ಜೀವಬಿಂದು

5

ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ

ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ

ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು

ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ ಹೂನಗೆಯ ಮೋಡಿ

ಬೆಚ್ಚಿಬೀಳಲಿ ತಡವರಸಿ ಎದೆಬಡಿತದೇರುಪೇರಿನ ಪ್ರೇಮಾಂಕುರದ ಪ್ರಕೃತಿಯ ಸನ್ನಿಯಲಿ

ಮೂಡಲಿ ಜೀವಜಾಲದ ಪಯಣ ಕಂಕಣಕೆ  ಪರಿಣಯದ ಪ್ರಥಮ ಮಧುರ ಪ್ರಣಯ ಹೆಜ್ಜೆ

ಕಸಿವಿಸಿಯ ಬಿಸಿಯುಸಿರ ಹಸಿಹರೆಯ ನೆರೆಯುಕ್ಕಿ ಸರಸಮಯ  ಶಿಶಿರಶಶಿಯುದಿಸಿಬಂದಂತೆ

ಬಿಗಿದಪ್ಪಿ ಬರಸೆಳೆದು ಕಲ್ಪಕಲ್ಪಾಂತರವ ಬೆಸೆಬೆಸೆವ ಜೀವರಸಗಂಗೆಯೊಸರಿ ಬಂದಂತೆ

ಹರಿವಿರಂಚಿಗಳ ನಾಭಿನಾಳದ ಪಳೆಯುಳಿಕೆಯೊಳು ನವಜೀವ ಧರೆಯೊಳಗೆ ನಳನಳಿಸಿ  ಬಂದಂತೆ

ಕಾರ್ಮೋಡ ಕವಿಕವಿದು ಶಿವಶಕ್ತಿ ನಿಜ ತೇಜ ಸಿಡಿಲಾಗಿ ಸಿಡಿಯುತಲಿ ಧರೆಯ ಬಸಿರ ಹೊಕ್ಕಂತೆ

ಮೇದಿನಿಯುನ್ಮಾದದಿ ಜಗದಜೀವಜಾಲದ ನರನಾಡಿಗಳ ತೀಡುತಲಿ ನವ ಜೋಗುಳವ ಪಾಡಿದಂತೆ

ಕಲ್ಪಕಲ್ಪಾಂತರದಿ ಮನ್ವಂತರದ ಯುಗಯುಗಾಂತರದ ಸುಪ್ತಜೀವದ ತಪ್ತಮಿಡಿತಕೆ ನಮೋ ನಮಃ 

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.