ಜಾತಿಕೂಪದಲ್ಲೊಂದು ಪ್ರೀತಿಯ ಹೂವು

ಜಾತಿಕೂಪದಲ್ಲೊಂದು ಪ್ರೀತಿಯ ಹೂವು

ಜಾತಿಕೂಪದಲ್ಲೊಂದು ಪ್ರೀತಿಯ ಹೂವು
ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು ಜನ ಕಳ್ಳರನ್ನು ಬಡಿದು ಸಾಯಿಸಿದ್ದಾರೆ. ಇವರಿಗೆ ಒಟ್ಟಿಗೇ ಹತ್ತು ಜನವೇ ಹೇಗೆ ಸಿಗುತ್ತಾರೋ ತಿಳಿಯದು! ಅದೇನೇ ಇರಲಿ, ಇದನ್ನು ಮಾಡಿದವರು ಶ್ರೀಮಂತರೇನಲ್ಲ; ನನ್ನ ನಿಮ್ಮಂತಹ ಜನಸಾಮಾನ್ಯರೇ. ಸದ್ಯಕ್ಕೆ ರಾಜ್ಯವನ್ನು, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಇಡೀ ಭಾರತದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರಾದ ನಿತೀಶ್ ಕುಮಾರ್ ಆಳುತ್ತಿರುವ ಸಮಯದಲ್ಲೂ ಇಂತಹ ವಿಕ್ಷಿಪ್ತ ಘಟನೆಗಳು ನಡೆಯುತ್ತಿವೆ ಎಂದರೆ? ಬಿಹಾರದ ಈ ವಿಕ್ಷಿಪ್ತತೆಯ ರೋಗ ಅಲ್ಲಿನ ಜಾತಿವಾದಿ ಹಾಗೂ ಜಮೀನ್ದಾರಿ ಸಾಮಾಜಿಕ - ಆರ್ಥಿಕ - ಸಾಂಸ್ಕೃತಿಕ ನೆಲದಲ್ಲಿ ಆಳವಾಗಿ ಬೇರೂರಿದೆ. ಲಾಲೂ ಪ್ರಸಾದ್ ಯಾದವ್ ಇದನ್ನು ಬಳಸಿಕೊಂಡು ತಮ್ಮ ಕೌಟುಂಬಿಕ ರಾಜಕಾರಣಕ್ಕೆ ನೆಲೆ ಮಾಡಿಕೊಂಡರಷ್ಟೆ. ಅವರು ಈ ರೋಗದ ಮೂಲೋತ್ಪಾಟನೆಯ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದರೆಲ್ಲದರ ಪಾಪದ ಫಲವನ್ನು ಈಗ ನಿತೀಶ್ ಹೊರಬೇಕಿದೆ. ದೀರ್ಘಕಾಲಿಕ ಹತಾಶೆಯಲ್ಲಿ ಬೆಂದ ಜನ ವಿಕ್ಷಿಪ್ತರಾಗದೇ ಇನ್ನೇನಾದಾರು? ಅದೂ ಪೋಲೀಸ್ ವ್ಯವಸ್ಥೆ ಪೂರ್ತಿ ಭ್ರಷ್ಟವಾಗಿ, ಉಳ್ಳವರೊಂದಿಗೆ ಶಾಮೀಲಾಗಿರುವಾಗ? ಮೊನ್ನೆ ಸರಗಳ್ಳನ ಮೇಲೆ ನಡೆದ ದೌರ್ಜನ್ಯದ ಬಗೆಗೆ ಅಲ್ಲಿನ ಪೋಲೀಸ್ ಮೊದಮೊದಲು ಪ್ರತಿಕ್ರಿಯಿಸಿದ್ದು ಉಡಾಫೆಯೊಂದಿಗೇ! ಯಾವುದೇ ವೈಯುಕ್ತಿಕ ದೌರ್ಬಲ್ಯಗಳಿಲ್ಲದ, ಪರಿಶುದ್ಧ ವ್ಯಕ್ತಿತ್ವದ ನಿತೀಶ್ ಕುಮಾರ್‍ಗೆ (ಇಂತಹವರಿಗೆ ಬಿ.ಜೆ.ಪಿ.ಯೇ ಮಿತ್ರ ಪಕ್ಷವಾಗಬೇಕಾಗಿ ಬಂದಿರುವುದು ಇಂದಿನ ರಾಜಕಾರಣದ ದುರಂತವಾಗಿದೆ!) ಇದೆಲ್ಲವೂ ತಮ್ಮ ಆಳ್ವಿಕೆಯನ್ನು ಕುರಿತಂತೆ ಎಚ್ಚರಿಕೆಯ ಗಂಟೆಗಳಾಗಬೇಕು. ಏಕೆಂದರೆ ಅವರು, ಮೆಗಾ ಅಭಿವೃದ್ಧಿಯ ಜಾಗತೀಕರಣದ ಈ ದಿನಗಳಲ್ಲೂ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್ ರಂತೆ ಜನಸಾಮಾನ್ಯರ ಕಷ್ಟ - ಸುಖಗಳೊಂದಿಗೆ ಗುರುತಿಸಿಕೊಳ್ಳಬಯಸುವ ಅಪರೂಪದ ರಾಜಕಾರಣಿ.

