ಜಾತಕ ಫಲ

ಜಾತಕ ಫಲ

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ ಹೊರಗೆ ಯಾರದೋ ಮಾತು ಕೇಳಿತು. ತಲೆಯೆತ್ತಿ ನೋಡಿದರೆ, ಕಿಟಕಿ ಹೊರಗೆ ಒಂದು ಮಾರು ಆಚೆ ಮೂಲೆಮನೆಯ ನಾಗರಾಜ.

ನಾಗರಾಜನ್ನ ಸುಬ್ರಾಯರು ಹುಟ್ಟಿದಾಗಿಂದ ನೋಡ್ತಾ ಬಂದಿದಾರೆ. ಒಳ್ಳೇ ಹುಡುಗ. ಚೆನ್ನಾಗಿ ಓದಿ ಒಳ್ಳೇ ಕೆಲಸದಲ್ಲಿದಾನೆ. ಯಾವಾಗ್ಲಾದ್ರೂ ಎದುರುಗಡೆ ಸಿಕ್ಕರೆ "ನಮಸ್ಕಾರ ಶಾಸ್ತ್ರಿಗಳೇ" ಅಂತ ಹೇಳೋದು ಮರೆಯೋದಿಲ್ಲ. ಅವರಮ್ಮ ನಾಗಲಕ್ಷ್ಮಿ ಸುಬ್ರಾಯರು ಕೆಲಸ ಮಾಡ್ತಿದ್ದ ಮೈನ್ ಮಿಡಲ್ ಸ್ಕೂಲ್ ನಲ್ಲೇ ಓದಿದ್ದವಳಲ್ಲವೇ! ಅವತ್ತಿಂದ ಗೊತ್ತಿರುವ ಕುಟುಂಬ. ಮೂರು ತಿಂಗಳ ಹಿಂದೆ ಮಗನಿಗೆ ಸಂಬಂಧಗಳು ಬರ್ತಿವೆ. ಯಾವುದಾದರೂ ಕೂಡಿ ಬಂದರೆ ಜಾತಕ ತೋರಿಸೋದಕ್ಕೆ ಬರ್ತೀನಿ ಎಂದು ನಾಗಲಕ್ಷ್ಮಿ ಹೇಳಿದ್ದು ನೆನಪಾಯಿತು ಸುಬ್ರಾಯರಿಗೆ.

ನಾಗರಾಜ ಯಾರ ಜೊತೆಯೋ ಮಾತಾಡ್ತಿದ್ದ ಮೊಬೈಲಲ್ಲಿ. ಅರ್ಧರ್ಧ ಕೇಳಿಸ್ತು ಸುಬ್ರಾಯರಿಗೆ

"ನಮಸ್ಕಾರ. ನಾನು ನಾಗರಾಜ -ಮೊನ್ನೆ ನಾವೆಲ್ಲ ನಿಮ್ಮ  ಮನೇಗೆ ಬಂದಿದ್ವಲ್ಲ?"

"..."

ಆ ಕಡೆಯಿಂದ ಏನು ಉತ್ತರ ಬಂತೋ,  ಸುಬ್ರಾಯರಿಗೆ ಕೇಳೋದಿಲ್ವಲ್ಲ. ಆದ್ರೂ ಕುತೂಹಲದಿಂದ ಗಮನವಿತ್ತರು.

"ನಿಮ್ಮ ಮಗಳು ನನಗೆ ಬಹಳ ಇಷ್ಟವಾಗಿದ್ದಾರೆ. ಅವರಿಗೆ ನಾನು ಹಿಡಿಸಿದೀನಾ?"

"..."

"ನಮ್ಮಮ್ಮನಿಗೆ ಜಾತಕ-ಪಾತಕದಲ್ಲಿ ನಂಬಿಕೆ ಬಹಳ ಜಾಸ್ತಿ.. ಅದಕ್ಕೇ ಒಂದು ಸಲ ನಿಮಗೆ ಫೋನ್ ಮಾಡ್ತಿದ್ದೀನಿ, ಅವರು ಮಾಡೋ ಮೊದಲೇ. ಅದೊಂದು ಕಾರಣಕ್ಕೆ ಏನೂ ತಡೆ ಬರದಿರಲಿ ಅಂತ"

"..."

