ಜೋಡು ಮರ್ಯಾದೆ

ಜೋಡು ಮರ್ಯಾದೆ

ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕಲಿತು, ನಾಟಕಗಳಲ್ಲಿ ನುಡಿಸುತ್ತಿದ್ದರು.

ಕರ್ನಾಟಕ ರಾಜ್ಯ-ತಮಿಳುನಾಡಿನ ಸರಹದ್ದಿನ ಊರುಗಳಾದ ತಾಳವಾಡಿ, ತಲಮಲೆ, ಗುಮ್ಟಾಪುರ, ಗಾಜನೂರು, ಚಿಕ್ಕಹಳ್ಳಿ ಮುಂತಾದ ಊರುಗಳಲ್ಲಿದ್ದ ಶಾಲೆಗಳ್ಲಲಿ ಮಾಸ್ತರಾಗಿ ಕೆಲಸ ಮಾಡಿದರು.

ಆಗೆಲ್ಲ ಪ್ರಸಿದ್ಧಿ ಪಡೆದ ನಾಟಕ ಕಂಪನಿಗಳು, ತಾಲ್ಲೂಕು ಕೇಂದ್ರಗಳಲ್ಲಿ ಬಂದು ತಿಂಗಳು ಅಥವಾ ಎರಡು ತಿಂಗಳು ಮೊಕ್ಕಾಂಮಾಡಿ ಜನಪ್ರಿಯ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದವು. ತಾಳವಾಡಿಗೆ ಹತ್ತಿರದ ತಾಲ್ಲೂಕು ಕೇಂದ್ರಗಳಾದ ನಂಜನಗೂಡು, ಮೈಸೂರು ಮುಂತಾದ ಕಡೆಗಳಲ್ಲಿ ನಾಟಕ ಕಂಪನಿಯ ಮೊಕ್ಕಾಂ ಇದ್ದರೆ ನಮ್ಮ ತಂದೆಯವರು ಆಕಂಪನಿಯ ಎಲ್ಲಾ ನಾಟಕಗಳಿಗೆ ತಪ್ಪದೇ ಹಾಜರಾಗಿರುತ್ತಿದ್ದರು.

ಆಗೆಲ್ಲ, ಕಂಪನಿ ನಾಟಕ ಎಂದರೆ ಅದು ಪ್ರಾರಂಭವಾಗುವುದೇ ರಾತ್ರಿ ಹತ್ತು ಗಂಟೆಯ ವೇಳೆಗೆ. ಈಗಿನಂತೆ ವಿದ್ಯುಚ್ಛಕ್ತಿ ಇರಲಿಲ್ಲ. ಮೈಕಿನ ಹೆಸರೂ ಸಹ ಕೇಳಿರದ ಸಮಯ. ನಾಟಕ ಕಲಾವಿದರು ತಮ್ಮ ಗಂಟಲಿನ ಶಕ್ತಿಯಿಂದಲೇ ನೆರೆದಿರುವ ಪ್ರೇಕ್ಷಕರನ್ನು ರಂಜಿಸಬೇಕಾಗಿತ್ತು. ಅತೀ ಹಿಂದಿನ ಸಾಲಿನಲ್ಲಿ ಕುಳೀತಿರುವ ಪ್ರೇಕ್ಷಕರಿಗೂ ಕೇಳಿಸುವಂತೆ ಸಂಭಾಷಣೆ ಹಾಡುಗಳನ್ನು ಹೇಳಬೇಕಾಗಿತ್ತು.