ಬಿಹಾರ ವಿಚಿತ್ರ ರಾಜ್ಯ! ಅದು ಬುದ್ಧನ, ಅಶೋಕನ ನಾಡು. ಇತ್ತೀಚಿನ ಇತಿಹಾಸದ ಏಕೈಕ ಜನನಾಯಕ ಜಯಪ್ರಕಾಶ್ ನಾರಾಯಣ್ ಬದುಕಿ ಬಾಳಿದ ರಾಜ್ಯವಿದು. ಇದು, ಸಾಮಾನ್ಯ ಕ್ಷೌರಿಕ ಕುಟುಂಬದಿಂದ ಬಂದು ಕೊನೆವರೆಗೂ ಅದೇ ಸಾಮಾನ್ಯ ಸ್ಥಿತಿಯಲ್ಲಿ ಬದುಕಿದ ಕರ್ಪೂರಿ ಠಾಕೂರ್ ಎಂಬ ಸಮಾಜವಾದಿ ಮುಖ್ಯಮಂತ್ರಿಯಾಗಿದ್ದ ರಾಜ್ಯವೂ ಹೌದು. ಹಾಗೇ ಈ ಹಿಂದಿನ ಚುನಾವಣೆಯಲ್ಲಿ ಝಾಡಮಾಲಿ ಮಹಿಳೆಯೊಬ್ಬರನ್ನು ಸಂಸತ್ತಿಗೆ ಆರಿಸಿ ಕಳಿಸಿದ್ದ ರಾಜ್ಯ ಕೂಡಾ! ರಾಷ್ಟ್ರದ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಕಾರಣವಾದ 'ಸಂಪೂರ್ಣ ಕ್ರಾಂತಿ' ಆಂದೋಲನಕ್ಕೆ ಭೂಮಿಕೆ ಒದಗಿಸಿದ್ದು ಈ ರಾಜ್ಯವೇ. ಹಾಗೆ ನೋಡಿದರೆ, ಬಿಹಾರ ವಿವಿಧ ಅವಧಿಗಳ ಏಳು - ಬೀಳುಗಳಲ್ಲಿ ಸದಾ ಮಗ್ನವಾಗಿರುವ ಅಶಾಂತ ರಾಜ್ಯ. ಇಂತಹ ನಿರಂತರ ಅಶಾಂತಿಯ ನಡುವೆಯೇ ಚಿರ ಶಾಂತಿಯ ಅನ್ವೇಷಣೆಯ ಒತ್ತಡ ಮೂಡುವುದೇನೋ - ಬುದ್ಧನಿಗೆ ಆದಂತೆ! ಹಾಗೇ ಅನ್ನಿಸುತ್ತದೆ, ಈ ರಾಜ್ಯದ ದಶರಥ್ ಮಾಂಝಿ ಎಂಬ ಕರ್ಮಯೋಗಿಯೊಬ್ಬನ ಕಥೆ ಕೇಳಿದಾಗ.

ಗಯಾ ಜಿಲ್ಲೆಯ ಗೇಲೌರ್ ಎಂಬ ಕುಗ್ರಾಮದ ಕೃಷಿ ಕೂಲಿಕಾರನಾದ ಮಾಂಝಿ ಸತತವಾಗಿ 23ವರ್ಷಗಳ ಕಾಲ ಗುಡ್ಡವೊಂದನ್ನು ಏಕಾಕಿಯಾಗಿ ಕಡಿದು, ತನ್ನೂರಿನ ರೋಗಿಗಳನ್ನು ಸುಲಭವಾಗಿ ಪಕ್ಕದ ವಜೀರ್ಗಂಜ್ನಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುವಂತಹ ರಸ್ತೆಯೊಂದನ್ನು ನಿರ್ಮಿಸಿದ್ದಾನೆ! ಕಾಯಿಲೆಯಾದ ತನ್ನ ಹೆಂಡತಿ ಫಾಲ್ಗುಣಿ ದೇವಿಯನ್ನು ಗುಡ್ಡ ಅಡ್ಡವಿದ್ದ ಕಾರಣದಿಂದಾಗಿ ಸಕಾಲದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಸಾಧ್ಯವಾಗದೆ ಕಳೆದುಕೊಂಡ ದುಃಖ ಆತನಲ್ಲಿ ಹೆಪ್ಪುಗಟ್ಟಿ, ಆತನಿಂದ ಈ ಕೆಲಸ ಮಾಡಿಸಿದೆ! 