ಜೈ ಸೀತಾರಾಂ

ಜೈ ಸೀತಾರಾಂ

ಈಗ್ಗೆ ಸುಮಾರು ೮೦ - ೧೦೦ ವರ್ಷಗಳ ಹಿಂದೆ, ಈಗಿನಂತೆ ಟಿ.ವಿ, ರೇಡಿಯೋ, ಸಿನಿಮಾ, ವೀಡಿಯೋ, ಮುಂತಾದ ಯಾವ ಮನರಂಜನಾ ಮಾಧ್ಯಮವೂ ಇರಲಿಲ್ಲ. ಯಾವ ಹಳ್ಳಿಯಲ್ಲಿಯೂ ವಿದ್ಯುಚ್ಛಕ್ತಿ ಸರಬರಾಜು ಇರಲೇ ಇಲ್ಲ. ಇನ್ನು ಟಿ.ವಿ. ಸಿನಿಮಾಗಳ ಮಾತೆಲ್ಲಿ. ಆಗ ಮನರಂಜನೆ ಎಂದರೆ ನಾಟಕ ಒಂದೇ. ಆಗಿನವರು ನಾಟಕ ಬಿಟ್ಟರೆ ಬೇರೆ ಯಾವ ದೃಶ್ಯ ಮಾಧ್ಯಮವನ್ನೂ ಕಂಡವರಲ್ಲ. ಹಳ್ಳಿಗಳಲ್ಲಿ ಬೆಳೆ ಕಟಾವು ಆದ ಮೇಲೆ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ವೇಳೆ ಇರುತ್ತಿತ್ತು. ಆಗ ಹಳ್ಳಿಗಳಲ್ಲಿ ನಾಟಕದ ಮಾಸ್ತರುಗಳು ಅಲ್ಲಿಯೇ ಕೆಲವು ಪ್ರತಿಭೆಗಳನ್ನು ಗುರುತಿಸಿ ನಾಟಕದ ಪ್ರಾಕ್ಟೀಸು ಮಾಡಿಸಿ ಆಡಿಸುತ್ತಿದ್ದರು. ಇಂಥ ನಾಟಕಗಳು ತೀರಾ ಬಾಲಿಶ ರೀತಿಯಲ್ಲಿ ಪ್ರದರ್ಶಿಸಲ್ಪಡುತ್ತಿದ್ದುವೇ ವಿನಾ ಯಾವ ರೀತಿಯ ವೃತ್ತಿಪರತೆ ಇರುತ್ತಿರಲಿಲ್ಲ. ಆದರೂ ಇವು ಜನರಿಗೆ ಸಮಯಕಳೆಯಲು ಸಹಾಯಕವಾಗಿ ಬೇಕಾದ ಮನರಂಜನೆ ಒದಗಿಸುತ್ತಿದ್ದವು.