ಸಂಜೆಯ ವೇಳೆಗಾಗಲೇ ದೂರದ ಊರುಗಳಿಂದ ಎತ್ತಿನ ಗಾಡಿಯಲ್ಲಿ ಒಂದು ನಾಟಕದ ಟೆಂಟಿನ ಹತ್ತಿರ ಜನ ಜಮಾಯಿಸುತ್ತಿದ್ದರು. ಅವರೆಲ್ಲ ಊರಿನಿಂದಲೇ ಬುತ್ತಿ ಕಟ್ಟಿಕೊಂಡು ಬಂದು, ನಾಟಕ ನಡೆಯುವ ಸ್ಥಳದ ಹತ್ತಿರದಲ್ಲೇ ರಾತ್ರಿಯ ಊಟ ತಿಂಡಿ ಮುಗಿಸುತ್ತಿದ್ದರು. ಹತ್ತು ಗಂಟೆಗೆ ನಾಟಕ ಪ್ರಾರಂಭವಾದರೆ ಇಡೀ ರಾತ್ರಿ ನಡೆಯುತ್ತಿತ್ತು. ಪ್ರೇಕ್ಷಕರ ಅರಚಾಟ, ಒನ್ಸ್‌ಮೋರ್‌ ಎಂಬ ಕಿರುಚಾಟ ಇದರ ನಡುವೆ ನಾಟಕದ ಸಂಭಾಷಣೆ, ಹಾಡು ಇವೆಲ್ಲ ನಡೆಯುತ್ತಿದ್ದವು. ನಾಟಕ ರಂಗದ ಆಯಕಟ್ಟಿನ ಸ್ಥಳಗಳಲ್ಲಿ ಹಚ್ಚಿಟ್ಟ ದೀಪಗಳು, ವೇದಿಕೆಯಲ್ಲಿ ಪ್ರಜ್ವಲಿಸುತ್ತಿದ್ದ ಗ್ಯಾಸ್ ಲೈಟ್‍ಗಳು ಮತ್ತು ನಾಟಕದ ರಂಗನ್ನು ಹೆಚ್ಚಿಸಲು ಆ ಲೈಟ್‍ಗಳಿಗೆ ಬಟರ್ ಪೇಪರ್ ಬಳಸಿ ಬಣ್ಣದ ಬೆಳಕು ಚೆಲ್ಲುವಂತೆ ಮಾಡುತ್ತಿದ್ದ ರಂಗ ಸಜ್ಜಿಕೆಗಳು, ನಾಟಕದ ಮೆರುಗನ್ನು ಹೆಚ್ಚಿಸುತ್ತಿದ್ದ ಕಾಲವದು.

ಈಗ ನಾನು ಹೇಳ ಹೊರಟಿರುವ ಘಟನೆ ಇದೇ ರೀತಿಯಾದ ಒಂದು ಕಂಪನಿ ನಾಟಕದಲ್ಲಿ ನಡೆದ ಘಟನೆ. ಇದಕ್ಕೆ ಸಾಕ್ಷಿಯಾಗಿದ್ದವರು ನನ್ನ ತಂದೆ. ಹಿಂದೆಯೇ ಹೇಳಿದಂತೆ ನನ್ನ ಅಪ್ಪನಿಗೆ ನಾಟಕದ ಹುಚ್ಚು ವಿಪರೀತ. ಒಂದು ಸಲ ಹೀಗೆಯೇ ಆಗ ಅತ್ಯಂತ ಪ್ರಸಿದ್ಧಿಯಲ್ಲಿದ್ದ ನಾಟಕ ಶಿರೋಮಣಿ ಎ.ವಿ.ವರದಾಚಾರ್ಯರ ನಾಟಕ ಕಂಪನಿ ಮೊಕ್ಕಾಂ ಮಾಡಿತ್ತು. ಮೈಸೂರು ಅಥವಾ  ನಂಜನಗೂಡಿನಲ್ಲಿರಬಹುದು. ನಾಟಕ ಶಿರೋಮಣಿ ವರದಾಚಾರ್ಯರು ದುರ್ಯೋಧನನ ಪಾತ್ರ, ಕನ್ನಡ ಚಿತ್ರರಂಗದ ಪಿತಾಮಹ ಎಂದು ಮುಂದೆ ಪ್ರಸಿದ್ಧಿಯಾದ ಆರ್.ನಾಗೇಂದ್ರರಾಯರು ಅಭಿಮನ್ಯುವಿನ ಪಾತ್ರ ಆಗ ಅವರಿಗೆ ಸುಮಾರು ೧೮ ವರ್ಷ ಪ್ರಾಯ.

