ಜೀವ ಹೂವಾಗಿದೆ - ಭಾಗ ೨

ಜೀವ ಹೂವಾಗಿದೆ - ಭಾಗ ೨

ಸುಮಾರು ಒಂದು ತಾಸು ಡಾಕ್ಟರ್ ಬಳಿ ಮಾತನಾಡಿ ಆಚೆ ಬಂದ ಸಿಂಧು ಹಾಗೂ ಸೃಜನ್ ತಂದೆಯರ ಮುಖದಲ್ಲಿ ಕಳವಳ ಮನೆ ಮಾಡಿತ್ತು. ಅವರು ಆಚೆ ಬರುವುದನ್ನೇ ಕಾದು ಕುಳಿತಿದ್ದ ಎಲ್ಲರೂ ಅವರ ಬಳಿ ಹೋಗಿ ಅವರು ಏನು ಹೇಳುವರೋ ಎಂದು ಕಾತುರರಾಗಿ ಮುಖ ಮುಖ ನೋಡುತ್ತಿದ್ದರು. ಅವರಿಬ್ಬರೂ ಬಾಯಿ ತೆರೆಯದಿದ್ದಾಗ ಸಿಂಧು ಶುರು ಮಾಡಿ ಹೇಳಿ ಅಪ್ಪ, ಹೇಳಿ ಮಾವ ಡಾಕ್ಟರ್ ಏನೆಂದರು? ಅವರಿಗೆ ಏನೂ ಆಗಿಲ್ಲ ಅಲ್ಲವ? ಯಾವಾಗ ಡಿಸ್ಚಾರ್ಜ್ ಮಾಡುತ್ತಾರಂತೆ? ಅವರಿಗೆ ಪ್ರಜ್ಞೆ ಬಂದಿದೆಯ? ಹೀಗೆ ಒಂದಾದ ಮೇಲೆ ಒಂದು ಪ್ರಶ್ನೆಗಳನ್ನು ಕೇಳಿದಳು.
 
ಅವಳ ಕಾಳಜಿಯನ್ನು ಕಂಡ ಕುಟುಂಬದವರಿಗೆ ಅವಳ ಮೇಲೆ ಮರುಕ ಹುಟ್ಟಿಬಂತು. ಸಿಂಧುವಿನ ತಂದೆ ಅವರ ಮಡದಿಗೆ ಕಣ್ಸನ್ನೆ ಮಾಡಿ ಕೂಡುವಂತೆ ಹೇಳಿದರು. ಅವರು ಭಯದಿಂದಲೇ ಸಿಂಧುವನ್ನು ತಮ್ಮ ಪಕ್ಕದಲ್ಲೇ ಕೂಡಿಸಿಕೊಂಡು ಅವರನ್ನೇ ದಿಟ್ಟಿಸಿ ನೋಡುತ್ತಿದ್ದರು.
 
ನೋಡಿ, ಸೃಜನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಡಾಕ್ಟರ್ ಭರವಸೆ ಕೊಟ್ಟಿದ್ದಾರೆ. ಇನ್ನೊಂದೆರೆಡು ದಿನ ಅಬ್ಸರ್ವೇಶನ್ ಅಲ್ಲಿ ಇರಬೇಕಂತೆ. ಆಮೇಲೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ. ತಕ್ಷಣ ಎಲ್ಲರೂ ನಿಟ್ಟುಸಿರು ಬಿಟ್ಟರು. ಸಿಂಧು ತಲೆ ಮೇಲೆತ್ತಿ ಭಗವಂತನಿಗೆ ಕೈ ಮುಗಿದಳು.
 
