ಜಯತೆ, ಜಯತೆ,ಸತ್ಯಮೇವ ಜಯತೆ...

ಜಯತೆ, ಜಯತೆ,ಸತ್ಯಮೇವ ಜಯತೆ...


”ಸತ್ಯ’ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ’ಸತ್ಯ ಹರಿಶ್ಚಂದ್ರ’. ಸತ್ಯಕ್ಕಾಗಿ ಏನೆಲ್ಲಾ ಕಷ್ಟ-ನಷ್ಟ,ನೋವುಗಳನ್ನು ಪಡೆದನೆಂಬುದನ್ನು ನಾವು ಕೇಳಿದ್ದೇವೆ, ಚಲನಚಿತ್ರದಲ್ಲಿ ಅಣ್ಣಾವ್ರ ಪಾತ್ರ ಕಣ್ಣು ಮುಂದೆ ಬಂದರೂ ಅವರು ಅನುಭವಿಸುವ ಚಿತ್ರ-ವಿಚಿತ್ರ ಕಷ್ಟಗಳನ್ನು ನೋಡಿ ಕಣ್ಣಲ್ಲಿ ಕಾವೇರಿ ಹರಿಸದವರು ಯಾರಿದ್ದಾರೆ?. ಸತ್ಯ ಹರಿಶ್ಚಂದ್ರನ ಪರಿಸ್ಥಿತಿಗೆ ಮರುಕ ಪಟ್ಟಿದ್ದೇವೆ. ಸತ್ಯ ಹೇಳಿದ ಫಲವಾಗಿ ಅನೇಕ ಕಷ್ಟ-ನೋವುಗಳನ್ನು ಅನುಭವಿಸಿದ ಸತ್ಯ ಹರಿಶ್ಚಂದ್ರ ಎಲ್ಲರಿಗೂ ಪಾಠ ಕಲಿಸಿಹೋಗಿದ್ದಾನೆ. ’ಸತ್ಯ, ಸತ್ಯ’ ಅಂತೇನಾದರೂ ನೀವೂ ಆದರ್ಶಕ್ಕೆ ಬಲಿಬಿದ್ದರೆ ನನ್ನಂತೆಯೇ ಕಷ್ಟ ಅನುಭವಿಸಬೇಕಾಗುತ್ತದೆ.ಅದಕ್ಕಾಗಿಯೇ ಏನೋ ಇಂದು ’ಸತ್ಯ’’ಸತ್ಯವಂತ’’ಸತ್ಯವಂತರು’ ಎನ್ನುವ ಮಾತುಗಳು ಹಾಗು ಮನುಷ್ಯರೂ ತುಂಬಾ ಅಪರೂಪವಾಗಿಬಿಟ್ಟಿವೆ. ’ಸತ್ಯ’, ’ಸತ್ಯ’ ಎಂದರೆ ’ಕಷ್ಟ’,’ ಕಷ್ಟ’ ಎನ್ನುವಂತಾಗಿದೆ. ನಮ್ಮ ಪ್ರಾಚೀನರೋ ’ಸತ್ಯಂ ವದ , ಧರ್ಮಂ ಚರ" ಎಂದು ಹೇಳಿದ್ದಾರೆ ಆದರೆ ಈಗೇನಾಗಿದೆ ’ಸತ್ಯಂ ವಧ, ಧರ್ಮ ನಚರ’ ಆಗಿರೋದು ವಿಪರ್ಯಾಸ ಹಾಗು ಹಾಸ್ಯಾಸ್ಪದ.