ಇವನ್ನ ಬಿಟ್ಟರೆ, ವೃತ್ತಿನಾಟಕ ಕಂಪನಿಗಳು ಪ್ರದರ್ಶಿಸುತ್ತಿದ್ದ ನಾಟಕಗಳು ಬಹಳ ಶಿಸ್ತಿನಿಂದ, ಮತ್ತು ವೃತ್ತಿಪರತೆಯಿಂದ ಕೂಡಿದ ನಾಟಕಗಳಾಗಿದ್ದವು.
ಒಂದೊಂದು ಊರಿನಲ್ಲಿ ಸುಮಾರು ಎರಡು ಅಥವಾ ಮೂರು ತಿಂಗಳು ಮೊಕ್ಕಾಂಮಾಡಿ ಜನರಿಗೆ ಮನರಂಜನೆ ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿದ್ದ ಈ ನಾಟಕ ಕಂಪನಿಗಳ ನಾಟಕಗಳು ಹಲವು ಬಹಳ ಹೆಸರುವಾಸಿಯಾಗಿ ಜನರ ನಾಲಗೆಮೇಲೆ ಹರಿದಾಡುತ್ತಿದ್ದವು.
ನಾಟಕ ಶಿರೋಮಣಿ ಎ.ವಿ.ವರದಾಚಾರ್ಯರ ಕಂಪನಿ, ಶ್ರೀ ಕೊಟ್ಟೂರಪ್ಪನವರ ಕಂಪನಿ ರಾಯಚೂಟಿ ನಾಟಕ ಕಂಪನಿ, ನಟಭಯಂಕರ ಗಂಗಾಧರರಾಯರ ಕಂಪನಿ, ಗುಬ್ಬಿ ಕಂಪನಿ, ಹೀಗೆ ಹಲವು ಕಂಪನಿಗಳು ಆಗಿನ ನಾಟಕ ರಂಗದ ಮುಂಚೂಣಿಯಲ್ಲಿದ್ದವು.
ಈ ಕಂಪನಿಗಳಲ್ಲಿ ನಟಿಸುತ್ತಿದ್ದ ಹಲವು ನಟರು ತಮ್ಮ ಸಂಭಾಷಣೆ ಹೇಳುವ ಶೈಲಿ, ಸುಶ್ರಾವ್ಯವಾಗಿ ಹಾಡುತ್ತಿದ್ದ ಹಾಡುಗಳು ಮುಂತಾದವುಗಳಿಂದ ಅತ್ಯಂತ ಪ್ರಸಿದ್ಧಿ ಪಡೆದಿದ್ದರು.

ಇಂಥ ಕೆಲವು ಹೆಸರಾಂತ ನಟರೆಂದರೆ, ವರದಾಚಾರ್ಯರು, ನಟಭಯಂಕರ ಗಂಗಾಧರರಾಯರು, ಶ್ರೀ ಕೊಟ್ಟೂರಪ್ಪನವರು ಇವರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿ ವೈಶಿಷ್ಟತೆಯನ್ನು ಹೊಂದಿದ್ದವರಾಗಿದ್ದರು. ವರದಾಚಾರ್ಯರು ಅತ್ಯಂತ ಆಕರ್ಷಕ ವ್ಯಕ್ತಿ ಮತ್ತು ನಾಟಕದ ಎಲ್ಲ ಬಗೆಯಲ್ಲಿಯೂ ಪ್ರವೀಣರು. ಅವರ ಪ್ರಗಲ್ಭ ಅಭಿನಯ ಜನರ ಮನಸ್ಸನ್ನು ಸೂರೆಗೊಂಡಿತ್ತು. ನಟಭಯಂಕರ ಗಂಗಾಧರರಾಯರು ಹೆಸರಿಗೆ ತಕ್ಕಂತೆ ನಟಭಯಂಕರರೇ. ಹಿರಣ್ಯಕಶಿಪು, ಕಂಸ, ರಾವಣ ಹೀಗೆ ಅವರು ರಾಕ್ಷಸ ಪಾತ್ರಗಳಲ್ಲಿಯೇ ವಿಜೃಂಭಿಸುತ್ತಿದ್ದರು. ಜನರಿಗಂತೂ ಅವರ ಅಭಿನಯ ಮತ್ತು ಅವರ ಕಂಚಿನ ಕಂಠದಿಂದ ಹೊಮ್ಮುತ್ತಿದ್ದ ಹಾಡುಗಳು ಹುಚ್ಚು ಹಿಡಿಸಿಬಿಡುತ್ತಿದ್ದವು.