ನಾಟಕ ಪ್ರಾರಂಭವಾಯಿತು. ಚಕ್ರವ್ಯೂಹವನ್ನು ಭೇದಿಸಿ ವೀರ ಅಭಿಮನ್ಯು  ಮುನ್ನುಗುತ್ತಿದ್ದಾನೆ. ಆ ಸಂದರ್ಭದಲ್ಲಿ ವೀರೋಚಿತವಾದ ಸಂಭಾಷಣೆ ಕಂದಪದ್ಯಗಳು ಇವೆಲ್ಲದರ ಜತೆಗೆ ಅಭಿನಯ ಚತುರರಾದ ವರದಾಚಾರ್ಯರ ಅಮೋಘ ಅಭಿನಯ, ಜತೆಗೆ ಸುಂದರ ಯುವಕನಾಗಿದ್ದ ನಾಗೇಂದ್ರರಾಯರಂತೂ ನೋಡಿದವರಿಗೆಲ್ಲ ಇವನೇ ಕುರುಕ್ಷೇತ್ರದ ಅಭಿಮನ್ಯು ಎಂದು ಭ್ರಮಿಸುವ ರೀತಿಯಲ್ಲಿ ಆ ಪಾತ್ರಕ್ಕೆ ಹೊಂದುವ ಪೋಷಾಕಿನಲ್ಲಿ ವಿಜೃಂಭಿಸುತ್ತಿದ್ದರು. ಯುದ್ಧದಲ್ಲಿ ಅಭಿಮನ್ಯುವಿನ ಆಯುಧಗಳು ಕೈಜಾರಿ ಹೋಗುತ್ತವೆ. ಅವನನ್ನು ದುರ್ಯೋಧನ, ದ್ರೋಣ ಮುಂತಾದ ಕುರುಸೇನಾಪತಿಗಳು ಸುತ್ತುವರಿದಿದ್ದಾರೆ. “ನಿರಾಯುಧನ ಮೇಲೆ ಅಸ್ತ್ರ ಪ್ರಯೋಗ ಮಾಡುವಂಥ ಹೇಡಿಗಳೇ ನೀವು” ಎಂದು ಅಭಿಮನ್ಯು ಅಲ್ಲಿ ಅವನನ್ನು ಸುತ್ತುವರಿದವರನ್ನು ಪ್ರಶ್ನಿಸುತ್ತಾನೆ. ಆಗ ದುರ್ಯೋಧನನ ಪಾತ್ರಧಾರಿಯಾದ ವರದಾಚಾರ್ಯರು; “ಎಲೈ ಬಾಲಕ ‘ಇಲ್ಲಿ ಕೆಳಗೆ ಬಿದ್ದಿರುವ ಯಾವ ಆಯುಧವನ್ನಾದರೂ ಎತ್ತಿಕೊಂಡು ಯುದ್ಧ ಮುಂದುವರಿಸು” ಎಂದು ಹೇಳುತ್ತಾರೆ.

ಅಭಿಮನ್ಯುವು ಬಗ್ಗಿ ಕೆಳಗೆ ಬಿದ್ದಿರುವ ಕತ್ತಿಯನ್ನು ಇನ್ನೇನು ಎತ್ತಿಕೊಳ್ಳಬೇಕು, ಆಗ ಹಿಂದಿನಿಂದ ಅವನ ಕೈ ಕತ್ತರಿಸುವ ದೃಶ್ಯ. ಇನ್ನೇನು ನಾಗೇಂದ್ರರಾಯರು ಬಗ್ಗಿ ಕೆಳಗೆ ಬಿದ್ದಿರುವ ಕತ್ತಿ ಎತ್ತುವ ಹಾಗೆ ಅಭಿನಯಿಸುತ್ತಿದ್ದಾರೆ. ಆಗ ಹಿಂದಿನಿಂದ ದುರ್ಯೋಧನ ಪಾತ್ರಧಾರಿ ಎ. ವಿ. ವರದಾಚಾರ್ಯರು ಅವನ ಕೈ ಕತ್ತರಿಸುವಂತೆ ಅಭಿನಯಿಸಿದರು.

ಇದ್ದಕ್ಕಿದ್ದಂತೆ, ದಿಢೀರೆಂದು ಮುಂದಿನ ಸಾಲಿನಲ್ಲಿ ನಾಟಕ ನೋಡುತ್ತಿದ್ದ ಒಬ್ಬ ಪ್ರೇಕ್ಷಕ ಛಂಗೆಂದು ನಾಟಕದ ವೇದಿಕೆಗೆ ನೆಗೆದ. ತಕ್ಷಣವೇ ವರದಾಚಾರ್ಯರ ಕತ್ತಿನ ಪಟ್ಟಿಯನ್ನು ಹಿಡಿದು.

