ಜೀವನ ರಹಸ್ಯ

ಜೀವನ ರಹಸ್ಯ

( ಯಾರಿಂದಲೋ ಕೇಳಿ ತಿಳಿದದ್ದು. )

ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ: ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು.

ಎಷ್ಟಾದರೂ ಭಗವಂತನಲ್ಲವೇ! ನಿಷ್ಪಕ್ಷಪಾತಿ! ಎಲ್ಲರಿಗೂ ಕೇವಲ ನಲವತ್ತು ವರುಷಗಳ ಆಯುಸ್ಸು ಕೊಟ್ಟನಂತೆ. ಎಲ್ಲರೂ ಈ ನಿರ್ಣಯವನ್ನು ಒಪ್ಪಿಕೊಂಡರಾದರೂ, ಬುಧ್ಧಿ ಜಾಸ್ತಿಯಿರುವ ಮನುಷ್ಯನಿಗೆ ತೃಪ್ತಿಯಗಲಿಲ್ಲ. ತನಗಿರುವ ಬುಧ್ಧಿ ಮತ್ತು ಚಾಲಾಕಿ ಉಪಯೋಗಿಸುವ ಹಂಚಿಕೆ ಹಾಕಿ, ಬೇರೆ ಪ್ರಾಣಿಗಳ ಆಯುಸ್ಸಿನ ಸ್ವಲ್ಪ ಭಾಗವನ್ನು ಒತ್ತುವರಿ ಮಾಡಲೆತ್ನಿಸಿದ.

ಮೊದಲಿಗೆ ಅವನು ಕತ್ತೆಯನ್ನು ಬಳಿಗೆ ಕರೆದು, ಅದರ ಬೆನ್ಸವರಿ, “ ಅಯ್ಯಾ ಕತ್ತೆ, ಎಂತಹುದಯ್ಯಾ ನಿನ್ನ ಜೀವನ! ಎಲ್ಲರ ಕೈಯಲ್ಲಿ ಭಾರ ಹೊರಸಿಕೊಂಡು, ತಿಪ್ಪೆಯಲ್ಲಿ ಬಿದ್ದಿದ್ದು, ಕಸ ಕಡ್ಡಿ ತಿಂದುಕೊಂಡು, ಮೈಮುರಿಸಿಕೊಳ್ಳುವ ಹಾಗೆ ಹೊಡಿಸಿಕೊಂಡು, ಎಲ್ಲರ ತಿರಸ್ಕಾರಕ್ಕೂ ಪಾತ್ರವಾಗುತ್ತೀಯಲ್ಲ.! ನಲವತ್ತು ವರ್ಷ ಹೀಗೇಕೆ ಬದುಕಬೇಕು? ನನಗಾದರೋ ಬುಧ್ಧಿ ಇದೆ. ಅದನ್ನು ಉಪಯೋಗಿಸಿಕೊಂಡು ಜೀವನವನ್ನು ಸ್ವಲ್ಪ ಸುಖವಾಗಿಸಬಲ್ಲೆ. ನಿನ್ನ ಅರ್ಧ ಆಯುಸ್ಸನ್ನು ನನಗೇಕೆ ಕೊಡಬಾರದು ? “ ಅಂತ ಪುಸಲಾಯಿಸಿ, ಅದರ ಇಪ್ಪತ್ತು ವರ್ಷ ಆಯುಸ್ಸನ್ನು ತನಗೆ ಸೇರಿಸಿಕೊಂಡ.

ಆಮೇಲೆ ನಾಯಿಯನ್ನು ಕರೆದು, “ ಎಲೇ ನಾಯಿ, ಎಲ್ಲರ ಎಂಜಲು ತಿಂದುಕೊಂಡು, ಎಲ್ಲರ ಬಳಿ ಒದಿಸಿಕೊಂಡು, ಕುಯ್ಯೋ ಮರ್ರೋ ಅಂತ ಗೋಳಾಡುತ್ತ, ಬೇರೆ ನಾಯಿಗಳ ಸಂಗಡ ಕಚ್ಚಾಡಿಕೊಂಡು, ಬೊಗಳಿಕೊಂಡೂ ಅದೆಷ್ಟು ಸುಖ ಪಡುತ್ತೀಯೋ ನಾ ಬೇರೆ ಕಾಣೆ ! ನಿನಗೇಕೆ ನಲವತ್ತು. ನನಗೆ ಕೊಡು ಅದರಲ್ಲರ್ಧ ಇಪ್ಪತ್ತು” ಎಂದು ಪ್ರೇರೇಪಿಸಿದ. ಪೆದ್ದ ನಾಯಿ ಅವನ ಮಾತಿಗೆ ಮರುಳಾಗಿ, ತನ್ನ ಇಪ್ಪತ್ತು ವರ್ಷ ಆಯುಸ್ಸನ್ನು ಮನುಷ್ಯನಿಗೆ ಕೊಟ್ಟಿತು.