ಶ್ರೀ ಕೊಟ್ಟೂರಪ್ಪನವರು ತಮ್ಮ ಕಂಠಮಾಧುರ್ಯಕ್ಕೆ ಹೆಸರಾದವರು. ಅವರು ಅತ್ಯಂತ ಮಧುರವಾಗಿ ಹಾಡಿ ಜನಮನ ಗೆದ್ದ ನಟರು. ಪ್ರೇಕ್ಷಕರು ಅವರ ಹಾಡನ್ನು ಕೇಳಲೆಂದೇ ದೂರದ ಊರುಗಳಿಂದ ಬಂದು ಗಂಟೆಗಟ್ಟಲೆಕಾದು ನಾಟಕ ನೋಡಿ ಆನಂದಿಸುತ್ತಿದ್ದರಂತೆ.
ಇಂಥದ್ದೇ ಒಂದು ನಾಟಕದಲ್ಲಿ ನಡೆದ ಘಟನೆಯನ್ನು ನನ್ನ ಅಪ್ಪ ನನಗೆ ಹೇಳಿದ್ದು ಈಗ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೊಟೂರಪ್ಪನವರು ಹನುಮಂತನ ಪಾರ್ಟು ಮಾಡುವುದರಲ್ಲಿ ಹೆಸರುವಾಸಿ. ಅಂದಿನ ಕಾಲದಲ್ಲಿ ನಟನು ಯಾವುದೇ ಪಾರ್ಟು ಮಾಡಲಿ, ನಾಟಕದ ಕಥೆ ಅದೇನೇ ಇರಲಿ, ಅವನು ಸುಶ್ರಾವ್ಯವಾಗಿ ಹಾಡಲೇಬೇಕು. ಕೊಟ್ಟೂರಪ್ಪನವರೂ ಸಹ ಹನುಮಂತನ ಪಾರ್ಟಿನಲ್ಲಿ ಅದ್ಭುತವಾಗಿ ಹಾಡುತ್ತಿದ್ದರು.

ಎಂದಿನಂತೆ ಕೊಟ್ಟೂರಪ್ಪನ ಕಂಪನಿ ಮೊಕ್ಕಾಂ ಹಾಕಿತ್ತು. ನಾಟಕ ಎಂದರೆ ಎಷ್ಟೇ ಮೈಲಿ ದೂರವಾದರೂ ಸೈಕಲ್ಲಿ ತುಳಿದು ಅಲ್ಲಿಗೆ ಹಾಜರ್, ನನ್ನ ಅಪ್ಪ. ಈ ಘಟನೆ ನಡೆದ ದಿನ ನಾಟಕಕ್ಕೆ ಎಂದಿನಂತೆ ಹೊರಟರು ನನ್ನ ಅಪ್ಪ ಮತ್ತು ಅವರ ಜತೆ ನಮ್ಮ ಸೋದರ ಮಾವ ಕೂಡ. ಅಂದೇಕೋ ಎಲ್ಲರಿಗಿಂತ ಮುಂಚೆ ಹೋಗಿ ಟಿಕೆಟ್ ಪಡೆಯುತ್ತಿದ ನನ್ನ ಅಪ್ಪ ಈ ನಾಟಕಕ್ಕೆ ಸ್ವಲ್ಪ ಲೇಟ್ ಆಗಿ ಹೋದರು. ಎರಡೇ ಎರಡು ಟಿಕೇಟು ಮಾತ್ರ ಇದ್ದವು. ಅದೂ ಬೆಂಚಿನ ಟಿಕೇಟ್, ಬೇರೆಲ್ಲೂ ಸ್ಥಳವಿಲ್ಲ. ನಾಟಕ ನೋಡದೇ ಹಿಂದೆ ಬಂದವರೇ ಅಲ್ಲ ನನ್ನ ಅಪ್ಪ. ಇದ್ದ ಎರಡು ಟಿಕೆಟ್ ಕೊಂಡು ಒಳಗೆ ಹೋದರೆ ಒಂದೇ ಒಂದು ಬೆಂಚಲ್ಲಿ ಮಾತ್ರ ಜಾಗ ಇದೆ. ಬೇರೆಲ್ಲಾ ಜಾಗವೆಲ್ಲ ತುಂಬಿ, ನಾಟಕ ಮುಂದಿರ ಜನರಿಂದ ತುಂಬಿ ತುಳುಕುತ್ತ ಇತ್ತು.