 ಯಾವುದಾದರೂ ಸಂದರ್ಭಗಳಲ್ಲಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕಾದರೆ ನಾನು ಹೇಳುತ್ತಿರುವುದು ’ಸತ್ಯ’ ಅಂದಾಗ ಧುತ್ತನೆ ಮೇಲೆರಗುವ ಪ್ರಶ್ನೆ ಎಂದರೆ ’ನೀನೇನು ಸತ್ಯ ಹರಿಶ್ಚಂದ್ರನ ಮೊಮ್ಮಗನಾ? ಅಥವಾ ಸತ್ಯ ಹರಿಶ್ಚಂದ್ರನ ತುಂಡಾ?’ ಅಂತ ಮೂದಲಿಸುವುದನ್ನು  ನಾವೆಲ್ಲಾ ಕಾಣಬಹುದು. ಇನ್ನು ನಮ್ಮ ನ್ಯಾಯಾಲಯಗಳಲ್ಲಿ ಸಾಕ್ಷಿಕಟ್ಟೆಯಲ್ಲಿ ’ನಾನು ಹೇಳುವುದೆಲ್ಲಾ ಸತ್ಯ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ’ ಎಂದು ನ್ಯಾಯಾಧೀಶರ ಮುಂದೆ ಪ್ರಮಾಣ ಮಾಡಿ ಹೇಳುವ ಮಾತುಗಳು ಎಷ್ಟು ಸತ್ಯದಿಂದ ಕೂಡಿರುತ್ತದೆ ಎನ್ನುವುದು ನಮಗೆಲ್ಲಾ ತಿಳಿದೇಯಿದೆ.ಅದು ಏನೇ ಆಗಿರಲಿ ಸತ್ಯ ವನ್ನು ನುಡಿಯುವುದು ,ಸತ್ಯವಂತನಾಗುವುದು ತುಂಬಾ ಕಠಿಣವಾದುದು ಹಾಗು ಅದಕ್ಕೆ ಸಾಧನೆಯ ಅಗತ್ಯವಿದೆ.

 

ಇನ್ನು ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಮಹಾತ್ಮ ಗಾಂಧಿಯವರ ಜೀವನ ಅನುಭವವನ್ನು ಓದಿದ ನೆನಪು. ತಾಯಿ ಪುತಲೀ ಬಾಯಿ ಹೇಳುತ್ತಿದ್ದ ಸತ್ಯ ಹರಿಶ್ಚಂದ್ರನ ಕಥೆಯನ್ನು ಕೇಳಿ ತುಂಬಾ ಪ್ರೇರಣೆಯನ್ನು ಅವರು ಪಡೆದಿದ್ದರೆಂದು ನಾವು ತಿಳಿದುಕೊಂಡಿದ್ದೇವೆ. ಅದರ ಉಲ್ಲೇಖವು ಗಾಂಧಿಜೀಯವರ ಜೀವನ ಚರಿತ್ರೆ "My Experiments with Truth" ನಲ್ಲಿ ಕಾಣಸಿಗುತ್ತದೆ.

ಹಾಗೆಯೇ ಪಂಡಿತ್ ಜವಾಹರಲಾಲ ನೆಹರು ರವರ ಪೆನ್ನಿನ ಕಳುವಿನ ಪ್ರಕರಣ, ಸತ್ಯ ಮುಚ್ಚಿಡುವುದು,ತಂದೆ ಮೋತಿಲಾಲ ನೆಹರು ಕೇಳುವುದು, ಅವರಿಂದ ಬಾಸುಂಡೆ ಬರುವ ಹಾಗೆ ಹೊಡೆಸಿಕೊಳ್ಳುವುದು ಅನಂತರ ಸತ್ಯ ಹೇಳುವುದು ಹಾಗು ಅದರಿಂದ ಅನುಭವಿಸುವ ಕಷ್ಟ ಕೇಳಿಯೇ ಮೈ ಜುಮ್ಮೆನ್ನುತ್ತದೆ ಇನ್ನು ಅನುಭವಿಸಿದವರ ಪಾಡು ದೇವರೇ ಬಲ್ಲ.

ಗೋವಿನ ಪದ್ಯ ಯಾರಿಗೆ ತಾನೆ ಗೊತ್ತಿಲ್ಲ! ಅದರಲ್ಲಿ

                 ಸತ್ಯವೇ ನಮ್ಮತಾಯಿ-ತಂದೆ ಸತ್ಯವೇ ನಮ್ಮ ಬಂಧು-ಬಳಗೆ
                 ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು

ಎಂಬ ಸಾಲುಗಳು ನಮ್ಮ ನಾಡಿನ,ಜನರ ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುತ್ತದೆ ಎಂದು ನಮ್ಮ ಅಚ್ಚುಮೆಚ್ಚಿನ ಕನ್ನಡದ ಗುರುಗಳಾದ ದಿ|| ಕೆ,ಎಸ್,ಗುರುರಾಜರಾವ್ ಹೇಳುತ್ತಿದ್ದ ರೀತಿ,ಗಾಂಭೀರ್ಯ ಶಾಲಾ ದಿನಗಳಲ್ಲಿ ನಮ್ಮನ್ನು ಅಕ್ಷರಶಹ ಸತ್ಯ ಹರಿಶ್ಚಂದ್ರನ ವಂಶದವರೇ ಎನ್ನುವಂತೆ ಮಾಡಿಬಿಟ್ಟಿದ್ದಂತೂ ದಿಟ.