ಆದರೆ.....ಎಂದು ಮಾತು ಮುಂದುವರಿಸಿದ ಸಿಂಧುವಿನ ತಂದೆ....ಆದರೆ....ಒಂದು ಸಮಸ್ಯೆ ಉಂಟಾಗಿದೆ. ಸೃಜನ್ ಕೆಳಗೆ ಬಿದ್ದಾಗ ಅವನ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಅವನಿಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಯಾವುದೇ ಘಟನೆಗಳು ನೆನಪಿನಲ್ಲಿ ಉಳಿದಿಲ್ಲ. ಅವನು ಈಗ ಒಂದು ವರ್ಷದ ಹಿಂದೆ ಹೇಗಿದ್ದನೋ ಹಾಗಿರುತ್ತಾನೆ. ಅವನಿಗೆ ಅಪ್ಪಿ ತಪ್ಪಿ ನೆನಪಿನ ಶಕ್ತಿ ಕಳೆದಿದೆ ಎಂಬ ವಿಷಯ ಈಗಲೇ ತಿಳಿಯಬಾರದು. ಒಂದು ವೇಳೆ ಹಾಗೇನಾದರೂ ಆದರೆ ಅವನ ಮೆದುಳಿನ ಮೇಲೆ ಒತ್ತಡ ಹೆಚ್ಚಾಗಿ ಅವನು ಸಂಪೂರ್ಣವಾಗಿ ಎಲ್ಲವನ್ನೂ ಮರೆಯುವ ಸಾಧ್ಯತೆ ಇರುವುದು...ಇಲ್ಲವಾದರೆ...ಇನ್ನೂ ಹೆಚ್ಚಿನ ಆಘಾತವೇನಾದರೂ ಆದಲ್ಲಿ, ಅವನ ಮೆದುಳು ನಿಷ್ಕ್ರಿಯವಾಗಿ ಅವನ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ....ಎಂದು ಹೇಳಿ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಕಣ್ಣಂಚಿನಲ್ಲಿ ಮೂಡಿದ್ದ ನೀರನ್ನು ಒರೆಸಿಕೊಂಡರು.
 
ಈಗ ನಾವೆಲ್ಲರೂ ಮಾಡಬೇಕಾದ ಕೆಲಸ ಏನೆಂದರೆ ಕನಿಷ್ಠ ಪಕ್ಷ ಮೂರು ನಾಲ್ಕು ತಿಂಗಳು ಅವನು ವರ್ಷದ ಹಿಂದೆ ಹೇಗಿದ್ದನೋ ಆ ವಾತಾವರಣವನ್ನು ಸೃಷ್ಟಿಸಬೇಕು...ಅದು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಶ್ರಮ,ತ್ಯಾಗ,ಕಷ್ಟ,ನೋವು,ಕಣ್ಣೀರು,ಸಹನೆ ಎಲ್ಲವೂ ಬೇಕು. ಅವನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅವನ ಸಹೋದ್ಯೋಗಿಗಳು,ಅವನ ಸ್ನೇಹಿತರು,ಬಂಧುಗಳು ಎಲ್ಲರೂ ಇದಕ್ಕೆ ಸಹಕರಿಸಬೇಕು. ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಇರುವುದು ಸಿಂಧು ಗೆ.
 
ಅವನ ಪ್ರಸ್ತುತ ಪರಿಸ್ಥಿತಿಯ ಪ್ರಕಾರ ಅವನಿಗಿನ್ನೂ ಮದುವೆ ಆಗಿಲ್ಲ. ಹಾಗಾಗಿ ಅವನನ್ನು ನಾವು ಪ್ರಸ್ತುತ ಪರಿಸ್ಥಿತಿಯ ಅರಿವು ಮಾಡಿಸುವವರೆಗೂ ಸಿಂಧು ನಮ್ಮ ಮನೆಯಲ್ಲೇ ಇರಬೇಕಾಗುತ್ತದೆ. ಎಲ್ಲರೂ ಸಿಂಧುವಿನ ಕಡೆ ನೋಡಿದರು. ಸಿಂಧುಗೆ ಆಗಸವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು. ಇನ್ನೂ ಮದುವೆ ಆಗಿ ಸರಿಯಾಗಿ ವಾರವೂ ಆಗಿಲ್ಲ...ಆಗಲೇ ತನಗೇಕೆ ಇಂಥಹ ಪರಿಸ್ಥಿತಿ ಬಂದಿತೆಂದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಯಾರೆಷ್ಟೇ ಸಮಾಧಾನ ಮಾಡಿದರೂ ಅವಳ ದುಃಖ ಕಮ್ಮಿ ಆಗಲಿಲ್ಲ.
 