360 ಅಡಿ ಉದ್ದ, 35 ಅಡಿ ಅಗಲ ಹಾಗೂ 25 ಅಡಿ ಎತ್ತರದ ಹೆಬ್ಬಂಡೆಯನ್ನು ಮಾಂಝಿ ತನ್ನ ಸುತ್ತಲಿನ ಜನರ ಟೀಕೆ, ಕಟಕಿ, ವ್ಯಂಗ್ಯದ ಮಾತುಗಳ ನಡುವೆಯೇ ಏಕಾಗ್ರತೆ ಉಳಿಸಿಕೊಂಡು ಒಬ್ಬನೇ ನಿಂತು ಕಡಿದು ಹಾಕಿದ್ದಾನೆ ಎಂದರೆ, ಅದು ಯಾವ ತಪಸ್ಸಿಗೆ ಕಡಿಮೆ? ಇದರಿಂದಾಗಿ 19 ಕಿ.ಮೀ. ದೂರವಿದ್ದ ವಜೀರ್ಗಂಜ್ ಈಗ ಕೇವಲ ಒಂದು ಗಂಟೆಯ ಪ್ರಯಾಣದ 6 ಕಿ.ಮೀ.ನಷ್ಟು ಹತ್ತಿರವಾಗಿದೆ. ಆದರೆ, ಈತನ ಕೆಲಸವನ್ನು ಇನ್ನಷ್ಟು ಸಾರ್ಥಕಗೊಳಿಸುವಂತೆ, ಈ ದಾರಿಯನ್ನು ನಾಗರಿಕ ವಾಹನಗಳು ಓಡಾಡುವಂತಹ ಪಕ್ಕಾ ರಸ್ತೆಯನ್ನಾಗಿ ಪರಿವರ್ತಿಸಲು ನೀಡಲಾದ ಅರ್ಜಿಗಳು ಲಾಲೂ ಮತ್ತು ಅವರ ಪತ್ನಿ ರಾಬ್ರಿದೇವಿ ಆಳ್ವಿಕೆಗಳ ಕಾಲದಲ್ಲಿ ನಿಷ್ಫಲಗೊಂಡವು. ಛಲ ಬಿಡದ ಮಾಂಝಿ, ಹೊಸ ಮುಖ್ಯಮಂತ್ರಿ ನಿತೀಶ್ ಕುಮಾರರ ಜನತಾ ದರ್ಶನ ಕಾರ್ಯಕ್ರಮಕ್ಕೆ ಹೋಗಿ ಅರ್ಜಿ ಸಲ್ಲಿಸಿದ. ಮಾಂಝಿಯ ಸಾಹಸವನ್ನು ತಿಳಿದು ಬೆರಗಾದ ಮುಖ್ಯಮಂತ್ರಿ, ಆತನನ್ನು ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿ ಗೌರವಿಸಿದ್ದಲ್ಲದೆ, ವೃದ್ಧಾಪ್ಯದ ಅಸ್ವಸ್ಥತೆಗೆ ಒಳಗಾಗಿದ್ದ ಆ ಹಿರಿಯನನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಗೆ ದಾಖಲು ಮಾಡಿಸಿ ಅದರ ಖರ್ಚನ್ನೆಲ್ಲ ರಾಜ್ಯ ಸರ್ಕಾರ ನೋಡಿಕೊಳ್ಳುವ ವ್ಯವಸ್ಥೆ ಮಾಡಿದರು. ಮಾಂಝಿ ಈಗಿಲ್ಲ. ಆತನ ಹೆಸರಿನಲ್ಲಿ ನಿತೀಶ್ ಸರ್ಕಾರ ಪಕ್ಕಾ ರಸ್ತೆ ನಿರ್ಮಾಣವನ್ನಷ್ಟೇ ಅಲ್ಲ, ಗೇಲೌರ್ನಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಲೂ ನಿರ್ಧರಿಸಿದೆ. ಇಲಿ ತಿಂದು ಬದುಕುವ ಮುಸಾಹರ್ ಜಾತಿಗೆ ಸೇರಿದ ದಶರಥ್ ಮಾಂಝಿ, ಈಗ ಸ್ಥಳೀಯರ ಬಾಯಲ್ಲಿ ದಶರಥ್ 'ಬಾಬಾ' ಆಗಿ ನೆಲೆಗೊಂಡಿದ್ದಾನೆ!