ಇದ್ದ ಒಂದು ಬೆಂಚಿನ ಕಡೆ ಓಡಿ ಸೀಟು ಹಿಡಿಯಲು ಆ ನುಗ್ಗಾಟದ ಮಧ್ಯದಲ್ಲಿ ಜನರನ್ನು ತಳ್ಳಿಕೊಂಡು ಹೇಗೋ ಕಷ್ಟಪಟ್ಟು ಬೆಂಚಿನ ಹತ್ತಿರ ಬಂದರು. ಅಲ್ಲಿ ನೊಡಿದರೆ 4 ಜನ ಕೂರುವ ಆ ಬೆಂಜಿನ ಮಧ್ಯದಲ್ಲಿ ಒಬ್ಬ ಧಡೂತಿ ಆಸಾಮಿ ಕುಳಿತಿದ್ದಾನೆ. ನನ್ನ ಅಪ್ಪ ಮತ್ತು ಸೋದರಮಾವ ಇಬ್ಬರೂ ಸಾಕಷ್ಟು ಧಡೂತಿ ಆಸಾಮಿಗಳೇ. ಆದರೆ ಅಲ್ಲಿ ಆಸೀನನಾಗಿದ್ದವನಂತೂ ಇವರಿಬ್ಬರ ಎರಡರಷ್ಟು ಧಡಿಯ. ಉದ್ದಕ್ಕೆ ಕತ್ತಿನವರೆಗೂ ಇಳಿಬಿಟ್ಟು ಕೂದಲು, ಹಣೆಯ ತುಂಬಾ ಕುಂಕುಮ ಹಚ್ಚಿಕೊಂಡಿದ್ದಾನೆ. ಏಕಾಗ್ರತೆಯಿಂದ ನಾಟಕದ ಸ್ಟೇಜಿನ ಕಡೆ ನೋಡುತ್ತಾ ಕುಳಿತಿದ್ದಾನೆ. ಅವನ ಆಕಾರ ವೇಷ ನೋಡಿದ ನಮ್ಮ ಅಪ್ಪ ಅವನನ್ನು ಪಕ್ಕಕ್ಕೆ ಒತ್ತಿಕೊಂಡು ಕುಳಿತು ಕೊಳ್ಳುವಂತೆ ಹೇಳಲೂ ಸಹಾ ಹಿಂಜರಿದರು. ಇನ್ನೇನು ನಾಟಕ ಬೇರೆ ಪ್ರಾರಂಭ ಆಗುವ ಸಮಯ. ಇದೆಂಥ ವಿಪರೀತವಪ್ಪ, ಸರಿ ಹೇಗೋ ಅವನ ಇಕ್ಕೆಲಗಳಲ್ಲಿ ಸ್ವಲ್ಪ ಜಾಗ ಇದೆಯಲ್ಲ. ಅಲ್ಲೇ ಸಾವರಿಕೊಂಡು ಕೂತರಾಯಿತು ಎಂದು ಯೋಚಿಸಿ ಅವನ ಎರಡೂ ಪಕ್ಕಗಳಲ್ಲಿ ಇದ್ದ ಸ್ವಲ್ಪ ಜಾಗದಲ್ಲಿಯೇ ಬೆಂಚಿನ ಒಂದು ಅಂಚಿನಲ್ಲಿ ನನ್ನ ಅಪ್ಪ, ಮತ್ತೊಂದು ಅಂಚಿನಲ್ಲಿ ನನ್ನ ಮಾವ ಕುಳಿತರು.
ನಾಟಕ ಪ್ರಾರಂಭವಾಯಿತು. ಆಗೆಲ್ಲಾ ನಾಟ ಶುರುಆಗುವುದೇ ರಾತ್ರಿ ಹತ್ತು ಗಂಟೆಯ ವೇಳೆಗೆ. ಸೂತ್ರಧಾರ ಬಂದು ಕಂದಪದ್ಯಗಳನ್ನು ಹಾಡಿ, ನಾಟಕವನ್ನು ಮುಂದುವರಿಸುತ್ತಾನೆ. ನಡುರಾತ್ರಿಯವೇಳೆಗೆ ಕೊಟ್ಟೂರಪ್ಪನವರ ಮುಖ್ಯ ಸೀನ್ ಬರುತ್ತದೆ. ನಾಟಕದ ಸ್ಟೇಜ್ ಬಿಟ್ಟರೆ ಬೇರೆ ಕಡೆ ಕಡುಕತ್ತಲು. ಈಗಿನಂತೆ ಬೀದಿ ದೀಪಗಳಿರಲಿಲ್ಲ. ನಿಜವಾದ ಕತ್ತಲನ್ನು ಅನುಭವಿಸಬೇಕೆಂದರೆ ಆಗಿನ ಕಾಲದಲ್ಲಿ ಮಾತ್ರ ಸಾಧ್ಯವಾಗಿತ್ತು. ಈಗೆಲ್ಲಾ ಪೂರ್ಣಪ್ರಮಾಣದ ಕತ್ತಲನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯಾದರೂ ಒಂದು ದೀಪ ಉರಿಯುತ್ತಲೇ ಇರುತ್ತದೆ. ರಾತ್ರಿಯ ನೀರವತೆ ಆ ಸಂದರ್ಭಕ್ಕೆ ಸರಿಯಾದ ವೇದಿಕೆ ನಿರ್ಮಾಣ ಮಾಡಿತ್ತು. ನಿಶ್ಶಬ್ಧ ಎಂದರೆ ಎಲ್ಲೆಲ್ಲೂ ನಿಶ್ಶಬ್ಧ, ನಾಟಕದ ಪಾರ್ಟುದಾರರು ಆಡುವ ಮಾತು, ಹಾಡುವ ಹಾಡುಬಿಟ್ಟರೆ ಬೇರಾವ ಶಬ್ಧವೂ ಇರಲಿಲ್ಲ. ಕೊಟೂರಪ್ಪನವರು ಎಂದಿನಂತೆ ಹನುಮಂತನ ಪಾರ್ಟು. ನಾಟಕದ ಸ್ಟೇಜಿನ ಮೇಲೆ ಒಂದು ಮರದ ಸೀನ್ ಹಾಕಿ ಎತ್ತರದಲ್ಲಿ ಕುಳಿತು ಹಾಡುವ ದೃಶ್ಯ.

