ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.
ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಒಡೆಯರ್ ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಾ ಇರುವಾಗ ವಿಶಿಯ ಹೇಳಿಕೆ ಅಚ್ಚರಿ ಹುಟ್ಟಿಸಿದೆ.
ಎಲ್ಲಾ ರೀತಿಯಿಂದಲೂ ಇದೊಂದು ’ಪಟೇಲ್ ಪ್ಲ್ಯಾನ್’ ಎಂದೆನಿಸದೆ ಇರದು. ಜಗಮೋಹನ್ ದಾಲ್ಮಿಯಾ ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಂಡಿ(ರುವ)ದ್ದ ಪಟೇಲ್, ಈಗ ಅಧಿಕಾರದಲ್ಲಿರುವ ಶರದ್ ಪವಾರ್ ಗುಂಪಿಗೆ ಆತ್ಮೀಯರಲ್ಲ. ಪವಾರ್ ಗುಂಪು ಕೂಡಾ ತನ್ನ ವಿರೋಧಿ ದಾಲ್ಮಿಯಾಗೆ ಆತ್ಮೀಯರಾಗಿದ್ದ ಪಟೇಲ್ ರನ್ನು ದೂರವಿರಿಸಿದ್ದು, ಅವರ ನೇತೃತ್ವದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ತಾನು ಅಧಿಕಾರಕ್ಕೆ ಬಂದ ನಂತರ ನೀಡಿಲ್ಲ. ಹಾಗಾಗಿ ಪವಾರ್ ಅಧ್ಯಕ್ಷರಾದ ನಂತರ ಬೆಂಗಳೂರಿಗೆ ಯಾವುದೇ (ಹೆಚ್ಚಿನ) ಅಥವಾ ಪ್ರಮುಖ ಪಂದ್ಯಗಳನ್ನು ನೀಡಿಲ್ಲ.
ಈಗ ಎಲ್ಲಾ ರಾಜ್ಯದ ಕ್ರಿಕೆಟ್ ಮಂಡಳಿಗಳು ಪವಾರ್ ಗುಂಪನ್ನು ಓಲೈಸುವುದರ ಸಲುವಾಗಿ ತಮಗಿಷ್ಟವಿದ್ದು ಅಥವಾ ಇಷ್ಟವಿಲ್ಲದೆಯೂ ಸ್ವಾಭಾವಿಕವಾಗಿಯೇ ದಾಲ್ಮಿಯಾ ವಿರೋಧಿ ನಿಲುವನ್ನು ತಾಳಿಕೊಂಡಿವೆ. (ಕಟಕ್ ನಂತಹ ಸ್ಥಳಕ್ಕೆ ೨ ಪಂದ್ಯಗಳನ್ನು ಕೊಡಲಾಗಿದೆ ಎಂದರೆ, ಹೀಗೆ ಒಂದು ಗುಂಪನ್ನು ಓಲೈಸುವುದರಲ್ಲಿ ಅದೆಂತಹ ಲಾಭವಿದೆ ಎಂಬುದರ ಅರಿವಾಗುವುದು). ಮೊನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜಿಸಿದ ಭರ್ಜರಿ ಸಮಾರಂಭವೊಂದರಲ್ಲಿ ’ಕರ್ನಾಟಕಾಸ್ ಲೆಜೆಂಡ್ಸ್’ ಎಂದು ವಿಶಿ, ಬಿನ್ನಿ, ಪ್ರಸನ್ನ, ಚಂದ್ರಶೇಖರ್ ಮತ್ತು ಕಿರ್ಮಾನಿಯವರನ್ನು ಮೈಸೂರು ಪೇಟ ತೊಡಿಸಿ, ಅವರೊಂದಿಗೆ ಭಾರತಕ್ಕಾಗಿ ಆಡಿದ ಪ್ರಮುಖ ಆಟಗಾರರನ್ನು ಭಾರತದೆಲ್ಲೆಡೆಯಿಂದ ಆಮಂತ್ರಿಸಿ, ಸ್ವತಹ ಪವಾರ್ ರನ್ನೇ ಆಮಂತ್ರಿಸಿ ಅವರಿಂದಲೇ ಸನ್ಮಾನ ನಡೆಸಿದ್ದು ಪವಾರ್ ಗುಂಪಿಗೆ ಮತ್ತಷ್ಟು ಸನಿಹವಾಗಲು ವಿನಹಾ ಬೇರೆ ಯಾವುದೇ ಕಾರಣಕ್ಕಲ್ಲ. ಈ ಐವರು ಈಗಷ್ಟೇ ’ಲೆಜೆಂಡ್ಸ್’ ಆದವರಲ್ಲ. ಪಟೇಲ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಎಷ್ಟೋ ವರ್ಷಗಳ ಮೊದಲೇ ’ಲೆಜೆಂಡ್ಸ್’ ಅನಿಸಿಕೊಂಡವರು. ಈ ಸನ್ಮಾನ ಬಹಳ ಮೊದಲೇ ನಡೆಯಬೇಕಿತ್ತು. ಎಲ್ಲಾ ಪಟೇಲ್ ನಾಟಕ.