ಈ ಸಂಗತಿಯನ್ನು ಹೇಳಿದ್ದು, ಸದಾ ಅವಹೇಳನಕ್ಕೇ ಒಳಗಾಗುವ ಬಿಹಾರದ ಚಿತ್ರವನ್ನು ಪೂರ್ಣಗೊಳಿಸಲು. ಮನುಷ್ಯ ನಿರ್ಮಿಸುವ ಕೊಚ್ಚೆಯ ಪಕ್ಕದಲ್ಲೇ, ಪ್ರಕೃತಿ ತಿಳಿನೀರಿನ ಬುಗ್ಗೆಯನ್ನು ಚಿಮ್ಮಿಸಬಲ್ಲುದೆಂದು ಸೂಚಿಸಲು. ಎಂತಹ ಪ್ರಾಣಾಂತಿಕ ಆಘಾತಗಳ ನಡುವೆಯೂ ಮಾನವತೆ ಎಂಬುದು ದಮನಗೊಳ್ಳದೆ ವ್ಯಕ್ತಗೊಳ್ಳಬಹುದಾದ ವಿವಿಧ ರೂಪಗಳ ಬಗೆಗಿನ ನನ್ನ ಬೆರಗನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು. ಬಿಹಾರವನ್ನು ಒಂದು ಜಾತಿಕೂಪ ಎಂದು ಕರೆದು ಹೀಯಾಳಿಸುವವರಿದ್ದಾರೆ. ಆದರೆ ಈ ಜಾತಿಕೂಪದಲ್ಲಿ ಇಂತಹ ಪವಾಡಗಳು ಆಗಾಗಲಾದರೂ ಜರುಗುತ್ತಿರುತ್ತವೆ. ಆದರೆ ಸಮೃದ್ಧ ರಾಜ್ಯವೆಂದು ಅಧಿಕೃತವಾಗಿ ಘೋಷಿಸಲ್ಪಟ್ಟ ಹಾಗೂ ಬಹು ಜನರು ಹಿಂದೂ ಧರ್ಮದ ಸುಧಾರಿತ ರೂಪವೆಂದು ಪರಿಗಣಿಸಲ್ಪಟ್ಟ ಆರ್ಯ ಸಮಾಜದ ದೀಕ್ಷೆಯನ್ನು ಪಡೆದಿರುವ ಹರ್ಯಾಣ ರಾಜ್ಯವನ್ನು ನೋಡಿ. ಅಥವಾ ಅದರ ಅಕ್ಕ ಪಕ್ಕದ ಪಶ್ಚಿಮ ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನವನ್ನು ನೋಡಿ. ಇಲ್ಲಿ ಸತ್ತ ಎಮ್ಮೆಗಳ ಚರ್ಮ ಸುಲಿದ ದಲಿತರನ್ನು ಜೀವಂತ ಸುಡಲಾಗುತ್ತದೆ. ಜಾತಿ ಬಿಟ್ಟು ಮದುವೆಯಾದ ಪ್ರೇಮಿಗಳಿಗೆ ಅಲ್ಲಿನ ಜಾತಿ ಪಂಚಾಯ್ತಿಗಳು ನೇಣು ಶಿಕ್ಷೆ ವಿಧಿಸುತ್ತವೆ. ಮಗಳು ಜಾತಿ ಹೊರಗೆ ಮದುವೆಯಾದಳೆಂದು ಪಂಚಾಯ್ತಿ ಬಹಿಷ್ಕಾರಕ್ಕೆ ಹೆದರಿ ತಂದೆ ತಾಯಿ ಸೋದರರೇ ಸೇರಿ ಅವಳನ್ನು ಕೊಲ್ಲುತ್ತಾರೆ. ಸಗೋತ್ರ ವಿವಾಹದ ಫಲವೆಂದು ತಂದೆ ತಾಯಿಗಳಿಂದಲೇ ಮಗುವನ್ನು ಜಾತಿ ಪಂಚಾಯ್ತಿ ಕಿತ್ತುಕೊಳ್ಳುತ್ತದೆ. ಇತ್ತೀಚೆಗೆ ದಲಿತ ಕುಟುಂಬವೊಂದು ತನ್ನ ಮಾತು ಕೇಳದ ದಲಿತ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದೆ. ಕ್ಷತ್ರಿಯರಿಂದ ಸತಿ ದೇವಸ್ಥಾನಗಳ ನಿರ್ಮಾಣ ಮತ್ತು ಅಲ್ಲಿ ಸತಿ ಪದ್ಧತಿಯ ಧಾರ್ಮಿಕ ವೈಭವೀಕರಣದ ಆಚರಣೆಗಳು ನಡೆಯುತ್ತಲೇ ಇದೆ. ಇದೆಲ್ಲದರ ವಿರುದ್ಧ ಅಲ್ಲಿ ಯಾರಿಂದಲೂ - ಎಲ್ಲ ರೀತಿಯ ಶೋಷಣೆಗಳ ವಿರುದ್ಧವೂ ಗುಟುರು ಹಾಕುವ ಕ್ರಾಂತಿಕಾರಿ ರಾಜಕೀಯ ಪಕ್ಷಗಳೂ ಸೇರಿದಂತೆ - ಸೊಲ್ಲೇ ಇಲ್ಲ. ಹೊರಗಿನಿಂದ ಮಾಧ್ಯಮಗಳು ಗಲಾಟೆ ಮಾಡಿದಾಗಲೇ ಪೋಲೀಸು, ನ್ಯಾಯಾಂಗಗಳ ಮಧ್ಯ ಪ್ರವೇಶ ಅಲ್ಲಿ. ಆದರೂ ಅವು ಮುಂದುವರೆದ ರಾಜ್ಯಗಳು ಮತ್ತು ಬಿಹಾರ ಮಾತ್ರ ಸದಾ ಹಿಂದುಳಿದ ಅನಾಗರಿಕ ರಾಜ್ಯ! ಇದು ನಮ್ಮ ನಾಗರಿಕ - ಅನಾಗರಿಕತೆಯ ಕಲ್ಪನೆ!!