ಹನುಮಂತನು ತನ್ನ ರಾಮಭಕ್ತಿಯನ್ನು ಪ್ರದರ್ಶಿಸುವ ಸೀನ್ ಅದು. ಇಡೀ ನಾಟಕ ಮಂದಿರದ ಎಲ್ಲಾ ದೀಪಗಳನ್ನು ಆರಿಸಿ ಕೊಟ್ಟೂರಪ್ಪನವರ ಮೇಲೆ ಮಾತ್ರ ಬೆಳಕು ಬೀಳುವಂತೆ ಸಜ್ಜು ಮಾಡಿದ್ದರು. ಇನ್ನು ಆ ಸೀನ್‍ಗೆ ಹೆಚ್ಚು ರಂಗು ಬರುವಂತೆ ಅವರ ಮೇಲೆ ತಿಳಿ ನೀಲಿ ಬೆಳಕು ಹಾಯುವಂತೆ ಮಾಡಿದ್ದರು.

ಕೊಟ್ಟೂರಪ್ಪನವರು ಹನುಮಂತನ ವೇಷದಲ್ಲಿ ಸ್ಟೇಜಿನ ಮೇಲೆ ಮರದ ಮೇಲೆ ಕುಳಿತು ಹಾಡಲು ಶುರುಮಾಡಿದರು. ಅವರೊಬ್ಬರು ಮಾತ್ರ ಕಾಣಿಸುತ್ತಿದ್ದಾರೆ. ಬೇರೆಲ್ಲ ಕಡೆ ಕತ್ತಲು ನಡುರಾತ್ರಿಯ ನೀರವತೆ ಅವರು ಹಾಡಿದ ಹಾಡು.
“ಶ್ರೀರಾಮಚಂದ್ರಂ ದಶರಥಾತ್ಮಜಂ ಅಪ್ರಮೇಯಂ” ಎಂದು ಶುರುವಾಗುವ ಹಾಡು. ಈ ಹಾಡನ್ನು ಕೊಟ್ಟೂರಪ್ಪನವರು ತಮ್ಮ ಸುಶ್ರಾವ್ಯವಾದ ಕಂಠದಿಂದ ಪ್ರೇಕ್ಷಕರು ಮೈಮರೆಯುವಂತೆ ಹಾಡುತ್ತಿದ್ದಾರೆ. ಹಾಡುತ್ತ ಹಾಡುತ್ತಾ ಹನುಮಂತನು ತನ್ನ ಎದೆಯನ್ನು ಬಗೆದು ತೋರಿದಾಗ ಅಲ್ಲಿ ಅವನ ವಕ್ಷಸ್ಥಲದಲ್ಲಿ ಶ್ರೀರಾಮನು ಕಾಣಿಸುತ್ತಾನೆ. ಇದು ಆ ಸೀನಿನ ಸಾರಾಂಶ. ಕೊಟ್ಟೂರಪ್ಪನವರು ಎದೆ ಬಗೆದು ಶ್ರೀರಾಮನ ದರ್ಶನ ಮಾಡಿಸುತ್ತಾರೆ.

ಆಗ ಇಡೀ ನಾಟಕಮಂದಿರವೇ ಅದುರಿ ಹೋಗುವಂತೆ ಒಂದು ಚೀತ್ಕಾರ ಪ್ರೇಕ್ಷಕರ ಕಡೆಯಿಂದ ಬಂತು. ಅಷ್ಟಕ್ಕೇ ನಿಲ್ಲದೆ ಜೈಶ್ರೀ ರಾಂ, ಜೈಶ್ರೀರಾಂ, ಎಂದು ಪದೇ ಪದೇ ಒರಲುತ್ತಿರುವ ಶಬ್ಧ.