"ಏನಂದ್ರಿ? ಆಶ್ಲೇಷಾ ನಕ್ಷತ್ರವಾ? ಸರಿ. ನೋಡೋಣ.ನಮಸ್ಕಾರ"

ಹೀಗೆ ಮಾತು ಮುಗಿಸಿದ ನಾಗರಾಜನ ದನಿ ಕಂದಿದ್ದು ಸುಬ್ರಾಯರಿಗೆ ಗೊತ್ತಾಗದಿರಲಿಲ್ಲ

ಆಶ್ಲೇಷಾ ನಕ್ಷತ್ರದ ಹೆಣ್ಣು ಅಂತ ತಿಳಿದೂ, ತನ್ನ ಆಯಸ್ಸಿಗೇ ಸಂಚಕಾರ ಬರಬಹುದು ಅನ್ನೋ ಭವಿಷ್ಯ ಇದ್ದರೆ, ನಾಗಲಕ್ಷ್ಮಿಯಂತಹ ಜಾತಕ ನಂಬುವ ಹೆಂಗಸು ಎಷ್ಟೇ ಒಳ್ಳೇಯವಳಾದರೂ ಖಂಡಿತ ಒಪ್ಪಲಾರಳು ಅಂತ ಸುಬ್ರಾಯರಿಗೆ ಗೊತ್ತಿತ್ತು

***

ದೇವಸ್ಥಾನದಿಂದ ಮರಳಿಬಂದ ಸುಬ್ರಾಯರು ಒಳಗೆ ಬರುತ್ತಿದ್ದಾಗಲೇ ಹಜಾರದಲ್ಲೇ ಹೆಂಡತಿಯೊಡನೆ ಮಾತಾಡುತ್ತಿದ್ದ ನಾಗಲಕ್ಷ್ಮಿ"ನಮಸ್ಕಾರ ಮೇಷ್ಟ್ರೇ" ಎಂದಳು.

"ಮೇಷ್ಟ್ರೆ, ನಮ್ಮ ಹುಡುಗನಿಗೆ ಒಂದು ಸಂಬಂಧ ಬಂದಿದೆ. ಕಿತ್ತಾನೆ ರಾಮಚಂದ್ರ ಅಂತಿದಾರೆ. ಅವರ ಮಗಳು. ಜಾತಕ ತರಿಸಿಕೊಡ್ತೀನಿ. ನೀವು ನೋಡಿಕೊಡ್ಬೇಕು"

ಸುಬ್ರಾಯರಿಗೆ ಕಿತ್ತಾನೆ ರಾಮಚಂದ್ರ ಚೆನ್ನಾಗಿ ಪರಿಚಯವೇ! " ಹೌದೇನಮ್ಮ, ಒಳ್ಳೇದು. ನನಗೆ ಗೊತ್ತಿರೋ ಕುಟಂಬವೇ. ಒಳ್ಳೇ ಜನ. ಅದೇಕೆ, ಆ ಹುಡುಗಿ ಹುಟ್ಟಿದಾಗ ನಾನೇ  ಜಾತಕ ಬರೆದಿದ್ದು. ನಾನು ನೋಡಿ ನಿನಗೆ ಹೇಳ್ತೀನಮ್ಮ. ಮನೋಬಲ ಇದ್ದಮೇಲೆ, ಜಾತಕ ಬಲ ಇರೋದಿಲ್ವೇ? ಯೋಚನೆ ಮಾಡಬೇಡ" ಅಂತ ಹೇಳಿದ ಮೇಲೆ ನಾಗಲಕ್ಷ್ಮಿ ನೆಮ್ಮದಿಯಾಗಿ ಮನೆಗೆಹೋದರು.

***

ಸುಬ್ರಾಯರಿಗೆ ಈಚೆಗೆ ಅಷ್ಟಾಗಿ ಓಡಾಡೋದಕ್ಕೆ ಆಗ್ತಿಲ್ಲ. ಅದಕ್ಕೇ ಮಗ ನೀವಿಬ್ಬರೇ ಇರೋದು ಬೇಡ ಅಂತ ಹೇಳಿ ತಂದೆ ತಾಯಿಯನ್ನ ಮೈಸೂರಿಗೇ ಕರೆದುಕೊಂಡು ಬಂದುಬಿಟ್ಟು ಐದಾರು ವರ್ಷವಾಯಿತು. ಆದರೂ ಅಭಿಮಾನವಿರೋವ್ರು ಈಗಲೂ ಅವರನ್ನ ನರಸೀಪುರದಿಂದ, ಚನ್ನರಾಯಪಟ್ಟಣದಿಂದ ಹುಡುಕ್ಕೊಂಡು ಬರ್ತಿದ್ದರು.

ಕರೆ ಗಂಟೆ  ಬಾರಿಸಿದ್ದಕ್ಕೆ ಸುಬ್ರಾಯರೇ ಹೋಗಿ ಬಾಗಿಲುತೆಗೆದರು. ಸುಮಾರು ಆರು ವರ್ಷದ ಹುಡುಗಿಯ ಜೊತೆಗೆ ಚನ್ನರಾಯಪಟ್ಟಣದ ನಾಗಲಕ್ಷ್ಮಿ.

"ಬಾಮ್ಮಾ, ಚೆನ್ನಾಗಿದ್ದೀಯಾ? ಇದೇನಿದು ಮೈಸೂರಿನ ತನಕ"  ಅವಳನ್ನ ಕೂರಿಸುತ್ತಾ ಕೇಳಿದರು. ಅವಳನ್ನು ನೋಡಿ ವರ್ಷಗಳೇ ಕಳೆದಿದ್ದವು.