ವಿಜ್ಞಾನ-ತಂತ್ರಜ್ಞಾನಗಳನ್ನು ಆಧರಿಸಿದ ಆಧುನಿಕ ನಾಗರೀಕತೆ ನಮ್ಮನ್ನು ಪ್ರಭಾವಿಸಿರುವುದು ನಮ್ಮ ಬದುಕಿನ ಹೊರಕವಚದ ನೆಲೆಯಲ್ಲಿ ಮಾತ್ರವೆಂದು ತೋರುತ್ತದೆ. ಜಾತಿ ಎಂಬುದು ಸುಳ್ಳು ಮತ್ತು ಮೋಸ ಎಂದು ಅನೇಕ ದೃಷ್ಟಾಂತಗಳ ಮೂಲಕ (ನಮ್ಮ ಕಾಲದ ದೊಡ್ಡ ಉದಾಹರಣೆ, ಡಾ|| ಅಂಬೇಡ್ಕರರೇ ಆಗಿದ್ದಾರೆ) ಸಾಬೀತಾಗಿದ್ದರೂ, ಅದು ನಮ್ಮ ಬಹುಸಂಖ್ಯಾತ ಜನರ ಮನಸ್ಸಿನಿಂದ ತೊಲಗಿಲ್ಲ. ಆದರೂ ನಮ್ಮನ್ನು ನಾವು ಆಧುನಿಕರು ಎಂದು ಕರೆದುಕೊಳ್ಳುತ್ತೇವೆ! ಜಾತಿ ಸಾಮಾಜಿಕ ಶ್ರೇಣೀಕರಣವಾಗಿ, ಸಾಂಸ್ಕೃತಿಕ ಪ್ರತ್ಯೇಕತೆಯಾಗಿ, ಮನಃಶಾಸ್ತ್ರೀಯ ಪ್ರವೃತ್ತಿಯಾಗಿ, ಮಾನವ ಶಾಸ್ತ್ರೀಯ ಲಕ್ಷಣವಾಗಿ ನಮ್ಮನ್ನು ಒಂದು ಸಮಾಜವಾಗಿ ಹಲವು ನೆಲೆಗಳಲ್ಲಿ ಒಡೆದಿಟ್ಟಿದೆ. ಇದರಿಂದ ಆಗುತ್ತಿರುವ ರಾಷ್ಟ್ರೀಯ ಹಾನಿ ಹಲವು ಆಯಾಮಗಳದ್ದು - ಭ್ರಷ್ಟಾಚಾರ, ಅದಕ್ಷತೆ, ಪ್ರತಿಭಾ ಪಲಾಯನಗಳಿಂದಾಗುತ್ತಿರುವ ಹಾನಿಗಿಂತ ಬಹು ಹೆಚ್ಚಿನದು; ರಾಷ್ಟ್ರದ್ರೋಹಕ್ಕೆ ಸಮನಾದದ್ದು. ಹಾಗಾಗಿಯೇ, ಇದೆಲ್ಲವನ್ನು ಪರಿಗಣಿಸಿಯೇ ರಚನಾತ್ಮಕ ರಾಜಕಾರಣ ತನ್ನ ತಾತ್ವಿಕತೆಯನ್ನು ಕಟ್ಟಿಕೊಳ್ಳಬೇಕೆಂಬುದು, ಮುಖ್ಯವಾಗಿ ಸಮಾಜವಾದಿಗಳ ವಾದವಾಗಿತ್ತು. ಆದರೆ ವರ್ಗವಾದಿಗಳಾದ ಕಮ್ಯುನಿಸ್ಟರು ತಂತ್ರಜ್ಞಾನ ಜಾತಿಯನ್ನು ದುರ್ಬಲಗೊಳಿಸಿ ನಾಶ ಮಾಡುತ್ತದೆ ಎಂದು ನಂಬಿಯೇ ಈವರೆಗೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಈ ಚಳುವಳಿಯ ಬಹುತೇಕ ನಾಯಕರೆಲ್ಲ ಜಾತಿ ವ್ಯವಸ್ಥೆಯ ಲಾಭ ಪಡೆದ ಮತ್ತು ಅದರ ಆಘಾತ - ಅವಮಾನಗಳನ್ನು ಅನುಭವಿಸದಿದ್ದ ಮೇಲ್ಜಾತಿಗಳಿಗೇ ಸೇರಿದ್ದುದೂ, ಈ ಅರ್ಧ ಕುರುಡಿಗೆ ಕಾರಣವಾಗಿರಬಹುದು. ಅಲ್ಲದೆ ಮಾರ್ಕ್ಸ್ ವಾದದ ತರ್ಕವನ್ನು ಅರ್ಥ ಮಾಡಿಕೊಳ್ಳಲು ಅಮೂರ್ತ ಚಿಂತನೆಯ ಬಲವೂ ಬೇಕಾಗಿತ್ತಾದ್ದರಿಂದ, ಮೊದಲಲ್ಲಿ ಹೆಚ್ಚಾಗಿ ಈ ಕೌಶಲ್ಯ ಪಡೆದ ಬ್ರಾಹ್ಮಣರೇ ಕಮ್ಯುನಿಸ್ಟ್ ತತ್ವಕ್ಕೆ ಆಕ‌ರ್ಷಿತರಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಕರ್ನಾಟಕದ್ದೇ ಉದಾಹರಣೆ ಕೊಡುವುದಾದರೆ, ಇತ್ತೀಚಿನವರೆಗೆ CPI ಎಂದರೆ Communist party of Iyengars ಎಂದೂ, CPM ಎಂದರೆ Communist party of Madhvas ಎಂದೂ ತಮಾಷೆ ಮಾಡುವಷ್ಟು ಅವು ಜಾತಿನಿಷ್ಠ ಗುಂಪುಗಳಾಗಿದ್ದವು! ನಮ್ಮ ಸರ್ವೋದಯ ಚಳುವಳಿ ಪೂರ್ಣವಾಗಿ ಅಯ್ಯಂಗಾರ್ರುಗಳ ಚಳುವಳಿ ಆಗಿದ್ದಂತೆ ! ಸರ್ವೋದಯದ ಅಯ್ಯಂಗಾರ್ರುಗಳಿಗೆ ಜಾತಿ ಕೆಟ್ಟದು, ನಮ್ಮ ಪೂರ್ವಿಕರು ಅನ್ಯಾಯ ಮಾಡುತ್ತ ಬಂದಿದ್ದಾರೆ ಎಂಬ ಅರಿವಾದರೂ ಇತ್ತು. ಹಾಗಾಗಿಯೇ ಅವರಲ್ಲಿ ಬಹುಜನರು ತಮ್ಮ ಮಿತಿಗಳಲ್ಲೇ ಹಲವು ಬಗೆಯ ಅಸ್ಪೃಶ್ಯತಾ ನಿವಾರಣೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಕಮ್ಯುನಿಸ್ಟರಾದರೋ ತಾವು ರೂಪಿಸುವ ವರ್ಗ ಹೋರಾಟದಲ್ಲಿ ಜಾತಿ ಸುಟ್ಟು ಭಸ್ಮವಾಗುವುದೆಂದು ಭಾವಿಸಿ, ಯಾವುದೇ ಎಗ್ಗಿಲ್ಲದೆ ಮೇಲ್ಜಾತಿ ನಾಯಕತ್ವದಲ್ಲೇ ತಮ್ಮ ಪಕ್ಷವನ್ನು ಕಟ್ಟುತ್ತಾ ಹೋದರು. ದಕ್ಷಿಣದಲ್ಲಿ ಆ ಪಕ್ಷಕ್ಕೆ ದೊರೆತ ಎ.ಕೆ.ಗೋಪಾಲನ್ ಅಥವಾ ಪಿ.ಸುಂದರಯ್ಯನವರಂತಹ ಶೂದ್ರ ನಾಯಕತ್ವವೂ, 1930ರ ದಶಕದಲ್ಲಿ ಮಾರ್ಕ್ಸ್ ವಾದದ ಅಮಲಲ್ಲಿದ್ದ ಜೆ.ಪಿ.ಯವರನ್ನು ಯಾಮಾರಿಸಿ, 'ಐಕ್ಯರಂಗ' ಎಂಬ ನಾಟಕದ ಮೂಲಕ ಸಮಾಜವಾದಿ ಪಕ್ಷದಿಂದ ಹಾರಿಸಿಕೊಂಡು ಬಂದುದೇ ಆಗಿತ್ತು. ಆದರೆ ಅದು ಪ್ರಬಲವಿದ್ದ ಪೂರ್ವ ಭಾರತದಲ್ಲಿ ಈಗಲೂ ಬ್ರಾಹ್ಮಣರು ಹಾಗೂ ಕಾಯಸ್ಥರದೇ ಕಾರುಬಾರು. ಬುಡಕಟ್ಟು ರಾಜ್ಯವಾದ ತ್ರಿಪುರದಲ್ಲಿಯೂ ಇತ್ತೀಚಿನವರೆಗೆ ಮುಖ್ಯಮಂತ್ರಿ ಬ್ರಾಹ್ಮಣರೇ ಆಗಿದ್ದರೆಂದರೆ?