ಕೊನೆಗೆ ಸೃಜನ್ ಮೊದಲಿನಂತಾಗಬೇಕೆಂದರೆ ನೀನು ಈ ತ್ಯಾಗ ಮಾಡಲೇಬೇಕು ಎಂದು ಅರಿವು ಮಾಡಿಕೊಟ್ಟ ಮೇಲೆ ಸಮಾಧಾನವಾದಳು. ಅಲ್ಲಿಯವರೆಗೂ ಸುಮ್ಮನಿದ್ದ ಸೃಜನ್ ನ ತಂದೆ ಸಿಂಧು ತಲೆಯ ಮೇಲೆ ಕೈ ಇಟ್ಟು, ನೋಡಮ್ಮ ಸಿಂಧು ನಿನ್ನ ಸಂಕಟ ಅರ್ಥ ಆಗುತ್ತೆ...ಇನ್ನು ನಿನ್ನ ಕೈಯಲ್ಲಿನ ಮದರಂಗಿ ಆರುವ ಮುಂಚೆಯೇ ಹೀಗಾಗಬಾರದಿತ್ತು. ಆದರೆ ವಿಧಿಯ ಮುಂದೆ ನಾವೆಲ್ಲರೂ ಗುಲಾಮರೇ. ನನ್ನ ಮಗನ ಪ್ರಾಣ ಉಳಿಯಬೇಕೆಂದರೆ ನೀನು ಈ ದುಃಖಗಳನ್ನು ತಡೆದುಕೊಳ್ಳಬೇಕು..ಅಷ್ಟೇ ಅಲ್ಲ ಅವನು ಮೊದಲಿನಂತಾಗಲೂ ನಿನ್ನ ಸಹಕಾರ ಬೇಕಮ್ಮ...ಎಂದು ಕಣ್ಣೀರು ಒರೆಸಿಕೊಂಡರು.
 
ಅಷ್ಟರಲ್ಲಿ ಒಳಗಿನಿಂದ ಬಂದ ನರ್ಸ್ ಡಾಕ್ಟರ್ ಕರೆಯುತ್ತಿದ್ದಾರೆ ಎಂದು ತಿಳಿಸಿ ಹೋದಳು. ಒಳಗೆ ಹೋದ ಸಿಂಧು ಮತ್ತು ಸೃಜನ್ ತಂದೆ ಡಾಕ್ಟರ್ ಮುಂದೆ ಕುಳಿತು...ಡಾಕ್ಟರ್ ಈಗ ನಮ್ಮ ಮುಂದಿನ ನಡೆ ಏನು ಎಂದು ಕೇಳಿದರು.
 
ನೋಡಿ ಈಗ ಪೇಷಂಟ್ ಗೆ ಪ್ರಜ್ಞೆ ಬಂದರೂ ನಾವೇ ಸೆಡೆಟೀವ್ಸ್ ಕೊಟ್ಟು ಮತ್ತೆ ನಿದ್ರೆ ಹೋಗುವ ಹಾಗೆ ಮಾಡುತ್ತೇವೆ. ಏಕೆಂದರೆ ಅವರು ಬೆಂಗಳೂರಿಗೆ ಹೋಗುವವರೆಗೂ ಅವರಿಗೆ ಇಲ್ಲಿ ನಡೆದ ವಿಷಯಗಳು ತಿಳಿಯಬಾರದು. ಒಮ್ಮೆ ಅವರು ಬೆಂಗಳೂರಿನ ಹಾಸ್ಪಿಟಲ್ ಗೆ ಅಡ್ಮಿಟ್ ಆದರೆ ಆಗ ನೀವು ಅವರಿಗೆ ಅಪಘಾತ ನಡೆದು ಅಡ್ಮಿಟ್ ಮಾಡಿದ್ದೇವೆ ಎಂದು ತಿಳಿಸಬಹುದು. ಅಲ್ಲಿಯವರೆಗೂ ಅವರಿಗೆ ಯಾವುದೇ ಕಾರಣಕ್ಕೂ ಇಲ್ಲಿನ ಘಟನೆ ತಿಳಿಯಬಾರದು.
 
ನೀವು ಅಲ್ಲಿ ಹೋದ ಮೇಲೂ ನಾನು ವಾರಕ್ಕೊಮ್ಮೆ ಬಂದು ನೋಡಿ ಹೋಗುತ್ತೇನೆ. ಒಂದು ತಿಂಗಳ ಮಟ್ಟಿಗೆ ಅವರು ಎಲ್ಲಿಯೂ ಆಚೆ ಹೋಗದ ಹಾಗೆ ನೋಡಿಕೊಳ್ಳಬೇಕು. ಏಕೆಂದರೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮತ್ತೆ ಆಗಾಗ ಸ್ವಲ್ಪ ತಲೆನೋವು ಬರುತ್ತಿರುತ್ತದೆ. ಆದರೆ ಗಾಭರಿ ಆಗುವ ಅವಶ್ಯಕತೆ ಇಲ್ಲ. ಸ್ವಲ್ಪ ಹೊತ್ತಿನ ನಂತರ ಅದು ಕಡಿಮೆ ಆಗಿಬಿಡುತ್ತದೆ.
 
ಮತ್ತೆ ಮತ್ತೆ ಹೇಳುತ್ತೇನೆ...ಮೂರು ನಾಲ್ಕು ತಿಂಗಳವರೆಗೂ ಅವರಿಗೆ ಯಾವುದೇ ಆಘಾತಕಾರಿ ಸುದ್ದಿಗಳು ತಿಳಿಯದ ಹಾಗೆ ನೋಡಿಕೊಳ್ಳಬೇಕು. ಆಮೇಲೆ ನಿಧಾನವಾಗಿ ಅವರಿಗೆ ಪ್ರಸ್ತುತ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬಹುದು. ಎಲ್ಲವೂ ನಿಮ್ಮ ಕೈಯಲ್ಲಿಯೇ ಇದೆ. ನೀವೆಷ್ಟು ಜಾಗ್ರತೆಯಾಗಿ ಅವರ ಆರೈಕೆ ಮಾಡುತ್ತೀರೋ ಅವರು ಅಷ್ಟು ಬೇಗ ಹುಷಾರಾಗುತ್ತಾರೆ. ಇನ್ನೊಂದೆರೆಡು ದಿನ ಅಬ್ಸರ್ವೇಷನ್ ಆದ ಮೇಲೆ ಡಿಸ್ಚಾರ್ಜ್ ಮಾಡುತ್ತೇವೆ.
 
ನಮ್ಮದೇ ಆಂಬುಲೆನ್ಸ್ ನಲ್ಲಿ ಜೊತೆಯಲ್ಲಿ ಒಬ್ಬರು ನರ್ಸನ್ನು ಕಳುಹಿಸಿ ಕೊಡುತ್ತೇನೆ. ಅವರ ಅವಶ್ಯಕತೆಯೂ ಇಲ್ಲ...ಆದರೂ ಯಾವುದಕ್ಕೂ ಇರಲೆಂದು ಅಷ್ಟೇ. 
 
ಡಾಕ್ಟರ್ ಹೇಳಿದ ವಿಷಯವನ್ನು ಕುಟುಂಬದವರಿಗೆ ತಿಳಿಸಿ ಎಲ್ಲರನ್ನೂ ಸಮಾಧಾನ ಮಾಡಿ...ಮುಂದೆ ಹೇಗೆ ಎಲ್ಲವನ್ನೂ ಸಂಭಾಳಿಸಬೇಕೆಂದು ಆಲೋಚಿಸ ತೊಡಗಿದರು. ಆದರೆ ಸಿಂಧು ಮಾತ್ರ ಏನೂ ಮಾತಾಡಲು ತೋಚದೆ ತನಗೊದಗಿದ ದುರಾದೃಷ್ಟಕ್ಕೆ ಯಾರನ್ನು ಹಳಿಯಬೇಕೋ ಗೊತ್ತಾಗದೆ ಶೂನ್ಯದತ್ತ ದೃಷ್ಟಿ ಮಾಡಿ ಕುಳಿತಿದ್ದಳು.
 