“ಛಿನಾಲ್ಕೆ ತೇರಿಮಾಕು, ಕ್ಯಾಬೋಲ ತುನೆ

ಒ ಲಡಕೆಕೊ ಚಾಕು ಉಠಾನೆಕೊಬೋಲ

ಔರ್ ಪೀಚ್ಛೆಸೆ ಹಾತ್ ಕಾಟಾಹೈ ... ತೇರಿ ಮಾಕೂ”

ಹೀಗೆ ಹಲವಾರು ಬಯ್ಗಗಳಿಂದ ಬೈಯ್ದು, ತನ್ನ ಕಾಲಿನಲ್ಲಿದ್ದ ಛಡಾವನ್ನು ತೆಗೆದು ವರದಾಚಾರ್ಯರಿಗೆ ಬಾರಿಸಿಯೇ ಬಿಟ್ಟ.

ಈ ದಿಢೀರ್ ಘಟನೆಯಿಂದ ಇಡೀ ನಾಟಕ ನೋಡಲು ನೆರೆದಿದ್ದವರು, ಅಭಿನಯಿಸುತ್ತಿದ್ದ ಕಲಾವಿದರು ಎಲ್ಲಾ ತಬ್ಬಿಬ್ಬರಾದರು. ಆ ಕ್ಷಣ ಏನಾಯಿತು ಎಂಬುದೇ ತಿಳಿಯದಾಯಿತು. ನಂತರ ಸ್ವಲ್ಪ ಸಾವರಿಸಿಕೊಂಡು ನಾಟಕದ ಮ್ಯಾನೇಜರು ತೆರೆ ಎಳೆದು ಟೆಂಟಿನ ದೀಪಗಳನ್ನು ಹಚ್ಚಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.

ಸ್ವಲ್ಪ ಸಾವರಿಸಿಕೊಂಡ ನಾಟಕ ಶೀರೋಮಣಿ ವರದಾಚಾರ್ಯರು ಸ್ಟೇಜಿನ ಮೇಲೆ ಬಂದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಅವರಂದ ಮಾತುಗಳು ನಿಜವಾದ ಒಬ್ಬ ಮಹಾ ಕಲಾವಿದನು ಮಾತ್ರ ಆಡುವ ಮಾತುಗಳಾಗಿತ್ತು.

ನನಗೆ ನನ್ನ ಕಲಾವೃತ್ತಿಯಲ್ಲಿ ಇಂದು ಈ ಪ್ರೇಕ್ಷಕ ಮಹಾಶಯರು ನೀಡಿದಂಥ ಪ್ರಶಸ್ತಿ ನನಗೆ ಇಲ್ಲಿಯವರೆಗೆ ಸಂದ ಎಲ್ಲ ಪ್ರಶಸ್ತಿಗಳಗಿಂತಲೂ ಮಿಗಿಲಾದದ್ದು.

“ಇಲ್ಲಿ ನಡೆಯುತ್ತಿರುವುದು ನಾಟಕವಲ್ಲ, ನಿಜವಾಗಿಯೇ ನಡೆಯುತ್ತಿದೆ. ಆ ಬಾಲಕನು ಪಾತ್ರಧಾರಿಯಲ್ಲ. ಅವನು ಅಭಿಮನ್ಯು, ನಾನು ನಿಜವಾದ ದುರ್ಯೋಧನ ಎಂದೇ ತಿಳಿದ ಅವರು ಹೀಗೆ ಮಾಡಿದ್ದು ಸರಿ”.

ಎಂದು ಆ ಪ್ರೇಕ್ಷಕನಿಗೆ ಹಾರ ಅರ್ಪಿಸಿ ಗೌರವಿಸಿದರಂತೆ. ಪ್ರೇಕ್ಷಕರನ್ನು ಈ ರೀತಿ ಹಿಡಿದಿಡುವಂಥ ಅಭಿನಯ, ನಟನೆಯಲ್ಲಿ ಆಗಿನ ಕಲಾವಿದರು ತೋರತ್ತಿದ್ದ ತನ್ಮಯತೆ, ತಮ್ಮ ವೃತ್ತಿಗೆ ಅವರು ಸಲ್ಲಿಸುತ್ತಿದ್ದ ಗೌರವ ಮತ್ತು ನಿಷ್ಠೆ ನಿಜಕ್ಕೂ ಅವಿಸ್ಮರಣೀಯ.

ಇಂಥ ಅದ್ಭುತ ಘಟನೆಯನ್ನು ಕಣ್ಣಾರೆ ಕಂಡು ಅನುಭವಿಸಿದ ನನ್ನ ಅಪ್ಪ ಅಂದು ಎಷ್ಟು ಸೋಜಿಗ ಪಟ್ಟರೋ ವರ್ಣಿಸಲು ಸಾಧ್ಯವಿಲ್ಲ.

Rating
No votes yet