"ಏನಿಲ್ಲ ಮೇಷ್ಟ್ರೇ. ಇಲ್ಲೇ ಮೈಸೂರಿಗೆ ಒಂದು ಮದುವೇಗೆ ಅಂತ ಬಂದಿದ್ದೆ.  ನಿಮ್ಮನ್ನ ಮಾತಾಡಿಸ್ಕೊಂಡು ಹೋಗೋಣ ಅಂತ ಬಂದೆ"

"ಯಾರಿದು ಮಗು? ಮೊಮ್ಮೊಗೂನಾ?"

"ಹೌದು  ಮೇಷ್ಟ್ರೇ.ನನ್ನನ್ನ ಬಿಡೋದೇ ಇಲ್ಲ - ಹೇಗಿದ್ರೂ ರಜ ಇತ್ತಲ್ಲ ಅಂತ ಕರ್ಕೊಂಡು ಬಂದೆ" 

"ಸರಿ ಒಳ್ಳೇದು. ಮನೇಲಿ ಎಲ್ಲರೂ ಸೌಖ್ಯವೇ? ಮಗ ಸೊಸೆ ಹೇಗಿದಾರೆ?"

"ಎಲ್ಲ ಚೆನ್ನಾಗಿದೀವಿ. ನೀವು ಜಾತಕ  ಗುಣ ಕೂಟ ಎಲ್ಲ ನೋಡಿ, ಮಾಡಿಸಿದ ಮದುವೆ ಅಲ್ವೇ? ಒಳ್ಳೇ ಸೊಸೆಯೇ ಸಿಕ್ಕಳು! ಈಗ ಬರೋ ತಿಂಗಳು ನಮ್ಮ ಮದುವೆ ಆಗಿ ನಲವತ್ತು ವರ್ಷ ಆಯ್ತು ಅಂತ ದೊಡ್ಡ ಸಮಾರಂಭ ಮಾಡ್ಬೇಕು ಅಂತ ಓಡಾಡ್ತಿದಾಳೆ. ಬೇಡ ಅಂದ್ರೂ ಕೇಳೋದಿಲ್ಲ. ಒಂದಷ್ಟು ದೇವರ ಕೆಲಸ ಮಾಡ್ಬೇಕು ಅದರ ಜೊತೆಯಲ್ಲೇ - ನೀವೇ ಒಂದು ಒಳ್ಳೇ ದಿನ ನೋಡಿಕೊಟ್ಟು  ಬಂದು ಮಾಡಿಸ್ಕೊಡಬೇಕು ಮೇಷ್ಟ್ರೇ!" 

"ಸರಿಯಮ್ಮ,.ನಾನೀಗ ಎಲ್ಲಿಗೂ ಹೋಗೋದಿಲ್ಲ ಹೆಚ್ಚಿಗೆ - ಆದ್ರೆ ನಿಮ್ಮನೇಗೆ ಬರ್ತೀನಿ ಬಿಡು" ಅಂತ ಹೇಳಿ ಸುಬ್ಬರಾಯರು ದಿನ-ಗಿನ ಎಲ್ಲಾ ನೋಡಿಕೊಟ್ಟರು.  ಮತ್ತೆ, ಮದುವೆಮನೆಗೆ ಹೋಗೋ ತರಾತುರಿಯಲ್ಲಿದ್ದ ನಾಗಲಕ್ಷ್ಮಿ ಮೊಮ್ಮಗಳೊಂದಿಗೆ ಹೊರಟುಬಿಟ್ಟರು.

ಹೋಗುತ್ತಿದ್ದವರನ್ನು ನೋಡುತ್ತಾ ನಿಂತ ಸುಬ್ರಾಯರು, "ಪರವಾಗಿಲ್ಲ - ನಾನು ಮಾಡಿದ ಒಂದು ತಿದ್ದುಪಡಿ ಸಾರ್ಥಕ ಆಯಿತು" ಎಂದುಕೊಂಡರು.

’ಮನೋಬಲವೇ ಜಯ’ ಅನ್ನೋ ಮಾತನ್ನ ನಾನು ಇನ್ನೂ ಹೆಚ್ಚು ಸಲ ಕಾರ್ಯ ರೂಪಕ್ಕೆ ತಂದಿದ್ದರೆ, ಇನ್ನೂ ಚೆನ್ನಾಗಿರ್ತಿತ್ತಲ್ಲ! ಇನ್ನೂ ಎಷ್ಟೋ ಸಂಸಾರಗಳು ಸಂತೋಷವಾಗಿರ್ತಿದ್ವೋ ಏನೋ - ಅಂತ ಸುಬ್ರಾಯರ ಮನಸ್ಸಿನ ಮೂಲೆಯಲ್ಲಿ ಅನ್ನಿಸಿದ್ದು ಸುಳ್ಳಲ್ಲ.

*********

*********

 

 

 

Rating
No votes yet

Comments