ಪರಿಸ್ಥಿತಿ ಹೀಗಿರುವಾಗ ತಾನು ಪವಾರ್ ಪರ ಎಂದು ಗುರುತಿಸಿಕೊಳ್ಳಬೇಕು, ಅಧ್ಯಕ್ಷ ಸ್ಥಾನಕ್ಕೆ ಒಡೆಯರ್ ಬರಬಾರದು ಬದಲಾಗಿ ತನ್ನ ಆಪ್ತರೇ ಬರಬೇಕು ಮತ್ತು ತನ್ನ ಮಗ ಉದಿತ್ ಪಟೇಲ್ ಹಾಗೂ ಆಪ್ತ ಗೆಳೆಯ ರೋಜರ್ ಬಿನ್ನಿಯ ಮಗ ಸ್ಟುವರ್ಟ್ ಬಿನ್ನಿ ಇಬ್ಬರೂ ಯೋಗ್ಯತೆಯಿಲ್ಲದಿದ್ದರೂ ಕರ್ನಾಟಕಕ್ಕೆ ಆಡುವುದನ್ನು ಮುಂದುವರಿಸಬೇಕು, ಇಷ್ಟೆಲ್ಲ ನಡೆಯಬೇಕು. ಒಡೆಯರ್ ಅಧ್ಯಕ್ಷರಾದರೆ ಇವೆಲ್ಲ ಸಾಧ್ಯವಿಲ್ಲ. ತನ್ನ ಆಪ್ತ ಗೆಳೆಯ ವಿಶಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಆತನಿಗೆ ಗೆಲುವು ನಿಶ್ಚಯ ಮತ್ತು ಇವೆಲ್ಲ ಸಾಧ್ಯ ಎಂಬುದು ಪಟೇಲ್ ದೂ(ದು)ರಾಲೋಚನೆ.
ವಿಶಿ ಯಾರೊಂದಿಗೂ ತನ್ನನ್ನು ಗುರುತಿಸಿಕೊಂಡವರಲ್ಲ. ಪವಾರ್ ಗುಂಪು ಸಹಜವಾಗಿಯೇ ವಿಶಿಗೆ ಇರುವ ’ಕ್ಲೀನ್ ಇಮೇಜ್’ನಿಂದ, ಕರ್ನಾಟಕ ಕ್ರಿಕೆಟ್ ಮಂಡಳಿಯನ್ನು ತನ್ನ ಹತ್ತಿರ ಸಲುಗೆಯಿಂದಲೇ ಬರಮಾಡಿಕೊಳ್ಳುತ್ತದೆ. ಮತ್ತೆ ಎಷ್ಟಿದ್ದರೂ ವಿಶಿ ತನ್ನ ಆಪ್ತ. ಹಾಗಿರುವಾಗ ತನ್ನ ಮಗ ಮತ್ತು ಬಿನ್ನಿಯ ಮಗ ಇವರಿಬ್ಬರೂ ಮತ್ತಷ್ಟು ದಿನ ಕರ್ನಾಟಕಕ್ಕೆ ಆಡುತ್ತ ಹಬ್ಬದೂಟ ಮಾಡುತ್ತ ಇರಬಹುದು ಎಂಬುದು ಪಟೇಲ್ ಪ್ಲ್ಯಾನ್. ಈಗಾಗಲೇ ಬರ್ಮುಡದ ಎಡಗೈ ಸ್ಪಿನ್ ಬೌಲರ್ ಡ್ವೇಯ್ನ್ ಲೆವರಾಕ್ ನ ಒಡಹುಟ್ಟಿದವನಂತೆ ಕಾಣುವ ಸ್ಟುವರ್ಟ್ ಬನ್ನಿ, ಆತನಂತೆ ಕಾಣುವ ದಿನ ದೂರವಿಲ್ಲ ಎನ್ನಬಹುದು.
ಎಲ್ಲಾದರೂ ವಿಶಿ ಸ್ಪರ್ಧಿಸಿ ಗೆದ್ದು ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರೆ ತಾನು ಅಧ್ಯಕ್ಷ ಸ್ಥಾನದಲ್ಲಿಲ್ಲದೇ ಕಾರ್ಯಸಾಧಿಸುವ ಪ್ಲ್ಯಾನ್ ಪಟೇಲನದ್ದು. ಅದು ಯಶಸ್ವಿಯಾಗದಿರಲಿ. ವಿಶಿ ಸಂಕೋಚ ಸ್ವಭಾವದವರು, ಮೃದುಭಾಷಿಯೂ ಹೌದು ಮಿತಭಾಷಿಯೂ ಹೌದು. ಈ ಸ್ಥಾನಕ್ಕೆ ಅವರಿಗಿರುವಷ್ಟು ಯೋಗ್ಯತೆ, ಘನಸ್ಥಿಕೆ ಬೇರೆಯವರಿಗಿಲ್ಲ. ಆದರೆ ’ವಿಶಿ ಇಸ್ ಟೂ ಗುಡ್ ಎ ಜೆಂಟ್ಲ್ ಮ್ಯಾನ್ ಫಾರ್ ದೆಟ್ ಪೋಸ್ಟ್’.
Comments
Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
In reply to Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ... by H.S.R.Raghaven…
Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
In reply to Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ... by H.S.R.Raghaven…
Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
In reply to Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ... by rajeshnaik111
Re: ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
ವಿಶ್ವನಾಥ್ ಸ್ಪರ್ದೆ
In reply to ವಿಶ್ವನಾಥ್ ಸ್ಪರ್ದೆ by hpn
ವಿಶ್ವನಾಥ್