ಮೊದಲನೇ ಪಾಳಿ ಮುಗಿಸಿ ಬಸ್ಸ್ ಏರುತ್ತಿದ್ದಂತೆ ಪ್ರೇಯಸಿ ನಿದಿರೆ ಕ್ಷಣಗಳಲ್ಲಿ ನಮ್ಮನು ಆವರಿಸಿಬಿಡುತ್ತಾಳೆ ಎಚ್ಚರವಾಗುವುದು ನಮ್ಮ Stop ನಲ್ಲೇ ಅದೂ ಗೆಳೆಯರು ಎಬ್ಬಿಸಿದರೆ ಉಂಟು ಅವರೂ ಮರೆತರೆ ಮುಂದಿನ stop ಇಲ್ಲವೇ ಕೊನೆಯ stop  ಇದ್ದೇಇರುತ್ತದಲ್ಲ. ಅವತ್ತು ಹಾಗಗಲಿಲ್ಲ ಬಿಡಿ ನನ್ನ stop  ಬರುವುದರೊಳಗಾಗಿ ನಾನು ನಿದ್ದೆಯಿಂದ ಎಚ್ಚರಗೊಂಡಿದ್ದೆ. ಮನದಲ್ಲಿ ನೂರು ಯೋಚನೆಗಳು ಮನೆಮಾಡಿತ್ತು. ಕತ್ರಿಗುಪ್ಪೆಯ HDFC ಬ್ಯಾಂಕಿನ ಸಿಗ್ನಲ್ ನಲ್ಲಿ ನಮ್ಮ ಕಾರ್ಖಾನೆಯ ಬಸ್ಸು ನಿಲ್ಲಿಸಿದಾಗ ಸಂಜೆಯ ಬಾಗಿಲು ತೆರೆದುಕೊಳ್ಳುವ ಸಮಯವಾಗಿತ್ತು.ಸಿಗ್ನಲ್ ದಾಟಿ ಮನೆಯ ಕಡೆ ಪಾದ ಬೆಳಸುವುದು ನಿತ್ಯಕಾಯಕ. ಮನೆಯಲ್ಲಿ ಶ್ರೀಮತಿ ಹಾಗೂ ಮಗ ಅನೀಶ್ ಇಲ್ಲದ ಕಾರಣ ಅನ್ನಕುಟೀರದಲ್ಲೇ ಕಾಫಿ ಹೀರಿ ಮನೆಯ ಕಡೆ ನಡೆದೆ. ಬರೆಯದೇ ಇರುವ,ಬರೆಯಬೇಕಾಗಿರುವ ಸಂಗತಿಗಳು,ಕಥೆ,ಕವನಗಳು ಬಹಳಷ್ಟಿದೆ ಎಲ್ಲವನ್ನೂ ನನ್ನ ಬ್ಲಾಂಗಣದಲ್ಲಿ ಟೈಪಿಸುವುದು ಯಾವಾಗ?, ಅದಕ್ಕೆ ಸಮಯ ಯಾವಾಗ ಸಿಗುತ್ತೋ? ಎಂದು ಯೋಚಿಸುತ್ತಾ ಮನೆಯ ಹಾದಿ ಹಿಡಿದೆ. ಕಂಬಾರರ ಮನೆ ’ಸಿರಿ ಸಂಪಿಗೆ’ ದಾಟಿ ನಟ ಲೋಕೇಶ್ ಮನೆಯಕಡೆ ಒಂದು ನೋಟ ಬಿಸಾಕಿ ಮನದಲ್ಲಿ ಪುಟಿದೇಳುವ ಭಾವ ಲಹರಿಗೆ ಹೆಜ್ಜೆ-ಹೆಜ್ಜೆಗಳು ಸಾಥ್ ನೀಡುತ್ತಾ ರಾಮ ದೇವರ ಗುಡಿ ರಸ್ತೆ ತಲುಪಿ, ಪಕ್ಕದಲ್ಲೇ ಬರ್ರ್ ಎಂದು ಹೋದ Yamaha  ಗಾಡಿಯವನ್ನು ಮನದಲ್ಲೇ ಬೈದುಕೊಳ್ಳುತ್ತಾ ಹನ್ನೆರಡು ನಿಮಿಷಗಳ ಕಾಲುನಡಿಗೆಯನ್ನು ಸವೆಸಿದ್ದೆ. ಮನೆ ತಲುಪಿದ ತಕ್ಷಣ ಮೊದಲು ಮಾಡುವ ಕೆಲಸವೆಂದರೆ ನನ್ನ ಗಣಕಯಂತ್ರವನ್ನು ಆನ್ ಮಾಡಿ ಬೆಳಗಿನಿಂದ ನನ್ನ ಕಾಲುಗಳನ್ನ ಹಿಡಿದು ಚಿತ್ರಹಿಂಸೆಕೊಡುವ ಶೂಗಳು,ಹಾಗು ಮೈತುಂಬಾ ಯಂತ್ರಗಳ ವಾಸನೆಯನ್ನು ತರೋ ಆಫೀಸ್ ಸಮವಸ್ತ್ರ ತೆಗೆದು ಬೇರೆ ಬಟ್ಟೆಗಳನ್ನು ಧರಿಸುವುದು.