ಹಾಗಾಗಿಯೇ, 70ರ ದಶಕದಲ್ಲಿ ಪಕ್ಷದೊಳಗಿನ ಕೆಳಜಾತಿಗಳ ಬಂಡಾಯವೇ ಆಗಿ ಮಾರ್ಕ್ಸಿಸ್ಟ್ - ಲೆನಿನಿಸ್ಟ್ ಪಕ್ಷದ ಹೆಸರಲ್ಲಿ ನಕ್ಸಲೈಟ್ ಚಳುವಳಿ ಆರಂಭವಾದಾಗ, ಬಂಗಾಳ ಹಾಗೂ ಕೇರಳಗಳಲ್ಲಿ ಕಮ್ಯುನಿಸ್ಟ್ ಸರ್ಕಾರಗಳೇ ಅದನ್ನು ದಮನ ಮಾಡಿದವು. ನಂಬೂದರಿಪಾದರ ನಂತರ ಕೇರಳದಲ್ಲಿ ಮೂಡಿದ ಶೂದ್ರ ನಾಯಕತ್ವವೂ, ಗೌರಿ ಅಮ್ಮರಂತಹ ದಲಿತ ಜಾತಿಯ ಹಿರಿಯ ನಾಯಕಿಯನ್ನು ಮುಖ್ಯಮಂತ್ರಿ ಮಾಡಲು ನಿರಾಕರಿಸಿತು. ಪೋಲೀಸರ ಲಾಠಿಗಳಿಗೇನಾದರೂ ಸಂತಾನ ಶಕ್ತಿಯಿದ್ದರೆ, ನಾನು ನೂರಾರು ಬಾರಿ ಗರ್ಭ ಧರಿಸಬೇಕಿತ್ತು ಎಂದು ತಾವು ಪಕ್ಷ ಕಟ್ಟಲು ನಡೆಸಿದ ಹೋರಾಟದಲ್ಲಿ ಅನುಭವಿಸಿದ ನೋವು ಸಂಕಷ್ಟಗಳನ್ನು ಮನ ಬಿಚ್ಚಿ ಹೇಳಿಕೊಂಡ ಗೌರಿ, ಪಕ್ಷದ ಶಿಸ್ತಿನ ಹೆಸರಲ್ಲಿ ನೀಡಿದ ಕಿರುಕುಳ ತಾಳಲಾರದೆ ಪಕ್ಷ ಬಿಡಬೇಕಾಯಿತು. ಇಂದು ಕೇರಳದಲ್ಲಿ ಯಾವ ರಾಜ್ಯದಲ್ಲೂ ಇರದಷ್ಟು ಜಾತಿ ಆಧಾರಿತ ಪಕ್ಷಗಳಿದ್ದರೆ ಹಾಗೂ ಅವುಗಳ ಜಾತಿವಾದಿ ರಾಜಕಾರಣವನ್ನೊಪ್ಪಿಕೊಂಡೇ ಕಮ್ಯುನಿಸ್ಟರು ಅಧಿಕಾರ ನಡೆಸುವಂತಾಗಿದ್ದರೆ, ಅದಕ್ಕೆ ಜಾತಿ ವ್ಯವಸ್ಥೆ ಕುರಿತ ಕಮ್ಯುನಿಸ್ಟರ 'ಶಿಸ್ತುಬದ್ಧ' ಕುರುಡೇ ಕಾರಣವಾಗಿದೆ! ಇನ್ನು ಬಂಗಾಳದಲ್ಲಿ ಅವರ ಈ ಕುರುಡು ನಂದಿಗ್ರಾಮದ ಬೆಳಗಿನಲ್ಲಿ ನಿಚ್ಚಳವಾಗತೊಡಗಿದೆ...