ನಾಟಕ ನಿಂತು ಹೋಯಿತು. ಪರದೆ ಇಳಿಬಿಟ್ಟಿರು. ಏನಾಯಿತಪ್ಪ ಎಂದು ಎಲ್ಲರೂ ನೋಡಿದರೆ ಬೆಂಚಿನ ಮೇಲೆ ಕುಳಿತು ನಾಟಕ ನೋಡುತ್ತಿದ್ದ ಈ ನಮ್ಮ ಧಡೂತಿ ಆಸಾಮಿಗೆ ಕೊಟ್ಟೂರಪ್ಪನವರ ಹನುಮಂತನ ಅಭಿನಯದಿಂದ ಆವೇಶ ಬಂದು, ಜೈ ಶ್ರೀರಾಂ ಎಂದು ಕೆಳಗೆ ಬಿದ್ದು ಕೈಕಾಲು ಝಾಡಿಸುತ್ತಾ ಮೈಮೇಲೆ ಪ್ರಜ್ಞೆಯೇ ಇಲ್ಲದೆ ಒಂದೇಸಮನೆ ಒದರುತ್ತಿದ್ದಾನೆ.

ಈ ದೃಶ್ಯವನ್ನು ಕಂಡವರಲ್ಲಿ ಕೆಲವರು ಇವನ ಆವೇಶ ಇಳಿಯಲು ತಟ್ಟೆಯಲ್ಲಿ ಕರ್ಪೂರ ಹತ್ತಿಸಿ ಅವನ ಮುಖದ ಮುಂದೆ ಆರತಿ ಬೆಳಗಲು ಶುರುಮಾಡಿದರು. ಮತ್ತೆ ಕೆಲವರು ಲಗುಬಗೆಯಿಂದ ಓಡಿಹೋಗಿ ತೆಂಗಿನಕಾಯಿ ತಂದು ನಿವಾಳಿಸಿ ಒಡೆಯುತ್ತಿದ್ದಾರೆ. ಇದು ಹೀಗಿದ್ದರೆ ಅವನ ಪಕ್ಕದಲ್ಲಿ ಕುಳಿತಿದ್ದ ನನ್ನ ಅಪ್ಪ ಮತ್ತು ಮಾವನ ಗತಿಏನಾಯಿತು. ಈ ಬೃಹದಾಕಾರಿಯು ತನ್ನ ಎರಡೂ ಕೈಗಳನ್ನೂ ಪಕ್ಕಕ್ಕೆ ಆವೇಶದಿಂದ ಜೈಶ್ರೀರಾಂ ಎಂದು ಚಾಚಿದ ರಭಸಕ್ಕೆ ಇವರಿಬ್ಬರೂ ಬೆಂಚಿನ ಸಮೇತ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. ಇವರಿಬ್ಬರ ಮೇಲೆ ಆ ಧಡೂತಿ ಮನುಷ್ಯನ ಎರಡೂ ಕಾಲುಗಳೂ ಬಿದ್ದಿವೆ. ಜತೆಗೆ ಆವೇಶದಿಂದ ಕಾಲೆರಡನ್ನೂ ಝಾಡಿಸುತ್ತಲೂ ಇದ್ದಾನೆ.