ಮುಖತೊಳೆದುಕೊಳ್ಳುವುದು ಪ್ರೆಶ್ ಆಗುವಷ್ಟರಲ್ಲಿ ನನ್ನಾಕೆ ಮನೆಯಲ್ಲಿದ್ದರೆ ಬಿಸಿಬಿಸಿ ತಿಂಡಿ ಬರುತ್ತದೆ ಆದರೆ ಇಂದಿನ ಪರಿಸ್ಥಿತಿ ಬೇರೇನೇ ಅಗಿದೆ ಮನದ ಕೋಣೆಯೊಂದರಲ್ಲಿ ಅವಳಿಲ್ಲ ಮನೆಯಲಿಲ್ಲ ಎನ್ನುವ ಕೊರತೆಯನ್ನು ಎತ್ತಿಹಿಡಿಯುತ್ತಿತ್ತು. ಹೊಟ್ಟೆ ಚುರು ಚುರು ಎನ್ನುವಂತೆ ಅವಳ ನೆನಪೂ ಹೃದಯದಲ್ಲಿ ಚುರುಗುಟ್ಟುವಂತೆ ಮಾಡಿತು.ಗಣಕಯಂತ್ರದ ಮುಂದೆ ಕುಳಿತು ಮೊದಲು ತೆರೆಯುವುದು ನನ್ನ ಬ್ಲಾಂಗಣ,ಸಂಪದ ತಾಣ,ವಿಸ್ಮಯ ನಗರಿ ತಾಣ. ನನ್ನ ಬರಹಗಳಿಗೆ,ಕವನಗಳಿಗೆ ಯಾರು ಯಾರು ಪ್ರತಿಕ್ರಿಯಿಸಿದ್ದಾರೆ ಅಂತ ನೋಡುವುದು, ಅವುಗಳಿಗೆ ಉತ್ತರಿಸುವುದು. ಬೇರೆ ಲೇಖನಗಳನ್ನು,ಕವನಗಳನ್ನು ಓದುವುದು ಹಾಗು ಅವುಗಳಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು . ಆಮೇಲೆ ನನ್ನ ಮೈಲ್ ಗೆ ಬಂದ ಮಿಂಚೆಗಳ ಮೇಲೆ ಕಣ್ಣಾಡಿಸುವುದು ನನ್ನ ಪ್ರತಿದಿನದ  ದಿನಚರಿಯ ಒಂದು ಭಾಗ . ಅರ್ಧ ಗಂಟೆಯಲ್ಲಿ ಎಲ್ಲವನ್ನೂ ಮುಗಿಸಿ ಸ್ವಲ್ಪ ಸಮಯ ನಿದ್ದೆಗೆ ಜಾರುವುದು ವಾಡಿಕೆ. ಸಂಜೆ ೫-೩೦ ಕ್ಕೆ ಮತ್ತೆ ಎದ್ದು ಸಂಜೆ ದೇವರಿಗೆ ನಮಿಸಿ,ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಸಂಜೆ ಆರಕ್ಕೆ ಮನೆಯಿಂದ ನನ್ನ  Hero honda ಗಾಡಿ ಮೇಲೇರಿ  ಸೀತಾ ಸರ್ಕಲ್ ಬಳಿಯಿರುವ ’ಆಹಾರ್ ಉತ್ಸವ್’ ದರ್ಶಿನಿಗೆ  ಹೊರಟೆ. ಯಾವಾಗಲೂ ಗಾಡಿಯ ಮೇಲೇರಿದಾಗ ರಸ್ತೆಯ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸುವುದು ನಾನು ಪಾಲಿಸಿಕೊಂಡು ಬರುತ್ತಿರುವ 'policy'. ಎಷ್ಟೇ ದೂರವಾದರೂ ತಲೆಗೆ ತಲೆಗಾಪು ( ಶಿರಸ್ತ್ರಾಣ-Helmet) ಧರಿಸಿಯೇ ಹೋಗುತ್ತೇನೆ.