ಮರುದಿನ ಬೆಳಿಗ್ಗೆ ಸಿಂಧು ಜೊತೆಗೂಡಿ ಸೃಜನ್ ಬಿದ್ದ ಜಾಗ ನೋಡಲೆಂದು ಸಿಂಧು ತಂದೆ ಮತ್ತು ಸೃಜನ್ ತಂದೆ ಡಾಲ್ಫಿನ್ ನೋಸ್ ಬಳಿ ಬಂದು ನೋಡಿ....ಅರೆಕ್ಷಣ ದಂಗಾಗಿ ಹೋದರು. ಒಂದುವೇಳೆ ಎಡಕ್ಕೆ ಬೀಳುವ ಬದಲು ಸೃಜನ್ ಬಲಕ್ಕೆ ಏನಾದರೂ ಬಿದ್ದಿದ್ದರೆ ಅವನ ಮೂಳೆಯೂ ದೊರಕುವ ಸಾಧ್ಯತೆಗಳು ಇರಲಿಲ್ಲ. ಅಲ್ಲಿ ದೊಡ್ಡ ಪ್ರಪಾತವಿತ್ತು. ದೇವರ ದಯೆ ಇಷ್ಟರಲ್ಲೇ ಮುಗಿಯಿತು ಎಂದು ಸಮಾಧಾನ ಪಟ್ಟರು. ನಂತರ ಸಿಂಧು ಆ ಸಮಯದಲ್ಲಿ ಧೃತಿಗೆಡದೆ ಅಲ್ಲಿಂದ ಮನೆ ಇರುವ ಜಾಗದವರೆಗೂ ಹೋಗಿ ಅಲ್ಲಿಂದ ಜನರನ್ನು ಕರೆತಂದು ಅವನನ್ನು ಉಳಿಸಿಕೊಂಡ ಸಮಯಪ್ರಜ್ಞೆಗೆ ಅವಳನ್ನು ಶ್ಲಾಘಿಸಿದರು.
 
ಆದರೆ ಅದ್ಯಾವುದೂ ಸಿಂಧು ಕಿವಿಗೆ ಬೀಳಲೇ ಇಲ್ಲ. ಸಿಂಧು ಸಂಪೂರ್ಣ ಮೌನಕ್ಕೆ ಶರಣಾಗಿ ಬಿಟ್ಟಿದ್ದಳು. ಒಂದು ವೇಳೆ ಸೃಜನ್ ಗೆ ನನ್ನ ನೆನಪೇ ಆಗದಿದ್ದರೆ? ನನ್ನ ಗತಿ ಏನು? ಅಥವಾ ಆಗಲು ಸಿಕ್ಕಾಪಟ್ಟೆ ಸಮಯ ತೆಗೆದುಕೊಂಡರೆ? ಅಥವಾ ಎಲ್ಲವೂ ಮರೆತುಹೋದರೆ? ಹೀಗೆ ಪ್ರಶ್ನೆಗಳ ನಾಗಾಲೋಟ ಶುರುವಾಗಿತ್ತು.
 
ಮತ್ತೆ ಎರಡು ದಿನದ ನಂತರ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಸೃಜನ್ ನನ್ನು ಬೆಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಬೆಂಗಳೂರಿಗೆ ವರ್ಗವಾದ ತಕ್ಷಣ ಸಿಂಧು ಕುಟುಂಬ ಒಲ್ಲದ ಮನಸಿನಿಂದ ತಮ್ಮ ಮನೆಗೆ ತೆರಳಿದರು.


ಸೃಜನ್ ಕುಟುಂಬ ಮುಂದಿನ ಅಗ್ನಿ ಪರೀಕ್ಷೆಗೆ ಸಿದ್ಧವಾಗಲು ತಯಾರಿ ನಡೆಸಿದ್ದರು.

 

Rating
No votes yet