ಜನರು ಅವನ ಆವೇಶ ಇಳಿಸುವ ಆತುರದಲ್ಲಿದ್ದಾರೆ. ಅವನ ಕಾಲಿನಡಿ ಸಿಕ್ಕಿ ಬಜ್ಜಿಯಾಗುತ್ತಿದ್ದ ನನ್ನ ಅಪ್ಪ ಮತ್ತು ಮಾವನ ಫಜೀತಿ  ಕೇಳುವವರೇ ಇಲ್ಲ.ಇವರಿಗೆ ಬಿದ್ದ ನೋವಿನಿಂದ ಕಿರುಚಲೂ ಸಹಾ ಆಗುತ್ತಿಲ್ಲ. ಕಿರುಚಿದ್ದರೂ ಜೈಶ್ರಿರಾಂ ಎಂಬ ಅವನ ಆವೇಶದ ಅರಚಾಟದಲ್ಲಿ ಇವರ ಧ್ವನಿ ಕೇಳುವರಾರು.

ಈ ಆವೇಶ ಇಳಿದ ಮೇಲೆ ಆ ಧಡೂತಿ ಮನುಷ್ಯನನ್ನು ಕಷ್ಟಪಟ್ಟು ಮೇಲಕ್ಕೆ ಎತ್ತಿದಾಗ ಅವನ ಕಾಲಿನಡಿಯಲ್ಲಿದ್ದು ವಿಲವಿಲ ಒದ್ದಾಡುತ್ತಿದ್ದ ನನ್ನ ಅಪ್ಪ ಮತ್ತು ಮಾವ ಕಾಣಿಸಿದ್ದು. ಮೈಕೈ ನೋವಿನಿಂದ ನರಳುತ್ತಾ ಆ ನಡುರಾತ್ರಿಯಲ್ಲಿ ಹೇಗೋ ಸುಧಾರಿಸಿಕೊಂಡು ಮನೆ ಸೇರಿದರು. ಅಂದಿನ ಇವರ ನಾಟಕ ನೋಡುವ ಸಂಭ್ರಮ ಹೀಗೆ ಮುಕ್ತಾಯವಾಯ್ತು.

ಅಂದಿನ ದಿನಗಳಲ್ಲಿ ನಾಟಕದಲ್ಲಿ ಹೇಗೆ ಪಾರ್ಟು ಮಾಡುತ್ತಿದ್ದರು. ಪ್ರೇಕ್ಷಕರು ಮೈಮರೆಯುವಂಥ ದೃಶ್ಯಗಳನ್ನು ಸೃಷ್ಟಿಸುತ್ತಿದ್ದರು. ನಟ ಮತ್ತು ಪ್ರೇಕ್ಷಕರ ನಡುವಿನಲ್ಲಿ ಎಂಥ ಸಂಬಂಧ ರೂಪುಗೊಳ್ಳುತ್ತಿತ್ತು ಎಂಬುದಕ್ಕೆ ಇದೊಂದು ಉದಾಹರಣೆ.

Rating
No votes yet

Comments