ನಾನು ತಲೆಗಾಪನ್ನು ಹಾಕುವುದನ್ನು ಮರೆತರೆ ನನ್ನ ೩ ವರ್ಷದ ಮಗ ಅನೀಶ್ ತಪ್ಪದೇ ಹೇಳುತ್ತಾನೆ " ಪಪ್ಪಾ ಹೆಲ್ಮೆಟ್ ಹಾಕಿಲ್ಲ" ಅಂತ. ಇನ್ನು ಗಾಡಿಯನ್ನು ಓಡಿಸುವ ವೇಗವೂ ಅಷ್ಟೆ ೩೦-೪೦ ಕಿ,ಮೀ ಎಂದೂ ದಾಟದು. ಚೌಡೇಶ್ವರಿ ಚಿತ್ರಮಂದಿರ ದಾಟಿ, ಶ್ರೀ ಮಂಜುನಾಥೇಶ್ವರ ದೇವಸ್ಥಾನ ದಾಟಿದರೆ ಶ್ರೀಮಾತಾ ಕಲ್ಯಾಣ ಮಂಟಪ ಸಿಗುತ್ತೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಸೀತಾ ವೃತ್ತ ಸಿಗುತ್ತದೆ. ಇತ್ತೀಚೆಗಷ್ಟೇ ಇಲ್ಲಿ ಸೌರ ಚಾಲಿತ ಸಿಗ್ನಲ್ ದೀಪಗಳನ್ನು ಹಾಕಿದ್ದಾರೆ. ನಿಧಾನವಾಗಿ ಗಾಡಿ ಓಡಿಸುತ್ತಾ ಸಿಗ್ನಲ್ ದೀಪಗಳ ಮೇಲೆ ಕಣ್ಣಾಡಿಸಿದೆ ಎಡಗಡೆಗೆ ಚಲಿಸುವ ಹಸಿರು ದೀಪ-’ಎಡಗಡೆಗೆ ಹೋಗಬಹುದು’ ಎಂದು ಹೇಳುವಂತೆ ಹೊತ್ತಿತ್ತು, ಹೀಗಾಗಿ ಗಾಡಿಯನ್ನು ನಿಧಾನವಾಗ ರಸ್ತೆಯಲ್ಲಿ ಚಲಿಸಿದೆ.ಸುಮಾರು ೧೦೦ ಮೀಟರ್ ದೂರದಲ್ಲಿ ಸಂಚಾರಿ ಪೋಲೀಸ್ ನನ್ನ ಗಾಡಿಗೆ ಕೈ ಅಡ್ಡ ಹಾಕಿ ನಿಲ್ಲಿಸಿದ. ನಾನು ಗಾಡಿಯನ್ನು ನಿಲ್ಲಿಸಿದೆ. ಆತನನ್ನು ಕೇಳಿದೆ "ಏಕೆ ನನ್ನನ್ನು ನಿಲ್ಲಿಸಿದಿರಿ?" ಅದಕ್ಕೆ ಅವನು " ನೀವು ಸಿಗ್ನಲ್ ದೀಪವನ್ನು ಜಂಪ್ ಮಾದಿದಿರಿ ಅದಕ್ಕೆ  ನಿಲ್ಲಿಸಿದೆ " ಎಂದ. " ಇನ್ಸ್ಪೆಕ್ಟರ್ ಬಳಿ ಹೋಗಿ ದಂಡ ಕಟ್ಟಿ" ಎಂದ.