಡ ಚೆನ್ನಾಗಿದೇ ಅಂತ
ಕಲ್ಯಾಣಪುರ್: ಚೆನ್ನಾಗಿದೆ ಚೆನ್ನಾಗಿದೆ ( ತಲೆದೂಗಿ)
ಬಾರ್ಗವಶಾಸ್ತ್ರಿ : ಈಗ ಬಂತು ಸಂಕಟಾ
ಚೆನ್ನಾಗಿದೆ ಅಂದೆನೋ ತಿನ್ನ ಬೇಕೋ ಎಲ್ಲಾ
ಸತ್ಯವನ್ನು ಅಂದೆನೋ ನನ್ನೇ ತಿನ್ನುವಳಲ್ಲಾ ||ಇದ್ದೀನಪ್ಪಾ ||

ಹೀಗೆಯೇ 'ಅಯ್ಯೋ ಪಾಪ ಶಾಸ್ತ್ರೀ , ಎಂಥಾ ಗತಿ ಬಂತ್ರೀ ' ಮತ್ತಿತರ ನಾಟಕದ ಹಾಡುಗಳು ಇವೆ.

ಅಕ್ಷರ ಪ್ರಕಾಶನ, ಹೆಗ್ಗೋಡು(ಸಾಗರ) ದವರು ಪ್ರಕಟಿಸಿದ ಈ 'ಸೇವಂತಿ ಪ್ರಸಂಗ'ದ ಬೆಲೆ ೪೦ ರೂ. ಪುಟಗಳು ೭೬.

Rating
No votes yet