ಕತ್ತೆ ಮತ್ತು ನಾಯಿಗಳೇ ಮನುಷ್ಯನ ಮಾತಿನ ಮೋಡಿಗೆ ಮರುಳಾದ ಮೇಲೆ ಎರೆ ಹುಳದ ಸಾಸಿವೆ ಗಾತ್ರದ ಮಿದುಳದೆಷ್ಟುತಾನೆ ತಡೆದೀತು. ಅದರ ಇಪ್ಪತ್ತು ವರ್ಷ ಅಯುಸ್ಸನ್ನು ತನಗೆ ಜೋಡಿಸ್ಕೊಂಡ ಆ ಪಾಕಡಾ ಮನುಷ್ಯ. ಹೀಗೆ ತನ್ನದೇ ಆದ ನಲವತ್ತಕ್ಕೆ ಎರವಲು ಪಡೆದ ಅರವತ್ತನ್ನು ಜೋಡಿಸಿಕೊಂಡು ಮನುಷ್ಯನ ಅಯುಸ್ಸು ನೂರಾಯಿತಂತೆ.

ಅಂದಿನಿಂದ ಮನುಷ್ಯ ಮೊದಲ ನಲವತ್ತು ವರ್ಷ ಗಳ ಕಾಲ , ತಂದೆ ತಾಯಿಗಳಿಗೆ ವಿಧೇಯನಾಗಿದ್ದು, ಉತ್ತಮ ವಿದ್ಯಾಭ್ಯಾಸ ಪಡೆದು , ಕೆಲಸ ಹಿಡಿದು, ಮದುವೆಯಾಗಿ ಮನುಷ್ಯನಂತೆ ಜೀವಿಸುತ್ತಾನಂತೆ.

ನಲವತ್ತರಿಂದ ಅರವತ್ತರವರೆಗೆ, ಮಕ್ಕಳ ಮತ್ತು ಹೆಂಡತಿಯ ಸುಖಕ್ಕಾಗಿ ಹೆಣಗಿ, ಸಾಲ ಸೋಲ ಮಾಡಿಯಾದರೂ ಮಕ್ಕಳ ಮದುವೆ, ಮನೆ ಮಠ ಮಾಡಿಕೊಳ್ಳುವ ಸಲುವಾಗಿ ಕತ್ತೆಯಂತೆ ದುಡಿಯುತ್ತಾನಂತೆ.

ಆರವತ್ತಕ್ಕೂ ಹೆಚ್ಚು ವರ್ಷ ಬದುಕಿದ್ದರೆ, ನಿವೃತ್ತನಾಗಿದ್ದು, ಮನೆಯಲ್ಲಿ ತನ್ನ ಅಂತಸ್ತು ಬದಲಾಗಿರುವ ಅರಿವಿಲ್ಲದೆಯೇ, ತಾನಿನ್ನೂ ಮನೆಯ ಯಜಮಾನ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ತಾನಿನ್ನೂ ಬೇಕಾದವ ಎಂಬ ಭ್ರಮೆಯಲ್ಲಿದ್ದುಕೊಂಡು, ತನ್ನ ಮಾತುಗಳನ್ನು ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂಬ ಜ್ನಾನವೂ ಇಲ್ಲದೆ ನಾಯಿಯಂತೆ ಬೊಗಳಿಕೊಂಡು ಜೀವಿಸುತ್ತಾನಂತೆ.

ಇನ್ನು ಎಂಭತ್ತಕ್ಕೂ ಹೆಚ್ಚು ವರ್ಷ ಬದುಕಿದನೋ, ಆ ವೇಳೆಗಾಗಲೇ ತಾನೇನು, ತನ್ನ ಅಂತಸ್ತು ಮತ್ತು ಯೋಗ್ಯತೆಯೇನು ಎಂಬ ಜ್ನಾನೋದಯವಾಗಿ ಎರೆ ಹುಳ ತನ್ನ ತಲೆಯನ್ನು ಮಣ್ಣೊಳಗೆ ಹುದುಗಿಕೊಂಡಿರುವ ಹಾಗೆ ಮುಳು ಮುಳು ಎಂದುಕೊಂಡು ಬದುಕಿರುತ್ತಾನಂತೆ.

**********************************

< ಮೇಲಿನ ಲೇಖನ ಮೊದಲೊಮ್ಮೆ ourkarnataka.com ನಲ್ಲಿ ಪ್ರಕಟವಾಗಿತ್ತು>

Rating
No votes yet