ನಾನು ಗಾಡಿಯನ್ನು ನಿಲ್ಲಿಸಿ  ಇನ್ಸ್ಪೆಕ್ಟರ್ ಬಳಿ ಹೋದೆ." ಸಾರ್ ನಾನು ಸರಿಯಾಗೇ ಬಂದಿದ್ದೀನಿ" ಎಂದೆ ಅದಕ್ಕೆ ಅವನು " ಇಲ್ಲ ನೀವು ಸಿಗ್ನಲ್ ಜಂಪ್ ಮಾಡಿದ್ದೀರ ದಂಡ ಕಟ್ಟಿ" ಎಂದ. ಅದಕ್ಕೆ ನಾನು " ನೋಡಿ ಸಾರ್ ನಾನು ಸರಿಯಾಗೇ ಬಂದಿದ್ದೀನಿ, ನೀವು ತಪ್ಪಾಗಿ ಹೇಳ್ತಾಯಿದ್ದೀರ" ಎಂದೆ. ಅದಕ್ಕೆ ಅವನು " ಎಲ್ಲಿ ತೋರಿಸು ನಡಿ ಅಲ್ಲಿ ಗ್ರೀನ್ ಸಿಗ್ನಲ್ ಬರೋದೇ ಇಲ್ಲ, ಸುಮ್ಮನೆ ದಂಡ ಕಟ್ಟಿ ಹೋಗಿ" ಎಂದ.ನನಗಂತೂ ತುಂಬಾ ಸಿಟ್ಟು ಬಂತು" ತಪ್ಪು ಮಾಡಿಲ್ಲದಿದ್ದರೂ ಏಕೆ ನಾನು ದಂಡ ಕಟ್ಟಬೇಕು? ಕಟ್ಟೋದಿಲ್ಲ" ವೆಂದೆ. ಅದಕ್ಕೆ ಅವನು " ಜಾಸ್ತಿ ಮಾತನಾಡಬೇಡಿ ಸುಮ್ಮನೆ ದಂಡ ಕಟ್ಟಿ" ಎಂದ." ನೋಡಿ ಸಾರ್ ನಾನು ತಪ್ಪು ಮಾಡಿಲ್ಲ ಅದಕ್ಕೆ ಮಾತನಾಡುತ್ತಿರುವುದು. ಬನ್ನಿ ಅಲ್ಲಿ ಗ್ರೀನ್ ಸಿಗ್ನಲ್ ಬರೋದಿಲ್ಲ ಅಂತ ಹೇಳಿದಿರಲ್ಲಾ ತೋರಿಸುತ್ತೇನೆ" ಎಂದೆ. " ಆಯಿತು ನೋಡೇ ಬಿಡಣ ನಡೀರಿ" ಎಂದು ಅವನೂ ನನ್ನ ಕೂಡ ನಡೆದ ಹಾಗು ಅಲ್ಲಿ ಗ್ರೀನ್ ದೀಪ ಉರಿಯುವುದನ್ನು ನೋಡಿದ. ಗ್ರೀನ್ ದೀಪ ಉರಿಯುತ್ತಿದ್ದಂತೆ ನಾನು ಆತನಿಗೆ ತೋರಿಸಿದೆ. ಅದಕ್ಕೆ ಅವನು "ಆಯಿತು ನೀನು ತಪ್ಪು ಮಾಡಿಲ್ಲವೆಂದರೆ ನಿನ್ನ ಆತ್ಮಸಾಕ್ಷಿಯಾಗಿ ನಿನ್ನ ಎದೆಯನ್ನು ಮುಟ್ಟಿಕೊಂಡು ಹೇಳು ನೀನು ತಪ್ಪು ಮಾಡಿಲ್ಲ" ಎಂದು. ಅದಕ್ಕೆ ನಾನು ಜೋರಾಗಿಯೇ ಹೇಳಿದೆ ನನ್ನ ಎದೆಯ ಮೇಲೆ ಕೈಯಿಟ್ಟು" ನಾನು ತಪ್ಪು ಮಾಡಿಲ್ಲ ಹಾಗು ನಾನು ಸಿಗ್ನಲ್ ಜಂಪ್ ಮಾಡಿಲ್ಲ" ವೆಂದು. ಅದಕ್ಕೆ ಅವನು " ಅಯಿತು ಹೋಗು ದೇವರಿದ್ದಾನೆ ನೋಡಿಕೊಳ್ಳುತ್ತಾನೆ" ಎಂದ." ನೋಡಿ ಸಾರ್, ದೇವರಿದ್ದಾನೆ ನಿಜ , ದೇವರು ನೋಡಿಕೊಳ್ಳುತ್ತಾನೆ.  