ನಾನು ಎರಡು ವಾರಗಳ ಹಿಂದೆ ರೇಷ್ಮೆಯವರು ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವದ ಜಾತಿ ಸ್ವರೂಪದ ಬಗ್ಗೆ ಬರೆದಾಗ ಅದನ್ನು ಇದೆಲ್ಲ ಗೊತ್ತಿಲ್ಲದೆಯೇ ಟೀಕಿಸಲಿಲ್ಲ! ಆದರೆ ನನ್ನ ಟೀಕೆ, ರೇಷ್ಮೆಯವರು ಕಮ್ಯುನಿಸ್ಟರ ಅಂಡಿನ ಮೇಲೆ ಹೊಡೆದು ಅವರ ಹಲ್ಲುಗಳನ್ನು ಉದುರಿಸಲು ಹೊರಟಿರುವ ವಿಚಿತ್ರ ಪ್ರಯತ್ನದ ಬಗೆಗಷ್ಟೆ! ನಿಮಗೆ ಪರಮಾಣು ಒಪ್ಪಂದ ಕುರಿತ ಕಮ್ಯುನಿಸ್ಟರ ನಿಲುವು ತಪ್ಪೆನಿಸಿದ್ದರೆ, ಏಕೆ ತಪ್ಪು ಎಂದು ಹೇಳಿ. ಆ ನೆಲೆಯಲ್ಲಿ ಅವರನ್ನು ಖಂಡಿಸಿ. ಅದು ಬಿಟ್ಟು ಇದಕ್ಕೆ ಸಂಬಂಧವಿಲ್ಲದ ಜಾತಿ ಪ್ರಶ್ನೆಯನ್ನೆತ್ತಿಕೊಂಡು ಟೀಕಿಸ ಹೊರಡುವುದು ಅಸಂಗತವೆನಿಸುವುದಲ್ಲವೇ? ಏನೂ ಕಾರಣ ಸಿಗದವರು ಜಾತಿ ಎತ್ತಿಕೊಂಡರು ಎಂದೆನ್ನಿಸುವ ಹಾಗಾಗಿ, ಟೀಕೆ ಕೂಡಾ ವಿಶ್ವಾಸಾರ್ಹತೆ ಕಳೆದುಕೊಳ್ಳುವುದಲ್ಲವೇ? ಜೊತೆಗೆ, ನಾವು ರಾಜಕೀಯ ವಿಶ್ಲೇಷಕರೆನ್ನಿಸಿಕೊಂಡವರು ಇನ್ನರೆಡು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದು ನನಗನ್ನಿಸುತ್ತದೆ. ಇಂದಿನ ರಾಜಕೀಯ ಸಂದರ್ಭದಲ್ಲಿ ಸ್ವಲ್ಪವಾದರೂ ರಾಜಕೀಯ ಮರ್ಯಾದೆ ಉಳಿಸಿಕೊಂಡಿರುವವರು, ಭ್ರಷ್ಟತೆಯ ಕಳಂಕವಿಲ್ಲದವರು ಹಾಗೂ ಇದ್ದುದರಲ್ಲಿ ಒಂದು ತಾತ್ವಿಕತೆಗೆ ಬದ್ಧವಾಗಿ - ಕೆಲವೊಮ್ಮೆ ಅದೆಷ್ಟೋ ಹಳತಾಗಿದೆ ಎನ್ನಿಸಿದರೂ ಮತ್ತು ನಂದಿಗ್ರಾಮದಲ್ಲಿನ ಉಲ್ಟಾ ಪ್ರಯತ್ನದ ಹೊರತಾಗಿಯೂ - ರಾಜಕಾರಣ ಮಾಡುವ ಪ್ರಾಮಾಣಿಕ ಯತ್ನವನ್ನು ಮುಂದುವರೆಸಿರುವವರು ಕಮ್ಯುನಿಸ್ಟರು ಮಾತ್ರವಲ್ಲವೇ? ಈ ಕಾರಣಗಳಿಂದಲಾದರೂ ನಾವು ಅವರನ್ನು ಟೀಕಿಸುವಾಗ ಇನ್ನಷ್ಟು ಎಚ್ಚರ ಹಾಗೂ ಜವಾಬ್ದಾರಿ ಅಗತ್ಯವಲ್ಲವೇ?

ಅಂದಹಾಗೆ: ನಮ್ಮ ಕವಿ ಸಿದ್ಧಲಿಂಗಯ್ಯನವರ ಸುಪ್ರಸಿದ್ಧ ಜೋಕೊಂದಿದೆ. ರಸಿಕತೆಗೂ, ವ್ಯಭಿಚಾರಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲವಂತೆ: ನನ್ನ ಮಗ ಮಾಡಿದರೆ ರಸಿಕತೆ; ಪಕ್ಕದ ಮನೆ ಮಗ ಮಾಡಿದರೆ ವ್ಯಭಿಚಾರ ಅಷ್ಟೆ! ಬಿ.ಜೆ.ಪಿ. ತಾನು ಅಧಿಕಾರದಲ್ಲಿದ್ದಾಗ ಆರಂಭಿಸಿದ ಪರಮಾಣು ಒಪ್ಪಂದ ಮಾತುಕತೆ ಹಾಗೂ ತಾನೇ ಸಿದ್ಧಪಡಿಸಿದ ರಾಮಸೇತು ಯೋಜನೆಯನ್ನು ಈಗ ಬಾಯಿ ಹಾಗೂ ಬೀದಿ ತುಂಬಾ ವಿರೋಧಿಸುತ್ತಿರುವುದನ್ನು ನೋಡಿದರೆ, ಕೆಲವರಿಗೆ ಸಿದ್ಧಲಿಂಗಯ್ಯನವರದ್ದು ಜೋಕಲ್ಲ, ಕಟು ವಾಸ್ತವ ಎನ್ನಿಸಿದರೆ ಆಶ್ಚರ್ಯವಿಲ್ಲ!

Rating
No votes yet