ನಾನು ಸರಿಯಾಗಿರುವುದಕ್ಕೆ ಜೋರಾಗಿ ಮಾತನಾಡುತ್ತಿರುವುದು. ಮಾಡದ ತಪ್ಪಿಗೆ ನಾನೇಕೆ ದಂಡ ಕಟ್ಟಬೇಕು’ ಎಂದೆ. ಅದಕ್ಕೆ ಅವನು " ಆಯಿತು ಹೋಗಿ, ಹೋಗಿ" ಎಂದ. ಎಂದೂ ಅಷ್ಟೋಂದು ಆವೇಗಕೊಳಗಾಗಿ ಮಾತನಾಡಿದ್ದೇ ಇಲ್ಲ. ಯಾವ ಗಳಿಗೆಯಲ್ಲಿ ನಾನು ಮಾಡದ ತಪ್ಪಿಗೆ ದಂಡ ಕಟ್ಟು ಎಂದನೋ ತುಂಬಾ ಸಿಟ್ಟು ಬಂದಿತ್ತು. ನನ್ನನ್ನು ನಾನು ಸಮರ್ಥವಾಗಿ ಸಮರ್ಥಿಸಿಕೊಂಡೆ ಹಾಗು ಅದರಲ್ಲಿ ವಿಜಯಿಯಾದೆ.ನಿಜ ನಾವು ಸರಿಯಾಗಿದ್ದರೆ ನಮ್ಮಲ್ಲಿ ಅಪಾರವಾದ ಶಕ್ತಿ ಬಂದೇ ಬರುತ್ತದೆ. ಆ ಶಕ್ತಿ ’ಸತ್ಯದಲ್ಲಿರುವ ಅಂತಃಶಕ್ತಿ ಎಂದೇ ಭಾವಿಸಿದ್ದೇನೆ. ಅನ್ಯಾಯವನ್ನು ಎದುರಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಯಾವಾಗ ನಮ್ಮ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತೆ ಅಂತ ಗೊತ್ತಾಗುತ್ತೋ ಆವಾಗ ತಕ್ಷಣ ನಮ್ಮಲ್ಲಿರುವ ಮನಸಾಕ್ಷಿ ಎಚ್ಚೆತ್ತುಕೊಂಡು ಅಪಾರವಾದ ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಪ್ರತಿಭಟಿಸುವ ಚೇತನ ನಮ್ಮದಾಗುತ್ತದೆ. ಸತ್ಯ-ಪ್ರಾಮಾಣಿಕತೆ ಮಾತ್ರ ನಮ್ಮಲ್ಲಿ ಅಂತಹ ಶಕ್ತಿ ಪ್ರಕಟಗೊಳ್ಳಲು ಸಾಧ್ಯ ಎಂಬುದು ನನಗೆ ಮನವರಿಕೆಯಾಯಿತು. ಸತ್ಯದ ಬಗ್ಗೆ ಇಲ್ಲಸಲ್ಲದ ಭ್ರಮೆಯೆಲ್ಲಾ ಒಮ್ಮೆಲೆ ಹಾರಿಹೋಗಿತ್ತು. ಸತ್ಯ ಹರಿಶ್ಚಂದ್ರ,ಗಾಂಧಿ ನನ್ನೆದುರಿಗೆ ಪ್ರಜ್ವಲಿಸುವ ತಾರೆಗಳಾಗಿ ಗೋಚರಿಸುತ್ತಿದ್ದರು.ಮನದಲ್ಲಿ ಕು.ರಾ. ಸೀತಾರಾಮ ಶಾಸ್ರಿಗಳು ರಚಿಸಿದ,ಮನ್ನಾಡೆ ಹಾಡಿದ

ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಗೀತೆ ಮನದಲ್ಲಿ ಗುನುಗುತ್ತಾ ಹೋದೆ ನಾಳೆಯ ಹೊಸದಿನಕ್ಕೆ ಮುನ್ನುಡಿ ಬರೆಯುತ್ತಾ....

 ಕುಮಾರ್. ಕೆ.ಎಸ್.

 

 

Rating
No votes yet

Comments